Monday, 17 February 2025

ನಮ್ಮ ಬಜೆಟ್ ನಮ್ಮ ನಿರೀಕ್ಷೆಗಳು


ಈ ಬಾರಿಯ ಅಂದರೆ ೨೦೨೫-೨೬ನೆಯ ಸಾಲಿನ ಕರ್ನಾಟಕದ ಆರ್ಥಿಕ ವರ್ಷದ ಮುಂಗಡ ಪತ್ರವನ್ನು ಮಾನ್ಯ ಮುಖ್ಯಮಂತ್ರಿಗಳೂ ಹಣಕಾಸು ಸಚಿವರೂ ಆದ ಶ್ರೀ ಸಿದ್ದರಾಮಯ್ಯನವರು ಮಾರ್ಚ್೭ರಂದು ಮಂಡಿಸಲಿದ್ದಾರೆಂದು ಹೇಳಲಾಗಿದೆ. ನಮ್ಮ ರಾಜ್ಯ  ಬಜೆಟ್ ಅಧಿವೇಶನ ಮಾರ್ಚ್ ೩ ರಿಂದ ಆರಂಭವಾಗುತ್ತಿದ್ದು ಬಜೆಟ್ ಮಾರ್ಚ್ ೭ರಂದು ಮಂಡನೆ ಆಗುವುದೆಂದು ಮಾನ್ಯ ಮುಖ್ಯಮಂತ್ರಿಗಳೂ ಹಣಕಾಸು ಸಚಿವರೂ ಆದ ಮಾನ್ಯ ಸಿದ್ದರಾಮಯ್ಯನವರು ಹೇಳಿದ್ದಾರೆ, ಈ ಹಿನ್ನೆಲೆಯಲ್ಲಿ ನಮ್ಮ ನಿರೀಕ್ಷೆಗಳೇನು ನೋಡೋಣ - 

ಈ ಬಾರಿಯ ಮುಂಗಡಪತ್ರದ ಅಂದಾಜು ಮೊತ್ತ ಸುಮಾರು ೪.೧ ಲಕ್ಷಕೋಟಿ ರೂ. ಆಗಲಿದೆ ಎಂಬ ಅಂದಾಜಿದೆ. ಗ್ರಾಮೀಣ ಭಾಗದಿಂದ ಬಂದು ಕಷ್ಟಪಟ್ಟು ವಿದ್ಯೆ ಕಲಿತು ಬದುಕಿನ ಸಮೃದ್ಧ ಅನುಭವದಿಂದ ರಾಜ್ಯ ರಾಜಕಾರಣದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಸರ್ವತೋಮುಖ ಅಭಿವೃದ್ಧಿಗೆ ಪಣತೊಟ್ಟ ಸಿದ್ದರಾಮಯ್ಯನವರ ಮೊದಲ ಹಾಗೂ ಕೊನೆಯ ಲಕ್ಷ್ಯ ಬಡವರು ಹಾಗೂ ಹಿಂದುಳಿದವರು ಹಾಗೂ ಅವರ ಕಲ್ಯಾಣ. ಜನತಂತ್ರ ವ್ಯವಸ್ಥೆಯಲ್ಲಿ ಇದು ಒಂದುಹಂತದವರೆಗೆ ಅಪೇಕ್ಷಣೀಯ. ಇದನ್ನು ಅವರು ಈಗಾಗಲೇ ಸಾಧಿಸಿದ್ದಾರೆ. ಇನ್ನೇನಿದ್ದರೂ ಸಮಗ್ರ ಅಭಿವೃದ್ಧಿಯಲ್ಲಿ ಅವರನ್ನು ಸೇರಿಸುವ ಯತ್ನ ಆಗಬೇಕು, ವಿಶೇಷ ಸವಲತ್ತು, ಸೌಲಭ್ಯಗಳನ್ನು ಪುಕ್ಕಟೆಯಾಗಿ ಕೊಟ್ಟು ಅವರನ್ನು ಮೇಲೆತ್ತುವ ಪ್ರಯತ್ನ ಸಾಕಷ್ಟು ಆಗಿದೆ. ಇನ್ನು ಅದರ ಫಲಿತಾಂಶವನ್ನು ವಾಸ್ತವಿಕ ನೆಲೆಯಲ್ಲಿ ಮುಲಾಜಿಲ್ಲದೇ ಅವಲೋಕಿಸುವ ಕೆಲಸ ಆಗಬೇಕು. ಇಲ್ಲವಾದಲ್ಲಿ ಸಿಕ್ಕವರಿಗೆ ಸೀರುಂಡೆ ಎಂಬಂತೆ ಅನರ್ಹರು ಕೂಡ ಸರ್ಕಾರದ ಸವಲತ್ತು, ಯಾರಪ್ಪನದು ಅನ್ನುತ್ತಾ ಅನುಭವಿಸುವ ಕೆಲಸ ಮಾಡುತ್ತಾರೆ, ಇದರಿಂದ ಸರ್ಕಾರಕ್ಕೂ ಸಮಾಜಕ್ಕೂ ಹೊರೆ ಹೆಚ್ಚುತ್ತದೆ. ಸಮಾಜದಲ್ಲಿ ತಮ್ಮತಮ್ಮ ಜವಾಬ್ದಾರಿ ಅರಿತ ಪ್ರಜೆಗಳಿದ್ದರೆ ತಮ್ಮ ಸಹಜೀವಿಗಳಿಗೆ ಉಳ್ಳವರು ನೆರವಾಗುತ್ತಾರೆ ಸರ್ಕಾರದೊಂದಿಗೆ ಕೈಜೋಡಿಸುತ್ತಾರೆ, ಇಲ್ಲವಾದಲ್ಲಿ ಬಂದಷ್ಟು ಬರಲೆಂಬ ಭಾವನೆಯಲ್ಲಿ ಸ್ವಾರ್ಥ ಸಾಧನೆಗೆ ಇಳಿಯುತ್ತಾರೆ. ತೆರಿಗೆ ಕಟ್ಟುವವರು ಕಟ್ಟುತ್ತಿರುತ್ತಾರೆ, ಕುಳಿತು ಅನುಭವಿಸುವವರು ಉಣ್ಣುತ್ತಲೇ ಇರುತ್ತಾರೆ. ಇಂಥ ಬೆಳವಣಿಗೆ ಆಗದಂತೆ ತಡೆಯುವ ಹೊಣೆ ಮಾನ್ಯ ಮುಖ್ಯಮಂತ್ರಿಗಳ ಮೇಲೆ ಇದೆ. ಯಾಕೆಂದರೆ ರಾಜ್ಯದಲ್ಲಿ ಒಳ್ಳೆಯ ಉದ್ದೇಶದಿಂದ ಜಾರಿಗೆ ಬಂದ ಐದು ಭಾಗ್ಯ ಯೋಜನೆಯ ಫಲಾನುಭವಿಗಳಲ್ಲಿ ಅನರ್ಹರೇ ಹೆಚ್ಚುತುಂಬಿದ್ದಾರೆ. ಉದಾಹರಣೆಗೆ ಸ್ತ್ರೀಶಕ್ತಿ ಯೋಜನೆಯನ್ನು ನೋಡಿ. ಮಹಿಳೆಯರು ನಮಗೆ ಪುಗ್ಸಟ್ಟೆ ಪ್ರಯಾಣಕ್ಕೆ ಅವಕಾಶಕೊಡಿ ಎಂದು ಕೇಳಿರಲಿಲ್ಲ ಎಂಬುದು ಬೇರೆ ಮಾತು. ಸರ್ಕಾರಗಳು ಜನ ಸೌಲಭ್ಯವನ್ನು ಕೇಳಿದರೆ, ಜನ ಅತ್ತರೆ ಮಾತ್ರ ಕೊಡಬೇಕೆಂದಿಲ್ಲ, ಹಾಗಾದಾಗ ಅದು ಕೆಟ್ಟ ಸರ್ಕಾರವಾಗುತ್ತದೆ. ಜನರ ಕಷ್ಟ ನೋಡಿ ಸ್ಪಂದಿಸುವ ಸರ್ಕಾರ ಯಾವಾಗಲೂ ಅಪೇಕ್ಷಣೀಯ. ಈ ಯೋಜನೆಗಳೆಲ್ಲ ಅಂಥವು. ಆದರೆ ಅವುಗಳ ಪ್ರಯೋಜನ ಪಡೆಯುವ ಜನ ಒಂದು ಕ್ಷಣ ನಾನು ಇದಕ್ಕೆ ಅರ್ಹನೇ ಎಂದು ಯೋಚಿಸಬೇಕು. ಸರ್ಕಾರದಲ್ಲಿ ಹಲವರಿಗಾಗಿ ಹಲವು ಯೋಜನೆಗಳು ಇರುತ್ತವೆ, ಅದಕ್ಕೆ ಸಂಬಂಧಪಡದವರು ಅದಕ್ಕಾಗಿ ಹಂಬಲಿಸಬಾರದು. ನಮಗೆ ತಿಳಿದಂತೆ ರೈತರಿಗಾಗಿ ಸರ್ಕಾರ ಜಾರಿಮಾಡಿದ ಪ್ರೋತ್ಸಾಹದ ಹಣವನ್ನು ಎಲ್ಲೋ ನೌಕರಿಯಲ್ಲಿದ್ದು ಹೆಸರಿಗಷ್ಟೇ ರೈತರಾದ ಅನೇಕರು ಪಡೆಯುತ್ತಿದ್ದಾರೆ. ಯಾವುದೇ ಯೋಜನೆ ಹೀಗಾಗಬಾರದು. ಇಂಥವನ್ನು ತಡೆಯುವ ಕೆಲಸ ಯಾವುದಾದರೂ ಒಂದು ಹಂತದಲ್ಲಿ ನಡೆಯಬೇಕು. ಹಿಂದುಳಿದವರಿಗೆ ಕೊಡಲಾಗುವ ಸೌಲಭ್ಯಗಳು ಕೂಡ ಇಷ್ಟು ಕಾಲದ ಅನಂತರ ಕಟ್ಟು ನಿಟ್ಟಿನ ಪರಿಶೀಲನೆಗೆ ಅರ್ಹ. ಏಕೆಂದರೆ ಇಂಥ ಯೋಜನೆ ಶುರುವಾಗಿ ನಾಲ್ಕಾರು ದಶಕಗಳು ಸಂದಿವೆ. ಆದರೆ ಸವಲತ್ತು ನೀಡುವಾಗ ಇನ್ನೂ ಹಳೆಯ ಮಾನದಂಡ ಬಳಸುವುದು ಸಾಧುವಲ್ಲ, ಹಿಂದೆ ಹಿಂದುಳಿದವರೆಂದು ಗುರುತಿಸಲಾಗಿದ್ದ ಎಷ್ಟೋ ಕುಟುಂಬಗಳು ಮೂರು ನಾಲ್ಕು ತಲೆಮಾರುಗಳ ಹಿಂದೆಯೇ ಅಪೇಕ್ಷಿತ ಪ್ರಧಾನವಾಹಿನಿಗೆ ಬಂದುಬಿಟ್ಟಿವೆ, ಮುಂದುವರೆದವರೆಂದು ಹೇಳಲಾದ ಕುಟುಂಬಗಳು ಸವಲತ್ತುಗಳ ಕೊರತೆಯಿಂದ ಹಿಂದೆ ಉಳಿದು ಕೆಳಗೆ ಜಾರಿವೆ. ಅಂದರೆ ಮೇಲಿದ್ದವರು ಕೆಳಗೂ ಕೆಳಗಿದ್ದವರು