Sunday, 21 July 2024

’ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ’


ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ  ಎನ್ನುವುದು ಹಳೆಯ ಮಾತು. ಇದನ್ನು ಮುಂದುವರೆಸಿದ ಸರ್ಕಾರ ಈಚೆಗೆ ಖಾಸಗಿ ವಲಯದಲ್ಲಿ ಆಡಳಿತಾತ್ಮಕ ಹುದ್ದೆಗಳಿಗೆ ಮೀಸಲಾತಿ ತರುವ ಯತ್ನ ಮಾಡಿದೆ. ಸಂತೋಷ. ಆದರೆ ಇದರ ಮೂಲ ಸಮಸ್ಯೆ ಇನ್ನೆಲ್ಲೋ ಇದೆ. ನಮ್ಮ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಮನೋಭಾವ ಕಲಿಸುತ್ತಿದ್ದೇವೆಯಾ? ಏಕೆಂದರೆ ತಮ್ಮ ಮಕ್ಕಳಿಗೆ ಉದ್ಯೋಗ ಸಿಗುವ ಇಂಥ ಯತ್ನವನ್ನು ಅನೇಕ ರಾಜ್ಯಗಳು ಈಗಾಗಲೇ ಮಾಡಿವೆ, ಅಂಥ ಯತ್ನಗಳೆಲ್ಲ ನ್ಯಾಯಾಲಯಗಳಲ್ಲಿವೆ. ಅದಿರಲಿ ಪ್ರಶ್ನೆ ಏನೆಂದರೆ ನಮ್ಮಲ್ಲಿ ಓಹೋ ಕನ್ನಡ ಅನ್ನುವ ಜನರೇ ಹೆಚ್ಚು. ಕನ್ನಡದಲ್ಲಿ ಎಲ್ಲವೂ ಇದೆ ಅನ್ನುವುದು ಒಂದು ವರ್ಗವಾದರೆ ಏನೂ ಇಲ್ಲ ಅನ್ನುವುದು ಮತ್ತೊಂದು. ತಮಾಷೆ ಅಂದ್ರೆ ಸ್ಪರ್ಧಾತ್ಮಕ ಕೆಲಸಗಳ ಸಂದರ್ಶನ, ಪರೀಕ್ಷೆಗಳೆಲ್ಲ ಕನ್ನಡದಲ್ಲಿರಬೇಕು ಎಂಬಲ್ಲಿಗೆ ಇದು ಬಂದು ನಿಂತು ಅನಂತರ ಅದಕ್ಕೆ ತಕ್ಕ ಪಠ್ಯ ಪುಸ್ತಕ ಕೊಡಿ ಎಂದು ಮುಂದುವರೆಯುತ್ತದೆ. ಇದಕ್ಕೆ ಅಂತ್ಯವಿಲ್ಲ, ಮಾತೃಭಾಷೆಯಲ್ಲಿ ಪಠ್ಯ ಅಂದ್ರೆ ಅದೇ ದೊಡ್ಡ ಚರ್ಚೆಯಾಗುತ್ತದೆ. ಸಮಸ್ಯೆಯ ಸಣ್ಣ ಸ್ಯಾಂಪಲ್ಲು ನೋಡಿ. ಈಚೆಗೆ ಎಚ್‌ಎಎಲ್ ಸಂಸ್ಥೆ ಕೆಲವಾರು ಹುದ್ದೆಗಳಿಗೆ  ಅರ್ಜಿ ಕರೆದಿತ್ತು. ಇದಕ್ಕೆ ಕನ್ನಡದವರು ಅನ್ನುವ ಕೇವಲ ಇಬ್ಬರು ಅರ್ಜಿ ಹಾಕಿದ್ದರೆ ಉಳಿದ ಕಡೆಯವರು ಎರಡು ಸಾವಿರದ ಮೇಲೆ ಇದ್ದರಂತೆ. ಅರ್ಜಿ ಹಾಕಲೇ ಬೇಕು ಎಂದು ಶಾಸನ ಮಾಡಬೇಕಾ? ಇಂಥ ಸಮೀಕ್ಷೆ ಮೊದಲು ಎಲ್ಲ ಸ್ಪರ್ಧಾತ್ಮಕ ಕೆಲಸಗಳ ವಲಯದಲ್ಲಿ ಮೊದಲು ನಡೆಯಬೇಕು. ಕಲಿತವರಿಗೆಲ್ಲ ಅಂದ್ರೆ ಪದವೀಧರರಿಗೆ ಸರ್ಕಾರವೇ ಕೆಲಸಕೊಡಲು ಸಾಧ್ಯವಿಲ್ಲ. ಹೀಗಾಗಿ ವಿವಿಧ ಬಗೆಯ ಕೌಶಲಗಳನ್ನು ಕಲಿಯಬೇಕಾದ ಅಗತ್ಯವಿದೆ. ಆದರೆ ಸರ್ಕಾರ ಎಲ್ಲರನ್ನೂ ಸಮಾಧಾನಪಡಿಸುವ ಕೆಲಸದಲ್ಲಿ ತೊಡಗುತ್ತದೆ. ಇದಕ್ಕಾಗಿ ಕನ್ನಡಿಗರಿಗೆ ಮೀಸಲಾತಿ ಬಗ್ಗೆ ತೀರ್ಮಾನಿಸಲು ಸರ್ಕಾರ ಸಮಿತಿ ಮಾಡಿತ್ತು. ಯಥಾಪ್ರಕಾರ ಸಮಿತಿಗೆ ಒಂದಿಷ್ಟು ಸಾಹಿತಿಗಳನ್ನು ಸದಸ್ಯರನ್ನಾಗಿ ಮಾಡಿ ವರದಿ ಪಡೆಯಿತು. ಈ ಸಮಸ್ಯೆಗಳನ್ನು ಇದೇ ಬ್ಲಾಗಿನಲ್ಲಿ ವಿಸ್ತಾರವಾಗಿ ಎರಡು ಪ್ರತ್ಯೇಕ ಲೇಖನಗಳಲ್ಲಿ (ಕನ್ನಡದ ಇಲ್ಲಗಳು  ಹಾಗೂ ಸಾಹಿತಿಗಳೆಂದರೆ ಸರ್ವಸ್ವವೇ) ವಿವರಿಸಲಾಗಿದೆ. ಆಸಕ್ತರು ಗಮನಿಸಬಹುದು.

