Sunday, 21 January 2024

ಮತ್ತೆ ಆಯಿಯನ್ನು ಕಳೆದುಕೊಂಡೆ


ಅವರು ನನ್ನ ಎರಡನೆಯ ತಾಯಿ ಆಗಿದ್ದವರು. ಅಂದರೆ ನನ್ನ ಅರ್ಧಾಂಗಿಯ ದೊಡ್ಡಮ್ಮ. ನನಗೂ ಹಾಗೆಯೇ. ಕಳೆದ ವರ್ಷ ಹೆಚ್ಚೂ ಕಡಿಮೆ ಇದೇ ವೇಳೆಗೆನನ್ನ ಹೆತ್ತ ತಾಯಿ ಹೇಗೆ ಉಸಿರುಚೆಲ್ಲಿದ್ದರೋ ಹಾಗೆಯೇ ಇವರೂ ಚೆಲ್ಲಿದರು. ಯಾರನ್ನೂ ಕಾಡದೇ ಬೇಡದೇ. ಕೇಳಿಕೊಂಡು ಬಂದ ಸಾವು ಇದೂ ಕೂಡ. ಆದರೆ ಸ್ವಲ್ಪ ಅವಸರ ಪಟ್ಟರು. ದಾಸರು ಸುಮ್ಮನೇ ಅಂದಿಲ್ಲ. ಬದುಕು ಅಂದ್ರೆ ನೀರ ಮೇಲಿನ ಗುಳ್ಳೆ. ಯಾವಾಗ 'ಫಟ್' ಎಂದು ಒಡೆಯುತ್ತದೋ ಯಾರಿಗೂ ಊಹಿಸಲು ಆಗದು. ಹೀಗೆ ಹೇಳಲು ಕಾರಣವಿದೆ. ಅವರ ದೇಹ ಇದ್ದುದು ದೂರದ ಅಮೆರಿಕದಲ್ಲಿ ಆದರೆ ಅವರ ಮನಸ್ಸು ಸದಾ ಕಾಲ ಭಾರತದಲ್ಲಿ, ಅದರಲ್ಲೂ ನಮ್ಮ ಕರ್ನಾಟಕದಲ್ಲಿ. ವಾರಕ್ಕೊಮ್ಮೆ ಕರೆ ಮಾಡಿ ಸಾಮಾಜಿಕ, ಇಲ್ಲಿನ ರಾಜಕೀಯ, ಸಾಂಸ್ಕೃತಿಕ ವಿಷಯಗಳನ್ನು ಬಿಟ್ಟೂ ಬಿಡದೇ ತಿಳಿದುಕೊಳ್ಳುತ್ತಿದ್ದರು. ನುಭವಿಸಬೇಕಲ್ಲ. ಅಂದಿದ್ದೆ ಇನ್ನೊಂದೆರಡು ತಿಂಗಳು. ನಿಮ್ಮಲ್ಲಿ ಬಂದು ನಿಮಗೆ ಶಾಕ್ ಆಗುವಂತೆ ನಿಮ್ಮನೆ ಬಾಗಿಲು ಬಡಿಯುತ್ತೇನೆ ನೋಡ್ತಿರಿ ಅಂದಿದ್ದೆ.  ಐ ವಿಲ್ ಬಿ ವೇಯ್ಟಿಂಗ್‌ ಈಚೆಗೆ ಯಾಕೋ ಕರೆ ಮಾಡಿದಾಗಲೆಲ್ಲ ನಾವು ಮತ್ತೆ ಭೇಟಿ ಆಗ್ತೀವೋ ಇಲ್ವೋ ಎಂದು ಮಾತಾಡಿ ಸದಾ ನನ್ನಿಂದ ಬೈಸಿಕೊಳ್ಳುತ್ತಿದ್ದರು. ನಿನ್ನಿ ತಾನೇ ಮತ್ತೆ ಬೈದಿದ್ದೆ ಇನ್ನೂ ಇಪ್ಪತ್ನಾಲ್ಕು ಗಂಟೆ ಆಗಿಲ್ಲ. ಆಗಲೇ ಅವರು ಅನ್ನು ತ್ತಿದ್ದ ಮಾತು ಮತ್ತೆ ಕಾಣುವುದಿರಲಿ, ಮತ್ತೆ ಮಾತಾಡುವುದೂ ಇಲ್ಲ ಅನಿಸಿಬಿಟ್ಟಿತ್ತು. ಥತ್ ಅಂದುಕೊಂಡೆ, ಜೀವನ ಅಂದ್ರೆ ಅನಿಶ್ಚಿತತೆಯನ್ನು ಅರಗಿಸಿಕೊಳ್ಳುವುದೇ ಆಯ್ತು. ಆಯಿ ಹೋಗಿದ್ದು ಇನ್ನೂ ಅರಗಿಲ್ಲ. ಅಷ್ಟರಲ್ಲಿ ಇನ್ನೊಬ್ಬ ತಾಯಿ ಹೋದರು. ಅಪ್ಪಾ ದೇವಾ ಇಷ್ಟೇನಾ ನಿನ್ನ ಮಹತ್ತು. ಇಂಥ ಕಷ್ಟ ನಮಗೆ ಅಭ್ಯಾಸ ಆದ ಮೇಲೆ ಏನು ಮಾಡ್ತೀಯ ಅಂದುಕೊಂಡೆ. ಆದರೆ ಈಗಲಂತೂ ‘ಐ ವಿಲ್ ವೇಯ್ಟ್ ಫಾರ್ ಇಟ್’ ಅಂದಿದ್ದರು. ಆಯ್ತು ಅಂದಿದ್ದೆ. ಇಬ್ಬರೂ ಮಾತು ಉಳಿಸಿಕೊಳ್ಳಲಾಗಲಿಲ್ಲ. ಇಬ್ಬರೂ ಮೂರ್ಖರಾದೆವು-ಪ್ರಕೃತಿಯ ಮುಂದೆ.   

