ಇದೀಗ ಬೆಂಗಳೂರಿನಲ್ಲಿ ಹವ್ಯಕ ಸಮಾವೇಶ ನಡೆದಿದೆ. ಮುಂಬರುವ ಡಿಸೆಂಬರ್ ೨೭, ೨೮ ಮತ್ತು ೨೯ ರಂದು ಜಾಗತಿಕ ಸಮಾವೇಶ ಜರುಗಲಿದೆ. ಈ ಹಿನ್ನೆಲೆಯಲ್ಲಿ ಹವ್ಯಕರ ಪರಿಚಯದ ಒಂದು ಯತ್ನ.
ಈಗಾಗಲೇ ಅಮೆರಿಕ ಮೊದಲಾದ ಕಡೆ ಜಾಗತಿಕ ಸಮ್ಮೇಳನ ಹಿಂದೆ ನಡೆದಿದೆ. ಮುಖ್ಯವಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಹವ್ಯಕ ಸಮುದಾಯದ ಜನ ತಮ್ಮದೇ ಸಾಹಿತ್ಯ, ಸಂಸ್ಕೃತಿಗಳನ್ನು ಇಂದಿಗೂ ಕಾಪಿಟ್ಟುಕೊಂಡು ಬಂದಿರುವುದಲ್ಲದೇ ಆಧುನಿಕ ಸಮಾಜದ ಮುಂಚೂಣಿ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದಾರೆ. ಇಂಥದ್ದೊಂದು ಕ್ಷೇತ್ರದಲ್ಲಿ ಹವ್ಯಕರು ಇನ್ನೂ ಇಲ್ಲ ಎಂದಿಲ್ಲ. ಅಷ್ಟರ ಮಟ್ಟಿಗೆ ಆ ಸಮುದಾಯ ಬೆಳೆದಿದೆ. ಸದ್ಯ ಹವ್ಯಕರ ಜನಸಂಖ್ಯೆ ಪ್ರಪಂಚಾದ್ಯಂತ ೧೧ ಲಕ್ಷದಷ್ಟಿದೆ ಎಂದು ಲೆಕ್ಕಹಾಕಲಾಗಿದೆ. ಮೂಲತಃ ಹವ್ಯಕರು ೩ನೆಯ ಶತಮಾನದ ವೇಳೆಗೆ ಮಯೂರ ವರ್ಮನ ಆಡಳಿತ ಸಂದರ್ಭದಲ್ಲಿ (೩೪೫-೩೬೫) ಧಾರ್ಮಿಕ ಚಟುವಟಿಕೆ ನಡೆಸಲು ಕಾಶ್ಮೀರದಿಂದ ಕರೆತಂದ ಜನ ಎಂದು ಹೇಳಲಾಗುತ್ತದೆ. ಹವ್ಯಕರಿಗೆ ಸಂಬಂಧಿಸಿದ ಪ್ರಾಚೀನ ಉಲ್ಲೇಖಗಳು ಪುರಾಣೋಕ್ತ ಸಹ್ಯಾದ್ರಿ ಕಾಂಡದಲ್ಲಿ ಸಿಗುತ್ತದೆ. ವಿದ್ವಾಂಸರಾದ ಸೇಡಿಯಾಪು ಕೃಷ್ಣ ಭಟ್ ಹಾಗೂ ಎನ್ ರಂಗನಾಥ ಶರ್ಮರು ಹವ್ಯಕ ಎಂಬ ಶಬ್ದವನ್ನು ಸಂಸ್ಕೃತದ ಅಹಿಚ್ಛತ್ರ ಮೂಲಕ್ಕೂ ಹವ್ಯಕ ಎಂಬುದು ಪವಿತ್ರ ಯಜ್ಞದಲ್ಲಿ ಹವಿಸ್ಸನ್ನು ಅರ್ಪಿಸುವವರು ಎಂಬುದರಿಂದ ಬಂದಿದೆ ಎಂದು ಹೇಳುತ್ತಾರೆ. ಸದ್ಯ ಎಲ್ಲರೂ ವ್ಯಾಪಕವಾಗಿ ಒಪ್ಪಿದ ಮಾತು ಇದು. ಹವ್ಯಕ ಸಮುದಾಯ ಭಾರತದಲ್ಲಿರುವ ೪೩೦ಕ್ಕೂ ಹೆಚ್ಚು ಬ್ರಾಹ್ಮಣ ಪಂಗಡಗಳಲ್ಲಿ ಒಂದಾಗಿದೆ. ಮಾತ್ರವಲ್ಲ, ಈ ಸಮುದಾಯಕ್ಕೆ ಅದರದೇ ಆದ ಭಾಷೆಯೂ ಇದೆ.ಈ ಭಾಷೆಯ ಶಬ್ದಕೋಶವೂ ಇದೆ. ಅಂತರ್ಜಾಲದಲ್ಲಿ ಹವ್ಯಕ ಇಂಗ್ಲಿಷ್ ಶಬ್ದಕೋಶವೂ ಲಭ್ಯವಿದೆ. ಹೀಗೆ ಅತ್ಯಂತ ಶ್ರೀಮಂತ ಪರಂಪರೆಯ ಈ ಸಮುದಾಯ ಪ್ರಪಂಚಾದ್ಯಂತ ಹರಡಿದ್ದು ಆಗಾಗ ಸಮ್ಮೇಳನಗಳ ನೆಪದಲ್ಲಿ ಒಂದು ಕಡೆ ಸೇರುತ್ತದೆ. ಹವ್ಯಕರ ಆಹಾರ ವಿಧಾನಕೂಡ ವಿಶಿಷ್ಟವಾದುದು. ಪ್ರಾಥಮಿಕವಾಗಿ ಸಸ್ಯಾಹಾರಿಗಳಾದ ಇವರು ಅದರಲ್ಲೂ ಅತ್ಯಂತ ಸರಳ ಎನಿಸುವ ಆಹಾರ ಪದಾರ್ಥಗಳನ್ನು ಬಳಸುತ್ತಾರೆ. ಮುಖ್ಯವಾಗಿ ಹಸಿರು ತರಕಾರಿ ಅಥವಾ ಸೊಪ್ಪಿನ ಪದಾರ್ಥ ಇವರಿಗೆ ಅಚ್ಚುಮೆಚ್ಚು. ಸಾಮಾನ್ಯವಾಗಿ ಇವರು ತಮ್ಮ ಅಡುಗೆಗೆ ಬೇಕಾದ ಬಹುತೇಕ ಪದಾರ್ಥಗಳನ್ನು ತಮ್ಮ ಮನೆಯ ಹಿತ್ತಿಲಲ್ಲೇ ಬೆಳೆದುಕೊಳ್ಳುತ್ತಾರೆ. ಪ್ರಧಾನವಾಗಿ ಕುಲಕಸುಬು ಎಂಬಂತೆ ಬಹುತೇಕ ಹವ್ಯಕ ಕುಟುಂಬಗಳು ಕೃಷಿಯನ್ನು ನೆಚ್ಚಿಕೊಂಡಿವೆ. ಅದರಲ್ಲೂ ಉತ್ತರ , ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಮುಖವಾಗಿರುವ ಅಡಕೆ ಹಾಗೂ ಬತ್ತದ ಕೃಷಿಯನ್ನು ಹೆಚ್ಚಾಗಿ ಮಾಡುತ್ತಾರೆ. ಅಡಕೆಯ ಜೊತೆಗೆ ಅದಕ್ಕೆ ಪೂರಕವಾಗುವ ಹಲಸು, ಏಲಕ್ಕಿ, ಕಾಳುಮೆಣಸು, ಬಾಳೆ, ತೆಂಗು ಮುಂತಾದ ಉಪ ಬೆಳೆಗಳನ್ನೂ ತೆಗೆಯುತ್ತಾರೆ. ಹವ್ಯಕರಲ್ಲಿ ಪ್ರಧಾನವಾಗಿ ಶೈವ ಪಂಥ ಅನುಸರಿಸುವ ಸ್ಮಾರ್ತರಿದ್ದು ಇವರು ಋಗ್ವೇದ, ಯಜುರ್ವೇದ ಹಾಗೂ ಸಾಮವೇದ ಕ್ರಮದವರಿದ್ದಾರೆ. ಶೃಂಗೇರಿ ಹಾಗೂ ಸೋಂದಾ, ರಾಮಚಂದ್ರಾಪುರ ಮಠ ಮುಂತಾದ ಶ್ರೀಮಠಗಳಿಗೆ, ಅಂತೆಯೇ ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳ ಕಾಸರಗೋಡು ಭಾಗದವರು ಉಡುಪಿ ಮಠಗಳಿಗೆ ಹೆಚ್ಚಾಗಿ ನಡೆದುಕೊಳ್ಳುವರು.
