ಯಾವುದೇ ಜಾತಿಗೆ ಸೇರಿದ ಜನ ಯಾವುದೇ ವೃತ್ತಿಯಲ್ಲಿ ತೊಡಗಬಹುದಾಗಿದೆ. ಯಾವುದೇ ಶಿಕ್ಷಣವನ್ನು ಪಡೆಯಬಹುದಾಗಿದೆ. ಆದರೆ ಇದರ ಲಾಭ ಎಲ್ಲ ಸಮುದಾಯಗಳಿಗೂ ದಕ್ಕಿದೆಯಾ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕವೇ ಆಗಿದೆ. ಇದಕ್ಕೆ ಕಾರಣ ಹಲವು. ಮುಖ್ಯ ಕಾರಣ ರಾಜಕೀಯ ಲಾಭ. ಸಮುದಾಯಗಳಿಗೆಮೀಸಲಾತಿಯ ಆಸೆ ತೋರಿಸುವ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ. ಹತ್ತಾರು ಉದ್ಯೋಗಗಳು ಒಂದೇ ಸಮುದಾಯಕ್ಕೆ ಸೇರಿದ ಕೆಲವೊಮ್ಮೆ ಒಂದೇ ಕುಟುಂಬದ ಜನರಿಗೆ ದೊರೆಯುತ್ತದೆ. ಒಮ್ಮೆ ಮೀಸಲಾತಿಯ ಲಾಭ ಪಡೆದ ಕುಟುಂಬದ ಸದಸ್ಯರಿಗೆ ಮತ್ತೆ ಅಂಥ ಅವಕಾಶ ದೊರೆಯದಂತೆ ನಿಯಮ ಮಾಡಿದ್ದರೆ ಇಂದಿಗೆ ಮೀಸಲಾತಿಯ ಉದ್ದೇಶ ಅರ್ಧದಷ್ಟಾದರೂ ಈಡೇರಿರುತ್ತಿತ್ತು. ಕೆಲವು ಕುಟುಂಬಗಳಲ್ಲಿ ಮೀಸಲಾತಿಯ ಲಾಭ ಪಡೆದ ಎಲ್ಲ ಸದಸ್ಯರು ಎಲ್ಲ ಬಗೆಯ ಔದ್ಯೋಗಿಕ ಸೌಲಭ್ಯವನ್ನೂ ಪಡೆದುಕೊಂಡಿದ್ದರೆ ಅದೇ ಸಮುದಾಯದ ಕೆಲವು ಕುಟುಂಬಗಳಲ್ಲಿ ಯಾವುದೇ ಉದ್ಯೋಗ ಪಡೆದ ಯಾರೊಬ್ಬರೂ ಸಿಗುವುದಿಲ್ಲ. ಒಮ್ಮೆಯಾವುದೇ ಉದ್ಯೋಗ ಪಡೆದವರು ಆರ್ಥಿಕವಾಗಿ ಸಾಮಾಜಿಕವಾಗಿ ಪ್ರಬಲವಾಗಿ ಉಳಿದವರಿಗಿಂತ ಎಲ್ಲ ವಿಷಯಗಳಲ್ಲೂ ಸಮರ್ಥರಾಗುತ್ತಾರೆ. ಅದೇ ರೀತಿ ಹೀಗೆ ಪ್ರಬಲರಾದವರು ತಮ್ಮದೇ ಸಮುದಾಯದವರಿಗಿಂತ ಹೆಚ್ಚು ಶಕ್ತವಂತರಾಗಿ ಸಮುದಾಯದ ಮೇಲೆ ಹಿಡಿತಸಾಧಿಸುತ್ತಾರೆ. ಇದಕ್ಕೆ ಅಸಂಖ್ಯಾತ ನಿದರ್ಶನಗಳು ದೇಶಾದ್ಯಂತ ದೊರೆಯುತ್ತವೆ.ಸುಮ್ಮನೇ ನೋಡುವುದಾದರೆ ತಾವು ಹಿಂದುಳಿದವರು ದಲಿತರು ಎಂದು ಹೇಳಿಕೊಳ್ಳುವ ಮಾಯಾವತಿಯವರನ್ನು ಯಾವುದೇ ವಿಷಯದಲ್ಲಿ ಮುಂದುವರೆದವರೆಂದು ಕರೆಯಲಾದ ಯಾವುದೇ ಜಾತಿಯ ಅಥವಾ ಅವರದೇ ಜಾತಿಯ ವ್ಯಕ್ತಿ ಎದುರಿಸಲು ಸಾಧ್ಯವೇ? ಇಂಥ ನಿದರ್ಶನಗಳು ಪ್ರತೀ ಊರಿನಲ್ಲಿ ದೊರೆಯುತ್ತವೆ. ಇವರು ಮೀಸಲಾತಿಯ ಲಾಭವನ್ನು ಸಾಕಷ್ಟು ಪಡೆದುಕೊಂಡವು. ಇವರ ಮಟ್ಟಕ್ಕೆ ಅಲ್ಲ, ಇವರ ಅಭಿವೃದ್ಧಿಯ ಕಾಲು ಭಾಗವನ್ನೂ ಆಯಾ ಸಮುದಾಯಗಳ ಅರ್ಧದಷ್ಟು ಜನ ತಲುಪಲು ಸಾಧ್ಯವಾಗಿಲ್ಲದಿರುವುದು ಕೂಡ ಬ್ರಿಟಿಷ್ ವಿದ್ವಾಂಸರ ಹೇಳಿಕೆಯಂತೆ ಕೆಲವು ಸಮುದಾಯಗಳು ಬಹಳಷ್ಟು ಸಮುದಾಯಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡವು ಎಂದು ಸಾವ ಸಾಧಿಸಿಕೊಂಡು ಬಂದಿರುವಷ್ಟೇ ದೊಡ್ಡ ದುರಂತ. ಸದ್ಯ ಈಗಲಾದರೂ ಸಮುದಾಯಗಳ ನೈಜ ಜನಸಂಖ್ಯೆ ತಿಳಿಯುವ. ಅದರ ಆಧಾರದಲ್ಲಿ ಮೀಸಲಾತಿ ನಿಗದಿಪಡಿಸುವ
ಯತ್ನ ನಡೆಯುತ್ತಿದೆ. ಆದರೆ ಇದು ಕೆಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಉದಾಹರಣೆಗೆ ಈಗಾಗಲೇ ಇಂಥ ಗಣತಿ ನಡೆಸಿದ ಬಿಹಾರದಲ್ಲಿ ಹಾಗೂ ಕರ್ನಾಟಕದಲ್ಲಿ ಪಕ್ಷಗಳೊಳಗೆ ಅಸಮಾಧಾನ ಕಾಣಿಸಿಕೊಳ್ಳುತ್ತಿದೆ. ಆದರೆ ಇವೆಲ್ಲ ಪಕ್ಷಗಳಸಮಸ್ಯೆ ಆದ್ದರಿಂದ ಅದು ಹೇಗೋ ಬಗೆಹರಿಯಬಹುದು. ಆದರೆ ಇಷ್ಟು ವರ್ಷಗಳಾದರೂ ಖಾಸಗಿ ಇರಲಿ, ಸರ್ಕಾರಿ ಉದ್ಯೋಗವನ್ನೂ ಕಾಣದ ಕೆಲವು ಸಮುದಾಯಗಳ ಕೆಲವು ಕುಟುಂಬಗಳಿವೆಯಲ್ಲ. ಈ ಸಮಸ್ಯೆಯನ್ನು ಇಲ್ಲವಾಗಿಸಲು ಪ್ರಸ್ತುತ ಗಣತಿ ನೆರವಾಗುತ್ತದೆಯೇ ಎಂಬುದು ಪ್ರಶ್ನೆ. ಮೀಸಲಾತಿಯ ಲಾಭವನ್ನು ಮನಗಂಡ ಪಕ್ಷಗಳು ಅದನ್ನು ಎಲ್ಲಿಗೆ ತಂದು ನಿಲ್ಲಿಸಿವೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ. ಹೊಸದಾಗಿ ಶುರುವಾದ ಸಮಸ್ಯೆ ಅಂದರೆ ಈ ಗಣತಿ ಸಮುದಾಯಗಳನ್ನು ಮತ್ತಷ್ಟು ಒಡೆಯುತ್ತಿದೆ, ಮಾತ್ರವಲ್ಲ, ಆಯಾ ಸಮುದಾಯದಲ್ಲೇ ಬಿರುಕು ಮೂಡಿಸುತ್ತಿದೆ. ಇದು ಕಾಳಜಿಪಡಬೇಕಾದ ಸಂಗತಿ.

No comments:
Post a Comment