Sunday, 8 December 2024

ಮಹಾಭಾರತದ ಕೀಚಕ ವಧಾ ಪ್ರಸಂಗ - ಒಂದು ಘಟನೆ ಹಲವು ಆಯಾಮಗಳು


ನಮ್ಮ ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳು ನಮ್ಮ ನಿತ್ಯ ಜೀವನದ ಹತ್ತು ಹಲವು ಸಮಸ್ಯೆಗಳನ್ನು ಕಟ್ಟಿಕೊಟ್ಟು ಅವುಗಳಿಗೆ ಶಾಶ್ವತ ಪರಿಹಾರವನ್ನೂ ಅದರಿಂದ ಕಲಿಯಬಹುದಾದ ಪಾಠಗಳನ್ನೂ ಮನಮುಟ್ಟುವಂತೆ ಚಿತ್ರಿಸುತ್ತವೆ. ಈ ಕಾರಣಕ್ಕಾಗಿ ಅವು ಎಂದೆಂದಿಗೂ ನಿತ್ಯ ನೂತನವಾಗಿವೆ. ಅಲ್ಲಿನ ಒಂದು ಪ್ರಸಂಗ ಕೀಚಕ ವಧೆ. ಇದು ಅತ್ಯಂತ ಸಂಕೀರ್ಣ ಆಯಾಮಗಳನ್ನು ಹೊಂದಿದೆ. ಸಾಮಾನ್ಯ ಗಂಡು ಹೆಣ್ಣಿನ ಸಂಬಂಧಗಳಿಂದ ಹಿಡಿದು ಸೇನಾಧಿಪತಿ ಸ್ಥಾನಮಾನ, ವ್ಯಕ್ತಗೆ ಅಧಿಕಾರದಿಂದ ಸಿಗುವ ಗೌರವ ಹಾಗೂ ಅದು ಹೋದ ಮೇಲೆ ಆಗುವ ಪರಿಸ್ಥಿತಿ ಇತ್ಯಾದಿಗಳನ್ನು ಅದು ತೋರಿಸುವ ರೀತಿ ಅನನ್ಯ. ಜೊತೆಗೆ ಈಘಟನೆಯ ಹಿಂದೆ ನಡೆಯುವ  ರಾಜತಾಂತ್ರಿಕ ಮಗ್ಗಲುಗಳನ್ನೆಲ್ಲ ಏಕ ಕಾಲಕ್ಕೆ ಈ  ಒಂದೇ ಘಟನೆಯ ಮೂಲಕ ಅರ್ಥಮಾಡಿಸುತ್ತದೆ. ಪ್ರಸ್ತುತ ಕುಮಾರ ವ್ಯಾಸನ ಗದುಗಿನ ಭಾರತದ ವಿರಾಟಪರ್ವದ ಭಾಗವನ್ನು ಆಧರಿಸಿ ಇಲ್ಲಿ ಕೆಲವು ಸಂಗತಿಗಳನ್ನು ಪರಿಶೀಲಿಸಲಾಗಿದೆ. (ಕರ್ಣಾಟ ಭಾರತ ಕಥಾ ಮಂಜರಿ, ಆದಿ ಪಂಚಕ, ಸಂಪುಟ-೧. ಟಿ. ವಿ. ವೆಂಕಟಾಚಲ ಶಾಸ್ತ್ರಿ (ಪ್ರ. ಸಂ), ಪ್ರಕಾಶಕರು, ಕನ್ನಡ ಗಣಕ ಪರಿಷತ್ತು, ಬೆಂಗಳೂರು೨೦೨೨, ಪುಟ ೬೯೭)

ಮತ್ಸ್ಯ ದೇಶದ ರಾಜ ವಿರಾಟ. ಅವನ ಪತ್ನಿ ಸುದೇಷ್ಣೆ. ಅವಳ ಸೋದರ ಕೀಚಕ. ವಿರಾಟನ ಸೇನಾಧಿಪತಿ. ಆತ ಅತಿಯಾದ ಹೆಣ್ಣಿನ ಚಪಲ ಇರುವಾತ. ಆದರೆ ಬಲಶಾಲಿ. ಇಡೀ ರಾಜ್ಯದ ಎಲ್ಲ ಸುಂದರ ಹೆಣ್ಣನ್ನೂ ಆತ ಕಾಡಿದ್ದಾನೆ, ಅವರ ಪುರುಷರಿಗೂ ಬುದ್ಧಿ ಕಲಿಸಿದ್ದಾನೆ. ಅವನಿಗೆ ಹೆಣ್ಣು ಬೇಕು ಅಂದರೆ ಆತ ಏನು ಬೇಕಾದರೂ ಮಾಡಬಲ್ಲ, ಆದರೆ ಆತ ಸೇನಾಧಿಪತಿ, ಸಾಲದ್ದಕ್ಕೆ ಆತ ರಾಜನ ಹತ್ತಿರದ ಬಂಧು ಹೀಗಾಗಿ ಜನ ಬೇರೆ ದಾರಿ ಇಲ್ಲದೇ ಸುಮ್ಮನಿದ್ದರು. ಇತ್ತ ಹಸ್ತಿನಾವತಿಯ ಪಾಂಡವರು ಮತ್ತು ಕೌರವರ ನಡುವೆ ನಡೆದ ಬಿರುಕಿನ ಸಂಬಂಧದ ಪರಿಣಾಮವಾಗಿ ಕೌರವರ ಮೋಸದಿಂದಾಗಿ ಪಾಂಡವರು ಹನ್ನೆರಡು ವರ್ಷ ವನವಾಸವನ್ನೂ ಒಂದು ವರ್ಷ ಅಜ್ಞಾತವಾಸವನ್ನೂ ಅನ್ಯಾಯವಾಗಿ ಅನುಭವಿಸಬೇಕಾಗುತ್ತದೆ.ಹನ್ನೆರಡು ವರ್ಷ ವನವಾಸ ಪೂರೈಸಿ ಒಂದು ವರ್ಷದಜ್ಞಾತವಾಸ ಪೂರೈಸಲು ಪಾಂಡವರು ಇನ್ನಿಲ್ಲದ ಕಷ್ಟಪಡುತ್ತಿದ್ದರು. ಬಲ ಮತ್ತು ಶೌರ್ಯದಿಂದ ಪ್ರಸಿದ್ಧರಾಗಿದ್ದ ಅವರು ಐವರು ಜೊತೆಗೆ ಪತ್ನಿ ದ್ರೌಪದಿ ಮತ್ತು ವಯಸ್ಸಾದ ತಾಯಿ ಕುಂತಿ ಎಲ್ಲರ ಚಿಂತೆ ಒಬ್ಬೊಬ್ಬರನ್ನೂ ಕಾಡುತ್ತಿತ್ತು. ಕುಂತಿ ಹಸ್ತಿನಾವತಿಯಲ್ಲಿ ವಿದುರನ ಜೊತೆ ಇರುತ್ತಾಳೆ. ಆದರೆ ದ್ರೌಪದಿ ಮಾತ್ರ ನಿತ್ಯ ಇವರೆಲ್ಲರ ಜೊತೆ ಕಷ್ಟಕ್ಕೆ ಹೆಗಲು ಕೊಡಬೇಕಾಗುತ್ತದೆ. ಇವರ ಪರಿಪಾಟಲಿನ ಲಾಭ ಪಡೆದು ಹೇಗಾದರೂ ಅವರನ್ನು ಪತ್ತೆ ಹಚ್ಚಿ ಮತ್ತೆ ಹನ್ನೆರಡು ವರ್ಷ ವನವಾಸಕ್ಕೆ ಅಟ್ಟಿದರೆ ಸಾಕೆಂದು ದುರ್ಯೋಧನ ತನ್ನ ಗೂಢಚಾರರನ್ನು ಸದಾ ಛೂ ಬಿಟ್ಟಿರುತ್ತಾನೆ. ಇವೆಲ್ಲ ಸಮಸ್ಯೆಗಳನ್ನು ಎದುರಿಸಲು ಪಂಡವರು ಪ್ರಾಮಾಣಿಕವಾಗಿ ಯತ್ನಿಸುತ್ತಾರೆ. ಹೀಗಾಗಿ ಅವರು ವೇಷ ಮರೆಸಿಕೊಂಡು ತಮ್ಮ ನಿಜ ರೂಪವನ್ನು ಶಕ್ತಿಯನ್ನು ಬಚ್ಚಿಟ್ಟು ಕಾಲ ಕಳೆಯುತ್ತಾರೆ. ಇನ್ನು ಕೆಲವೇ ತಿಂಗಳ ಪ್ರಶ್ನೆ ಇರುತ್ತದೆ. ಮನುಷ್ಯನಿಗೆ ಕಾಣಿಸಿಕೊಳಳದಿರುವುದು ದೊಡ್ಡ ಸಮಸ್ಯೆ. ಅಂದು ಎಂದಲ್ಲ, ಎಂದೆಂದಿಗೂ. ಪಾಂಡವರು