ಇವರು ಆರ್ಥಿಕವಾಗಿ ಸಬಲರು, ಶ್ರಮಜೀವಿಗಳು. ದಿನದ ಎರಡು ಹೊತ್ತು ಊಟಮಾಡುವರು. ಬೆಳಿಗ್ಗೆ ಉಪಾಹಾರ ಮಾಡುವರು. ಕೆಲವರು ಸಂಜೆಯ ವೇಳೆ ಕೂಡ ಉಪಾಹಾರ ಸೇವಿಸುವುದುಂಟು. ಸಸ್ಯಾಹಾರಿಗಳೂ ಸಂಪ್ರದಾಯನಿಷ್ಠರೂ ಆದ ಈ ಸಮುದಾಯದವರಲ್ಲಿ ಆಹಾರ ವೈವಿಧ್ಯಗಳಿಂದ ಕೂಡಿದೆ. ಸಾಮಾನ್ಯ ಆಹಾರ ಪದ್ಧತಿ ಸಸ್ಯಾಹಾರಿಗಳ ಆಹಾರ ಕ್ರಮದಂತೆ ಇರುತ್ತದೆ. ಆದರೆ ಕೆಲವು ಹಬ್ಬಗಳಲ್ಲಿ, ಸಮಾರಂಭಗಳಲ್ಲಿ ಮತ್ತು ಋತುಮಾನಕ್ಕನುಸಾರವಾಗಿ ಆಹಾರಗಳ ಬಳಕೆ ಭಿನ್ನವಾಗುತ್ತದೆ.
ಇವರ ವೃತ್ತಿ ವ್ಯವಸಾಯ. ಸಾಂಪ್ರದಾಯಿಕ ಶೈಲಿಯಲ್ಲಿ ಬತ್ತ, ಕಬ್ಬು, ಅಡಕೆಗಳನ್ನು ಬೆಳೆಯುತ್ತಾರೆ. ಬತ್ತದ ಕೊಯ್ಲು ಜನವರಿ - ಫೆಬ್ರವರಿ ವೇಳೆಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಹೊಸಕ್ಕಿ (ಹೊಸ+ ಅಕ್ಕಿ) ಹಬ್ಬವನ್ನು ಆಚರಿಸುವರು. ಬೆಳೆದು ಕೊಯ್ಲಿಗೆ ಬಂದ ಬತ್ತದ ತೆನೆಯನ್ನು ಪ್ರತ್ಯೇಕವಾಗಿ ತಂದು ಕೈಯಲ್ಲಿ ಕುಟ್ಟಿ ಅಕ್ಕಿಯನ್ನು ಮಾಡಿ ಆ ಅಕ್ಕಿಯನ್ನು ಹಳೆ ಅಕ್ಕಿಯೊಂದಿಗೆ ಬೆರೆಸಿ ಚುರು ಮತ್ತು ಅಕ್ಕಿ ಪಾಯಸವನ್ನು ಮಾಡಿ ಕುಲದೇವರಿಗೆ ಪೂಜಿಸಿ ಸೇವಿಸುವರು. ಅಕ್ಕಿಯ ಪಾಯಸಕ್ಕೆ ಸಣ್ಣಕ್ಕಿ ಶ್ರೇಷ್ಠವೆಂದು ತಿಳಿಯಲಾಗುತ್ತದೆ. ಆ ಅಕ್ಕಿಯಿಂದ ಮಾಡುವ ಒಂದು ಬಗೆಯ ಸುವಾಸನೆ ಪಾಯಸಕ್ಕೆ ಸಹಜ ರುಚಿಯನ್ನು ತರುತ್ತದೆ. ಅಕ್ಕಿ ಪಾಯಸಕ್ಕೆ ಬೆಲ್ಲವನ್ನು ಬೆರೆಸಲಾಗುತ್ತದೆ. ಸಕ್ಕರೆಯನ್ನು ಬಳಸುವುದು ನಿಷಿದ್ಧ. ಪಾಯಸವನ್ನು ತಯಾರಿಸಲು ಸಣ್ಣಕ್ಕಿ ದೊರಕದಿದ್ದಲ್ಲಿ ಸಣ್ಣಕ್ಕಿ ಎಲೆಯನ್ನು ಪಾಯಸಕ್ಕೆ ಬಳಸುವರು. ಸಣ್ಣಕ್ಕಿ ಎಲೆ ಸಾಮಾನ್ಯವಾಗಿ ತೋಟದ ಬದಿಯ ಜೌಗು ಮಣ್ಣಿನಲ್ಲಿ ಸಹಜವಾಗಿ ಬೆಳೆದುಕೊಂಡಿರುತ್ತದೆ. ಅದು ಬೆಳೆಯದಿದ್ದಲ್ಲಿ ಉದ್ದೇಶಪೂರ್ವಕವಾಗಿ ತಂದು ಬೆಳೆಸಲಾಗುತ್ತದೆ. ಇದು ಒಂದು ಬಗೆಯ ಕೇದಗೆ ಜಾತಿಯ ಪುಟ್ಟ ಗಿಡ. ಮುಳ್ಳಿಲ್ಲದ ಅನಾನಸ್ ಗಿಡದಂತಿರುತ್ತದೆ. ಎಲೆಯ ಆಕಾರ, ಬಣ್ಣ, ಒಟ್ಟೂ ಸ್ವರೂಪ ಅನಾನಸನ್ನು ಹೋಲುತ್ತದೆ. ಎಲೆ ಅತ್ಯಂತ ಸುವಾಸಿತವಾಗಿದ್ದು, ಬೆಳೆದ ಎಲೆಯ ಒಂದೆರಡು ಚೂರುಗಳು ಸಾಮಾನ್ಯ ಅಕ್ಕಿಯೊಂದಿಗೆ ಬೆಂದಾಗ ಸಣ್ಣಕ್ಕಿಯ ಸುವಾಸನೆಯನ್ನು, ರುಚಿಯನ್ನು ತರುತ್ತದೆ. ಹೊಸಕ್ಕಿ ಹಬ್ಬದಲ್ಲಿ ಇನ್ಯಾವ ವಿಶೇಷ ತಿಂಡಿ ತಿನಿಸುಗಳನ್ನು ಮಾಡದಿದ್ದರೂ ಅಕ್ಕಿ ಪಾಯಸವಂತೂ ಕಡ್ಡಾಯ. ಕೃಷಿಕರಾದ ಇವರಿಗೆ ಹೊಸಕ್ಕಿ ಹಬ್ಬವೇ ವರ್ಷದ ಮೊದಲ ಹಬ್ಬ.
ಚೌತಿ ಹಬ್ಬ ಇನ್ನೊಂದು ಪ್ರಮುಖ ಹಬ್ಬ. ಹವ್ಯಕರ ಆರಾಧ್ಯ ದೈವಗಳಲ್ಲಿ ಗಣೇಶನೂ ಒಬ್ಬ. ಗಣೇಶನನ್ನು ಬಿಟ್ಟು ಹವ್ಯಕರ ಯಾವುದೇ ಕರ್ಮಕಾಂಡೋಕ್ತಿಗಳಿಲ್ಲ. ತಮ್ಮ ಜೀವಿತವೇ ಗಣೇಶನ ಅವಲಂಬನೆಯಲ್ಲಿದೆ ಎಂದು ಹವ್ಯಕ್ರು ನಂಬುತ್ತಾರೆ. ಜೀವಕ್ಕೆ ಜಲವೇ ಮೂಲ. ಜಲತತ್ತ್ವದ ಅಧಿಪತಿ ಗಣಪತಿ. ಜೀರ್ಣಾಂಗ ವ್ಯೂಹಕ್ಕೂ ಅವನೇ ಅಧಿಪತಿ. ರೋಗಗಳ ಚಿಕಿತ್ಸೆಗೆ ಮುನ್ನ ಮತ್ತು ಅನಂತರ ಗಣಪತಿಯನ್ನು ಸ್ತುತಿಸಲಾಗುತ್ತದೆ. ಆಹಾರವೇ ಆರೋಗ್ಯಕ್ಕೂ ಅನಾರೋಗ್ಯಕ್ಕೂ ಕಾರಣ. ಇದನ್ನು ನಿಗ್ರಹಿಸುವವ ಗಣೇಶ ಅಥವಾ ಗಣಪತಿ. ಹೀಗಾಗಿ ಗಣಪತಿಯ ಆರಾಧನೆಯಲ್ಲಿ ಸಮಗ್ರ ಆಹಾರ ವಿಜ್ಞಾನವಿದೆ ಎಂಬುದು ಹವ್ಯಕರ ನಂಬಿಕೆ.
ಇದರಿAದಾಗಿ ಚೌತಿ ಹಬ್ಬವನ್ನು ಅತ್ಯಂತ ಸಡಗರ ಸಭ್ರಮಗಳಿಂದ ಆಚರಿಸಲಾಗುತ್ತದೆ. ಗಣೇಶನ ಹಬ್ಬಕ್ಕೆ ಒಂದು ತಿಂಗಳು ಇರುವಂತೆಯೇ ಹಬ್ಬಕ್ಕೆ ತಯಾರಿ ನಡೆಯುತ್ತದೆ. ಮನೆಯನ್ನು, ಮನೆಯ ಆವರಣವನ್ನು ಚೊಕ್ಕಟಗೊಳಿಸುವುದು ಇತ್ಯಾದಿಗಳು ಒಂದೆಡೆ ನಡೆಯುತ್ತಿರುತ್ತವೆ. ಮನೆಯ ಅಲಂಕರಣ ಗಂಡಸರಿಗೆ ಬಿಟ್ಟ ಜವಾಬ್ದಾರಿ. ಇದೇ ಸಂದರ್ಭದಲ್ಲಿ ಮಹಿಳೆಯರು ಚಕ್ಕುಲಿಯನ್ನು ತಯಾರಿಸುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಹಬ್ಬಕ್ಕೆ ಒಂದುವಾರ ಇರುವಷ್ಟರಲ್ಲಿ ಚಕ್ಕುಲಿಯನ್ನು ಭದ್ರವಾಗಿ ಡಬ್ಬ ತುಂಬಿ ಇಡಲಾಗುತ್ತದೆ. ಹಬ್ಬದ ದಿನ ಮಡಿಯುಟ್ಟ ಮಹಿಳೆಯರು ಪೂಜೆಗಾಗಿ ಪ್ರತ್ಯೇಕವಾಗಿ ಚಕ್ಕುಲಿ, ಕರ್ಜಿಕಾಯಿ, ಕಡಬು, ಅತ್ರಾಸ, ಪಂಚಕಜ್ಜಾಯ, ಪಾಯಸ, ಮೋದಕ ಇತ್ಯಾದಿಯಾಗಿ ಇಪ್ಪತ್ತೊಂದು ಬಗೆಯ ತಿಂಡಿ ತಿನಿಸುಗಲನ್ನು ಸಿದ್ಧಪಡಿಸುತ್ತಾರೆ. ಇವುಗಳನ್ನು ಬಿಟ್ಟು ಅನ್ನ ಮತ್ತು ಇತರೆ ನೆಂಚಿಕೆಗಳು ಇರುತ್ತವೆ. ಇತ್ತೀಚಿನ ದಿನಗಳಲ್ಲಿ ಇಪ್ಪತ್ತೊಂದು ಬಗೆಯ ವಿಶೇಷಗಳನ್ನು ತಯಾರಿಸುವುದು ರೂಢಿ ತಪ್ಪುತ್ತಿದ್ದರೂ ತೀರ ಸಂಪ್ರದಾಯಸ್ಥರು ಪ್ರಾಚೀನ ಕ್ರಮವನ್ನು ಕೈಬಿಟ್ಟಿಲ್ಲ.
ಹಬ್ಬದ ಹಿಂದಿನ ದಿನ ತದಿಗೆಯಂದು ತಮ್ಮ ಮನೆಯ ಹಿತ್ತಲು, ಗದ್ದೆ, ತೋಟಗಳಲ್ಲಿ ಬೆಳೆದ ಯಾವುದೇ ಹೊಸ ಫಲವನ್ನು ದೇವರ ಮುಂದೆ ಕಟ್ಟುತ್ತಾರೆ. ಇದನ್ನು ಫಲಾವಳಿ ಎಂದು ಕರೆಯುವರು. ತಾವು ಬೆಳೆದ ಯಾವುದೇ ಹೊಸ ಫಲವನ್ನು ಫಲಾವಳಿಗೆ ಹಾಕಿದ ತರುವಾಯವೇ ಬಳಸುವುದು ಒಂದು ಕ್ರಮ. ಫಲಾವಳಿಯಲ್ಲಿ ಬಾಳೆ, ತೆಂಗು, ಸೌತೆಕಾಯಿಗಳು ಸಾಮಾನ್ಯವಾಗಿರುತ್ತವೆ. ಮಾರನೆಯ ದಿನ ಬೆಳಿಗ್ಗೆ ಉಪವಾಸ ಆಚರಿಸುವ ಗಂಡಸರು ಮಡಿಯಲ್ಲಿ ಗಣೇಶನಿಗೆ ಪೂಜಿಸಿದ ತರುವಾಯ ಎಲ್ಲ ಇಪ್ಪತ್ತೊಂದು ಬಗೆಯ ಖಾದ್ಯಗಳ ನೈವೇದ್ಯ ನಡೆಯುತ್ತದೆ. ತರುವಾಯ ಮನೆಯ ಸದಸ್ಯರು ನೆಂಟರು ಇಷ್ಟರು ಊಟ ಮಾಡುತ್ತಾರೆ. ನೆಂಚಿಕೆಗೆ ಕೆಸುವಿನ ಪಲ್ಯ ಮತ್ತು ಮೋಡ ಹಾಗಲಕಾಯಿ ಹಸಿ ಕಡ್ಡಾಯವಾಗಿರುತ್ತದೆ.
ಚೌತಿಯ ದಿನದ ಊಟಕ್ಕೆ ಅಂದೆ ಮಡಿಯುಟ್ಟು ತಯಾರಿಸಿದ ಖಾದ್ಯಗಳು ಪ್ರಸಾದ ರೂಪದಲ್ಲಿರುತ್ತವೆ. ಕರ್ಜಿಕಾಯಿ ಮತ್ತು ಚಕ್ಕುಲಿಗಳನ್ನು ವಾರದ ಹಿಂದೆ ಸಿದ್ಧವಾಗಿಟ್ಟರೂ ಪೂಜೆ ನೈವೇದ್ಯಗಳ ತರುವಾಯವೇ ಅವುಗಳನ್ನು ಬಳಸಲಾಗುವುದು. ಮಾರನೆಯ ದಿನ ಪಂಚಮಿಯಂದು ಅಕ್ಕಿಯ ರೊಟ್ಟಿ (ಸಪ್ಪೆ) ಮತ್ತು ಕಾಯಿ ಕಡುಬುಗಳನ್ನು ತಯಾರಿಸುವರು. ಅಂದು ಮಧ್ಯಾಹ್ನದ ವೇಳೆಯಿಂದ ಭಿಕ್ಷಾಟನೆಗೆ ಬರುವವರು ಬಂದು ಚಕ್ಕುಲಿ, ಕರ್ಜಿಕಾಯಿಗಳನ್ನು ಪಡೆದು ಹೋಗುತ್ತಾರೆ. ಚೌತಿಯ ವೇಳೆ ಯಾರಿಗಾದರೂ ಆಹಾರ ದಾನ ಮಾಡದಿದ್ದರೆ ಪೂಜೆಯ ಫಲವಿಲ್ಲ ಎಂದು ನಂಬುತ್ತಾರೆ.
ನಾಗರ ಪಂಚಮಿಯಂದು ಅಕ್ಕಿಯ ಸಪ್ಪೆರೊಟ್ಟಿಯನ್ನು ನಾಗದೇವರಿಗೆ ಎಡೆ ಇಡುವರು. ಅಕ್ಕಿಯ ಹಿಟ್ಟು ಮತ್ತು ಆಕಳ ಹಸಿ ಹಾಲನ್ನು ಹುತ್ತಕ್ಕೆ ಸುರಿಯುವರು. ನೈವೇದ್ಯವಾದ ಸಪ್ಪೆ ರೊಟ್ಟಿಯನ್ನು ಊಟದ ಜೊತೆ ಪ್ರಸಾದ ರೂಪದಲ್ಲಿ ಸೇವಿಸುವರು. ಅಕ್ಕಿ ಪಾಯಸದ ಊಟವನ್ನು ಅಂದು ಮಾಡಲಾಗುತ್ತದೆ.
ದೀಪಾವಳಿ ಹಬ್ಬದಂದು ಹೋಳಿಗೆ, ಸಿಹಿ ಕಡಬು ಮತ್ತು ಪಾಯಸಗಳನ್ನು ಮಾಡಿ ಸೇವಿಸುವರು. ನೆಂಚಿಕೆಗೆ ಕೆಸುವಿನ ದಂಟಿನ ಸಾಸಿವೆ ಮತ್ತು ಬಾಳೆಕಾಯಿಯ ಪಲ್ಯ ಕಡ್ಡಾಯವಾಗುರುತ್ತದೆ.
ಭೂಮಿ ಹುಣ್ಣಿಮೆ ಇನ್ನೊಂದು ಪ್ರಮುಖವಾದ ಸಂದರ್ಭ. ಸಿಹಿ ಊಟದ ಜೊತೆಗೆ ಹತ್ತಂಬರವೆ (ದಂಟಿನ ಸೊಪ್ಪಿನಂಥ ಸಸ್ಯ ಎಲೆಯ ಮುಂಬಾಗ ದಟ್ಟ ಹಸಿರು ಹಾಗೂ ಹಿಂಭಾಗ ದಟ್ಟ ಕೆಂಪು ವರ್ಣದಿಂದ ಕೂಡಿರುತ್ತದೆ) ಸೊಪ್ಪಿನ ಸಾಸಿಮೆ, ಪಲ್ಯದ ಬಳಕೆ ಕಡ್ಡಾಯ. ಅನ್ನ, ಅಕ್ಕಿ, ಹತ್ತಂಬರವೆ ಸೊಪ್ಪು ಮತ್ತು ಬೆಲ್ಲ ಬೆರೆಸಿದ ಕಡುಬನ್ನು ಕಾಗೆಗೆ ಎಡೆ ಹಾಕಲಾಗುತ್ತದೆ. ಗೋವೆಕಾಯಿ (ಸಿಹಿ ಕುಂಬಳ) ಮತ್ತು ಮೊಗೆಕಾಯಿ (ಮಂಗಳೂರು ಸೌತೆಕಾಯಿ)ಗಳ ಕಡಬು ಕಡ್ಡಾಯ.
ಮೇಲೆ ಉಲ್ಲೇಖಿಸಿದ ಹಬ್ಬಗಳನ್ನು ಬಿಟ್ಟರೆ ಹವ್ಯಕರಲ್ಲಿ ಆಹಾರ ನಿಷೇಧಗಳಿರುವ ಪ್ರಮುಖ ಹಬ್ಬಗಳು ಕಂಡುಬರುವುದಿಲ್ಲö. ಕೃಷ್ಣ ಜನ್ಮಾಷ್ಟಮಿ, ನವರಾತ್ರಿ, ಯುಗಾದಿ ಮುಂತಾದ ಸಂದರ್ಭಗಳಲ್ಲಿ ಯಾವುದೇ ಬಗೆಯ ಸಿಹಿಯೂಟವನ್ನು ಮಾಡಬಹುದು. ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಅವಲಕ್ಕಿಯ ಸೇವನೆ ಕಡ್ಡಾಯ. ಯುಗಾದಿಯಂದು ಬಯಲು ಸೀಮೆಯಿಂದ ತರಿಸಿದ ಬೇವಿನ ಎಲೆ ಅಥವಾ ಜಂತಲೆ ಮರದ ಚಕ್ಕೆಯನ್ನು (ತೊಗಟೆ) ಬೆಲ್ಲದೊಂದಿಗೆ ಬೆರೆಸಿ ಊಟಕ್ಕೆ ಮೊದಲು ತುಸು ಸೇವಿಸುವುದು ಕೂಡ ಕಡ್ಡಾಯ.
ತಿಥಿ ಅಥವಾ ಶ್ರಾದ್ಧಗಳಂದು ತೊಂಡೆಕಾಯಿ, ಬಾಳೆಕಾಯಿ, ಬಾಳೆಯ ಒಳ ತಿರುಳಿನ ಪಲ್ಯ, ಕುಂಬಳ, ಬದನೆ, ಎಳ್ಳು, ಹೆಸರುಕಾಳು, ಉದ್ದು ವಿಶೇಷವಾಗಿ ಬಳಕೆಯಾಗುತ್ತವೆ. ಟೊಮೆಟೋ ಬಳಕೆ ಶ್ರಾದ್ಧಾದಿ ಸಂಪ್ರದಾಯಗಳಲ್ಲಿ ನಿಷಿದ್ಧ. ತೊಂಡೆಕಾಯನ್ನು ಸಾಮಾನ್ಯ ದಿನಗಳಲ್ಲಿ ಸಂಪ್ರದಾಯಸ್ಥರು ಬಳಸುವುದಿಲ್ಲ. ನುಗ್ಗೆಕಾಯಿ, ನೀರುಳ್ಳಿ, ಬೆಳ್ಳುಳ್ಳಿ ಕೂಡ ಇದೇ ಗುಂಪಿಗೆ ಸೇರುತ್ತವೆ.
ಸಾಮಾನ್ಯ ದಿನಗಳಲ್ಲಿ ಸೇವಿಸುವ ವಿಶೇಷ ಖಾದ್ಯಗಳಲ್ಲಿ ಪುಟ್ಟು ಅಥವಾ ಬಾಳೆ ಮಂಡಿಗೆ ಪ್ರಮುಖವಾದುದು. ಬಾಳೆ ಎಲೆಯನ್ನು ಕೊಳವೆಯಂತೆ ಮಾಡಿ ಉಪ್ಪು, ಜೀರಿಗೆ ಮತ್ತು ಮೆಣಸನ್ನು ಬೆರೆಸಿ ಹದಮಾಡಿದ ಅಕ್ಕಿ ಹಿಟ್ಟನ್ನು ಕೊಳವೆಯಲ್ಲಿ ಹಾಕಿ ಅದರ ಮೇಲೆ ತುರಿದ ತೆಂಗಿನಕಾಯಿ ಹಾಕಿ ಕೊಳವೆ ತುಂಬುವರು. ಒಂದು ಕೊಳವೆಯಲ್ಲಿ ನಾಲ್ಕು ಭಾಗಗಳಿರುತ್ತವೆ. ಕಟ್ಟಿದ ಕೊಳವೆಯನ್ನು ಅವಿಯಲ್ಲಿ ಬೇಯಿಸುವರು. ಕೊಳವೆಯನ್ನು ಕಟ್ಟಲು ಬಾಳೆಯ ನಾರನ್ನು ಬಳಸುವರು. ಒಂದು ಗೊತ್ತಾದ ಪ್ರಮಾಣದಲ್ಲಿ ಬೆಂದ ತರುವಾಯ ಕಾಯಾಲು (ತೆಂಗಿನಕಾಯಿಯ ಹಾಲು) ವಿನಲ್ಲಿ ಅದ್ದಿ ಸೇವಿಸುವರು. ಇದೇ ಬಗೆಯಲ್ಲಿ ತಯಾರಾಗುವ ಇನ್ನೊಂದು ಖಾದ್ಯ ವಿಶೇಷ ಕೊಟ್ಗೆ ಅಥವಾ ಕೊಟ್ಟಿಗೆ. ಇದನ್ನು ಮೆಣಸು ರಹಿತವಾಗಿ ಸಿದ್ಧಗೊಳಿಸಿ ಬೆಂದ ಮೇಲೆ ಕಾಯಲು ಮತ್ತು ಬೆಲ್ಲವನ್ನು ಸೇರಿಸಿ ನೆಂಚಿಕೊAಡು ಸೇವಿಸಲಾಗುವುದು. ಇವೆರಡು ಖಾದ್ಯ ವಿಶೇಷಗಳು ಹಾಲಕ್ಕಿ ಒಕ್ಕಲಿಗರು ಮತ್ತು ಹರಿಕಾಂತರಲ್ಲಿ ಬಳಕೆಯಲ್ಲಿವೆ.
ದಿನನಿತ್ಯದ ಊಟೋಪಚಾರಗಳಿಗೆ ಬಳಕೆಯಾಗುವ ನೆಂಚಿಕೆಗಳು (ನೆಂಚಿಕೆಯನ್ನು ಆಸೆ, ಪದಾರ್ಥ ಎಂಬ ಹೆಸರುಗಳಿಂದ ಕರೆಯುವ ರೂಢಿಯಿದೆ) ಬಗೆ ಬಗೆಯ ಸಸ್ಯಗಳಿಂದ ಸಿದ್ಧವಾಗುತ್ತದೆ. ಇವುಗಳಲ್ಲಿ ಬೆಟ್ಟ ಬಸಲೆ, ಅಮಟೆ, ಸಾಂಬಾರ ಸೊಪ್ಪು (ದೊಡ್ಡಿ ಪತ್ರೆ), ಜೌತಿ ಅಥವಾ ಆರತಿ ಕುಂಡಿಗೆ, ಎಲೆಯುರಿಕೆ, ತಗಟೆ, ವಂದೆಲಗ, ಇಲಿಕಿವಿಗಳನ್ನು ಮುಖ್ಯವಾಗಿ ಗುರುತಿಸಬಹುದು. ಒಗ್ಗರಣೆಗಾಗಿ ಕರಿಬೇವಿನ ಸೊಪ್ಪನ್ನು ಬಳಸುವರು. ಇದನ್ನು ಕರಮಂಗಲ ಸೊಪ್ಪು, ಒಗ್ಗರಣೆ ಸೊಪ್ಪುಗಳೆಂದೂ ಕರೆಯುವರು.
