Friday, 1 December 2023

ಭಾರತ ಮತ್ತು ಅದರ ಜಿ.ಡಿ.ಪಿ.


ಭಾರತದ ಜಿಡಿಪಿ ಈ ವರ್ಷದಲ್ಲಿ ಅಂದರೆ 2022-23ರ ಸಾಲಿನಲ್ಲಿದ್ದ 38.78 ಲಕ್ಷ ಕೋಟಿ ರೂಗಳಿಗೆ ಪ್ರತಿಯಾಗಿ ಈ ಸಾಲಿನ ಎರಡನೆಯ ಅವಧಿಯಲ್ಲಿ 41.74 ಲಕ್ಷ ಕೋಟಿ ರೂಗಳಿಗೇರಿದೆ. 2022-23ನೆಯ ಹಣಕಾಸಿನ ವರ್ಷದಲ್ಲಿ65.67 ಲಕ್ಷ ಕೋಟಿ ರೂ ಇದ್ದ ಆದಾಯ ಈ ಸಾಲಿನಲ್ಲಿ 71.76 ಲಕ್ಷ ಕೋಟಿ ರೂ ಆಗಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.ಇದೀಗ ದೇಶದ ಜಿಡಿಪಿ 7.6 ಪ್ರತಿಶತವಾಗಿದೆ ಎಂದು ರಿಸರ್ವ ಬ್ಯಾಂಕ್ ಹೇಳಿದೆ. ಈ ಬೆಳವಣಿಗೆ  ಸ್ವಾಗತಾರ್ಹವೇನೋ ಸರಿ. ಆದರೆ ಈ ಜಿಡಿಪಿ ಬಂದುದು  ಕಟ್ಟಡ ನಿರ್ಮಾಣ, ವಾಣಿಜ್ಯ, ವ್ಯಾಪಾರದಿಂದ ಆಗಿದೆ. ಆದರೆ ಕೃಷಿ ಜಿಡಿಪಿ ಶೇ.3.3ರಷ್ಟಿದೆ. ಇದು ಆತಂಕಕಾರಿ. ಅಭಿವೃದ್ಧಿ ಬೇರೆ ಕ್ಷೇತ್ರದಲ್ಲಿ ಆಗುವುದಕ್ಕೂ ಕೃಷಿಯಲ್ಲಿ ಆಗುವುದಕ್ಕೂ ತುಂಬಾ ವ್ಯತ್ಯಾಸವಿದೆ. ಕೃಷಿಯಲ್ಲಿ ಏನಾದರೂ ನಮ್ಮ ದೇಶ ಇಷ್ಟು ಏರಿಕೆ ಕಂಡರೆ ಪ್ರಪಂಚದಲ್ಲಿ ಯಾರೂ ನಮ್ಮನ್ನು ಹಿಡಿಯಲಾರರು. ಕೃಷಿಯಲ್ಲಿ ಆಗುವ ಬೆಳವಣಿಗೆಯಿಂದ ಹತ್ತಾರು ವಲಯಗಳು ಬೆಳೆಯುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚುತ್ತದೆ. ಮೂಲಸೌಕರ್ಯಗಳು ಅಭಿವೃದ್ಧಿಯಾಗಿ ದೇಶದ ಸರ್ವಾಂಗೀಣ ಬೆಳವಣಿಗೆ ಸಾಧ್ಯವಾಗುತ್ತದೆ. ಆದ್ದರಿಂದ ಈಗ ಜಿಡಿಪಿ ಏರಿದೆ ಎಂದು ಸಂಭ್ರಮಿಸುವ ಅಗತ್ಯವಿಲ್ಲ. ಕೃಷಿ ಕ್ಷೇತ್ರ ಬೆಳೆಯದೇ ನಮ್ಮ ದೇಶಕ್ಕೆ ಮಾತ್ರವಲ್ಲ, ಯಾರಿಗೂ ಭವಿಷ್ಯವಿಲ್ಲ. ಈ ಕಾರಣಕ್ಕೇ ಕುಮಾರವ್ಯಾಸ ಶತಮಾನಗಳ ಹಿಂದೆಯೇ ಕೃಷಿ ವಿಹೀನ ದೇಶ ವಿನಾಶ ಕಾಣುತ್ತದೆ ಎಂದು ಸಾರಿದ್ದಾನೆ. 

