ಭಾರತ ೧೯೮೯-೯೦ರಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಿತು. ಇದಕ್ಕೆ ಹೆಚ್ಚಿನ ಆದ್ಯತೆ ಕೊಟ್ಟವರು ಅಂದಿನ ಚುವಾವಣಾ ಆಯುಕ್ತರಾಗಿದ್ದ ಶ್ಯಾಮಲಾಲ್ ಶೇಕ ದಾರ್ ಎಂಬುವವರು. ಇವರು ಈ ವ್ಯವಸ್ಥೆ ಭಾರತದಂಥ ಬಹುದೊಡ್ಡ ಚುವಾವಣಾ ವ್ಯವಸ್ಥೆಯನ್ನು ಸರಿಪಡಿಸಿ ವೆಚ್ಚ ಮತ್ತು ಶ್ರಮವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಕೊಂಡು ಇದಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ ಕಾರಣಕ್ಕೆ ಇದರ ಅಳವಡಿಕೆ ವೇಗ ಪಡೆಯಿತು. ಅನಂತರ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಇದರ ಬಳಕೆ ಆಗತೊಡಗಿತು. ಇದರ ಜೊತೆಗೆ ಅಮೆರಿಕದಲ್ಲಿ ಈ ಯಂತ್ರಕ್ಕೆ ಎದ್ದಿದ್ದ ವಿರೋಧವನ್ನು ಆಧರಿಸಿ ಇಲ್ಲಿನ ಪ್ರತಿಪಕ್ಷಗಳು ಈ ಯಂತ್ರದ ಬಳಕೆಯನ್ನು ವಿರೋಧಿಸಿ ಹಳೆಯ ಮತಪತ್ರ ವ್ಯವಸ್ಥೆ ಮರುಜಾರಿ ಆಗಬೇಕೆಂದು ಆಗ್ರಹಿಸತೊಡಗಿದರು. ಆದರೆ ಈ ಯಂತ್ರ ಈಗ ಸಾಕಷ್ಟು ಸುಧಾರಣೆ ಕಂಡು ಅದರಲ್ಲಿ ಲೋಪ ತೋರಿಸುವುದು ಸಾಧ್ಯವೇ ಇಲ್ಲ ಅನ್ನುವಂತಾಗಿದೆ. ಆದರೆ ಪ್ರತಿಪಕ್ಷಗಳು ಹಠ ಬಿಡದೇ ಸರ್ವೋಚ್ಚ ನ್ಯಾಯಾಲಯದವರೆಗೂ ಎಳೆದರು. ಆದರೆ ಅದರಲ್ಲಿನ ದೋಷವನ್ನು ತೋರಿಸಿ ಸಾಬೀತುಪಡಿಸುವಂತೆ ಎಸೆದ ಸವಾಲಿನಲ್ಲಿ ಸೋತಕಾರಣ ಪ್ರತಿಪಕ್ಷಗಳಿಗೆ ನ್ಯಾಯಾಲಯ ನೀವು ಗೆದ್ದಾಗ ಸರಿ ಇರುವ ಈ ಯಂತ್ರ ನೀವು ಸೋತಾಗ ಮಾತ್ರ ದೋಷಪೂರಿತ ಆಗುವುದು ಹೇಗೆಂದು ಜನಸಾಮಾನ್ಯರಿಗೆ ಎದುರಾಗುತ್ತಿದ್ದ ಪ್ರಶ್ನೆಯನ್ನೇ ಕಟು ಶಬ್ದಗಳಲ್ಲಿ ಕೇಳಿದೆ. ಇಷ್ಟರಲ್ಲಿ ವಿಶ್ವದಲ್ಲಿ ಭಾರತವಲ್ಲದೇ ಬ್ರೆಜಿಲ್, ನೆದರ್ಲೆಂಡ್, ನಾರ್ವೆ, ಪಿಲಿಪ್ಪೀನ್ಸ್, ದಕ್ಷಿಣ ಕೊರಿಯಾ ಮಲೇಷ್ಯ, ಸ್ವಿರ‍್ಲೆಂಡ್ ಮೊದಲಾದ ದೇಶಗಳಲ್ಲಿ ಯಶಸ್ವಿಯಾಗಿ ಬಳಕೆ ಆಗುತ್ತಿದೆ. ಇದರಿಂದ ವೆಚ್ಚ ಮತ್ತು ಶ್ರಮ ಕಡಿಮೆ ಆಗಿದೆ. ಸಾಂಪ್ರದಾಯಿಕ ಮತಪತ್ರ ಚುನಾವಣೆಯಲ್ಲಿ ಮತಪತ್ರಗಳನ್ನು ಮುದ್ರಿಸುವುದ, ಅದರ ಡಬ್ಬಗಳ ನಿರ್ವಹಣೆ, ಮತಪತ್ರಗಳ ದುರುಪಯೋಗ ಮೊದಲಾದವು ತುಂಬ ವೆಚ್ಚಕ್ಕೆ ಕಾರಣವಾಗುತ್ತಿದ್ದವಲ್ಲದೇ ಮತಗಟ್ಟೆಯ ಅಧಿಕಾರಿಗಳಿಗೆ ಇದರ ನಿರ್ವಹಣೆ ಫಜೀತಿಗೂ ಕಾರಣವಾಗುತ್ತಿತ್ತು. ಸಣ್ಣಪುಟ್ಟ ಮತಕೇಂದ್ರಗಳಲ್ಲೂ ಮತಪತ್ರಗಳ ಅಪಹರಣ ಹಾಗೂ ಇಷ್ಟಬಂದಂತೆ ಅದನ್ನು ಚಲಾಯಿಸುವ ದಾದಾಗಿರಿ ಸಾಮಾನ್ಯವಾಗುತ್ತಿತ್ತು. ಆದರೆ ಮತಯಂತ್ರದಲ್ಲಿ ಇದಕ್ಕೆ ಅವಕಾಶವಿಲ್ಲ. ಹಾಗೂ ಮತಗಳ ಎಣಿಕೆ ಕ್ಷಿಪ್ರವೂ ಸುಲಭವೂ ಸರಿಯಾಗಿಯೂ ಲಭಿಸುತ್ತದೆ. ಇದರ ನಿರ್ವಹಣೆ ಕೂಡ ಸರಳವೇ. ಆದರೆ ಈ ಯಂತ್ರಗಳನ್ನು ಬಳಸಿ ಅಧಿಕೃತ ಮತದಾರ ಎಲ್ಲಿಂದ ಬೇಕಾದರೂ ಮತ ಚಲಾವಣೆ ಮಾಡಬಹುದಾದ ಸುರಕ್ಷಿತ ವ್ಯವಸ್ಥೆ ಬಂದರೆ ಇದು ಪೂರ್ಣವಾಗುತ್ತದೆ. ಸದ್ಯ ಇದರಪ್ರಯೋಗ ನಡೆಯುತ್ತಿದೆ.
Friday, 29 November 2024
ಇವಿಎಂ ವಿವಾದದ ಸುತ್ತ
Wednesday, 27 November 2024
ಬಾಂಗ್ಲಾ ಹಿಂಸಾಚಾರದ ಹಿಂದಿನ ಕಥೆ
ಈ ಗಲಭೆಗೆ ಶತಮಾನಗಳ ಇತಿಹಾಸವಿದೆ. ಅದು ೧೭೦೭ರ ಔರಂಗಜೇಬ್ ಅಧಿಕಾರ ಮುಗಿದ ಕಾಲದಿಂದ ಶುರುವಾಗುತ್ತದೆ ಅನ್ನಬಹುದು. ಯಾಕೆಂದರೆ ಔರಂಗಜೇಬ್ ಇಸ್ಲಾಂ ಮತಕ್ಕೆ ಸಮುದಾಯಕ್ಕೆ ಎಲ್ಲ ಬಗೆಯ ರಕ್ಷಣೆ ಹಾಗೂ ವಿಸ್ತರಣೆಗೆ ಎಲ್ಲ ರೀತಿಯ ನೆರವು ಕೊಡುತ್ತಿದ್ದ ಅವನ ಅನಂತರ ಆ ಸಮುದಾಯಕ್ಕೆ ಮಧ್ಯ ಪಶ್ಚಿಮ ಪ್ರದೇಶದಲ್ಲಿ ಹಾಗೂ ಭಾರತದ ಈಶಾನ್ಯ ಭಾಗದಲ್ಲಿ ಅಧಿಕಾರ ಕಳೆದುಕೊಂಡ ಮುಸ್ಲಿಮರು ಅಭದ್ರತೆಯಲ್ಲಿ ತೊಳಲುತ್ತಿದ್ದರು. ಇದು ೧೯೦೫ರಲ್ಲಿ ಬಂಗಾಳ ವಿಭಜನೆ ಆಗುವವರೆಗೆ ಹಬ್ಬಿಕೊಳ್ಳುತ್ತದೆ. ಅದುವರೆಗೆ ಅಭದ್ರತೆಯನ್ನು ಅನುಭವಿಸುತ್ತಿದ್ದ ಈ ಸಮುದಾಯ ಬ್ರಿಟಿಷರ ಮುಂದೆ ಪ್ರತ್ಯೇಕ ದೇಶಕ್ಕಾಗಿ ಬೇಡಿಕೆ ಇಟ್ಟು ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನ ಎಂದು ತಮ್ಮ ಮತಕ್ಕಾಗಿ ಪ್ರತ್ಯೇಕ ಪ್ರಾಂತ್ಯ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆ ಸಮಯದಲ್ಲಿ ವೈಸ್ರಾಯ್ ಆಗಿದ್ದ ಕರ್ಜನ್ ಭಾರತದ ಸಮಾಜವನ್ನು ಒಡೆಯಲು ಹಾಗೂ ತಮ್ಮ ವಸಾಹತು ಆಳ್ವಿಕೆ ನಿರಾತಂಕವಾಗಿ ಮುಂದುವರೆಯಲು ಇವರನ್ನು ಧರ್ಮದ ಆಧಾರದಲ್ಲಿ ಸುಲಭವಾ ಒಡೆಯಬಹುದೆಂದು ತಿಳಿದು ಮುಸ್ಲಿಮರ ಬೇಡಿಕೆಗೆ ಒಳ ಒಳಗೆ ಬೆಂಬಲ ಕೊಟ್ಟಿದ್ದ. ಇತ್ತ ವಿಭಜನೆ ವಿರುದ್ಧ ಎದ್ದುನಿಂತ ಬಿಪಿನ್ ಚಂದ್ರ ಮೊದಲಾದವರು ಮೌನವಾಗಿ ನರಳಿದರು. ಆ ಕಾಲದಲ್ಲಿ ವಿಭಜನೆ ಪರ ಇದ್ದವರು ನವಾಬ ಸಲೀಮುಲ್ಲಾ ಮತ್ತು ಧಾರ್ಮಿಕ ಮುಖಂಡರಾದ ನವಾಬ್ ನವಾಬ್ ಸೈಯದ್ ಅಲಿ ಚೌಧರಿ ಮೊದಲಾದವರು. ಇವರು ಮುಸ್ಲಿಂ ಮತಕ್ಕೆ ಪ್ರತ್ಯೇಕ ನೆಲ ಸಿಕ್ಕಿದೆ ಎಂಬ ಸಂಭ್ರಮದಲ್ಲಿ ಬ್ರಿಟಿಷರಿಗೆ ನೆರವಾಗತೊಡಗಿದರು. ಇದರ ಲಾಭವನ್ನು ಬ್ರಟಿಷರು ತಮ್ಮ ಸ್ವಾರ್ಥಕ್ಕೆ ಚೆನ್ನಾಗಿ ಬಳಸಿಕೊಂಡರು. ಸ್ಬವಾತಂತ್ರ್ಯ ಹೋರಾಟದ ಕಿಚ್ಚನ್ನು ತಮಣೆ ಮಾಡಲು ಬ್ರಿಟಿಷರಿಗೆ ಇದು ನೆರವಾಯಿತು. ಅನಂತರ ಸ್ವಾತಂತ್ರ್ಯ ದೊರೆತ ಮೇಲೆಯೂ ಇಲ್ಲಿನ ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಹಿಂದೂ ಮುಸ್ಲಿಂ ವಿಭಜನೆಯನ್ನು ಹಾಗೆಯೇ ಬಳಸಿಕೊಳ್ಳುತ್ತಾ ಬಂದವು.
ಸದ್ಯ ಬಂಗಾಲದಲ್ಲಿ ಹಿಂದೂಗಳ ಜನಸಂಖ್ಯೆ ಏರುತ್ತಿರುವುದು ಅವರ ಚಿಂತೆಗೆ ಕಾರಣ. ಸುಮ್ಮನೇ ನೋಡಿ - ೨೦೦೧ರಲ್ಲಿ ೧೧. ೮೨೨ ರಷ್ಟಿದ್ದ ಹಿಂದೂಗಳು ೨೦೧೨ರಲ್ಲಿ ೧೨, ೯೯೯ರಷ್ಟಾದರು. ೨೦೨೨ರಲ್ಲಿ ಇದು ೧೩, ೧೩೦ಕ್ಕೇರಿದೆ, ಆದರೆ ಅಲ್ಲಿನ ಮುಸ್ಲಿಂ ಜನಸಂಖ್ಯೆಯ ಮುಂದೆ ಇದು ನಗಣ್ಯ. ೧೯೯೧ರಲ್ಲಿ ಅಲ್ಲಿನ ಮುಸ್ಲಿಂ ಜನಸಂಖ್ಯೆ ೯೩,೮೮೧ ಇದ್ದುದು ೨೦೨೨ರಲ್ಲಿ ಕ್ರಮೇಣ ೧೫೦, ೩೬೦ರಷ್ಟಗಿದೆ. ಆದರೂ ಅಲ್ಲಿನ ಮುಸ್ಲಿಮರಿಗೆ ಒಂಥರಾ ಅಭದ್ರತೆ. ಸಾಲದ್ದಕ್ಕೆ ಷೇಕ್ ಹಸೀನಾ ಸರ್ಕಾರ ಹಿಂದೂಗಳ ಭದ್ರತೆಗೆ ಆದ್ಯತೆ ಕೊಡುತ್ತಿದ್ದುದು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಆಗಾಗ ಏನಾದರೂ ನೆಪದಲ್ಲಿ ಸರ್ಕಾರದ ವಿರುದ್ಧ ಗಲಾಟೆ ಮಾಡುತ್ತಿದ್ದರು. ವಿರೋಧ ಪಕ್ಷಗಳು ಇದರ ಲಾಭವನ್ನು ಪಡೆಯಲು ಹವಣಿಸಿ ಸದ್ಯ ಯಶಸ್ಸು ಕಂಡವು. ಇದನ್ನು ಬಳಸಿಕೊಂಡ ಮೂಲಭೂತವಾದಿಗಳು ಹಿಂದೂಗಳು ಮತ್ತು ಅವರ ಪವಿತ್ರ ತಾಣಗಳ ಮೇಲೆ ಮುಗಿಬಿದ್ದರು. ಅದು ಮುಂದುವರೆದಿದೆ. ಈಗ ಸಕಾರ ಮೂಲಭೂತವಾದಿಗಳ ಬೆಂಬಲದೊಂದಿಗೆ ಯೂನಸ್ ನೇತೃತ್ವದಲ್ಲಿದ್ದು ಅವರು ಮಾತಿಗೆ ಮಾತ್ರ ಅಲ್ಪ ಸಂಖ್ಯಾತರಿಗೆ ರಕ್ಷಣೆ ಕೊಡುವುದಾಗಿ ಹೇಳುತ್ತಿದ್ದಾರೆ. ಆದರೆ ಗಲಭೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇಷ್ಟರ ನಡುವೆ ಮತ್ತೆ ಷೇಕ್ ಹಸೀನಾ ಭಾರತದಲ್ಲಿ ಆಸರೆ ಪಡೆದಿದ್ದು ಅಲ್ಲಿನ ಹಿಂದೂಗಳ ರಕ್ಷಣೆಗೆ ಭಾರತ ಮುಂದಾಗಬೇಕೆಂಬ ಕೂಗು ಕೇಳುತ್ತಿದೆ. ಆದರೆ ಭಾರತ ಮಾತಲ್ಲಿ ಮಾತ್ರವಲ್ಲ, ಕ್ರಿಯೆಯಲ್ಲೂ ಉದಾರವಾದಿ. ಯಾವುದೇ ಧರ್ಮದ ಹೆಸರಲ್ಲಿ ಮತ್ತೊಂದು ದೇಶದ ಆಡಳಿತದಲ್ಲಿ ಅದು ಮೂಗು ತೂರಿಸುವುದಿಲ್ಲ, ಆದರೆ ಅಗತ್ಯ ರಾಜತಾಂತ್ರಿಕ ಮಾತುಕತೆಯ ಯತ್ನವನ್ನು ಮಾಡುತ್ತಿದೆ. ಸ್ವಲ್ಪ ಯಶಸ್ಸನ್ನೂ ಕಾಣುತ್ತಿದೆ. ಈ ನಡುವೆ ಸನಾತಬಿಗಳು ಜಾಗತಿಕ ಮಟ್ಟದಲ್ಲಿ ಹಿಂದೂಗಳು ಬಾಂಗ್ಲಾ ದೌರ್ಜನ್ಯದ ವಿರುದ್ಧ ಒಂದಾಗುವಂತೆ, ಹೋರಾಡುವಂತೆ ಕರೆ ಕೊಡುತ್ತಿದ್ದಾರೆ. ಇಂಥ ಯತ್ನ ಒಳ್ಳೆಯ ಬೆಳವಣಿಗೆ ಅಲ್ಲ. ಇದು ಮತ್ತೆಲ್ಲೋ ಹೋಗಬಹುದು.
ಒಟ್ಟಿನಲ್ಲಿ ಇಡೀ ಜಗತ್ತು ಪ್ರಜಾಪ್ರಭುತ್ವದ ಕಡೆಗೆ ವಾಲುತ್ತಿರುವಾಗ ಯಾವುದೇ ಒಂದು ಧರ್ಮದ ಹೆಸರಲ್ಲಿ ಪ್ರತ್ಯೇಕ ದೇಶ ಮಾಡಿಕೊಳ್ಳುವ ಯತ್ನ ಎಳ್ಳಷ್ಟೂ ಸರಿಯಲ್ಲ, ಹಾಗೂ ಎಷ್ಟು ಅಪಾಯಕಾರಿ ಎಂಬುದನ್ನು ಬಾಂಗ್ಲಾದ ಬೆಳವಣಿಗೆ ತೋರಿಸುತ್ತದೆ. ಅತ್ತ ಪಾಕಿಸ್ತಾನ ಕೂಡ ಇದೇ ದಾರಿಯಲ್ಲಿದ್ದು, ಅದಕ್ಕೆ ಸಲಹೆ ಕೊಡುತ್ತಿರುವವರು ಕೇವಲ ಮೂಲಭೂತವಾದಿಗಳಲ್ಲ, ಬದಲಿಗೆ ಮಹಾ ಭಯಂಕರ ಉಗ್ರರು, ಭಯೋತ್ಪಾದಕರು. ಇದು ಊಹೆಗೆ ನಿಲುಕದಷ್ಟು ಅಪಾಯಕಾರಿ. ಇಂಥ ಸಂದರ್ಭದಲ್ಲಿ ಮಧ್ಯ ಪಶ್ಚಿಮ ದೇಶಗ ಳಲ್ಲಿ ಪಕ್ಕಾ ಉಗ್ರರೇ ಆಡಳಿತದಲ್ಲಿದ್ದಾರೆ. ಒಟ್ಟಿನಲ್ಲಿ ಧರ್ಮದ ಹೆಸರಲ್ಲಿ ಪ್ರಪಂಚದ ಶಾಂತಿ ನಾಶವಾಗುತ್ತಿದೆ. ಶಾಂತಿ ಸ್ಥಾಪನೆಗಾಗಿ ಹುಟ್ಟಿಕೊಂಡ ಧರ್ಮಗಳು ಅದೇ ನೆಪದಲ್ಲಿ ಅಶಾಂತಿಗೆ ಕಾರಣವಾಗುತ್ತಿರುವುದು ಮಾತ್ರ ವಿಪರ್ಯಾಸ.
Sunday, 17 November 2024
ಮಣಿಪುರ ಗಲಭೆ ಹೇಳುವುದೇನು?
ಮೊದಲ ಮಹಾಯುದ್ಧದ ವೇಳೆಯಲ್ಲಿ ಬ್ರಿಟಿಷರು ಅಲ್ಲಿನ ಆದಿವಾಸಿಗಳನ್ನು ತಮ್ಮ ಪರವಾಗಿ ಹೋರಾಡಲು ಬಳಸಿಕೊಂಡರು. ಪ್ರತಿಯಾಗಿ ಬ್ರಿಟಿಷ್ ಸರ್ಕಾರ ಅಂಥ ಬುಡಕಟ್ಟಿನಲ್ಲಿ ಒಂದಾದ ಮೈತೇಯಿ ಜನರಿಗೆ ಗುಡ್ಡಗಾಡಿನ ಪ್ರದೇಶವನ್ನು ವಹಿಸಿ ಭೂಮಿಯ ಹಕ್ಕನ್ನು ಕೊಟ್ಟಿತು. ಅದುವರೆಗೆ ಅಲ್ಲಿ ತಮ್ಮಪಾಡಿಗೆ ತಾವು ಬದುಕುತ್ತಿದ್ದ ಆದಿವಾಸಿಗಳು ಭೂಮಿಯ ಹಕ್ಕಿನ ಕಾರಣದಿಂದ ತಮ್ಮ ತಲೆತಲಾಂತರದ ಪಶುಪಾಲನೆ ಜೀವನೋಪಾಯಕ್ಕೆ ಹೊಡೆತ ಬಿದ್ದ ಕಾರಣ ಪರಸ್ಪರ ಕಚ್ಚಾಡತೊಡಗಿದವು. ಹತ್ತಾರು ಬುಡಕಟ್ಟುಗಳಿದ್ದ ಮಣಿಪುರದಲ್ಲಿ ಮೈತೇಯಿ ನಾಗಾ ಹಾಗೂ ತಾವೇ ಗುರುತಿಸಿ ಹೆಸರಿಸಿದ ಕುಕಿ ಆದಿವಾಸಿಗಳಿದ್ದಾರೆಂದು ಬ್ರಿಟಿಷರು ದಾಖಲೆ ಕೊಡತೊಡಗಿದರು. ಇದರಿಂದ ಅಲ್ಲಿದ್ದ ಹತ್ತಾರು ಆದಿವಾಸಿಗಳು ಈ ಮೂರು ಪ್ರಮುಖ ಗುಂಪುಗಳಲ್ಲಿ ಗುರುತಿಸಿಕೊಳ್ಳಬೇಕಾಯಿತು. ಇದರಿಂದ ತಮ್ಮ ಆಚಾರ ವಿಚಾರಕ್ಕೆ ಪ್ರಾತಿನಿಧ್ಯ ಸಿಗದ ಆದಿವಾಸಿಗಳಲ್ಲಿ ಅಸಮಾಧಾನ ಹೊಗೆಯಾಡತೊಡಗಿತು. ಜೊತೆಗೆ ಮೂರು ಪ್ರಮುಖ ಪಂಗಡಗಳು ತಾವೇ ಇಲ್ಲಿನ ಮೂಲನಿವಾಸಿಗಳು, ಉಳಿದವರು ಹೊರಗಿನವರು ಎಂದು ಜಗಳ ಶುರುಮಾಡಿದರು. ಉಳಿದವರು ಕೂಡ ಇದೇ ಮಾತನ್ನು ಹೇಳುತ್ತ ಕಂದಕವನ್ನು ಅಗಲ ಮಾಡತೊಡಗಿದರು. ಅದರ ಪರಿಣಾಮ ಇಂದು ನಮ್ಮ ಮುಂದೆ ಇದೆ.
ಆದಿವಾಸಿಯಾಗಲಿ ಅಥವಾ ಯಾವುದೇ ಸಮುದಾಯವಾಗಲಿ, ತಮ್ಮ ಅನನ್ಯತೆಗೆ ಧಕ್ಕೆ ಬಂದಾಗ ತಿರುಗಿಬೀಳುತ್ತದೆ. ೧೮೫೭ರ ದಂಗೆ ಶುರುವಾದುದು ಕೂಡ ಇಂಥ ಕಾರಣಕ್ಕೇ ಆಗಿದೆ. ಅವರ ವಿರುದ್ಧ ಸ್ವಾತಂತ್ರ ಹೋರಾಟಕ್ಕೂ ಇದೇ ಕಾರಣ. ಅದರಿಂದ ಬ್ರಿಟಿಷರು ನಮ್ಮ ಜನರನ್ನು ಜಾತಿ ಧರ್ಮಗಳ ಹೆಸರಲ್ಲಿ ಹೇಗೆ ಸುಲಭವಾಗಿ ಒಡೆಯಬಹುದೆಂಬ ಪಾಠ ಕಲಿತು ತಾವು ಇಲ್ಲಿರುವ ತನಕ ಅದನ್ನು ಮುಂದುವರೆಸಿ ನಮ್ಮವರಿಗೆ ಅದನ್ನು ಕಲಿಸಿ ಬಳುವಳಿಯಾಗಿ ಕೊಟ್ಟುಹೋದರು. ಚಾಚೂ ತಪ್ಪದೇ ನಮ್ಮವರು ಇದನ್ನು ಮುಂದುವರೆಸಿಕೊAಡುಹೋಗುತ್ತಿದ್ದಾರೆ. ಜಾತಿ ಅಥವಾ ಸಮುದಾಯ ಆಧಾರಿತ ಮೀಸಲಾತಿ ಎಂಥ ಸಮಸ್ಯೆ ತರಬಹುದು ಎಂಬುದನ್ನು ಮಣಿಪುರದ ಇಂದಿನ ಗಲಾಟೆ ತೋರಿಸಿ ಎಚ್ಚರಿಕೆಯ ಗಂಟೆ ಬಾರಿಸಿದೆ. ಇದರಿಂದ ದೇಶದ ಆಡಳಿತಗಳು ಕಲಿಯಬೇಕಿದೆ.