ಮೇಲಕ್ಕೂ ಬಂದು ಸಾಮಾಜಿಕ ರೇಖೆ ಒಂದು ಹಂತದಲ್ಲಿ ಸಮವಾಗಿದೆ. ಇದನ್ನು ಗುರುತಿಸಬೇಕು. ಇಲ್ಲವಾದಲ್ಲಿ ತಾವು ಹಿಂದುಳಿದವರೆಂದು ಅರ್ಥಹೀನ ಜಾತಿಯ ಹೆಸರಲ್ಲಿ ಸಕಲ ಸವಲತ್ತು ಪಡೆಯುವವರು ಮತ್ತೆ ಸಾಮಾಜಿಕ ಅಸಮಾನತೆಗೆ ಕಾರಣವಾಗುತ್ತಾರೆ. ಇದುವರೆಗಿನ ವಾದವನ್ನೇ ಮುಂದಿಟ್ಟು ಹೇಳುವುದಾದರೆ ಇದುವರೆಗೆ ಮುಂದುವರೆದವರೆಂದು ಹೇಳಲಾದ ಬ್ರಾಹ್ಮಣರ ಬದಲು ಆದಿವಾಸಿ ಪಂಗಡವೊಂದು ಆ ಜಾಗಕ್ಕೆ ಬಂದು ಕುಳಿತರೆ ಅದು ಸಾಮಾಜಿಕ ಸಮಾನತೆಯ ಸಾಧನೆ ಆಗುವುದಿಲ್ಲ. ಮತ್ತೆ ಅದು ಇಷ್ಟು ದಿನ ನೀವು ಇದ್ದಲ್ಲಿ ನಾವಿದ್ದೇವೆ ಎಂಬ ಪ್ರತೀಕಾರದ ದಾರಿಯಾಗುತ್ತದೆ. ಅವರ ಬದಲು ಇವರು ಬಂದು ಕುಳಿತಂತಾಗುತ್ತದೆ. ಇದು ಸಾಧನೆ ಅಲ್ಲ. ಈ ಕಾರಣಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಮಾರ್ಗ ರೂಪಿಸಬೇಕಿದೆ. ಇಲ್ಲವಾದಲ್ಲಿ ಸವಲತ್ತು ಪಡೆಯುವ ಮೇಲಾಟದಲ್ಲಿ ಎಲ್ಲ ಸಮುದಾಯಗಳೂ ತಮಗೂ ಮೀಸಲಾತಿ ಕೊಡಿ, ನಮ್ಮನ್ನು ಕೆಳ ವರ್ಗಕ್ಕೆ ಸೇರಿಸಿ ಎಂದು ಜಾತಿಯನ್ನು ಮುಂದೆ ಮಾಡಿ ಹೋರಾಟಕ್ಕೆ ಇಳಿಯುತ್ತವೆ. ನಮ್ಮ ಮುಂದೆ ಇಂಥ ಹೋರಾಟಗಳು ಈಚೆಗೆ ಹೆಚ್ಚುತ್ತಿರುವುದನ್ನು ನಾವು ಮತ್ತೆ ಮತ್ತೆ ಗಮನಿಸಬಹುದು, ಕೆಲವೊಮ್ಮೆ ಇದು ಕೆಟ್ಟ ಹಿಂಸಾ ರೂಪಕ್ಕೂ ತಿರುಗಬಹುದು. ಜಾತಿ ನಿಷ್ಠ ಮೀಸಲಾತಿಯ ಅಪಾಯಕ್ಕೆ ಮಣಿಪುರದ ಗಲಭೆ ಒಂದು ನಿದರ್ಶನ. ಇದು ದೇಶದ ಬೇರೆ ಕಡೆ ಆಗುವುದಿಲ್ಲ, ಆಗಬಾರದು ಎಂದೇನೂ ಇಲ್ಲ. ಮೀಸಲಾತಿ ಯೋಜನೆ ಜಾರಿಯ ಆರಂಭದ ಕಾಲಘಟ್ಟದಲ್ಲಿ ಜಾತಿ ಅಥವಾ ಪಂಗಡಗಳನ್ನು ಮಾನದಂಡವಾಗಿ ಇಟ್ಟುಕೊಂಡಿದ್ದರಲ್ಲಿ ಅರ್ಥವಿದೆ. ಆಗ ಅನ್ಯ ಮಾನದಂಡಗಳು ಇರಲಿಲ್ಲ. ಆದರೆ ಈಗ ಹಾಗೆ ಗುರುತಿಸಲು ಸಾಧ್ಯವಾಗುವ ಅನೇಕ ಮಾರ್ಗಗಳಿವೆ. ಹೀಗಿರುವಾಗ ಒಂದು ಕಡೆ ಜಾತಿ ನಿರ್ನಾಮ ಮಾಡುತ್ತೇವೆ ಎಂದು ಹೇಳುತ್ತ ಜಾತಿ ನಿಷ್ಠ ಮೀಸಲಾತಿ ಜಾರಿಯಲ್ಲಿಟ್ಟರೆ ಜಾತಿಗಳ ನಾಶ ಕನಸೇ ಆಗಿ ಮತ್ತಷ್ಟು ಅದು ಬಲಗೊಳ್ಳುವಂತಾಗುತ್ತದೆ. ಆದ್ದರಿಂದ ಮೀಸಲಾತಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಜಾರಿ ಮಾಡುವ ಅಗತ್ಯವಿದೆ. ಇನ್ನುಳಿದಂತೆ ಶಿಕ್ಷಣ. ಆರೋಗ್ಯದಂಥ ಕ್ಷೇತ್ರಗಳಿಗೆ ಕೊಡಲಾಗುವ ಆದ್ಯತೆಯಲ್ಲಿ ಕಡಿಮೆ ಮಾಡಲಾಗದು. ಇವುಗಳ ಜೊತೆಗೆ ಸರ್ಕಾರಿ ನೌಕಕರು ಮತ್ತು ಅವರ ಬೇಡಿಕೆಗಳು, ಬಡ್ತಿ ಮತ್ತು ಹಿಂಬಾಕಿ ಬೇಡಿಕೆಗಳು ಬಹುಕಾಲದಿಂದ ಬಾಕಿ ಇದ್ದು ಇವನ್ನು ಪೂರೈಸಬೇಕಿದೆ. ಆದ್ಯತೆಯ ಕ್ಷೇತ್ರಗಳ ಜೊತೆ ಇವನ್ನೆಲ್ಲ ನಿರಾಕರಿಸಲಾಗದು. ಇವಲ್ಲದೇ ಆಗಾಗ ಘಟಿಸುವ ನೈಸರ್ಗಿಕ ಪ್ರಕೋಪಗಳ ಸವಾಲುಗಳಿಗೆ ವ್ಯಯಿಸಬೇಕಾದ ಹಣಕಾಸಿನ ಲೆಕ್ಕವನ್ನು ಯಾರೂ ಊಹಿಸಲಾಗದು. ಇವುಗಳಿಗೆ ಸರ್ಕಾರ ಯಾವಾಗಲೂ ಸಿದ್ಧವಾಗಿರಬೇಕಾಗುತ್ತದೆ. ಇವನ್ನೆಲ್ಲ ಸರಿದೂಗಿಸಬೇಕಾದ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ.  

