Saturday, 2 December 2023

ಕನ್ನಡ ಸಂಶೋಧನೆಯ ಸುತ್ತ


ಇದೀಗ ನನ್ನ ಮುಂದೆ ಯುವ ಚಿಂತಕರು, ಗಮಕಿಗಳು ಮತ್ತು ಹೊಸ ತಲೆಮಾರಿನ ವಿದ್ವಾಂಸರಾದ ಡಾ. ಅಜಕ್ಕಳ ಗಿರೀಶ್ ಭಟ್ ಅವರ ತತ್ತ್ವ ದತ್ತ ಎಂಬ ಕೃತಿ ನಿರಾಳವಾಗಿ ಕುಳಿತಿದೆ. ಎರಡು ದಿನಗಳಿಂದ ಅದರ ಪುಟಪುಟಗಳನ್ನು ಹಿಂಜಿ ಹಿಂಜಿ ಓದುತ್ತಿದ್ದೇನೆ. ಓದುತ್ತ ಹೋದಂತೆ ಸಂಶೋಧನೆಯ ಒಲವು ನಿಲವುಗಳ ಬಗ್ಗೆ ಸ್ಪಷ್ಟತೆಯೂ ಅಲ್ಲಲ್ಲಿ ನಡೆಯುತ್ತಿರುವ ಗಂಭೀರ ಸಂಶೋಧನೆಯ ಹೆಸರಿನ ವಂಚನೆಗಳ ಬಗ್ಗೆ ವಿಷಾದವೂ ಉಂಟಾಯಿತು. ಸದರಿ ಕೃತಿ ಹುಟ್ಟಿದ್ದೇ ಸಂಶೋಧನೆಯನ್ನು ಹೇಗೆ ಮಾಡಬೇಕು ಅದರಲ್ಲಿ ಸರಿಯಾವುದು ತಪ್ಪು ಯಾವುದೆಂದು, ವಿಧಾನ ಏನು ಎಂಬುದನ್ನು ಕನ್ನಡದಲ್ಲಿ ಮೊದಲಬಾರಿ ವಿಶಿಷ್ಟವಾಗಿ ಕೊಡಲಾಗುತ್ತಿದೆ ಅನ್ನಲಾದ ಕೃತಿಯೊಂದನ್ನು ಜಾಲಾಡುವ ಉದ್ದೇಶದಿಂದ ಅನ್ನುವುದು ಗಮನಾರ್ಹ, ಉನ್ನತ ಶಿಕ್ಷಣ ವಲಯದಲ್ಲಿ ಬೋಧನೆ, ಸಂಶೋಧನೆ ಕುರಿತು ಆಗಾಗ ಚರ್ಚೆ ನಡೆಯುತ್ತಲೇ ಇರುತ್ತದೆ. ತುಮಕೂರು ವಿವಿಯ ಪ್ರಾಧ್ಯಾಪಕರಾದ ನಿತ್ಯಾನಂದ ಶೆಟ್ಟಿಯವರು ಈಚೆಗೆ ಸಂಶೋಧನೆಯ ವಿಧಾನ ಕುರಿತು ಕನ್ನಡದಲ್ಲಿ ಅಲಭ್ಯವಾದ ಕ್ಷೇತ್ರದ ಕೃತಿಯೊಂದನ್ನು ಪ್ರಕಟಿಸಿದ್ದರು, ಅದಕ್ಕೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳೂ ಸಕಾರಾತ್ಮಕವಾಗಿ ಬಂದಿದ್ದವು. ಆದರೆ ಅದರ ನೈಜ ಲೋಪ ಅದು ಪ್ರಸ್ತಾಪಿಸುವ ಮೂಲ ಉದ್ದೇಶದಲ್ಲೇ ಇದೆ ಅನ್ನುವುದು ಚೋದ್ಯವೂ ಹೌದು, ವ್ಯಂಗ್ಯವೂ ಹೌದು. ಚೋದ್ಯ ಏಕೆಂದರೆ, ನಿತ್ಯಾನಂದರು ಕನ್ನಡ ಉನ್ನತ ಶಿಕ್ಷಣ ವಲಯದ ಸಂಶೋಧನೆ ಹೇಳಿಕೊಳ್ಳುವ ಗುಣಮಟ್ಟದಲ್ಲಿಲ್ಲ, ಇದಕ್ಕೆ ಕಾರಣ ಸರಿಯಾದ ದಿಕ್ಕು ದೆಸೆಗಳನ್ನು ಸಂಶೋಧಕರಿಗೆ ಕೊಡಲು ಉನ್ನತ ಶಿಕ್ಷಣ ವಿಫಲವಾದುದು ಅನ್ನುತ್ತಾ ಸರಿಯಾದ ಸಂಶೋಧನೆಯ ಮಾರ್ಗವನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾಗಿ ಹೇಳುತ್ತಾರೆ. ಸೂಕ್ತ ಸಂಶೋಧನೆಯ ವಿಧಿ ವಿಧಾನವನ್ನು ಹೇಳುತ್ತಾ ಕೃತಿಚೌರ್ಯದ ಬಗ್ಗೆ ಗಂಭೀರವಾಗಿ ಹೇಳುತ್ತಾ ಯಾವುದೆಲ್ಲ ಕೃತಿಚೌರ್ಯವಾಗುತ್ತದೆ, ಅದು ಹೇಗೆ ಅನೈತಿಕ ಎಂದು ಹೇಳುತ್ತಾರೆ. ಇಂದಿನ ಸಂಶೋಧನೆಯಲ್ಲಿ ಪ್ರಕಟಿತ ಕೃತಿಯೊಂದರ ಸಾಲುಗಳನ್ನು ಮೂಲ ಉಲ್ಲೇಖಿಸದೇ ಅನಾಮತ್ತಾಗಿ ದಾಖಲಿಸುವುದಷ್ಟೇ ಅಲ್ಲ, ಮೂಲ ಚಿಂತನೆಯ ಎಳೆ ವಿಚಾರಧಾರೆಯ ಸೂತ್ರವನ್ನು ಬಳಸಿಕೊಳ್ಳುವುದು ಕೂಡ ಕೃತಿಚೌರ್ಯವಾಗುತ್ತದೆ ಅನ್ನುವ ಲೇಖಕರು ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಕೆಲಸವನ್ನು ಸದರಿ ಅನ್ವೇಷಣೆ ಕೃತಿಯಲ್ಲಿ ಮಾಡಿ ಮುಂದಿನ ಸಂಶೋಧಕರಿಗೆ ಸಾಧಾರ ಸಾಕ್ಷಿಯನ್ನೂ ಕೊಟ್ಟುಬಿಟ್ಟಿದ್ದಾರೆ ಅನ್ನುವುದು ವ್ಯಂಗ್ಯ. ಇದನ್ನು ಅಜಕ್ಕಳ ಅವರು ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಾರೆ. ಸದರಿ ಸಂಶೋಧಕರು ಹೇಳುವ ಮಾತು, ಬಳಸಿದ ನಿರೂಪಣಾ ಕ್ರಮ ಮೂಲತಃ ಎಲ್ಲಿಯದು ಎಂಬುದನ್ನು ಸಾಧಾರವಾಗಿ ಕೊಡುವುದನ್ನು ಓದುವಾಗ ನಿತ್ಯಾನಂದರ ಆಶಯದ ಬಗ್ಗೆ ಪಿಚ್ಚೆನಿಸುತ್ತದೆ. ಮತ್ತೆ ಅವರು ವ್ಯಕ್ತಪಡಿಸುವ ಅಭಿಪ್ರಾಯದ ಬಗ್ಗೆ ಅನುಕಂಪೆ ಮೂಡುತ್ತದೆ. 