ಬೇಸಗೆಯ ದಿನಗಳಲ್ಲಿ ಹಲಸು ಮತ್ತು ಮಾವಿನಕಾಯಿಗಳು ಹೇರಳವಾಗಿ ದೊರಕುವುದರಿಂದ ಇವುಗಳನ್ನು ಬಳಸಿ ಬಗೆ ಬಗೆಯ ಆಹಾರಗಳನ್ನು ತಯಾರಿಸಲಾಗುವುದು. ಹಲಸಿನ ಕಾಯಿಯಲ್ಲಿ ವೈವಿಧ್ಯಮಯ ಜಾತಿಗಳಿವೆ. ಬೇರು ಹಲಸು, ನೀರು ಹಲಸು, ಹೆಬ್ಬಲಸುಗಳ ಹಣ್ಣನ್ನು ಸೇವಿಸುವುದಿಲ್ಲ. ಆದರೆ ಎಳೆಯ ಕಾಯಿಯಾಗಿದ್ದಾಗ ಇವುಗಳನ್ನು ಬೇಯಿಸಿ ಪಲ್ಯ, ಸಾರು, ಚಟ್ನಿ, ಗೊಜ್ಜುಗಳ ರೂಪದಲ್ಲಿ ಸೇವಿಸುವರು. ಹಲಸು ಮತ್ತು ಗಟ್ಟಿ ತೊಳೆಯ ಹಲಸು (ಬೊಕ್ಕೆ/ ಬಕ್ಕೆ)ಗಳಿಂದ ಕಡುಬು, ದೋಸೆ, ಸಿಹಿ ಮುಳುಕ (ಅಂಬೊಡೆ ಅಕಾರದ ಸಿಹಿ ತಿಂಡಿ)ಗಳನ್ನು ತಯಾರಿಸುವರು. ಆರಿದ್ರಾ ಮಳೆಯ ಸಂದರ್ಭದಲ್ಲಿ ನಡೆಯುವ ಮಳೆ ಪೂಜೆಯ ಸಂದರ್ಭದಲ್ಲಿ ಹಲಸಿನ ಹಣ್ಣನ್ನು ತೊಳೆ ಬಿಡಿಸಿ ಅಕ್ಕಿ ಹಿಟ್ಟಿನೊಂದಿಗೆ ರುಬ್ಬಿ ಹದವಾದ ಹಿಟ್ಟು ಮಾಡಿ ಬಾಳೆ ಎಲೆಯಲ್ಲಿ ಹಿಟ್ಟು ಸುರಿದು ಕೊಟ್ಟೆ ಆವಿಯಲ್ಲಿ ಬೇಯಿಸಿ ಕಡುಬು ತಯಾರಿಸುವರು. ನೆಟರು, ಇಷ್ಟರನ್ನು ಕರೆದು ಹಬ್ಬದ ಊಟ ಬಡಿಸುವರು. ಹಲಸಿನ ಹಣ್ಣಿನ ತೊಳೆಯನ್ನು ಅಕ್ಕಿ ಹಿಟ್ಚಿನೊಂದಿಗೆ ರುಬ್ಬಿ ಹದವಾದ ಹಿಟ್ಟಿನಿಂದ ದೋಸೆಯನ್ನು ತಯಾರಿಸುವರು. ಹಲಸಿನ ಹಣ್ಣು ದೊರೆಯುತ್ತಿರುವವರೆಗೂ ಬೆಳಗಿನ ಉಪಾಹಾರಕ್ಕೆ ಹಲಸಿನ ಹಣ್ಣಿನ ದೋಸೆ ಸಾಮಾನ್ಯವಾಗಿರುತ್ತದೆ. ಅಕ್ಕಿಯ ರೊಟ್ಟಿ, ಮೊಗೆಕಾಯಿ ದೋಸೆಗಳು ಉಳಿದ ದಿನಗಳಲ್ಲಿ ಬಳಕೆಯಾಗುತ್ತವೆ. ಮಾವಿನ ಕಾಯಿಯ ಗೊಜ್ಜು, ಚಟ್ನಿಗಳು ಬೇಸಿಗೆಯಲ್ಲಿ ಸಾಮಾನ್ಯವಾದ ಊಟದ ನೆಂಚಿಕೆಗಳು. ಅಪ್ಪೆ ಹುಳಿ ಇನ್ನೊಂದು ವಿಶಿಷ್ಟ ನೆಂಚಿಕೆ ಹಾಗೂ ಪಾನೀಯ. ವಿಶೇಷವಾಗಿ ಹುಳಿ ಇರುವ ಮಾವಿನ ಕಾಯಿಗಳನ್ನು ತಕ್ಕ ಪ್ರಮಾಣದಲ್ಲಿ ಬೇಯಿಸಿ ಸಿಪ್ಪೆ ತೆಗೆದು ರಸವನ್ನು ಹಿಂಡಿ, ಅಗತ್ಯ ಪ್ರಮಾಣದಲ್ಲಿ ನೀರು ಬೆರೆಸಿ ಕುದಿಸಿ, ಉಪ್ಪು, ಒಣ ಮೆಣಸಿನಕಾಯಿ, ತುಸು ಬೆಲ್ಲ, ಜೀರಿಗೆ, ಸಾಸುವೆಗಳನ್ನು ಹದವಾಗಿ ಸೇರಿಸಿ ಒಗ್ಗರಣೆ ಹಾಕುವರು. ಮಧ್ಯಾಹ್ನದ ಊಟದ ವೇಳೆಗೆ ಅಪ್ಪೆ ಹುಳಿ ನೆಂಚಿಕೆಗೆ ಹಾಗೂ ಪಾನೀಯಕ್ಕೆ ಯೋಗ್ಯವಾಗುತ್ತದೆ. ಸೆಕೆಯಲ್ಲಿ ಬಿಸಿ ಬಿಸಿ ಸಾರುಗಳಿಗಿಂತ ಭಿನ್ನ ರುಚಿಯನ್ನು ದೇಹಕ್ಕೆ ತಂಪನ್ನು ನೀಡುವ ಅಪ್ಪೆ ಹುಳಿ ಮೇಲೆಂದು ಅವರು ತಿಳಿಯುತ್ತಾರೆ. ಅಪ್ಪೆಮಿಡಿಯ ಉಪ್ಪಿನಕಾಯಿಗೆ ಜಿಲ್ಲೆ ಹೆಸರುವಾಸಿ. ಅಪ್ಪೆಮಿಡಿ ಒಂದು ಜಾತಿಯ ಮಾವಿನಕಾಯಿ. ಅತ್ಯಂತ ಕಟುವಾದ ಮತ್ತು ಸುವಾಸಿತವಾದ ಸೊನೆಯನ್ನು ಇದು ಸೂಸುತ್ತದೆ. ಹದವಾದ ಹುಳಿ ಇದರ ವೈಶಿಷ್ಟ್ಯತೆ ಹಣ್ಣಾದ ಮೇಲೆ ಇದನ್ನು ಬಳಸಲಾಗುವುದಿಲ್ಲ. ಓಟೆ ಹದವಾಗಿ ಬೆಳೆಯುತ್ತಿದ್ದಂತೆಯೇ ಕಾಯಿಯನ್ನು ನೆಲಕ್ಕೆ ಬೀಳಿಸದಂತೆ ಜೋಪಾನವಾಗಿ ಕಿತ್ತು, ತೊಟ್ಟುಗಳನ್ನು ನಾಜೂಕಾಗಿ ತೆಗೆದು ಸೊನೆಯನ್ನು ಒರೆಸಿ ಉಪ್ಪಿನ ನೀರಿನಲ್ಲಿ ಕಾಯಿಗಳನ್ನು ಹಾಕಿಡುತ್ತಾರೆ. ಅಥವಾ ಕಾಯಿಗಳನ್ನು ಹೋಳುಗಳನ್ನಾಗಿ ಮಾಡಿ ಮೆಣಸು ಒಗ್ಗರಣೆ ಇತ್ಯಾದಿಗಳನ್ನು ಒಂದು ಹದದಲ್ಲಿ ಹಾಕಿ ಉಪ್ಪಿನಕಾಯಿ ತಯಾರಿಸಿ ಗಾಜಿನ ಭರಣಿಯಲ್ಲಿ ತುಂಬಿ ಭದ್ರವಾಗಿ ಮುಚ್ಚಳ ಹಾಕಿ ಇಡಲಾಗುತ್ತದೆ. ಅನೇಕ ವರ್ಷಗಳವರೆಗೆ ಇದು ಕೆಡದಂತೆ ಇಡುತ್ತದೆ. ಅಗತ್ಯವಾದ ಉಪ್ಪಿನಕಾಯನ್ನು ತೆಗೆಯುವಾಗ ಒಬ್ಬರೇ ತೆಗೆಯಬೇಕು. ನೀರಿನ ಸ್ಪರ್ಶ ಆಗಕೂಡದು ಮತ್ತು ಮಾತಾಡಬಾರದು ಎಂಬ ವಿಧಿಗಳಿವೆ. ಮನೆಯ ಹಿರಿಯ ಮಹಿಳೆ ಈ ಕೆಲಸವನ್ನು ನಿರ್ವಹಿಸುತ್ತಾಳೆ.