ಕೃಷಿ ಜಿಡಿಪಿ ಏರಿದಾಗ ಸಹಜವಾಗಿ ಸಾಮಾನ್ಯ ಜಿಡಿಪಿ ದರ ಕೂಡ ಏರುತ್ತದೆ. ಆದರೆ ಸಾಮಾನ್ಯ ಜಿಡಿಪಿ ಏರಿದರೆ ಕೃಷಿ ಜಿಡಿಪಿ ಏರಬೇಕಿಲ್ಲ. ಇದು ವಾಸ್ತವವನ್ನು ತೋರಿಸುತ್ತದೆ. ಏಕೆಂದರೆ ಸಾಮಾನ್ಯ ಜಿಡಿಪಿ ಏರಲು ಅನ್ಯ ಕ್ಷೇತ್ರಗಳ ಬೆಳವಣಿಗೆಯಿದ್ದರೂ ಸಾಕು. ಆದರೆ ಕೃಷಿ ಕ್ಷೇತ್ರದ ಜಿಡಿಪಿಯಿಂದ ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಯಾವಾಗಲೂ ಕೃಷಿಗೆ ಉತ್ತೇಜನ ಕೊಡಿ ಅನ್ನುವುದು. ಆದರೆ ಸಾಮಾನ್ಯವಾಗಿ ಕೃಷಿಯನ್ನು ಎಲ್ಲ ಕಡೆಗೂ ಅಲಕ್ಷಿಸಲಾಗುತ್ತದೆ. ಇದು ದುರಂತ. ಇಂದಿಗೂ ಭಾರತ ಹಳ್ಳಿಗಳನ್ನು ಹೆಚ್ಚಾಗಿ ಹೊಂದಿದೆ. ಅಲ್ಲಿನ ವಿಶೇಷ ಚಟುವಟಿಕೆ ಕೃಷಿಯಾಗಿದೆ. ಅದು ಬೆಳೆದರೆ ದೇಶ ಸಹಜವಾಗಿ ಬೆಳೆಯುತ್ತದೆ. ಯಾವುದೇ ಆರ್ಥಿಕ ವರ್ಷವನ್ನು ಗಮನಿಸಿ. ಕೃಷಿ ಬೆಳವಣಿಗೆ ಕುಸಿದಾಗ ದೇಶ ಹಿಂದೆ ಬಿದ್ದಿದೆ.ಇದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆದ್ದರಿಂದಲೇ ಹೇಳಿದ್ದು. ಈಗಿನ ನಮ್ಮ ಸಾಮಾನ್ಯ ಜಿಡಿಪಿ ದರವನ್ನು ನೋಡಿ ಸಂಭ್ರಮಪಡುವ ಅಗತ್ಯವಿಲ್ಲ. ಕೃಷಿ ಜಿಡಿಪಿ ಏರಿದಾಗ ಬೇಕಾದಷ್ಟು ಸಂಭ್ರಮಿಸಿ. ಅದರಲ್ಲಿ ತಪ್ಪಿಲ್ಲ. ಸಿನಿಮಾ ವಲಯದ ಆದಾಯ ಏರಿದರೆ ದೇಶದ  ಉಳಿದ ಯಾವ ಕ್ಷೇತ್ರಕ್ಕೆ  ಹಿತವಾಗುತ್ತದೆ?ಅದರಿಂದ  ಆ ಉದ್ಯಮ ಬೆಳೆಯುತ್ತದೆಯೇ ವಿನಾ ಇನ್ನೇನೂ ಆಗುವುದಿಲ್ಲ. ಇದರಂತೆ ಉಳಿದ ಬಹುತೇಕ ಕ್ಷೇತ್ರಗಳ ಬೆಳವಣಿಗೆಗೆ ಕೊಂಡಿಯಂಥ ಸಂಪರ್ಕವಿಲ್ಲ. ಆದರೆ ಕೃಷಿಗೆ ಹಾಗೂ ಉಳಿದ ಕ್ಷೇತ್ರಗಳಿಗೆ ಪರಸ್ಪರ ಕೊಂಡಿಯಂಥ ಸಂಪರ್ಕವಿದೆ. ಒಂದಕ್ಕೆ ನೆರವಾದರೆ ಅಥವಾ ಮುಂದೆ ಜರುಗಿದರೆ ಉಳಿದವು ತಾನಾಗಿ ಮುಂದೆ ಸರಿಯುತ್ತವೆ. ಇದಕ್ಕೆ ನಿದರ್ಶನವಾಗಿ ನಮ್ಮ ದೇಶದ ಜಾರ್ಖಂಡ್ ರಾಜ್ಯವನ್ನೇ ನೋಡಬಹುದು. ಕೆಲವು ವರ್ಷಗಳ ಹಿಂದೆ ಯಾವ ಅಭಿವೃದ್ಧಿಯೂ ಇಲ್ಲದಿದ್ದ ಈ ರಾಜ್ಯ ಕೃಷಿ ಬೆಳವಣಿಗೆಯ ಕಾರಣದಿಂದ ಬಹಳ ಮುಂದೆ ಬಂದಿದೆ. ಅಲ್ಲಿ ಕೇವಲ ಕೃಷಿಗೆಹಾಗೂ ಶಿಕ್ಷಣಕ್ಕೆ ಪ್ರಾಧಾನ್ಯ ಕೊಡಲಾಗುತ್ತಿದೆ, ನಮಗೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇಂಥ ಪ್ರಯೋಗಕ್ಕೆ ರಾಜ್ಯಗಳು ತೆರೆದುಕೊಳ್ಳದೇ ಸಾಂಪ್ರದಾಯಿಕ ಕ್ರಮವನ್ನೇ ಮುಂದುವರೆಸಿಕೊಂಡುಹೋಗುತ್ತಿವೆ. ಇನ್ನಾದರೂ ಹೊಸ ವಿಧಾನಗಳಿಗೆ ತೆರೆದುಕೊಳ್ಳಬೇಕಿದೆ.

No comments:

Post a Comment