ಅದಿರಲಿ, ನಿತ್ಯಾನಂದರ ಆಶಯ ಸರಿಯಾದುದು. ಉನ್ನತ ಶಿಕ್ಷಣದಲ್ಲಿ ಗಂಭೀರ ಸಂಶೋಧನೆ ತೃಪ್ತಕರವಾಗಿಲ್ಲ, ಕುವೆಂಪು ಅವರು ಒಂದೆಡೆ ಬೇರೆ ಸಂದರ್ಭದಲ್ಲಿ ಹೇಳುವ ಒಬ್ಬರ ಕೈ ಮುಂದೆ ಇರುವವರ ಜೇಬಿನಲ್ಲಿ ಅನ್ನುವಂತಿದೆ. ನೈಜ ಸಂಶೋಧನೆ ಹೀಗೆ ಇರಬಾರದು ಕನ್ನಡ ಸಾಹಿತ್ಯ ಅಂತಲ್ಲ, ದೇಶದ ,ಮಾನವಿಕ ಅಧ್ಯಯನದಲ್ಲೇ ಇಂಥ ಪರಿಸ್ಥಿತಿ ಇದೆ. ಹೆಚ್ಚೆಂದರೆ ಯಾವುದಾದರೂ ಒಂದು ಚಿಂತನೆ ಅಥವಾ ವಿಚಾರಧಾರೆಗೆ ಒಡ್ಡಿಕೊಂಡ ಅಧ್ಯಯನಗಳು ಅಲ್ಲಲ್ಲಿ ಕಾಣಿಸುತ್ತವೆ. ಆದರೆ ಹೀಗೆ ಐಡಿಯಾಲಜಿಗೆ ಅಂಟಿಕೊಂಡ ಸಂಶೋಧನೆಗಳ ಅಗತ್ಯ ಪ್ರಸ್ತಾಪಿಸುವ ನಿತ್ಯಾನಂದರ ದೃಷ್ಟಿಯ ಸಂಶೋಧನೆಯ ಮಿತಿಯನ್ನೂ ಅಜಕ್ಕಳ ಢಾಳಾಗಿ ತೋರಿಸುತ್ತಾರೆ. ಕೃತಿಯನ್ನು ಓದುತ್ತ ಹೋದಂತೆ ನಿತ್ಯಾನಂದರು ಸೋತಿದ್ದು ತಮ್ಮನ್ನು ತಾವು ಪಾಶ್ಚಾತ್ಯ ಸಂಶೋಧನೆಯ ದೃಷ್ಟಿಗೆ ಸಂಪೂರ್ಣ ಮಾರಿಕೊಂಡ ಕಾರಣಕ್ಕೆ ಅನ್ನುವುದು ಮನದಟ್ಟಾಗುತ್ತದೆ.

