Friday, 15 December 2023

ಟಿಪ್ಪು ಕುರಿತ ಒಂದು ಕಾದಂಬರಿ


ಕನ್ನಡ ಕಾದಂಬರಿ ಪ್ರಕಾರದಲ್ಲಿ ಈಗೀಗ ಹೊಸ ಹೊಸ ಪ್ರಯೋಗಗಳು ಶುರುವಾಗಿವೆ. ಒಂದು ದೃಷ್ಟಿಯಿಂದ ಗುಲ್ವಾಡಿ ವೆಂಕಟರಾಯರ ಇಂದಿರಾಬಾಯಿ ಕೃತಿಯಿಂದ ಹಿಡಿದು ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯವರೆಗೂ ಇಂಥ ಹೊಸತನ ಕನ್ನಡ ಕಾದಂಬರಿಯಲ್ಲಿ ಆಗುತ್ತಲೇ ಬರುತ್ತಿದೆ. ಆದರೆ ಪಾಶ್ಚಾತ್ಯ ಸಾಹಿತ್ಯಕ-ಸೈದ್ಧಾಂತಿಕ-ಐಡಿಯಾಲಜಿ ಪರಿಕಲ್ಪನೆಗಳ ಪ್ರಭಾವದಿಂದ ಹೊರಬಂದು ಸ್ವಂತ ಅನುಭವ ಹಾಗೂ ಗ್ರಹಿಕೆಯ ಹಿನ್ನೆಲೆಯಲ್ಲಿ ಕಾದಂಬರಿ ರಚಿಸುವ ವಿಶಿಷ್ಟ ಪ್ರಯತ್ನಗಳು ನಡೆಯುತ್ತಿವೆ. ಶ್ರೀನಿವಾಸ ವೈದ್ಯರ ‘ಹಳ್ಳ ಬಂತು ಹಳ್ಳ’(2004); ಗೋಪಾಲಕೃಷ್ಣ ಪೈ ಅವರ ‘ಸ್ವಪ್ನ ಸಾರಸ್ವತ’ (2009); ವಿ ಟಿ ಶಿಗೇಹಳ್ಳಿಯವರ ‘ತಲೆಗಳಿ’ (2010); ನಾ.ಮೊಗಸಾಲೆಯವರ ‘ಮುಖಾಂತರ’ (2014) ಕಾದಂಬರಿಗಳು ಈ ಮಾತಿಗೆ ಸಾಕ್ಷಿ. ಇದೇ ಬಗೆಯ ಹೊಸತನ ತೋರಿಸಿದ ಮತ್ತೊಂದು ಕಾದಂಬರಿ ಕೃಷ್ಣಮೂರ್ತಿ ಹನೂರು ಅವರ ‘ಮತ್ತೊಬ್ಬನ ಆತ್ಮಚರಿತ್ರೆ’ (2012). ಇವು ಸ್ಥಳೀಯ ಸಮುದಾಯಗಳ ಜೀವನ ಕ್ರಮವನ್ನೋ ಹಿರಿಯರಿಂದ ಹರಿದುಬಂದ ‘ಇತಿಹಾಸ’ದ ಆಧಾರದಲ್ಲೋ ವಸ್ತುವನ್ನು ಹೆಕ್ಕಿ ಕಥೆಯನ್ನು ಹಣೆದು ಭಾಷೆ, ನಿರೂಪಣಾ ಕ್ರಮ, ವಿನ್ಯಾಸ ಮೊದಲಾದ ಕಾರಣಗಳಿಂದ ಹೊಸತನವನ್ನು ಮೆರೆದಿವೆ.

