ದಕ್ಷಿಣ ಪಿನಾಕಿನಿ ಇಂದಿನ ನಂದಿ ಬೆಟ್ಟದಲ್ಲಿ ಹುಟ್ಟುತ್ತಿತ್ತು, ಅಲ್ಲಿಂದ ಇಳಿದು ಬೆಂಗಳೂರಿನ ಕಡೆಗೆ ಹರಿದುಬರುತ್ತಿತ್ತು. ಇದು ಹರಿಯುವಾಗ ಪೂರ್ವ ದಿಕ್ಕಿಗೆ ಹರಿದು ೪೨೫ ಕಿ.ಮೀ ಪ್ರವಹಿಸಿ ತಮಿಳುನಾಡಿನ ಮೂಲಕ ಬಂಗಾಳಕೊಲ್ಲಿ ಸೇರುತ್ತಿತ್ತು, ಇದಕ್ಕೆ ಪೊನ್ನೈಯಾರ್ ಎಂಬ ತಮಿಳು ಹೆಸರೂ ಇತ್ತು. ಇದು ಜೀವಂತ ಇರುವವರೆಗೂ ಬೆಂಗಳೂರಿನ ಉತ್ತರ ಭಾಗದ ಸಂಪೂರ್ಣ ನೀರಿನ ಅಗತ್ಯವನ್ನು ಪೂರೈಸುತ್ತಿತ್ತು. ಈ ದಕ್ಷಿಣ ಪಿನಾಕಿನಿಗೆ ವೃಷಭಾವತಿಗೆ ಇರುವಷ್ಟು ಅದೃಷ್ಟವೂ ಇಲ್ಲ, ಏಕೆಂದರೆ, ವೃಷಭಾವತಿಗೆ ಅದರ ಉದ್ಧಾರದ ಉದ್ದೇಶವುಳ್ಳ ಒಂದು ಮಂಡಳಿ, ಐಐಎಸ್ ಸಿ ವರದಿ, ಒಂದು ಅಡ್ರೆಸ್ ಎಲ್ಲ ಇದೆ, ಆದರೆ ಪಿನಾಕಿನಿಗೆ ಪಾನಿ ಡಾಟ್ ಅರ್ಥ್ ನವರ ವರದಿ ಬಿಟ್ಟರೆ ಇನ್ನೇನೂ ಇಲ್ಲ, ಜೊತೆಗೆ ಕಾಡುಗೋಡಿ ಎಂಬ ಹೆಸರಿದೆ, ಕಾಡುಗೋಡಿ ಎಂಬುದಕ್ಕೆ ಎರಡು ಅರ್ಥಗಳಿವೆ, ಒಂದು- ಕಾಡಿನಲ್ಲಿರುವ ಗುಡಿ - ಅದು ಈಗಲೂ ಕಾಡುಗೋಡಿಯಲ್ಲಿರುವ ಚೋಳರ ಕಾಲದ ಕಾಶಿ ವಿಶ್ವೇಶ್ವರ ದೇಗುಲ. ಇನ್ನೊಂದು ಕಾಡಿನಿಂದ ಸಮೃದ್ಧವಾದ ಗುಡಿ ಮಣ್ಣನ್ನು ತಂದು ಹಾಕುತ್ತಿದ್ದ ಪ್ರದೇಶ. ಇವೆರಡೇ ಇದಕ್ಕಿರುವ ಸದ್ಯದ ಸಾಕ್ಷಿಗಳು. ಜೊತೆಗೆ ಬೆಳ್ಳಂದೂರಿನಂತೆ ನೊರೆ ಕಾರುತ್ತಿರುವ ವಿಷವಾದ ಕೆರೆಗಳು, ಜೊತೆಗೆ ಕಾವೇರಿ ನೀರು ಕುರಿತು ತಮಿಳುನಾಡಿನ ಗದ್ದಲ ಕೂಡ ಇರಲಿಲ್ಲ ಎಂಬುದು ಮುಖ್ಯ. ಇದರ ಒಟ್ಟೂ ೨೮, ೨೮೮ ಚದರ್ ಕಿ.ಮೀ ನೀರು ಹರಿಯುವ ಪ್ರದೇಶದಲ್ಲಿ ನೂರಾರು ಕೆರೆಗಳು, ಉಪ ನದಿಗಳು ಜೀವಂತವಾಗಿದ್ದವು.