Sunday, 17 December 2023

ಕೃಷಿ ವಿನಾಶದತ್ತ ದೇಶ


ನೋಡುತ್ತಿದ್ದರೆ ಭಯವಾಗುತ್ತದೆ. ಕಳೆದ ವರ್ಷ ನಮ್ಮ ದೇಶದಲ್ಲಿ 2.27 ಲಕ್ಷ ಹೆಕ್ಟೇರ್ ವ್ಯಯಸಾಯ ಜಮೀನು ಬೇಸಗೆ ಬೆಳೆಯಿಂದ ದೂರವಾಗಿದೆ. ಪ್ರತಿವರ್ಷ ಹೆಚ್ಚೂ ಕಡಿಮೆ ಇಷ್ಟು ಪ್ರಮಾಣದ ಭೂಮಿ ವ್ಯಯಸಾಯ ದಿಂದ ದೂರವಾಗುತ್ತಿದೆಯಂತೆ. ಹೀಗಾದರೆ ಮುಂದೊಂದು ದಿನ ತಿನ್ನಲು ಮಣ್ಣು ಕೂಡ ಸಿಗುವುದಿಲ್ಲ. ವ್ಯಯಸಾಯ ಭೂಮಿ ಕಡಿಮೆಯಾಗಲು ಹಲವಾರು ಕಾರಣಗಳಿವೆ. ಕಾಲಕಾಲಕ್ಕೆ ಸರಿಯಾಗಿ ಮಳೆಯಾಗದೇ ಕೈಕೊಡುವುದು, ಲಾಭದ ದುರಾಸೆಯಿಂದ ಯಾವುದೋ ಹವಾಗುಣಕ್ಕೆ ಸರಿಹೋಗುವ ಬೆಳೆಯನ್ನು ಸಾಲಸೋಲ ಮಾಡಿ ಇನ್ನೆಲ್ಲೋ ಬೆಳೆದು ಕೃಷಿ ಉಪಯೋಗವಿಲ್ಲ ಎಂದು ಬಗೆದ ರೈತ ತನ್ನ ಜಮೀನು ಹಾಳುಬಿಡುವುದು ಅಥವಾ ಅನ್ಯ ಉದ್ದೇಶಕ್ಕೆ ಬಳಸುವುದು, ವಾಣಿಜ್ಯ, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತುಂಬ ಲಾಭವಿದೆ ಎಂದು ಬಗೆದು ಭೂಮಿಯನ್ನು ಮಾರುವುದು ಇತ್ಯಾದಿ. ಕರ್ನಾಟಕದ ವಿಧಾನಸಭೆಯಲ್ಲಿ ನಿನ್ನೆ ಬಯಲುಸೀಮೆ ಪ್ರದೇಶದಲ್ಲಿ ಅಡಕೆ ಬೆಳೆಗೆ ಪ್ರೋತ್ಸಾಹ ಕೊಡಬೇಕು ಎಂದು ಕೆಲವು ಶಾಸಕರು ಒತ್ತಾಯಮಾಡಿದ್ದಾರೆ. ಆದರೆ ಇದು ನೈಸರ್ಗಿಕವಾಗಿ ಸಾಧುವಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಅಡಕೆ ಒಂದು ವಾಣಿಜ್ಯ ಬೆಳೆ ಅದರಿಂದ ಲಾಭವಾದರೆ ಆಗಲಿ ಎಂಬುದು ಸರಿ. ಆದರೆ ಅಡಕೆಗೆ ನಿರ್ದಿಷ್ಟ ರೀತಿಯ ವಾತಾವರಣದ ಅಗತ್ಯವಿದೆ, ಹವಾಗುಣದ ಅಗತ್ಯವಿದೆ. ಇವೆಲ್ಲ ಸರ್ಕಾರದ ಹಿಡಿತದಲ್ಲಿ ಇಲ್ಲ.ಮಲೆನಾಡು ಮತ್ತು ಕರಾವಳಿ ಭೂ ಪ್ರದೇಶದ ಹವಾಗುಣ ಅಡಕೆ ಬೆಳೆಗೆ ಹೇಳಿ ಮಾಡಿಸಿದ್ದು. ಬಯಲು ಸೀಮೆಯಲ್ಲಿ ಹತ್ತಿ ಒಂದು ಪ್ರಮುಖ ವಾಣಿಜ್ಯ ಬೆಳೆ. ಅದರ ಲಾಭ ಪಡೆಯುವ ಉದ್ದೇಶದಿಂದ ಮಳೆ ಹೆಚ್ಚು ಬೀಳುವ ಕರಾವಳಿ, ಮಲೆನಾಡು ಜನ ಹತ್ತಿ ಬೆಳೆಯಲು ಮುಂದಾದರೆ ಅದು ಕೃಷಿ ಮೂರ್ಖತನ. ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ಯಾವ ಪ್ರದೇಶಕ್ಕೆ ಯಾವ ಬೆಳೆ ಸೂಕ್ತ ಎಂಬುದನ್ನು ಜನ ಅನುಭವದಿಂದ ಕಂಡುಕೊಂಡಿದ್ದಾರೆ. ನಿದರ್ಶನಕ್ಕೆ ನೋಡುವುದಾದರೆ ತುಮಕೂರಿನಂಥ ಕಡಿಮೆ ನೀರು ಇರುವ, ಮಳೆ ಕಡಿಮೆ ಬೀಳುವ ಪ್ರದೇಶದಲ್ಲಿ ಯಾವುದೇ ಸಿರಿಧಾನ್ಯ ಬೆಳೆ ಹೇಳಿ ಮಾಡಿಸಿದ್ದು. ಅದನ್ನು