Friday, 15 November 2024
ಕನಕರು ಕಲಿಸುವ ಪಾಠ
ಸಂತರು ಎಂದಲ್ಲ, ನಮ್ಮ ಪರಂಪರೆಯಲ್ಲಿ ಐರೋಪ್ಯ ಆಗಮನ ಆಗುವವರೆಗೂ ಇದ್ದ ದೃಷ್ಟಿಯೇ ಅದು. “ಆನು-ತಾನು” ಎಂಬುದಕ್ಕೆ ಇಲ್ಲಿ ಆಸ್ಪದವೇ ಇರಲಿಲ್ಲ. ಯಾರೋ ಒಬ್ಬಳು ವೇಶ್ಯೆ ಊರ ಹಿತಕ್ಕಾಗಿ ಕೆರೆ ಕಟ್ಟಿಸುತ್ತಾಳೆ. ಅವಳೇನೂ ತನ್ನ ಹೆಸರು ಶಾಶ್ವತವಾಗಿರಲಿ ಎಂದು ಬಯಸಲೇ ಇಲ್ಲ. ಅವಳ ಕೆಲಸ ಮಾತ್ರ ಶಾಶ್ವತವಾಗಿ ನಿಂತಿತು. ಇಂಥ ನಿದರ್ಶನಗಳು ನಮ್ಮ ಪರಂಪರೆಯಲ್ಲಿ ಅಸಂಖ್ಯ. ಜನಸಾಮಾನ್ಯರೆಲ್ಲ ಇರುವುದೇ ಹಾಗೆ. ಅವರಿಗೆ ಕೆಲಸ ಮುಖ್ಯ. ಹೆಸರಲ್ಲ. ಇಂಥ ಜನಸಾಮಾನ್ಯ ಪರಂಪರೆಯಿಂದ ಬಂದ ಕನಕರದೂ ಇದೇ ಮಾರ್ಗ. ಇವರೋ ಸಂತರಾದರು. ಆದರೆ ಇವರು ಜನಸಾಮಾನ್ಯರ ಪ್ರತಿನಿಧಿ ಎಂಬುದನ್ನು ಮರೆಯುವಂತಿಲ್ಲ.
ಕನಕರು ಇಂದು ಎರಡು ಕಾರಣಕ್ಕೆ ಮುಖ್ಯರಾಗುತ್ತಾರೆ. ತತ್ತ್ವ ದರ್ಶನಗಳೆಲ್ಲ ಸಂಸ್ಕೃತದಲ್ಲಿದ್ದ ಕಾಲದಲ್ಲಿ, ಅವರು ಘನ ತತ್ತ್ವಗಳನ್ನು ಕನ್ನಡದಲ್ಲಿ ಒಡಮೂಡಿಸಿದರು ಎಂಬುದು ಮೊದಲನೆಯದು. ಅವರ ದರ್ಶನವನ್ನು ಸಾರುವ ಮೋಹನತರಂಗಿಣಿ, ನಳಚರಿತೆ, ಹರಿಭಕ್ತಿಸಾರ, ನೃಸಿಂಹಸ್ತವ, ರಾಮಧಾನ್ಯಚರಿತೆ ಕೃತಿಗಳು, ಅಸಂಖ್ಯ ಕೀರ್ತನೆಗಳು, ಉಗಾಭೋಗ ಮತ್ತು ಮುಂಡಿಗೆಗಳು ಎಲ್ಲವೂ ಇರುವುದು ಕನ್ನಡದಲ್ಲಿ. ಸದಾ ಕಾಲ ನಮ್ಮನ್ನು ಆವರಿಸುವ “ನಾನು” ಎಂಬುದನ್ನು ಕಳಚಿಕೊಳ್ಳುವ ವಿಧಾನವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎನ್ನುವುದನ್ನು ಹೇಳಿ ಕೊಟ್ಟರು ಎಂಬುದು ಮತ್ತೊಂದು. ಶಿಷ್ಯರನ್ನು ಕುರಿತು ‘ನಿಮ್ಮಲ್ಲಿ ಮೋಕ್ಷಕ್ಕೆ ಯಾರು ಹೋಗುತ್ತೀರಿ?’ ಎಂದು ವ್ಯಾಸರಾಜರು ಕೇಳಿದಾಗ ಕನಕರು ‘ನಾನು ಹೋದರೆ ಹೋದೇನು’ ಎಂದು ಉತ್ತರಿಸಿದ್ದು ಬಹಳ ಅರ್ಥಗರ್ಭಿತ. ಈ ಚುಟುಕು ಉತ್ತರದಲ್ಲಿ ಪ್ರಜ್ಞೆಯೂ ಇದೆ, ದರ್ಶನವೂ ಇದೆ.
ನಾವಿಂದು ಬಸ್, ರೈಲು, ವಿಮಾನಗಳಲ್ಲಿ ಓಡಾಡುತ್ತೇವೆ; ಹೊಟೇಲುಗಳಲ್ಲಿ ಆಹಾರ ಸ್ವೀಕರಿಸುತ್ತೇವೆ. ನೂರಾರು ಜನ ಒಟ್ಟಿಗೇ ಇಲ್ಲೆಲ್ಲ ಪ್ರಯಾಣಿಸುತ್ತೇವೆ; ತಿನ್ನುತ್ತೇವೆ, ಕುಡಿಯುತ್ತೇವೆ. ಈ ವ್ಯವಸ್ಥೆಯನ್ನೇ ಗಮನಿಸಿ. ಬಸ್ಸು, ರೈಲು, ವಿಮಾನಗಳ ಚಾಲಕರು ಯಾವ ಜಾತಿ ಎಂದು ನೋಡುತ್ತೇವೆಯೇ? ಹೊಟೇಲಿಗೆ ಬಂದ ಪದಾರ್ಥ ಕೊಟ್ಟವರು, ಬೆಳೆದವರು, ಬೇಯಿಸಿದವರು ಯಾರು ಎಂದು ನೋಡುತ್ತೇವೆಯೇ? ಪುಸ್ತಕ, ಪತ್ರಿಕೆ ಓದುವಾಗ, ಟಿವಿ ನೋಡುವಾಗ, ಸಿನಿಮಾ ವೀಕ್ಷಿಸುವಾಗ ಯಾವಾಗಲಾದರೂ ಅವುಗಳ ಹಿಂದೆ ಕೆಲಸ ಮಾಡಿದ ನೂರಾರು ಕೈಗಳು ಯಾವ ಜಾತಿಯವು ಎಂದೇನಾದರೂ ತಲೆ ಕೆಡಿಸಿಕೊಳ್ಳುತ್ತೇವೆಯೇ? ಇಲ್ಲ. ಅವೆಲ್ಲ ಅನಗತ್ಯ. ಇಷ್ಟಾದರೂ ಜಾತಿ ಜಗಳಗಳು, ಕಚ್ಚಾಟಗಳು ನಿಂತಿವೆಯೇ? ಇಲ್ಲ. ಈ ವಿರೋಧಾಭಾಸವನ್ನು ಕನಕರು ಅಂದೇ ಕಂಡಿದ್ದಾರೆ. ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’ ಎಂಬ ಕೀರ್ತನೆಯಲ್ಲಿ ಅಡಗಿದ ಸತ್ಯ ಮತ್ತು ತತ್ತ್ವ ಇದೇ. ಅವರು ಹೇಳುತ್ತಾರೆ - ‘ಎಲ್ಲರೂ ಹುಟ್ಟುವ ದಾರಿ ಒಂದೇ, ತಿನ್ನುವ ಆಹಾರ ಒಂದೇ, ಕುಡಿಯುವ ನೀರೂ ಒಂದೇ, ಮತ್ತೆ ಈ ಕುಲದ ಭೇದವೇಕೆ?’ ಕನಕರು ಅಂದು ಕೇಳಿದ ಈ ಪ್ರಶ್ನೆಯನ್ನು ನಾಗರಿಕ ಸಮಾಜ ಇಂದಿಗೂ ಅರ್ಥಮಾಡಿಕೊಂಡಿಲ್ಲ.
ಯಾರೂ ಯಾವ ಜಾತಿ ಧರ್ಮದಲ್ಲೂ ಹುಟ್ಟುವುದಿಲ್ಲ; ಅವರವರಲ್ಲಿ ಜಾತಿ ಧರ್ಮಗಳು ಹುಟ್ಟಬೇಕಷ್ಟೆ. ‘ಎನ್ನದೆಂದು ತನ್ನದೆಂದು ಹೊನ್ನು ಹೆಣ್ಣು ಮಣ್ಣಿಗಾಗಿ ಬನ್ನಬಟ್ಟು ಬಾಯ ಬಿಡುವೆ ಬರಿದೆ ಮೋಹದಿ’ ಎಂದು ಅವರು ಮನುಷ್ಯರ ಸಾಮಾನ್ಯ ಸ್ವಭಾವವನ್ನು ಚಿತ್ರಿಸಿದ್ದಾರೆ. ಇಂಥವರೆಲ್ಲ ಒಂದೇ ಜಾತಿ ಧರ್ಮದವರು. ಕಷ್ಟಪಟ್ಟು ಬಳಲದೇ ಬರೀ ಸುಖ ಅರಸುವ ಕಾಯಕ್ಕೆ ಕೇಡು ಕಟ್ಟಿಟ್ಟದ್ದು ಎಂಬುದು ಕನಕರ ನುಡಿ.
ನಾವಿಂದು ಕನಕರು ಯಾರನ್ನು ಕುರಿತು ಹೇಳಿದ್ದಾರೋ ಹಾಗೆಯೇ ಇದ್ದೇವೆ. ನಮ್ಮ ನಮ್ಮ ಭಾಷೆಯನ್ನು ಪರಂಪರೆಯನ್ನು ಮರೆತಿದ್ದೇವೆ. ಅಂದು ಎಲ್ಲೆಡೆ ಮೆರೆಯುತ್ತಿದ್ದ ರಾಜಭಾಷೆಯಾಗಿದ್ದ ಸಂಸ್ಕೃತಕ್ಕೆ ಪ್ರತಿಯಾಗಿ ಕನ್ನಡದಲ್ಲೇ ದರ್ಶನವನ್ನು ಕಟ್ಟಿಕೊಟ್ಟ ಕನಕರು ಇಂಗ್ಲಿಷ್‌ನಲ್ಲಿನ ಜ್ಞಾನವನ್ನು ಕನ್ನಡದಲ್ಲೇ ಕಟ್ಟಿಕೊಳ್ಳಲು ನಮಗೆ ಇಂದು ಮಾದರಿಯಾಗಬೇಕಲ್ಲವೇ?
ಜೀವನದ ಅನಿತ್ಯತೆ ಮತ್ತು ಅನಿಶ್ಚಿತತೆಯನ್ನು ಅರಿತು ಇದ್ದ ಭೋಗಭಾಗ್ಯವನ್ನೆಲ್ಲ ಹಂಚಿ ಜನರಿಂದ ‘ಕನಕ’ ಎಂದು ಕರೆಯಿಸಿಕೊಂಡ ತಿಮ್ಮಪ್ಪ ನಾಯಕರು ಕಾವ್ಯಶಕ್ತಿ, ಭಕ್ತಿ ಮತ್ತು ಸಂತತನದಿAದ ಜಾತಿ, ಮತಗಳ ಎಲ್ಲೆಯನ್ನು ಮೀರಿದರು. ಆದರೆ ನಾವು ಒಬ್ಬೊಬ್ಬರೂ ಹತ್ತಾರು ಸೈಟು ಮಾಡಲು ಇಲ್ಲದ ಮಸಲತ್ತು ಮಾಡುತ್ತೇವೆ, ರಾಜಕೀಯ ಆರ್ಥಿಕ ಲಾಭ ಪಡೆಯಲು ಒಂದಲ್ಲ ಒಂದು ಜಾತಿಯಲ್ಲಿ ಗುರುತಿಸಿಕೊಳ್ಳಲು ಬಯಸುತ್ತೇವೆ. ಮಾಡಿದ ಸಣ್ಣಪುಟ್ಟ ಕೆಲಸಕ್ಕೂ ಹೆಸರು ಬರಬೇಕೆಂದು ಹಾತೊರೆಯುತ್ತೇವೆ. ಪ್ರಶಸ್ತಿ ಪುರಸ್ಕಾರಗಳಿಗೆ ಬೆನ್ನುಹತ್ತುತ್ತೇವೆ. ಇಲ್ಲಸಲ್ಲದ ಮಾರ್ಗದಿಂದ ಹಣ, ಹೊನ್ನು ಸಂಪಾದಿಸಲು ಹೆಣಗುತ್ತ ಒಳ್ಳೆಯವರಂತೆ ಕಾಣಿಸಿಕೊಳ್ಳಲು ಯತ್ನಿಸುತ್ತೇವೆ. ಅವರು ಇದನ್ನೆಲ್ಲ ಕಂಡವರೇ. ಹಾಗಾಗಿಯೇ ಕನಕರ ಕೀರ್ತನೆಗಳು ನಮ್ಮ ಇಂಥ ವರ್ತನೆಗೆ ಕನ್ನಡಿ ಹಿಡಿಯುತ್ತವೆ. ‘ಎಮ್ಮ ಅರ್ಥ ಎಮ್ಮ ಮನೆಯು ಎಮ್ಮ ಮಕ್ಕಳೆಂಬುವ ಹಮ್ಮು ನಿನಗೆ ಏಕೋ?’ ಎಂದೂ ‘ಅಂತರಂಗದೊಳಗೊಂದು, ಅರ್ಧ ದೇಹದೊಳಗೊಂದು ಚಿಂತನೆಯನುಗೊಳಲೇಕೋ’ ಎಂದೂ ‘ಹತ್ತು ಎಂಟು ಲಕ್ಷಗಳಿಸಿ ಮತ್ತೆ ಸಾಲದೆಂದು ಪರರರ್ಥಕಾಗಿ ಆಸೆಪಟ್ಟು ನ್ಯಾಯಮಾಡುವರೊ, ಬಿತ್ತಿಬೆಳೆವೆವೆಂದು ನೀವು ವ್ಯರ್ಥ ಚಿಂತೆ ಮಾಡಿ ಬರಿದೆ ಸತ್ತು ಹೋದ ಮೇಲೆ ನಿಮ್ಮ ಅರ್ಥವಾರಿಗೊ’ ಎಂದೂ ಕೇಳಿದ್ದಾರೆ. ವಿಜಯನಗರದಂಥ ಮಹಾನ್ ಸಾಮ್ರಾಜ್ಯದ ಏಳು ಬೀಳುಗಳೆರಡನ್ನೂ ಕಂಡವರು ಕನಕರು. ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವವರಿಗೆ ಅವರ ಈ ಮಾತು ಸಾಕು.
ಲೋಕದ ಸಮಸ್ತವನ್ನೂ ಕಂಡು ಅದರ ನಶ್ವರತೆಯನ್ನು ಅರಿತವರು ಕನಕರು. ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ತುತ್ತು ಹಿಟ್ಟಿಗಾಗಿ... ಅಂಗಡಿಗಳನು ಹೂಡಿ ವ್ಯಂಗ್ಯ ಮಾತುಗಳಾಡಿ ಭಂಗಬಿದ್ದು ಗಳಿಸುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ... ಬೆಲ್ಲದಂತೆ ಮಾತನಾಡಿ ಎಲ್ಲರನ್ನು ಮರುಳುಮಾಡಿ ಸುಳ್ಳುಬೊಗಳಿ ತಿಂಬುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂಬ ಅವರ ಕೀರ್ತನೆಯಲ್ಲಿ ನಮ್ಮೆಲ್ಲರ ಸುಳ್ಳಿನ ಜೀವನ ಬಯಲಾಗಿದೆ. ಕನಕರು ಅಂದು ಹೇಳಿದ ಮಾತುಗಳು ಇಂದಿಗೂ ಸತ್ಯವೆಂದು ಎಲ್ಲರೂ ಒಪ್ಪುತ್ತಾರೆ. ಅಂದ ಮೇಲೆ ಅವರ ದರ್ಶನವೂ ಸತ್ಯವೇ. ಅದನ್ನೇಕೆ ನಾವು ಪಾಲಿಸುತ್ತಿಲ್ಲ. ಪಾಲಿಸಲು, ಅನುಸರಿಸಲು ಅದೇನು ಕಷ್ಟವೇ? ಅರ್ಥವಾಗದ ಭಾಷೆಯಲ್ಲಿದೆಯೇ? ಅವರು ನುಡಿದ, ನಡೆದ ಮಾರ್ಗ ಅಷ್ಟು ಕಠಿಣವೇ? ಸಾಗಲು ದುರ್ಗಮವೇ?
ಸಂತರಾದ ಕನಕರು ತೋರಿದ ಮಾರ್ಗ ಅಸಾಧಾರಣವಲ್ಲ. ಎಲ್ಲರೂ ಅನುಸರಿಸಬಹುದಾದ ಸರಳ ಮಾರ್ಗ ಅದು. ಆದರೆ ನಾವು ಅದನ್ನು ಮರೆತಿದ್ದೇವೆ. ಈ ಭೂಮಿಗೆ ನಾವೆಲ್ಲ ಎಲ್ಲಿಂದಲೋ ಬಂದ ಅತಿಥಿಗಳು. ಎಷ್ಟು ಕಾಲ ಇರುತ್ತೇವೋ ಯಾರಿಗೂ ತಿಳಿದಿಲ್ಲ. ಅನ್ಯರ ಮನೆಗೆ ಹೋದಾಗ ನಾವೆಷ್ಟು ಎಚ್ಚರದಲ್ಲಿ ಇರುತ್ತೇವೋ ಅಷ್ಟೇ ಎಚ್ಚರದಲ್ಲಿ ಇಲ್ಲೂ ಇರಬೇಕಾದುದು ನಮ್ಮ ಕರ್ತವ್ಯ. ಏಕೆಂದರೆ ಇಲ್ಲಿರುವುದು ಯಾವುದೂ ನಮಗೆ ಯಾರಿಗೂ ಸೇರಿದ್ದಲ್ಲ. ಹೊಟ್ಟೆ ಬಟ್ಟೆಗಳ ಕನಿಷ್ಠ ಅಗತ್ಯ ಪೂರೈಕೆಯೊಂದಿಗೆ ಕಲೆ, ಸಾಹಿತ್ಯ, ಸಂಗೀತಗಳ ಆರಾಧನೆ ಮಾಡುವುದಷ್ಟೇ ನಮ್ಮ ಕೆಲಸ. ಅದರಿಂದ ಸಕಲ ಜೀವಜಗತ್ತಿಗೂ ಕ್ಷೇಮ ಎಂಬುದನ್ನು ತೋರಿಸಿದ್ದಾರೆ ಕನಕರು.
Sunday, 10 November 2024
ಮುಂಬೈ ಆರ್ಟ್ ಪ್ರದರ್ಶನದ ನೆಪದಲ್ಲಿ ಚಿತ್ರಕಲೆಯ ಸುತ್ತ...
ಮುಂಬೈನ ಪ್ರತಿಷ್ಠಿತ ಆರ್ಟ್ ಮುಂಬೈ ಎಂಬ ಕಲಾ ಪ್ರದರ್ಶನ ಮತ್ತೆ ಶುರುವಾಗಿದ್ದು ಇದೇ ನವೆಂಬರ್ ೧೪ರಿಂದ ೧೭ರವರೆಗೆ ನಡೆಯಲಿದೆ, ಇದಕ್ಕೆ ಅನೇಕ ವಿಶೇಷತೆಗಳಿವೆ.ಇದು ಮುಂಬೈನ ಪ್ರತಿಷ್ಠಿತ ಸೇವಾ ಸಂಸ್ಥೆಯಾಗಿದ್ದು ಇದರಲ್ಲಿ ಮುಂಬೈನ ಹೆಸರಾಂತ ಕಲಾವಿದರು ತಮ್ಮ ಸಹಯೋಗವನ್ನು ಸದಾ ಕಾಲ ನೀಡುತ್ತಾರೆ. ವಾಸ್ತವವಾಗಿ ಬ್ರಿಟಿಷರು ೧೮೮೭ರಲ್ಲಿ ಪಾಶ್ಚಾತ್ಯ ಕಲೆ ಮತ್ತು ಕಲಾವಿದರನ್ನು ಭಾರತದಲ್ಲಿ ಬೆಳೆಸಿ ಉತ್ತೇಜಿಸಲು ಶುರುಮಾಡಿದರು. ಅನಂತರ ಇದು ಕಲಾಶಾಲೆಯಾಗಿ ಮಾರ್ಪಟ್ಟು ಕಲಾವಿದರು ಸೂಕ್ತ ತರಬೇತಿ ಪಡೆಯಲು ಸಾಧ್ಯವಾಯ್ತು. ಇದಕ್ಕೆ ಆ ಕಾಲದ ಮಹಾ ಸಮಾಜ ಸೇವಕ ಜೆಮ್ ಶೆಡ್ ಜಿ ನೆರವುನ ನೀಡಿದ್ದರಿಂದ ಜೆ ಜೆ ಸ್ಕೂಲ್ ಆಫ್ ಆರ್ಟ ಎಂದು ಹೆಸರಾಯ್ತು. ಇಂದು ಅದು ವಿಶ್ವದಲ್ಲೇ ಹೆಸರಾಂತ ಕಲಾ ಸಂಸ್ಥೆ. ಅಲ್ಲಿಗೆ ಪ್ರಾಂಶುಪಾಲರಾಗಿ ಬಂದ ಮೆಸಸ, ಟರ‍್ರಿ, ಗ್ರಿಫಿತ್ ಮೊದಲಾದವರು ಪಾಶ್ಚಾತ್ಯ ಕಲೆಯ ಬದಲು ದೇಸೀ ಕಲೆಗೆ ಉತ್ತೇಜನ ಕೊಡಲಾರಂಭಿಸಿದರು. ಕರ್ನಾಟಕದಲ್ಲಿ ಚಿತ್ರಕಲೆಗೆ ಬಹಳ ಹಿಂದಿನಿಂದಲೂ ಸಾಕಷ್ಟೊ ಪ್ರೋತ್ಸಾಹ ದೊರೆತಿದೆ. ಆಧುನಿಕ ಕಾಲದಲ್ಲಿ ಮೈಸೂರು ಅರಸರು ಚಿತ್ರಕಲೆಗೆ ಇನ್ನಿಲ್ಲದ ಬೆಂಬಲ ನೀಡಿ ಬೆಳೆಸಿದರು. ಜೊತೆಗೆ ಅವರ ಪ್ರೋತ್ಸಾಹದಿಂದ ಮೈಸೂರು ಶೈಲಿಯ ಚಿತ್ರಕಲೆ ಬೆಳವಣಿಗೆ ಕಂಡು ಪ್ರಸಿದ್ಧವಾಯಿತು. ಸ್ವಾತಂತ್ರ್ಯ ನಂತರ ರಾಜ್ಯ ಸರ್ಕಾರ ಆಸಕ್ತಿ ವಹಿಸಿ ಖ್ಯಾತ ಕಲಾವಿದ ರಾಗಿದ್ದ ವೆಂಕಟಪ್ಪನಮವರ ಹೆಸರಲ್ಲಿ ಗ್ಯಾಲರಿ ಶುರು ಮಾಡಲಾಯಿತು. ಜೊತೆಗೆ ಮೈಸೂರಿನಲ್ಲಿ ರಾಜರ ನೆನಪಿನಲ್ಲಿ ಚಾಮರಾಜೇಂದ್ರ ಅವರ ಹೆಸರಲ್ಲಿ ಕಲಾ ತರಬೇತಿ ಶಾಲೆ ಶುರು ಮಾಡಲಾಯಿತು, ಜೊತೆಗೆ ಆಧುನಿಕ ಕಲಾ ತರಬೇತಿಗಾಗಿ ಚಿತ್ರಕಲೆಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡಲಾರಂಭಿಸಲಾಯಿತು. ಇವೆಲ್ಲ ಪ್ರಭಾವದಿಂದ ರಾಜ್ಯದ ವಿವಿಧ ಕಡೆಗಳ ವಿಶ್ವವಿದ್ಯಾನಿಲಯಗಳು ಕಲೆಯಲ್ಲಿ ಇಂಥ ಪದವಿಗಳನ್ನು ನೀಡುತ್ತಿವೆ. ಇವೆಲ್ಲಕ್ಕೆ ಶಿಖರ ಅನಿಸುವಂತೆ ಸರ್ಕಾರ ಲಲಿತ ಕಲೆಗಳನ್ನು ಉತ್ತೇಜಿಸಲು ಅಕಾಡೆಮಿಯನ್ನು ಹೊಂದಿದೆ. ಇದು ನಿರಂತರ ಕ್ರಿಯಾಶೀಲವಾಗಿದೆ. ಕಲಾವಿದರಿಗೆ ಪ್ರಶಸ್ತಿ ಕೊಡುವುದು, ಕೃತಿಗಳನ್ನು ಪ್ರಕಟಿಸುವುದು ಇತ್ಯಾದಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.ಜೊತೆಗೆ ಅನೇಕ ಖಾಸಗಿ ಸಂಸ್ಥೆಗಳು ಕೂಡ ಇಂಥ ಕೆಲಸಕ್ಕೆ ಕೈಜೋಡಿಸಿವೆ. ಚಿತ್ರಕಲಾ ಪರಿಷತ್ತಿಗೂ ಸರ್ಕಾರ ಸಾಕಷ್ಟು ಅನುದಾನ ಮತ್ತು ಉತ್ತೇಜನ ಕೊಡುತ್ತಿದೆಯಲ್ಲದೇ ಖಾಸಗಿ ಸಂಸ್ಥೆಗಳಿಗೂ ನೆರವು ಕೊಡುತ್ತಿದೆ. ಇವೆಲ್ಲ ಬೆಳವಣಿಗೆಯಿಂದ ರಾಜ್ಯಾದ್ಯಂತ ಕಲಾ ಪ್ರದರ್ಶನ ಗ್ಯಾಲರಿಗಳು ತಲೆ ಎತ್ತಿ ಸ್ಥಳೀಯ ಕಲಾವಿದರಿಗೆ ಉತ್ತೇಜನ ನೀಡುತ್ತಿವೆ. ಪೂರಕವಾಗಿ ಗುಲ್ಬರ್ಗ, ಧಾರವಾಡ ಮತ್ತು ಮಂಗಳೂರಿನಂಥ ಸ್ಥಳಗಳಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಕೊಡಲಾಗುತ್ತಿದೆ. ಆದರೆ ಆಗಾಗ ಬೆಂಗಳೂರಿನಲ್ಲಿ ನಡೆಯುವಂತೆ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಎಲ್ಲ ಕಡೆಗೂ ಆಗುತ್ತಿಲ್ಲ, ಸರ್ಕಾರ ಇಂಥ ಪ್ರಯತ್ನಗಳಿಗೆ ಹೆಚ್ಚಿನ ಉತ್ತೇಜನ ಕೊಡಬೇಕಿದೆ.
ಮುಂಬೈನಂತೆ ನಮ್ಮಲ್ಲೂ ಅಂಥ ಕಲಾ ಪ್ರದರ್ಶನವನ್ನು ಪ್ರತಿವರ್ಷ ಏರ್ಪಡಿಸಿ ನಡೆಸುವುದು ನಮ್ಮವರಿಗೆ ಕಷ್ಟವಲ್ಲ. ಅಷ್ಟಾಗುವಂತಾದರೆ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ನೆರವು ಮತ್ತು ವೇದಿಕೆಗಳು
ದೊರೆಯುವಂತಾಗುತ್ತದೆ.ಆದರೆ ಅನೇಕ ಗ್ಯಾಲರಿಗಳು ಕಲಾ ಪ್ರದರ್ಶನಕ್ಕೆ ಉಚಿತವಾಗಿ ಅವಕಾಶ ಕೊಡುವುದಿಲ್ಲ, ಅವು ಬಾಡಿಗೆ ಮತ್ತು ನಿರ್ವಹಣಾ ವೆಚ್ಚ ಪಡೆಯುತ್ತವೆ. ಅದರಲ್ಲಿ ಆಕ್ಷೇಪಿಸುವಂಥದ್ದೇನಿಲ್ಲ, ಏಕೆಂದರೆ ಅಲ್ಲಿ ಕಲಾ ಪ್ರದರ್ಶನ ಏರ್ಪಡಿಸುವ ಕಲಾವಿದರು ತಮ್ಮ ಚಿತ್ರಗಳನ್ನು ಮಾರಾಟ ಮಾಡುತ್ತಾರೆ, ಬಾಡಿಗೆ ಕೊಡುವ ಮೂಲಕ ಅವರು ಕಲೆಗೆ ಮತ್ತೆ ಪ್ರೋತ್ಸಾಹ ಕೊಟ್ಟಂತಾಗುತ್ತದೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಅಂದಂತೆ. ಪ್ರತೀ ಬಾರಿ ಬೆಂಗಳೂರಲ್ಲಿ ಚಿತ್ರಕಲಾ ಪರಿಷತ್ತಿನ ವತಿಯಿಂದ ಕಲಾ ಉತ್ಸವ ಏರ್ಪಟ್ಟಾಗ ಅದು ಜಾತ್ರೆಯ ಬದಲು ಕಲಾ ಉತ್ಸವ ಅನಿಸುವ ಸಂಭ್ರಮ ಕಾಣಿಸುತ್ತದೆ. ನಾಡಿನ ಎಲ್ಲ ಕಡೆಗಳಲ್ಲಿ ಇಂಥ ಉತ್ಸವಗಳು ಒಂದಲ್ಲ ಒಂದುಕಡೆ ಸದಾ ಕಾಲ ನಡೆಯುವಂತಾಗಬೇಕು. ಜೊತೆಗೆ ಲಲಿತ ಕಲಾ ಅಕಾಡೆಮಿಯ ತಾಲ್ಲೂಕು ಅಥವಾ ಜಿಲ್ಲಾ ಘಟಕಗಳು ಆರಂಭವಾಗಿ ಅವು ಸ್ಥಳೀಯ ಮಟ್ಟದಲ್ಲಿ ಇಂಥ ಚಟುವಟಿಕೆಗೆ ಮುಂದಾಗಬೇಕು. ಇವೆಲ್ಲವುಗಳ ಜೊತೆಗೆ ಅತ್ಯಂತ ಪುರಾತನವಾದ ಜನಪದ ವರ್ಣ ಚಿತ್ರಗಳ ವರ್ಣ ಗಾರಿಕೆಯ ಪುನರುತ್ಥಾನಕ್ಕೆ ಸಂಘ ಸಂಸ್ಥೆಗಳು ಕೂಡಲೇ ಮುಂದಾಗಬೇಕಾದ ಜರೂರು ಇದೆ. ಏಕೆಂದರೆ ಇಂಥ ಪರಂಪರೆಯ ಜನಪದ ಕಲಾವಿದರು ಸದಯ ದೊರೆಯುವುದೇ ಕಷ್ಟ. ಬೆರಳೆಣಿಕೆಯ ಅವರು ಎಲ್ಲಿ ದ್ದಾರೆಂದು ಹುಡುಕುವ ಅವರ ಜ್ಞಾನವನ್ನು ಮರಳಿ ಪಡೆದು ಹಂಚುವ ಕೆಲಸ ಅಷ್ಟು ಸುಲಭವಲ್ಲ.
ಆಧುನಿಕ ಕಲಾ ಪ್ರಪಂಚದ ವ್ಯವಹಾರ ಜನಪದ ಕಲೆಯಂತಲ್ಲ, ಇಲ್ಲಿ ಸಾವಿರಾರು ಗೂಗಳ ಒಳಗೆ ಕಲೆ ಕೈಗೆಟಕುವುದಿಲ್ಲ, ಹೆಸರಂತ ಕಲಾವಿದರ ಕಲಾಕೃತಿಗಳು ಕೋಟ್ಯಂತರ ಬೆಲೆ ಬಾಳುತ್ತವೆ, ಹೀಗಾಗಿ ಇಂದಿನ ಚಿತ್ರಕಲಾ ಪ್ರಪಂಚ ಜನ ಸಾಮಾನ್ಯರ ಅದರಲ್ಲೂ ಬಡವರಿಗೆ ಗಗನ ಕುಸುಮವೇ ಆಗಿದೆ. ಕಲೆಯಲ್ಲಿ ಆಸಕ್ತ ಇದ್ದರೂ ವರ್ಣ ಚಿತ್ರವನ್ನು ಕೊಳ್ಳುವ ಬಯಕೆ ಇದ್ದರೂ ಸಾಮಾನ್ಯರಿಗೆ ಅಷ್ಟು ಬೆಲೆ ಕೊಟ್ಟು ಖರೀದಿಸಲು ಸಾಧ್ಯವಾಗುವುದಿಲ್ಲ, ಚಿತ್ರಗಳ ಬೆಲೆ ಕ್ಯಾನ್ವಾಸ್, ವರ್ಣ ಮೊದಲಾದ ಪ್ರಾಥಮಿಕ ಸಾಮಗ್ರಿಗಳ ಮೂಲ ಬೆಲೆಯನ್ನು ಆಧರಿಸಿದೆಯಲ್ಲದೇ ಕಲಾವಿದನ ಸೃಜನ ಶೀಲತೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಜನಸಾಮಾನ್ಯರು ತಮ್ಮ ಕೈಗೆಟಕುವ ಕಯಾಲೆಂರ‍್ಗಳನ್ನು ಕೊಂಡು ತೃಪ್ತಿ ಪಡೆಯುತ್ತಾರೆ. ಈ ಎಲ್ಲ ಕಾರಣಗಳಿಂದ ಹೊಸಬಗೆಯ ಹಾಗೂ ಆಕರ್ಷಕ ವರ್ಣ ಚಿತ್ರಗಳನ್ನು ಸಿರಿವಂತರು ಮಾತ್ರ ತಮ್ಮ ಹವ್ಯಾಸವಾಗಿ ಕೇಳಿದಷ್ಟು ಬೆಲೆ ಕೊಟ್ಟು ಖರೀದಿಸುವ ಅವಕಾಶವಿದೆ. ಈ ವಿಷಯದಲ್ಲಿ ಸರ್ಕಾರ ಏನೂ ಮಾಡುವ ಸ್ಥಿತಿಯಲ್ಲಿಲ್ಲ. ಅದೇನಿದ್ದರೂ ಜನರಲ್ಲಿ ಆಸಕ್ತಿ ಹುಟ್ಟಿಸುವ ಕೆಲಸವನ್ನು ಮಾತ್ರ ಮಾಡಬಹುದು, ಅದಾಗುತ್ತಿದೆ. ಇದು ಉತ್ತಮ ಬೆಳವಣಿಗೆ. ದೇಶದ ಜೈಪುರದಲ್ಲಿ ಮೊದಲು ಜೈಪುರ ಲಿಟ್ ಫೆಸ್ಟ ಎಂದು ಒಂದು ಕಡೆ ಶುರುವಾದ ಸಾಹಿತ್ಯ ಉತ್ಸವ ಇಂದು ಬಹುತೇಕ ಎಲ್ಲ ಊರುಗಳಲ್ಲೂ ಆಯಾ ಊರುಗಳ ಹೆಸರಿನೊಂದಿಗೆ ಶುರುವಾಗಿರುವಂತೆ, ಮುಂಬೈನ ಆರ್ಟ್ ಫೆಸ್ಟ್ ಎಲ್ಲ ಕಡೆಗಳಲ್ಲೂ ಸದ್ಯ ಶುರುವಾಗುತ್ತದೆಂದು ಬಯಸುವುದರಲ್ಲಿ ಅರ್ಥವಿದೆ. ನಮ್ಮ ಜನಕ್ಕೆ ಇಂಥ
ಬೆಳವಣಿಗೆ ಹುಡುಕುವುದು ಕಷ್ಟವಲ್ಲ, ಬೆಂಗಳೂರಲ್ಲಿ ಸಂಪ್ರದಾಯದ ಹೆಸರಲ್ಲಿ ನಡೆದುಬರುತ್ತಿದ್ದ ಕಡ್ಲೆಕಾಯಿ ಪರಿಷೆಯನ್ನು ನೋಡಿ. ಇದರ ಪ್ರಭಾವದಿಂದ ರಾಜ್ಯದ ಅನೇಕ ಕಡೆಗಳಲ್ಲಿ ಕಡಲೆಕಾಯಿ ಪರಿಷೆಗಳು ಶುರುವಾಗಿವೆ ಬೆಂಗಳೂರು ಪಕ್ಕದನೈಸ್ ರಸ್ತೆಯಲ್ಲಿ, ಬಿಡದಿ ಸಮೀಪದಲ್ಲಿ ಕೂಡ ಇದು ನಡೆಯುತ್ತಿರುವುದನ್ನು ಗಮನಿಸಬಹುದು. ಹೀಗೆಯೇ ಆರ್ಟ್ ಫೆಸ್ಟ್ ಕೂಡ ಹರಡಲಿ.