 ಅವರಿಗೆ ಉದ್ಯಮ ಸಮಸ್ಯೆ ರಷ್ಟು ಗೊತ್ತಿತ್ತು ಗೊತ್ತಿಲ್ಲ. ಅವರೆಲ್ಲ ಕನ್ನಡಿಗರಿಗೆ ಮೀಸಲು ಎಷ್ಟಿರಬೇಕು ಎಂದು ವರದಿಕೊಟ್ಟು ಕೈ ತೊಳೆದುಕೊಂಡಿತು. ಇದಕ್ಕೆ ಏನು ಆಧಾರ ಗೊತ್ತಿಲ್ಲ. ಸಮಿತಿ ರಚಿಸುವಾಗ ವಿವಿಧ ಕಂಪನಿಗಳ ಜನರನ್ನೂ ಸದಸ್ಯರನ್ನಾಗಿ ಮಾಡಬೇಕಿತ್ತು. ಆಗ ಸಮಗ್ರ ಸಮಸ್ಯೆ ಬೆಳಕಿಗೆ ಬರುತ್ತಿತ್ತು. ಮೊದಲ ಪ್ರಶ್ನೆ ಕನ್ನಡವನ್ನು ಎಲ್ಲಿಂದ ಸರಿಮಾಡಬೇಕು ಅನ್ನುವುದು. ಹೀಗಾಗಿ ಎಲ್ಲ ದೇಶ ಭಾಷೆಗಳಿಗೆ ಆದ್ಯತೆ ಕೊಡಲು ಎನ್ ಇಪಿ ಜಾರಿಯಾಗಿದೆ. ನಾವು ಕನ್ನಡ, ನಮಗೆ ಇನ್ನೇನೂ ಬೇಡ, ಬೇರೆಯವರೂ ಇಲ್ಲಿ ಬೇಡ ಅನ್ನುವಂತಿಲ್ಲ. ಈ ಕುರಿತ ಚರ್ಚೆ ವಿಶಾಲವಾಗಿ ನಡೆಯಬೇಕಿದೆ.

ಮಾತೆತ್ತಿದರೆ ಕನ್ನಡ ನೆಲ ಜಲಕ್ಕೆ ಆದ್ಯತೆ ಅನ್ನುತ್ತಾ ಉಳಿದ ಸಂಗತಿಗಳನ್ನು ತಿರಸ್ಕರಿಸಲು ಆಗುವುದಿಲ್ಲ. ನಮ್ಮ ದೃಷ್ಟಿ ವಿಶಾಲವಾಗಬೇಕು. ಕನ್ನಡ ಸಾಕು ಕಂಪ್ಯೂಟರ್ ಬೇಡ ಎಲ್ಲವೂ ಕನ್ನಡಕ್ಕೆ ಅನುವಾದವಾಗಲಿ ಅನ್ನುವುದು ಸುಲಭ. ಇದರ ಹಿಂದೆ ಬರುವ ಪ್ರಶ್ನೆಗಳಿಗೆ ಅಂತ್ಯ ಇರುವುದಿಲ್ಲ.ಇದು ಪ್ರಾಥಮಿಕ ಶಿಕ್ಷಣಕ್ಕೂ ಕೊನೆಯಲ್ಲಿ ಸಮಾಜಕ್ಕೂ ಹೋಗಿ ನಿಲ್ಲುತ್ತದೆ. ಉತ್ತರ ದೊರೆಯದು. ಪರಿಹಾರ ಮಾರ್ಗಗಳಿವೆ ಅಷ್ಟೆ.

 


Monday, 15 July 2024

ವಿನ್ ವಿನ್ ಮನೋಧರ್ಮ- ಏನು ಕಡಿದು ಕಟ್ಟೆ ಹಾಕಲು?


ನಮಗೆಲ್ಲ ಅಲೆಕ್ಸಾಂಡರ್ ಕಥೆ ಗೊತ್ತಿದೆ. ಆತ ಜಗದೇಕ ವೀರ. ಮಹಾಶೂರ ಇತ್ಯಾದಿ. ಇಡೀ ಜಗತ್ತು ಗೆಲ್ಲುವುದು ಅವನ ಆಸೆಯಾಗಿತ್ತು. ಒಮ್ಮೆ ಆತ ಭಾರತದ ಕಡೆಯಿಂದ ತನ್ನ ನಿರೀಕ್ಷೆ ಈಡೇರದೇ ಹಿಂತಿರುಗಿ ತನ್ನ ಸ್ಥಳಕ್ಕೆ ಹೋಗಿ ಅಶಾಂತಿಹೊತ್ತು ಛೆ ಹೀಗಾಯಿತಲ್ಲ ಅಂದುಕೊಂಡು ಶತಪಥ ಸುತ್ತುತ್ತಿದ್ದ.ಅಲ್ಲೇ ಸನಿಹದ ಸಮುದ್ರ ತೀರದಲ್ಲಿ ಒಬ್ಬ ಸಂತ ಆರಾಮವಾಗಿ ಆನಂದದಿಂದ ಮೈಚಾಚಿ ಮಲಗಿದ್ದ. ಅಲೆಕ್ಸಾಂಡರ್ ಗೆ ಕೋಪ ಬಂದು ಸಂತನನ್ನು ಕುರಿತು ಇಲ್ಲೇಕೆ ಮಲಗಿದ್ದೀಯಾ ಎಂದು ಕೇಳಿದ. ಸಂತ ಸಮಾಧಾನದಿಂದ ಸುಮ್ಮನೇ ಸಮುದ್ರದ ಅಲೆಗಳನ್ನು ನೋಡುತ್ತ ಖುಷಿ ಪಡುತ್ತಿದ್ದೇನೆ ಅಂದ. ಆತ ಡೈಯೋಜಿನಸ್. ಡೈಯೋಜಿನಸ್ ರಾಜನನ್ನು ಕುರಿತು ನೀನೇನು ಇಲ್ಲಿ ಅಂದ. ಮತ್ತೆ ಯುದ್ಧಕ್ಕೆ ಹೋಗುವ ಬಗ್ಗೆ ಯೋಚಿಸುತ್ತಿದ್ದೇನೆ ಅಂದ. ಯುದ್ಧ ಮಾಡಿ ಮುಂದೇನು ಮಾಡ್ತೀಯಾ ಕೇಳಿದ ಸಂತ. ಜಗತ್ತು ಗೆಲ್ಲುತ್ತೇನೆ ಅಂದ ರಾಜ. ಆಮೇಲೆ ಅಂದ ಸಂತ. ಎಲ್ಲ ಗೆದ್ದು ಸಂತೋಷಪಡುತ್ತೇನೆ ಅಂದ. ಅಯ್ಯೋ ಅಷ್ಟೇನಾ. ನಾನು ಈಗಲೇ ಅದನ್ನು ಪಡೆದಿದ್ದೇನೆ ಅಂದ ಸಂತ. ಇವನಿಗೆ ಅಚ್ಚರಿಯಾಯ್ತು. ಇಷ್ಟೇ ಜೀವನ. ಟಾಲ್ಸ್ ಟಾಯ್ ಕಥೆಯೂ ನಮಗೆ ಗೊತ್ತು. ರಾಜನೊಬ್ಬ ಡಂಗುರ ಸಾರಿ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಯಾರು ಎಷ್ಟು ಭೂಮಿಯನ್ನು ಸುತ್ತಿ ಬರುತ್ತಾರೋ ಅಷ್ಟು ಭೂಮಿ ಅವರದಾಗುತ್ತದೆ ಅಂದ. ಆಸೆಪಟ್ಟ ರೈತನೊಬ್ಬ ಓಡುತ್ತಲೇ ಇದ್ದ. ಕೈಕಾಲು ಸೋತಿದ್ದವು. ಇನ್ನೊಂದು ಮಾರು ಮುಂದೆ ಹೋದರೆ ಅದೂ ತನ್ನದಾಗುತ್ತದೆ ಅನ್ನುತ್ತ ಓಡಿ ಓಡಿ ಸೂರ್ಯಾಸ್ತದ ವೇಳೆಗೆ ಒಂದು ಜಾಗದಲ್ಲಿ ಕುಸಿದು ಬಿದ್ದ. ಅವನಿಗೆ ದಕ್ಕಿದ್ದು ಅಷ್ಟೇ ಭೂಮಿ.

