ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಇತಿಹಾಸವೆಂದು ಈಗ ನಮಗೆ ಕಲಿಸಲಾಗುತ್ತಿರುವ ಪಾಠಗಳಲ್ಲಿ ಅನೇಕ ಸುಳ್ಳುಗಳಿವೆ, ಸತ್ಯವನ್ನು ಮರೆಮಾಚಲಾಗಿದೆ. ಇದಕ್ಕೆ ಬ್ರಿಟಿಷರ ಹಾಗೂ ನಮ್ಮವರ ಸ್ವಾರ್ಥ ಕಾರಣ ಎಂಬುದು ಈ ಕೃತಿಯನ್ನು ಓದಿದರೆ ಅರಿವಾಗುತ್ತದೆ. ನನಗೇ ತಿಳಿದಂತೆ ಬ್ರಿಟಿಷ್ ವಿರುದ್ಧ ಹೋರಾಡಿದ ಸಾಕಷ್ಟು ಜನ ಗಂಡಸರು-ಹೆಂಗಸರು ಎಲ್ಲಿಯೂ ದಾಖಲಾಗದೇ ಹೋಗಿದ್ದಾರೆ. ಇವರು ಭಗತ್ ಸಿಂಗ್ ರಂತೆ, ಮಂಗಲಪಾಂಡೆಯಂತೆ ದೊಡ್ಡ ಹೋರಾಟ ಮಾಡಿದವರಲ್ಲ. ನಿಜವಾದ ಹೋರಾಟಮಾಡುವವರಿಗೆ ಅನೇಕ ರೀತಿಯಲ್ಲಿ ನೆರವಾದವರು, ಕಷ್ಟಪಟ್ಟವರು. ಬ್ರಿಟಿಷರ ವಿರುದ್ಧ ಹೋರಾಡಲು ಸ್ಥಳೀಯವಾಗಿ ಲಭ್ಯವಿದ್ದ ಸಾಮಗ್ರಿಗಳನ್ನು ಬಳಸಿ ನಾಡಬಾಂಬ್ ತಯಾರಿಸಿ, ಪಿಸ್ತೂಲು ಇತ್ಯಾದಿ ತಯಾರಿಸಿ ಸಶಸ್ತ್ರ ಹೋರಾಟ ಮಾಡಿದವರು ಲೆಕ್ಕವಿಲ್ಲದಷ್ಟಿದ್ದಾರೆ. ಆದರೆ ಬ್ರಿಟಿಷ್ ವಿರುದ್ಧ ಹೋರಾಡಿದ ಹಲ ಕೆಲವರಿಗೆ ಮಾತ್ರ ಕೆಲವು ಕಾರಣಕ್ಕೆ ಗೌರವಾದರಗಳು ದೊರೆತು ಬೇರೆ ಯಾರೂ ದೇಶದ ಸ್ವಾತಂತ್ರ್ಯಕ್ಕೆ ಅಷ್ಟಾಗಿ ಹೋರಾಡಿಲ್ಲ ಅನ್ನುವಂತೆ ಲಾಗಾಯ್ತಿನಿಂದಲೂ ಬಿಂಬಿಸಲಾಗುತ್ತಿದೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೆಲವರ ಹೆಸರು ಮಾತ್ರ ಮುಂಚೂಣಿಯಲ್ಲಿದ್ದು ಅಷ್ಟಕ್ಕೇ ಅದು ನಿಲ್ಲುತ್ತದೆ. ಫಡ್ಕೆ, ಸಾವರ್ಕರ್ ಮೊದಲಾದ ಬಹುತೇಕರ ಹೆಸರುಗಳು ಸದಾ ವಿವಾದದಲ್ಲೇ ಇರುವಂತೆ ಮಾಡಲಾಗಿದೆ. ಇದಕ್ಕೆ ಆಧಾರವಾಗಿ ಬ್ರಿಟಿಷ್ ಪ್ರಣೀತ ಇತಿಹಾಸದ ಪುಟಗಳನ್ನು ತೋರಿಸಲಾಗುತ್ತದೆ. ಈ ಸಾಲಿನಲ್ಲಿ ನಮ್ಮವರೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿಕೊಂಡಿದ್ದಾರೆ. ತಮಾಷೆ ಅಂದ್ರೆ ಪ್ರಪಂಚದಲ್ಲಿ ಭಾರತವನ್ನು ಬಿಟ್ಟರೆ ಬೇರೆ ಯಾವ ದೇಶದಲ್ಲೂ ತಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ವಿಷಯದಲ್ಲಿ ಪರ-ವಿರೋಧಗಳಿಲ್ಲ. ನಮ್ಮಲ್ಲಿ ಏಕೆ ಹೀಗೆ ಅಂದರೆ ತುಮಕೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕರಾದ ಕೊಟ್ರೇಶ್ ಹೇಳುವಂತೆ ನಮ್ಮ ಈ ಇತಿಹಾಸ ಬರೆದುಕೊಟ್ಟವರೆಲ್ಲ ವಿದೇಶಿಗರು ಹಾಗೂ ಅವರ ಶಿಷ್ಯರು ಆದ ಕಾರಣ. ಮತ್ತೊಂದು ಕಾರಣ ಕುವೆಂಪು ವಿವಿಯ ನಿವೃತ್ತ ಇತಿಹಾಸ ಪ್ರಾಧ್ಯಾಪಕರಾದ ರಾಜಾರಾಮ ಹೆಗಡೆಯವರು ಹೇಳುವಂತೆ ಬ್ರಿಟಿಷ್ ವಿರುದ್ಧ ಹೋರಾಡುವಾಗ ನಮ್ಮಲ್ಲಿ ಎರಡು ದೇಶಗಳಿಗೆ ಹೋರಾಟ ನಡೆಯಿತು. ಮುಸ್ಲಿಂ ಹಾಗೂ ಹಿಂದೂ ಪರ. ಉಳಿದ ದೇಶಗಳಲ್ಲಿ ಇಂಥ ಸಮಸ್ಯೆ ಬೇರೆ ರೀತಿಯಲ್ಲಿದೆ ಅಮೆರಿಕದಲ್ಲಿ ಬ್ಲಾಕ್ ಅಂಡ್ ವೈಟ್ ಎಂದು ಕಾಣುವಂತೆ. ಆದರೆ ನಮ್ಮಲ್ಲಿ ಇದರ ನಡುವೆ ಸೆಕ್ಯೂಲರ್ ಎಂಬ ಕಲ್ಪನೆ ಸೇರಿಕೊಂಡು ಸಮಸ್ಯೆಯನ್ನು ಸದಾ ಜೀವಂತ ಇಟ್ಟಿದೆ ಮಾತ್ರವಲ್ಲ ಬ್ರಿಟಿಷರು ಇಲ್ಲಿಂದ ಹೋದರೇ ವಿನಾ ಅಂದಿನ ಸಮಸ್ಯೆ ಇಂದಿಗೂ ಹಾಗೇ ಇದೆ.ಇವು ಹೆಚ್ಚು ಸ್ವೀಕಾರಾರ್ಹ ವಿವರಗಳು ಅನಿಸುತ್ತದೆ.
ಆದರೆ ಬ್ರಿಟಿಷರು ಭಾರತ ಕುರಿತಂತೆ ಕೊಟ್ಟ ಚಿತ್ರಣಕ್ಕೆ ಅವರೇ ಕೊಡುವ ಆಧಾರಗಳು ಕೆಲವೊಮ್ಮೆ ವಿರುದ್ಧವಾಗಿ ಕಾಣಿಸುತ್ತವೆ. ಭಾರತದಲ್ಲಿ ಶಿಕ್ಷಣ ಎಲ್ಲರಿಗೂ ಇರಲಿಲ್ಲ ಎಂದು ಅವರೇ ಒಂದೆಡೆ ಪ್ರಚಾರಮಾಡಿ ಇನ್ನೊಂದೆಡೆ ಎಲ್ಲರಿಗೂ ಶಿಕ್ಷಣ ಸಿಗುತ್ತಿತ್ತು ಎಂದು ಅವರೇ ದಾಖಲೆ ಕೊಡುತ್ತಾರೆ. ಇದನ್ನು ಧರ್ಮಪಾಲ್ ತಮ್ಮ ಪ್ರಸೊದ್ಧ ಕೃತಿ 'ದಿ ಬ್ಯೂಟಿಫುಲ್ ಟ್ರೀ'ಯಲ್ಲಿ ಸಾಧಾರವಾಗಿ ತೋರಿಸಿದ್ದಾರೆ. ಇಂಥದ್ದೇ ಬ್ರಿಟಿಷರ ವಿರೋಧಾಭಾಸ ಕಾಣಿಸುವ ಕೃತಿ ಯಳಮಳ್ಳೀಯವರ ಈ ಕೃತಿ ಇದರಲ್ಲಿ ಯಶಸ್ವಿಯಾಗಿದೆ.
ಏನೇ ಆದರೂ ವೃತ್ತಿ ಬೇರೆಯಾದರೂ ಪ್ರವೃತ್ತಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರನ್ನೂ ಕಾಡುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಅದನ್ನು ಬೆನ್ನತ್ತಿ ಕಷ್ಟಪಟ್ಟು ಇಂಥ ಕೃತಿ ರಚಿಸಿದ ಯಳಮಳ್ಳೀಯವರಿಗೆ ಸೆಲ್ಯೂಟ್ ಮಾಡಲೇಬೇಕಿದೆ. ಇದನ್ನು ಆಸಕ್ತರು ಅದರಲ್ಲೂ ಇತಿಹಾಸದ ವಿದ್ಯಾರ್ಥಿಗಳು ಶಿಕ್ಷಕರು ಕೊಂಡು ಓದಿ ಚರ್ಚಿಸಬೇಕಿದೆ.
ಪುಸ್ತಕ: ಸ್ವಾತಂತ್ರ್ಯ ಹೋರಾಟದ ಅಸಲಿ ರೂವಾರಿಗಳು. ಬಿ ಎನ್ ಯಳಮಳ್ಳೀ, ಸಮೃದ್ಧ ಸಾಹಿತ್ಯ ಪ್ರಕಾಶನ, ತಿಲಕ್ ನಗರ ಬೆಂಗಳೂರು. ಮೊಬೈಲ್: ೯೮೮೦೭೭೩೦೨೭

No comments:
Post a Comment