ಇದೇ ಮೊದಲ ಬಾರಿಗೆ ದೇಶದ ಯಾವುದೇ ಚುನಾವಣೆ ಪರಿಸರ ಕಾಳಜಿಯನ್ನು ಮುಂದಿಟ್ಟುಕೊಂಡು ನಡೆದಿದೆ. ಅಲ್ಲಿನ ನರ್ಮದಾ ನದಿಯ ಶುದ್ಧೀಕರಣದ ಹೆಸರಲ್ಲಿ ಈ ಚುನಾವಣೆ ಮುಖ್ಯವಾಗಿ ನಡೆದಿದೆ. ಹೀಗೆ ಪರಿಸರ ಉದ್ದೇಶದಿಂದ ಚುನಾವಣೆಗಳು ದೇಶದಲ್ಲಿ ನಡೆಯುವಂತಾದರೆ ಸಾಮಾನ್ಯ ಜನರಲ್ಲಿ ಅನ್ನುವುದಕ್ಕಿಂತ ಕನಿಷ್ಠಪಕ್ಷ ರಾಜಕೀಯ ನೇತಾಗಳಲ್ಲಿ ಆ ಬಗ್ಗೆ ಪ್ರಜ್ಞೆ ಮೂಡುತ್ತಿದೆ ಎಂದು ಭಾವಿಸಬಹುದಲ್ಲದೇ ನಿತ್ಯದ ರಾಜಕೀಯ ಕಚ್ಚಾಟದ ಹೊರತಾಗಿಯೂ ಚುನಾವಣೆಗೆ ಬೇರೆ ವಸ್ತುಗಳಿವೆ ಎಂಬುದು ಅರಿವಾಗಿರಾಜಕೀಯಚಿಂತನೆ ಬೇರೆ ಆಯಾಮವನ್ನು ಪಡೆಯುತ್ತದೆ. ನಮ್ಮ ಸಮಾಜ ಪಾಶ್ಚಾತ್ಯ ರಾಜಕೀಯ ವ್ಯವಸ್ಥೆಯನ್ನು ಒಪ್ಪಿಕೊಂಡಂತೆ ಇದಕ್ಕೆ ಸಂಬಂಧಿಸಿದ ಚಿಂತನೆ ಹಾಗೂ ತಂತ್ರಗಳನ್ನು ಒಪ್ಪಿಕೊಂಡಿಲ್ಲ ಇದನ್ನು ನಮ್ಮ ರಾಜಕೀಯ ನೇತಾಗಳು ಹಾಗೂ ಪಂಡಿತರು ಅರ್ಥಮಾಡಿಕೊಳ್ಳುವ ಅಗತ್ಯವಿದೆ. ನಮ್ಮ ದೇಶದಲ್ಲಿ ರಾಜಕೀಯ ವಿಶ್ಲೇಷಣೆ ನಡೆಸುವ ತಥಾಕಥಿತ ವಿಶ್ಲೇಷಣೆಯ ಸಿದ್ಧಾಂತ ನಡೆಯುವುದಿಲ್ಲ, ಹಾಗಾಗಿ ಈ ತಂತ್ರದಲ್ಲಿ ಜೀವನ ನಡೆಸುವ ಸೆಫಾಲಜಿಸ್ಟ್ ಗಳು, ಭವಿಷ್ಯ ಹೇಳುವ ಜ್ಯೋತಿಷಿಗಳು ಎಲ್ಲ ಪಕ್ಕಕ್ಕೆ ಸರಿದಿದ್ದಾರೆ, ಒಂದು ರೀತಿಯಲ್ಲಿ ರಾಜಕೀಯ ವಿಶ್ಲೇಷಣೆ ನಡೆಸುವ ತಜ್ಞರಿಗಿಂತ ಜ್ಯೋತಿಷಿಗಳೇ ವಾಸಿ. ಇದನ್ನು ಈಚಿನ ಅನೇಕ ಚುನಾವಣಾ ಫಲಿತಾಂಶಗಳು ಸಾಬೀತು ಮಾಡಿವೆ. ಇದನ್ನು ನಮ್ಮ ಪಂಡಿತರು ಗಂಭೀರವಾಗಿ ಪರಿಗಣಿಸಿಲ್ಲ, ಈ ಬಗ್ಗೆ ಅಧ್ಯಯನವನ್ನೂ ಮಾಡುತ್ತಿಲ್ಲ.