ಕಳಲೆ (ಕಳಿಲೆ) ಸಂಪ್ರದಾಯಸ್ಥರಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ಎಳೆಯ ಬಿದಿರನ್ನು ಕಳಲೆ ಎಂದು ಕರೆಯುವರು. ಇದು ಬೇಗನೆ ಬೇಯುವುದಿಲ್ಲ. ನೀರಿನಲ್ಲಿ ಎರಡು ದಿನಗಳ ಕಾಲ ನೆನೆಹಾಕಿ ಬೇಯಿಸಿ, ಸಾರು ಅಥವಾ ಪಲ್ಯಗಳನ್ನು ಮಾಡಿ ಇದನ್ನು ಬಳಸುವರು. ಕಳಿಲೆ ಎಲೆಯನ್ನು ಮನೆಯ ಸುತ್ತ ಮತ್ತು ಕೊಟ್ಟಿಗೆಯ ಬಳಿ ಎಲ್ಲೂ ಹಾಕಬಾರದೆಂದು ನಿಷೇಧವಿದೆ.
ಕಳಿಲೆಯನ್ನು ಸಂಪ್ರದಾಯಸ್ಥರು ಬಳಸಿದರೂ ಮೃಗಶಿರಾ ಮತ್ತು ಅರಿದ್ರಾ ನಕ್ಷತ್ರಗಳ ವೇಳೆಯಲ್ಲಿ ಯಾವ ನಿಷೇಧವಿಲ್ಲ. ಆದರೆ ವಿಶಾಖಾ ನಕ್ಷತ್ರದ ತರುವಾಯ ಅಂದರೆ ಕಾರ್ತಿಕ ಹುಣ್ಣಿಮೆ ಆದ ಮೇಲೆ ಕಳಿಕೆಯನ್ನು ಬಳಸಕೂಡದೆಂದು ನಿರ್ಬಂಧವಿದೆ.
ಕಳಿಲೆ ಅತ್ಯಂತ ಪುಷ್ಟಿಕರವಾದ ಆಹಾರ ಪದಾರ್ಥ. ಇದರ ಬಗ್ಗೆ ಆಧುನಿಕ ಆಹಾರ ವಿಜ್ಞಾನದಲ್ಲಿ ಸಾಕಷ್ಟು ಅಧ್ಯಯನಗಳಾಗಿವೆ. ವ್ಯಾಪಾರ ವಹಿವಾಟು ಕೂಡ ನಡೆಯುತ್ತಿದೆ. ಆದರೆ ಜಿಲ್ಲೆಯಲ್ಲಿ ಕಳಿಲೆ ಕಿತ್ತವರಿಗೆ ದಂಡ, ಕಿರುಕುಳ ಇತ್ಯಾದಿ ಅರಣ್ಯ ಇಲಾಖೆಯವರ ಕಾಟದಿಂದ ಜನರು ತಮ್ಮ ಇಷ್ಟದ ಈ ಆಹಾರ ಬಳಸದಂತಾಗಿದೆ.
ಋತುಮಾನಕ್ಕನುಗುಣವಾಗಿ ಕೆಲವು ಸಸ್ಯಗಳ ಬಳಕೆಯನ್ನು ವಿಶೇಷವಾಗಿ ಮಾಡುತ್ತಾರೆ. ಬೇಸಗೆಯಲ್ಲಿ ಕಳ್ಳಂಗಟ್ಲೆ ಸಸ್ಯದ ನಾರನ್ನು ಎತ್ತಿ ನೀರಿನಲ್ಲಿ ಕುದಿಸಿ ಸೇವಿಸುವರು. ಇದರಿಂದ ತಯಾರಿಸಿದ ತುಂಬುಳಿ ಊಟಕ್ಕೆ ಬಳಕೆಯಾಗುತ್ತದೆ. ಪಾನಕದ ರೂಪದಲ್ಲಿ ಕಾಮಕಸ್ತಿç ಬೀಜ, ಎಳ್ಳು, ಸೊಪ್ಪು, ಮುರುಗಲ ಹುಳಿಗಳನ್ನು ನೀರಿಗೆ ಬೆರೆಸಿ, ಬೆಲ್ಲ ಸೇರಿಸಿ ಸೇವಿಸುವರು. ಮೊಗೆ ಬೀಜ ಮತ್ತು ಬೆಲ್ಲವನ್ನು ರುಬ್ಬಿ ಹದವಾಗಿ ನೀರು ಸೇರಿಸಿ ಪಾನಕದಂತೆ ಕುಡಿಯುವುದು ಇನ್ನೊಂದು ಜನಪ್ರಿಯ ವಿಧಾನ.
ಮಳೆಗಾಲದಲ್ಲಿ ಕನ್ನೆಕುಡಿ, ಎಲೆಯುರಿಗೆ ಸೊಪ್ಪುಗಳ ತಂಬುಳಿ, ವಿಶೇಷವಾಗಿ ಬಳಕೆಯಾಗುತ್ತದೆ. ಚಳಿಗಾಲದಲ್ಲಿ ತಗಟೆಸೊಪ್ಪಿನ ತಂಬುಳಿ, ಪಲ್ಯ, ಕಟ್ನೆಗಳ (ಕಷಾಯ) ಸೇವನೆ ಇರುತ್ತದೆ. ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದ ಅಡುಗೆಗಳಲ್ಲಿ ಬಳಕೆಯಾಗುವ ಸಸ್ಯಗಳು ಒಂದೇ ಬಗೆಯವು.
ಅಡುಗೆಯಲ್ಲಿ ಬಳಸುವ ಪಾತ್ರೆಗಳಲ್ಲಿ ಉಪ್ಪು, ಉಪ್ಪಿನಕಾಯಿ ಮೊರಟೆಗಳು, ತೆಂಗಿನ ಕರಟದಿಂದ ಮಾಡಿದ ಚಿಪ್ಪು (ಸೌಟು), ಕೈಎಣ್ಣೆ ಮರದಿಂದ ಮಾಡಿದ ಯಶ ಮುಚ್ಚಲು (ಪಾತ್ರೆಗಳ ಮುಚ್ಚಳ), ಬಿದಿರಿನಿಂದ ತಯಾರಿಸಿದ ಜರಡಿ, ಅನ್ನ ಬಸಿಯುವ ಮರಿಗೆ (ಪುಟ್ಟ ತೊಟ್ಟಿ) ಹಲಸಿನ ಮರದಿಂದ ತಯಾರಿಸಿದ ಸೌಟು, ಸಾಂಬಾರ ಪದಾರ್ಥಗಳನ್ನು ಇಡಲು ತಯಾರಿಸಿದ ಕೈಎಣ್ಣೆ ಮರದ ಸಾಂಬಾರ ಬಟ್ಟಲು, ಬರಲು ಮರದಿಂದ ತಯಾರಿಸಿದ ಕಡೆಗಿಲುಗಳು ವಿಶೇಷವಾದವು. ಇವು ಕಲಾತ್ಮಕ ಕೆತ್ತನೆಗಳಿಂದ ಕೂಡಿರುತ್ತವೆ. ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಬಳಕೆ ಚಾಲ್ತಿಯಲ್ಲಿ ಬರುತ್ತಿದ್ದರೂ ಇಂದಿಗೂ ಮೇಲ್ಕಾಣಿಸಿದ ವಸ್ತುಗಳ ಬಳಕೆ ನಿಂತಿಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಇವು ಇದ್ದೇ ಇರುತ್ತವೆ.