ಈಗ ವಿಷಯಕ್ಕೆ ಹಿಂದಿರುಗೋಣ. ಕರ್ನಾಟಕದಲ್ಲಿ ತೆರಿಗೆ ಕಟ್ಟುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಯುತ್ತಿದ್ದರೆ ಸೌಲಭ್ಯ ಪಡೆಯುವವರ ಸಂಖ್ಯೆ ಏರುತ್ತಿದೆ. ಒಮ್ಮೆ ಯಾವುದೇ ಸೌಲಭ್ಯ ಪಡೆದವರನ್ನು ಮತ್ತೆ ಆ ಸೌಲಭ್ಯ ಪಡೆಯದಂತೆ ತಡೆಯುವ ಮಾರ್ಗಗಳು ನಮ್ಮಲ್ಲಿಲ್ಲ ಹೀಗಾಗಿ ಸವಲತ್ತು ಪಡೆದವರೇ ಮತ್ತೆ ಸೌಲಭ್ಯ ಪಡೆಯುತ್ತಾ ಅದು ಒಂದೇ ಜಾಗದಲ್ಲಿ ಸುತ್ತುತ್ತಾ ಇರುತ್ತದೆ. ಅದೇ ಸಮುದಾಯದ ಅರ್ಹರಿಗೆ ಅದು ಹೋಗುವ ಅವಕಾಶ ತಪ್ಪುತ್ತದೆ. ಯಾವುದೇ ಸೌಲಭ್ಯದ ಗತಿ ಹೀಗಾಹಬಾರದು. ಸದ್ಯ ಹಿಂದುಳಿದವರ ಸೌಲಭ್ಯ ಈ ದಾರಿಯನ್ನು ಹಿಡಿದಾಗಿದೆ. ಇದನ್ನು ತಡೆಯುವ ಯತ್ನ ಅಗದಿದ್ದರೆ ಸಮ ಸಮಾಜದ ಕಮಸು ಎಂದಿಗೂ ನನಸಾಗುವುದಿಲ್ಲ. ಮೀಸಲಾತಿಯ ಅವಾಂತರ ಆಗಾಗ ನಡೆಯುವುದನ್ನು ನೋಡಿ. ಕೆನೆಪದರಕ್ಕೆ ಒಮ್ಮೆ ಬಂದವರನ್ನು ಗುರುತಿಸಿ ಸೌಲಭ್ಯ ನಿಲ್ಲಿಸಲು ಸರ್ಕಾರ ಮುಂದಾದರೆ ಆ ಸಮುದಾಯದ ಜನ ಸರ್ಕಾರದ ಇಂಥ ಪ್ರಯತ್ನವನ್ನು ವಿರೋಧಿಸುತ್ತಾರೆ. ಬದಲಾಗಿ ಇನ್ನೂ ಸವಲತ್ತು ಕೊಡಿ ಅನ್ನುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರ ಸೌಲಭ್ಯ ಕೊಡುವಾಗಲೇ ಅದರ ಕರಾರುಗಳನ್ನು ಸ್ಪಷ್ಟ ಮಾಡಬೇಕು. ಒಟ್ಟಿನಲ್ಲಿ ನಮ್ಮ ಜನತೆಗೆ ಯಾವುದೇ ಬಗೆಯ ಮೀಸಲಾತಿಯನ್ನು ಸೌಲಭ್ಯವನ್ನು ಪಡೆದು ಗೊತ್ತಿದೆಯೇ ವಿನಾ ತ್ಯಜಿಸಿ ಗೊತ್ತಿಲ್ಲ, ಇಂಥ ಕಡೆ ಯೋಜನೆಗಳನ್ನು ಸರ್ಕಾರ ಹೆಚ್ಚು ಎಚ್ಚರಿಕೆಯಿಂದ ಜಾರಿ ಮಾಡಬೇಕು. ಸದ್ಯ ನಮ್ಮಲ್ಲಿ ಇದಾಗುತ್ತಿಲ್ಲ. ಜನ ಕೂಡ ಇದಕ್ಕೆ ಅವಕಾಶ ಕೊಡುತ್ತಿಲ್ಲ. ಇಂಥ ಸಂದರ್ಭದಲ್ಲಿ ಸರ್ಕಾರ ಐದು ಪುಗ್ಸಟ್ಟೆ ಯೋಜನೆಗಳನ್ನು ಜಾರಿ ಮಾಡಿದೆ, ಈ ಒಂದೊಂದು ಯೋಜನೆಗಳ ಕತೆ ಒಂದೊಂದು ಪುಸ್ತಕವಾಗುವಷ್ಟಿದೆ. ಇವುಗಳಿಂದ ಸರ್ಕಾರಕ್ಕೆ ಆಗಿರುವ ನಷ್ಟ ಅಂತಿಂಥದ್ದಲ್ಲ. ಹೀಗಾಗಿ ಇದನ್ನು ಮುಂದೆ ಸರಿದೂಗಿಸುವ ಮಾರ್ಗವನ್ನು ಸರ್ಕಾರ ಈಗಿನಿಂದಲೇ ರೂಪಿಸಬೇಕಾದ ಅಗತ್ಯವಿದೆ. ಈ ಯೋಜನೆಗಳನ್ನು ಇದೇ ಸರ್ಕಾರ ರೂಪಿಸಿರುವುದರಿಂದ ಇದೇ ಸರ್ಕಾರವೇ ನಿಯಂತ್ರಿಸುವ ಮಾರ್ಗವನ್ನೂ ಹಾಕುವುದರಲ್ಲಿ ಅರ್ಥವಿದೆ. ಅದು ಈಗಿನಿಂದಲೇ ಆಗಬೇಕು.

