ಹೌದು ೨೦೨೦ರಲ್ಲಿ ನಡೆಯಬೇಕಿದ್ದ ಬೆಂಗಳೂರು ಮಹಾನಗರಪಾಲಿಕೆಯ ಚುನಾವಣೆ ಕರೋನಾ ಮೊದಲಾದ ಕಾರಣಕ್ಕೆ ತಡವಾಗಿ ೨೦೨೫ರ ಏಪ್ರಿಲ್ ವೇಳೆಗೆ ನಡೆಯಲಿದೆ. ೧೮೬೨ರಲ್ಲಿ ಸೃಷ್ಟಿಯಾದ ಬೆಂಗಳೂರು ಗರಪಾಲಿಕೆ ಈಗ ಮಹಾನಗರಪಾಲಿಕೆಯಾಗಿ ಬೆಳೆದು ನಗರದ ಹತ್ತಾರು ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಹಾಗೆಯೇ ಇಲ್ಲಿಯೇ ಹುಟ್ಟಿ ಜನರ ದನಗಳ ಎಲ್ಲ ಅಗತ್ಯವನ್ನು ಪೂರೈಸುತ್ತಿದ್ದ ವೃಷಭಾವತಿ ನದಿಯ ಸುವರ್ಣಯುಗ ಹಾಗೂ ಇಂದಿನ ಅವನತಿಗೂ ಸಾಕ್ಷಿಯಾಗಿದೆ. ದೆಹಲಿ ಚುನಾವಣೆ ಯಮುನೆಯ ಹೆಸರಲ್ಲಿ ನಡೆದುದಕ್ಕಿಂತ ಬೆಂಗಳೂರಿನ ವೃಷಭಾವತಿಯ ಹೆಸರಲ್ಲಿ ಬಿಬಿ ಎಂಪಿ ಚುನಾವಣೆ ನಡೆದರೆ ನಿಜಕ್ಕೂ ಅದು ಭಾರೀ ರೋಮಾಂಚಕವಾಗಿರುತ್ತದೆ, ಇದಕ್ಕೆ ಕಾರಣವಿಲ್ಲದಿಲ್ಲ, ಅದಕ್ಕೆ ಕಾಲ ಕೂಡಿಬರುತ್ತಿದೆ. ಇದಕ್ಕೆ ೧೯೪೯ರಲ್ಲಿ ಬೆಂಗಳೂರು ನಗರಪಾಲಿಕೆ ಎಂಬ ಹೆಸರು ಬಂದಿತು. ಚುನಾಯಿತ ನಾಯಕರಿಲ್ಲದ ಕಾರಣ೨೦೨೦ರಿಂದ ಸರ್ಕಾರದ ಅಧಿಕಾರಿಗಳು ಪಾಲಿಕೆಯನ್ನು ನಡೆಸುತ್ತಿದ್ದಾರೆ. ಒಟ್ಟೂ ೨೪೩ ಸ್ಥಾನಗಳ ಪಾಲಿಕೆ ಸದ್ಯ ಚುನಾಯಿತ ಸದಸ್ಯರಿಲ್ಲದೆ ಇದೆ. ಬರುವ ಏಪ್ರಿಲ್ ವೇಳೆಗೆ ನಡೆಯಲಿದೆ ಅನ್ನಲಾದ ಈ ಚುನಾವಣೆಗೆ ವೃಷಭಾವತಿ ಅದ್ಭುತ ವಿಷಯವಾಗಬಲ್ಲುದು. ಮುಂದಿನ ಚುನಾವಣೆಗೆ ಸೆಣೆಸಾಡಲು ಎಲ್ಲ ಪಕ್ಷಗಳಿಗೂ ಈ ವಿಷಯವೇ ಮುಖ್ಯವಾಗಬೇಕು. ಎಲ್ಲ ಪಕ್ಷಗಳೂ ವೃಷಭಾವತಿಯ ಉದ್ಧಾರದ ಸೂತ್ರ ಹಿಡಿದು ಜನರ ಬಳಿ ಮತ ಕೇಳುವಂತಾಗಬೇಕು. ಇಷ್ಟು ವರ್ಷ ಮಾಡಿದ ರಾಜಕೀಯ ಮೇಲಾಟ, ಕೆಸರೆರೆಚಾಟವೆಲ್ಲ ಸಾಕು, ಅದು ಪಾಲಿಕೆಯಾಗಲಿ, ರಾಜ್ಯ ಚುನಾವಣೆಯಾಗಲೀ ಇಂಥ ರಚನಾತ್ಮಕ ಕೆಲಸ ಚುನಾವಣೆಗಳ ಉದ್ದೇಶವಾಗಬೇಕು. ಅದರ ಆರಂಭ ನಮ್ಮ ವೃಷಭಾವತಿಯಿಂದ ಮೊದಲಾಗಲಿ.
