ಇವೆಲ್ಲ ಪರಿಹಾರವಾಗಲು ಪ್ರತ್ಯೇಕ ಜಿಲ್ಲೆ ರಚನೆಯೊಂದೇಪರಿಹಾರವೇ? ಅಷ್ಟಕ್ಕೂ ಜಿಲ್ಲಾ ರಚನೆಯಿಂದ ತೊಂದರೆಗಳು ಏನೂ ಇಲ್ಲವೇ? ಹಾಗೆ ನೋಡಿದರೆ ಜಿಲ್ಲೆಯೊಂದರ ರಚನೆಯಿಂದ ಲಾಭ ನಷ್ಟ ಎರಡೂ ಇದೆ. ಇದನ್ನು ಪ್ರತ್ಯೇಕ ಜಿಲ್ಲಾ ರಚನೆಯ ಬೇಡಿಕೆಯವರು ಗಮನಿಸುತ್ತಿಲ್ಲ. ಉತ್ತರ ಕನ್ನಡದಲ್ಲಿ ದೂರವಿರುವ ತಾಲ್ಲೂಕಿನ ಜನಕ್ಕೆ ಆಡಳಿತಾತ್ಮಕ ತೊಂದರೆ ಆಗುತ್ತದೆ ಎಂಬ ಕಾರಣ ನೋಡುವುದಾದರೆ ಇಲ್ಲಿ ದೂರವಿರುವ ತಾಲ್ಲೂಕುಗಳೆಂದರೆ ಮುಂಡಗೋಡು, ಹಳಿಯಾಳ ಮತ್ತು ಸುಪಾ ತಾಲ್ಲೂಕುಗಳು ಹಾಗೆ ನೋಡಿದರೆ ರಾಜ್ಯದಲ್ಲಿ ಜಿಲ್ಲಾ ಕೇಂದ್ರಗಳಿಂದ ಇವುಗಳಿಗಿಂತ ದೂರವಿರುವ ಇತರೆ ಜಿಲ್ಲೆಗಳ ತಾಲ್ಲೂಕುಗಳಿವೆ ಉದಾಹರಣೆಗೆ ತುಮಕೂರಿನ ಪಾವಗಡ, ತಿಪಟೂರು, ಚಿತ್ರದುರ್ಗದ ಚಳ್ಳಕೆರೆ, ಬಾಗಲಕೋಟೆಯ ಬಹುತೇಕ ತಾಲ್ಲೂಕುಗಳು ಇದರಲ್ಲಿ ಸೇರಿವೆ. ಒಂದು ಜಿಲ್ಲೆಯ ರಚನೆಗೆ ನಿರ್ದಿಷ್ಟ ಮಾನದಂಡಗಳಿವೆ ಇದರಲ್ಲಿ ದೂರ ಸೇರಿಲ್ಲ, ಇದರಲ್ಲಿ ಮುಖ್ಯವಾಗುವುದು ಜನಸಂಖ್ಯೆ, ಭೂವ್ಯಾಪ್ತಿ, ಆದಾಯ ಹಾಗೂ ಮತ್ತಿತರ ಸಂಗತಿಗಳು ಬರುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಹೆಚ್ಚು ಶ್ರೀಮಂತ ತಾಲ್ಲೂಕುಗಳೆಂದರೆ ಶಿರಸಿ ಮತ್ತು ಕಾರವಾರಗಳು. ಇವೆರಡನ್ನೇ ಕೇಂದ್ರವಾಗಿಸಿ ಜಿಲ್ಲೆಗಳಾಗಬೇಕೆಂಬ ಕೂಗಿದೆ. ಒಂದರ್ಥದಲ್ಲಿ ಇದು ಹಳೆಯ ಕೂಗು. ಆದರೆ ದಕ್ಷಿಣಕನ್ನಡ ಜಿಲ್ಲೆ ಒಡೆದ ಮೇಲೆ ಈ ದನಿಗೆ ಮತ್ತಷ್ಟು ಬಲ ಬಂದಿದೆ. ಇದಕ್ಕೆ ಕಾರಣ ಅದನ್ನು ಮಾಡಿದರು, ನಮ್ಮ ಜಿಲ್ಲೆ ಒಡೆಯಲಿಲ್ಲ ಎಂಬುದೇ ಪ್ರಮುಖ ಕಾರಣ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆದಾಯ ಸದ್ಯ ಪ್ರವಾಸೋದ್ಯಮ ಮತ್ತು ತೋಟಗಾರಿಕೆಯ ಬೆಳೆಗಳು. ಇವು ಬರುತ್ತಿರುವುದೇ ಎರಡು ಪ್ರಮುಖ ತಾಲ್ಲೂಕುಗಳಿಂದ. ಈಗ ಇವನ್ನೇ ಒಡೆದರೆ ಉಳಿದ ತಾಲ್ಲೂಕುಗಳು ಅಂಥ ಅದಾಯವನ್ನು ತರಬಲ್ಲವೇ?