ನಾವೆಲ್ಲ ಹೀಗೆಯೇ, ಈಚೆಗೆ ಕನ್ನಡದ ಧಾರಾವಾಹಿಯೊಂದರಲ್ಲಿ ಚಿಕ್ಕ ಮಕ್ಕಳನ್ನು ಹಿಂಡಿ ತನ್ನ ಪ್ರತಿಷ್ಠೆ ಹಿಗ್ಗಿಸಿಕೊಳ್ಳುವ ಪಾತ್ರವೊಂದು ಸ್ಪರ್ಧೆ ಬಹಳ ಮುಖ್ಯವೆಂದು ನಮ್ಮ ನಿಮ್ಮೆಲ್ಲರ ಇಂದಿನ ಮನೋಧರ್ಮವನ್ನು ಬಿಚ್ಚಿಟ್ಟಿತ್ತು. ಹೌದು.ಪ್ರತಿ ಬಾರಿ ಎಸ್ ಎಸ್ ಎಲ್ ಸಿ ಪಿಯುಸಿ ಇತ್ಯಾದಿ ಫಲಿತಾಂಶಗಳು ಬಂದಾಗ ಶೇ. ೮೫ ಅಂಕ ಪಡೆದ ಕೆಲ ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ವರದಿಗಳು ಬರುತ್ತವೆ.ಇದಕ್ಕೆ ಪೋಷಕರ ಒತ್ತಡ ಕಾರಣ ಎಂಬುದೂ ತಿಳಿಯದ ಸಂಗತಿ ಅಲ್ಲ. ಪಕ್ಕದ ಮನೆ ಮಕ್ಕಳೊಂದಿಗೆ ತಮ್ಮ ಮಕ್ಕಳನ್ನು ಹೋಲಿಸಿ ನೋಡು ಅವನು ಇನ್ನೂ ಹೆಚ್ಚು ಅಂಕ ತೆಗೆದಿದ್ದಾನೆ ಎಂಬುದೇ ದುಃಖದ ಕಾರಣ. ಆಯ್ತು ಏನೀಗ ಎಂಬುದಿಲ್ಲ. ನೂರಕ್ಕೆ ೮೫ ತೆಗೆದರೂ ಉಳಿದ ೧೫ ಶೇ. ಅಂಕ ಯಾಕೆ ಬರಲಿಲ್ಲ ಎಂಬುದೇ ಇವರ ಚಿಂತೆ. ಪರವಾಗಿಲ್ಲ, ಉತ್ತಮ ಅಂಕ ಪಡೆದು ಖುಷಿಯಾಗಿದ್ದಾನಲ್ಲ ಎಂಬುದಿಲ್ಲ.  ನಮ್ಮ ಸಮಾಜ ಹೀಗೆ ಆಗಿಹೋಗಿದೆರೊಂದಿಗೆ,ಸ್ಪರ್ಧೆ- ಸ್ಪರ್ಧೆ.ಯಾರೊಂದಿಗೆ? ಅಕ್ಕ ಪಕ್ಕದ ನಮ್ಮ ಜನರೊಂದಿಗೆ. ಅನ್ಯಗ್ರಹ ಜೀವಿಗಳೊಂದಿಗೆ ಅಲ್ಲಇದರಿಂದ ನಮಗೆ ದಕ್ಕುವುದು ಕಿರಿಕಿರಿ ಹಾಗೂ ಸಂಕಟ ಮಾತ್ರ. ಮಕ್ಕಳು ಚಿಕ್ಕವರಿದ್ದಾಗಿನಿಂದ ನಾವು ಅವರಿಗೆ ಇದೇ ಮನೋಧರ್ಮ ಕಲಿಸುತ್ತೇವೆ. ಓಡುವ ಸ್ಪರ್ಧೆಯಲ್ಲಿ ಪಕ್ಕದವರನ್ನು ತಳ್ಳಿ ಮುಂದೆ ಹೋಗುವುದು ಹಾಗು ಮೊದಲು ಗುರಿ ಮುಟ್ಟುವುದು ಇಷ್ಟೇ ಇದರ ಉದ್ದೇಶ. ಎಲ್ಲ ಸ್ಪರ್ಧೆಗಳ ಸ್ವರೂಪವೂ ಇದೇ. ನಮ್ಮ ಸಂಪ್ರದಾಯ-ಪರಂಪರೆ ನಮಗೆ ಬಿಟ್ಟು ಹೋದ ಆನಂದವಾಗಿ ಶಾಂತಿಯಿಂದ ಇರುವ ಮಾರ್ಗವನ್ನು ಮರೆತಿದ್ದೇವೆ. ಇಂದಿನ ಜಗತ್ತಿನಲ್ಲಿ ನಮಗೆ ಬೇಕಿರುವುದು ಈ ಮಾರ್ಗವೇ ವಿನಾ ಪರಸ್ಪರ ಕಿಚ್ಚು ಹಚ್ಚುವ ಸ್ಪರ್ಧೆ ಅಲ್ಲ. ಮಾಧ್ಯಮವೊಂದರಲ್ಲಿ ಅನ್ಯ ವಾಹಿನಿಗಳಿಗಿಂತ ತಮ್ಮ ವಾಹಿನಿ ಶ್ರೇಷ್ಠ ಎಂದು ಬಿಂಬಿಸುವ ಜಾಹೀರಾತು ಬರುತ್ತದೆ. ಅವರಪ್ರಕಾರ ಅವರ ವಾಹಿನಿ ನೋಡುತ್ತಿರುವ ಜನ ಜಗತ್ತಿನ ತುದಿಯಲ್ಲಿದ್ದಾರಂತೆ. ಆಯ್ತು ಎಲ್ಲಿದ್ದರೇನು? ಏನು ಮಾಡುವುದು ಈಗ ಇದನ್ನು ಕಟ್ಟಿಕೊಂಡು? ಎಲ್ಲೇ ನೋಡಿ, ಮಕ್ಕಳಿಗೆ ಕೊಟ್ಟ ಸಂಸ್ಕಾರ, ಅವರ ಸಂತೋಷದ ಸ್ಪರ್ಧೆ ಇಲ್ಲವೇ ಇಲ್ಲ. ಹೀಗಾದ್ರೆ ಇಲ್ಲೂ ಅದೇ ಮನೋಭಾವ ಬರುತ್ತದೆ. ಎಲ್ಲೇ ನೋಡಿ. ಒಂದು ಸ್ಪರ್ಧೆ. ಇಡ್ಲಿ ತಿನ್ನಲು ರಾಗಿಮುದ್ದೆ ತಿನ್ನಲು ಇತ್ಯಾದಿ. ಇವೆಲ್ಲ ನಮ್ಮ ಆನಂದಕ್ಕೆ ಅನ್ನುವ ಭಾವನೆಯೇ ಇಲ್ಲ. ಸ್ಪರ್ಧೆ ಗೆಲ್ಲುವ ಆಸೆಯಿಂದ ಗಬಗಬನೆ ಮುಕ್ಕಿ ಹತ್ತು ಇಡ್ಲಿಗಳನ್ನು ಒಮ್ಮೆಲೇ ಗಂಟಲಲ್ಲಿ ತುರುಕಿಕೊಂಡು ಅದನ್ನೆಲ್ಲ ಹೊಟ್ಟೆಗೆ ತುರುಕಿಕೊಳ್ಳುವ ಹಣೆಬರಹ. ಉಸಿರಾಡಿಸಲಾಗದೇ ಒದ್ದಾಡುವ ಪರಿ ಪರಿ ಮತ್ತೊಂದೆಡೆ. ವಿಚಿತ್ರ ಅನಿಸೊಲ್ವ? ಇಲ್ಲೆಲ್ಲ ಸ್ಪರ್ಧೆ ಗೆದ್ದವರು ಕಳೆದುಕೊಳ್ಳುವುದು ಸಂತೋಷವನ್ನು. ಇದರಲ್ಲಿ ಉಳಿದವರನ್ನು ಸೋಲಿಸಿದೆ ಎಂಬ ಸಂಗತಿ ಖುಷಿ ಕೊಡಬಹುದು. ಆದರೆ ಇದರಿಂದ ಸಾಧಿಸುವುದೇನು? ಈಚೆಗೆ ಇನ್ನೊಂದು ಬಗೆಯ ಸ್ಪರ್ಧೆ ಕಾಣುತ್ತಿದೆ. ಪಕ್ಕದ ಮನೆಯವರು ಫಾರಿನ್ನಿಗೆ ಹೋದರು, ನಾವೂ ಹೋಗಬೇಕು. ಅವರು ಒಬ್ರ ಹೋದ್ರೆ ನಾವೆಲ್ಲ ಮನೆ ಜನ ಹೋಗಬೇಕು! ಎಂಥ ವಿಚಿತ್ರ ಪರಿಸರದಲ್ಲಿದ್ದೇವೆ, ಕಟ್ಟಿಕೊಂಡಿದ್ದೇವೆ ನೋಡಿ. ಇದರ ಫಲವಾಗಿ ಪ್ರಪಂಚದಲ್ಲಿ ಶಾಂತಿ, ನೆಮ್ಮದು ಹಾಳಾಗುತ್ತಿದೆ, ಆಗಿದೆ. ಪರಸ್ಪರ ಹೋಲಿಸಿಕೊಂಡು ದುಃಖ ಪಡುವುದೇ ಜೀವನವಾಗಿದೆ. ಅವರದು ಎರಡು ಮನೆ ಇದ್ದರೆ ತನ್ನದು ಹತ್ತು ಇರಬೇಕು ಎಂಬ ದುರಾಸೆ ಸಮಾಜವನ್ನು ಎಲ್ಲೋ ದೂಡುತ್ತಿದೆ. ಹಿರಿಯರು ಹೇಳಿದ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಮಾತನ್ನು ಬೇರೆಯವರಿಗೆ ಹೇಳಲು ಮಾತ್ರ ನೆನಪಲ್ಲಿಟ್ಟುಕೊಂಡಿದ್ದೇವೆ. ಯಾರಲ್ಲೂ ನೆಮ್ಮದಿಯೇ ಇಲ್ಲ. ದೇಶ, ವಿದೇಶದ ಮಟ್ಟದಲ್ಲೂ ಇದೇ ಪರಿಪಾಠ. ಹೀಗಾಗಿ ಸಂಸ್ಥೆಯೊಂದು ರಾಷ್ಟ್ರಗಳ ಆನಂದ ಸೂಚಿ ಪ್ರಮಾಣವನ್ನು ಪ್ರತಿವರ್ಷ ಬಿಡುಗಡೆ ಮಾಡುತ್ತಿದೆ. ತಮಾಷೆ ಅಂದ್ರೆ  ಇಡೀ ಜಗತ್ತು ಹಿಂದೆ ಓಡುತ್ತಿರುವ ಹಣದ ವಿಷಯದಲ್ಲಿ ಮುಂದೆ ಇರುವ ದೇಶಗಳೆಲ್ಲ ಈ ಪಟ್ಟಿಯಲ್ಲಿ ಹಿಂದೆ ಇವೆ. ೧೮೦ ದೇಶಗಳಲ್ಲಿ ಈ ಪಟ್ಟಿಯಲ್ಲಿ ಭಾರತ ೧೨೫ ಆಸುಪಾಸಿನಲ್ಲಿದೆ.ಈ ಹಿಂದೆ ಭಾರತದ ಸ್ಥಾನ ಬಹಳ ಮೇಲೆ ಇತ್ತು.