ಅವರು ಬೆಳಗಾವಿ ಮೂಲದವರು. ೭೦ರ ದಶಕದಲ್ಲಿ ಮದುವೆಯಾಗಿ ಅಲ್ಲಿ ಕೆಲಸದಲ್ಲಿದ್ದ ಗಂಡನ ಜೊತೆ ಅರೆಮನಸ್ಸಿನಲ್ಲೇ ಹಾರಿದರಂತೆ. ಅರೆ ಮನಸ್ಸು ಏಕೆಂದರೆ ಎಂದಾದರೂ ಒಂದು ದಿನ ಗಂಡನನ್ನು ಮನವೊಲಿಸಿ ಮರಳಿ ಭಾರತಕ್ಕೆ ಬರುತ್ತೇನೆ ಎಂಬ ನಂಬಿಕೆ ಇತ್ತಂತೆ,ಪಾಪ, ಅದೂ ಕೈಗೂಡಲಿಲ್ಲ. ಸಾಮಾನ್ಯವಾಗಿ ನಮ್ಮ ದೇಶದವರು ಒಮ್ಮೆ ಅಮೆರಿಕಕ್ಕೆ ಹೋದರೆ ಮತ್ತೆ ವಾಪಸು ಬರುವ ಮನಸ್ಸು ಮಾಡುವುದಿಲ್ಲವಲ್ಲ, ಅವರ ಗಂಡನೂ ಹಾಗೆಯೇ ಆಗಿಬಿಟ್ಟರು. ಅದೊಂದು ದುರಂತ. ಅವರ ಗಂಡನಿಗೆ ಹಿಂದಿನ ಹಿಂದುಳಿದ ಬ್ರಿಟಿಷ್ ಕಾಲದ ದೇಶವೇ ಆಗಿತ್ತು. ಇವರು ಪ್ರತೀ ಬಾರಿ ಇಲ್ರೀ ಈಗ ಹಂಗಿಲ್ಲವೆAದು ಅರಿವು ಮೂಡಿಸಲು ಹೆಣಗುತ್ತಿದ್ದರು. ಪುಣ್ಯಕ್ಕೆ ಅದು ಹೇಗೋ ಮನಸ್ಸು ಮಾಡಿ ನನ್ನ ಮದುವೆ ಸಂದರ್ಭದಲ್ಲಿ ಬಂದಿದ್ದರು, ಒಳ್ಳೆಯ ಮನುಷ್ಯ. ಆದರೆ ಬ್ರಿಟಿಷರ ಪ್ರಭಾವ ಅವರ ಮೇಲೆ ಹಾಗೆ ಆಗಿತ್ತು, ಅವರ ತಪ್ಪಲ್ಲ. 