ಸಿದ್ದರಾಮಯ್ಯನವರು ಈಗಾಗಲೇ ಅತಿ ಹೆಚ್ಚುಬಾಗಿ ನಿರಂತರ ಮುಂಗಡಪತ್ರ ಮಂಡಿಸಿದ ಸಾಲಿಗೆ ಸೇರಿದ್ದು, ದೇಶದಲ್ಲೇ ಅತಿ ಹೆಚ್ಚು ಅಂದರೆ ಹದಿನೆಂಟು ಬಾರಿ ಬಜೆಟ್ ಮಂಡಿಸಿದ ಗುಜರಾತಿನ ವಜೂಭಾಯಿ ವಾಲಾ ಅವರ ದಾಖಲೆ ಮುರಿಯಲು ಇನ್ನೆರಡು ಮಂಡನೆ ಆಗಬೇಕಿದೆ. ಇದು ಒತ್ತಟ್ಟಿಗಿರಲಿ. ಇದಲ್ಲ, ಸಾಧನೆ, ಇದರಿಂದ ಅವರು ಸಾಧಿಸಿದ್ದೇನು ಎಂಬುದು. ಹಾಗೆ ನೋಡಿದರೆ ಸಿದ್ದರಾಮಯ್ಯ ತಮ್ಮ ಪ್ರತೀ ಬಜೆಟ್ ಮಂಡನೆಯಿಂದ ಸಾಧಿಸುತ್ತಲೇ ಬಂದಿದ್ದಾರೆ. ಕಳೆದ ಬಾರಿಯ ಲಕ್ಷ್ಮಿ ಯೋಜನೆಗಳ ಸಾಧನೆ ಸಣ್ಣದಲ್ಲ, ಸದ್ಯ ಈ ಯೋಜನೆಗಳ ಪರಿಶೀಲನೆ ಆಗಬೇಲಿದೆ. ಅದರಲ್ಲೇನೂ ಇವು ವಿಫಲವಾಗುವುದಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ಇಷ್ಟೆಲ್ಲ ಯೋಜನೆಗಳ ಜಾರಿಗೆ ಸರ್ಕಾರಕ್ಕೆ ಹೊರೆ ಎಷ್ಟೇ ಹೆಚ್ಚಿದರೂ ಅವರು ಅದನ್ನು ದಡಮುಟ್ಟಿಸುತ್ತಿದ್ದಾರೆ, ಇದಕ್ಕಾಗಿ ಮಾಡಬೇಕಾಗಿ ಬಂದ ಸಾಲದ ಹೊರೆ ಪ್ರತ್ಯೇಕ ವಿಷಯ. ಇಂಥದ್ದೊಂದು ಯೋಜನೆಯ ಯಶಸ್ವಿ ಜಾರಿ ಮುಖ್ಯ, ಅದರ ಲೋಪದೋಷಗಳ ವಿಚಾರ ಬೇರೆ. ಕಳೆದ ಬಾರಿ೩, ೪೬, ೪೦೯ ಕೋಟಿ ರೂಗಳಷ್ಟಿದ್ದ ಬಜೆಟ್ ವೆಚ್ಚ ಈ ಬಾರಿ ಐದು ಲಕ್ಷ ಕೋಟಿ ತಲುಪಿದೆ. ಆದರೆ ಖೋತಾ ಬಜೆಟ್ ಆಗದಂತೆ ನಿಗ್ರಹಿಸುವ ಸವಾಲು ಅವರ ಮುಂದೆ ಇದೆ. ಸಿದ್ದರಾಮಯ್ಯನವರು  ಈಗಾಗಲೇ ಕಂದಾಯ ಮತ್ತಿತರ ಇಲಾಖೆಗಳೊಂದಿಗೆ ಅಗತ್ಯ ಸಭೆ ನಡೆಸಿ ಮುಂಗಡ ಪತ್ರ ಮಂಡನೆಗೆ ಈಗಾಗಲೇ ಸಿದ್ದವಾಗಿ ಕುಳಿತಿದ್ದಾರೆ.