ಅದು ೧೯೯೦ ರ ದಶಕ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದೆ. ನನ್ನ ಹಿರಿಯ ಮಿತ್ರರಾದ, ಇಂದು ಕುವೆಂಪು ವಿವಿಯಲ್ಲಿ ಪ್ರಾಧ್ಯಾಪಕರಾದ ಡಾ, ಪ್ರಶಾಂತ್ ನಾಯಕ್ ಅವರು ಕೆಎಸ್ ನ ಅವರ ಕಾವ್ಯ ಕುರಿತು ಸಂಶೋಧನೆ ಮಾಡುತ್ತಿದ್ದರು. ನಾವು ಯಾವಾಗ ಎಂದರೆ ಆಗ ಕಂಡ ಕಂಡ ಕವಿ ಸಾಹಿತಿಗಳ ಮನೆಗೆ ಲಗ್ಗೆ ಇಡುತ್ತಿದ್ದೆವು. ಹೇಳಿ ಕೇಳಿ ಮೈಸೂರು ಸಾಹಿತಿಗಳ ತವರೂರು. ಅದು ಈ ಬುದ್ಧಿಯನ್ನು ಕಲಿಸಿತ್ತು. ಒಮ್ಮೆ ಮಾತನಾಡುವಾಗ ಮಿತ್ರ ಪ್ರಶಾಂತ್, ಕೆ ಎಸ್ ನ ಅವರ ಸಂದರ್ಶನ ಮಾಡಲು ಅವರ ಮನೆಗೆ ಹೋಗಬೇಕಿದೆ ನನ್ನ ನೆರವಿಗೆ ಬರ್ತಿಯಾ ಎಂದು ಕೇಳಿದ. ಸ್ವರ್ಗ ಸಿಕ್ಕ ಅನುಭವ. ನಡಿ ಎಂದೆ. ನಮ್ಮ ಜೊತೆ ಇಂದು ಕೆ ಆರ್ ನಗರದಲ್ಲಿ ಪ್ರಾಧ್ಯಾಪಕರಾದ ಮಿತ್ರ ಎಚ್ ಎನ್ ಮಂಜುರಾಜ್ ಸೇರಿಕೊಂಡರು. ಸಂದರ್ಶನಕ್ಕೆ ಅಗತ್ಯವಾದ ಕ್ಯಾಮೆರಾ, ಟೇಪ್ ರೆಕಾರ್ಡರ್ ಇತ್ಯಾದಿ ಸಿದ್ಧ ಮಾಡಿಕೊಂಡು ನಿಗದಿತ ದಿನ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿದ್ದ ಕೆ ಎಸ್ ನ ಅವರ ಮನೆಗೆ ಯಾತ್ರೆ ಹೊರೆಟೆವು. ಅದೇನು ಸಂಭ್ರಮ ಅಂತೀರಿ? ಅವರನ್ನು ದೂರದಿಂದ ಸಾಕಷ್ಟು ಬಾರಿ ಕಂಡಿದ್ದ ನಮಗೆ ಕನಿಷ್ಠ ಹತ್ತಿರದಿಂದ ಖಾಸಗಿಯಾಗಿ ಅವರನ್ನು ಅವರ ಮನೆಯಲ್ಲೇ ಕಾಣುವ ಸೌಭಾಗ್ಯ ನೆನೆದು ಹತ್ತಾರು ಕನಸುಗಳು ದಾರಿ ಉದ್ದಕ್ಕೆ. ಅಂದು ಮೆಜೆಸ್ಟಕ್ ನಿಂದ ಬಸ್ ಹಿಡಿದು ನೇತಾಡಿಕೊಂಡು ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಬಳಿ ಇಳಿದು ಅವರ ಮನೆ ಹುಡುಕಿಕೊಂಡು ಹೋದ ಇಂಚಿಂಚೂ ನೆನಪಿದೆ ಮಾತ್ರವಲ್ಲ, ಕಣ್ಣಿಗೆ ಕಟ್ಟಿದಂತಿದೆ. ಅದು ಮಟ ಮಟ ಮಧ್ಯಾಹ್ನದ ಹೊತ್ತು, ಹೊಟ್ಟೆ ಚುರ್ ಅನ್ನುತ್ತಿತ್ತು. ಮಂಜುರಾಜ್ ತಾಳಿ ಏನಾದ್ರೂ ತಿನ್ನೋಣ ಎಂದು ಹತ್ತಿರದ ಹೊಟೇಲ್ ಒಂದಕ್ಕೆ ಎಳೆದರು. ಇಡ್ಲಿ ದೋಸೆ, ಕಾಫಿ ಹೊಡೆದು ಹೊಟ್ಟೆ ಸ್ವಲ್ಪ ತಂಪಾದ ಮೇಲೆ ಮುಂದಡಿ ಇಟ್ಟೆವು. ಅವರ ಮನೆ ತಲುಪುವುದು ಕಷ್ಟವಾಗಲಿಲ್ಲ, ಅವರಿಗೆ ಆಗಲೇ ಕರೆ ಮಾಡಿ ಬರುತ್ತಿರುವುದಾಗಿ ಹೇಳಿದ್ದೆವು. ವಯಸ್ಸಾದ ಅವರು ಕುರ್ಚಿಯೊಂದರ ಮೇಲೆ ಎಲೆ ಅಡಕೆ ಅಗೆಯುತ್ತ, ಮೂಗು ತುಂಬ ನಾಸಿಪುಡಿ ಏರಿಸಿಕೊಂಡು ನಗುಮುಖದಿಂದ ಕುಳಿತಿದ್ದರು. ಕಂಡ ಕೂಡಲೇ ದೇವರನ್ನು ಕಂಡಂತೆ ಉದ್ದ ಅಡ್ಡ ಬಿದ್ದೆವು ಅವರು ಏಳಿಪ್ಪಾ ಅಂದರು. ಕುಳಿತುಕೊಳ್ಳಲು ಹೇಳಿದರು ಅವರ ಬಳಿ ಕುಳಿತೆವು. ಪ್ರಶಾಂತ್ ತಮ್ಮ ಅಧ್ಯಯನದ ಉದ್ದೇಶ ವಿಧಿ ವಿಧಾನ ವಿವರಿಸುತ್ತಿದ್ದರು. ತಾಳಿ ಅಂದವರೇ ತಮ್ಮ ಬಾಳ ಸಂಗಾತಿ ವೆಂಕಮ್ಮನವರನ್ನು ಪ್ರೀತಿಯಿಂದ ಯಾವುದೋ ಹೆದರಲ್ಲಿ ಕೂಗಿದರು. ಅವರು ಬಂದರು. ತರ್ತೀಯಾ ಅಂದರು. ಅವರು ಅಡುಗೆ ಮನೆಗೆ ಹೋದವರೇ ನಾಲ್ಕು ಬಟ್ಟಲು ತುಂಬ ಚಕ್ಕುಲಿ, ಕೋಡುಬಳೆ, ಮೈಸೂರು ಪಾಕು ಇತ್ಯಾದಿಗಳನ್ನು ಒಪ್ಪವಾಗಿ ಎಲ್ಲದರಲ್ಲೂ ಸಮನಾಗಿಟ್ಟುಕೊಂಡು ಬಂದರು. ಅನಂತರ ಬಿಸಿ ಬಿಸಿ ಕಾಫಿ ಬಂತು. ಎಲ್ಲವನ್ನೂ ಕಂಡು ತಿನ್ನುವ ಬಯಕೆ ಆದರೂ ಆಗಲೇ ಸ್ವಲ್ಪ ಹೊಟ್ಟೆ ತುಂಬಿಸಿಕೊಂಡಿದ್ದ ನಮಗೆ ಪರಸ್ಪರ ಮುಖ ನೋಡುವುದು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ, ಅಷ್ಟರಲ್ಲಿ ಪ್ರಶಾಂತ್ ಅಮ್ಮಾ ತಾಳಿ ನಮಗೆ ಒಂದೇ ತಟ್ಟೆ ಸಾಕು ಅಂದವರೇ ಉಪಾಯವಾಗಿ ಎರಡನ್ನು ಹಿಂದೆ ಕಳಿಸಿದರು. ಸದ್ಯ ಅಂದುಕೊಂಡೆ. ಅನಂತರ ಅವರ ಮನೆಗೆ ಅನೇಕ ಬಾರಿ ಹೋಗಿದ್ದಿದೆ, ಯಾವಾಗಲೇ ಹೋಗಿ ಅಲ್ಲಿ ಮೊದಲು ಇಂಥ ಕಿರು ಆತಿಥ್ಯ ಇದ್ದೇ ಇರುತ್ತಿತ್ತು. ಅನಂತರ ಮಾತುಕತೆ. ತಾಯಿ ವೆಂಕಮ್ಮನವರಂತೂ ಅನ್ನಪೂರ್ಣೆ. ಇಷ್ಟೆಲ್ಲ ಆದಮೇಲೆ ಹೇಳಿ ಅಂದರು. ನಾವು ಮಾತಾಡಲು ಶುರು ಮಾಡಿದೆವು ಪ್ರಶಾಂತ್ ಒಂದೊಂದೇ ಪ್ರಶ್ನೆಗಳನ್ನು ತಮ್ಮ ಅಧ್ಯಯನಕ್ಕೆ ಬೇಕಾಗುವಂತೆ ಕೇಳುತ್ತಾ ಹೋದರು ಅವರು ಸಮಾಧಾನದಿಂದ ಉತ್ತರಿಸುತ್ತಾ ಹೋದರು, ನಡು ನಡುವೆ ಅವರ ನಸ್ಯ, ಏನೇನೋ ಹರಟೆ, ಮತ್ತೆ ಅಮ್ಮ ಬಾಳೆ ಹಣ್ಣು ತಂದರು. ಒಟ್ಟಿನಲ್ಲಿ ಅದೊಂದು ಸಮಾರಾಧನೆ. ನಮ್ಮನ್ನೆಲ್ಲ ಆತ್ಮೀಯವಾಗಿ ನಾವೆಲ್ಲ ಯಾವ ಮೂಲದವರು ಏನೇನು ಮಾಡುತ್ತಿದ್ದೇವೆಂದು ವಿಚಾರಿಸಿ ಆಯ್ತಪ್ಪಾ ಚೆನ್ನಾಗಿ ಓದಿ ಎಂದು ಹಾರೈಸಿದರು. ಅವರೊಂದಿಗೆ ಒಂದಿಷ್ಟು ಫೋಟೋ ತೆಗೆಯಿಸಿಕೊಂಡೆವು. ಅದಿನ್ನೂ ಹಸಿ ನೆನಪು. ಅವರ ಮುಗ್ಧ ಮುಖ ಮತ್ತು ನಗು ಫೋಟೋದಲ್ಲಿ ಇನ್ನೂ ಹಾಗೆಯೇ ಇದೆ. ಕಾವ್ಯದ ಬಗ್ಗೆ ಸಂಭ್ರಮದಿಂದ ಮಾತಾಡಿದರು, ಅಲ್ರಪ್ಪಾ ಅದೇನು ನವ್ಯ ಅಂತಲ್ಲಾ, ಅದರ ಆರಂಭ ಅಡಿಗರು, ಗೋಕಾಕರಿಂದ ಆಯಿತು ಅವರೇ ಮೊದಲು ಬರೆದವರು ಅಂತ ಹೇಳ್ತೀರಲ್ಲಾ, ಯಾಕೆ ನನ್ನ ಗಡಿಯಾರದಂಗಡಿ ಮುಂದೆ ಪದ್ಯ ಓದಿಲ್ಲವಾ? ಅದನ್ನು ಬಹಳ ಹಿಂದೆಯೇ ಬರೆದಿದ್ದೇನೆ ಅಂದರು. ನಾವು ತಲೆ ಆಡಿಸಿದೆವು.