ನಾನು ಯಾರೊಂದಿಗೂ ಸ್ಪರ್ಧಿಸುವುದಿಲ್ಲ, ಇದು ನನ್ನ ಮಂತ್ರ. ಮತ್ತೆ ಎಂಎಯಲ್ಲಿ ಮೊದಲ ರ‍್ಯಾಂಕ್ ಬಂದು ಚಿನ್ನದ ಪದಕ ಗೆದ್ದಿದ್ರಿ ಎಂದು ಯಾರೋ ಕೇಳಿದ್ರು. ನಾನು ಅನ್ನುತ್ತೇನೆ. ನಾನು ಖುಷಿಯಿಂದ ಆಯ್ಕೆ ಮಾಡಿಕೊಂಡಿದ್ದ ವಿಷಯ ಅದು.ಖುಷಿಯಿಂದ ಪರೀಕ್ಷೆ ಬರೆದೆ. ಎಲ್ಲ ಬಂತು. ಉಳಿದವರು ನನ್ನೊಂದಿಗೆ ಸ್ಪರ್ಧಿಸಿರಬಹುದು. ಗೊತ್ತಿಲ್ಲ. ನಾನು ಆಗಲೂ ಖುಷಿಯಲ್ಲಿದೆ ಈಗಲೂ! ನನಗೆ ನಮ್ಮ ಸಂಪ್ರದಾಯ ಆಸ್ತಿ ಏನೂ ಇಲ್ಲ ಅಂದ್ರೂ ಖುಷಿಯಾಗಿರುವುದನ್ನು ಕಲಿಸಿದೆ. ಅದೇ ಸ್ಪರ್ಧೆ ಮಾಡದಿರುವುದು, ನಮ್ಮ ಸಾಮರ್ಥ್ಯದಲ್ಲಿ ತೃಪ್ತಿ ಕಾಣುವುದು. ಬೇವು ಸರಿ ಅನ್ನು ಕರುಬದಿರಿ. ನಿಮ್ಮ ಸರದಿ ನಾಳೆ ಬರಬಹುದು. ಕಿದ್ದರೆ ನೀವೂ ಹೀಗೆ ಮನಸ್ಸು ಬದಲಿಸಿಕೊಂಡು ನೋಡಿ ಖುಷಿಯಾಗಿರುತ್ತೀರಿ. ಯಾರೋ ನಿಮ್ಮ ವಾರಿಗೆಯವರು ಆಸ್ತಿ ಮಾಡಿದ್ರು ವೃತ್ತಿಯಲ್ಲಿ ದೊಡ್ಡ ಹುದ್ದೆಗೇರಿದರು ಅಂದ್ರೆ ನೀವು ಕರುಬದೇ ಸರಿ ಅನ್ನಿ, ಸುಮ್ಮನಿರಿ. ನಿಮ್ಮ ಈ ಸರದಿ ನಾಳೆ ಬರಬಹುದು. ಧಾವಂತ ಏಕೆ? ಇದರಿಂದ ನೆಮ್ಮದಿ ಹಾಳಾಗುತ್ತದೆ ಇನ್ನೇನೂ ಇಲ್ಲ. ನಾವು ಮಕ್ಕಳಿಗೆ ಖುಷಿಯಾಗಿರುವುದನ್ನು ಬಿಟ್ಟು ಬೇರೆಲ್ಲ ಕಲಿಸುತ್ತಿದ್ದೇವೆ. ಇಡೀ ಜೀವನದ ಪ್ರತಿ ದಿನ ಪ್ರತಿ ಕ್ಷಣ ಯುದ್ಧ ಎಂದು ಭಾವಿಸಿದ್ದೇವೆ, ಅಲ್ಲ, ಇದು ಬದುಕು. ಇಲ್ಲಿ ಯಾರು ಯಾರಿಗೂ ಸ್ಪರ್ಧಿಗಳಲ್ಲ. ಅವರವರ ಬದುಕು ಅವರವರದು.  ಸಾಧ್ಯವಾದರೆ ಇನ್ನೊಬ್ಬರಿಗೆ ನೆರವಾಗಿ ಇಲ್ಲವೇ ಸುಮ್ಮನಿರಿ. ಜಗತ್ತು ವಿಶಾಲವಾಗಿದೆ ಎಲ್ಲಿಂದ ಬೇಕಾದರೂ ಆಕಾಶ ನೋಡಬಹುದು. ಅದನ್ನು ಇಷ್ಟದಲದ ಒಂದೇ ಜಾಗದಲ್ಲಿ ನಿಂತು ನೂಕಾಡಿ ಕಚ್ಚಾಡಿ ನೋಡಬೇಕೆ? 

ಹಳ್ಳಿಗಳ ನೈಸರ್ಗಿಕ ಜೀವನ ಶೈಲಿಯಿಂದ ಅಲ್ಲಿಗಿಂತ ನಗತಗಳಲ್ಲಿ ಒತ್ತೆ ಹೆಚ್ಚು. ಇಲ್ಲಿ ಏನಿದ್ದರೂ ಕ್ಷಣ ಕ್ಷಣಕ್ಕೂ ಸ್ಪರ್ಧೆ. ಹಾಗಾಗಿ ರೋಗಗಳೂ ಹೆಚ್ಚು. ನಗರಗಳಲ್ಲಿ ವೈದ್ಯರು ಹಾಗೂ ಆಸ್ಪತ್ರೆಗಳು (ಹುಚ್ಚಾಸ್ಪತ್ರೆಯೂ ಸೇರಿ) ಹೆಚ್ಚು. ನಮ್ಮ ದೇಶದ ಬಹುತೇಕ ಹಳ್ಳಿಗಳಲ್ಲಿ ಒಂದಾದರೂ ಆಸ್ಪತ್ರೆ ಇರಲಿ, ನೆಟ್ಟಗೆ ಸಣ್ಣ ಕ್ಲಿನಿಕ್ ಕೂಡ ಇರುವುದಿಲ್ಲ, ಇದು ಕೇವಲ ಮೂಲಸೌಕರ್ಯದ ಪ್ರಶ್ನೆ ಅಲ್ಲ, ರೋಗಿಗಳ ಸಂಖ್ಯೆ ಕಡಿಮೆಯಾದಕಾರಣ ಇಲ್ಲಿ ಲಾಭವಿಲ್ಲ ಎಂದು ಆಸ್ಪತ್ರೆ ತೆಗೆಯುವವರು ಮೊದಲು ಭಾವಿಸುತ್ತಾರೆ. ಒಂದು ಮಾತ್ರ ಸತ್ಯ. ಯಾವ ಊರಿನಲ್ಲಿ ಆಸ್ಪತ್ರೆಗಳು, ಪೊಲೀಸ್ ಸ್ಟೇಶನ್ನುಗಳು ಹೆಚ್ಚಾಗಿರುತ್ತವೋ ಆ ಊರಿಗೆ ಹೆಚ್ಚು ಭವಿಷ್ಯವಿಲ್ಲ. ಆಯ್ಕೆ ನಮ್ಮದು.

