ಆದರೂ ನನ್ನ ಮುಂದೆ ಸದ್ಯ ಎದ್ದಿರುವ ದೊಡ್ಡ ಸಮಸ್ಯೆಯೊಂದನ್ನು ಇಲ್ಲಿ ಕಾರಿಕೊಳ್ಳುತ್ತಿದ್ದೇನೆ. ನಿರೀಕ್ಷಣಾ ಜಾಮೀನು ಏಕೆಂದರೆ, ನನು ಕಾರಿಕೊಂಡ ವಿಷಯ ಓದಿ ನಾನು ಖನಡ ವಿರೋಧಿ ಎಂದು ನೀವು ಅಂದುಕೊಳ್ಳಬಾರದು ಎಂದು. ಅಂಥದ್ದೇನನ್ನೂ ನಾನು ಇಲ್ಲಿ ಹೇಳುವುದಿಲ್ಲ, ನಾನು ಹೇಳುವುದೆಲ್ಲ ಸತ್ಯ, ಸತ್ಯವನ್ನು ಬಿಟ್ಟು ನಾನು ಕನ್ನಡದಾಣೆಗೂ ಬೇರೇನೂ ಹೇಳುವುದಿಲ್ಲ. ವಿಷಯ ಏನೆಂದರೆ ಇಂದು ಕನ್ನಡಿಗರ ಹೆಮ್ಮೆ ಎಂದು ಹೇಳಲಾದ ತಾಯಿ ಭುವನೇಶ್ವರಿಯ ಬೃಹತ್ ಪ್ರತಿಮೆಯ ಅನಾವರಣ ಇಂದು ವಿಧಾನ ಸೌಧದ ಆವರಣದಲ್ಲಿ ನಡೆಯಲಿದೆ.
ಮೊದಲು ಈ ಪ್ರತಿಮೆಯ ಅಂಕಿ ಅಂಶ ನೋಡುವಾ. ಇದು ದಶಕಗಳ ಬೇಡಿಕೆ. ವಿಧಾನ ಸೌಧದ ಸುತ್ತ ಈಗಾಗಲೇ ಕೆಂಪೇಗೌಡ, ಬಸವಣ್ಣ, ನೆಹರು, ಅಂಬೇಡ್ಕರ್, ಮಹಾತ್ಮ ಗಾಂಧಿ,ಜಗಜೀವನ್ ರಾಮ್,ವಾಲ್ಮೀಕಿ ಮಹರ್ಷಿ,ಮೊದಲಾದವರ ಪ್ರತಿಮೆಗಳಿವೆ. ವಿಧಾನ ಸೌಧದ ನಿರ್ಮಾತೃ ಸ್ವತಃ ಹನುಂತಯ್ಯ, ಗಾಂಧಿ, ಪಟೇಲರ ಪ್ರತಿಮೆ ಸ್ಥಾಪಿಸಲು ಬಯಸಿದ್ದರಂತೆ. ತಮಾಷೆ ಅಂದರೆ ಹನುಮಂತಯ್ಯನವರ ಪ್ರತಿಮೆ ಅಲ್ಲಿಲ್ಲ, ವಿಷಯ ಇದಲ್ಲ. ಭುವನೇಶ್ವರಿ ಪ್ರತಿಮೆಗೆ ೨೪. ೨೧ ಕೋಟಿ ರೂ ವೆಚ್ಚವಾಗಿದೆಯಂತೆ. ಅನೇಕ ಟನ್ ಕಂಚು ಬಳಸಿ ಇದನ್ನು ತಯಾರಿಸಲಾಗಿದೆ. ಜೈ ಭುವನೇಶ್ವರಿ. ಇವಳನ್ನು ನಾವು ನೀವೆಲ್ಲ ಕನ್ನಡದ ತಾಯಿ ಎಂದು ಪೂಜಿಸುತ್ತೇವೆ. ಕೆಲವರು ಮೈಸೂರಿನ ಚಾಮುಂಡಿ ಕರ್ನಾಟಕದ ತಾಯಿ ಅನ್ನುತ್ತಾರೆ. ಇರಲಿ. ಎಲ್ಲ ಒಂದೇ. ವಿಷಯ ಇದೂ ಅಲ್ಲ. ಹೀಗೆ ಪ್ರತಿಮೆ ಸ್ಥಾಪಿಸುವ ಪರಿಪಾಠ ನಮ್ಮದಲ್ಲ, ಇದನ್ನು ತಮಿಳುನಾಡಿನಿಂದ ಎರವಲು ತರಲಾಗಿದೆ. ಅಲ್ಲಿ ಕಂಡಕಂಡಲ್ಲಿ ಪ್ರತಿಮೆಗಳಿವೆ. ನಾವೇನು ಕಮ್ಮಿ? ಈ ವಿಷಯದಲ್ಲಿ ಅವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ. ನಾವು ಸಾಧಕರ ಮರಣದ ಅನಂತರ ಅವರ ಪುಣ್ಯಸ್ಮರಣೆಗೆ ಪ್ತರಿಮೆ ಸ್ಥಾಪಿಸಿದರೆ ಅವರು ಜೀವಿಸಿದ್ದಾಗಲೇ ಪ್ರತಿಮೆ ಸ್ಥಾಪಿಸುತ್ತಾರೆ. ಅಲ್ಲಿನ ಮಾಜಿ ಸಿಎಂ ಕರುಣಾನಿಧಿ ತಮ್ಮ ಪ್ರತಿಮೆಯನ್ನು ತಾವೇ ಸ್ಥಾಪಿಸಿಕೊಂಡು ಸಂಭ್ರಮಿಸಿದ್ದರು. ನಮ್ಮಲ್ಲೂ ಒಮ್ಮೆ ಹೀಗೆ ಆಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಮೂಲ ಕತೃವಾದ ಮಹಾಕವಿ ಕುವೆಂಪು ಅವರ ಹೆಸರಲ್ಲಿ ಅಲ್ಲಿ ಕನ್ನಡ ಸ್ನಾತಕೋತ್ತರ ಕೇಂದ್ರವಿದೆ. ಅದರಲ್ಲಿ ಕುವೆಂಪು ಅವರ ಪ್ರತಿಮೆಯೊಂದಿದ್ದು ಅದನ್ನು ಸ್ವತಃ ಕುವೆಂಪು ಅವರೇ ಅನಾವರಣ ಮಾಡಿದ್ದರೆನ್ನಲಾಗಿದೆ. ಸರಿ, ವಿಷಯ ಇದೂ ಅಲ್ಲ, ಏನಪಾ ಅಂದ್ರೆ ಹೀಗೆ ಪ್ರತಿಮೆ ಸ್ಥಾಪಿಸುವ ಕಲ್ಪನೆ ಆಧುನಿಕ ಸಮಾಜದಲ್ಲಿ ಬಲವಾದುದು ಯೂರೋಪಿನವರ ನಾಸ್ಟಾಲ್ಜಿಯ ಅಥವಾ ಹಳೆಯದರ ಹಳಹಳಿಕೆಯ ಫಲವಾಗಿ. ಅವರು ಇದನ್ನು ವಸ್ತು ಸಂಗ್ರಹಾಲಯಗಳಲ್ಲಿ ಶುರು ಮಾಡಿದ್ದರು, ನಾವು ಹೊರಗೆ ಎಳೆದಿದ್ದೇವೆ. ಅಷ್ಟೇ. ವಿಷಯ ಇದೂ ಅಲ್ಲ, ಮತ್ತೆ?
