Wednesday, 10 July 2024

ಹರಿಯಲೇ ಬಾರ್ದ ಕಾವೇರಿ


ಇದೀಗ ನಮ್ಮ ರಾಜ್ಯಕಕೆ ಮುಂಗಾರು ಪ್ರವೇಶಿಸಿ ಸಾಕಷ್ಟು ಮಳೆಯಾಗುತ್ತಿದೆ. ನಮ್ಮ ರಾಜ್ಯದ ಜೀವನದಿ ಕಾವೇರಿ ಒಡಲು ತುಂಬಿಕೊಳ್ಳುತ್ತಿದ್ದಾಳೆ. ಈಗ ಕಾವೇರಿಯ ಪ್ರಮುಖ ಅಣೆಕಟ್ಟು ಕೃಷ್ಣರಾಜಸಾಗರ ೧೦೩.೪ ಅಡಿ ತುಂಬಿದೆ. ಇದಿನ್ನೂ ಮುಂಗಾರಿನ ಆರಂಭ ಅನ್ನುವುದನ್ನು ಮರೆಯಬಾರದು. ಜೂನ್ ಕೊನೆಯವಾರದಲ್ಲಿ ೮೭ ಅಡಿ ಇದ್ದ ಕಾವೇರಿ ಒಂದೇ ತಿಣಗಳಲ್ಲಿ ಇಷ್ಟು ತುಂಬಿದೆ. ಒಳ ಹರಿವು ೬೬೦೦ ಕ್ಯುಸೆಕ್ ಇದ್ದು ಹೊರಹರಿವು ೫೭೪ ಕ್ಯುಸೆಕ್ ನಷ್ಟಿದೆ. ಈ ಮಧ್ಯೆ ಕೆಲವು ಕನ್ನಡ ನಾಡು ನುಡಿಗೆ ಹೋರಾಡುವವರು ಎಂದು ಗುರುತಿಸಿಕೊಂಡವರು ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಯುತ್ತಿದೆ, ಕಾವೇರಿ ನಮ್ಮದು ಎಂದು ಗದ್ದಲ ಏಳಿಸುತ್ತಿದ್ದಾರೆ. ಇದರಲ್ಲಿ ಅರ್ಥವಿಲ್ಲ.

ಯಾವುದೇ ನದಿ ಸಹಜವಾಗಿ ವರ್ಷಪೂರ್ತಿ ಹರಿಯುತ್ತಿರಬೇಕು. ಅದು ಸುತ್ತಲಿನ ಪರಿಸರದ ಉಳಿವಿಗೆ ಬಹಳ ಮುಖ್ಯ. ಕಾವೇರಿಯನ್ನೇ ನೋಡಿ. ಅದು ನಮ್ಮ ಬ್ರಹ್ಮಗಿರಿಯಲ್ಲಿ ಹುಟ್ಟಿ ತಮಿಳುನಾಡಿನ ಕಡಲೂರು ಬಳಿ ಬಂಗಾಳಕೊಲ್ಲಿ ಸೇರುವವರೆಗೆ ೭೬೫ ಕಿ.ಮೀ ಹರಿಯುತ್ತದೆ. ಈ ನಡುವೆ ನಮ್ಮ ಇಂದಿನ ಅಗತ್ಯ ಹಾಗೂ ಅನಿವಾರ್ಯತೆಗಾಗಿ ಕೃಷ್ಣರಾಜಸಾಗರ, ಕಲ್ಲಣೈ, ಮೆಟ್ಟೂರು ಎಂಬ ಮೂರು ಪ್ರಧಾನ ಅಣೆಕಟ್ಟುಗಳಿವೆ. ಜೊತೆಗೆ ಇದರ ವ್ಯಾಪ್ತಿಗೇ ಬರುವ ಹೇಮಾವತಿ, ಹಾರಂಗಿ ಮತ್ತು ಅಮರಾವತಿ ಅಣೆಕಟ್ಟುಗಳಿವೆ. ಇವೆಲ್ಲ ಜನ ದನಗಳಿಗೆ ಕುಡಿಯುವ ಜೊತೆಗೆ ಕೃಷಿಗೆ ಅನಿವಾರ್ಯ ಮೂಲಗಳಾಗಿವೆ. ಕಾವೇರಿ ಹುಟ್ಟುವುದು ಕರ್ನಾಟಕದಲ್ಲಾದರೂ ಅದರ ಹೆಚ್ಚಿನ ಉಪಯೋಗ ತಮಿಳುನಾಡಿಗೆ ಆಗುತ್ತಿದೆ. ಆಗುತ್ತಿದೆ ಅನ್ನುವುದಕ್ಕಿಂತ ''ಮಾಡಿಕೊಂಡಿದ್ದಾರೆ" ಅನ್ನುವುದು ಸೂಕ್ತ. ತಮ್ಮಲ್ಲಿ ಸಾಕಷ್ಟು ಅಣೆಕಟ್ಟುಗಳಿದ್ದು ನೀರಿನ ಅಗತ್ಯ ಪೂರೈಕೆ ಆಗುತ್ತಿದ್ದರೂ ತಮಗೆ ಬೇಕಾದಾಗಲೆಲ್ಲ ಜಗಳ ಹೂಡಿ ಕೆಆರ್ ಎಸ್ ನೀರು ಬಿಡಿ ಎಂದು ಗದ್ದಲ ಎಬ್ಬಿಸುವುದು ತಮಿಳುನಾಡಿಗೆ ಚಾಳಿಯಾಗಿಹೋಗಿದೆ. ಅವರ ಗದ್ದಲದ ಪರಿಣಾಮ ಇಂದು ರಾಷ್ಟ್ರೀಯ ಜಲ ಪ್ರಾಧಿಕರಣ ರಚನೆಯಾಗುವಂತಾಗಿದೆ.