ವಿಷಯ ಏನೆಂದರೆ ನನಗೆ ಈಚೆಗೆ ಬಹಳ ಕಾಡುವ ಸಂಗತಿ ಎಂದರೆ ಕನ್ನಡ ಕಾವ್ಯ ರಚನೆ ಇಂದು ಹಿಡಿದಿರುವ ದಾರಿಕಂಡಾಗಲೆಲ್ಲ ಇಂದು ಕೆ ಎಸ್ ನ ಇದ್ದಿದ್ದರೆ, ಅಡಿಗರು ಇದ್ದಿದ್ದರೆ, ಕುವೆಂಪು ಇದ್ದಿದ್ದರೆ ಅವರ ಪ್ರತಿಕ್ರಿಯೆ ಹೇಗೆ ಇರುತ್ತಿತ್ತು ಎಂಬ ಕಡೆ ಹೊರಳುತ್ತದೆ. ಈಗ ಕೆ ಎಸ್ ನ ಅವರ ಸಂದರ್ಭ. ಅವರ ಪ್ರೇಮ ಕಾವ್ಯ ಮೊದಲಾದ ವಸ್ತುಗಳ ರಚನೆಯನ್ನು ಇಂದಿನ ಯಾವ ಕವಿಗಳ ರಚನೆಗಳ ಜೊತೆಗೂ ಇಡಲಾಗದು. ಅವರ ರಚನೆಯಲ್ಲಿರುತ್ತಿದ್ದ ತಾಳ ಮೇಳ, ಲಯ, ಗೇಯತೆ ಗಳೆಲ್ಲ ಅವರೊಂದಿಗೇ ಹೋಗಿಬಿಟ್ಟಿವೆ. ಇಂದಿನ ಕಾವ್ಯ ಅದೇನು ಕಾವ್ಯವೋ ಅದ್ಯಾಕೆ ಹೀಗೆ ಬರೆಯುತ್ತಾರೋ ಅದನ್ನೇಕೆ ಪದ್ಯ ಅನ್ನಬೇಕು ಎಂದೇ ತಿಳಿಯುವುದಿಲ್ಲ, ನವ್ಯರ ವಾದದಂತೆ ಕಾವ್ಯ ಎಲ್ಲವನ್ನೂ ಬಿಚ್ಚಿಡಬಾರದು, ತಲೆ ತಿನ್ನಬೇಕು, ಅಷ್ಟಷ್ಟೇ ಬಿಟ್ಟುಕೊಡಬೇಕು. ಹಾಡುವುದಿರಲಿ, ಓದುವುದಕ್ಕೂ ಓದುಗ ಫಜೀತಿ ಪಡಬೇಕು, ಆಗ ಅದು ಕಾವ್ಯವಾಗುತ್ತದೆ, ಹಾಗಾಗಿ ಆಧುನಿಕ ಕಾವ್ಯದಲ್ಲಿ ಇಡಿಯಾದ ಪದಗಳನ್ನು ಎಲ್ಲೆಲ್ಲೋ ಒಡೆದು ತೋರಿಸಿ ಬೇಕಿದ್ದರೆ ಅರ್ಥ ಹುಡುಕಿಕೊಳ್ಳಿ ಅನ್ನಲಾಗುತ್ತದೆ. ಇಲ್ಲಿ ಇಂದಿನ ಹೊಸ ಕವಿಗಳ ಕಾವ್ಯಗಳ ಕೆಲವು ಸಾಲುಗಳನ್ನು ಸುಮ್ಮನೇ ಸ್ಯಾಂಪಲ್ಲಿಗೆ ಕೊಟ್ಟಿದ್ದೇನೆ:
"ಹಲವು ವಸಂತಗಳ ಕಂಡ ಜೀವ, ಬೆತ್ತಲು ದೇಹ, ಆಕಾಶ ನೋಡುತ್ತಾ ನಿಂತಿದೆ, ಗೆದ್ದಲು ಹುಳಕ್ಕಂತೂ ಜನ್ಮಾಂತರದ ಹಸಿವು."
"ನೀನಿ ದುಂಬಿಯಾದರೆ ನಾನು ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೋವಿಂದಾ ಹೂವಿಗೆ ಹಾರಿ ಹೋಗುವೆ."
"ಹುಡುಗಿಯರೇ ಹಾಗೆ ತುಂಬಾ prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ ತುಂಬಾ prompt ಆಗೇ ಇರ್ತಾರೆ. ಪರ್ಸ್ ಕಾಲಿ ಆಗುವತನಕ."
"ಜೊತೆ ಜೊತೆಯಾಗಿಯೇ ಇರ್ತಾರೆ. ಅವಳನ್ನೇ ನೋಡ್ತೀನಿ ಅಂತ complaint ಕೊಡ್ತಾರೆ. ಅವಳನ್ನೇ ನೋಡ್ತೀನಂತ complaint ಕೊಡ್ತಾಳೆ, ಹಾಗಾದರೆ ನಾ ಹೇಳಿದಾಗಲೆಲ್ಲ ನನ್ನ ನೋಡೇ ಇರ್ತಾಳೆ."
"ನೆನೆದು ನೆನೆದು ನೀರಿನಲ್ಲಿ ಯಾವ ಕಲ್ಲೂ ಮೆತ್ತಗಾಗಲಿಲ್ಲ, ನೆನೆದು ನೆನೆದು ನೀರಿನಲ್ಲಿ ಯಾವ ಕಲ್ಲೂ ಮೆತ್ತಗಾಗಲಿಲ್ಲ, ಒಂದೇ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ"
ಇಂಥ ಕಾವ್ಯಗಳನ್ನು ಓದಿದಾಗ ಇವೆಲ್ಲ ಯಾವ ದೃಷ್ಟಿಯಿಂದ ಕಾವ್ಯ? ಯಾವ ಸೀಮೆ ಪದ್ಯ? ಇವನ್ನೆಲ್ಲ ಪದ್ಯ ರೂಪದಲ್ಲೇ ಹೇಳಬೇಕೇ? ಇಂಥ ಭಾವನೆಗಳನ್ನು ವ್ಯಕ್ತ ಮಾಡಲು ಪ್ರಬಂಧ, ಗದ್ಯದಂಥ ಪ್ರಕಾರಗಳಿವೆಯಲ್ಲ ಎಂದು ಅನಿಸದೇ ಇರದು. ಆದರೆ ಇವೆಲ್ಲ ಪದ್ಯಗಳೇ. ಕಾವ್ಯ ಹೀಗೆಯೇ ಇರತಕ್ಕದ್ದು ಎಂಬ ನಿಯಮವಿಲ್ಲ, ಅದರಲ್ಲೂ ಇವೆಲ್ಲ ಒಂದೊಂದು ಪ್ರಯೋಗಗಳು ಅನ್ನಿ. ಅವುಗಳಲ್ಲಿ ಒಂದಿಷ್ಟು ಭಾವಗಳಿವೆ, ಏನೇನೋ ಚಿತ್ರಗಳಿವೆ, ಕಲ್ಪನೆಗಳಿವೆ, ಹಾಗಾಗಿ. ಆಯಿತು ನಮ್ಮಂಥ ಕಳೆಯ ಕಾವ್ಯಗಳ ಪ್ರಭಾವಕ್ಕೊಳಗಾಗಿ ಕಾವ್ಯವೆಂದರೆ ಅದು ನಮ್ಮ ಮನದಲ್ಲಿ ಗುನುಗುವಂತಿರಬೇಕು, ಒಂದು ಹಾಡಿನ ಲಯಕ್ಕೆ ಸಿಗಬೇಕು, ಇತ್ಯಾದಿ ಕಲ್ಪನೆಗಳಿರುತ್ತವೆ, ಮೊದಲ ಉದಾಹರಣೆ ವ್ಯಕ್ತಿಯ ಸ್ವಂತಿಕೆಯ ಸಂಕೇತ ಚಿತ್ರಿಸುವುದಾದರೆ ಎರಡನೆಯ ಉದಾಹರಣೆ ಒಂದು ಬಗೆಯ ಪ್ರೀತಿಯ ಅಭಿವ್ಯಕ್ತಿ. ಇಂಥ ಪ್ರೇಮ ಕಾವ್ಯಗಳು ಇಂದಿನವು. ಇಂಥ ಪ್ರೇಮ ಕಾವ್ಯಗಳನ್ನು ಓದಿ ಕೆ ಎಸ್ ನ ಮೊದಲಾದ ಹಿರಿಯ ಕವಿಗಳು ಏನು ಅನ್ನುತ್ತಿದ್ದರು ಎಂದಷ್ಟೇ ನನ್ನ ಕುತೂಹಲ. ಇದು ಇಂದಿನ ಕಾವ್ಯ ರಚನೆಯ ದಾಟಿ. ಕನ್ನಡ ಕಾವ್ಯಗಳೆಂದು ಇಂದು ಕರೆಯುವ ಭೀಕರ ಸ್ವರೂಪದ ಪದ್ಯಗಳಿಗೆ ಕೊರತೆ ಇಲ್ಲ.
ಆದರೆ ನಾವು ಬಯಸುವಂಥ ಗೇಯಗುಣದ ಪದ್ಯಗಳು ಇಲ್ಲವೆಂದಲ್ಲ, ಅವುಗಳನ್ನು ನಾವು ಭಾವ ಗೀತೆಗಳು ಎಂಬ ಉಪ ಪ್ರಕಾರದಲ್ಲಿಟ್ಟು ನೋಡುತ್ತೇವೆ, ಅವುಗಳಿಗೆ ಪ್ರತ್ಯೇಕ ಜಾಗ ಕೊಟ್ಟಿದ್ದೇವೆ. ಕಾವ್ಯದಲ್ಲಿ ಸಮಾನತೆ ಪ್ರತಿಪಾದಿಸಿದರೂ ಕಾವ್ಯವನ್ನೇ ಬೇರೆ ಬೇರೆ ಮಾಡಿದ್ದೇವೆ. ಅದಿರಲಿ. ಇಂಥ ಪದ್ಯಗಳನ್ನು ಕಷ್ಟಪಟ್ಟು ಓದಿದರೂ ಅವು ತಮ್ಮೊಳಗೆ ನಮ್ಮನ್ನು ಬಿಟ್ಟುಕೊಳ್ಳುವುದು ಕಷ್ಟ. ಇಂಥವೇ ಇಂದಿನ ಬಹುಪಾಲು ಕಾವ್ಯಗಳು. ಇವುಗಳ ಮೇಲೆ ಪೂರ್ವ ಸೂರಿಗಳ ಕಾವ್ಯಾಧ್ಯಯನಕ್ಕಿಂತ ಆಧುನಿಕ ಜನಪ್ರಿಯ ಸಿನಿಮಾ ಮತ್ತಿತರ ಮಾಧ್ಯಮಗಳ ಪ್ರಭಾವ ಹೆಚ್ಚಾಗಿರುತ್ತದೆ. ಇಂಥ ಕಾಲದಲ್ಲಿ ಕೆ ಎಸ್ ನ ಅವರಂಥವರ ಕೊರತೆ ತುಂಬ ಕಾಡುತ್ತದೆ, ಈಗ ಅವರಿದ್ದರೆ ಅವರು ಕಾವ್ಯ ರಚನೆ ಮಾಡುತ್ತಿದ್ದರೇ ಮಾಡಿದರೂ ಅವರ ಕಾವ್ಯದ ಹರಿವು ಹೇಗೆ ಇರುತ್ತಿತ್ತು? ಜಯಂತ್ ಕಾಯ್ಕಿಣಿ ಅವರ ಕಾವ್ಯದ ಸ್ವರೂಪದಂತೆ ಇನ್ನೂ ಗಟ್ಟಿಯಾಗಿ ಇರುತ್ತಿತ್ತಾ ಎಂದೆಲ್ಲ ಅನಿಸುತ್ತದೆ. ಇದನ್ನು ಕಾಣುವ ಭಾಗ್ಯ ನಮಗಿಲ್ಲ ಎಂದು ಸುಮ್ಮನಾಗಬೇಕು. ಆದರೆ ಹೊಸ ಗನ್ನಡದಲ್ಲಿ ಇಂದು ಸುಂದರ ಭಾವಗೀತೆ ಬರೆಯುವ ಕವಿಗಳಿಗೆ, ಅಂಥ ಕಾವ್ಯಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ, ಉದಾಹರಣೆಗೆ ಹಿರಿಯರಾದ ಎಚ್ ಎಸ್ ವೆಂಕಟೇಶ ಮೂರ್ತಿ, ಸುಬ್ರಾಯ ಚೊಕ್ಕಾಡಿ, ಅಂತೆಯೇ ಯುವ ಕವಿಗಳಾದ ಸಂತೋಷ್ ಚೊಕ್ಕಾಡಿ, ವಾಸುದೇವ ನಾಡಿಗ್ ಮೊದಲಾದವರು ಸಂಭ್ರಮಿಸುವ ತುಂಬ ಕವಿತೆಗಳನ್ನು ಕೊಟ್ಟಿದ್ದಾರೆ. ಹಾಗೆ ನೋಡಿದರೆ ಇಂದಿನ ಕನ್ನಡ ಕಾವ್ಯ ವೈವಿಧ್ಯದಿಂದ ಸಮೃದ್ಧವಾಗಿದೆ. ಇದಕ್ಕೆ ಹಿರಿಯ ಕವಿಗಳ ಉತ್ತಜನ ಸಾಕಷ್ಟಿದೆ.