ಆಧುನಿಕ ಜೀವನ ಶೈಲಿ ನಾಶಗೊಳಿಸಿದ ನಮ್ಮ ಸಾಂಪ್ರದಾಯಿಕ ಜ್ಞಾನ ಸಂವಹನ ಕ್ರಮಗಳಲ್ಲಿ ಕಥನಗಾರಿಕೆಯೂ ಸೇರಿದೆ. ಇಂದಿನ ಒತ್ತಡದ ಜೀವನ ಕ್ರಮದಲ್ಲಿ ಕಥೆ ಹೇಳುವವರಿದ್ದರೂ ಕೇಳುಗರಿಲ್ಲ. ಹೀಗಾಗಿಯೇ ಇಪ್ಪತ್ತು ಮೂವತ್ತು ವರ್ಷಗಳ ಹಿಂದೆ ಮನೆಬಾಗಿಲಿಗೆ ಬಂದು ಹಾಡು, ಕಥೆ ಹೇಳುತ್ತಿದ್ದ ಜನಪದರು ಇಂದು ವಿರಳಾತಿವಿರಳವಾಗಿದ್ದಾರೆ. ಕಥೆ ಹೇಳುವವರು ಮತ್ತು ಕೇಳುವವರು ಆಧುನಿಕ ತಂತ್ರಜ್ಞಾನದ ಮೊರೆಹೊಗುತ್ತಿದ್ದಾರೆ. ಹೇಳುವವರು ಟಿವಿ ಧಾರಾವಾಹಿಗಳ ಮೂಲಕ ಕಥೆ ಹೇಳಿದರೆ ಕೇಳುಗರು ಅದನ್ನೇ ನೋಡುತ್ತಾರೆ! ಹೀಗಾಗಿ ಕಥೆ ‘ಹೇಳುವುದನ್ನು’ ‘ನೋಡುವ’ ಪ್ರವೃತ್ತಿ ಕಾಣಿಸಿಕೊಂಡಿದೆ. ಹೇಳುವುದನ್ನು ಕೇಳಬೇಕೇ ವಿನಾ ನೋಡುವುದಲ್ಲ. ಅಸಮಂಜಸವಾಗುವ ಈ ಸಂವಹನದಿಂದಾಗಿ ಕಥೆಗಾರರು ‘ನೋಡುವ’ ಕ್ರಮಕ್ಕೆ ಒತ್ತುಕೊಟ್ಟೇ ಕಥೆ ‘ಹೇಳಬೇಕಾದ’ ಪರಿಸ್ಥಿತಿ ಉಂಟಾಗಿದೆ. ಕಾಲಕ್ಕೆ ತಕ್ಕಂತೆ ಬದಲಾದ ಇಂಥ ಕಥನ ಕ್ರಮ ಹಾಗೂ ಸಮಯವಿಲ್ಲದ ಜೀವನ ಶೈಲಿಗಳಿಂದ ದೀರ್ಘ ಸ್ವರೂಪದಲ್ಲಿ ಕಥೆ ಹೇಳುವ ಕಾದಂಬರಿಯಂಥ ರಚನೆ ಮಾಡುವ ಹೊಸ ತಲೆಮಾರಿನ ಸಾಹಿತಿಗಳೇ ಇಲ್ಲ ಎನ್ನುವ ಪರಿಸ್ಥಿತಿ ಕನ್ನಡದಲ್ಲಿ ಉಂಟಾಗಿದೆ. ಕನ್ನಡದ ಸಣ್ಣಕಥಾ ಪ್ರಕಾರದಲ್ಲಿ ಗುರುತಿಸಿಕೊಂಡ ಹೊಸ ತಲೆಮಾರಿನ ಅನೇಕಾನೇಕ ಲೇಖಕರಿದ್ದಾರೆ. ಆದರೆ ಕನ್ನಡ ಕಾದಂಬರಿ ಪ್ರಕಾರದಲ್ಲಿ ಹೊಸ ತಲೆಮಾರಿನ ಲೇಖಕರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳವಾಗಿದೆ. ದಟ್ಟ ಜೀವನಾನುಭವ, ಪಕ್ವತೆ ಮೊದಲಾದವು ದೀರ್ಘ ಕಥನಗಾರಿಕೆಗೆ ಅನಿವಾರ್ಯವಾದ ಕಾರಣದಿಂದಲೇ ಅರ್ಧ ವಯಸ್ಸು ದಾಟಿದ ಕಾದಂಬರಿಕಾರರೇ ಕನ್ನಡದಲ್ಲಿದ್ದಾರೆ.