ಕರ್ನಾಟಕದ ಪರಿಸ್ಥಿತಿ ಏನಾದರೂ ಆಗಿರಲಿ, ನಮಗೆ ನೀರು ಬೇಕು ಎಂಬ ಅಮಾನುಷ ಧೋರಣೆ ಅವರದು. ಈ ಗದ್ದಲ ಇಂದು ನಿನ್ನೆಯದಲ್ಲ, ಕನ್ನಡದ ಪ್ರಾಚೀನ (ಕ್ರಿಶ೧೨೬೦) ವ್ಯಾಕರಣ ಗ್ರಂಥ ಕೇಶಿರಾಜನ ಶಬ್ದಮಣಿ ದರ್ಪಣದಲ್ಲಿ ಸೂತ್ರವೊಂದಕ್ಕೆ ಉದಾಹರಣೆ ಕೊಡುವಾಗ 'ಕಾವೇರಿಯ ಕಾಲನಾಂತಿಗುಳರೇಂ ಕಡೆಗೊಂಡರೋ ಬಡ್ಡಿಗೊಂಡರೋ’ ಎಂದು ಸೂಚ್ಯವಾಗಿ ಹೇಳಲಾಗಿದೆ. ನಿಜ. ಯಾವುದೇ ನದಿಯ ನೀರು ಪ್ರಾಕೃತಿಕ. ಅದಕ್ಕೆ ಯಾವ ದೊಣೆನಾಯಕನ ಅಪ್ಪಣೆ ಬೇಕಿಲ್ಲ. ಆದರೆ ಇಂದಿನ ಬದಲಾದ ಭೌಗೋಳಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ  ಆಯಾ ರಾಜ್ಯದ ವ್ಯಾಪ್ತಿಯಲ್ಲಿ ಎಲ್ಲ ಬಗೆಯ ಸಂಪತ್ತು ಆಯಾ ಸರ್ಕಾರದ್ದು. ಈ ದೃಷ್ಟಿಯಲ್ಲಿ ಕಾವೇರಿ ಹುಟ್ಟುವ ಸ್ಥಳ ನಮ್ಮಲ್ಲಿ ಆದ್ದರಿಂದ ಅದರ ಮೊದಲ ಹಕ್ಕು ನಮ್ಮದೆಂಬುದರಲ್ಲಿ ಬೇರೆ ಮಾತಿಲ್ಲ. ಆದರೆ ಯಾವುದೇ ಹರಿಯುವ ನೀರನ್ನು ಸದಾಕಾಲ ಯಾರೂ ಹಿಡಿದಿಡಲು ಸಾಧ್ಯವಿಲ್ಲ. ಒಂದು ಹಂತದವರೆಗೆ ಮಾತ್ರ ಇದು ಸಾಧ್ಯ. ಜೊತೆಗೆ ಅದು ತನ್ನ ವ್ಯಾಪ್ತಿಯಲ್ಲಿ ರೂಪಿಸಿದ ಜೈವಿಕ ಹಾಗೂ ಪ್ರಾಕೃತಿಕ ಪರಿಸರದ ಉಳಿವಿಗೆ ಅದರ ಹರಿವು ಅನಿವಾರ್ಯ.