ಏನಪಾ ಅಂದ್ರೆ ಈ ತಾಯಿ ಭುವನೇಶ್ವರಿಯ ಇಂಥ ಬೃಹತ್ ಪ್ರತಿಮೆಯನ್ನು ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಹಿಂಗೆ ಕೂರಿಸಿದ್ದರಲ್ಲಿ ಅರ್ಥವಿದೆಯಾ ಅಂತ? ಎಲ್ಲ ಬಗೆಯ ನಂಬಿಕೆ ಆಚರಣೆಯನ್ನು ಪ್ರಶ್ನಿಸುವ ವೈಚಾರಿಕ ದೃಷ್ಟಿಯಲ್ಲೇ ಇದನ್ನು ನೋಡುವಾ. ಇದಕ್ಕೆ ಸುಮಾರು ೨೧ ಕೋಟಿ ರೂಗಳನ್ನು ಸುರಿಯುವ ಅಗತ್ಯ ಇತ್ತಾ?ಆಚೆಗೆ ಇಟ್ಟು ಶುದ್ಧ ಆ ಹಣ ಕರ್ನಾಟಕದ ಬೇರೆ ಅಭಿವೃದ್ಧಿ ಕೆಲಸಕ್ಕೆ ಬಳಕೆ ಆಗುತ್ತಿರಲಿಲ್ಲವಾ? ಏ, ಅವೆಲ್ಲ ಆಗುತ್ತವೆ, ಕನ್ನಡದ ಭಾವನೆ ಕಾಪಾಡುವುದು ಮುಖ್ಯ. ಸರಿ, ಇದನ್ನು ನಮ್ಮ ಭಾವನೆಯನ್ನು ಬುದ್ಧಿಯ ತರ್ಕದಲ್ಲಿ ಎಲ್ಲವನ್ನೂ ನೋಡುವ ಯೂರೋಪಿನ ವ್ಯಕ್ತಿಗೆ ಕೇಳಿದರೆ 'ದಿಸ್ ಈಸ್ ಶಿಯರ್ ವೇಸ್ಟ್ ಆಫ್ ಪ್ರೀಶಿಯಸ್ ಮನಿ' ಎಂದು ಹೇಳುವುದಿಲ್ಲವೇ? ಅಷಟೊಂದು ಪ್ರಮಾಣದ ಕಂಚು? ಬರೀ ಪ್ರತಿಮೆ ನಿಲ್ಲಿಸಲು? ಅಷ್ಟು ಖರ್ಚು ಮಾಡಿ ಏನು ಮಾಡ್ತೀರಾ? ಅದು ಎಷ್ಟು ಅಮೂಲ್ಯವಾದ ನೈಸರ್ಗಿಕ ಸಂಪತ್ತು ಗೊತ್ತಾ ಎಂದೆಲ್ಲ ಕೇಳುತ್ತ ಹೋಗಬಹುದು. ಬಿಡಿ. ನಮ್ಮಲ್ಲಿ ಪ್ರಶ್ನೆ ಮಾಡದಿರುವ ವಿಷಯವಿಲ್ಲ, ಯಾವುದನ್ನೂ ಪ್ರಶ್ನಿಸಬಾರದು ಎಂದಿಲ್ಲ, ಬೇಕಾದ್ದು ಪ್ರಶ್ನಿಸಬಹುದು. ಅಷ್ಟಕ್ಕೂ ಅದೇ ತಾನೆ ಅರಿವಿನ ಮೂಲ? ಸರಿ. ಅಲ್ರೀ ಕರ್ನಾಟಕದ ತಾಯಿ ನಾಡದೇವಿ ಯ ಪ್ರತಿಮೆಯನ್ನು ಅಲ್ಲಿ ಇಷ್ಟು ವರ್ಷ ಕೂರಿಸದಿರುವುದೇ ದೊಡ್ಡ ತಪ್ಪು. ಹಾಗಿರುವಾಗ ಸದ್ಯ ಇಂದಿನ ನಾಡಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸ್ಸು ಮಾಡಿ ಸ್ಥಾಪಿಸಿದ್ದಾರೆಂದು ಸಂಭ್ರಮಿಸಬೇಕಲ್ಲವೇ? ಹೌದು. ಒಂದು ದೃಷ್ಟಿಯಲ್ಲಿ ನಿಜ. ಪ್ರಶ್ನೆ ಏನೆಂದರೆ ಅಲ್ಲಿ ವಿಧಾನ ಸೌಧದ ಆವರಣದಲ್ಲಿ ಈಗಾಗಲೇ ಸ್ಥಾಪಿಸಲಾದ ಪ್ರತಿಮೆಗಳು ಅಸಂಖ್ಯ, ಹಾಗಂತ ಯಾವ ಪ್ರತಿಮೆಯ ವ್ಯಕ್ತಿಯೂ ಕಮ್ಮಿ ಅಲ್ಲ ಅನ್ನುವುದು ಬೇರೆ ವಿಷಯ. ಹಾಗೆ ನೋಡಿದರೆ ಅಲ್ಲಿ ಇನ್ನೂ ಸ್ಥಾಪಿಸಬೇಕಾದ ಅಸಂಖ್ಯ ವ್ಯಕ್ತಿಗಳು ಬಾಕಿ ಇದ್ದಾರೆ. ಅಲ್ಲಿ ಇನ್ನೂ ನಮ್ಮ ಪ್ರಮುಖ ಸಿನಿಮಾ ತಾರೆಗಳ ಪ್ರತಿಮೆ ಬಂದಿಲ್ಲ, ಅಸಂಖ್ಯ ಸಾಮಾಜಿಕ ಮುಖಂಡರ ಪ್ರತಿಮೆಗಳು ಬಂದಿಲ್ಲ, ಇತ್ಯಾದಿ. ಅಷ್ಟಕ್ಕೂ ವಿಧಾನನ ಸೌಧ ಇರುವುದು ಒಂದು ವಿಶುವಲ್ ಗ್ಯಾಲರಿ ಮಾಡುವುದಕ್ಕಾ? ಅವೆಲ್ಲ ಗೊತ್ತಿಲ್ಲ. ಅಲ್ಲಿ ಪ್ರತಿಮೆಗಳು ಇರುವುದು ಒಂದು ಪ್ರತಿಷ್ಠೆಯ ಸಂಕೇತ. ರಾಜ್ಯದಲ್ಲಿ ಬೇರೆ ಕಡೆ ಜಾಗ ಇಲ್ವಾ? ಕರ್ನಾಟಕ ರತ್ನ, ಭಾರತ ರತ್ನರ ಪ್ರತಿಮೆಗಳು ಬೇಡ್ವಾ?
