
ಇದೀಗ ಭಾರತದ ೧೮ನೇ ಲೋಕಸಬೆಗೆ ಏಳು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆದು ಇದೀಗ ಫಲಿತಾಂಶ ಕೂಡ ಹೊರಬಿದ್ದಿದೆ. ತಿಂಗಳುಗಳ ಹಿಂದೆ ಚುನಾವಣೆಯ ಪ್ರಕ್ರಿಯೆ ಶುರುವಾದಾಗಿನಿಂದ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳು, ಜ್ಯೋತಿಷಿಗಳು ಮತ್ತು ಚುನಾವಣಾ ಪಂಡಿತರು(ಸೆಫಾಲೀಜಿಸ್ಟ್) ಮುಂತಾದವರು ಅವಿರತವಾಗಿ ಯಾವ ಪಕ್ಷ ಯಾವ ವ್ಯಕ್ತಿ ಗೆಲ್ಲುತ್ತಾನೆ ಎಂಬ ಬಗ್ಗೆ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಂಡಿಸುತ್ತಲೇ ಬಂದಿದ್ದರು. ಆದರೆ ಈ ಯಾವ ಲೆಕ್ಕಚಾರಗಳು ಸಂಪೂರ್ಣವಾಗಿ ಸರಿಯಾಗಿಲ್ಲ.ಭಾರತದಲ್ಲಿ ಈ ಬಾರಿ ಲೋಕಸಭೆಯ ೫೪೩ ಸ್ಥಾನಗಳಿಗೆ ಒಂಭತ್ತು ಕೋಟಿಗೂ ಹೆಚ್ಚು ಜನ ತಮ್ಮ ಮತ ಚಲಾಯಿಸಿದ್ದಾರೆ. ತಮಾಷೆ ಏನೆಂದರೆ ಭಾರತೀಯ ಮತದಾರರ ಮನಸ್ಸನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಉತ್ತರ ಪ್ರದೇಶದಲ್ಲಿ ಜೈಲಿನಲ್ಲಿರುವ ಶಂಕಿತ ಉಗ್ರಗಾಮಿಯೊಬ್ಬ ಆಯ್ಕೆಯಾಗಿದ್ದಾನೆ. ತಮಿಳುನಾಡಿನಲ್ಲಿಮಾಜಿ ಐ.ಪಿ.ಎಸ್ ಅಧಿಕಾರಿ ಸೋಲುಂಡಿದ್ದಾರೆ. ಬಹಳಷ್ಟು ಕಡೆ ಅತ್ಯಾಚಾರಿಗಳು ಅನೇಕ ಆರೋಪಗಳಿರುವವರು ಆಯ್ಕೆಯಾಗಿದ್ದಾರೆ. ಅನೇಕ ಕಡೆ ಸ್ಪರ್ಧಿಸಿದ ಉತ್ತಮ ಚಿಂತಕರು, ಪಂಡಿತರು ಸೋಲು ಕಂಡಿದ್ದಾರೆ. ಭಾರತದಲ್ಲಿ ಈ ಪ್ರಕ್ರಿಯೆ ಹೊಸದಲ್ಲ.ಹಿಂದೊಮ್ಮೆ ಕನ್ನಡದ ಪ್ರಸಿಧ್ಧ ಸಾಹಿತಿಗಳಾದ ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಶಿವರಾಮ ಕಾರಂತರು ಸೋಲು ಕಂಡಿದ್ದರು. ಅದೇ ರೀತಿ ಮತ್ತೊಬ್ಬ ಸಾಹಿತಿ ಗೋಪಾಲಕೃಷ್ಣ ಅಡಿಗರು ಚುನಾವಣೆಯಲ್ಲಿ ಸೋತಿದ್ದರು. ಇವರಿಬ್ಬರೂ ಕನ್ನಡಿಗರಿಗೆಲ್ಲ ಪರಿಚಿತರು ಮತ ಹಾಕಿದವರಿಗೂ ಗೊತ್ತಿದೆ. ಆದರೂ ಸೋತರು. ಅಂದರೆ ಭಾರತೀಯ ಜನಮಾನಸಕ್ಕೆ ಯಾವುದು ಬೇಕು ಯಾವುದು ಬೇಡವಾಗುತ್ತದೆ ಎಂಬುದು ಸುಲಭಕ್ಕೆ ಅರ್ಥವಾಗುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ಉಚಿತ ಸವಲತ್ತು ಕೊಟ್ಟವರು, ಏನೇನೋ ದಾನ ಮಾಡಿದವರು ಸೋತಿದ್ದಾರೆ. ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಲಕ್ಷಾಂತರ ಜನ ಆ ವ್ಯಕ್ತಿಗೆ ಮತಹಾಕುವ ಗ್ಯಾರಂಟಿ ಇಲ್ಲ. ಒಬ್ಬ ವ್ಯಕ್ತಿ ಒಬ್ಬ ರಾಜಕಾರಣಿಯನ್ನು ಹೊಗಳಿ ಇನ್ನೂಬ್ಬನಿಗೆ ಮತಹಾಕಬಹುದು.ಪುಗ್ಸಟ್ಟೆ ಸಿಗುವ ಎಲ್ಲ ಸವಲತ್ತು, ಸಾವiಗ್ರಿಗಳನ್ನು ಪಡೆದು ಅವರು ಹಾಕಿದ ಊಟವನ್ನೂ ಮಾಡಿ ಮತಹಾಕದಿರಬಹುದು. ಮ್ಮ ಜಾತಿ ಮತಗಳನ್ನು ಮೀರಿ ವ್ಯಕ್ತಿಯನ್ನು ಗೆಲ್ಲಿಸಬಹುದು. ಇವೆಲ್ಲಾ ಮುಕ್ತ ಪ್ರಜಾಪ್ರಭುತ್ವದಲ್ಲಿ ಸರಿ. ಆದರೆ ಜನರು ಇಂಥ ಆಮಿಷಗಳಿಗೆ ಪಕ್ಕಾಗಿ ಮತಹಾಕುತ್ತಾರೆ ಎಂದು ತಿಳಿದ ಪುಡಾರಿಗಳು ಈ ಬಗೆಯ ಸರ್ಕಸ್ ಗಳಲ್ಲಿ ತೊಡಗುತ್ತಾರೆ. ಇಂಥವರಿಗೆ ಜನ ಮಣ್ಣು ತಿನಿಸುತ್ತಾರೆ. ಒಂದು ದೃಷ್ಟಿಯಲ್ಲಿ ಜನಸಾಮಾನ್ಯರ ನಾಡಿಮಿಡಿತ ಸಣ್ಣಪುಟ್ಟ ಹೋಟೆಲ್ ಗಳಲ್ಲಿ, ಚಹಾ ಅಡ್ಡೆಗಳಲ್ಲಿ, ಕ್ಷೌರದ ಅಂಗಡಿಗಳಲ್ಲಿ, ಪಂಚಾಯ್ತಿ ಕಟ್ಟೆಗಳಲ್ಲಿ ಗಂಬೀರವಾಗಿ ಚರ್ಚೆ ಆಗುವಾಗ ತಿಳಿಯುತ್ತದೆ. ಸಮಾನ್ಯವಾಗಿ ಹೆಚ್ಚು ಮಾತಾಡದೇ ತನ್ನಪಾಡಿಗೆ ತಾನು ಕೆಲಸ ಮಾಡುವ ವ್ಯಕ್ತಿಯನ್ನು ಜನ ಕೈಬಿಡುವುದಿಲ್ಲ. ಇಲ್ಲಿ ಜಾತಿ ಮತಗಳು ಅಡ್ಡ ಬರುವುದಿಲ್ಲ. ಆತ ವೈಯಕ್ತಿಕವಾಗಿ ಏನೇ ಅನಾಚಾರ ಮಾಡಿದ್ದರೂ ಅದೆಲ್ಲ ಅಲಕ್ಷವಾಗುತ್ತದೆ.