ವೃಷಭಾವತಿ ಎಂಬ ನದಿಯೊಂದು ಬೆಂಗಳೂರಲ್ಲೇ ಹುಟ್ಟುತ್ತಿತ್ತು ಅನಂತರ ಅದು ಅಲ್ಲೇ ಸತ್ತು ಹೋಯಿತು ಎಂದು ರಾಜ್ಯದ ಬಹುತೇಕರಂತೆ ನಾನೂ ತಿಳಿದಿದ್ದೆ. ಆದರೆ ಅದು ಸತ್ತಿಲ್ಲ, ಇನ್ನೂ ಕೋಮಾದಲ್ಲಿದೆ, ಸರ್ಕಾರ ಮನಸ್ಸು ಮಾಡಿದರೆ ಅದಕ್ಕೆ ಜೀವ ತಂದು ಅಮರತ್ವವನ್ನು ಸರ್ಕಾರ ಪಡೆಯಬಹುದು, ಊಹಿಸಿಕೊಳ್ಳಿ ತುಲಾ ಸಂಕ್ರಮಣದ ದಿನ ತಲಕಾವೇರಿಯಲ್ಲಿನ ಸಂಭ್ರಮವನ್ನು. ಬೆಂಗಳೂರಲ್ಲಿ ಯಾವುದಾದರೂ ಒಂದು ಸಂದರ್ಭ ಕೊಟ್ಟರೆ? ಅದೊಂದು ದೊಡ್ಡ ಹಬ್ಬ ಆಗುವುದಾದರೆ? ಅಬ್ಬಾ! ಅಂದಹಾಗೆ ೨೦೧೭ರಲ್ಲಿ ವೇಷಭಾವತಿಯ ಮೂಲ ನಕ್ಷೆ ಇತ್ಯಾದಿಗಳ ಬಗ್ಗೆ ಐಐಎಸ್ ಸಿ ದೀರ್ಘ ವರದಿಯನ್ನು ಸರ್ಕಾರಕ್ಕೆ ಕೊಟ್ಟಿದೆ, ಅದೆಲ್ಲೋ ವಿಧಾನ ಸೌಧದಲ್ಲಿ ಧೂಳು ತಿನ್ನುತ್ತಾ ಬಿದ್ದಿರಬಹುದು. ಆದರೆ ವೃಷಭಾವತಿ ಸತ್ತಿಲ್ಲ ಕಣ್ರಿ, ಅದು ಕೋಮಾದಲ್ಲಿದೆ. ಅದರ ಮೂಲ ಇನ್ನೂ ಜೀವಂತವಾಗಿ ದೊಡ್ಡ ಬಸವನ ಪಾದದಡಿ ಇದೆ. ಅದು ಮುಂದೆ ಹರಿಯುವ ಸ್ಥಳವನ್ನು ಭಕ್ತಿ, ಶ್ರದ್ಧೆಗಳಿಂದ ಸಂಸದರಾಗಿದ್ದ ಅನಂತ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಒದಗಿಸುವ ಯೋಜನೆಯಾದ ಅದಮ್ಯ ಚೇತನ ಕಟ್ಟಡದ ಒಳಗೆ ‘ದಕ್ಷಿಣಗಂಗೆ’ ಎಂಬ ಹೆಸರಲ್ಲಿ ಕಾದಿಟ್ಟುಕೊಂಡಿದ್ದಾರೆ, ಅದು ಅಲ್ಲಿ ಎಂಥ ಶುದ್ಧ ರೂಪದಲ್ಲಿದೆ ಅಂತೀರಾ. ನಿಜಕ್ಕೂ ಗಂಗೋತ್ರಿಯ ಗಂಗೆಯಷ್ಟು ಶುದ್ಧ, ಆಗ ನಿಮಗೆ ಇಂದಿನ ªವೃಷಭಾವತಿ ಎಂದು ನಾವೆಲ್ಲ ತಿಳಿದ ಕೆಂಗೇರಿಯ ಮಹಾ ಜಲಪಾತದ ನೆನಪು ಕೊಚ್ಚಿಹೋಗುತ್ತದೆ. ಅಲ್ಲದೇ ದೊಡ್ಡ ಬಸವನ ಪಾದದಡಿ ವೃಷಭಾವತಿ ಉಗಮ ಕುರಿತ ಶಾಸನವೊಂದು