ಹೆಸರಾಗಿದದವರು. ಅಂಥವರನ್ನು ಜನ ಗುರುತಿಸುವುದು ಸುಲಭ. ಅವರಿಗೆ ಇದರಿಂದ ಒದಗಬಹುದಾದ ತೊಂದರೆ ನೆನೆದೇ ದುರ್ಯೋಧನ ಅವರ ಮುಂದೆ ಈ ಸವಾಲು ಮುಂದೆ ಇಟ್ಟು ಅಷ್ಟರಲ್ಲಿ ಅವರ ಪತ್ತೆ ಆದರೆ ಮತ್ತೆ ಹನ್ನೆರಡು ವರ್ಷ ವನವಾಸ ಎಂಬ ಷರತ್ತು ವಿಧಿಸುತ್ತಾನೆ. ಹೀಗಾಗಿ ಅವರನ್ನು ಪತ್ತೆ ಹಚ್ಚಲು ನಿರಂತರ ಗೂಢಚಾರರನ್ನು ಬಿಟ್ಟಿರುತ್ತಾನೆ. ಆದರೆ ಅಜ್ಞಾತವಾಸದ ಕಷ್ಟ ಅನುಭವಿಸಿದ ಪಾಂಡವರ ಕಷ್ಟ ಅವರಿಗೇ ಗೊತ್ತು. ಅಷ್ಟಕ್ಕೂ ಈ ಸಲಹೆ ಕೊಟ್ಟವನು ಶಕುನಿ. ಇವನ ಮಾತನ್ನು ಬೆಂಬಲಿಸುವ ಕರ್ಣ. ಅವರ ಜಾಣ್ಮೆ ನೋಡಿ. ಮನುಷ್ಯನಿಗೆ ಇರುವ ಕಾಣಿಸಿಕೊಳ್ಳಲಾಗದ ಕಷ್ಟದ ಅರಿವು ಅವರಿಗೆ ಇತ್ತು ಅನಿಸುತ್ತದೆ. ಇಂದಿನ ಸಂದರ್ಭವನ್ನೇ ನೋಡಿ. ಸಿನಿಮಾ, ರಾಜಕಾರಣ ಇತ್ಯಾದಿ ಕ್ಷೇತ್ರದ ಸೆಲೆಬ್ರಿಟಿಗಳನ್ನು ಬಿಡಿ. ಜನ ಸಾಮಾನ್ಯರಿಗೂ ಇದು ಒಂದೆರಡು ದಿನದ ತರುವಾಯ ಕಾಡುತ್ತದೆ. ಇಂದು ಸಾಮಾಜಿಕ ಜಾಲ ತಾಣ, ಮೊಬೈಲುಗಳ ಮೂಲಕ ಒಮ್ಮೆ ಕಾಣಿಸಿಕೊಳ್ಳುವ ಜನರಿಗೆ ಒಂದು ದಿನ ಕೂಡ ಅದರಿಂದ ದೂರ ಇರುವುದು ಕಷ್ಟವಾಗುತ್ತದೆ.ಇಂಥ ಸಂದರ್ಭದಲ್ಲಿ ರಾಜರಂತೆ ಮೆರೆದ ಪಾಂಡವರು ವರ್ಷಗಟ್ಟಲೆ ಯಾರಿಗೂ ತಿಳಿಯದಂತೆ ಅವರ ನಡುವೆಯೇ ಇರಬೇಕೆನ್ನುವುದು ಕಡು ಕಷ್ಟ. ಇದನ್ನು ಧರ್ಮರಾಜ ಸಹೋದರರಿಗೆ ಮತ್ತೆ ಮತ್ತೆ ನೆನಪಿಸುತ್ತಾನೆ. ಮತ್ತೊಂದು ಕಷ್ಟವೆಂದರೆ ಪಾಂಡವರು ಹಸ್ತಿನಾವತಿ ಬಿಟ್ಟು ಬಹುದೂರ ಹೋಗುವ ಸ್ಥಿತಿಯಲ್ಲಿಲ್ಲ, ಅಸ್ತ್ರ, ಶಸ್ತ್ರಗಳಿಲ್ಲದೆ ಬರಿಗೈಯಲ್ಲೇ ಊಳಿಗದವರಂತೆ ಇದ್ದು ತಮ್ಮ ಗುರುತು ಹತ್ತದಂತೆ ಇರಬೇಕಿದೆ. ಸಾಲದ್ದಕ್ಕೆ ತಾವು ಇರುವ ಜಾಗ ದುರ್ಯೋಧನನಿಗೆ ಶತ್ರು ದೇಶವಾಗಿರಬೇಜು, ಶತ್ರುವಿನ ಶತ್ರು ತನಗೆ ಮಿತ್ರ ಎಂಬಂತೆ ವಿರಾಟನಿಗೆ ದುರ್ಯೋಧನ ಶತ್ರುವೆಂದೂ ಆತ ಪಾಂಡವರ ಅಭಿಮಾನಿ ಎಂಬುದು ಬೇರೆ. ಹೀಗಾಗಿ ಅಲ್ಲಿಗೆ ಹೋಗುತ್ತರೆ. ಧರ್ಮರಾಜನಿಗೆ ದ್ಯೂತ ಬರುತ್ತಿತ್ತು, ವಿರಾಟನಿಗೂ ಅದರ ಹುಚ್ಚು ಇತ್ತು. ಇದನ್ನು ಮುಂದಿಟ್ಟುಕೊಂಡು ತಾನು ಪಾಂಡವರ ಅಭಿಮಾನಿಯೆಂದೂ ಈಗ ಅವರು ಹಸ್ತಿನಾವತಿಯಲ್ಲಿ ಇಲ್ಲದ ಕಾರಣ ತನು ತಮ್ಮ ರಾಜ್ಯಕ್ಕೆ ಬಂದಿರುವುದಾಗಿ, ಭೀಮ ತಾನು ಪಾಂಡವರಿಗೆ ಅಡುಗೆ ಮಾಡುತ್ತಿದ್ದ ತಾನು ಈಗ ಕೆಲಸ ಹುಡುಕು ಬಂದಿದ್ದಾಗಿ ಹೇಳುವುದಾಗಿ ಅಲ್ಲಿ ಹೋದರೆ ಅರ್ಜುನ ತನ್ನ ಬಲವಾದ ತೋಳುಗಳಿಂದ ವೇಷ ತೊಡುವುದು ಕಷ್ಟವಾದ ಕಾರಣ ತಾನು ನಾಟ್ಯ ಪ್ರವೀಣನೂ ಅದನ್ನು ಕಲಿಸುವುದಾಗಿಯೂ ಕಲಿಸುವುದಾಗಿಯೂ ಶಿಖಂಡಿಯಂತೆ ವೇಷಹಾಕಿ ಅಲ್ಲಿ ಹೋಗುತ್ತಾನೆ. ನಕುಲ ಸಹದೇವರು ಹಸು  ಕುದುರೆಗಳ ಸಂಪತ್ತನ್ನು ಕಾಪಾಡುವವರಾಗಿಯೂ ಅಲ್ಲಿ ಕೆಲಸಕ್ಕೆ ಸೇರಿದರೆ ದ್ರೌಪದಿ ಕೇಶ ವಿನ್ಯಾಸ ಮಾಡುವ ಸೈರಂಧ್ರಿಯಾಗಿ ರಾಣಿ ಸುದೇಷ್ಣೆಯ ಸೇವೆಯ ಹೆಸರಲ್ಲಿ ಸೇರುತ್ತಾಳೆ. ಹೀಗೆ ಎಲ್ಲರೂ ವಿರಾಟನ ಮತ್ಸ್ಯ ನಗರ ಸೇರುತ್ತಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಊರ ಹೊರಗಿನ ಮರವೊಂದರ ಮೇಲೆ ಬಚ್ಚಿಟ್ಟು ಊರು ಪ್ರವೇಶಿಸಿ ತಮ್ಮನ್ನು ಬೇರೆ ಬೇರೆ ಹೆಸರು ಮತ್ತು ಕೆಲಸಗಳಿಗೆ ಮೀಸಲಿಟ್ಟುಕೊಂಡು ರಾಜ ವಿರಾಟನ ಬಳಿ ಬಂದು ಕೆಲಸ ಪಡೆಯುತ್ತಾರೆ, ಧರ್ಮರಾಜ ರಾಜನ ಸಲಹೆಗಾರನಾಗಿ ಕಂಕ ಭಟ್ಟ ಎಂಬ ಹೆಸರಲ್ಲಿಯೂ ಅರ್ಜುನ ಬೃಹನ್ನಳೆಯಾಗಿ ನಾಟ್ಯ ಕಲಿಸುವವನಾಗಿಯೂ ಭೀಮ ವಲಲ ಎಂಬ ಹೆಸರಲ್ಲಿ ಅಡುಗೆಯವನಾಗಿಯೂ ನಕುಲ ಸಹದೇವರು ಕುದುರೆ ಲಾಯ ಮತ್ತು