Wednesday, 10 July 2024

ಹರಿಯಲೇ ಬಾರ್ದ ಕಾವೇರಿ


ಇದೀಗ ನಮ್ಮ ರಾಜ್ಯಕಕೆ ಮುಂಗಾರು ಪ್ರವೇಶಿಸಿ ಸಾಕಷ್ಟು ಮಳೆಯಾಗುತ್ತಿದೆ. ನಮ್ಮ ರಾಜ್ಯದ ಜೀವನದಿ ಕಾವೇರಿ ಒಡಲು ತುಂಬಿಕೊಳ್ಳುತ್ತಿದ್ದಾಳೆ. ಈಗ ಕಾವೇರಿಯ ಪ್ರಮುಖ ಅಣೆಕಟ್ಟು ಕೃಷ್ಣರಾಜಸಾಗರ ೧೦೩.೪ ಅಡಿ ತುಂಬಿದೆ. ಇದಿನ್ನೂ ಮುಂಗಾರಿನ ಆರಂಭ ಅನ್ನುವುದನ್ನು ಮರೆಯಬಾರದು. ಜೂನ್ ಕೊನೆಯವಾರದಲ್ಲಿ ೮೭ ಅಡಿ ಇದ್ದ ಕಾವೇರಿ ಒಂದೇ ತಿಣಗಳಲ್ಲಿ ಇಷ್ಟು ತುಂಬಿದೆ. ಒಳ ಹರಿವು ೬೬೦೦ ಕ್ಯುಸೆಕ್ ಇದ್ದು ಹೊರಹರಿವು ೫೭೪ ಕ್ಯುಸೆಕ್ ನಷ್ಟಿದೆ. ಈ ಮಧ್ಯೆ ಕೆಲವು ಕನ್ನಡ ನಾಡು ನುಡಿಗೆ ಹೋರಾಡುವವರು ಎಂದು ಗುರುತಿಸಿಕೊಂಡವರು ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಯುತ್ತಿದೆ, ಕಾವೇರಿ ನಮ್ಮದು ಎಂದು ಗದ್ದಲ ಏಳಿಸುತ್ತಿದ್ದಾರೆ. ಇದರಲ್ಲಿ ಅರ್ಥವಿಲ್ಲ.

ಯಾವುದೇ ನದಿ ಸಹಜವಾಗಿ ವರ್ಷಪೂರ್ತಿ ಹರಿಯುತ್ತಿರಬೇಕು. ಅದು ಸುತ್ತಲಿನ ಪರಿಸರದ ಉಳಿವಿಗೆ ಬಹಳ ಮುಖ್ಯ. ಕಾವೇರಿಯನ್ನೇ ನೋಡಿ. ಅದು ನಮ್ಮ ಬ್ರಹ್ಮಗಿರಿಯಲ್ಲಿ ಹುಟ್ಟಿ ತಮಿಳುನಾಡಿನ ಕಡಲೂರು ಬಳಿ ಬಂಗಾಳಕೊಲ್ಲಿ ಸೇರುವವರೆಗೆ ೭೬೫ ಕಿ.ಮೀ ಹರಿಯುತ್ತದೆ. ಈ ನಡುವೆ ನಮ್ಮ ಇಂದಿನ ಅಗತ್ಯ ಹಾಗೂ ಅನಿವಾರ್ಯತೆಗಾಗಿ ಕೃಷ್ಣರಾಜಸಾಗರ, ಕಲ್ಲಣೈ, ಮೆಟ್ಟೂರು ಎಂಬ ಮೂರು ಪ್ರಧಾನ ಅಣೆಕಟ್ಟುಗಳಿವೆ. ಜೊತೆಗೆ ಇದರ ವ್ಯಾಪ್ತಿಗೇ ಬರುವ ಹೇಮಾವತಿ, ಹಾರಂಗಿ ಮತ್ತು ಅಮರಾವತಿ ಅಣೆಕಟ್ಟುಗಳಿವೆ. ಇವೆಲ್ಲ ಜನ ದನಗಳಿಗೆ ಕುಡಿಯುವ ಜೊತೆಗೆ ಕೃಷಿಗೆ ಅನಿವಾರ್ಯ ಮೂಲಗಳಾಗಿವೆ. ಕಾವೇರಿ ಹುಟ್ಟುವುದು ಕರ್ನಾಟಕದಲ್ಲಾದರೂ ಅದರ ಹೆಚ್ಚಿನ ಉಪಯೋಗ ತಮಿಳುನಾಡಿಗೆ ಆಗುತ್ತಿದೆ. ಆಗುತ್ತಿದೆ ಅನ್ನುವುದಕ್ಕಿಂತ ''ಮಾಡಿಕೊಂಡಿದ್ದಾರೆ" ಅನ್ನುವುದು ಸೂಕ್ತ. ತಮ್ಮಲ್ಲಿ ಸಾಕಷ್ಟು ಅಣೆಕಟ್ಟುಗಳಿದ್ದು ನೀರಿನ ಅಗತ್ಯ ಪೂರೈಕೆ ಆಗುತ್ತಿದ್ದರೂ ತಮಗೆ ಬೇಕಾದಾಗಲೆಲ್ಲ ಜಗಳ ಹೂಡಿ ಕೆಆರ್ ಎಸ್ ನೀರು ಬಿಡಿ ಎಂದು ಗದ್ದಲ ಎಬ್ಬಿಸುವುದು ತಮಿಳುನಾಡಿಗೆ ಚಾಳಿಯಾಗಿಹೋಗಿದೆ. ಅವರ ಗದ್ದಲದ ಪರಿಣಾಮ ಇಂದು ರಾಷ್ಟ್ರೀಯ ಜಲ ಪ್ರಾಧಿಕರಣ ರಚನೆಯಾಗುವಂತಾಗಿದೆ.