ಅಂದ ಹಾಗೆ ಕೆ ಎಸ್ ನ ಅವರು ಕೇವಲ ಕವಿ ಮಾತ್ರ ಆಗಿರಲಿಲ್ಲ, ಅವರು ವಿಮರ್ಶೆ ಬರೆದಿದ್ದಾರೆ, ಪ್ರಬಂಧ ಕೂಡ ರಚಿಸಿದ್ದಾರೆ. ಮಾರಿಯಕಲ್ಲು, ದಮಯಂತಿ, ಉಪವನ ಮೊದಲಾದ ಗದ್ಯಗಳು ಸೊಗಸಾಗಿವೆ. ಆದರೆ ಅವರ ಪ್ರಧಾನ ಕೃಷಿ ಕಾವ್ಯ, ಅದರಲ್ಲೂ ಭಾವಗೀತೆ. ಅವರು ಕಾವ್ಯದಲ್ಲಿ ತಮ್ಮನ್ನು ತಾವು ಹೇಗೆ ಒಗ್ಗಿಸಿಕೊಳ್ಳುತ್ತಿದ್ದರೆಂದು ಅವರ ಮೊದಲ ಜನಪ್ರಿಯ ಸಂಕಲನ ಮೈಸೂರು ಮಲ್ಲಿಗೆ ಹಾಗೂ ಕೆಲವು ಕಾಲಾನಂತರ ಬಂದ ಶಿಲಾಲತೆ ಸಂಕಲನಗಳನ್ನು ನೋಡಿದರೆ ತಿಳಿಯುತ್ತದೆ. ಹಾಗಾಗಿ ಅವರು ಇಂದಿನ ಸಂದರ್ಭದಲ್ಲಿ ನಮ್ಮಂದಿಗೆ ಇದ್ದಿದ್ದರೆ ಹೊಸದನ್ನು ಅಳವಡಿಸಿಕೊಳ್ಳುತ್ತಿದ್ದರು ಮಾತ್ರವಲ್ಲ, ಹೊಸ ದಿಕ್ಕನ್ನೂ ಕಾಣಿಸುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅವರಿಗೆ ನಿರಂತರ ನಮನ.
ಅವರು ಮೈ ಸೂರಿನಲ್ಲಿ ೧೯೯೦ರಲ್ಲಿ ನಡೆದ ೬೦ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಮಿತ್ರ ವಾಸುದೇವ ನಾಡಿಗ್ ಮತ್ತು ನಾವು ಅರಮನೆ ಆವರಣದ ಆ ಜಾಗ ಬಿಟ್ಟು ಮೂರು ದಿನ ಕದಲಲಿಲ್ಲ. ಅವರೆಂದರೆ ಅಂಥ ಅಭಿಮಾನ ಇತ್ತು, ಈಗಲೂ ಇದೆ. ಅವರು ಅಜರಾಮರ.

No comments:
Post a Comment