ಆಯಿತು, ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದು ಎರಡು ಜಿಲ್ಲೆಗೆ ಒಪಪಿಗೆ ಕೊಟ್ಟಿತು ಎಂದೇ ಭಾವಿಸೋಣ. ಆಗ ಹೊ ತಾಲ್ಲೂಕುಗಳು ಯಾವವಾಗಬೇಕು ಎಂಬ ಪ್ರಶ್ನೆ ಮುಂದಾಗಿ ಪಂಚಾಯ್ತಿ ಮಟ್ಟದ, ಹೋಬಳಿ ಮಟ್ಟದ ರಾಜಕೀಯ ಈ ಬಗ್ಗೆ ಶುರುವಾಗುತ್ತದೆ, ಹಿಂದೆ ಐವತ್ತರ ದಶಕದಲ್ಲಿ ನಮ್ಮ ದೇಶದಲ್ಲಾದ ಭಾಷಾವಾರು ಪ್ರಾಂತ್ಯಗಳ ವಿಭಜನೆಯಂತೆಯೇ ಇದು ಎಂದೂ ಮುಗಿಯದ ಸಮಸ್ಯೆ ಅಗುತ್ತದೆ. ಇದಕ್ಕಾಗಿ ನಾನು ಆಗಾಗ ತಮಾಷೆಗೆ ಹೇಳುವುದಿದೆ - ದೇಶದಲ್ಲಿ ಇರುವ ರಾಜ್ಯಗಳೆಲ್ಲ ದೇಶಗಳಾಗಬೇಕು, ಜಿಲ್ಲೆಗಳೆಲ್ಲ ರಾಜ್ಯಗಳಾಗಬೇಕು, ತಾಲ್ಲೂಕುಗಳೆಲ್ಲ ಜಿಲ್ಲೆಗಳಗಬೇಕು, ಹೋಬಳಿಗಳೆಲ್ಲ ತಾಲ್ಲೂಕುಗಳಾಗಬೇಕು, ಅದು ಅಭಿವೃದ್ಧಿ ಅಂದ್ರೆ ಅಂತ. ಇನ್ನೇನು ಹೇಳುವುದು? ಒಡೆಯುವುದು ಅಭಿವೃದ್ಧಿ ಆಗುವುದಾದರೆ ನಮ್ಮ ದೇಶದಲ್ಲಿ ಹಿಸೆಗಾಗಿ ಒಡೆದ ಮನೆಗಳೆಲ್ಲ ಅಭಿವೃದ್ಧಿ ಕಂಡು ದೇಶ ಸಮೃದ್ಧಿ ಕಂಡಿರುತ್ತಿತ್ತು. ಏನಂತೀರಿ? ಇಂಥ ಅಭಿವೃದ್ಧಿಯ ಕಲ್ಪನೆಯೇ ತಪ್ಪು. ಪ್ರತ್ಯೇಕ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಪ್ರತ್ಯೇಕ ಅನುದಾನ ಕೊಡುವುದಿಲ್ಲ, ಬಜೆಟ್ ಸಂದರ್ಭದಲ್ಲಿ ಪ್ರಾಶಸ್ತ್ಯ ಕೊಡುವ ಮಾಬದಂಡ ಬೇರೆಯೇ ಇರುತ್ತದೆ, ಅದಕ್ಕಾಗಿ ಸಂಘಟಿತ ಯತ್ನ ಮಾಡಬೇಕೇ ವಿನ ಜಿಲ್ಲೆ ಬೇಡುವುದಲ್ಲ, ಹಾಗೆಂದು ವಿಭಜನೆ ಆದ ಮಾತ್ರಕ್ಕೆ ಆದಾಯ ಮೂಲ ಕುಗ್ಗುವುದಿಲ್ಲ, ಆದರೆ ಹೊರೆ ಜಾಸ್ತಿ ಆಗುತ್ತದೆ. ಒಂದು ದೃಷ್ಟಿಯಲ್ಲಿ ಪ್ರತ್ಯೇಕ ಜಿಲ್ಲೆಯ ರಚನೆಯಿಂದ ಆಡಳಿತ ಹಾಗೂ ಸರ್ಕಾರಕ್ಕೆ ಹೊರೆ ಹೆಚ್ಚುತ್ತದೆ, ನೋಡುವುದಾದರೆ ಜಿಲ್ಲೆ ಆಡಳಿತಕ್ಕೆ ಬೇಕಾದ ಅಧಿಕಾರಿ ವರ್ಗಗಳು ಹಾಗೂ ಅವರಿಗೆ ಒದಗಿಸಬೇಕಾದ ಸಂಬಳ ದ ಜೊತೆ ಕೊಡಬೇಕಾದ ಸೌಲಭ್ಯ, ಸವಲತ್ತುಗಳ ವೆಚ್ಚ, ಆ ಪ್ರಮಾಣದ ಐ ಎ ಎಸ್ ಐಪಿ ಎಸ್ ಅಧಿಕಾರಿ ವರ್ಗ ಪೂರಕ ಸಿಬ್ಬಂದಿಗಳು, ಜಿಲ್ಲೆಗೆ ಒದಗಿಸಬೇಕಾದ ಕನಿಷ್ಠ ಸವಲತ್ತುಗಳು ಇತ್ಯಾದಿಗಳನ್ನು ಲೆಕ್ಕ ಹಾಕಿ ನೋಡಿದರೆ ಜನಕ್ಕೆ ಇವುಗಳಿಂದಾಗುವ ಹೊರೆಯೇ ಹೆಚ್ಚು. ಅಲ್ಲದೇ ಇದೇ ರೀತಿ ಅಭಿವೃದ್ಧಿಯ ಹೆಸರಲ್ಲಿ ಈಗಾಗಲೇ ಪ್ರತ್ಯೇಕವಾದ ಉಡುಪಿ, ರಾಮನಗರ ಮೊದಲಾದ ಜಿಲ್ಲೆಗಳು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂಬುದನ್ನು ಗಮನಿಸಬೇಕು, ಅಭಿವೃದ್ಧಿಗೂ ಪ್ರತ್ಯೇಕ ಜಿಲ್ಲೆಗೂ ಸಂಬಂಧವಿಲ್ಲ. ನಿಜವಾಗಿ ಬೇಕಿರುವುದು ಆಡಳಿತ ನಡೆಸಯವ ರಾಜಕಾರಣಿಗಳಿಗೂ ಸರ್ಕಾರದ ನೌಕರರಿಗೂ ಕೆಲಸದಲ್ಲಿ ಸೂಕ್ತ ತಾಳ ಮೇಳ ಇರಬೇಕಾದುದು ಅಗತ್ಯ. ಭ್ರಷ್ಟಾಚಾರ ರಹಿತ ಆಡಳಿತ ಇದ್ದರೆ ಅಭಿವೃದ್ಧಿ ತಾನಾಗಿ ಆಗುತ್ತದೆ. ಮೈಸೂರು ಅರಸರ ಕಾಲವನ್ನು ನೋಡಿ, ಅಷ್ಟು ಹಿಂದೆಯೇ ಯಾವ ವಿಶೇಷ ಸೌಲಭ್ಯಗಳು ಇಲ್ಲದಿರುವಾಗ ಜನ ಸೇವೆಯ ಪ್ರೀತಿ ಮತ್ತು ಸೇವಾ ಮನೋಭಾವದಿಂದ ಇಡೀ ಕರ್ನಾಟಕ ಪ್ರಾಂತ್ಯವನ್ನು ಹೇಗೆ ನಡೆಸಿದ್ದರು ನೋಡಿ, ಆಗಿನ ಸಂದರ್ಭವನ್ನು ಊಹಿಸಿ. ಹಾಗಾದರೆ ಅಭಿವೃದ್ಧಿಯ ಮಾನದಂಡ ಒಡೆಯುವುದಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಿಜಾಗಿ ಪ್ರತ್ಯೇಕ ಜಿಲ್ಲೆ, ತಾಲ್ಲೂಕು ಅಥವಾ ರಾಜ್ಯಗಳ ಬೇಡಿಕೆಯ ಹಿಂದೆ ಸ್ವ ಹಿತಾಸಕ್ತಿ, ರಾಜಕೀಯ ಮೇಲಾಟಗಳು ವಿಶೇಷವಾಗಿ ಕೆಲಸ ಮಾಡುತ್ತವೆಯೇ ವಿನಾ ಉಳಿದವೆಲ್ಲ ಗೌಣ. ಇಂಥ ಹಿತಾಸಕ್ತಿ ಇರುವವರು ಜನರ ಕಷ್ಟವನ್ನು ವೃಥಾ ಮುಂದೆ ಮಾಡಿ ತಮ್ಮದೇನೂ ಇಲ್ಲ ಎಂಬಂತೆ ವರ್ತಿಸುತ್ತಾರೆ. ಆದರೆ ನಿಜವಾದ ಕಾರಣ ಮುಖಂಡತ್ವವೇ ಆಗಿರುತ್ತದೆ.
