ಅದಿರಲಿ, ಪ್ರಸ್ತುತ ಕತೆಗಾರರ ಹೊಸ ಸೃಷ್ಟಿಯ ಬಗ್ಗೆ ಬರೋಣ. ಇವರ ಈಚಿನ ಹೊಸ ಕಥಾ ಸಂಕಲನ 'ಬಿಳೇ ದಾಸ್ವಾಳ'. ಇದನ್ನು ಪ್ರತಿಷ್ಠಿತ ಸಪ್ನಾ ಬುಕ್ ಹೌಸ್ ಪ್ರಕಟಿಸಿದೆ. ಇದರ ಮೊದಲ ಮುದ್ರಣವಾದುದು ೨೦೨೨ರಲ್ಲಿ. ೬೫ ಪುಟಗಳ ಕಿರುಗಾತ್ರದ ಸಂಕಲನ ಇದು. ಇದರಲ್ಲಿ ಒಟ್ಟೂ ಐದು ಕಥೆಗಳಿವೆ. ಒಂದಕ್ಕಿಂತ ಒಂದು ಕಥೆ ಭಿನ್ನ ಹಾಗೂ ವಸ್ತು ವೈವಿಧ್ಯದಿಂದ ಗಮನಸೆಳೆಯುವುದು ಮಾತ್ರವಲ್ಲ, ಇದರಿಂದ ಓದುಗರ ಆಸಕ್ತಿಯನ್ನೂ ಕಾಯ್ದುಕೊಳ್ಳುತ್ತದೆ. ಎಲ್ಲ ಕಥೆಗಳ ಭಾಷೆ ಕಲ್ಯಾಣ ಕರ್ನಾಟಕದ ದಟ್ಟ ಸೊಗಡಿನ ಗಾಂವ್ಟಿ ನುಡಿ. ಗಮನಿಸಬೇಕಾದ ಸಂಗತಿ ಎಂದರೆ ಈ ಕಥೆಗಾರರಿಗೆ ಕಥೆಉ ಹಂದರ ಹಣೆಯುವ ಕಲೆ ಸಿದ್ಧಿಸಿದೆ ಮಾತ್ರವಲ್ಲ, ಸಮಾಜದ, ತಾವು ಗಮನಿಸುವ ಪಾತ್ರಗಳು ಮತ್ತು ಅಂಥ ಪಾತ್ರಗಳು ಸಮಾಜದಲ್ಲಿ ಸಹಜವಾಗಿ ಹೇಗೆ ವರ್ತಿಸುತ್ತವೆ ಎಂಬ ಬಗ್ಗೆ ದಟ್ಟ ಅನುಭವವಿದೆ. ಸಹಜವಾಗಿ ತಮ್ಮ ಓದು ಮತ್ತು ಆಧುನಿಕ ಪ್ರಪಂಚದ ಚಿಂತನೆ, ವಾದ ಚರ್ಚೆಗಳ ನಂಟಿಲ್ಲದೇ ನೇರವಾಗಿ ಕಥೆ ಹಣೆಯುವಾಗ ಅವರ ಯಶಸ್ಸು ಕಾಣಿಸುತ್ತದೆ, ಎಲ್ಲೆಲ್ಲಿ ಆಧುನಿಕ ಚಿಂತನೆಗಳು ಮತ್ತು ವಾದಗಳ ಸೆಳೆತಕ್ಕೆ ಒಳಗಾಗಿ ಕಥೆ ಬರೆಯುತ್ತಾರೋ ಅಲ್ಲೆಲ್ಲ ಸೋಲುತ್ತಾರೆ. ಉದಾಹರಣೆಗೆ ಗಣಪ್ಪ ಕಥೆಯ ಒಂದು ಸನ್ನಿವೇಶ ಗಮನಿಸೋಣ, ಜೋಗವ್ವ ಮತ್ತು ದುರುಗಪ್ಪ ಬಿಕ್ಕೆಗಾಗಿ ಬೀದಿಯಲ್ಲಿ ಬರುತ್ತಿರುತ್ತಾರೆ. ಅವರು ಅಲ್ಲಿ ಇಲ್ಲಿ ಅಡ್ಡಾಡುತ್ತಾ ಬಿಸಿಲಿನ ಜಳದಿಂದ ಬೆಂಡಾಗಿ ಯಾರದ್ದೋ ಮನೆಯ ಜಗುಲಿ ಮೇಲೆ ಕುಳಿತುಕೊಳ್ಳುತ್ತಾರೆ. 'ಆಗ ಮನಿ ಯಜಮಾನ ಜೋಗವ್ವಳಿಗೆ ಎಲೆ ಅಡಿಕೆ ಕೊಡುತ್ತನೆ. ಅದರಲ್ಲಿ ತಾನು ಸ್ವಲ್ಪ ತೆಗೆದುಕೊಂಡ ಆಕೆ ಒಂದಡಕಿ ತಗೆದು ಕಡದುತಂಬಾಕಾ ತಿಕ್ಕಿ ಎಲಿ ಹಾಕ್ಯಂಡ್ ಉಳದ ಉಳಿದ ಎಲೆ ಅಡಕೆಯನ್ನು ತಗದು ದುರಗಗ ಕೊಟ್ರ ಎಲಿ ಅಡಕಿ ನೋಡದನ ರೊಟ್ಟಿ ಹರಕಂಡAಗ ಹರಕಂಡ ತಿನ್ನಾಕತ್ತ. ಯಜಮಾನನ ಮನಿಗೆ ಬಂದ ಬೀಗರು ಗಾಭಾಗಿ ನೋಡಿ ಸುಮ್ಮನಾದರು.ಜೋಗವ್ವ ಎಷ್ಟ ಕರದರೂ ಕೇಳದಎಲಿ ತಿಂದ್ ತೇಗಿ ಮನಿ ಯಜಮಾನನಂಗ ಗ್ವಾದಲಿ ಹಾಕಿರೋ ಕಟ್ಟಿ ಮ್ಯಾಗ ಅಂಗಾತ ಮಕ್ಕಂಡ. ಎಷ್ಟ್ ಎಬಿಸಿದ್ರೂ ಏಳ್ಳೆ ಇಲ್ಲ. ಜೋಗವ್ವ ಸಿಟ್ಟಿಗೆದ್ ಮುಂದಿನ ಮನೆಗುಳಿಗೆ ಹೋದ್ಲು. ದುರುಗ ಅಲ್ಲೇ ಅಂಗಾತ ಮಲಗಿದ್ದ. ಈತಗ ಊರಾಗ ಸ್ವಾತಂತ್ರ ಇತ್ತು. ಹಂಗಾಗೆ ಎಲ್ಲರ ಮಲಗಿದ್ರು ಯಾರು ಎಬ್ಬಸಿತ್ತಿದ್ದಿಲ್ಲ. ಎಚ್ಚರಾದಾಗ ಎದ್ದೋಕ್ಯಾನ' (ಪು. ೩) ಇಲ್ಲಿನ ಭಾಷೆ ಮಾತ್ರವಲ್ಲ, ಇಂಥ ಸನ್ನಿವೇಶವನ್ನು ಊರಲ್ಲಿ ನೋಡಿದ್ದ ಯಾರಿಗಾದರೂ ಚಿತ್ರ ಕಣ್ಣಿಗೆ ಕಟ್ಟುತ್ತದೆ. ಇದು ಕತೆಗಾರನ ನಿಜ ಶಕ್ತಿ. ಇಲ್ಲಿ ನಮ್ಮ ಗಮನಕ್ಕೆ ಬರುವುದು ಕತೆಗರರ ನಿಜ ಅನುಭವದ ಸಹಜ ಅಭಿವ್ಯಕ್ತಿ. ಇಂಥಲ್ಲಿ ಕತೆಗಾರರು ಗೆಲ್ಲುತ್ತರೆ. ಇನ್ನೊಂದು ಸಂದರ್ಭ ನೋಡೋಣ. ಬಿಳಿ ದಾಸ್ವಾಳ ಎಂಬ ಶೀರ್ಷಿಕೆಯ ಕಥೆ ಯ ಒಂದು ಸಂದರ್ಭ. ಹೆಣ್ಣುಮಕ್ಕಳ ಮುಟ್ಟಿನ ಸಮಸ್ಯೆಗೆ ಮನೆಯಲ್ಲಿ ಯಶಸ್ವೀ ಪಾರಂಪರಿಕ ಔಷಧ ಮಾಡುವುದಕ್ಕಾಗಿ ಬಿಳಿ ದಾಸವಾಳದ ಹೂವು ಕಿತ್ತು ತರುತ್ತಿದ್ದ ನಿಂಗಪ್ಪನ ಕೃತ್ಯವನ್ನು ನೋಡಿ ದಾಸವಾಳ ಗಿಡಗಳಲ್ಲಿ ಆಧುನಿಕ ಸಾಹಿತ್ಯ ಸಿದ್ಧಾಂತ ಹೇಳುವ ಒಂದು ಸಂಕೇತ ಹುಡುವ ಕತೆಗಾರರು ಒಂದೆಡೆ ಈ ಬಗ್ಗೆ ಹೇಳುತ್ತ 'ದೊಡ್ಡ ಗಿಡದಾಗ ಹೂ ಕಿತ್ತಾಂಗೆಲ್ಲ ಅದು ದೃಷ್ಟಿ ಕಳಕಂತಿತ್ತು. ಯಾಕಂದ್ರ ಈ ಗಿಡದ ಕಣ್ಣ ಹೂವು, ಅದನ್ನ ಕಿತ್ತರ ಗಿಡ ಕುರುಡಾಕ್ಕಿತ್ತು. ಇದು ನಿಂಗಪ್ಪಗ ಗೊತ್ತಾಗದ ಮೊಗ್ಗು ಸಮೇತ ಎಲ್ಲಾ ಹೂ ಕಿತಗಂಡ್ ಗಿಡಾನ ಕುಲ್ಡ್ ಮಾಡದ.ಇದನ್ನೆಲ್ಲ ನೋಡ್ತಿದ್ದ ಸಣ್ಣ ಗಿಡ ದೊಡ್ಡ ಗಿಡಕ್ಕ ನಿನ್ನ ಬಾಳೇವ್ ಬ್ಯಾಡವ್ವ ನನಗ ಅಂತಂದ್ರ ದೊಡ್ಡ ಗಿಡ ಭೂತಾಯಿ ಮಡಲಾಗ ಕರಗಾಕ ಈ ನಡಕ ಯಾರ ಚೂಟಿದ್ರು ಕಡದ್ರು, ಕಡದ್ರು ಚುಚ್ಚಿದ್ರ, ಕಡೇಕ್ ಸುಟ್ರು ಮಾತಾಡಬಾರದಂತ ಬಾಯಿಕೊಟ್ಟಿಲ್ಲ ಆ ಭಗವಂತಮ ಅದರ ಅರ್ಥ ನಾವು ಬೆಳಕಂತ ಹೋಬಕು ತಿಳೀತ ಅಂತ ದೊಡ್ಡ ಗಿಡ ಅನ್ನೋರಾಗ, ನಾಗಪ್ಪ ಸಣ್ಣ ಸಸಿ ಕಿತಗಂಡ್ ಹೊಂಟ. ದೊಡ್ಡ ಗಿಡಾ ಹೂನೆಲ್ಲಾ ಕಳಕಂಡ್ ಕುರುಡಾಗಿ ಸಣ್ಣ ಗಿಡಾನ ಹುಡುಕಾಡಕತ್ತು. ನಿಂಗಪ್ಪನ ಕೈಯಾಗ ಉಲ್ಟ ಜೊತ್‌ಬಿದ್ ಗಿಡದ ಹೂವು ದೊಡ್ಡ ಗಿಡಾ ವದ್ಯಾಡೋದ್ ನೋಡಿ ಮರಗ್ತಾ ಇನ್ನ ಮುಗೀತ ನಿನ್ನ ಕತಿ ಅಂತ ಸುಮ್ಮನಾತು". (ಪುಟ ೪೦). ಇಲ್ಲಿನ ವಿವರವನ್ನು ದೌರ್ಜನ್ಯ ಶೋಷಣೆ ವಿರುದ್ಧ ಮೌನ ತಾಳುವುದು, ಗಿಡಕ್ಕೂ ನೋಟವಿದೆ, ನೋವಿದೆ ಎಂಬುದನ್ನೆಲ್ಲ ತಿಳಿಸಬೇಕೆಂಬ ಸಾಮಾಜಿಕ ಜಾಗೃತಿ ಹುಟ್ಟಿಸುವ ಕಳಕಳಿಯ ಚಿಂತನೆಯ ಪ್ರಭಾವ ದಟ್ಟವಾಗಿರುವುದು ಕಾಣುತ್ತದೆ. ಇಂಥ ಕಡೆ ಕತೆಗಾರರು ಸೋಲುತ್ತಾರೆ. ಇವೆಲ್ಲ ಯಾವುದೋ ಚಿಂತನೆಯ ಹಿನ್ನೆಲೆಯಲ್ಲಿ ನೋಡಿದಾಗ ಅದ್ಭುತ ಒಳನೋಟ ಕಟ್ಟಿಕೊಟ್ಟಿದ್ದಾರೆ ಅನಿಸಬಹುದು. ಅದೇ ಕತೆಯಲ್ಲಿ ಒಂದೆಡೆ ಬಿಳೇ ದಾಸವಾಳದ ಹೂವುಗಳಿಂದ ಹೆಣ್ಣು ಮಕ್ಕಳ ಜೀವ ತಿನ್ನುವ ಕಾಹಿಲೆಗೆ ನಾಟಿ ಮದ್ದು ಕೊಟ್ಟು ಕಪಾಡುವ ತಾಯಿಯನ್ನು ಕುರಿತು ನಿಮ್ಮ ಜೀವ ಉಳಿಸಲು ಆ ಗಿಡಗಳ ಜೀವ ಯಾಕೆ ತಿನ್ನುತ್ತೀರಿ ಎಂಬ ಮಾತು ಕೂಡ ಸಮಾನತೆ, ಜೀವ ಪ್ರೇಮ ಇತ್ಯಾದಿ ಚಿಂತನೆಯ ಪ್ರಭಾವದಿಂದ ಕೂಡಿದೆ. ಇಲ್ಲಿಯೂ ಸುತ್ತಲಿನ ಪ್ರಕೃತಿಯನ್ನು ಕೆಡಿಸಬಾರದೆಂದು ಅರ್ಥವಾಗುವಷ್ಟು ಸುಲಭವಾಗಿ ಇಂಥ ಅಸಂಗತ ಅನಿಸುವ ಧ್ವನಿಗಳು ಜನರನ್ನು ಮುಟ್ಟಲಾರವು ಇಂಥ ಕಡೆ ಕತೆ ಓದುವವರಿಗೆ ಒಂದು ನಿರ್ದಿಷ್ಟಬಗೆಯ ಸಿದ್ಧತೆ ಅಗತ್ಯ ಎನಿಸುವಂತೆ ದೂರವಾಗುತ್ತಾರೆ ಕಥೆಗಾರರು.
ಅದರೆ ಇದು ನಮ್ಮ ಸಮಾಜದ ಸಾಮಾನ್ಯ ಅನುಭವಕ್ಕೆ ಗಾವುದ ದೂರ ಇರುವ ಕಾರಣ ಇಲ್ಲೆಲ್ಲ ಕಥೆ ಸೋಲುತ್ತದೆ. ಕತೆಗರರು ಇಂಥ ಅಸಹಜತೆಯನ್ನು ಕೃತಕವಾಗಿ ತರುವ ಯತ್ನವನ್ನು ಆದಷ್ಟು ಬೇಗ ಕೈಬಿಟ್ಟರೆ ಇವರಲ್ಲಿನ ನೈಜ ಕತೆಗಾರ ಸೊಗಸಾಗಿ ಮೂಡುತ್ತಾನೆ.
ಕೃತಿಯ ವಿವರ:
ಕೃತಿ: ಬಿಳೆ ದಾಸ್ವಾಳ
ಲೇಖಕರು: ಜಿ.ಕೆ. ನಂದಕುಮಾರ್
ಪ್ರಕಾಶಕರು: ಸಪ್ನ ಬುಕ್ ಹೌಸ್
ಪ್ರಕಟಗೊಂಡ ವರ್ಷ: ೨೦೨೨
ಒಟ್ಟು ಪುಟ: ೬೫
ಹೆಚ್ಚಿನ ವಿವರಕ್ಕಾಗಿ:
Bile Daasvala | Stories | Nandakumara. G. K. | Kannada Books | Sapna Book House – Harivu Books

No comments:
Post a Comment