ಆಹಾರ ಸೇವನೆಯ ಕ್ರಮ:
ಹವ್ಯಕರಲ್ಲಿ ಆಹಾರ ಸೇವನೆಗೆ ಸಂಬಂಧಿಸಿದಂತೆ ಹೆಚ್ಚಿನ ಕಟ್ಟುಪಾಡುಗಳು ಕಂಡುಬರುತ್ತವೆ. ಅನ್ನಾಹಾರ ಸೇವನೆಯ ವಿಷಯದಲ್ಲಿ ಹವ್ಯಕರು ಕೆಲವು ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಮಧ್ಯಾಹ್ನ ಹನ್ನೆರಡು ಗಂಟೆಯಿಂದ ಮೂರು ಗಂಟೆಯೊಳಗೆ ಮತ್ತು ರಾತ್ರಿ ಏಳು ಗಂಟೆಯಿಂದ ಹತ್ತುಗಂಟೆಯೊಳಗೆ ಊಟ ಮಾಡುವುದು ಸಾಮಾನ್ಯ ಕ್ರಮ. ಅನ್ನಾಹಾರ ಸೇವನೆಯನ್ನು ಮಾತ್ರ ಊಟ ಎಂದು ಇವರು ಕರೆಯುವುದು. ಉಳಿದಂತೆ ಚಪಾತಿ, ರೊಟ್ಟಿ, ಉಪ್ಪಿಟ್ಟು ಇತ್ಯಾದಿ ಏನನ್ನೇ ಹೊಟ್ಟೆ ತುಂಬ ಸೇವಿಸಿದರೂ ಅದು ಊಟವಲ್ಲ.
ಊಟಕ್ಕೆ ಬಾಳೆ ಎಲೆಯ ಕುಡಿಯೇ ಆಗಬೇಕು. ಎಲೆಯನ್ನು ಸ್ವಚ್ಛವಾಗಿ ತೊಳೆದು ಬಳಸಲಾಗುತ್ತದೆ, ಮಳೆಗಾಲದ ವೇಳೆ ಅದನ್ನು ಬೆಂಕಿಯಲ್ಲಿ ತುಸು ಬಾಡಿಸಿ ಬಳಸುತ್ತಾರೆ. ಮಳೆಗಾಲದ ಸಮಯದಲ್ಲಿ ಬಾಳೆ ಎಲೆಯನ್ನು ಆಶ್ರಯಿಸಿ ಅನೇಕ ಕ್ರಿಮಿ ಕೀಟಗಳು ಇರುವುದರಿಂದ ಈ ಕ್ರಮ ಅನುಸರಿಸುತ್ತಾರೆ. ಊಟಕ್ಕೆ ಎಲೆ ಹಾಕಿದ ಮೇಲೆ ಊಟ ಮಾಡುವವರನ್ನೆಲ್ಲ ಸಾಲಾಗಿ ಕೂರಿಸಿದ ಮೇಲೆ ಊಟ ಬಡಿಸಲಾಗುತ್ತದೆ. ಬಾಳೆ ಎಲೆಯ ತುದಿ ಭಾಗ ಊಟಕ್ಕೆ ಕುಳಿತವನ ಎಡಭಾಗಕ್ಕೆ ಬರಬೇಕು. ಈ ಎಲೆಯ ಎಡ ಮೇಲ್ಭಾಗದಲ್ಲಿ ಉಪ್ಪು, ಉಪ್ಪಿನಕಾಯಿ ಬಡಿಸಬೇಕು. ನಂತರ ಎಡಭಾಗದಿಂದ ಬಲಕ್ಕೆ ಎಲೆಯ ಮೇಲ್ತುದಿಯಲ್ಲಿ ಕೋಸಂಬರಿ, ಪಲ್ಯ, ಗೊಜ್ಜು, ಚಟ್ನಿ ಇತ್ಯಾದಿ ನೆಂಚಿಕೆಗಳನ್ನು ಬಡಿಸಬೇಕು.
ಎಲೆಯ ಬಲಭಾಗದ ಕೆಳತುದಿಯಲ್ಲಿ ಪಾಯಸ ಬಡಿಸಬೇಕು. ಎಲೆಯ ಎಡಬದಿಯ ಕೆಳಭಾಗದಲ್ಲಿ ಚಿತ್ರಾನ್ನ, ಹಪ್ಪಳ, ಸಂಡಿಗೆಗಳನ್ನು ಬಡಿಸಬೇಕು. ಮಧ್ಯಭಾಗದಲ್ಲಿ ಅನ್ನವನ್ನು ಬಡಿಸಬೇಕು. ಊಟಕ್ಕೆ ಸಿದ್ಧಪಡಿಸಿದ ಎಲ್ಲ ಆಹಾರ ಬಗೆಗಳನ್ನೂ ಎಲೆಯಲ್ಲಿ ಸ್ವಲ್ಪ ಸ್ವಲ್ಪವೇ ಈ ಕ್ರಮದಲ್ಲಿ ಮೊದಲು ಬಡಿಸಿದ ನಂತರ ಮಧ್ಯಭಾಗದಲ್ಲಿ ಅನ್ನ ಬಡಿಸಬೇಕು. ಅನ್ನದ ಮೇಲೆ ತುಪ್ಪವನ್ನು ಬಡಿಸಿದ ಮೇಲೆ ತೊಗರಿ ಬೇಳೆಯ ತೊವ್ವೆ ಬಡಿಸಬೇಕು.
ಇಷ್ಟಾದ ಮೇಲೆ ದೇವರ ಪ್ರಾರ್ಥನೆ ನಡೆಯುತ್ತದೆ. ಆನಂತರವಷ್ಟೇ ಊಟ ಆರಂಭ. ಒಂದೆಡೆಯಿಂದ ಬಡಿಸಲು ಆರಂಭಿಸುತ್ತಿದ್ದಂತೆಯೇ ಯಾರೂ ತಿನ್ನಲು ಆರಂಭಿಸುವಂತಿಲ್ಲ. ಎಲ್ಲವನ್ನೂ ಬಡಿಸಿ ದೇವರ ಪ್ರಾರ್ಥನೆ ಆದ ಮೇಲಷ್ಟೇ ಬಡಿಸಿದ ಆಹಾರಕ್ಕೆ ಕೈಹಾಕಬೇಕು. ಉಪನಯನವಾದವರು ಚಿತ್ರಾವತಿಯನ್ನು ಇಟ್ಟ ಮೇಲಷ್ಟೇ ಊಟ ಮಾಡಬೇಕು. ಮೊದಲು ಸಾರು, ನಂತರ ಹುಳಿ, ನಂತರ ಬಜ್ಜಿ, ಹಸಿ ಇತ್ಯಾದಿ ಪದಾರ್ಥಗಳು ಕ್ರಮವಾಗಿ ಬರುತ್ತವೆ. ಸಿಹಿ ಪದಾರ್ಥಗಳು ಬಂದ ಮೇಲೆ ಕೊನೆಯಲ್ಲಿ ಮಜ್ಜಿಗೆ ಅಥವಾ ಮೊಸರನ್ನ ಊಟಮಾಡಬೇಕು. ಬಡಿಸಿಕೊಂಡ ಏನನ್ನೂ ಚೆಲ್ಲಬಾರದು, ವ್ಯರ್ಥ ಮಾಡಬಾರದು. ಹಾಗೇನಾದರೂ ಅನಿವಾರ್ಯವಾಗಿ ಆಹಾರ ಬಿಡಬೇಕಾಗಿ ಬಂದರೆ ತ್ಯಜಿಸಿದ ಅನ್ನಾಹಾರಕ್ಕೆ ನೀರು ಬೆರೆಸಬೇಕು. ಚಿತ್ರಾವತಿ ಇಟ್ಟವರು ಉಪ್ಪಿಗೆ ತುಸು ನೀರು ಸೇರಿಸಿ ಅದನ್ನು ಸೇವಿಸಿ ನಂತರ ಆಪೋಶನ ತೆಗೆದುಕೊಂಡು ನೆಲಕ್ಕೆ ಕೈಒತ್ತಿ ಮೇಲೇಳಬೇಕು. ದೇವರ ಪ್ರಾರ್ಥನೆ ಅಥವಾ ಶ್ಲೋಕಗಳನ್ನು ಬಿಟ್ಟು ಊಟ ಮಾಡುವಾಗ ಬೇರೇನೂ ಮಾತಾಡಬಾರದು, ಹರಟಬಾರದು. ಆಪೋಶನ ತೆಗೆದುಕೊಂಡ ಮೇಲೆ ಕೈತೊಳೆದುಕೊಳ್ಳಬೇಕು. ಊಟವಾದ ಮೇಲೂ ಖಾಲಿ ಎಲೆಯ ಮುಂದೆ ಹೆಚ್ಚು ಹೊತ್ತು ಕೂತಿರುವುದು ಅಥವಾ ನೀರು ಮತ್ತೇನೋ ಸೇವಿಸುವುದು ನಿಷಿದ್ಧ. ಮಕ್ಕಳಿರಲಿ, ವಿವಾಹಿತರಿರಲಿ, ಸ್ತ್ರೀಯರಿರಲಿ ಎಲ್ಲರಿಗೂ ಊಟದ ಸಾಮಾನ್ಯ ನಿಯಮಗಳು ಅನ್ವಯ.