ಈಗ ಉತ್ತರ ಕನ್ನಡ ಒಡೆಯುವ ನೆಪದಲ್ಲಿ ಸೋಕಾಲ್ಡ್ ಮುಖಂಡರು ಜನರ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಬಗ್ಗೆ ಜನವರಿ ೨೧ ಮಂಗಳವಾರದಂದು ಯಲ್ಲಾಪುರದಲ್ಲಿ ಸಭೆ ಕರೆದಿದ್ದಾರೆ, ಇಲ್ಲಿ ಮಾತನಾಡುವ ಎಲ್ಲರೂ ಪ್ರತ್ಯೇಕ ಜಿಲ್ಲೆ ಅಗಬೇಕೆನ್ನುವ ಹಂಬಲದವರೇ, ಆದರೆ ಅವರು ಕೊಡುವ ಕಾರಣಗಳು ಬೇರೆಯಾಗಿರುತ್ತವೆ ಅಷ್ಟೇ. ಅದಿರಲಿ, ನೆನಪಿಡಬೇಕಾದ ವಿಷಯವೆಂದರೆ ಪ್ರತ್ಯೇಕ ರಾಜ್ಯ, ಜಿಲ್ಲೆ ಅಥವಾ ತಾಲ್ಲೂಕುಗಳ ರಚನೆ ಆದ ಮಾತ್ರಕ್ಕೆ ಅಭಿವೃದ್ಧಿ ಆಗಿಬಿಡುವುದಿಲ್ಲ, ಅದಕ್ಕೆ ಅಗತ್ಯವಾಗಿ ಒದಗಿಸಬೇಕಾದ ಸೌಲಭ್ಯಕ್ಕೆ ತಾಂತ್ರಿಕ ಸಂಗತಿಗಳಿಗೆ ಮತ್ತಷ್ಟು ವೆಚ್ಚವಾಗುತ್ತದೆ. ಅಷ್ಟಕ್ಕೂ ಪ್ರತ್ಯೇಕ ಜಿಲ್ಲೆ ಮಾಡುವುದರಿಂದ ಒಂದಿಷ್ಟು ಜನ ವಿಜಯೋತ್ಸವ ಆಚರಿಸಬಹುದೇ ವಿನಾ ಇನ್ನೇನೂ ಇಲ್ಲ, ಈ ಗಾಗಲೇ ನಮ್ಮ ರಾಜ್ಯದಲ್ಲಿ ೩೨ ಜಿಲ್ಲೆಗಳಿದ್ದು, ಇನ್ನೂ ಹತ್ತಾರು ಜಿಲ್ಲೆಗಳ ಬೇಡಿಕೆ ಅನೇಕ ಕಡೆಗಳಲ್ಲಿದೆ. ಉತ್ತರ ಕರ್ನಾಟಕದಲ್ಲಿ ಇದರ ಬೇಡಿಕೆ ಅಭಿವೃದ್ಧಿಯ ಕಾರಣಕ್ಕೆ ಹೆಚ್ಚು. ಅಷ್ಟಕ್ಕೂ ಪ್ರತ್ಯೇಕ ಜಿಲ್ಲೆಯಾದ್ದರಿಂದ ಆದ ಉಪಯೋಗವೇನು ಅದರಿಂದಲೇ ಉದ್ಧಾರವಾದ ಊರು ಯಾವುದೆಂದು ಯಾರೂ ಹೇಳಲಾರರು. ಆಡಳಿತಾತ್ಮಕವಾಗಿ ಒಂದೇ ಕಡೆ ಬೀಳುತ್ತಿದ್ದ ಹೊರೆ ಸ್ವಲ್ಪ ಹಂಚಿಹೋಗುತ್ತದೆ ಅನ್ನುವುದು ಮಾತ್ರ ಇಲ್ಲಿ ನಿಜ. ಈ ಸಮಸ್ಯೆಯ ಪರಿಹಾರಕ್ಕೆ ಸಿಬ್ಬಂದಿ ಸಂಖ್ಯೆ ಹೆಚ್ಚಳದಂಥ ಅನ್ಯ ಮಾರ್ಗಗಳಿವೆ, ಜಿಲ್ಲಾ ರಚನೆಯೊಂದೇ ಪರಿಹಾರವಲ್ಲ, ಒಟ್ಟಿನಲ್ಲಿ ಎಲ್ಲಾದರೂ ಒಂದು ಕಡೆ ಇಂಥ ಪ್ರತ್ಯೇಕತೆಯ ಲಾಭ ನಷ್ಟಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ, ಅದು ಉತ್ತರ ಕನ್ನಡ ಜಿಲ್ಲೆಯ ವಿಭಜನೆಯ ಕಾರಣಕ್ಕೆ ಆಗುವಂತಾಗಲಿ.

No comments:
Post a Comment