Friday, 8 November 2024
ಪ್ರಾಚೀನ ಕಾವ್ಯಗಳಲ್ಲಿ ಆಧುನಿಕ ಸಂಗತಿಗಳ ಚಿತ್ರಣ
ಆತನ ವಿಕ್ರಮಾರ್ಜುನ ವಿಜಯ ಅಥವಾ ಪಂಪ ಭಾರತದ ಒಂದು ವಿವರ. ಅರ್ಜುನ ಲೋಕಸಂಚಾರ ಮಾಡುತ್ತಾ ಇರುವಾಗ ಒಂದೆಡೆ ಯಾತ್ರೆಗೆ ಬರುವ ಅರ್ಜುನ ಒಮ್ಮೆ ಒಂದು ಮದ್ಯದಂಗಡಿಗೆ ಬರುತ್ತಾನೆ. ಅಲ್ಲಿ ಕುಡುಕರು ಮದ್ಯ ಸೇವಿಸುವ ಮುನ್ನ ಸ್ವಲ್ಪ ಮದ್ಯವನ್ನು ದೇವರಿಗೆ ನೈವೇದ್ಯ ಅನ್ನುವ ರೀತಿಯಲ್ಲಿ ಎಲ್ಲ ದಿಕ್ಕುಗಳಿಗೂ ಪ್ರೋಕ್ಷಿಸಿ ಚಾಕಣವೆಂಬ ಹುರಿದ ಮಾಂಸದ ತುಂಡನ್ನು ಸ್ವಲ್ಪ ತೆಗೆದಿಟ್ಟು ಅನಂತರ ಸೇವನೆಗೆ ತೊಡಗಿದ ಚಿತ್ರಣ ಬರುತ್ತದೆ. ಮುಂದೆ ಬರುವ ಮತ್ತೊಬ್ಬ ಕೃತಿಕಾರ ಬಾಹುಬಲಿ ಪಂಡಿತನ ಕೃತಿ ಎಲ್ಲ ಕೃತಿಗಳನ್ನೂ ಈ ವಿಷಯದಲ್ಲಿ ಮೀರಿಸುತ್ತದೆ. ಆತ ಕ್ಷತ್ರಿಯ ಸರಿಯಾಗಿದೆ. ಆತ ಎಲ್ಲಿ ಬೇಕಾದರೂ ಹೋಗುವ ಸ್ವಾತಂತ್ರö್ಯವಿದೆ. ಆದರೆ ಕೆಲವು ಜೈನ ಪುರಾಣಕಾವ್ಯಗಳಲ್ಲಿ, ಉದಾಹರಣೆಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೧೪ನೆಯ ಶತಮಾನದ ಬಾಹುಬಲಿ ಪಂಡಿತನಿಗೆ ವಿಶಿಷ್ಟ ಸ್ಥಾನವಿದೆ. ಈತ ಗೊಮ್ಮಟನಾಥ ಚರಿತೆಯನ್ನು ಸಂಸ್ಕೃತದಲ್ಲೂ ಧರ್ಮನಾಥ ಪುರಾಣವನ್ನು ಕನ್ನಡದಲ್ಲೂ ರಚಿಸಿದ್ದಾನೆ. ಸಂಸ್ಕೃತ ಭಾಷೆಯ ಹರಿಚಂದ್ರನ ಧರ್ಮಾಭ್ಯುದಯ ಕೃತಿಯನ್ನು ಆಧರಿಸಿ ಕನ್ನಡದಲ್ಲಿ ಧರ್ಮನಾಥ ಪುರಾಣವನ್ನು ರಚಿಸಿದ್ದಾನೆ. ಧರ್ಮನಾಥ ಪುರಾಣದಲ್ಲಿ ಬಾಹುಬಲಿ ಪಂಡಿತನು ಆಸಕ್ತಿಕರವಾದ ಸಮಕಾಲೀನ ಜನಜೀವನ ವಿವರವನ್ನು ಕಾಣಿಸುತ್ತಾನೆ. ಈ ಕೃತಿಯಲ್ಲಿ ಬರುವ ಹೆಂಡದ ಅಂಗಡಿಯ ವಿಸ್ತಾರವಾದ ವರ್ಣನೆ ಇದಕ್ಕೆ ಮೂಲ ಎನಿಸಿದ ಉತ್ತರ ಪುರಾಣ ಮತ್ತು ಚಾವುಂಡರಾಯ ಪುರಾಣಗಳಲ್ಲಿ ಕಾಣಿಸುವುದಿಲ್ಲ. ಅದೇ ರೀತಿ ಪ್ರಸ್ತುತ ಕಾವ್ಯದಲ್ಲಿ ಶೃಂಗಾರ ವರ್ಣನೆಯನ್ನು ಕೂಡ ಅತ್ಯಂತ ರಸಭರಿತವಾಗಿ ವರ್ಣಿಸುತ್ತಾನೆ. ಒಟ್ಟಿನಲ್ಲಿ ವರ್ಣನೆ ಎಂದರೆ, ಬಾಹುಬಲಿ ಪಂಡಿತನಿಗೆ ಇನ್ನಿಲ್ಲದ ಪ್ರೀತಿ. ರೂಪಕ ಪ್ರತಿಮೆಗಳನ್ನು ಬಳಸಿ ಕೆಲಮೊಮ್ಮೆ ಅವಿಲ್ಲದೆ ಶಬ್ಧ ಚಿತ್ರದಲ್ಲಿ ಎಲ್ಲ ವರ್ಣನೆಯನ್ನು ಕಟ್ಟಿಕೊಡುತ್ತಾನೆ. ಉದಾಹರಣೆಗೆ;
“ಪಿಂದೆ ಕುಳ್ಳಿರ್ದ ದೇವಿಯ
ನಂದು ನೃಪಾಳಂ ಮಲಂಗೆ ಕಳಶಕುಚಂಗಳ್
ಸಂಧಿಸೆ ಬೆನ್ನಂ ಸೋಂಕಲ್
ಕುಂದದ ಸುಖದಿಂದಮೊಂದಿ ತಣ್ಣನೆ ತಣಿದಂ” (೧೪-೫೦) ಈ ಸಾಲುಗಳಲ್ಲಿ ದಣಿದ ರಾಜ ತನ್ನ ಪತ್ನಿಗೆ ಒರಗಿದ ಒಂದು ಸಣ್ಣ ಚಿತ್ರಣವನ್ನು ಶೃಂಗಾರಾತ್ಮಕವಾಗಿ ಕವಿ ವರ್ಣಿಸಿದ ರೀತಿ ಅನನ್ಯವಾಗಿದೆ. ಇದೇ ರೀತಿ
ಹಿಡಿಯೊಳಡಂಗಿ ತೋರ್ಪ ನಡು ವೃತ್ತಕುಚಂಗಳ ಭಾರದಿಂ ಕರಂ
ನಡುಗೆ ನಿತಂಬಭಾಗ ಘನಭಾರದೆ ಮೆಲ್ಲನೆ ಗುಜ್ಜು ಮೆಟ್ಟತುಂ
ನಡೆವಡಿಗಳ್ ಪರಿಸ್ಖಳಿಸಿ ಭೂತಳಪಾಲನ ಪಿಂದುಗೊಂಡು ಕೈ
ವಿಡಿದು ಪರಸ್ಪರಂ ನಡೆದು ಬಂದುದು ವಿಶ್ವವಿಳಾಸಿನೀಕುಳಂ” (೧೪-೬೬)
ಹೀಗೆ ಧರ್ಮನಾಥ ಮಹಾರಾಜನ ವಿವಿಧ ಪ್ರಸಂಗಳ ವರ್ಣನೆಯನ್ನು ಮನತಣಿಯುವಂತೆ ಮಾಡುತ್ತಾನೆ. ಕವಿಯ ಕವಿತಾ ಸಾಮರ್ಥ್ಯ ಈತ ಬಳಸುವ ವೀಕ್ರೀಡಿತಗಳು, ಸ್ರಗ್ಧರೆ, ಮಹಾಸ್ರಗ್ಧರೆ, ಮಾಲಾ ಮತ್ತು ವಿಕ್ರೀಡಿತಗಳು ಹಾಗೂ ಕಂದಪದ್ಯಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ. ಉದಾಹರಣೆಗೆ ಮೇಲ್ಕಂಡ ಪದ್ಯ ಭಾಗಗಳನ್ನು ಗಮನಿಸಬಹುದು.
ಇದು ಬಾಹುಬಲಿ ಪಂಡಿತನ ಸ್ವತಃ ವಿವರಣೆ. ತನ್ನ ಕಾಲದ ಜೀವನವನ್ನು ಇಲ್ಲಿ ಕವಿ ಚಿತ್ರಿಸುತ್ತಾನೆ. ಇದರಲ್ಲಿ ವಿಕ್ರಮಾರ್ಜುನ ವಿಜಯ ಕೃತಿಯಲ್ಲಿ ಅರ್ಜುನನ್ನು ಪಂಪ ಊರೆಲ್ಲ ಸುತ್ತಿಸಿ ಸೂಳೆಗೇರಿ ಇತ್ಯಾದಿಗಳನ್ನು ವಿವರಿಸುವ ಪ್ರಬಾವ ದಟ್ಟವಾಗಿ ಕಾಣಿಸುತ್ತದೆ. ಹಾಗೆ ನೋಡಿದರೆ ಈ ಬಗೆಯ ಚಿತ್ರ ಪಂಪನನ್ನು ಬಿಟ್ಟರೆ ವಿಸ್ತಾರವಾಗಿ ಕಾಣಿಸುವುದು ಬಾಹುಬಲಿ ಪಂಡಿತನಲ್ಲಿಯೇ. ಈ ಕೃತಿಯ ೧೩೪- ೧೩೭ರ ವರೆಗಿನ ಪದ್ಯಗಳು ಈ ಬಗೆಯ ಚಿತ್ರಣವನ್ನು ವಿಸ್ತಾರವಾಗಿ ಕೊಡುತ್ತವೆ. ಹೆಂಡದ ಅಂಗಡಿಯ ಸಮಗ್ರ ಚಿತ್ರಣವನ್ನು ಕಣ್ಣು ಕಟ್ಟುವಂತೆ ಚಿತ್ರಿಸುತ್ತಾನೆ; ಉದಾಹರಣೆಗೆ ವಿಟ ಮತ್ತು ಸೂಳೆಯರ ವರ್ತನೆಯನ್ನು ಪದ್ಯವೊಂದರಲ್ಲಿ ಚಿತ್ರಿಸುತ್ತಾನೆ.
ರವಿಬಿಂಬಂ ಪ್ರತಿಬಿಂಬಿಸಿರ್ದದರೊಳಂ ತೋರುತ್ತಿರಲ್ ಕಂಡು ಮ
ದ್ಯಮನಾಸ್ವಾದಿಸುತಿರ್ದವಳ್ ಬೆದರ ಕಂಪಂಗೊಂಡು ನೀನಾರೊ ಮಾ
ನವನೋ ದೈವನೋ ಪೇಳುಪೇಳೆನಗೆನುತ್ತುಂ ಪೋಗುಪೋಗೆಂದು ಡೊಂ
ಗುವ ಕೈಯಂ ಮಿಗೆ ನೀಡಿ ಮತ್ತೆ ಬಲಿದೌಡಂ ಕಚ್ಚುತಂ ನೂಂಕಿದಳ್” (೧೦-೧೩೫)
ಇದರಲ್ಲಿ ಕುಡುಕರ ವರ್ತನೆ ಅತ್ಯಂತ ಸುಂದರವಾಗಿ ಮೂಡಿಬಂದಿದೆ. “ಪದ್ಯ ೧೩೬ರ ಅನಂತರದಲ್ಲಿನ ವಚನದಲ್ಲಿ ‘ಕಳ್ಳಂಕುಡಿಯಡಗಂ ತಿಂದದರಮಹಿಮೆಯಂ ಮೆಚ್ಚಿಬಿಚ್ಚತಂ ನಡಿದೊರ್ವರ್ವರ ನಗೆಮೊಗಮಂ ನೋಡಿ’ ಎಂದು ಇದೆ.
ಬಾಹುಬಲಿ ಪಂಡಿತ ಒಬ್ಬ ಯತಿ. ಯತಿಗೆ ನಿಷಿದ್ಧ ಎಂದು ಈಗ ನಾವೆಲ್ಲ ಭಾವಿಸಿದ ಗ್ರಹಿಕೆಗೆ ವಿರುದ್ಧವಾದ ಚಿತ್ರಣವನ್ನು ಕೊಡುತ್ತಾನೆ. ನಿಜವಾಗಿ ಸಂನ್ಯಾಸಿಯಾದವನಿಗೆ ಇಡೀ ಲೋಕದ ಜನಜೀವನದ ನೇರ ಅನುಭವ ಸಹಜವಾಗಿ ಇರುತ್ತಿತ್ತು. ಆತ ಸದಾ ಕಾಲ ಜನರೊಂದಿಗೆ ಇದ್ದು ಲೋಕ ಸುತ್ತುತ್ತಾ ಜೀವನವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಆನಂತರ ಬದುಕಿನ ಅಂತ್ಯಭಾಗದಲ್ಲಿ ಸಂನ್ಯಾಸಿಯಾಗುತ್ತಿದ್ದ. ಇಷ್ಟರಲ್ಲಿ ಮನುಷ್ಯ ಜೀವನದ ಎಲ್ಲ ಬಗೆಯ ಸಹಜ ಅನುಭುವಗಳು ಅವನಿಗೆ ಆಗಿರುತ್ತಿದ್ದವು ಮತ್ತು ಲೋಕದ ಬಗ್ಗೆ ಯಾವ ಆಸಕ್ತಿಯೂ ಉಳಿದಿರುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ಆತ ವೈರಾಗ್ಯ ಹೊಂದುವುದು ಕಷ್ಟವಾಗುತ್ತಿರಲಿಲ್ಲ. ಬಹುಶಃ ಬಾಹುಬಲಿ ಯತಿ ಈ ಬಗೆಯ ಮಾಗಿದ ವ್ಯಕ್ತಿತ್ವ ಉಳ್ಳವನಾಗಿರಬೇಕು ಎಂಬುದು ಇವನು ಮಾಡುವ ಬದುಕಿನ ವಿವಿಧ ಸನ್ನಿವೇಶಗಳ ವರ್ಣನೆಗಳಿಂದ ಊಹಿಸಲು ಸಾಧ್ಯವಿದೆ. ಈತ ಮನುಷ್ಯ ಜೀವನ ಮಾತ್ರವಲ್ಲದೆ ಪರಿಸರವನ್ನು ಕೂಡ ಅಷ್ಟೇ ಪ್ರೀತಿಯಿಂದ ಮುಕ್ತವಾಗಿ ಚಿತ್ರಿಸುತ್ತಾನೆ. ಪರಿಸರ ಅಥವಾ ನಿಸರ್ಗದ ಸನ್ನಿವೇಶವನ್ನು ಮನುಷ್ಯ ಜೀವನಕ್ಕೆ ಅನ್ವಯಿಸಿ ವಿವರಿಸುವುದರಲ್ಲಿ ಬಾಹುಬಲಿ ಪಂಡಿತ ನಿಜಕ್ಕೂ ಇತರ ಕವಿಗಳಿಂದ ಭಿನ್ನವಾಗಿ ನಿಲ್ಲುತ್ತಾನೆ. ಒಬ್ಬ ಸಂನ್ಯಾಸಿ ನಿಜವಾಗಿ ಮನುಷ್ಯ ಜೀವನವನ್ನು ಹೇಗೆ ನೋಡುತ್ತಾನೆ ಎಂಬುದು ಬಾಹುಬಲಿ ಪಂಡಿತನ ಕಾವ್ಯದಿಂದ ಸ್ಪಷ್ಟವಾಗಿ ಕಂಡುಬರುತ್ತದೆ. ಬಾಹುಬಲಿ ಪಂಡಿತ ಸಂಸ್ಕೃತ ಸಾಹಿತ್ಯಲೋಕದಲ್ಲಿ ಕಾಣಿಸುವ ವಾತ್ಸö್ಯಯನ ಮುನಿಯಂತೆ ಮುಕ್ತವಾಗಿ ಜೀವನವನ್ನು ಕಂಡುAಡು ಅದನ್ನು ಚಿತ್ರಿಸುತ್ತಾನೆ. ಹೀಗಾಗಿ ಯತಿಧರ್ಮ ನಿಜವಾಗಿ ನಿತ್ಯಜೀವನಕ್ಕೆ ವಿರುದ್ಧವಾದುದಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ. ಆದರೆ ಸಂನ್ಯಾಸಿ ಅಥವಾ ಯತಿ ನಿಯಮಗಳು ನಮ್ಮ ಸಮಾಜದಲ್ಲಿ ಅನಂತರ ಸೇರಿಕೊಂಡಿವೆ ಅನಿಸುತ್ತದೆ. ನಿಜವಾಗಿ ಯತಿಗೆ ಬದುಕಿನ ಎಲ್ಲ ಬಗೆಯ ಅನುಭವಗಳೂ ಇರಬೇಕಾಗುತ್ತದೆ. ಈತ ಬಹುಶಃ ಈ ಹಿನ್ನೆಲೆಯಲ್ಲಿಯೇ ಇಂಥ ಚಿತ್ರಣವನ್ನು ಕೊಟ್ಟಿದ್ದಾನೆ. ಏನೇ ಆದರೂ ಬಾಹುಬಲಿ ಪಂಡಿತ ಕಟ್ಟಿಕೊಡುವ ಈ ಬಗೆಯ ಚಿತ್ರಣ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ರೀತಿಯ ಜೀವನಾನುಭವವನ್ನು ತೋರಿಸಿಕೊಟ್ಟಿದೆ. ಚಾರಿತ್ರಿಕವಾಗಿಯೂ ಇದು ಗಮನಾರ್ಹ ಅನಿಸುತ್ತದೆ.