ಇದು ಕಾವೇರಿ ಮತ್ತು ಪಾಲಾರ್ ನದಿಗಳಿಗೆ ಹೊಂದಿಕೊಂಡಿತ್ತು, ಆದ್ದರಿಂದ ತಮಿಳುನಾಡಿಗೆ ನೀರಿನ ಕೊರತೆ ಆಗುತ್ತಿರಲಿಲ್ಲ, ಯಾವಾಗ ಇದು ಸತ್ತಿತೋ ಅಂದಿನಿಂದ ತಮಿಳುನಾಡಿನ ಕಣ್ಣು ಕಾವೇರಿಯ ಮೇಲೆ ಬಿತ್ತು. ಕಾವೇರಿ ನೀರಿನ ಬಗ್ಗೆ ಗದ್ದಲ ಎಬ್ಬಿಸುವ ಯಾರೊಬ್ಬರೂ ಈ ನದಿಯ ಬಗ್ಗೆ ಉಸಿರು ಎತ್ತುವುದಿಲ್ಲ, ಇದರಿಂದ ಗೊತ್ತಾಗುತ್ತದೆ ಈ ನದಿ ಎಷ್ಟು ಮುಖ್ಯವಾಗಿತ್ತೆಂದು. ಈ ನದಿ ಮೊದಲು ಕುಲಗೆಟ್ಟಿದ್ದು ಬೆಂಗಳೂರಲ್ಲಿ. ಈ ನದಿಯ ಕೊಲೆಗಾರ ಬೆಂಗಳೂರು ಎಂಬ ಮಹಾನಗರ. ನಂದಿ ಬೆಟ್ಟದಲ್ಲಿ ಹುಟ್ಟಿ ಚಿಕ್ಕಬಳ್ಳಾಪುರ, ಮಾಲೂರು, ಕಾಡುಗೋಡಿ, ಸರ್ಜಾಪುದಿಂದ ಹೊಸಕೋಟೆಗೆ ಬಂದು, ಹೊಸೂರಿಗೆ ಹೋಗಿ,ಕೃಷ್ಣಗಿರಿ ಬಳಸಿ ವಿಲ್ಲುಪುರಂನಿಂದ ಮುಂದೆ ಹೋಗಿ ಕಡಲೂರು, ಪಾಂಡಿಚೇರಿ ಬಳಿ ಬಂಗಾಳಕೊಲ್ಲಿ ಸೇರುತ್ತಿತ್ತು. ಇಷ್ಟರಲ್ಲಿ ಇದು ತುಂಬುತ್ತಿದ್ದ ಕೆರೆಗಳ ಸಂಖ್ಯೆ ಅಗಣಿತ. ಬೆಂಗಳೂರಲ್ಲಿ ಕೈಗಾರಿಕಾ ತ್ಯಾಜ್ಯ, ಕೊಳಚೆ ನೀರು ಹೊತ್ತು ಸಾಗುತ್ತ ತಮಿಳುನಾಡಿನ ಪ್ರಮುಖ ನಗರ ಪಟ್ಟಣಗಳನ್ನು ಸುತ್ತಿ ಅಲ್ಲಿನ ಕೊಚ್ಚೆ ತೊಳೆದು ಮಡಿಲಲ್ಲಿ ಹಾಕಿಕೊಂಡು ಸಾಗುತ್ತ ಕ್ರಮೇಣ ಒಣಗಿತು. ಆರಂಭದಲ್ಲಿ ಇದರ ಹಣೆಬರೆಹ ವನ್ನು ಯಾರೂ ಗುರುತಿಸಲಿಲ್ಲ, ಇದು ನಮ್ಮ ಹಣೆಬರೆಹ. ಇಂದು ನೊರೆ ಕಾರುತ್ತ ಪ್ರಪಂಚದ ಗಮನ ಸೆಳೆಯುತ್ತಿರುವ ಬೆಳ್ಳಂದೂರು ಕೆರೆ ಕೂಡ ಅಂದಕಾಲತ್ತಿಲೆ ದಕ್ಷಿಣ ಪಿನಾಕಿನಿಯ ಅಂದದ ಕೂಸಾಗಿತ್ತು. ವೃಷಭಾವತಿ ಮತ್ತು ದಕ್ಷಿಣ ಪಿನಾಕಿನಿಗಳು ಜೀವಂತ ಇರುವವರೆಗೆ ಕರ್ನಾಟಕ ಮತ್ತು ತಮಿಳುನಾಡುಗಳ ಮಧ್ಯೆ ನೀರಿನ ಗದ್ದಲವೇ ಇರಲಿಲ್ಲ. ನೋಡಿ ಈ ಗಲಾಟೆ ಇಂದು ಎಲ್ಲಿಗೆ ಬಂದು ನಿಂತಿದೆ ಮೂಲ ಕಾರಣ ಎಲ್ಲಿದೆ ಎಂದು. ದಕ್ಷಿಣ ಪಿನಾಕಿನಿಯ ಮಹತ್ವ ಅರಿತ ಶಿಡ್ಲಘಟ್ಟದ ಜನ ಇದರ ಪುನರುತ್ಥಾನಕ್ಕೆ ಯತ್ನಿಸಿದ್ದಾರೆ, ಮಾಲೂರು ಬಳಿ ಬರುವಷ್ಟರಲ್ಲಿ ಇದು ಈಗ ಒಣಗುತ್ತದೆ.