ಪ್ರೊ. ಕೃಷ್ಣಮೂರ್ತಿ ಹನೂರರು ನಾಲ್ಕೈದು ದಶಕಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯ, ಸಂಸ್ಕೃತಿ ಅಧ್ಯಯನ, ಅಧ್ಯಾಪನ, ಸಂಶೋಧನೆ, ಪತ್ರಿಕಾ ಬರವಣಿಗೆಗಳನ್ನು ನಡೆಸಿಕೊಂಡುಬಂದಿದ್ದರೂ ಅವರ ನಿಜವಾದ ಕಾಳಜಿ ಮತ್ತು ಕ್ಷೇತ್ರ ಜಾನಪದ. ಮೇಲ್ಕಂಡ ವಿವಿಧ ಕ್ಷೇತ್ರಗಳಲ್ಲಿನ ಅವರ ಎಲ್ಲ ಕೆಲಸದ ಮೇಲೂ ಜಾನಪದ ಪ್ರಭಾವ ಬೀರಿದೆ. ಇಲ್ಲಿ ‘ಜಾನಪದ’ ಎನ್ನುವುದನ್ನು ಸ್ಥಳೀಯ ಸಮುದಾಯಗಳ ಸಂಪ್ರದಾಯ ಹಾಗೂ ತಲೆತಲಾಂತರದಿಂದ ಹರಿದುಬಂದ ಬಗೆ ಬಗೆಯ ಮೌಖಿಕ ಜ್ಞಾನ ಎನ್ನುವ ಅರ್ಥದಲ್ಲಿ ಗ್ರಹಿಸಬೇಕು. ಭಾರತೀಯ ಸಂಪ್ರದಾಯದಲ್ಲಿ ಕಥೆ ಕೇವಲ ಕಲೆಯಲ್ಲ, ಅದು ಜ್ಞಾನ ಸಂವಹನ ಕ್ರಮ. ಅದು ಸಮುದಾಯದ ಸ್ಮೃತಿಯನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುತ್ತಿರುತ್ತದೆ. ಕಥೆ ಹೇಳುವವನಿಂದ ಕೇಳುವವನು ಅನೇಕಾನೇಕ ಸಂಗತಿಗನ್ನು ಕಲಿಯುತ್ತಿರುತ್ತಾನೆ. ಕಥನಕಾರನಿಗೆ ಏನನ್ನು ಹೇಗೆ ಹೇಳಬೇಕು ಹಾಗೂ ಎಷ್ಟು ಹೇಳಬೇಕು ಎಂಬುದು ಕರಗತವಾಗಿರುತ್ತದೆ. ಈ ಕ್ರಮದಲ್ಲಿ ಆಧುನಿಕ ಕಥಾ ಕ್ರಮದಲ್ಲಿ ಸಾಮಾನ್ಯವಾಗಿರುವಂತೆ ಕೇವಲ ಗದ್ಯವಿರುವುದಿಲ್ಲ; ಪದ್ಯ, ನಾಟಕೀಯತೆಗಳೆಲ್ಲ ಸಂದರ್ಭಾನುಸಾರಿಯಾಗಿ ಸೇರಿಕೊಳ್ಳುತ್ತವೆ. ಇಂಥ ಸಾಂಪ್ರದಾಯಿಕ ಕಥನ ಕ್ರಮವನ್ನು ಅರಿತ ಅಥವಾ ಅದರಲ್ಲೇ ಬೆಳೆದ ಪ್ರೊ. ಕೃಷ್ಣಮೂರ್ತಿ ಹನೂರರು ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ಯಲ್ಲಿ ಇದನ್ನೇ ಮಾಡಿದ್ದಾರೆ.

ಒಂದು ಸಂಗತಿಯನ್ನು ಲೇಖಕರು ಸ್ಪಷ್ಟಪಡಿಸಿದ್ದಾರೆ: ‘ನಾನು ಜಾನಪದ ಕ್ಷೇತ್ರಕಾರ್ಯದಲ್ಲಿದ್ದಾಗ್ಗೆ ಅನುಭವಕ್ಕೆ ಬಂದ ಐತಿಹಾಸಿಕ ವಿವರಗಳು ನಾವು ತರಗತಿಯಲ್ಲಿ ಓದುವ, ಬೋಧಿಸುವ, ಪಠ್ಯವಿವರಗಳಿಗಿಂತ ಬೇರೆಯೇ ಆಗಿದ್ದವು. ಅವೆಲ್ಲವೂ ಯುದ್ಧವನ್ನು ಪರಾಕ್ರಮ ಇಲ್ಲವೇ ವಿಜಯದ ಸಂಕೇತವಾಗಿ ಭಾವಿಸುವುದಕ್ಕಿಂತ ತಮ್ಮೆಲ್ಲರ ಬದುಕಿನ ಪಡಿಪಾಟಲು ಮತ್ತು ದುರಂತ ಸಂಗತಿಯಾಗಿ ವಿವರಿಸಿದ್ದೇ ಹೆಚ್ಚಾಗಿತ್ತು’. ಜನಪದ ಜೀವನದ ಭಾಗವೇ ಆಗಿಹೋದ ಇಂಥ ಸಂಗತಿಗಳನ್ನು ಸೃಜನಶೀಲ ಬರವಣಗೆಯ ರೂಪದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. 