ಬಿಟ್ಟು ನಾನೂ ರೈತ. ನನ್ನಭೂಮಿಯಲ್ಲಿ ಇಷ್ಟಬಂದ ಬೆಳೆ ಹಾಕುತ್ತೇನೆ ಅನ್ನಬಹುದು, ಸಾಲ ಮಾಡಿ ಕಷ್ಟಪಟ್ಟು ಕಬ್ಬು, ಬತ್ತ, ಅಡಕೆಗಳನ್ನು ಹಾಕಬಹುದು. ಆದರೆ ಆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದೇ ರೈತ ಕಂಗಾಲಾಗುವುದು ಗ್ಯಾರಂಟಿ. ಐದಾರು ವರ್ಷಗಳ ಹಿಂದೆ ಸಾಲಬಾಧೆ ತಾಳಲಾರದೇ ರೈತರ ಆತ್ಮಹತ್ಯೆ ಹೆಚ್ಚಿದಾಗ ನಾನು ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ  ಈ ಬಗ್ಗೆ ಅಧ್ಯಯನ ಕೈಗೊಂಡಾಗ ಮಂಡ್ಯ ಮತ್ತು ತುಮಕೂರುಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದ್ದು ಅಂಥ ರೈತರು ಸಾಂಪ್ರದಾಯಿಕ ಮಾರ್ಗಬಿಟ್ಟು ಕೃಷಿಯಲ್ಲಿ ಆ ಪ್ರದೇಶಕ್ಕೆ ಒಗ್ಗದ ಪ್ರಯೋಗ ಮಾಡುವ ಯತ್ನಕ್ಕೆ ಕೈ ಹಾಕಿದ್ದವರೆಂದೂ ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿಕೊಂಡಿದ್ದ ಒಂದೇ ಒಂದು ರೈತ ಕುಟುಂಬದಲ್ಲೂ ಸಾಲಬಾಧೆಯ ಆತ್ಮಹತ್ಯೆ ನಡೆದಿಲ್ಲ ಎಂದೂ ತಿಳಿದುಬಂದಿತ್ತು. ಅಷ್ಟಾಗಿಯೂ ಅಂಥ ಕಡೆ ಆತ್ಮ ಹತ್ಯೆ ಆಗಿದ್ದರೆ ಅದು ಅನ್ಯ ಕಾರಣಕ್ಕೇ ವಿನಾ ಕೃಷಿ ಸಾಲದಿಂದ ಅಲ್ಲ ಎಂದೂ ತಿಳಿದುಬಂದಿತ್ತು. ಅಂದರೆ ರೈತರು ಹವಾಮಾನ. ಪ್ರಕೃತಿಯನ್ನು ಎದುರು ಹಾಕಿಕೊಂಡು ಕೃಷಿ ಮಾಡಲು ಸಾಧ್ಯವಿಲ್ಲ, ಹಾಗೂ ಸರಿಯಾದ ಕೃಷಿ ಕ್ರಮದಿಂದ ನಷ್ಟವೂ ಇಲ್ಲ ಎಂದರ್ಥ. ಕೃಷಿ ಇರಲಿ, ಏನೇ ಇರಲಿ, ಪ್ರಕೃತಿಗೆ ಅನುಗುಣವಾಗಿದ್ದರೆ ಮನುಷ್ಯನಿಗೆ ಹಾನಿ ಇಲ್ಲ. ಲಾಭಕ್ಕೋ ಇನ್ಯಾವುದೋ ದುರಾಸೆಗೋ ಮತ್ತೇನೋ ಮಾಡಲು ಮುಂದಾದರೆ ವಿನಾಶ ಖಚಿತ. ಕೃಷಿ ನಾಶ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸಂಗತಿಯಲ್ಲ, ಅದು ನಾಶವಾದರೆ ದೇಶವೇ ನಾಶವಾಗುತ್ತದೆ. ಅದು ಅನುಭವದ ಮಾತು. ಹೀಗಾಗಿಯೇ ಕುಮಾರವ್ಯಾಸ ಕೃಷಿ ವಿಹೀನ ದೇಶ ಸರ್ವನಾಶ ಕಾಣುತ್ತದೆ ಎಂದು ಹೇಳಿದ್ದಾನೆ.ಬೇಕಿದ್ದರೆ ನೀ ವೇ ಅಧ್ಯಯನ ಮಾಡಿ ನೋಡಿ ಜಗತ್ತಿನಲ್ಲಿ ಎಲ್ಲೆಲ್ಲಿ ಕೃಷಿ ಸಮೃದ್ಧವಾಗಿದೆಯೋ ಅಲ್ಲೆಲ್ಲ ದೇಶ ಸಂಪತ್ತು ಮಾತ್ರವಲ್ಲ, ಸಾಂಸ್ಕøತಿಕ ಸಂಪತ್ತು ಕೂಡ ಹೇರಳವಾಗಿರುತ್ತದೆ. ಕೃಷಿ ನಾಶವಾದಂತೆಲ್ಲ ದೇಶವೂ ಮಧ್ಯಪ್ರಾಚ್ಯ ದೇಶಗಂತೆ ಮರಳಿನಿಂದ ತುಂಬಿ ಎಲ್ಲ ದೃಷ್ಟಿಯಿಂದಲೂ ಹಾಳಾಗುತ್ತದೆ. 