Monday, 4 November 2024
ಓದಿನ ತೃಪ್ತಿ ಕೊಡುವ ಕೃತಿ
ಅಂದಹಾಗೆ ಇದು ಕನ್ನಡ ಬರೆಹಗಾರ ಗುರುಪ್ರಸಾದ್ ಅವರೇ ಹೇಳಿಕೊಂಡಂತೆ ಅವರ ಐದನೆಯ ಕಾದಂಬರಿ. ಇದು ಅವರ ಇತರ ಕೃತಿಗಳಿಗಿಂತ ಭಿನ್ನವಾಗಿದೆ. ಇದು ಅವರ ಸತ್ಕುಲ ಪ್ರಸೂತರು ಕೃತಿ ಕುರಿತ ನನ್ನೋದಿಗೆ ಸಿಕ್ಕ ವಿವರ ಹಾಗೂ ಅನಿಸಿಕೆ. ಇದು ಅವರ ನಿರೂಪಣೆಯಷ್ಟೇ ಸರಿಯೂ ನಿಜವೂ ಆಗಿದೆ. ಮುಖ್ಯವಾಗಿ ಈ ಕಾದಂಬರಿಯ ನಾಯಕ ಪಾತ್ರ ಉತ್ತಮಪುರುಷದಲ್ಲಿ ನಿರೂಪಕನಾಗಿ ವಸ್ತು ವಿವರಣೆ ಕೊಡುತ್ತ ಹೋಗುತ್ತಾನೆ, ಇದರಿಂದ ಕೃತಿ ಓದುತ್ತ ತನ್ನನ್ನು ಸಮೀಕರಿಸಿಕೊಳ್ಳುವ ಎಲ್ಲರೂ ಅವರೇ ನಾಯಕ ಪಾತ್ರಕ್ಕೆ ಒಳಪಡುತ್ತಾರೆ. ಹಾಗಾಗಿ ಇದು ಭಿನ್ನ ಓದು. ಜೊತೆಗೆ ಇಂಥ ವಸ್ತು ಕೂಡ ನಮಗೆ ಹೊಸದು. ಅದಕ್ಕೆ ತಕ್ಕ ಹೊಸ ಶೈಲಿ ಕೂಡ ಇಲ್ಲಿದೆ. ಹೊಸಬಗೆಯ ಓದು ಕೊಡುವ ಇಂಥ ಕಾದಂಬರಿಗಳು ಕನ್ನಡದಲ್ಲಿ ಈಗಾಗಲೇ ವಿ. ಟಿ ಶೀಗೇಹಳ್ಳಿ, ನಾ. ಮೊಗಸಾಲೆ, ಗೋಪಾಲಕೃಷ್ಣ ಪೈ, ಶಿವಾನಂದ ಕಳವೆಯವರಿಂದ ದೊರೆತಿದ್ದು ಇವು ಇದುವರೆಗಿನ ಓದಿನ ಏಕತಾನತೆಯನ್ನು ಮುರಿದಿವೆ. ಕನ್ನಡ ಇಷ್ಟು ಶತಮಾನಗಳ ಕಾಲ ಕಾಪಾಡಿಕೊಂಡ ಕಾಲಕ್ಕೆ ತಕ್ಕ ಹೊಸತನವನ್ನು ಮತ್ತೆ ಕಟ್ಟಿಕೊಡುತ್ತದೆ. ಹಾಗೆ ನೋಡಿದರೆ ಬದಲಾವಣೆ ಮನುಷ್ಯನ ಬದುಕಿನ ನೈಸರ್ಗಿಕ ನಿಯಮ. ಅದು ಬದಲಾದ ಸಾಮಾಜಿಕ ಪರಿಸ್ಥಿತಿ, ಬದಲಾದ ವೃತ್ತಿ ಇತ್ಯಾದಿಗಳಿಂದ ಪ್ರಭಾವಕ್ಕೊಳಗಾಗುತ್ತದೆ. ಅದರಲ್ಲೂ ನಮ್ಮ ದೇಶದಂಥ ವೈವಿಧ್ಯಮಯ ಸಂಸ್ಕೃತಿಯುಳ್ಳ ದೇಶದಲ್ಲಿ ಬದುಕಿನ ನಿತ್ಯ ಒಡನಾಟದಿಂದ ಬದಲಾಗುವ ನಮ್ಮ ಜೀವನ ಮತ್ತೆ ಮತ್ತೆ ನಮ್ಮನ್ನು ನಾವು ನೋಡಿಕೊಳ್ಳುವವರೆಗೆ ತಿಳಿಯುವುದಿಲ್ಲ. ಒಂದೇ ಸಮುದಾಯದ ಒಳಗಿರುವ ಪಂಗಡ, ಉಪ ಪಂಗಡಗಳು ಇತ್ತೀಚೆಗೆ ಅನನ್ಯತೆಯ ಹೆಸರಲ್ಲಿ ಅಸ್ಮಿತೆಯ ಹುಡುಕಾಟದಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ಈ ಕೃತಿಯಲ್ಲಿ ಕಾಗಿನೆಲೆಯವರು ಒಂದೇ ಭೌಗೋಳಿಕ ಪ್ರದೇಶದಲ್ಲಿರುವ ಭಿನ್ನ ಸಮುದಾಯಗಳ ¨ದಲು ಖಂಡಾಂತರಗೊಳ್ಳುವ ಭೌಗೋಳಿಕ ಹಿನ್ನೆಲೆಯಲ್ಲೂ ನಮ್ಮೆಲ್ಲರ ಬದುಕಿನ ರೀತಿ ಬದಲಾದರೂ ಅವುಗಳ ಒಳಗೆ ಎಲ್ಲಾದರೂ ಒಂದುಕಡೆ ಸಮಾನತೆಯ ಎಳೆ ಇರಬಲ್ಲುದೆಂದು ಅನಂತು ತನ್ನ ಹಿನ್ನೆಲೆ ನೋಡಿಕೊಳ್ಳುವ ಸಂದರ್ಭದಲ್ಲಿ ಅತ್ತ ಕೆವಿನ್ ನಮಗೆಲ್ಲ ತಿಳಿದ ಕ್ರಿಶ್ಚಿಯನ್ ಒಳಗಿನ ಕ್ಯಾಥಲಿಕ್ ಅಲ್ಲದ, ಪ್ರೊಟೆಸ್ಟಂಟ್ ಕೂಡ ಅಲ್ಲದ ಹೊಸ ಪಂಗಡ ಆಗಿರುವ ಮಾರ್ಲನ್‌ನ ಕೆವಿನ್ ಕೂಡ ದೂರದ ಭಾರತೀಯ ಸಂಪ್ರದಾಯ, ಗುರುಪರಂಪರೆ ಸಂಪ್ರದಾಯಗಳ ಬಗ್ಗೆ ಆಸಕ್ತ ತಾಳುವುದನ್ನು ಅರಿಯುವ ಯತ್ನ ಮಾಡುವುದನ್ನು ಮನಗಾಣಿಸುತ್ತ ಪರಸ್ಪರ ಇರುವ ಸಾಮ್ಯವನ್ನು ಮನಗಾಣಿಸುತ್ತದೆ. ಇಷ್ಟು ಹೃದಯ ವೈಶಾಲ್ಯ ಮನುಷ್ಯ ಮಾತ್ರದವರಲ್ಲಿರುವುದು ಸಹಜ ಅದರಲ್ಲಿ ಪಾಪ ಪ್ರಜ್ಞೆ ಹೊಂದುವಂಥದ್ದೇನೂ ಇಲ್ಲ ಎಂಬುದನ್ನು ತೋರಿಸಿ ಮನುಷ್ಯನಿಗೆ ತನ್ನ ಪದ್ಧತಿ, ಬದಲಾದ ಜೀವನ ಕ್ರಮಗಳು ವಿರುದ್ಧ ನಿಂತಾಗ ಉಂಟಾಗುವ ಪಾಪ ಪ್ರಜ್ಞೆಯನ್ನು ಬಹಳ ಸೂಕ್ಷö್ಮವಾಗಿ ಚಿತ್ರಿಸುತ್ತದೆ. ಮನುಷ್ಯನ ಜೀವನ ಕ್ರಮದಲ್ಲಿ ವೈವಿಧ್ಯ ಇರಬಹುದು, ಅದರಲ್ಲಿ ಹೆಚ್ಚು ಕಡಿಮೆ ಅನ್ನುವುದಿಲ್ಲ, ಎಲ್ಲವೂ ಪರಿಸ್ಥಿತಿಯ ಅಧೀನ ಎಂಬುದು ಅರಿವಾಗುತ್ತದೆ.
ಇಲ್ಲಿನ ನಾಯಕನಿಗೆ ತನ್ನ ಬದಲಾದ ಜೀವನ ಕ್ರಮ ಆಗಾಗ ಅನೇಕ ಗೊಂದಲಗಳು ಮೂಡುವಂತೆ ಮಾಡುತ್ತವೆ.ನಿದರ್ಶನಕ್ಕೆ ನೋಡುವುದಾದರೆ ಆತ ಸಂದರ್ಭಕ್ಕೆ ತಕ್ಕಂತೆ ಮೀನು ತಿಂದು ಬಿಯರ್ ಕೂಡ ಸೇವಿಸಿರುತ್ತಾನೆ ಆದರೆ ಅವನೊಳಗಿನ ಸಂಪ್ರದಾಯವಾದಿ ಎದ್ದಾಗ ತನ್ನನ್ನು ತಾನು ಅವಲೋಕಿಸಿಕೊಳ್ಳುವಂತೆ ಮಾಡುತ್ತಾನೆ. ಆಗ ಆತ ಒಂದೆಡೆ ತಾನು ನಿತ್ಯ ವಾಯುಸ್ತುತಿ ಸಂಧ್ಯಾವAದನೆ ಕೂಡ ಮಾಡುವುದರಿಂದ ತಾನು ಈಗ ಪ್ರತಿಗಾಮಿಯೋ ಮೀನು ತಿಂದು ಬೀರು ಕುಡಿದಿದ್ದಕ್ಕೆ ಪ್ರಗತಿಪರನೋ ಎಂಬ ಪ್ರಶ್ನೆ ಕಾಡುತ್ತದೆ. ಇದಕ್ಕೆ ಅವನಿಗೆ ಉತ್ತರ ಸಿಗುವುದಿಲ್ಲ. ಅಷ್ಟಕ್ಕೇ ಸುಮ್ಮನಾಗುತ್ತಾನೆ. ಆತ ಸಂದರ್ಭಕ್ಕೆ ತಕ್ಕಂತೆ ನಡೆದುಕೊಂಡಿದ್ದಾನಷ್ಟೇ. ಇಲ್ಲಿ ಬೇರೆ ಯಾವುದೂ ಮುಖ್ಯವಲ್ಲ ಅಷ್ಟೇ, ಇಂಥ ಸಣ್ಣಪುಟ್ಟ ಗೊಂದಲಗಳು ಕೃತಿಯುದ್ದಕ್ಕೂ ಅಲ್ಲಲ್ಲಿ ಬರುತ್ತವೆ. ಇದಕ್ಕೆ ಇದೇ ಸರಿ ಎಂಬ ಉತ್ತರವಿಲ್ಲ. ಯಾವುದೇ ಒಂದು ಮಾತ್ರ ಸರಿ ಎಂಬ ನಿರ್ಧಾರಕ್ಕೆ ಬಂದುಬಿಟ್ಟರೆ ನೀವು ನೈಜ ಜೀವನ ಬದಿಗಿಟ್ಟು ಕರ್ಮಠರಾಗಿದ್ದೀರಿ ಎಂದೇ ಅರ್ಥ. ಹಾಗಂತ ನಿಜ ಜೀವನ ಅಂದರೆ ನುಕೂಲಸಿಂಧು ಕೂಡ ಅಲ್ಲ. ಆದರೆ ಅದು ಹೊಂದಾಣಿಕೆಯ ಸಂದರ್ಭವನ್ನು ನಿರಾಕರಿಸಬಾರದು, ಆಗ ಅದು ನಿಜ ಜೀವನ ಆಗಿರುವುದಿಲ್ಲ, ಏಕೆಂದರೆ ಬದುಕೆಂದರೆ ಹೊಂದಾಣಿಕೆ ಅಲ್ಲದೇ ಇನ್ನೇನು? ಬದುಕು ನಮ್ಮ ಮನೋಧರ್ಮವನ್ನು ಬದಲಿಸುತ್ತದೆ, ಆದರೆ ಅದನ್ನು ಒಪ್ಪಿಕೊಳ್ಳುವ ಔದಾರ್ಯ ನಮಗಿರುವುದು ಮುಖ್ಯ ಇದರಲ್ಲಿ ಸರಿ ತಪ್ಪುಗಳ ತೀರ್ಮಾನ ಏನಿದ್ದರೂ ನೀವು ಮಾಡಿಕೊಂಡ ಕಾರಣಕ್ಕೆ ಅದು ನಿಮ್ಮ ಸಹಜೀವಿಗಳಿಗೇನಾದರೂ ತೊಂದರೆ ಮಾಡಿತಾ ಎಂಬುದಷ್ಟೇ ಮುಖ್ಯವಾಗಬೇಕು ಹಾಗಿಲ್ಲದಿದ್ದಲ್ಲ ಅಂಥ ಬದಲಾವಣೆ ಬದುಕಿಗೆ ಅನಿವಾರ್ಯ ಎಂಬ ಸೂಕ್ಷö್ಮವನ್ನು ಕೃತಿ ತನ್ನ ಆಶಯವಾಗಿ ಕಾಣಿಸುತ್ತದೆ. ಇದು ಅನೇಕ ಆಯಾಮಗಳನ್ಮು ತೆರೆದು ಕಾಣಿಸುವುದರಿಂದ ಅನೇಕ ರೀತಿಯಲ್ಲಿ ಓದುಗರಿಗೆ ಇದು ದಕ್ಕ ಬಹುದು.