ಈಗಲೂ ಸುಸ್ಥಿತಿಯಲ್ಲಿದೆ. ಆಸಕ್ತರು ಈಗಲೂ ಅದನ್ನು ಹೋಗಿ ನೋಡಬಹುದು, ತುಲಾ ಸಂಕ್ರಮಣದ ದಿನ ಕಾವೇರಿ ಉಗಮಿಸುವಂತೆ ವೃಷಭಾವತಿಯೂ ಒಂದು ದಿನ ಹುಟ್ಟುವ ಬಗ್ಗೆ ಜನಪದರಲ್ಲಿ ಪ್ರತೀತಿ ಇರಬಹುದು ಅಂಥ ದಿನವನ್ನು ಗುರುತಿಸಿ ಸರ್ಕಾರ ಹಬ್ಬ ಮಾಡಿದರೆ ಎಂಥ ವಿಶಿಷ್ಟ ಪುನರುತ್ಥಾನವಾಗುತ್ತದೆ ಅಲ್ವಾ? ಯಾವ ಸರ್ಕಾರ ಅಂಥ ಘನ ಕಾರ್ಯಕ್ಕೆ ಮುಂದಾಗುತ್ತದೆಯೋ ನೋಡೋಣ. ವೃಷಭಾವತಿಯ ಸಂಭ್ರಮದ ಬಗ್ಗೆ ಹಿರಿಯರಾದ ಡಿ.ವಿ.ಜಿ., ಮಾಸ್ತಿ ಮೊದಲಾದವರು ಸಾಕಷ್ಟು ಬರೆದಿದ್ದಾರೆ.ಅದಿರಲಿ, ಆದರೆ ಇದಕ್ಕೆ ಹೊಸ ರೂಪ ಕೊಡಲಾಗದು ಎಂದೇನೂ ಇಲ್ಲ, ಇದರ ಸಮಗ್ರ ನಕ್ಷೆ ಕುರಿತು ಐಐಎಸ್ ಸಿ ಆಗಲೇ ವರದಿ ನೀಡಿದೆ.
ಸರ್ಕಾರದಲ್ಲಿ, ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದಕ್ಕೆ ಪಾನಿ ಡಾಟ್ ಅರ್ಥ್ ಕೈ ಜೋಡಿಸಿತ್ತು. ಆದರೆ ಇದರಿಂದ ಯಾರಲ್ಲಿಯೂ ಯಾವ ಜಾಗೃತಿಯೂ ಹುಟ್ಟಲಿಲ್ಲ, ದುರಂತ. ಇಂಥ ವಿಷಯಗಳ ಬಗ್ಗೆ ಸರ್ಕಾರಗಳ, ನಮ್ಮ ನೇತಾಗಳ ಗಮನ ಏಕೆ ಬೀಳುವುದಿಲ್ಲ ಎಂಬುದೇ ಅಚ್ಚರಿ. ಸರ್ಕಾರಕ್ಕೆ ಇದನ್ನು ಆಗುಮಾಡಲು ಈಗಲೂ ಅವಕಾಶವಿದೆ, ನಿತ್ಯದ ರಾಜಕೀಯ ಏನಾದರೂ ಇರಲಿ, ಇಂಥ ಸಂಗತಿ ಮುಖ್ಯವಾಗಬೇಕು. ವೃಷಭಾವತಿ ಜೀವ ಪಡೆದರೆ ಅದು ಹೇಗೆ ಇರಬಹುದೆಂದು ಕೂಡ ಐಐ ಎಸ್ ಸಿ ನಕಾಸೆ ಕೊಟ್ಟಿದೆ. ಆ ವರದಿಯೇನಾದರೂ ಜಾರಿಆಗಿಬಿಟ್ಟರೆ ಬೆಂಗಳೂರು ವೆನಿಸ್, ಅಮೆರಿಕ, ಮೊದಲಾದ ನಗರಗಳ ನಡುವಿನ ನದಿ ವಾತಾವರಣ ಮೀರಿಸುವ ಸ್ಥಾನ ಪಡೆದು ಶಾಶ್ವತವಾಗುವುದಂತೂ ಖಚಿತ. ಆದರೆ ಇದಕ್ಕೆ ಬೇಕಾದ ಇಚ್ಛಾಶಕ್ತಿ ನಮ್ಮಲ್ಲಿ ಎಲ್ಲಿದೆ? ಮಾಡಿದರೆ ಈ ಸರ್ಕಾರವೇ ಮಾಡಬೇಕು, ಇಂದಿನ ನಮ್ಮ ಸಿಎಂ ಮನಸ್ಸು ಮಾಡಿದರೆ ಏನು ಬೇಕಾದರೂ ಇಂಥ ಕೆಲಸ ಮಾಡಬಲ್ಲರು. ಬೆಂಗಳೂರಿಗೆ ಗಾರ್ಡನ್ ಸಿಟಿ, ಲೇಕ್ ಸಿಟಿ ಇತ್ಯಾದಿ ಹೆಸರುಗಳು ಇರುವಂತೆಯೇ ವ್ಯಾಲಿ ಸಿಟಿಯೂ ಹೌದು. ಸದ್ಯ ವೃಷಭಾವತಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು ಐದು ಕಿಲೋ ಮೀಟರ್ ಹರಿಯುತ್ತದೆ. ೧೯೭೦ ರ ದಶಕದವರೆಗೆ ಅದು ಬೆಂಗಳೂರಿನ ಕುಡಿಯುವ ನೀರು, ಸ್ನಾನ ಜಾನುವಾರುಗಳ ಅಗತ್ಯ ಮೊದಲಾದವನ್ನು ಪೂರೈಸುತ್ತಿತ್ತು, ಇಂದು ಅದು ನಮ್ಮ ನವ ನಾಗರಿಕತೆಯ ಶಾಪವಾಗಿ ಪರಿವರ್ತಿತವಾಗಿದೆ, ಇದರ ಶಾಪ ವಿಮೋಚನೆ ಕೂಡ ಕಷ್ಟವಲ್ಲ - ಇಷ್ಟಾದರೆ ಬೆಂಗಳೂರಿನ ನೀರಿನ ಮೂಲ ಮತ್ತೆ ಜೀವ ಪಡೆದು ನಿಲ್ಲುತ್ತದೆ.
ಸರ್ಕಾರ ಮುಂದಾದರೆ. ಈ ನದಿ ಜೀವಂತವಾಗಿದ್ದಾಗ ಕೆಂಪಾಬುಧಿ, ಯಡಿಯೂರು, ಸದಾಶಿವ ನಗರ ಕೆರೆ ಮೊದಲಾದವುಗಳ ಜೀವ ನಾಡಿ ಆಗಿತ್ತು ಅನ್ನಲಾಗಿದೆ. ಇವೆಲ್ಲ ವೃಷಭಾವತಿಯೊಂದಿಗೆ ಪುನರುಜ್ಜೀವಗೊಂಡು, ವೃಷಭಾವತಿ ಸಂಕ್ರಮಣದ ದಿನ ಇಲ್ಲೆಲ್ಲ ಸಂಭ್ರಮದ ಹಬ್ಬ ನಡೆಯಬೇಕು. ನಮ್ಮ ಆಧುನಿಕ ಕಾಲದ ಈ ಜೀವನದಲ್ಲಿ ಇಂಥ ಹೊಸ ಹಬ್ಬಕ್ಕೆ ಮಹತ್ವ ಬರುತ್ತದೆ. ದೊಡ್ಡ ಬಸವನ ಬಳಿ ಹುಟ್ಟುತ್ತಿದ್ದ ಈ ನೀರು ಕೇವಲ ಮೂರು ಸೆಂ ಮೀ ಗಾತ್ರದ್ದು, ಮುಂದೆ ಇದರೊಂದಿಗೆ ಕತ್ರಿಗುಪ್ಪೆ ಮತ್ತು ಕೇತಮಾರನ ಹಳ್ಳಿಯ ಬಳಿ ತೊರೆಗಳು ಸೇರಿ ದೊಡ್ಡದಾಗಿ ಹರಿಯುತ್ತಿತ್ತು ಅನ್ನಲಾಗಿದೆ, ಎಲ್ರಿ ಇದೆಲ್ಲ ಈಗ? ವೃಷಭಾವತಿ ಮತ್ತು ಅದಕ್ಕೆ ಸೇರುತ್ತಿದ್ದ ತೊರೆಗಳು ಇಂದಿನ ಮಲ್ಲೇಶ್ವರದ ಪೈಪ್ ಲೈನ್ ಗಾಳಿ ಆಂಜನೇಯ ಗುಡಿ ಬಳಿ ಒಂದಾಗಿ ರಾಜ ರಾಜೇಶ್ವರಿ ನಗರದ ಕಡೆ ಹರಿದು ದಕ್ಷಿಣಾಭಿಮುಖ ಆಗುತ್ತಿದ್ದವು ಈಗ ಇದು ದೊಡ್ಡ ಮೋರಿ ರೂಪ ಪಡೆಯುವುದೇ ಇಲ್ಲಿ ಅಂದರೆ ಅಪರಾಧದ ಮೂಲ ಎಲ್ಲಿದೆ ಎಂದು ತಿಳಿಯುತ್ತದೆ. ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ೧೪೨೫ರಲ್ಲಿ ಕಟ್ಟಲಾಗಿತ್ತು, ಆಗ ಅಲ್ಲಿ ಇನ್ನೂ ವೃಷಭಾವತಿ ಮೈದುಂಬಿಕೊಂಡಿದ್ದಳು. ಗವಿಗಂಗಾಧರ, ಕಾಡು ಮಲ್ಲೇಶ್ವರ ದೇಗುಲಗಳು ಹುಟ್ಟಿದವು. ಈ ಜಾಗಗಳಲ್ಲಿ ಕೈಗಾರಿಕೆಗಳು ಬರತೊಡಗಿದಂತೆ ವೃಷಭಾವತಿಯ ಆಕಾರ ಕೆಡಲಾರಂಭಿಸಿತು. ಈಗ ಪಾಪ ನೋಡಿ ಆಕೆ ಹೇಗಾಗಿದ್ದಾಳೆ. ಅವಳಿಗೆ ಮೂಲರೂಪ ಕೊಡಲು ಯಾವ ಬ್ಯೂಟಿ ಆರ್ಲರ್ ಬೇಡ, ರಾಜಕೀಯ ಇಚ್ಛಾಶಕ್ತಿ ಸಾಕು, ಅದಾಗುವುದೇ?
ಬಸವನಗುಡಿಯಲ್ಲಿ ಹುಟ್ಟಿ ಮಲ್ಲೇಶ್ವರ ಕಡೆಗೆ ಹೋಗಿ ಯಶವಂತಪುರ ಸುತ್ತಿ, ಅಲ್ಲಿಂದ ವರ್ತುಲ ರಸ್ತೆಯ ಅಕ್ಕ ಪಕ್ಕದ ಎಲ್ಲ ಏರಿಯಾವನ್ನು ತೊಳೆದುಕೊಂಡು ಬಂದು ಗಾಳಿ ಆಂಜನೇಯನ ಬಳಿ ಬಂದು ರಾಜರಾಜೇಶ್ವರಿ ನಗರದ ಮೂಲಕ ಕೆಂಗೇರಿ ತಲುಪುವಷ್ಟರಲ್ಲಿ ಇಡೀ ಬೆಂಗಳೂರನ್ನು ತೊಳೆದು ಸ್ವಚ್ಛಮಾಡಿ ತಾನು ಮಲಿನವಾಗಿ ಕುರೂಪವಾಗುತ್ತದೆ, ಇದನ್ನೆಲ್ಲ ಸರಿಪಡಿಸಿ ವೃಷಭಾವತಿಗೆ ಮೂಲರೂಪ ಕೊಡುವ ಸಾಹಸಕ್ಕೆ ಯಾರು ಕೈಹಾಕುತ್ತಾರೆ? ರೀ ಆಗಲೇ ಕುಲಗೆಟ್ಟು ಹೋಗಿ ಕಪ್ಪುನಾಯಿಯಾದ ಈ ನದಿಯನ್ನು ಮತ್ತೆ ಬಿಳಿದು ಮಾಡಿ ಆಗುವುದೇನಿದೆ? ಎಲ್ಲರಿಗೂ ಆಗುವಷ್ಟು ಉಪಯೋಗ ವಾಗುವ ನೀರು ಅದರಲ್ಲಿಲ್ಲ ಅಂದಮೇಲೆ ಅದರ ಜಾಗ ಮೋರಿ ಅಗುವುದೇ ಸರಿ ಎಂಬ ವಾದವೂ ಇದೆ.
ವೃಷಭಾವತಿಯ ಕೊಡುಗೆ ಸಣ್ಣದಲ್ಲ, ಸುಮ್ಮನೇ ಈ ಲೆಕ್ಕ ನೋಡಿ - ೧೯೭೦ರ ದಶಕದವರೆಗೆ ಈ ಕಣಿವೆಯ ಪ್ರದೇಶದಲ್ಲಿ ೭೧ ಕೆರೆಗಳಿದ್ದು ೨೦೧೭ರ ವೇಳೆಗೆ ೩೫ಕ್ಕೆ ಇಳಿಯಿತು. ಇರುವ ಕೆರೆಗಳಲ್ಲೂ ಬಹುತೇಕ ಕೆರೆಗಳು ಕಸ ಸುರಿದು ತ್ಯಾಜ್ಯ ಹಾಕಲು ಜಾಗಗಳಾದವು. ಕೈಗಾರಿಕಾ ತ್ಯಾಜ್ಯಗಳನ್ನು ಸುಲಭವಾಗಿ ಎಸೆಯುವ ಜಾಗ ಎಂದರೆ ಇಂಥ ಕೆರೆಗಳೇ. ಇಷ್ಟಾದ ಮೇಲೆ ಇಂಥ ಕೆರೆ ಜಾಗ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗುತ್ತದೆ. ಸರ್ಕಾರಕ್ಕೂ ಈ ಹಾಳುಬಿದ್ದ ಜಾಗದಿಂದ ಒಂದಷ್ಟು ಆದಾಯ ಬರಯವ ಆಸೆಯಿಂದ ಅದರ ಕನ್ವರ್ಶನ್ ಮಾಡಿಕೊಡುತ್ತದೆ. ಇಲ್ಲಿಗೆ ಕೆರೆ ಪೂರ್ಣ ಕದ್ದಂತಾಯಿತು. ಹೀಗೆ ಕದ್ದುಹೋದ ಕೆರೆಗಳ ಸಂಖ್ಯೆ ಬೆಂಗಳೂರಲ್ಲಿ ೧೯೬೦ ರಿಂದ ೨೦೦೪ರವರೆಗೆ ಸುಮಾರು ೪೦೦ ಎಂಬ ಲೆಕ್ಕವಿದೆ. ಹೀಗೆ ಕೆರೆ ಕದಿಯುವ ಜನಕ್ಕೆ ಯಃಕಃಶ್ಚಿತ್ ಬತ್ತಿದ ವೃಷಭಾವತಿ ಕದಿಯುವುದು ಕಷ್ಟವಾ? ಆಯಿತು, ಅದು ಹರಿಯುವ ಜಾಗದ ಮೇಲೆ ಒಂದಿಷ್ಟು ಸ್ಲಾಬ್ ಹಾಕಿ ಮುಚ್ಚಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿದ್ದೂ ಆಯಿತು, ಇಲ್ಲಿಗೆ ವೃಷಭಾವತಿ ಸಂಪೂರ್ಣ ಸತ್ತಂತಾಯಿತು ಎಂದು ಜನರೆಲ್ಲ ತಿಳಿಯುವಂತಾಯಿತು. ಆದರೆ ಅದು ಕೋಮಾದಲ್ಲಿದೆ ಎಂಬುದು ಈಗ ಜನಕ್ಕೆ ಅರಿವಾಗಿದೆ, ಅವರೆಲ್ಲ ಸರ್ಕಾರದ ಕ್ರಮ ಏನು ಎಂಬುದನ್ನು ಕಾಯುತ್ತಿದ್ದಾರೆ. ಇಂಥ ಬೆಳವಣಿಗೆಯಿಂದ ಕೇವಲ ನೀರಿನ ಮೂಲ ಮಾತ್ರ ಹಾಳಾಗಿಲ್ಲ, ಬದಲಾಗಿ ಪರಿಸರ ವ್ಯವಸ್ಥೆ ಕೂಡ ಹಾಳಾಗಿದೆ. ಎಷ್ಟೊಂದು ಬಗೆಯ ಹಕ್ಕಿಗಳು ಬೆಂಗಳೂರಲ್ಲಿದ್ದವು