ಆದರೆ ಸಂಸ್ಕೃತದಲ್ಲಿ ಬೈಗುಳ ಇರಲೇ ಇಲ್ಲ ಅನ್ನುವುದೂ ಕಷ್ಟ. ಒಂದು ದಂತಕಥೆ ಹೇಳುವಂತೆ ಒಮ್ಮೆ ಕಾಳಿದಾಸನಿಗೂ ದಂಡಿಗೂ ಯಾರು ಶ್ರೇಷ್ಠರೆಂಬ ಜಗಳವಾದಾಗ ಇಬ್ಬರೂ ಸರಸ್ವತಿಯ ಬಳಿ ಹೋದರಂತೆ ಆಕೆ ದಂಡಿಯೇ ಕವಿ ಶ್ರೇಷ್ಠ ಅಂದಾಗ ಕಾಳಿದಾಸನಿಗೆ ಸಿಟ್ಟುಬಂದು 'ಕೋಹಂ ರಂಡಿ ಕ್ಷಿಪ್ರಂವದ' (ಹಾಗಾದ್ರೆ ನಾನೇನು ಬೇಗ ಹೇಳು ರಂಡೆ) ಅಂದನಂತೆ.
ಆಡುಭಾಷೆಯಲ್ಲಿ ಬಳಕೆಯಲ್ಲಿದ್ದಿರಬಹುದಾದ ಶಬ್ದಗಳು ಬರೆಹ ರೂಪದಲ್ಲಿ ಸಂಸ್ಕೃತ ಪಠ್ಯವಾಗುವಾಗ ಅಂಥ ಪದಗಳು ಜರಡಿಹಿಡಿದುಹೋಗುತ್ತಿದ್ದವು ಅನಿಸುತ್ತದೆ.ಇಷ್ಟಾದರೂ ಪ್ರಾಕೃತದಲ್ಲಿ ಕೂಡ ಹಾ ಮ ಧ ಎಂಬ ಮೂರು ಧ್ವನಿಗಳು ಮಾತ್ರ ತೀವ್ರ ರೂಪದ ಬೈಗುಳಗಳಾಗಿದ್ದವೆಂದು ತಿಳಿದುಬರುತ್ತದೆ. ಹಾ ಕೆಳ ಹಂತದ ಬೈಗುಳ. ಮ ಮಧ್ಯಮ ಹಾಗೂ ಧ ತೀವ್ರ ರೂಪದ ಬೈಗುಳವಾಗಿತ್ತು. ಯಾರನ್ನಾದರೂ ಹಾಮಧ ಅಂದರೆ ಅದು ಅತಿರೇಕದ ಬೈಗುಳ. ಬಿಟ್ಟರೆ ಅಲ್ಲಿ ಕೂಡ ದೊಡ್ಡ ದೊಡ್ಡ ಪದಪುಂಜಗಳು ಬೈಗುಳವಾಗಿರಲಿಲ್ಲಎಂಬುದು ವಿಶೇಷ. ಇಂದು ತಾನು ಅತ್ಯಂತ ಶಿಷ್ಟ ಭಾಷೆ ಅಂದುಕೊಳ್ಳುವ ಇಂಗಿಷ್ ನಲ್ಲಿ ಕೂಡ ಕೆಟ್ಟ ಬೈಗುಳ ಅಥವಾ ಸ್ಲಾಂಗ್ ಹೆಣ್ಣನ್ನೇ ಆಧರಿಸಿದೆ. ಇದೊಂದು ಕುತೂಹಲಕಾರಿ ಸಂಗತಿ. ಪುರುಷಪ್ರಧಾನ ಸಮಾಜದಿಂದ ಹೀಗಾಗಿದೆ ಎಂದು ಸ್ರ್ತೀವಾದಿಗಳು ಹೇಳಬಹುದು. ಆದರೆ ನಿಜವಾಗಿ ಪುರುಷಪ್ರಧಾನ ಸಮಾಜದಲ್ಲಿ ಪುರುಷ ನಿಂದನೆಯೇ ಹೆಚ್ಚಿನದಾಗಿರಬೇಕಾಗಿತ್ತು.