ಯುದ್ಧ ಮತ್ತು ಹೋರಾಟಗಳನ್ನು ಲಿಖಿತ ಕಾವ್ಯ ಸಾಹಿತ್ಯದಲ್ಲಿ ಗ್ರಹಿಸಿದ ರೀತಿಯೇ ಬೇರೆ. ಪಂಪ, ರನ್ನ, ಕುಮಾರವ್ಯಾಸ ಮೊದಲಾದ ಕವಿಗಳೆಲ್ಲ ಸಮರವನ್ನು ವೀರ, ರೌದ್ರ, ಬೀಭತ್ಸದಂಥ ಕಾವ್ಯ ಮೀಮಾಂಸೆಯ ‘ರಸ’ದ ಅರ್ಥದಲ್ಲಿ ಕಂಡರಿಸಿದ್ದರೆ ಜನಸಾಮಾನ್ಯರು ತಮ್ಮ ಬದುಕಿನ ಅನುಭವದ ಭಾಗವಾಗಿ ಗ್ರಹಿಸಿದ್ದಾರೆ ಎಂಬುದು ಗಮನಾರ್ಹ. ಹಿಂದೆ ಆಗಿಹೋದ ಯುದ್ಧದ ಘಟನಾವಳಿಗಳನ್ನು ಇತಿಹಾಸದ ಭಾಗವಾಗಿ, ಅದರಲ್ಲಿ ಪಾಲ್ಗೊಂಡ ಸೇನಾ ಮುಖ್ಯಸ್ಥರನ್ನು ‘ನಾಯಕ’ರಾಗಿ, ಅದರಲ್ಲಿ ಪಾಲ್ಗೊಂಡು ಜೀವತೆತ್ತ ನೂರಾರು, ಸಾವಿರಾರು ಜನಸಾಮಾನ್ಯರನ್ನು ಅಲಕ್ಷಿಸಿ ಕಥೆ ಕಟ್ಟುವ ಅದನ್ನು ಪಠ್ಯವಾಗಿಸುವ ಪರಿಪಾಠ ಆರಂಭವಾದುದು ಬ್ರಿಟಿಷರ ಬಳುವಳಿಯಾಗಿ ಬಂದ ಆಧುನಿಕ ಶಿಕ್ಷಣ ಕ್ರಮದಿಂದ. ಹೀಗಾಗಿ ಇಂಥ ಪಠ್ಯಕ್ಕೂ ನೈಜ ಬದುಕಿನ ಗ್ರಹಿಕೆಗೂ ಸಂಬಂಧವೇ ಇಲ್ಲದಂತಾಗಿದೆ. ಇದನ್ನೇ ಲೇಖಕರು ಕ್ಷೇತ್ರಕಾರ್ಯದಲ್ಲಿ ಮನಗಂಡಿರುವುದು. ಈ ಸಂದರ್ಭದಲ್ಲಿ ಪುರಾತತ್ತ್ವ ಹಾಗೂ ಇತಿಹಾಸ ಕುರಿತು ಫುಕೋ ಹೇಳುವ ಮಾತನ್ನು ನೆನೆಯಬಹುದು: “ಘಟನೆ ಮತ್ತು ವಸ್ತುಗಳಾಗಿ ಒಟ್ಟಾಗಿಸುವ ಹೇಳಿಕೆಗಳನ್ನು ನಿಲ್ಲಿಸುವ ಪ್ರಕ್ರಮ ಇದು. ಭೂತ ಮತ್ತು ಸಮಕಾಲೀನ ವಾಸ್ತವ ಘಟನೆಗಳ ಚಿಂತನೆಗಳೂ ಕಾರ್ಯಕಾರಣ ಸಂಬಂಧದಿಂದ ಹುಟ್ಟುವುದಿಲ್ಲ. ಅವು ಕೇವಲ ಆಕಸ್ಮಿಕ (ಆಕ್ಸಿಡೆಂಟ್). ಚರಿತ್ರೆಯಲ್ಲಿ ನಾವು ಗುರುತಿಸಬೇಕಾದುದು ಮೌಲಿಕ ಘಟ್ಟಗಳನ್ನೇ ವಿನಾ ಸಂಪ್ರದಾಯಬದ್ಧ ಎಳೆಗಳನ್ನಲ್ಲ”. ಕಾದಂಬರಿ ಕುರಿತು ಫುಕೋ ಹೇಳುವ ಇನ್ನೊಂದು ಮಾತು ಕೂಡ ಇಲ್ಲಿ ಗಮನಾರ್ಹ: “ಕಾದಂಬರಿ ಒಂದು ವ್ಯಾಖ್ಯಾನಾತ್ಮಕ ಘಟನೆ. ಅದು ಚರಿತ್ರೆಯನ್ನು ಪ್ರತಿಬಿಂಬಿಸುವುದಿಲ್ಲ. ಬದಲಾಗಿ ಅದೇ ‘ಚರಿತ್ರೆ’. ಹೊಸ ಸಂಬಂಧಗಳ ಜೋಡಣೆ ಅದು. ವ್ಯಾಖ್ಯಾನಾತ್ಮಕ ಘಟನೆಯ ಒಂದು ಭಾಗವೇ ಪಠ್ಯ”. ಈ ಕೃತಿಗೆ ಇವೆರಡು ಮಾತುಗಳೂ ಸೂಕ್ತವಾಗಿ ಒಗ್ಗುತ್ತವೆ.