ಈ ಮುಂಚೆ ನೋಡಿ, ವೃಷಭಾವತಿ ಸತ್ತ ಮೇಲೆ ಏನಾಯ್ತು ನೋಡಿ, ದುಃಖವಾಗುತ್ತದೆ. ಇಂಡಿಯನ್ ಬರ್ಡ್ಸ್ ಇನ್ ಇಂಡಿಯಾದ ೩ನೆಯ ಸಂಪುಟದಲ್ಲಿ ಇದರ ಸಮಗ್ರ ವಿವರಗಳಿವೆ. ಹಾಗೆ ನೋಡಿದರೆ ಬೆಂಗಳೂರಿನ ದುಃಸ್ಥಿತಿಗೆ ೧೯೭೦ರ ವೇಳೆಯ ಬೆಂಗಳೂರಿನ ರಾಜಕಾರಣಿಗಳು ಹಾಗೂ ದೂರದೃಷ್ಟಿ ಇಲ್ಲದ ಅಧಿಕಾರಿಗಳು ಕಾರಣ. ಅವರ ಬಿರ್ಲಕ್ಷ್ಯ ಇಂದಿನ ಕೆಟ್ಟ ಬೆಂಗಳೂರಿಗೆ ಕಾರಣವಾಗಿದೆ. ಅವರು ಯಾರಾದರೂ ಈಗ ಬದುಕಿದ್ದರೆ ಅವರನ್ನು ಸಾರ್ವಜನಿಕ ವೇದಿಕೆಗೆ ಕರೆದು ಜನ ಪ್ರಶ್ನಿಸಬೇಕಿದೆ. ಯಾಕೆ ಹೀಗಾಯಿತೆಂದು ತಿಳಿಯಬೇಕಿದೆ. ಯಾವುದಾದರೂ ಮಾಧ್ಯಮ ಈ ಕೆಲಸ ಮಾಡುವ ಅಗತ್ಯವಿದೆ. ವೃಷಭಾವತಿಗೆ ನೀರು ತರುತ್ತಿದ್ದ ನೀರು ಹರಿವಿನ ಪ್ರದೇಶ, ೨೦೨೧ರ ವೇಳೆಗೆ ಪಾತಾಳಕ್ಕೆ ಹೋಯಿತು. ಈ ಜಾಗವೆಲ್ಲ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾಲಾಗಿದೆ. ಇಂಥ ದುರವಸ್ಥೆಗೆ ಮೊದಲು ಕಾರಣವಾದವರು ಒಬ್ಬ ಅಧಿಕಾರಿ ಹಾಗೂ ಒಬ್ಬ ರಾಜಕಾರಣಿ ಆಗಿರುತ್ತಾರೆ. ಮುಂದೆ ಬಂದವರು ಅದನ್ನು ಪ್ರಸೀಡೆನ್ಸ್ ಎಂದು ಪರಿಗಣಿಸಿ ಮುಂದುವರೆಸಿಕೊಂಡು ಹೋಗಿ ಇಂದಿನ ಈ ಸ್ಥಿತಿಗೆ ಕಾರಣವಾಗಿದ್ದಾರೆ. ವೃಷಭಾವತಿ ಮರುಜನ್ಮ ಪಡೆಯಲಿ, ಬಿಡಲಿ. ಇಂಥ ದರಿದ್ರಗಳನ್ನು ಅವರು ಬದುಕಿದ್ದರೆ ಪತ್ತೆ ಹಚ್ಚಲೇಬೇಕು. ಮೊದಲು ಇದಾಗಲಿ. ಪುಣ್ಯ ಎಂದರೆ ವೃಷಭಾವತಿಯ ಕೊಳಚೆ ನೀರನ್ನು ಶುದ್ಧೀಕರಿಸುವ ಕೆಲಸ ಸ್ವಲ್ಪ ನಡೆದಿದೆ. ಹೀಗೆ ಮಾಡುವ ಕೆಲಸ ವೃಷಭಾವತಿಯ ಪುನರುಜ್ಜೀವನಕ್ಕೆ ಆಗುವುದಿಲ್ಲ, ನೀರಿನ ಬೇಡಿಕೆಯನ್ನು ಸ್ವಲ್ಪ ನಿವಾರಿಸುತ್ತದೆ ಅಷ್ಟೆ.