ನಮ್ಮ ದೇಶದ ಎಲ್ಲ ರಾಜ್ಯಗಳಲ್ಲೂ ಕೃಷಿ ಇಲಾಖೆಗಳಿದ್ದು ಆಯಾ ಪ್ರದೇಶದ ಹವಾಮಾನಕ್ಕೆ ಒಗ್ಗುವ ಬೆಳೆಗೆ ಅವು ಉತ್ತೇಜನ ಕೊಡಬೇಕು. ಆದರೆ ಇವು ಹೆಚ್ಚೆಂದರೆ ಕಾಟಾಚಾರಕ್ಕೆ ಮಳೆ ಯಾವಾಗ ಬೀಳುತ್ತದೆ ಎಂಬ ಅಂದಾಜಿನ ಸುದ್ದಿ ಕೊಟ್ಟು ತಮ್ಮ ಕೆಲಸ ಇಷ್ಟೇ, ಹೆಚ್ಚೆಂದರೆ ರೈತರು ಕೇಳುವ ಬೀಜ ಮತ್ತು ಗೊಬ್ಬರ ವಿತರಿಸುವುದು ಫಸಲು ಹಾಳಾದಾಗ ಸರ್ಕಾರದಿಂದ ಹಣ ಬಿಡುಗಡೆಮಾಡಿಸಿ ಕಮಿಶನ್ ಪಡೆದು ರೈತರಿಗೆ ಒಂದಿಷ್ಟು ಪರಿಹಾರ ಕೊಡಿಸುವುದು ಎಂಬುದನ್ನು ಬಿಟ್ಟರೆ ಬೇರೆ ಏನಾದರೂ ರೈತೋಪಕಾರಿ ಕೆಲಸ ಮಾಡುತ್ತವಾ ನೋಡಿ. ಇನ್ನು ಇವುಗಳ ಹಿರಿಯಣ್ಣ ಕೃಷಿ ವಿಶ್ವವಿದ್ಯಾಲಯಗಳ ಬಗ್ಗೆ ಹೇಳದಿರುವುದೇ ವಾಸಿ. ರೈತರಿಗೆ ನೆರವಾಗುವ ಕತ್ತಿ ಕುಡಗೋಲನ್ನೂ ಅವು ಆವಿಷ್ಕರಿಸಿದ ನಿದರ್ಶನವಿಲ್ಲ. ಇವರೆಲ್ಲ ಸೇರಿ ಎಲ್ಲಿನ ರೈತರು ಯಾವ ಬೆಳೆ ತೆಯುತ್ತಾರೆ ಅಲ್ಲಿ ಅದೆಷ್ಟು ಸೂಕ್ತ ಎಂಬ ಬಗ್ಗೆ ರೈತರಿಗೆ ತಿಳಿವಳಿಕೆ ಕೊಟ್ಟು ಕೃಷಿಯೂ ಆ ಮೂಲಕ ದೇಶವೂ ಅಭಿವೃದ್ಧಿಯತ್ತ ಹೋಗುವಂತೆ ಮಾಡಲು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ನಮಗ್ಯಾರಿಗೂ ಉಳಿಗಾಲವಿಲ್ಲ.

No comments:

Post a Comment