ಈ ಸಂದರ್ಭದಲ್ಲಿ ನಮ್ಮ ದೇಶದ ‘ಇತಿಹಾಸ’ ಮತ್ತು ಸಂಸ್ಕೃತಿಯನ್ನು ಭಿನ್ನವಾಗಿ ಗ್ರಹಿಸುವ ಸಂಸ್ಕೃತಿ ಚಿಂತಕರಾದ ಬಾಲಗಂಗಾಧರ ಅವರ ಅಭಿಪ್ರಾಯವನ್ನು ಗಮನಿಸಬಹುದು: “ಭಾರತದಲ್ಲಿ ಇತಿಹಾಸ ಪ್ರಜ್ಞೆ ಇಲ್ಲ ಎಂಬುದು ಯೂರೋಪ್ ಮೂಲದ ಶಿಕ್ಷಣ ವ್ಯವಸ್ಥೆ ಹಾಗೂ ಯೂರೋಪಿನ ಇತಿಹಾಸದ ದೃಷ್ಟಿ ಹೇಳಿರುವ ಮಾತು. ನಮ್ಮ ದೇಶದಲ್ಲಿ ಕಾವ್ಯ, ಕಥೆ, ಪುರಾಣಗಳೇ ಇತಿಹಾಸದ ಕೆಲಸವನ್ನು ಪೂರೈಸುತ್ತವೆ. ವಸಾಹತುಶಾಹಿ ಆರಂಭವಾದ ಮೇಲೆ ಬ್ರಿಟಿಷ್ ಆಡಳಿತಗಾರರು ಮತ್ತು ವಿದ್ವಾಂಸರು ಈ ದೇಶವನ್ನು ಅರ್ಥಮಾಡಿಕೊಳ್ಳುವ ಹಿನ್ನೆಲೆಯಲ್ಲಿ ದೇಶದ ಇತಿಹಾಸವನ್ನು ತಮ್ಮ ದೃಷ್ಟಿಕೋನಕ್ಕೆ ಅನುಗುಣವಾಗಿ ಕಟ್ಟತೊಡಗಿದರು”.