ಈಕಾದಂಬರಿ ಅಂತಿಮವಾಗಿ ಒಂದು ಮದುವೆಯ ನೆಪದಲ್ಲಿ ಒಂದು ಪರಿಪೂರ್ಣ ಸುತ್ತು ಹಾಕಿ ಬಂದು ನಿಲ್ಲುತ್ತದೆ. ಹೇಗೆಂದರೆ ಶಿವಮೊಗ್ಗದ ಭದ್ರಾವತಿ ವಠಾರ ಹಾಗೂ ಬಂಗಾರ ಕೇರಿ ಮಧ್ವ ಮನೆತನದಿಂದ ಶುರುವಾಗುವ ಕಾದಂಬರಿ ನ್ಯೂಜರ್ಸಿ, ತ್ರೆನಿಡಾಡ್, ಎಲ್ಲ ಸುತ್ತು ಹೊಡೆದು ಟರ್ಕಿಯಲ್ಲಿ ಮದುವೆಯನ್ನು ಹರಿಯುವ ನೀರಿನ ಯಾಚ್ ನಲ್ಲಿ ಮುಗಿಸಿ ಮತ್ತೆ ಬಂಗಾರಕೇರಿಯ ಕೃಷ್ಣಮೂರ್ತಾಚಾರರ ಸಂವತ್ಸರಿ ಶ್ರಾದ್ಧದೊಂದಿಗೆ ಮುಕ್ತಾಯ ಕಾಣುವುದು ಅರ್ಥಪೂರ್ಣವಾಗಿದೆ. ಎಲ್ಲವೂ ಬಂದು ಇಲ್ಲಿ ಮತ್ತೆ ಐಕ್ಯವಾಗುತ್ತವೆ. ಈ ಕಾರಣಕ್ಕೆ ಪ್ರಸ್ತುತ ಸತ್ಕುಲ ಪ್ರಸೂತರು ಕಾದಂಬರಿ ಹತ್ತಾರು ಸಂಗತಿಗಳನ್ನು ಒಡಲಿನಿಂದ ಸಂಪ್ರದಾಯ, ಶಿಷ್ಟಾಚಾರಗಳ ಜೊತೆ ಹೊರಹಾಕುತ್ತಾ ಎಲ್ಲಿಯೂ ಗೋಜಲು ಅನಿಸದೇ ಏಕಸೂತ್ರದಲ್ಲಿ ಕಟ್ಟಿಕೊಡುತ್ತದೆ. ಇದು ಈ ಕೃತಿಯ ಹೆಚ್ಚುಗಾರಿಕೆ
ಬದುಕಿನ ವಿಶಾಲ ಕ್ಯಾನ್ವಾಸ್ ಇದ್ದಾಗ ಎಲ್ಲ ಕೃತಿಗಳೂ ಇಷ್ಟೆಲ್ಲ ಅರ್ಥ ಬಿಟ್ಟುಕೊಡುವುದು ಸಾಧ್ಯ. ಕಾಗಿನೆಲೆಯವರ ಈ ಕೃತಿ ಏಕ ಮುಖಿ ಓದಿಗೆ ದಕ್ಕದಿರುವುದು ಈ ಕಾರಣಕ್ಕೆ. ಇದನ್ನು ಓದಿದಾಗ ಉಂಟಾಗುವ ಮಾನಸಿಕ ನಿರುಮ್ಮಳತೆ ಸದ್ಯ ನನ್ನನ್ನು ನಾನು ಎಲ್ಲದರೂ ತೆರೆದಿಟ್ಟುಕೊಳ್ಳಬೇಕು ಅಂದುಕೊಂಡಿದ್ದೆ ಇಲ್ಲಿ ಅದು ಆಗಿದೆ ಎಂಬ ಸಮಾಧಾನ ಓದುಗನಿಗೆ ಸಿಗುತ್ತದೆ, ಕೃತಿಕಾರನಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೇನೂ ಇರಲಾರದು. ಇದನ್ನು ಪ್ರಕಟಿಸಿದ ಅಂಕಿತ ಪುಸ್ತಕ ಸಾರ್ಥಕ ಕೆಲಸ ಮಾಡಿದೆ. ಹೀಗೆ ಬರೆದವರಿಗೂ ಓದಿದವರಿಗೂ ಅಪರೂಪದ ತೃಪ್ತಿ ಕೊಡುವ ಕೃತಿ ಇದಾಗಿದೆ. ಲೇಖಕರಿಗೂ ಪ್ರಕಾಶಕರಿಗೂ ಅಭಿನಂದನೆಗಳು.
ಕೃತಿ ವಿವರ- ಸತ್ಕುಲ ಪ್ರಸೂತರು, ಕನ್ನಡ ಕಾದಂಬರಿ, ರೂ-೨೯೫, ಪುಟಗಳು-೨೫೬, ಮೊದಲ ಮುದ್ರಣ-೨೦೨೪
Friday, 1 November 2024
ಸುವರ್ಣ ಕರ್ನಾಟಕದ ಯೋಜನೆಗಳು
ವರದಿಯಲ್ಲಿ ಅಥವಾ ತಜ್ಞರ ಸೂಚನೆಗಳಲ್ಲಿ ಮೆಚ್ಚಿದ ಒಂದು ಸದೆರಡು ಸಂಗತಿಯನ್ನು ಯಾಕೆ ಎಂದು ನೋಡುವಾ. ಈಗ ಕೃಷಿ ಬೆಳವಣಿಗೆಗೆ ಯೋಜನೆ ಹಾಕಲಾಗಿದೆ. ಇದರಲ್ಲಿ ನಮ್ಮ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ, ಪಶು, ಕೋಳಿ ಇತ್ಯಾದಿಗಳಿಗೆ ಎಲ್ಲ ಸೇರಿ ಆರು ವಿವಿಗಳಿದ್ದರೂ ನಮ್ಮ ಕೃಷಿ ಆದಾಯ ಶೆ೩೬ ದಾಟದಿರುವುದು ಏಕೆ? ಅಲ್ಲದೇ ರಾಜ್ಯದಲ್ಲಿ ನೀರಾವರಿಗಾಗಿ ಆರೇಳು ಕಣಿವೆ ಯೋಜನೆಗಳಿದ್ದು ಇವೆಲ್ಲ ಸೇರಿಯೂ ನಮ್ಮ ನೀರಾವರಿ ವ್ಯವಸ್ಥೆ ಇನ್ನೂ ಸರಿಯಾಗಿಲ್ಲ ಏಕೆ ಇದನ್ನು ಸರಿ ಮಾಡುವುದು ಹೇಗೆ -ಇದು ಪ್ರಾಥನಿಕ ಪ್ರಶ್ನೆ. ಇವುಗಳಿಗೆ ಉತ್ತರ ಹುಡುಕುವ ಯತ್ನ ಇಲ್ಲಿರುವ ಕಾರಣಕ್ಕೆ ಈ ಸಲಹೆಗಳು ಸರಿಯಾಗಿವೆ ಅನ್ನುವುದು. ನಮ್ಮ ರೈತರು ಇನ್ನೂ ಋಣದಲ್ಲಿರುವ ಪರಿಸ್ಥಿತಿಯನ್ನು ಸರಿಪಡಿಸುವ ಮಾರ್ಗ ಹುಡುಕುವ ಮುಂಚೆ ಯಾಕೆ ಹೀಗೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮುಂದಿನ ಮಾರ್ಗ ಸೂಚಿ ರಚಿಸಲಾಗಿದೆ. ಇದಕ್ಕೆ ಸೂಕ್ತ ರಸ್ತೆ ಸಂಪರ್ಕ ಸಾಧಿಸುವ ಸಲಹೆ ಒಂದು. ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಸ್ತೆಗಳ ಸಂಪರ್ಕ ತೃಪ್ತಿಕರವಲ್ಲ, ಇದು ಸರಿಯಾದರೆ ಗ್ರಾಮೀಣ ಆರ್ಥಿಕ ಚಟುವಟಿಕೆ ವೇಗ ಪಡೆದು ಉಳಿದ ಸಣ್ಣಪುಟ್ಟ ಸಮಸ್ಯೆಗಳು ತಾನಾಗಿ ಸರಿಯಾಗುತ್ತವೆ ಎಂದು ಸಮರ್ಥನೆ ಕೊಡಬಹುದು. ಜೊತೆಗೆ ಇದರಿಂದ ಗ್ರಾಮೀಣ ಯುವ ಶಕ್ತಿ ತಮ್ಮ ಮಾರ್ಗ ಕಂಡುಕೊಳ್ಳುವಂತೆ ಕೌಶಲ್ಯಾಭಿವೃದ್ಧಿ ಬೆಳೆಸುವ ಯೋಜನೆ ಹಾಕಿಕೊಳ್ಳಲಾಗಿದೆ. ಇವೆಲ್ಲ ಒಂದಕ್ಕೊಂದು ಪೂರಕ ಎಂಬುದನ್ನು ಮರೆಯಬಾರದು. ಇವು ಯಶಸ್ವಿಯಾಗಿ ಜಾರಿಯಾದರೆ ಯುವ ಜನತೆ ಉದ್ಯೋಗ ಹುಡುಕಿಕೊಂಡು ನಗರಕ್ಕೆ ವಲಸೆ ಬರುವುದು ಕಡಿಮೆಯಾಗಿ ನಗರಗಳ ಒತ್ತಡ ಒಂದೆಡೆ ಇಳಿದರೆ, ಗ್ರಾಮೀಣ ಅಭಿವೃದ್ಧಿ ಇನ್ನೊಂದೆಡೆ ವೇಗ ಪಡೆಯುತ್ತದೆ. ಇಷ್ಟಾದರೆ, ಗ್ರಾಮೀಣ ಆಋಇðಕತೆಗೆ ಉತ್ತೇಜನ ಕೊಡುವ ಮುಂದಿನ ಯೋಜನೆ ರೂಪಿಸಿ ಅಲ್ಲಿನ ಉತ್ಪಾದನೆಗಳಿಗೆ ಸೂಕ್ತ ಮಾರುಕಟ್ಟೆಯ ಚಿಂತನೆ ಮಾಡಬಹುದು. ಹೀಗೆ ಹಂತಹಂತವಾಗಿ ಬೆಳವಣಿಗೆ ಸಾಧಿಸುವ ಮಾರ್ಗ ಇಲ್ಲಿದೆ. ಹೀಗೆ ಪರಸ್ಪರ ಪೂರಕವಾಗಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ. ಆದ್ದರಿಂದ ಈ ಯೋಜನೆ ಸಮರ್ಪಕವಾಗಿ ಜಾರಿಯಾಗುವಂತೆ ಆಮೂಲಕ ರಾಜ್ಯ ಸರ್ವಾಂಗೀಣ ಅಭಿವೃದ್ಧಿ ಕಾಣುವಂತೆ ಮಾಡಬೇಕಾದ ಜವಾಬ್ದಾರಿ ಪ್ರತಿಪಕ್ಷಗಳೂ ಸೇರಿ ನಮ್ಮೆಲ್ಲರ ಮೇಲಿದೆ. ಇದಾಗಲಿ.