ಹೌದು. ಹೀಗೆ ನಾಡು ನುಡಿಯ ಹೆಸರಲ್ಲಿ ಪ್ರತ್ಯೇಕತೆ ಮೆರೆಯುವುದನ್ನು ಅದನ್ನು ವೈಭವೀಕರಿಸುವುದನ್ನು ನಮಗೆ ಕಲಿಸಿದವರು ಯೋರೋಪ್ ಜನ ಎಂಬುದನ್ನು ಎಷ್ಟು ಸರಿ ಬೇಕಾದರೂ ಕೂಗಿ ಹೇಳಬಹುದು. ಅವರು ತಮ್ಮ ರಿಲಿಜನ್ ಪ್ರಸಾರ ಮಡುವ ಉದ್ದೇಶದಿಂದ ಹಾಗೂ ಅವರ ಪ್ರಕಾರ ನರಕದಲ್ಲಿರುವ ನಮ್ಮನ್ನೆಲ್ಲ ಉದ್ಧರಿಸಲು ಇಲ್ಲಿಗೆ ಬಂದರು. ಬರುವಾಗ ತಮ್ಮ ಸಾಮಾಜಿಕ ಇತ್ಯಾದಿ ಗ್ರಹಿಕೆಗಳನ್ನೂ ಮೂಟೆಕಟ್ಟಿ ತಂದು ಇಲ್ಲಿ ಸುರಿದರು. ಅವುಗಳಲ್ಲೊಂದು ಸೋ ಕಾಲ್ಡ್ ರಾಷ್ಟ್ರೀಯತೆಯ, ನಾಡು, ನುಡಿಯ ಪ್ರತ್ಯೇಕತೆ ಹಗೂ ಅದರ ಅನನ್ಯತೆ. ಅವರು ತಮ್ಮ ಸಮಾಜದಲ್ಲಿದ್ದ ಅನ್ಯರ ಆಕ್ರಮಣ ತಡೆಯಲು ಬಳಸಿದ ತಮ್ಮ ನಾಡಿನ ವ್ಯಾಪ್ತಿ ಮತ್ತು ತಮ್ಮ ಭಾಷೆಯ ನಿಷ್ಠೆಯ ನೆಪದಲ್ಲಿ ತಮ್ಮ ತಮ್ಮ ಗಡಿಗಳನ್ನು ಅದೇ ನೆಲೆಯಲ್ಲಿ ಗುರುತಿಸಿಕೊಂಡರು. ಅದನ್ನು ಇಲ್ಲಿಗೂ ಅನ್ವಯಿಸಿ ಭಾಷಾವಾರು ರಾಜ್ಯಗಳಾಗಲು ನಮ್ಮನ್ನು ಉತ್ತೇಜಿಸಿದರು. ದೊಡ್ಡ ರಾಷ್ಟ್ರದ ಕಲ್ಪನೆಯೊಳಗೆ ಕಿರು ನಾಡಿನ ಕಲ್ಪನೆ ಚಿಗುರುವಂತೆ ಮಾಡಿ, ಅದು ಅನೇಕ ಭಗವಾಗುವಂತೆ ಮಾಡಿದರು, ಹೀಗೆ ಮಾಡುವುದು ಆಡಳಿತದ ಮೇಲೆ ತಮ್ಮ ಹಿಡಿತ ಸಾಧಿಸಿಕೊಂಡಿರಲು ಅಗತ್ಯವೂ ಅನಿವಾರ್ಯವೂ ಆಗಿತ್ತು, ಜಾತಿ ಪಂಗಡ, ಭಾಷೆ, ಗಡಿ ಹೀಗೆ ಯಾವುದೇ ವಿಧದಲ್ಲಿ ನಮ್ಮ ಸಮಾಜ ಛಿದ್ರವಾಗಿರುವುದು ಅವರಿಗೆ ಬೇಕಿತ್ತು. ಹೀಗಾದಾಗ ನಾವು ಪರಸ್ಪರ ಕಚ್ಚಾಡಿಕೊಂಡಿದ್ದರೆ ಅವರು ಆಳ್ವಿಕೆ ನಡೆಸುವುದು ಸುಲಭವಾಗುತ್ತಿತ್ತು. ಆದ್ದರಿಂದ ಅವರು ನಮ್ಮ ಸಮಾಜದಲ್ಲಿ ಇಂಥ ಭವನೆ ಬಲವಾಗಿ ಬೇರೂರುವಂತೆ ಮಾಡುವಲ್ಲಿ ಯಶಸ್ವಿ ಆದರು ಮಾತ್ರವಲ್ಲ, ಆ ಯಶಸ್ಸು ಅವರು ಇಲ್ಲಿಂದ ಕಾಲು ಕಿತ್ತು ಇಷ್ಟು ವರ್ಷಗಳಾದ ಮೇಲೂ ಬೆಳೆಯುತ್ತಲೇ ಇರುವಂತೆ ಮಾಡುವಲ್ಲಿ ಯಶಸ್ವು ಕಂಡರು. ಇದನ್ನು ಜಾರಿ ಮಡುವುದು ಹೇಗೆ ಎಂಬ ಚರ್ಚೆ ಅವರಿಗೆ ಸಂಬಂಧಿಸಿದ ಅನೇಕ ಸಾಹಿತ್ಯಗಳಲ್ಲಿ ಕಾಣಿಸುತ್ತದೆ. ಅವು ನಮಗೆಲ್ಲ ಪರಿಚಿತ. ನಮ್ಮ ಅನನ್ಯತೆಯ ಪ್ರಶ್ನೆ ಎಲ್ಲಿಯವರೆಗೆ ಹೋಗಿದೆ ಅಂದರೆ ನಮ್ಮ ದೇಶಕ್ಕೆ ವಿಶಿಷ್ಟವಾದ ಧ್ವಜ, ಪ್ರಾಣಿ, ಪಕ್ಷಿ ಸಂಕೇತಗಳು ಇರುವಂತೆ ಅದೇ ಕಲ್ಪನೆಯನ್ನು ಅನುಸರಿಸಿದ ರಾಜ್ಯ ಕಲ್ಪನೆಗಳು ಕೂಡ ತಮ್ಮ ತಮ್ಮ ರಾಜ್ಯಗಳಿಗೂ ಇದನ್ನೇ ಅನ್ವಯಿಸಿಕೊಂಡಿವೆ, ಇದೇ ರೀತಿ ಈ ಕನ್ನಡ ತಾಯಿ ಕೂಡ. ನಮ್ಮ ದೇಶಕ್ಕೆ ಭಾರತಾಂಬೆ ತಾಯಿ ಅನ್ನುವಂತೆ ಕರ್ನಾಟಕಕ್ಕೆ ಭುವನೇಶ್ವರಿ ಆಗಿದ್ದಾಳೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ತಮಿಳುನಾಡಲ್ಲಿ ಮುರುಗನ್ ತಮ್ಮ ನಾಡ ದೇವತೆ ಎಂದು ಅವರು ಹೇಳಿಕೊಂಡರೆ ಕೇರಳಕ್ಕೆ ಅನಂತ ಪದ್ಮನಾಭಸ್ವಾಮಿ, ಆಂಧ್ರಕ್ಕೆ ನರಸಿಂಹನಾದರೆ ತೆಲಂಗಾಣಕ್ಕೆ ಮುತ್ಯಾಲಮ್ಮ, ಒರಿಸ್ಸಾಕ್ಕೆ ಜಗನ್ನಾಥ, ದೆಹಲಿಗೆ ಯೋಗಮಾಯಾ ಇತ್ಯಾದಿ.