ಕಾವೇರಿ ನದಿ ತನ್ನ ಹರಿವಿನ ವ್ಯಾಪ್ತಿಯಲ್ಲಿ ರೂಪಿಸಿದ ಪ್ರಾಕೃತಿಕ ವೈವಿಧ್ಯ ಅಪೂರ್ವ. ಜೊತೆಗೆ ಅದರ ತೀರದಲ್ಲಿನ ಸಾಮಾಜಿಕ-ಸಾಂಸ್ಕೃತಿಕ ವಿಶೇಷ ಸಾಟಿ ಇಲ್ಲದ್ದು. ಇಷ್ಟೆಲ್ಲ ಇರುವ ಕಾವೇರಿ ಜೀವನದಿ ಅನಿಸಿಕೊಂಡಿದ್ದರಲ್ಲಿ ಅಚ್ಚರಿ ಇಲ್ಲ. ವಿಷಯ ಏನೆಂದರೆ ಕಳೆದ ಏಪ್ರಿಲ್- ಮೇ-ಜೂನ್ ವರೆಗೆ ಕರ್ನಾಟಕ್ಕೂ ನೀರಿನ ಬವಣೆ ತೀವ್ರವಾಗಿತ್ತು. ಅಂಥ ಸಂದರ್ಭದಲ್ಲಿ ಕರ್ನಾಟಕದಿಂದ ಕಾವೇರಿ ನೀರು ಕೊಡಿಸಿ ಎಂದು ಪ್ರಾಧಿಕಾರಕ್ಕೆ -ನ್ಯಾಯಾಲಯಕ್ಕೆ ಹೋದ ತಮಿಳುನಾಡು ಸರಿಯಾಗಿ ಉಗಿಸಿಕೊಂಡಿತ್ತು. ಆಗ ಕರ್ನಾಟಕದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಎದ್ದಿತ್ತು. ಆಗ ಕೃಷಿ ಬಳಕೆಗೆ ತಮಿಳುನಾಡು ನೀರು ಕೇಳಿತ್ತು. ಯಾರಾದರೂ ಇದನ್ನು ಪ್ರಶ್ನಿಸುವಂಥದ್ದೇ.

ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಕಾವೇರಿ ನೀರನ್ನು ಅವರು ಕೇಳುವುದೇ ಬೇಡ. ನಾವೇ ಕೊಡಬಹುದು. ಕೆಆರ್ ಎಸ್ ಆಣೆಕಟ್ಟು ಪೂರ್ತಿ ತುಂಬಲು ಹತ್ತಾರು ಅಡಿ ಬಾಕಿ ಇರುವುದು ನಿಜ. ಆದರೆ ಇನ್ನೂ ಮಳೆಗಾಲ ಮುಗಿದಿಲ್ಲ, ಮೂರ್ನಾಲ್ಕು ತಿಂಗಳು ಬಾಕಿ ಇದೆ. ಹೀಗಿರುವಾಗ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಲ್ಪ ಅಡಿ ಜಾಗವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಇಲ್ಲವಾದಲ್ಲಿ ಪ್ರವಾಹ ಪರಿಸ್ಥಿತಿ ಮುಂದೆ ಎದುರಾಗಬಹುದು. ತಮಿಳುನಾಡು ಇಂಥ ಸ್ಥಿತಿಯನ್ನು ಸಾಕಷ್ಟು ಬಾರಿ ಮಾಡಿಕೊಂಡಿದೆ. ಅಲ್ಲಿ ಮಳೆಗಾಲ ಶುರುವಾಗುವುದೇ ಅಕ್ಟೋಬರ್- ನವೆಂಬರ್ ನಲ್ಲಿ. ಅಷ್ಟರಲ್ಲಿ ಪ್ರಾಧಿಕಾರದ ಮೊರೆಹೋಗಿ ಅನಗತ್ಯ ನೀರು ಬಿಡಿಸಿಕೊಂಡು ಕರ್ನಾಟಕಕ್ಕೂ ಕುಡಿಯಲು ನೀರು ಇಲ್ಲದಂತೆ ಮಾಡಿ ತಮ್ಮಲ್ಲಿ ಮಳೆಗಾಲ ಶುರುವಾದಾಗ ಪ್ರವಾಹದಿಂದ ತಾವೂ ಸಾಯುವುದು ಅವರ ಪರಿಪಾಠವಾಗಿದೆ. 