ಗೋಶಾಲೆಯ ಉಸ್ತುವಾರಿ ನೋಡಿಕೊಳ್ಳುವವರಾಗಿಯೂ ಕೆಲಸಕ್ಕೆ ಸೇರುತ್ತಾರೆ. ದ್ರೌಪದಿ ಕೇಶ ವಿನ್ಯಾಸ ಮಾಡುವ ಸೈರಂಧ್ರಿಯಾಗಿ ಸುದೇಷ್ಣೆಯ ಬಳಿಯೂ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ. ದ್ರೌಪದಿಯ ಅನುಪಮ ಸೌಂದರ್ಯ ಕಂಡ ಸುದೇಷ್ಣೆ ಅವಳನ್ನು ಕೆಲಸಕ್ಕೆ ಇಟ್ಟುಕೊಂಡರೆ ತನ್ನ ಪತಿಯೇ ದಾರಿ ತಪ್ಪ ಬಹುದೆಂದು ಹಿಂಜರಿಯುತ್ತಾಳೆ. ಆದರೆ ಅಂತಿಮವಾಗಿ ಅವಳನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾಳೆ. ಸುದೇಷ್ಣೆ ಅಂದುಕೊಂಡಂತೆ ಆಕೆಯ ರೂಪದಿಂದ ತೊಂದರೆ ಆಗುತ್ತದೆ ಆದರೆ ಗಂಡನಿಂದ ಅಲ್ಲ, ಬದಲಿಗೆ ತನ್ನ ತಮ್ಮ ಕೀಚಕನಿಂದ. ಆತನ ಸ್ವಭಾವ ತಿಳಿದಿದ್ದ ಸುದೇಷ್ಣೆ ಆಕೆ ಅವನ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿದ್ದರೂ ಒಂದು ಸಂದರ್ಭದಲ್ಲಿ ಆತ ಅವಳನ್ನು ನೋಡಿ ಅವಳೊಂದಿಗೆ ಸೇರುವ ಆಸೆಯನ್ನು ಅಕ್ಕನಿಗೆ ಹೇಳುತ್ತಾನೆ, ಅವಳು    ತಿಳಿ ಹೇಳುವಲ್ಲಿ ಸೋತು ಅವನ ಬಳಿ ದ್ರೌಪದಿ ಹೋಗುವಂತೆ ಮಾಡುತ್ತಾಳೆ. ಅವನ ಕಪಟತನ ತಿಳಿದ ದೌಪದಿ ತನು ಗಂಧರ್ವರ ಪತ್ನಿ ಎಂದೂ ಅವರಿಗೆ ತಿಳಿದರೆ ಕಷ್ಟವೆಂದೂ ಹೇಳಿ ಉಪಾಯದಿಂದ ಆತ ನಾಟ್ಯಶಾಲೆಗೆ ಒಂಟಿಯಾಗಿ ಬರುವಂತೆ ಮಾಡಿ ವಿಷಯವನ್ನು ಭೀಮನಿಗೆ ತಿಳಿಸುತ್ತಾಳೆ. ಅಷ್ಟರಲ್ಲಿ ವಿರಾಟನ ಆಸ್ಥಾನದಲ್ಲಿ ದ್ರೌಪದಿಗೆ ಅವಮಾನವಾದರೂ ಪಾಂಡವರು ಏನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ, ಇದನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದ ಭೀಮ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.