ಜನಪದ ಸಾಹಿತ್ಯದಲ್ಲಿ ಬೈಗುಳ ಹೇರಳ. ಕೆಲವೊಮ್ಮೆ ಇವು ಶಾಪದ ರೂಪದಲ್ಲಿರುತ್ತವೆ. ಉದಾಹರಣೆಗೆ ಮಹದೇಶ್ವರ ಕಾವ್ಯದಲ್ಲಿ ಅಂತೆಯೇ ಸಿರಿಚಾಮುಂದಿ ಕಾವ್ಯದಲ್ಲಿ ಬರುವಂತೆ ನಿಂಗೆ ಹಾವಾದ್ರೂ ಕಚ್ಚಬಾರ್ದ, ಚೇಳಾದ್ರೂ ಕಡಿಯಬಾರ್ದಇತ್ಯಾದಿ. ಇದೇ ರೀತಿ ಸಂಸ್ಕೃತದಲ್ಲೂ ಹೆಚ್ಚು ಬೈಗುಳಗಳು ಶಾಪದ ರೂಪದಲ್ಲಿವೆ. ಇಂಥ ಕಡೆ ಮಹಿಳೆಯನ್ನು ಆಧರಿಸಿ ಬೈಗುಳವಿಲ್ಲ ಎಂಬುದು ವಿಶೇಷ. ಕನ್ನಡದ 'ನಿಮ್ಮನೆ ಎಕ್ಕುಟ್ಟಿಹೋಗಾ', ನಿನ್ನ ಮನೆಗೆ ಬೆಂಕಿ ಬೀಳಾ, ನಿನ್ನ ಸಂತಾನ ನಾಶವಾಗ್ಲಿ ಇತ್ಯಾದಿ. ಮರಾಠಿಯ ವಾಘ್ ಖಾಯ್ಲೆ ತುಕಾ (ನಿನ್ನ ಹುಲಿ ತಿನ್ನಲಿ) ಇತ್ಯಾದಿ. ನಿನ್ನ ಸಂತಾನ ನಾಶವಾಗಲಿ ಎಂಬುದಂತೂ ಭಯಂಕರ ಶಾಪ. ಮೈಸೂರು ಅರಸರಿಗೆ ಮಾತಂಗಿ ಎಂಬ ಹೆಣ್ಣು ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಸಾಯುವಾಗ ಶಾಪ ಕೊಟ್ಟಳೆಂದೂ ಇದರ ಫಲವಾಗಿ ೧೬ನೆಯ ಶತಮಾನದ ಸುಮಾರಿನಿಂದ ಮೈಸೂರು ಒಡೆಯರ ದತ್ತು ಮಗನಿಗೆ ಮಾತ್ರ ಸಂತಾನವಾಗುತ್ತದೆ ಎಂದೂ ಹೇಳಲಾಗುತ್ತದೆ. ಇದು ವಿಚಿತ್ರ ಎಂಬಂತೆ ನಿಜವೂ ಆಗಿಬಿಟ್ಟಿದೆ. ಹೀಗೆ ಕೆಲವರು ಬೈದುದು ಅಥವಾ ಶಪಿಸಿದ್ದು ನಿಜವಾಗುವುದಿದೆ. ಇಂಥ ಜನರ ನಾಲಗೆ ಮೇಲೆ ಮಚ್ಚೆ ಇರುತ್ತದೆ ಎಂದೂ ಹೇಳುತ್ತಾರೆ. ಕೆಲವು ಬೈಗುಳಗಳು ಅಪ್ಪ ಅಮ್ಮ ತಲೆಮಾರು ಜಾತಿ ಇತ್ಯಾದಿಗಳ ಗೊಡವೆಗೇ ಹೋಗದೆ ಆಯಾ ವ್ಯಕ್ತಿಯನ್ನು ಮಾತ್ರ ಕುರಿತಿರುತ್ತವೆ. ನಿನ್ನ ಬಾಯಿಗೆ ಹುಳ ಬೀಳಾ, ಮೈಗೆಲ್ಲ ಹುಣ್ಣು ಬೀಳಾ, ನಿಂಗೆ ಲಕ್ವಾ ಹೊಡೆಯಾ ಇತ್ಯಾದಿ ಈ ವರ್ಗದವು. ಆದರೂ ಬೈಗುಳಗಳು ವ್ಯಕ್ತಿಗಿಂತಲೂ ಅವನ ತಂದೆ ತಾಯಿ ಮನೆತನ ಧರ್ಮ, ಜಾತಿ ಇತ್ಯಾದಿ ಕುರಿತಾಗಲೇ ತೀವ್ರ ರೂಪ ಪಡೆಯುತ್ತವೆ. ನೀನೊಬ್ಬ ಕತ್ತೆ ಎಂದು ಯಾರನ್ನಾದರೂ ಬೈದರೆ ಆತ ಇರಬಹುದು ಎಂದು ಸುಮ್ಮನಾಗುತ್ತಾನೆ ಆದರೆ ಅವನ ಅಪ್ಪ ಅಮ್ಮನನ್ನು ಕುರಿತು ಞದರ್ಮ, ಭಾಷೆಯನ್ನು ಕುರಿತು ಬೈದರೆ ನನ್ನ ಅಪ್ಪ ಅಮ್ಮನಿಗೆ ಅಂತೀಯಾ ಎಂದು ಜಗಳ ತೀವ್ರತೆ ಪಡೆಯುತ್ತದೆ. ಹೀಗೆ ಭಾಷೆ ಧರ್ಮದ ವಿಷಯದಲ್ಲೂ. ನನ್ನನ್ನು ಏನಾದರೂ ಅನ್ನು ಆದರೆ ಇವುಗಳ ವಿಷಯಕ್ಕೆ ಬರಬೇಡ ಎಂದು ಎಚ್ಚರಿಸಲಾಗುತ್ತದೆ. ಬಹುಶಃ ಇವು ಸಾರ್ವತ್ರಿಕ ಸ್ವರೂಪದಲ್ಲಿರುವುದು ಇವುಗಳ ತೀವ್ರತೆಗೆ ಕಾರಣವೆನಿಸುತ್ತದೆ. ನಾಡು ನುಡಿಯ ವಿಷಯದಲ್ಲಿ ಇದು ಹೆಚ್ಚು ಸರಿ. ಕಾವೇರಿ ನದಿ ಕುರಿತು ಯಾರಾದರೂ ಕೆಟ್ಟ ಮಾತನಾಡಿದರೆ ಪರಿಣಾಮ ಏನಾಗಬಹುದು ಊಹಿಸಿ. ಇದು ಮನುಷ್ಯ ಸ್ವಭಾವದ ಸಮಸ್ಯೆಯೂ ಗುಣದ್ದೋ ಭಾಷೆಯ ವೈಚಿತ್ರö್ಯವೋ ಅರ್ಥವಾಗುವುದಿಲ್ಲ. ಸಂಸ್ಕೃತದ ಜನನಿ ಸರಸ್ವತಿ ಎಂದು ಹೆಣ್ಣನ್ನೇ ಆ ಸ್ಥಾನದಲ್ಲಿಟ್ಟ ಕಾರಣ ಅದರಲ್ಲಿ ಸ್ತ್ರೀ ಆಧಾರಿತ ಬೈಗುಳ ಇರಲಿಕ್ಕಿಲ್ಲ ಎಂಬುದು ಅಷ್ಟು ತಾರ್ಕಿಕ ಅನಿಸದು. ಕನ್ನಡದ ಆಡು ನುಡಿಯಲ್ಲಿನ ಬೈಗುಳಗಳ ಸ್ಯಾಂಪಲ್ಲು ಪೂರ್ಣಚಂದ್ರ ತೇಜಸ್ವಿಯವರ ಕಿರಗೂರಿನ ಗೈಯಾಳಿಗಳು ಕೃತಿಯಲ್ಲಿ ದೊರೆಯುತ್ತದೆ. ಬೈಗುಳ ಕುರಿತ ಸಾಕಷ್ಟು ಸಂಶೋಧನೆಗಳೂ ಆಗಿವೆ. ಯಾರೋ ಒಬ್ಬರು ಅರ್ಥ ಕೋಶವನ್ನೂ ಮಾಡಿದ್ದಾರೆ ಅನಿಸುತ್ತದೆ. ಶಿಷ್ಟವೇ ಆಗಲಿ ಜನಪದವೇ ಆಗಲಿ ತೀವ್ರ ರೂಪದ ಬೈಗುಳಗಳಲ್ಲಿ ಹೆಣ್ಣೇ ಇರುತ್ತಾಳೆಂಬುದಕ್ಕೆ ಹೆಣ್ಣಿನಬಗ್ಗೆ ಇರುವ ಕೀಳು ದೃಷ್ಟಿ ಕಾರಣವೋ ಅಥವಾ ನಮ್ಮ ಹೆಣ್ಣನ್ನು ಕೀಳಾಗಿ ನೋಡಲಾಗುತ್ತಿದೆ ಎಂಬ ಗೌರವಕ್ಕೆ ಧಕ್ಕೆ ಅನಿಸಿದ ಕೇಳುಗ ಇನ್ನಷ್ಟು ಉರಿದುಕೊಳ್ಳಲಿ ಎಂಬ ಉದ್ದೇಶವಿರುತ್ತದೋ ಸುಲಭಕ್ಕೆ ಹೇಳಲಾಗದು. ಒಟ್ಟಿನಲ್ಲಿ ಬೈಗುಳದಲ್ಲಿ ಭಾಷೆಯ ಬ್ರಹ್ಮಾಂಡ ಅಡಗಿರುವುದು ಸುಳ್ಳಲ್ಲ.