ಕನ್ನಡ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅವರಿಗೆ ಅದೆಂಥ ಪ್ರೀತಿ. ಅವರು ಕನ್ನಡವನ್ನು ಎಂದೂ ಮರೆಯಲಿಲ್ಲ.ಮಾತ್ರವಲ್ಲ, ಅಲ್ಲಿ ದೂರದ ಅಮೆರಿಕದಲ್ಲಿ ತಮ್ಮ ಸಂಪರ್ಕಕ್ಕೆ ಬಂದ ಕನ್ನಡಿಗರನ್ನು ಮನವೊಲಿಸಿ ಆಗಾಗ ಸಾಹಿತ್ಯ ಓದುವ ಹವ್ಯಾಸ ಬೆಳೆಸಿದ್ದರಂತೆ. ಅವರಿಂದಲೇ ಒಮ್ಮೆ ತಿಳಿದೆ. ಕನ್ನಡದ ಪುಸ್ತಕ ಖರೀದಿ ಮಾಡಲೆಂದೇ ಅವರು ಒಂದೆರಡು ವರ್ಷಕ್ಕೊಮ್ಮೆ ಇಲ್ಲಿ ಬರುತ್ತಿದ್ದರು. ನನಗೆ ಕನ್ನಡ ಪುಸ್ತಕಗಳೇ ನೋಡ್ರಿ ಇಲ್ಲಿ ಸಂಬಂಧ ಬಿಗಿ ಇಟ್ಟಿದ್ದು ಅನ್ನುತ್ತಿದ್ದರು. ಕುವೆಂಪು ಕಾರಂತ, ಭೈರಪ್ಪ ಆದಿಯಾಗಿ ನನ್ನಂಥ ಪುಟಗೋಸಿ ಕನ್ನಡ ಬ್ಲಾಗ್ ಬರಹಗಾರರ ಬರೆಹವನ್ನೂ ಓದಿ ಅಭಿಪ್ರಾಯ ಹೇಳುತ್ತಿದ್ದರು. ಅಷ್ಟಲ್ಲ, ಅಲ್ಲಿ ಪರಿಚಯಸ್ಥರಿಗೂ ಕೊಟ್ಟು ಓದಿಸುತ್ತಿದ್ದರು. ಒಮ್ಮೆ ಅಲ್ಲಿನ ಅವರ ಪರಿಚಿತರು  ನಾನು ನನ್ನ ಆಯಿ ಬಗ್ಗೆ ಬರೆದ ಲೇಖನ ಓದಿ ಚೆನ್ನಾಗಿ ಬರೆದಿದ್ದೀರಿ ಎಲ್ಲರ ತಾಯಂದಿರೂ ಹೀಗೆಯೇ ನೋಡಿ ಎಂದು ಅಚ್ಚರಿ ಹುಟ್ಟಿಸಿದ್ದರು. ನನ್ನ ಲೇಖನ ಓದುವವರು ಅಮೆರಿಕದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಏರಿದ್ದು ಇವರಿಂದ ಎಂದು ತಿಳಿದು ಹೆಮ್ಮೆ ಪಟ್ಟಿದ್ದೆ. ಅವರಂಥ ಅವರು ಒಮ್ಮೆಯೂ ನನ್ನನ್ನು ಅಲ್ಲಿಗೆ ಕರೆಸಿಕೊಳ್ಳದೇ ಕೊಟ್ಟ ಮಾತು ಅರ್ಧ ಮಾಡಿ ಎಲ್ಲೋ ದೂರ ಹೋಗಿಬಿಟ್ಟರು. ಎಷ್ಟು ಸಂಕಟವಾಗಬೇಡ? ಅಷ್ಟೇ. ನಿನ್ನೆ ಮಧ್ಯಾಹ್ನ ಅಲ್ಲಿ ತುಂಬ ಚಳಿ ಅನ್ನುತ್ತ ಬೆಚ್ಚಗೆ ಹೊದ್ದು ಅವರ ಮಗಳ ಮನೆಯಲ್ಲಿ ಮಲಗಿದರಂತೆ. ಮತ್ತೆ ಏಳಲಿಲ್ಲ ಎಂದು ಫೋನ್ ಬಂತು. ಕಳವಳಿಸಿದೆ, ಕಣ್ತುಂಬ ಅತ್ತೆ. ಇನ್ನೇನು ಮಾಡಲಿ? 

 ಇದನ್ನು ನೆನೆದು ಮತ್ತೆ ಮತ್ತೆ ನೀರ ಮೇಲಿನ ಗುಳ್ಳೆ ಎಂಬ ದಾಸರ ಪದ ನೆನೆಯುತ್ತ ಕುಳಿತಿದ್ದೇನೆ.

No comments:

Post a Comment