ಕರ್ನಾಟಕದ ಪರಿಸ್ಥಿತಿ ಏನಾದರೂ ಆಗಿರಲಿ, ನಮಗೆ ನೀರು ಬೇಕು ಎಂಬ ಅಮಾನುಷ ಧೋರಣೆ ಅವರದು. ಈ ಗದ್ದಲ ಇಂದು ನಿನ್ನೆಯದಲ್ಲ, ಕನ್ನಡದ ಪ್ರಾಚೀನ (ಕ್ರಿಶ೧೨೬೦) ವ್ಯಾಕರಣ ಗ್ರಂಥ ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿ ಸೂತ್ರವೊಂದಕ್ಕೆ ಉದಾಹರಣೆ ಕೊಡುವಾಗ 'ಕಾವೇರಿಯ ಕಾಲನಾಂತಿಗುಳರೇಂ ಕಡೆಗೊಂಡರೋ ಬಡ್ಡಿಗೊಂಡರೋ’ ಎಂದು ಸೂಚ್ಯವಾಗಿ ಹೇಳಲಾಗಿದೆ. ನಿಜ. ಯಾವುದೇ ನದಿಯ ನೀರು ಪ್ರಾಕೃತಿಕ. ಅದಕ್ಕೆ ಯಾವ ದೊಣೆನಾಯಕನ ಅಪ್ಪಣೆ ಬೇಕಿಲ್ಲ. ಆದರೆ ಇಂದಿನ ಬದಲಾದ ಭೌಗೋಳಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ  ಆಯಾ ರಾಜ್ಯದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಸಂಪತ್ತು ಆಯಾ ಸರ್ಕಾರದ್ದು. ಈ ದೃಷ್ಟಿಯಲ್ಲಿ ಕಾವೇರಿ ಹುಟ್ಟುವ ಸ್ಥಳ ನಮ್ಮಲ್ಲಿ ಆದ್ದರಿಂದ ಅದರ ಮೊದಲ ಹಕ್ಕು ನಮ್ಮದೆಂಬುದರಲ್ಲಿ ಬೇರೆ ಮಾತಿಲ್ಲ. ಆದರೆ ಯಾವುದೇ ಹರಿಯುವ ನೀರನ್ನು ಸದಾಕಾಲ ಯಾರೂ ಹಿಡಿದಿಡಲು ಸಾಧ್ಯವಿಲ್ಲ. ಒಂದು ಹಂತದವರೆಗೆ ಮಾತ್ರ ಇದು ಸಾಧ್ಯ. ಜೊತೆಗೆ ಅದು ತನ್ನ ವ್ಯಾಪ್ತಿಯಲ್ಲಿ ರೂಪಿಸಿದ ಜೈವಿಕ ಹಾಗೂ ಪ್ರಾಕೃತಿಕ ಪರಿಸರದ ಉಳಿವಿಗೆ ಅದರ ಹರಿವು ಅನಿವಾರ್ಯ.