ನಮ್ಮವರು ಕೂಡ ಅವರಿಗೆ ಸಮನಾಗಿ ಕೆಲಸಕ್ಕೆ ಬಾರದ ಹಠ ಮಾಡುವುದನ್ನು ಕಲಿತಿದ್ದಾರೆ. ಅವರಷ್ಟೇ ನಾಡು-ನುಡಿ ಪ್ರೇಮವಿದೆ ಎಂದು ತೋರಿಸುವ ಮೇಲಾಟಕ್ಕೆ ಬಿದ್ದು ಏನಾದ್ರೂ ಕಾವೇರಿ ನೀರನ್ನು ಮಾತ್ರ ತಮಿಳುನಾಡಿಗೆ ಕೊಡಬಾರದು ಎಂಬ ಹಠ ಮಾಡುತ್ತಿದ್ದಾರೆ. ಕಾವೇರಿ ಸಹಜವಾಗಿ ಹರಿಯುವ ದಿಕ್ಕಿನಲ್ಲಿ ತಮಿಳುನಾಡಿದೆ. ಹರಿಯುವ ನೀರು ಅಲ್ಲೇ ಹೋಗುತ್ತದೆ. ಕಾವೇರಿ ನಮ್ಮದು ಸರಿ. ಆದರೆ ಅದರಲ್ಲಿ ಹರಿಯುವ ನೀರು ಧಾರವಾಡಕ್ಕೋ ಬಳ್ಳಾರಿಗೋ ಹೋಗಬೇಕು, ಇನ್ನೆಲ್ಲೂ ಹೋಗುವಂತಿಲ್ಲ, ತಮಿಳುನಾಡಿಗೆ ಮೊದಲು ಹೋಗಬಾರದು ಎಂದು ಮೂರ್ಖತನ ತೋರಿಸಲಾಗದು. ಇಷ್ಟು ವಿವೇಚನೆಯನ್ನು ಕಳೆದುಕೊಳ್ಳಬಾರದು.

ನಿಧಾನಕ್ಕೆ ಯೋಚನೆ ಮಾಡಿ ನೋಡಿದರೆ ನದಿಗೆ ಆಣೆಕಟ್ಟು ಕಟ್ಟುವುದೇ ಪ್ರಶ್ನಾರ್ಹ.

ಕೃಷ್ಣರಾಜಸಾಗರದಲ್ಲಿ ಕಳೆದ ವರ್ಷ ಕಡಿಮೆ ಮಳೆಯ ಕಾರಣ ಸಂಗ್ರಹವಾಗಿದ್ದ ನೀರು ಕೇವಲ ೮೪.೫ ಅಡಿಗಳಷ್ಟು. ಒಟ್ಟೂ ೧೨೪ ಅಡಿ ಸಾಮರ್ಥ್ಯದ ಈ ಆಣೆಕಟ್ಟಿನಲ್ಲಿ ಸುಮಾರು ೭೫ ಅಡಿಗಳಷ್ಟು ಹೂಳು ತುಂಬಿದೆ. ಅಷ್ಟು ಪ್ರಮಾಣದ ನೀರಿನ ಸಂಗ್ರಹ ಖೋತಾ ಆಗುತ್ತಿದೆ. ಇದನ್ನು ಮೊದಲು ಬಗೆಹರಿಸಬೇಕು. ಎರಡೂ ರಾಜ್ಯ ಸರ್ಕಾರಗಳು ಕೂಡಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾವೇರಿ ನೀರು ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸಬೇಕು.ಇದರಿಂದ ಸದ್ಯದ ಸಮಸ್ಯೆಗೆ ಒಂದು ಪರಿಹಾರ ದೊರೆಯಬಹುದು. ಇದನ್ನು ಬಿಟ್ಟು ನಾಡು-ನುಡಿಯ ಪ್ರೇಮದ ಹೆಸರಲ್ಲಿ ವೃಥಾ ಕಚ್ಚಾಡುವುದರಲ್ಲಿ ಅರ್ಥವಿಲ್ಲ.

No comments:

Post a Comment