ಅಲ್ಲಿಂದ ಕೊಳಚೆ ಹೊತ್ತು ಬರುತ್ತ ಬೆಂಗಳೂರು ಮೂಲಕ ಹೊಸೂರು ತಲಪುವಷ್ಟರಲ್ಲಿ ಸಂಪೂರ್ಣ ನಾಪತ್ತೆಯಾಗುತ್ತದೆ.ಇದು ಬದುಕಿದ್ದಾಗ ೪, ೭೦೦ ಹೆಕ್ಟೇರ್ ಭೂಮಿಗೆ ನೀರುಣಿಸುತ್ತಿತ್ತಂತೆ, ೨೦೧೬ರಲ್ಲಿಈ ನದಿಗೆ ಪುನರುಜ್ಜೀವ ಕೊಡುವ ಯತ್ನ ಶಿಡ್ಲ ಘಟ್ಟದಲ್ಲಿ ಸ್ವಲ್ಪ ನಡೆದು ಈಗ ನಿಂತಿದೆ, ಪಿನಾಕಿನಿ ಮತ್ತು ವೃಷಭವತಿಗಳಿದ್ದಾಗ ಬೆಂಗಳೂರಲ್ಲಿ ಸಾವಿರಕ್ಕೂ ಮಿಕ್ಕಿ ಶುದ್ಧ ನೀರಿನ ಕೆರೆಗಳಿದ್ದವು ೨೦೦೦ವೇಳೆಗೆ ೪೦೦ ರಷ್ಟಿದ್ದ ಕೆರೆಗಳು ೨೦೧೬ರಲ್ಲಿ ೨೦೦ಕ್ಕೆ ಕುಸಿದವು.ಸದ್ಯ ಬೆಂಗಳೂರಲ್ಲಿ ನೋಡಲು ಸಿಗುವ ಕೆರೆಗಳು ೧೭ ಮಾತ್ರ. ಇಂದು ಬೆಂಗಳೂರು ಬೃಹತ್ತಾಗಿ ಬೆಳೆದಿದೆ ಅಂದರೆ ಅಷ್ಟು ಕೆರೆಗಳು ಅದರ ಹೊಟ್ಟೆ ಸೇರಿವೆ ಎಂದರ್ಥ. ಬೆಂಗಳೂರಲ್ಲಿದ್ದ ಕೆರೆಗಳ ಸಂಖ್ಯೆ ಬಿಬಿಎಂಪಿ ನಕಾಸೆಯಲ್ಲೇ ಸಿಗುತ್ತವೆ, ಇಂದು ಬೆಂಗಳೂರಿನ ಯಾವೆಲ್ಲ ಜಾಗಗಳಿಗೆ ನಾಗಸಂದ್ರ, ದೊಡ್ಡಸಂದ್ರ ಇತ್ಯಾದಿ ಸಂದ್ರ ಎಂಬ ಹೆಸರಿದೆಯೋ ಅಲ್ಲೆಲ್ಲ ದೊಡ್ಡ ಕೆರೆಗಳಿದ್ದವೆಂದೇ ಅರ್ಥ, ಈಗ ಇಲ್ಲೆಲ್ಲ ಹೆಸರಲ್ಲಿ ಮಾತ್ರ ಇವೆ. ಬೆಂಗಳೂರು ಕೆರೆಗಳ ಹಣೆ ಬರೆಹ ಜಾನಕಿ ನಾಯರ್ ಅವರ ಪ್ರಾಮಿಸ್ ಆಫ್ ದಿ ಮೆಟ್ರೊಪಾಲೀಸ್ ಎಂಬ ಕೃತಿಯಲ್ಲಿ ಸೂಕ್ತವಾಗಿ ದೊರೆಯುತ್ತದೆ. ಒಂದು ಕಾಲದಲ್ಲಿ ಬೆಂಗಳೂರಿಗೆ ಇಂದಿನ ಸಿಲಿಕಾನ್ ವ್ಯಾಲಿ ಎಂಬ ಹೆಸರು ಇರಲಿಲ್ಲ, ಇದು ಆಗ ಕೆರೆಗಳ ನಗರ, ನದಿಗಳ ವ್ಯಾಲಿ ಆಗಿತ್ತು.

No comments:
Post a Comment