ಕನ್ನಡ ಉನ್ನತ ಶಿಕ್ಷಣ ಹಾಗೂ ಸಂಶೋಧನೆಯ ಸ್ಥಿತಿ ತಿಳಿಯಲು ಈ ಎರಡೂ ಕೃತಿಗಳನ್ನು ಓದಬೇಕು. ಇವೆರಡರಲ್ಲೂ ಹೇಳಿರದ ಇನ್ನೊಂದು ಸಂಗತಿ ಇದೆ. ಕನ್ನಡದ ಕೆಲವು ಕೃತಿಗಳು ನಿಜವಾಗಿ ಆ ಲೇಖಕರ ಕೃತಿಗಳಲ್ಲ. ಒಂದು ನಿದರ್ಶನ. ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪಂಡಿತರೂ ಅಗಾಧ ಓದಿನ ಪ್ರೊ. ಕಿರಂ ನಾಗರಾಜ್ ಇದ್ದರು. ಅವರು ಹೊಸ ಹೊಸ ಒಳನೋಟ ಕೊಡುತ್ತಿದ್ದರು,ಅದು ಬೇಂದ್ರೆ, ಕುವೆಂಪು ಅಂತಲ್ಲ, ಯಾವುದೇ ಸಾಹಿತ್ಯ ಕೃತಿಗೆ, ಆದರೆ ಅವರು ಮಾತಾಡಿದ್ದನ್ನು ಎಲ್ಲೂ ದಾಖಲಿಸಲಿಲ್ಲ. ಅವರು ಬರೆದಿದ್ದೇ ಕಡಿಮೆ. ಅವರು ತರಗತಿಯಲ್ಲಿ ಮಾಡುತ್ತಿದ್ದ ಪಾಠ, ಬಿಡುವಿನಲ್ಲಿ ಆಡುತ್ತಿದ್ದ ಮಾತುಗಳ ಎಳೆ ಹಿಡಿದೋ ಸಂಪೂರ್ಣವಾಗಿ ಬರೆದುಕೊಂಡೋ ಹಲವರು ಹತ್ತಾರು ಪುಸ್ತಕಗಳನ್ನು ತಮ್ಮ ಹೆಸರಲ್ಲಿ ಮಾಡಿಕೊಂಡಿದ್ದಾರೆ. ಕಿರಂ ಅವರು ಕಣ್ಮರೆ ಆದಮೇಲೆ ಕೆಲವರ ಕೃತಿಗಳೇ ಹೊರಬರುತ್ತಿಲ್ಲ. ಏಕೆಂದರೆ ಮೂಲವೇ ಬತ್ತಿಹೋಗಿದೆ. ಇದು ಒಂದಾದರೆ, ಕೆಲವರು ಉನ್ನತ ವ್ಯಾಸಂಗ ಮಾಡುವಾಗ ಹಿರಿಯ ಮೇಷ್ಟ್ರುಗಳು ಮಾಡುತ್ತಿದ್ದ ಪಾಠಗಳು ಅಥವಾ ಟಿಪ್ಪಣಿಗಳನ್ನು ಸ್ವಂತ ಹೆಸರಲ್ಲಿ ಪುಸ್ತಕ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳ ಆದ್ಯ ಆಕರ ಎಂಬಂತೆ ಬಿಂಬಿಸಿ ಹಣ ಮಾಡುತ್ತಲೇ ಇದ್ದಾರೆ. ಇಲ್ಲೆಲ್ಲ ಯಾವ ನೈತಿಕತೆ ಕೆಲಸಮಾಡಬಲ್ಲುದು? ಇಲ್ಲೆಲ್ಲ ಕಾಡುವುದು ನಿತ್ಯಾನಂದರ ಗಂಭೀರ ಕಾಳಜಿ ಮಾತ್ರ ನೆನಪಾಗುತ್ತದೆ.  