ನಮ್ಮಲ್ಲಿ ನೂರಾರು ವಿಶ್ವವಿದ್ಯಾನಿಲಯಗಳಿವೆ, ನೂರಾರು ರಾಜಕೀಯ ಅಧ್ಯಯನ ಕೇಂದ್ರಗಳಿವೆ, ಆದರೆ ಎಲ್ಲಿಯೂ ಚುನಾವಣೆಯ ಸಂದರ್ಭದಲ್ಲಿ ನಮ್ಮ ಜನ ಯೋಚಿಸುವ ರೀತಿ ಎಂಥದ್ದು, ಅವರು ಮತದಾನ ಮಾಡುವ ಮಾನದಂಡ ಏನು ಎಂಬ ಬಗ್ಗೆ ಯಾವ ಅಧ್ಯಯನವೂ ಆಗಿಲ್ಲ, ಆಗುತ್ತಿಲ್ಲ, ನಿಜಕ್ಕೂ ಇದು ರಾಜಕೀಯ ವಿಷಯದಲ್ಲಿ ಹೊಸ ಒಳ ನೋಟ ಕೊಡುವ ಸಂಗತಿಯಾಗುತ್ತದೆ. ನೋಡಿ, ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷ ಏನೇ ಕೊಡಲಿ, ತಮ್ಮ ಹಕ್ಕು ಎಂಬಂತೆ ಅದನ್ನು ಸ್ವೀಕರಿಸುವ ನಮ್ಮ ಜನ ಮತ ಹಾಕುವಾಗ ಮಾತ್ರ ಮೊದಲೇ ನಿರ್ಧಾರ ಮಾಡಿಕೊಂಡಿದ್ದ ವ್ಯಕ್ತಿಗೆ ಮಾತ್ರ. ಇಂಥ ಕಡೆ ಕೊಡುಗೆ ತೆಗೆದುಕೊಂಡು ಕೂಡ ಅವರಿಗೆ ಮತದಾನ ಮಾಡಿಲ್ಲ ಎಂಬ ಪ್ರಜ್ಞೆ ಕೂಡ ಅವರನ್ನು ಕಡುವುದಿಲ್ಲ, ಇಲ್ಲಿ ನಮ್ಮ ಸಂಪ್ರದಾಯ ಹೇಳುವ ಮಾತು ತಪ್ಪುವ ಅಪರಾಧ ಅವರನ್ನು ಬಾಧಿಸುವುದಿಲ್ಲ, ಬದಲಾಗಿ ಮೂರ್ಖ ರಜಕೀಯ ಪಕ್ಷಗಳು ತಾವು ಜನಕ್ಕೆ ಅದೂ ಇದು ಕೊಟ್ಟಿದ್ದೇವೆ ಹಾಗಾಗಿ ಇವರೆಲ್ಲರ ಮತ ತಮ್ಮದೇ ಎಂಬ ಭ್ರನೆಯಲ್ಲಿರುತ್ತಾರೆ, ಫಲಿತಾಂಶ ಬಂದಾಗ ತಾವು ಮೋಸ ಹೋಗಿದ್ದು ಪಕ್ಷಗಳಿಗೆ ಅರಿವಾಗುತ್ತದೆ. ಇಂಥ ಸಂದರ್ಭದಲ್ಲಿ ಪಕ್ಷಗಳ ಹತಾಶೇ ಕೂಡ ಹೊರ ಬರುಬರುವುದಿದೆ. ಕರ್ನಾಟಕದಲ್ಲಿ ಈಚೆಗೆ ಲೋಕಸಭೆ ಚುನಾವಣೆ ನಡೆದಾಗ ವಿಧಾನ ಸಭಾ ಚುನಾವಣೆಯಲ್ಲಿ ಉಚಿತಗಳ ಘೋಷಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಪಕ್ಷ ಇಲ್ಲಿಯೂ ಅದು ನಡೆಯುತ್ತದೆ ಎಂಬ ಭ್ರಮೆಯಲ್ಲಿ ಬೀಗುತ್ತಿತ್ತು, ಆದರೆ ಫಲಿತಾಂಶ ಬಂದಾಗ ನಿರಾಸೆ ಕಾದಿತ್ತು, ಆ ಪಕ್ಷದ ಅಭ್ಯರ್ಥಿಗಳು ಎಲ್ಲೆಲ್ಲಿ ಸೋತಿದ್ದಾರೋ ಆ ಪ್ರದೇಶದ ಅಭಿವೃದ್ಧಿಗೆ ನೆರವು ಕೊಡಲಾಗದೆಂಬ ಮಟ್ಟಕ್ಕೂ ಸರ್ಕಾರ ಹೋಗಬೇಕಾಯಿತು. ಉಚಿತ ಯೋಜನೆಗಳ ಘೋಷಣೆಯಿಂದ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಲ್ಲಿ ಇದನ್ನೇ ಮಾದರಿಯಾಗಿ ಪರಿಗಣಿಸಿ ಕರ್ನಾಟಕ ಮಾದರಿ ಎಂದು ದೇಶದೆಲ್ಲೆಡೆ ಬಿಂಬಿಸಿ ಮತ ಸೆಳೆಯಲು ಮಾಡಿದ ಯತ್ನವೆಲ್ಲ ವಿಫಲವಾಗಿದೆ, ಬಿಜೆಪಿ ಹಿಂದುತ್ವದ ಕಾರ್ಡ್ ಬಳಸಿ ಗೆಲ್ಲುತ್ತದೆ ಎಂಬುದೂ ಸಾಕಷ್ಟು ಕಡೆ ಸುಳ್ಳಾಗಿದೆ. ಹಾಗಂತ ಅಭಿವೃದ್ಧಿಯೇ ಮತ ತರಬಲ್ಲದು ಎಂಬುದೂ ಸುಳ್ಳಾಗಿದ್ದಿದೆ, ರಸ್ತೆ, ಮನೆ, ನೀರು, ಮೂಲ ಸೌಕರ್ಯ ಇತ್ಯಾದಿಗಳನ್ನು ಶಕ್ತಿ ಮೀರಿ ಒದಗಿಸಿದ ಅಭ್ಯರ್ಥಿ ಕೂಡ ಸೋತಿದ್ದಿದೆ. ವೈಯಕ್ತಿಕ ವರ್ಚಸ್ಸು ಕೂಡ ಎಲ್ಲ ಬಾರಿ ನಡೆಯುವುದಿಲ್ಲ, ಆಡಳಿತ ವಿರೋಧಿ ನೀತಿಯಿಂದ ಜನ ಬದಲಾವಣೆ ಬಯಸಿ ಮತ ಹಾಕುತ್ತರೆಂಬುದೂ ಇಲ್ಲಿ ಸಂಪೂರ್ಣ ಸತ್ಯವಾಗಿ ಉಳಿದಿಲ್ಲ.