ಇದೇ ಸಂದರ್ಭ ಅಂದುಕೊಂಡ  ಭೀಮ ಹೆಣ್ಣಿನಂತೆ ವೇಷ ಧರಿಸಿ ನಾಟ್ಯಶಾಲೆಯಲ್ಲಿ ಕೀಚಕನಿಗಾಗಿ ಕಾಯುತ್ತಿರುತ್ತಾನೆ, ನಿರೀಕ್ಷೆಯಂತೆ ಬಂದ ಕೀಚಕ ಆಕೆಯ ಮೈ ಮುಟ್ಟುತ್ತಾನೆ, ಆದರೆ ಆ ಮೈಯ ಗಡಸುತನದಿಂದ ಅನುಮಾನ ಬರುತ್ತದೆ. ಆ ಸಂಜೆಯ ಕತ್ತಲಿನಲ್ಲಿ ಏನೂ ಕಾಣದ ಕೀಚಕನ ಮೇಲೆ ಭೀಮ ದಾಳಿ ಮಾಡುತ್ತಾನೆ. ಭೀಕರ ಕಾಳಗ ನಡೆದು ಅಂತಿಮವಾಗಿ ಕೀಚಕ ಸಾಯುತ್ತಾನೆಕೀಚಕನ ಸಾವಿನಿಂದ  ನೊಂದ ಅವನ ತಮ್ಮಂದಿರಾದ ಉಪ ಕೀಚಕರು ಭೀಮನ ಮೇಲೆ ಮುಗಿಬೀಳುತ್ತಾರೆ. ಅವರನ್ನೆಲ್ಲ ಭೀಮ ಸಂಹರಿಸುತ್ತಾನೆ

ಸೇನಾಧಿಪತಿಯ ಸಾವು ಆಗಿದ್ದರೂ ಅದನ್ನು ಊರ ನಾಗರಿಕರು ಸಂಭ್ರಮಿಸುತ್ತಾರೆ. ಆತ ಉತ್ತಮ ಸೇನಾಧಿಪತಿ ಆಗಿದ್ದರೂ ಅವನ ವರ್ತನೆ ಜನಕ್ಕೆ ಅಸಹ್ಯ ಹುಟ್ಟಿಸಿತ್ತು. ಭೀಮನ ಈ ಕೆಲಸದಿಂದ ಪಾಂಡವರಿಗೆ ಇದರಿಂದ ತಮ್ಮ ಗುರುತು ಯಾರಿಗಾದರೂ ಅನುಮಾನ ತರಿಸಬಹುದೆಂದು ಚಿಂತೆಯಾಗುತ್ತದೆ. ಕೀಚಕನಂಥ ಪರಾಕ್ರಮಿಯನ್ನು ಸಾಯಿಸಲು ಸಾಧ್ಯವಿಲ್ಲ ಎಂಬ ಅನುಮಾನ ಸಹಜವಾಗಿ ಮೂಡುತ್ತದೆ. ಇದರಿಂದ ಅತ್ತ ದುರ್ಯೋಧನ ಅನುಆನ ತಾಳಿ ಗೂಢಚಾರರನ್ನು ಮತ್ತೆ ಬಿಡುತ್ತಾನೆ, ಇತ್ತ ಕೀಚಕನಂಥ ಸೇನಾಧಿಪತಿ ಇಲ್ಲದ ವಿಚಾರ ತಿಳಿದ ವಿರಾಟನ ಶತ್ರುಗಳು ಆ ರಾಜ್ಯದ ಮೇಲೆ ದಾಳಿ ಮಾಡಲು ತಯಾರಿ ಮಾಡುತ್ತಾರೆ. ಅತ್ತ ದುರ್ಯೋಧನ ಹೇಗಾದರೂ ಪಾಂಡವರ ಪತ್ತೆ ಆದರೆ ಅವರನ್ನು ವನವಾಸಕ್ಕೆ ತಳ್ಳಿದರೆ ಇಷ್ಟು ವರ್ಷ ಅಧಿಕಾರ ಇಲ್ಲದ ಪಾಂಡವರನ್ನು ಪ್ರಜೆಗಳು ಸಹಜವಾಗಿ ಮರೆಯುತ್ತಾರೆಂಬ ಲೆಕ್ಕಾಚಾರದಲ್ಲಿರುತ್ತಾನೆ. ಕೊಲ್ಲುತ್ತಾನೆ.ಊರ ಜನಕ್ಕೆ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತದೆ.ಇದರಿಂದ ಭೀತಿಗೊಂಡ ಜನ ಕೀಚಕನನ್ನು ಕೊಂದವನು ಸಾಮಾನ್ಯನಲ್ಲ ಎಂಬ ತೀರ್ಮಾನಕ್ಕೆ ಬಂದು ದ್ರೌಪದಿಯತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಈ ವಿಷಯ ತಿಳಿದ ದುರ್ಯೋಧನ ಪಾಂಡವರ ನ್ನು ಪತ್ತೆ ಮಾಡಿ ಖಚಿತಮಾಡಿಕೊಳ್ಳಲು ಅಲ್ಲಿಗೆ ಬೇಹುಗಾರರನ್ನು ಕಳುಹಿಸುತ್ತಾನೆ, ಆದರೆ ಅವರು ಬರಿಗೈನಿಂದ ಹಿಂದಿರುಗಿ ಹೋಗಿ ಅವರೆಲ್ಲ ಕಾಡಲ್ಲಿ ಸತ್ತಿರಬೇಕು, ಈ ಭೂಮಿಯಲ್ಲಿ ಯಾವ ಮೂಲೆಯಲ್ಲೂ ಇಲ್ಲ ಎಂದು ವರದಿ ಒಪ್ಪಿಸುತ್ತಾರೆ. ಇದರ ಚಿತ್ರಣವನ್ನು ಕುಮಾರವ್ಯಾಸ ತನ್ನ ಗದುಗಿನಭಾರತ ಕೃತಿಯಲ್ಲಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾನೆ. ಒಟ್ಟಿನಲ್ಲಿ ಜನಸಾಮಾನ್ಯ ದೃಷ್ಟಿಯಲ್ಲಿ ಕೇವಲ ಅಧಿಕಾರ ಮಾತ್ರ ಮುಖ್ಯವಲ್ಲ, ಅದರ ಜೊತೆಗೆ ನೀತಿ, ನಡವಳಿಕೆ ಕೂಡ ಮುಖ್ಯ ಎಂಬುದನ್ನು ಕೀಚಕನ ಸಾವನ್ನು ಸಂಭ್ರಮಿಸುವ ಜನರ ಮನಸ್ಸು ತೋರಿಸುತ್ತದೆ. ಜೊತೆಗೆ ತಮಗೆ ಒದಗಿದ್ದ ಕಷ್ಟವನ್ನು ಕೊನೆಗಾಣಿಸಿದವರಿಗೆ ಜನರು ಎಂಥ ಸ್ಥಾನ ಕೊಡುತ್ತಾರೆಂಬುದನ್ನೂ ಇದು ಹೇಳುತ್ತದೆ. ಕಾಮದ ವಾಂಛೆಗೆ ಬುದ್ಧಿ ಕೊಟ್ಟರೆ ವಿನಾಶವೇ ಗತಿ ಎಂಬ ಭಾರತೀಯ ಪರಂಪರೆಯ ನಂಬಿಕೆಯನ್ನು ಈ ಘಟನೆ ಮತ್ತಷ್ಟು ಬಲಗೊಳಿಸುತ್ತದೆ. ತನ್ನ ಕೆಟ್ಟ ನಡತೆಯಿಂದ ಕೀಚಕ ವ್ಯಕ್ತಿ ಏನು ಮಾಡಬಾರದು ಎಂಬುದನ್ನು ತೋರಿಸಿ ತನ್ನ ಹೆಸರು ಸದಾ ಎಚ್ಚರಿಕೆ ಕೊಡುವಂತೆ ಮಾಡುತ್ತಾನೆ. ಕಾಮ ಪಿಪಾಸುವನ್ನು ಜನ ಕೀಚಕ ಎಂಬ ಬಿರುದಿನೊಂದಿಗೆ ಗುರುತಿಸಿ ಆ ಹೆಸರನ್ನು ಶಾಶ್ವತ ಪಡೆನುಡಿಯಾಗುವಂತೆ (idiom) ಮಾಡಿದ್ದಾರೆ. ಮಹಾಭಾರತದಲ್ಲಿ ಬರುವ ಕೀಚಕವಧೆ ಪ್ರಸಂಗ ಅನೇಕ ರೀತಿಯಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮಗಳನ್ನು ತಲಪುತ್ತದೆ. ಇದರಲ್ಲಿರುವ ರಾಜಕೀಯ ಸಂಗತಿಗಳು ಇಂದಿಗೂ ಮಾರ್ಗದರ್ಶಕವಾಗಿವೆ. 

    

  

   


No comments:

Post a Comment