ಏನೇ ಆದರೂ ಇಷ್ಟು ವರ್ಷಗಳ ತರುವಾಯವಾದರೂ ಕನ್ನಡ ಸಂಶೋದನೆಯ ಕ್ಷೇತ್ರದಲ್ಲಿ ಗಂಭೀರ ಚರ್ಚೆ ಆರಂಭವಾದುದು ಮಾತ್ರ ಸ್ವಾಗತಾರ್ಹ. ಬೇರೆ ಏನಾದರೂ ಇರಲಿ, ಇಂಥ ವಾದಕ್ಕೆ ನಿತ್ಯಾನಂದರು ತಮ್ಮ ಅನ್ವೇಷಣೆಯ ಮೂಲಕ ಮಾರ್ಗ ಹಾಕಿಕೊಟ್ಟರು, ಅದು ಪ್ರಕಟವಾಗದಿದ್ದರೆ ಇಂಥ ಬೆಳವಣಿಗೆ ಆಗುತ್ತಿರಲಿಲ್ಲ ಅನ್ನುವುದನ್ನು ಮಾತ್ರ ಅಲ್ಲಗಳೆಯಲಾಗುವುದಿಲ್ಲ. ಇದಕ್ಕಾಗಿ ನಿತ್ಯಾನಂದರನ್ನು ಅಭಿನಂದಿಸಬೇಕಿದೆ.ಮಾರ್ಗವೊಂದರ ಅನ್ವೇಷಣೆಯ ಹಿಂದೆ ನಿಜವಾಗಿ ಏನಿದೆ ಅನ್ನುವುದನ್ನು ತೋರಿಸುತ್ತಲೇ ಸಂಶೋಧನ ಕ್ರಮದ ಹೊಸ ನೋಟಕ್ಕಾಗಿ ಕೃತಿಯೊಂದನ್ನು ರಚಿಸಿದ ಅಜಕ್ಕಳ ಅವರನ್ನು ಅಭಿನಂದಿಸಬೇಕಿದೆ.

1 comment:

  1. ಕನ್ನಡ ದಲ್ಲಿ ಪಿಎಚ್ಡಿ ಪ್ರಬಂಧಗಳ ಗುಣಮಟ್ಟ ತುಂಬ ಕಡಿಮೆಯಿದೆ ಎಂಬುದನ್ನು ಡಾ. ಚಿ.ಮೂ.ಅವರು ೧೯೬೯ರಲ್ಲಿ ಪ್ರಜಾವಾಣಿ ದೀಪಾವಳಿ ಸಂಚಿಕೆಯಲ್ಲಿ ಬರೆದ ಒಂದು ಲೇಖನ ದಲ್ಲಿ ವ್ಯಕ್ತಪಡಿಸಿದ್ರು. ಆಗಿನಿಂದಲೂ ನನ್ನಂಥ ಹಲವರಿಗೆ ವಿ ವಿ ಗಳು ಕೆಲವು ಮಹಾಪ್ರಬಂಧ ಗಳಿಗೆ ಡಾಕ್ಟರೇಟ್ ಅನ್ನು ಅದು ಹೇಗಾದರೂ ಕೊಟ್ಟರೋ, ರೆಫರಿ ಗಳು ಅದು ಹೇಗೆ ಶಿಫಾರಸು ಮಾಡಿದರೋ ಎಂದು ಅನಿಸಿದ್ದುಂಟು.ಉನ್ನತ ಶಿಕ್ಷಣ ಇದಕ್ಕೆ ಕಾರಣ ಎನ್ನುವುದಕ್ಕಿಂತ ಮಹಾಪ್ರಬಂಧ ಗಳ loose valuation ಇದಕ್ಕೆ ಕಾರಣ ಎನ್ನುತ್ತೇನೆ ನಾನು.

    ReplyDelete