ಅಂದರೆ ಜನಕ್ಕೆ ಅದರಲ್ಲೂ ಗ್ರಾಮೀಣ ಮತ್ತು ನಗರದ ಜನಕ್ಕೆ ಅಗತ್ಯವಾದ ಬೇರೆ ಬೇರೆ ಸೌವಲತ್ತುಗಳನ್ನು ಸರ್ಕಾರದಮೂಲಕ ಒದಗಿಸಿ ಕೊಡುವ ಪ್ರತಿನಿಧಿ ಅಗತ್ಯವಾಗುತ್ತಾನೆ. ಗ್ರಾಮೀಣ ಬಾಗದಲ್ಲಿ ಯಾವುದೇ ಉಚಿತ ಆಮಿಷಗಳ ಮೂಲಕ ಮತ ಪಡೆಯಲಾಗದು. ಅವರಿಗೆ ಸ್ವಾಭಿಮಾನಕ್ಕೆ ಅಡ್ಡಬರದಂತೆ ಅನುಕೂಲ ಮಾಡಿಕೊಡಬೇಕು ಆಗ ಮಾತ್ರ ಅವರು ಒಪ್ಪುತ್ತಾರೆ. ಆದರೆ ನಗರ ಪ್ರದೇಶದ ಪರಿಸ್ಥಿತಿ ಸ್ವಲ್ಪ ಭಿನ್ನ. ಸ್ವಯಂ ಉದ್ಯೋಗಕ್ಕೆ ಜನ ಇಲ್ಲಿ ಆದ್ಯತೆ ಕೊಡುತ್ತಾರೆ. ಉಳಿದಂತೆ ರೊಟಿ, ಕಪಡ ಮತ್ತು ಮಕಾನ್ ಎಲ್ಲರಿಗೂ ಮುಖ್ಯವಾಗುತ್ತದೆ. ಇತ್ತಿಚ್ಚೀನ ದಿನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಸೌಲಭ್ಯಗಳು ಇಂಧನ ಪೊರೈಕೆಗಳನ್ನು ಕೈಗೆಟಕುವ ರೀತಿಯಲ್ಲಿ ಜನ ಬಯಸುತ್ತಿದ್ದಾರೆ. ಇವೆಲ್ಲವನ್ನು ಒಳಗೊಳ್ಳುವ ಪಕ್ಷದ ಉದ್ದೇಶ ವ್ಯಕ್ತಿಯ ನಿಷ್ಟೆ ಇವೆಲ್ಲಾ ಮತ ಪಡೆಯಲು ಮಾನದಂಡಗಳಾಗುತ್ತವೆ ಎಂದು ಹೇಳಬಹುದು.
ಭಾರತದಲ್ಲಿ ಹತ್ತಾರು ಚುನಾವಣೆಗಳು ನಡೆಯುತ್ತವೆ. ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ಲೋಕಸಭೆಯವರೆಗೆ ಜನರ ಆದ್ಯತೆಗಳು ಬದಲಾಗುತ್ತವೆ. ಇಲ್ಲೆಲ್ಲ ಯಾವುದೇ ಸಿದ್ಧಾಂತ, ಪಕ್ಷ ಯಾವುದೂ ಮುಖ್ಯವಾಗುವುದಿಲ್ಲ. ಗ್ರಾಮೀಣ ಭಾಗದ ನೀರಿನ ಸೌಕರ್ಯ ಗಮನಾರ್ಹವಲ್ಲ. ಇಂಥವನ್ನೆಲ್ಲ ಎಲ್ಲರೂ ಚಿಂತಿಸಿ ಮತ ಹಾಕುತ್ತಾರೆಂದಲ್ಲ. ಇವೆಲ್ಲ ಸಾಮಾನ್ಯ ವಿಚಾರಗಳು. ಮತ ಚಲಾಯಿಸುವಾಗ ಜನರ ತಲೆಯಲ್ಲಿ ಇವೆಲ್ಲ ಕೆಲಸ ಮಾಡುತ್ತವೆ ಎಂಬುದು ಸುಳ್ಳಲ್ಲ. ಒಟ್ಟಿನಲ್ಲಿ ಚುನಾವಣೆಯ ಸ್ವರೂಪವನ್ನು ಆಧರಿಸಿ ಜನ ಮತ ಹಾಕುತ್ತಾರೆ ಆದರೂ ಜನರ ಯೋಚನೆ ಇದೇ ಆಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಭಾರತದಂಥ ಬೃಹತ್ ಪ್ರಮಾಣದ ಮತದಾರರ ಯೋಚನೆಯನ್ನು ಒಂದೇ ಸೂತ್ರದಲ್ಲಿ ಹಿಡಿದುಹಾಕುವುದು ಸುಲಭವಲ್ಲ ಎಂಬುದು ಈ ಚುನಾವಣೆ ಮತ್ತೊಮ್ಮೆ ಸಾಬೀತುಮಾಡಿದೆ.
No comments:
Post a Comment