ಅಕ್ಕಿಯನ್ನು ಬೇಯಿಸಿದಾಗ ಅದನ್ನು ಮುಸುರೆ ಎಂದು ತಿಳಿಯಲಾಗುತ್ತದೆ. ಅನ್ನವನ್ನು ಮುಟ್ಟುವ ಮೊದಲು ಅಥವಾ ಮುಟ್ಟಿದ ಅನಂತರ ಕೈ ತೊಳೆದುಕೊಳ್ಳಬೇಕು. ಅನ್ನವಿಟ್ಟ ಸ್ಥಳವನ್ನೂ ಸ್ವಚ್ಛಗೊಳಿಸಬೇಕು. ದೇವರಿಗೆ ಮಡಿಯಲ್ಲಿ ನೈವೇದ್ಯಕ್ಕೆ ಮಾಡಿದ ಪದಾರ್ಥಗಳನ್ನು ಬಿಟ್ಟರೆ ಬೇರೆ ಯಾವ ಪದಾರ್ಥವನ್ನೂ ಈ ಸ್ಥಾನವನ್ನು ನೀಡಿಲ್ಲ. ಈ ಸಮುದಾಯದ ಪ್ರಧಾನ ಆಹಾರ ಅನ್ನವಾದ ಕಾರಣದಿಂದ ಹಾಗೂ ಪವಿತ್ರತೆಯ ಕಾರಣದಿಂದ ಇಂಥ ಗೌರವ ಭಾವನೆಯನ್ನು ನೀಡಲಾಗಿದೆ ಅನಿಸುತ್ತದೆ.
ಉಪವಾಸದ ಕ್ರಮ:
ಹವ್ಯಕರು ಹರಿ, ಹರರನ್ನು ಸಮಾನವಾಗಿ ಕಾಣುತ್ತಾರೆ. ದೇವರಲ್ಲಿ ಯಾವ ಭೇದವನ್ನೂ ಇವರು ಕಾಣುವುದಿಲ್ಲ. ಕೃಷ್ಣಜನ್ಮಾಷ್ಟಮಿಯೂ ಶಿವರಾತ್ರಿಯೂ ಇವರ ಪಾಲಿಗೆ ಒಂದೇ. ಎರಡರಲ್ಲೂ ಸಮಾನ ಶ್ರದ್ಧೆ ಮತ್ತು ಕಟ್ಟುನಿಟ್ಟಿನ ಆಚರಣೆ ಮಾಡುತ್ತಾರೆ. ಏಕಾದಶಿಯಂದು ದಿನವಿಡೀ ಉಪವಾಸ ಇರುತ್ತಾರೆ. ಬಹುತೇಕ ಜನ ರಾತ್ರಿ ವೇಳೆ ಮಾತ್ರ ಅವಲಕ್ಕಿ ಅಥವಾ ಉಪ್ಪಿಟ್ಟಿನಂಥ ಲಘು ಆಹಾರ ಸೇವಿಸುತ್ತಾರೆ. ಶಿವರಾತ್ರಿ ಮತ್ತು ಶ್ರೀಕೃಷ್ಣಜನ್ಮಾಷ್ಟಮಿಗಳಂದು, ಶ್ರಾದ್ಧಾದಿಗಳಂದು ಉಪವಾಸ ಆಚರಿಸುತ್ತಾರೆ. ಇದು ಸಾಮುದಾಯಿಕವಾದುದು. ಉಪವಾಸ ಆಚರಣೆ ಎಂದು ಹೇಳುತ್ತ ಲಘು ಆಹಾರ ಸೇವಿಸುತ್ತಿದ್ದರೆ ಹಾಸ್ಯಕ್ಕೆ “ಮಂಗನ ಉಪವಾಸ” ಎಂದು ಛೇಡಿಸುತ್ತಾರೆ. ಇದಲ್ಲದೇ ವೈಯಕ್ತಿಕವಾಗಿಯೂ ಕೆಲವರು ವಾರದ ಉಪವಾಸ ಮಾಡುತ್ತಾರೆ. ಈಚಿನ ದಿನಗಳಲ್ಲಿ ಉಪವಾಸದ ಪದ್ಧತಿ ಹೊಸ ತಲೆಮಾರಿನವರಲ್ಲಿ ಕಡಿಮೆಯಾಗುತ್ತಿದೆ ಎಂಬುದು ಹಿರಿಯರ ಅಂಬೋಣ.
ಹವ್ಯಕರ ಸಮಾಜ ಹಾಗೂ ಸಂಸ್ಕೃತಿ ವಿಶಿಷ್ಟವಾಗಿದ್ದು ಇದರ ಕಿರು ನೋಟವನ್ನು ಅವರ ಆಹಾರ ಕ್ರಮವನ್ನು ಗಮನಿಸುವ ಮೂಲಕ ಅವಲೋಕಿಸಬಹುದು. ಆಹಾರ ಕ್ರಮವನ್ನು ಗಮನಿಸಿದರೆ ಉಳಿದ ಸಂಗತಿಗಳ ಸ್ಥೂಲ ಚಿತ್ರಣ ಲಭಿಸುತ್ತದೆ. ಹಾಗಾಗಿ ಇಲ್ಲಿ ಹವ್ಯಕರ ಆಹಾರ ಕ್ರಮದ ನೋಟವನ್ನು ನೋಡಲಾಗಿದೆ. ಕಲೆ ಸಾಹಿತ್ಯದಲ್ಲೂ ಹವ್ಯಕರ ಹೆಸರು ಉತ್ತುಂಗದಲ್ಲಿದೆ. ಮಹಾನ್ ಯಕ್ಷಗಾನ ಕಲಾವಿದರಾಗಿದ್ದ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಆ ಪರಂಪರೆಯನ್ನು ಮುಂದುವರೆಸಿದ ಕೆರೆಮನೆ ಶಿವಾನಂದ ಹೆಗಡೆ , ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಮನೆತನ, ಕೊಂಡದಕುಳಿ ಶ್ರೀಪಾದ ಹೆಗಡೆಯವರ ಮನೆತನ ಮೊದಲಾದವು ಹವ್ಯಕರ ಪ್ರೀತಿಯ ಯಕ್ಷಗಾನ ಕಲೆಯ ಪ್ರಸಿದ್ಧ ಹೆಸರುಗಳಾಗಿವೆ, ಇನ್ನೂ ಹತ್ತು ಹಲವು ಕುಟುಂಬಗಳೇ ಈ ಕಲೆಗೆ ತೊಡಗಿಸಿಕೊಂಡಿವೆಯಲ್ಲದೇ ಯಕ್ಷಗಾನ ತಾಳಮದ್ದಲೆಯಲ್ಲೂ ಸಾಕಷ್ಟು ಹೆಸರು ಮಾಡಿದ ಕುಟುಂಬಗಳಿವೆ. ಇನ್ನು ಚಿತ್ರಕಲೆ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲೂ ಅಪಾರವಾಗಿ ದುಡಿದವರಿದ್ದಾರೆ. ಇತಿಹಾಸ, ಸಾಹಿತ್ಯ, ಶಾಸನ ಕ್ಷೇತ್ರಗಳಲ್ಲಿ, ವಿಜ್ಞಾನ-ತಂತ್ರಜ್ಞಾನಗಳಲ್ಲಿ, ಕ್ರೀಡೆ, ರಾಜಕಾರಣದಲ್ಲೂ ದೇಶದ ಸೇನೆಯೂ ಸೇರಿದಂತೆ ರಾಷ್ಟç, ಅಂತಾರಾಷ್ಟçದ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಜನರಿದ್ದಾರೆ. ಎಷ್ಟೇ ಆಧುನಿಕ ಜೀವನಕ್ಕೆ ತೆರೆದುಕೊಂಡಿದ್ದರೂ ಸಂಪ್ರದಾಯದ ವಿಷಯದಲ್ಲಿ ರಾಜಿ ಮಾಡಿಕೊಳ್ಳದವರು ಹವ್ಯಕರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲೂ ದುಡಿದ ಮಹನೀಯರಿದ್ದಾರೆ. ಹವ್ಯಕರ ಸಂಘಟನೆ, ಏಳಿಗೆಗೆ ಶ್ರಮಿಸುವ ಹವ್ಯಕ ಮಹಾಸಭಾ ಎಂಬ ಬೃಹತ್ ಸಂಘಟನೆಯೂ ಸಕ್ರಿಯವಾಗಿದೆ.
ಒಟ್ಟಿನಲ್ಲಿ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಗುಣದಲ್ಲಿ ಇತರರಿಗೆ ಮತ್ಸರ ಹುಟ್ಟಿಸುವಲ್ಲಿ ಹವ್ಯಕ ಸಮುದಾಯ ಯಶಸ್ವಿಯಾಗಿದೆ.