ಹೀಗೆ ಇದೇ ಮಾದರಿಯನ್ನು ಪ್ರಾಣಿ ಪಕ್ಷಿಗಳಿಗೂ ಅನ್ವಯಿಸಿಕೊಳ್ಳಲಾಗಿದ್ದು ಇವುಗಳ ಮೂಲಕ ಪ್ರತೀ ರಾಜ್ಯಗಳು ತಮ್ಮ ಪ್ರತ್ಯೇಕತೆಯನ್ನು ಪ್ರತಿಪಾದಿಸಿಕೊಳ್ಳುತ್ತವೆ. ತಮಾಷೆ ಅಂದರೆ ಇಂಥ ಭಾವನೆ ನಮ್ಮ ದೇಶದ ಇತರರಿಂದ ನಾವೇ ಬೇರೆ ಎಂಬ ಭಾವನೆಯನ್ನು ಬಲಮಾಡುತ್ತ ಹೋಗುತ್ತದೆ, ಈ ಪಟ್ಟಿಯಲ್ಲಿ ಇನ್ನೂ ಯಾವುದೇ ರಾಜ್ಯ ಇದು ತಮ್ಮ ರಾಜ್ಯದ ಆಹಾರ ಸಂಕೇತ ಎಂದು ಸಾಧಿಸಿಲ್ಲವಾದ್ದರಿಂದ ನಮ್ಮ ರಾಜ್ಯದಲ್ಲೂ ಆ ವಿಷಯದ ಪ್ರಸ್ತಾಪ ಆಗಿಲ್ಲ, ನನ್ನ ಪ್ರಕಾರ ರಾಗಿ ಮುದ್ದೆ ನಮ್ಮ ರಾಜ್ಯದ ಆಹಾರ ಚಿಹ್ನೆ ಆಗಬೇಕು, ಎಲ್ಲ ವಿಷಯಗಳಿಗೂ ಆದಂತೆ ಇದಕ್ಕೂ ವಿರೋಧ ಬರುತ್ತದೆ ಆದರೂ ಚರ್ಚೆ ಆಗಲಿ, ನಮ್ಮ ಹಕ್ಕಿನ ಆಹಾರ ಸಂಕೇತ ನಮ್ಮ ರಾಜ್ಯಕ್ಕೆ ಇನ್ನೂ ನೇಮಕ ಅಗಿಲ್ಲ ಎಂಬುದು ನಮ್ಮ ಫುಲ್ ಟೈಂ ಹೋರಾಟಾರರ ಗಮನದಲ್ಲಿರಲಿ, ಯಾವಾಗಲಾದರೂ ಫ್ರೀ ಇದ್ದಾಗ ಹೋರಾಡಲು ಒಂದು ವಿಷಯ ಸಿಗುತ್ತದೆ ಎಂದು ಪ್ರಸ್ತಾಪಿಸಿದೆ ಅಷ್ಟೆ. ಇವೆಲ್ಲದರ ಮಧ್ಯೆ ನಾವು ನಮ್ಮ ದೇಶ, ನಾವೆಲ್ಲ ಒಂದು ಎಂದು ಉರು ಹೊಡೆಯುತ್ತೇವೆ. ಇದೇ ವಿರೋಧಾಭಾಸ. ಆಯಿತು, ಇದನ್ನೇ ಅನುಸರಿಸಿ ನನ್ನ ಪ್ರಕಾರ ಪ್ರತಿ ಜಿಲ್ಲೆ, ತಾಲ್ಲೂಕುಗಳೂ ಹೋಬಳಿ ಮಟ್ಟದವರೆಗೆ ತಮ್ಮದೇ ಧ್ವಜ, ನಾಡದೇವತೆ, ಆಹಾರ ಇತ್ಯಾದಿಗಳನ್ನು ಹೊಂದುವಂತಾದರೆ ಅನನ್ಯತೆ ಸಿಕ್ಕಾಪಟ್ಟೆ ಮೂಲಕ್ಕೆ ಹೋಗುವಂತಾಗುತ್ತದೆ. ಅಲ್ವ?

No comments:
Post a Comment