ಸಾಮಾನ್ಯವಾಗಿ ಯೂರೋಪಿನ ಇತಿಹಾಸ ಉತ್ತರ ಹುಡುಕುವ ಯಾವಾಗ? ಯಾಕೆ? ಹೇಗೆ? ಎನ್ನುವಂಥ ಪ್ರಶ್ನೆಗಳಿಗೆ ಖಚಿತ ಸಾಕ್ಷ್ಯಾಧಾರ, ದಿನಾಂಕ, ಸ್ಥಳ ಮೊದಲಾದವನ್ನು ಗುರುತಿಸುವ ಯತ್ನವೂ ಇಲ್ಲಿ ನಡೆಯಿತು. ಕೆಲವು ಸಂಗತಿಗಳಿಗೆ ಇವು ಸರಿಹೋದರೆ ಬಹಳಷ್ಟು ಸಂಗತಿಗಳಿಗೆ ಈ ದೃಷ್ಟಿ ತಾಳೆಯೇ ಆಗಲಿಲ್ಲ. ದೇಶದಲ್ಲಿ ವ್ಯಾಪಕವಾಗಿರುವ ರಾಮಾಯಣ, ಮಹಾಭಾರತದಂಥ ಕಾವ್ಯಗಳಿಗೆ, ಮಲೆ ಮಹದೇಶ್ವರ, ಮಂಟೇಸ್ವಾಮಿಯಂಥ ಪ್ರಾಂತೀಯ ಜನಪದ ಕಥನಗಳ ಸಂಗತಿಗಳಿಗೂ ಯೂರೋಪಿನ ಇತಿಹಾಸ ದೃಷ್ಟಿಯನ್ನು ತೊಟ್ಟು ಅಳೆಯಲು ಆರಂಭಿಸಲಾಯಿತು. ಇಂಥ ಯತ್ನ ಕೊನೆ ಮೊದಲಿಲ್ಲದ ಗೊಂದಲಗಳನ್ನು ಸೃಷ್ಟಿಸಿತೇ ವಿನಾ ಯೂರೋಪಿನ ವಿದ್ವಾಂಸರು ನಿರೀಕ್ಷಿಸಿದ ಇತಿಹಾಸದ ಉತ್ತರಗಳನ್ನು ಕೊಡಲು ವಿಫಲವಾಯಿತು. ಏಕೆಂದರೆ ನಮ್ಮ ಪರಂಪರೆಯಲ್ಲಿ ಇತಿಹಾಸ ಎನ್ನುವುದು ಆಗಿಹೋದ ಘಟನೆಯಲ್ಲ. ಮಾತ್ರವಲ್ಲ, ನಮ್ಮ ಜನರಿಗೆ ಅವುಗಳಲ್ಲಿರುವ ಸಂತಿಗಳು ನಿಜಕ್ಕೂ ಇದ್ದವೋ ಇಲ್ಲವೋ ಎಂಬುದೂ ಮುಖ್ಯವಲ್ಲ. ಆದರೆ ಇವೆಲ್ಲವನ್ನೂ ನಮ್ಮ ಜನ ಬದುಕುತ್ತಾರೆ.

 ಸುಮಾರು 230 ಪುಟಗಳ ಕೃತಿ ಇದು. 2015ರಲ್ಲಿ ಎರಡನೆಯ ಮುದ್ರಣವನ್ನು ಕಂಡಿದೆ. ಪೌರಾಣಿಕ ಕಥನ ಕ್ರಮದಲ್ಲಿ ಆರಂಭವಾಗುವ ಇದರಲ್ಲಿ ದಫ್ತರು, ಶಾಸನ, ದಂತಕಥೆ, ನಂಬಿಕೆ, ಆಚರಣೆ ಇತ್ಯಾದಿ ಇತ್ಯಾದಿಗಳೆಲ್ಲ ಸೇರಿಕೊಂಡಿವೆ. ಟಿಪ್ಪು ಸುಲ್ತಾನನ ಕಾಲದ ದಳವಾಯಿಯೊಬ್ಬ ತನ್ನ ನೆನಪಿನ ಬುತ್ತಿ ಬಿಚ್ಚಿಡುವಂತೆ ಆರಂಭಗೊಳ್ಳುತ್ತದೆ. ಕಥಾವಸ್ತುವಿಗೆ ಪೂರಕವಾಗಿ ಶಿಕ್ಷಣ ಕಲಿಸಿದ ‘ಇತಿಹಾಸ’ ಜನಪದ ಕಥನದೊಳಗಿನ ‘ಗತ’ ಗಳೆಲ್ಲ ಸೇರಿಕೊಳ್ಳುತ್ತವೆ. ಇಷ್ಟಾದರೂ ಇದು ಇತಿಹಾಸವಲ್ಲ, ‘ಚರಿತ್ರೆ’. 

No comments:

Post a Comment