ಕಾವೇರಿ ನದಿ ತನ್ನ ಹರಿವಿನ ವ್ಯಾಪ್ತಿಯಲ್ಲಿ ರೂಪಿಸಿದ ಪ್ರಾಕೃತಿಕ ವೈವಿಧ್ಯ ಅಪೂರ್ವ. ಜೊತೆಗೆ ಅದರ ತೀರದಲ್ಲಿನ ಸಾಮಾಜಿಕ-ಸಾಂಸ್ಕೃತಿಕ ವಿಶೇಷ ಸಾಟಿ ಇಲ್ಲದ್ದು. ಇಷ್ಟೆಲ್ಲ ಇರುವ ಕಾವೇರಿ ಜೀವನದಿ ಅನಿಸಿಕೊಂಡಿದ್ದರಲ್ಲಿ ಅಚ್ಚರಿ ಇಲ್ಲ. ವಿಷಯ ಏನೆಂದರೆ ಕಳೆದ ಏಪ್ರಿಲ್- ಮೇ-ಜೂನ್ ವರೆಗೆ ಕರ್ನಾಟಕ್ಕೂ ನೀರಿನ ಬವಣೆ ತೀವ್ರವಾಗಿತ್ತು. ಅಂಥ ಸಂದರ್ಭದಲ್ಲಿ ಕರ್ನಾಟಕದಿಂದ ಕಾವೇರಿ ನೀರು ಕೊಡಿಸಿ ಎಂದು ಪ್ರಾಧಿಕಾರಕ್ಕೆ -ನ್ಯಾಯಾಲಯಕ್ಕೆ ಹೋದ ತಮಿಳುನಾಡು ಸರಿಯಾಗಿ ಉಗಿಸಿಕೊಂಡಿತ್ತು. ಆಗ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿತ್ತು. ಆಗ ಕೃಷಿ ಬಳಕೆಗೆ ತಮಿಳುನಾಡು ನೀರು ಕೇಳಿತ್ತು. ಯಾರಾದರೂ ಇದನ್ನು ಪ್ರಶ್ನಿಸುವಂಥದ್ದೇ.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾವೇರಿ ನೀರನ್ನು ಅವರು ಕೇಳುವುದೇ ಬೇಡ. ನಾವೇ ಕೊಡಬಹುದು. ಕೆಆರ್ ಎಸ್ ಆಣೆಕಟ್ಟು ಪೂರ್ತಿ ತುಂಬಲು ಹತ್ತಾರು ಅಡಿ ಬಾಕಿ ಇರುವುದು ನಿಜ. ಆದರೆ ಇನ್ನೂ ಮಳೆಗಾಲ ಮುಗಿದಿಲ್ಲ, ಮೂರ್ನಾಲ್ಕು ತಿಂಗಳು ಬಾಕಿ ಇದೆ. ಹೀಗಿರುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪ ಅಡಿ ಜಾಗವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇಲ್ಲವಾದಲ್ಲಿ ಪ್ರವಾಹ ಪರಿಸ್ಥಿತಿ ಮುಂದೆ ಎದುರಾಗಬಹುದು. ತಮಿಳುನಾಡು ಇಂಥ ಸ್ಥಿತಿಯನ್ನು ಸಾಕಷ್ಟು ಬಾರಿ ಮಾಡಿಕೊಂಡಿದೆ. ಅಲ್ಲಿ ಮಳೆಗಾಲ ಶುರುವಾಗುವುದೇ ಅಕ್ಟೋಬರ್- ನವೆಂಬರ್ ನಲ್ಲಿ. ಅಷ್ಟರಲ್ಲಿ ಪ್ರಾಧಿಕಾರದ ಮೊರೆಹೋಗಿ ಅನಗತ್ಯ ನೀರು ಬಿಡಿಸಿಕೊಂಡು ಕರ್ನಾಟಕಕ್ಕೂ ಕುಡಿಯಲು ನೀರು ಇಲ್ಲದಂತೆ ಮಾಡಿ ತಮ್ಮಲ್ಲಿ ಮಳೆಗಾಲ ಶುರುವಾದಾಗ ಪ್ರವಾಹದಿಂದ ತಾವೂ ಸಾಯುವುದು ಅವರ ಪರಿಪಾಠವಾಗಿದೆ. 

ನಮ್ಮವರು ಕೂಡ ಅವರಿಗೆ ಸಮನಾಗಿ ಕೆಲಸಕ್ಕೆ ಬಾರದ ಹಠ ಮಾಡುವುದನ್ನು ಕಲಿತಿದ್ದಾರೆ. ಅವರಷ್ಟೇ ನಾಡು-ನುಡಿ ಪ್ರೇಮವಿದೆ ಎಂದು ತೋರಿಸುವ ಮೇಲಾಟಕ್ಕೆ ಬಿದ್ದು ಏನಾದ್ರೂ ಕಾವೇರಿ ನೀರನ್ನು ಮಾತ್ರ ತಮಿಳುನಾಡಿಗೆ ಕೊಡಬಾರದು ಎಂಬ ಹಠ ಮಾಡುತ್ತಿದ್ದಾರೆ. ಕಾವೇರಿ ಸಹಜವಾಗಿ ಹರಿಯುವ ದಿಕ್ಕಿನಲ್ಲಿ ತಮಿಳುನಾಡಿದೆ. ಹರಿಯುವ ನೀರು ಅಲ್ಲೇ ಹೋಗುತ್ತದೆ. ಕಾವೇರಿ ನಮ್ಮದು ಸರಿ. ಆದರೆ ಅದರಲ್ಲಿ ಹರಿಯುವ ನೀರು ಧಾರವಾಡಕ್ಕೋ ಬಳ್ಳಾರಿಗೋ ಹೋಗಬೇಕು, ಇನ್ನೆಲ್ಲೂ ಹೋಗುವಂತಿಲ್ಲ, ತಮಿಳುನಾಡಿಗೆ ಮೊದಲು ಹೋಗಬಾರದು ಎಂದು ಮೂರ್ಖತನ ತೋರಿಸಲಾಗದು. ಇಷ್ಟು ವಿವೇಚನೆಯನ್ನು ಕಳೆದುಕೊಳ್ಳಬಾರದು.

ನಿಧಾನಕ್ಕೆ ಯೋಚನೆ ಮಾಡಿ ನೋಡಿದರೆ ನದಿಗೆ ಆಣೆಕಟ್ಟು ಕಟ್ಟುವುದೇ ಪ್ರಶ್ನಾರ್ಹ.

ಕೃಷ್ಣರಾಜಸಾಗರದಲ್ಲಿ ಕಳೆದ ವರ್ಷ ಕಡಿಮೆ ಮಳೆಯ ಕಾರಣ ಸಂಗ್ರಹವಾಗಿದ್ದ ನೀರು ಕೇವಲ ೮೪.೫ ಅಡಿಗಳಷ್ಟು. ಒಟ್ಟೂ ೧೨೪ ಅಡಿ ಸಾಮರ್ಥ್ಯದ ಈ ಆಣೆಕಟ್ಟಿನಲ್ಲಿ ಸುಮಾರು ೭೫ ಅಡಿಗಳಷ್ಟು ಹೂಳು ತುಂಬಿದೆ. ಅಷ್ಟು ಪ್ರಮಾಣದ ನೀರಿನ ಸಂಗ್ರಹ ಖೋತಾ ಆಗುತ್ತಿದೆ. ಇದನ್ನು ಮೊದಲು ಬಗೆಹರಿಸಬೇಕು. ಎರಡೂ ರಾಜ್ಯ ಸರ್ಕಾರಗಳು ಕೂಡಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾವೇರಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು.ಇದರಿಂದ ಸದ್ಯದ ಸಮಸ್ಯೆಗೆ ಒಂದು ಪರಿಹಾರ ದೊರೆಯಬಹುದು. ಇದನ್ನು ಬಿಟ್ಟು ನಾಡು-ನುಡಿಯ ಪ್ರೇಮದ ಹೆಸರಲ್ಲಿ ವೃಥಾ ಕಚ್ಚಾಡುವುದರಲ್ಲಿ ಅರ್ಥವಿಲ್ಲ.