ಇನ್ನೊಂದು ಸಂಗತಿಯನ್ನು ಗಮನಿಸಬೇಕು. ಎಎಪಿಹಿಂದೆ ದೆಹಲಿ ಗದ್ದುಗೆ ಗೆದ್ದಾಗ ಅದು ಅದರ ಮೊದಲ ಚುನಾವಣೆ ಅಗಿತ್ತು, ಆಗ ತಾನೇ ಹುಟ್ಟಿತ್ತು. ಕಾಂಗ್ರೆಸ್ ಪಕ್ಷ ನೂರು ವರ್ಷಗಳನ್ನು ಕಂಡಿತ್ತು, ಸಾಕಷ್ಟು ಚುನಾವಣೆಗಳನ್ನು ಎದುರಿಸಿತ್ತು. ಆದರೆ ಎಎಪಿಮುಂದೆ ಅಂಗಾತ ಮಲಗಿತು, ಅನುಭವವಿದ್ದ ಬಿಜೆಪಿ ಕೂಡ ಗೆಲ್ಲ ಲಾಗಲಿಲ್ಲ, ಈ ಬಾರಿ ಅಚ್ಚರಿ ಎಂಬಂತೆ ಹಿಂದೆ ಎಎಪಿ ಗೆಲ್ಲಿಸಿದ್ದ ಜನ ಈ ಬಾರಿ ಆಘಾತವಾಗುವಂತೆ ಎಎಪಿಯನ್ನು ಸೋಲಿಸಿದ್ದಾರೆ. ಅಂದರೆಹಿಂದೆ ಗೆದ್ದಾಗಲೂ ಎಎಪಿಗೆ ಶಾಕ್ ಆಗಿತ್ತು, ಈಗ ಸೋತಾಗಲೂ ಅಷ್ಟೇ ಆಘಾತವಾಗಿದೆ, ನಮ್ಮದು ತುಂಬಾ ಹಳೆಯ ಪಕ್ಷ, ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ, ಸಿಕ್ಕಾಪಟ್ಟೆ ತ್ಯಾಗ ಮಾಡಿದ್ದೇವೆ ಎಂಬುದೆಲ್ಲ ಇಲ್ಲಿ ನಡೆಯುವುದಿಲ್ಲ, ಜನಕ್ಕೆ ಏನು ಬೇಕು, ಬಯಸುತ್ತಾರೆ ಎಂಬುದು ಯಾವಾಗಲೂ ಆಯಾ ಸಂದರ್ಭವನ್ನು ಅವಲಂಬಿಸಿರುತ್ತದೆ ಎಂದಷ್ಟೇ ಇದರಿಂದ ಹೇಳಬಹುದು. ಹಾಗಾಗಿ ನಮ್ಮ ದೇಶದ ಚುನಾವಣೆ ನಡೆಯುವಾಗಲೂ ಅದು ಹೊಸದೇ ಆಗಿರುತ್ತದೆ, ಹೊಸ ಅಗತ್ಯ. ಅನಿವಾರ್ಯತೆಯನ್ನೇ ಜನತೆ ಬಯಸುತ್ತಾರೆ ಅನ್ನಬಹುದು. ಹಾಗಾದರೆ ಇನ್ನೇನು ಎಂಬುದನ್ನು ರಾಜಕೀಯ ಪಂಡಿತರು ಅಧ್ಯಯನ ಮಾಡಬೇಕಿದೆ.
ಇವೆಲ್ಲದರ ಮಧ್ಯೆ ದೆಹಲಿ ಕೇವಲ ತನ್ನ ಸ್ವತ್ತು ಅಂದುಕೊಂಡು ಮಾತಾಡುತ್ತ, ನಮ್ಮನ್ನು ಇಲ್ಲಿನ ಚುನಾವಣೆಯಲ್ಲಿ ಸೋಲಿಸಲು ಈ ಜನ್ಮದಲ್ಲಿ ಸಾಧ್ಯವಿಲ್ಲ ಅನ್ನುತ್ತಿದ್ದ ಎಎಪಿ ಪಕ್ಷದ ಮುಖಂಡ ಕೇಜ್ರಿವಾಲನ ಪಕ್ಷವಿರಲಿ, ಸ್ವತಃ ಆತನನ್ನೇ ಜನ ಸೋಲಿಸಿದ್ದಾರೆ, ಅಂದರೆ ನಾನು ಎನ್ನುವ ಅಹಂಕಾರ ಕೂಡ ಇಲ್ಲಿ ನಡೆಯುವುದಿಲ್ಲ. ಹಾಗಾದರೆ ಜನ ಬಯಸುವುದೇನು? ಇದೊಂದು ಕುತೂಹಲಕಾರಿ ಅಧ್ಯಯನ ವಿಷಯ ಎಂದು ನಮ್ಮ ರಾಜಕೀಯ ಪಂಡಿತರಿಗೆ ಇಷ್ಟು ಕಾಲ ಅನಿಸದಿರುವುದೇ ಅಚ್ಚರಿಯ ಸಂಗತಿ. ಇದೇ ತೋರಿಸುತ್ತದೆ, ಪಾಶ್ಚಾತ್ಯ ವಾದಗಳಿಂದ ನಾವು ಎಷ್ಟು ಪ್ರಭಾವಿತರಾಗಿದ್ದೇವೆ ಎಂಬುದನ್ನು ಅರಿಯಲು. ಈ ಎಲ್ಲ ಕಾರಣವನ್ನು ಎತ್ತಿ ತೋರಿಸುವ ಕೆಲಸವನ್ನು ಹಾಗೂ ನೇತಾಗಳಿಗೆ ದೊಡ್ಡ ಪಾಠವನ್ನು ಇದು ಕಲಿಸಿದೆ. ಇದರಿಂದ ಕಲಿಯಬೇಕಾದುದು ಬಹಳಷ್ಟಿದೆ. ನಮ್ಮ ರಾಜಕೀಯ ಶೈಲಿಯೇ ಬೇರೆ, ನಾವೇ ಬೇರೆ, ಇಂಥ ಜಾಗತಿಕ ಸಿದ್ಧಾಂತಗಳು ನಮ್ಮಲ್ಲಿ ನಡೆಯುವುದಿಲ್ಲ ಎಂಬ ಸ್ವಂತಿಕೆಯನ್ನು ಸ್ಥಾಪಿಸಲು ನಮ್ಮ ರಾಜಕೀಯ ಪಂಡಿತರಿಗೆ ಇದು ಸಕಾಲ. ಆದಷ್ಟು ಬೇಗ ಅವರು ಇದನ್ನು ಸಾಧಿಸಲಿ. ನಿಜ. ಹಿಂದೆ ಎಎಪಿ ಅಧಿಕಾರಕ್ಕೆ ಬರುವಾಗ ಅದು ರಾಜಕೀಯದಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಚಾರವನ್ನು ಸವಾಲಿಗೆ ಒಡ್ಡಿ ಅಧಿಕಾರಕ್ಕೆ ಬಂದಿತ್ತು, ದುರಂತವೆಂದರೆ ಅದೇ ಕೂಪದಲ್ಲಿ ಈಗ ಅದು ಕಾಲು ಜಾರಿ ಬಿದ್ದಿದೆ. ಬಿಜೆಪಿ ನಿಜಕ್ಕೂ ಇಷ್ಟು ಅಪೂರ್ವ ಎಂಬಂತೆ ಗೆದ್ದುದು ಹೇಗೆ? ಮೋದಿಯ ವರ್ಚಸ್ಸೇ, ರಾಮ ಮಂದಿರ, ಕುಂಭ ಮೇಳಗಳೇ ಎಂಬುದು ಕೂಡ ಸಿದ್ಧವಾಗಿಲ್ಲ, ಎಎಪಿಯಂತೆ ಬಿಜೆಪಿ, ಕಾಂಗ್ರೆಸ್ ಕೂಡ ಆಮಿಷ ಒಡ್ಡಿದ್ದವು. ಆಮಿಷಗಳ ಸ್ಪರ್ಧೆಯೇ ಅಲ್ಲಿ ನಡೆದಿತ್ತು, ಆದರೂ ಬಿಜೆಪಿ ಗೆದ್ದಿದ್ದು ಹೇಗೆ ಎಂಬುದಕ್ಕೆ ಯಾವುದೇ ಒಂದು ಕಾರಣ ಸಿಕ್ಕಿಲ್ಲ, ಇಂಥ ಸಂಗತಿಗಳು ನಮ್ಮ ರಾಜಕೀಯ ಪಂಡಿತರಿಗೆ ಅಧ್ಯಯನ ವಸ್ತುಗಳಾಗಬೇಕಿದೆ, ಇದರಿಂದ ನಮ್ಮ ಸಮಾಜದ ಇನ್ನೊಂದು ಆಯಾಮ ಬಿಚ್ಚಿಕೊಳ್ಳುತ್ತದೆ. ಇದು ಆಗುವಂತಾಗಲಿ.

No comments:
Post a Comment