ಒಟ್ಟಿನಲ್ಲಿ ಶತಮಾನಗಳ ಸಕಲಜೀವೋಪಕಾರಿ ನದಿ ನಮ್ಮ ಸ್ವಾರ್ಥಕ್ಕೆ ಬಲಿಯಾಗಿ ಹೋಗಿದೆ, ಅದನ್ನು ಉದ್ಧರಿಸುವ ಪುಣ್ಯಾತ್ಮ ಎಲ್ಲಾದರೂ ಇದ್ದಾನಾ? ಇನ್ನೂ ಹುಟ್ಟಿ ಬರಬೇಕಿದೆಯಾ? ಗೊತ್ತಿಲ್ಲ. ಕಾಲವೇ ಉತ್ತರಿಸಬೇಕು. ಇದನ್ನು ಪುನರುಜ್ಜೀವಗೊಳಿಸುವ ಉದ್ದೇಶ ಇಟ್ಟುಕೊಂಡು ನಮ್ಮ ರಾಜ್ಯ ಹೋಗಲಿ, ಮಹಾನಗರ ಪಾಲಿಕೆಯ ಚುನಾವಣೆ ಎದುರಿಸುವ ತಾಕತ್ತು ಯಾವುದಾದರೂ ಪಕ್ಷಕ್ಕೆ ಇದೆಯೇ? ಹೋಗಲಿ, ನಮ್ಮ ಜನರಾದರೂ ಇದನ್ನು ಬಯಸುತ್ತಾರಾ? ಇವೆಲ್ಲ ಹೋಗಲಿ, ವೃಷಭಾವತಿ ಐತಿಹಾಸಿಕವಾಗಿ ಎಷ್ಟು ಮುಖ್ಯ ಅಂದರೆ ಈ ನೀರು ಸ್ವಚ್ಛವಾಗಿ ಹರಿಯುತ್ತಿದ್ದ ಕಾಲದಲ್ಲಿ ಬೆಂಗಳೂರಿಗೆ ಬಂದಿದ್ದ ಮಹಾತ್ಮ ಗಾಂಧಿಯವರು ಈಗಿನ ಜ್ಞಾನಭಾರತಿ ಆವರಣದಲ್ಲಿ ಅದರಲ್ಲಿ ಸ್ನಾನ ಮಾಡಿದ್ದರಂತೆ. ಈ ಕಾರಣಕ್ಕಾಗಿ ಆ ಜಾಗದಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಗಾಂಧಿ ಭಜನೆ ಮಾಡುವ ರಾಜಕೀಯ ನೇತಾಗಳು ಈ ಕಾರಣಕ್ಕಾದರೂ ವೃಷಭಾವತಿಯ ಉದ್ಧಾರಕ್ಕೆ ಮುಂದಾಗಬೇಕಿದೆ.
ನಮ್ಮ ಜನ ಸ್ವಾರ್ಥ ಬಿಟ್ಟು ಒಮ್ಮೆಯಾದರೂ ಈ ಬಗ್ಗೆ ಯೋಚಿಸುವರಾ?ಬದುಕಿರುವಷ್ಟು ಕಾಲ ಕಾದು ನೋಡುವಾ.

No comments:
Post a Comment