ವರ ಬಜೆಟ್ ಗೆ ಸಂಬAಧಿಸಿದAತೆ ಈಗಾಗಲೇ ಹತ್ತು ಹಲವು ನಿರೀಕ್ಷೆಗಳು ಗರಿಗೆದರಿವೆ. ಆದರೆ ಯಾರಿಗೂ ಹೊಸ ಭಾಗ್ಯ ಯೋಜನೆಗಳ ಜಾರಿ ಆಗುವ ನಿರೀಕ್ಷೆ ಇಲ್ಲ, ಈಗಾಗಲೇ ಇರುವ ಯೋಜನೆಗಳೇ ಕುಂಟುತ್ತಿವೆ ಅಥವಾ ಏದುಸಿರು ಬಿಡುತ್ತಿವೆಯಾದ್ದರಿಂದ ಇವೇ ನಡೆದರೆ ಸಾಕು ಎಂಬ ಅರಿವು ಜನಕ್ಕೆ ಇದೆ. ಸಾಲದ್ದಕ್ಕೆ ಇವುಗಳಿಗೆ ತಗುಲಿದ ವೆಚ್ಚ ಮತ್ತು ನಷ್ಟದ ನಿಭಾವಣೆ ಜೊತೆಗೆ ಈ ಯೋಜನೆಗಳಿಂದ ಉಳಿದ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದೆ ಎಂಬ ಆರೋಪ ಕೂಡ ಇದೆ.  ಸದ್ಯದ ಸವಾಲು ಇವನ್ನು ಸಿದ್ದರಾಮಯ್ಯನವರು ಹೇಗೆ ನಿಭಾಯಿಸುತ್ತಾರೆಂದು ನೋಡಬೇಕಿದೆ. ಆದ್ದರಿಂದ ಹೊಸ ಭಾಗ್ಯ ಜನರಿಗೆ ಕೊಡುವ ಸಾಹಸವನ್ನು ಅವರು ಮಾಡಲಾರರು. ಇದು ಅವರ ೧೬ನೆಯ ಬಜೆಟ್ ಮಂಡನೆ ಆಗಲಿದೆ. ಇದುವರೆಗಿನ ಅನುಭವ ಅವರಿಗೆ ಸಮೃದ್ಧವಾಗಿದೆ. ಇದರ ಉಪಯೋಗವನ್ನು ಅವರು ಮಾಡಿಕೊಳ್ಳುತ್ತಾರೆ. ಸರ್ಕಾರದ ಆರ್ಥಿಕ ಸ್ಥಿತಿ ಉತ್ತಮವಾಗಿದೆ, ಆದ್ದರಂದಲೇ ಈ ಬಜೆಟ್ ಗಾತ್ರ ಕಳೆದ ಬಾರಿಯ ಗಾತ್ರಕ್ಕಿಂತ ಶೇ. ೧೦ ದೊಡ್ಡದಾಗಿದೆ. 

ಕಂದಾಯದಿಂದ ಸರ್ಕಾರಕ್ಕೆ ಹೆಚ್ಚಿನ ಒಳಹರಿವು ಬರುತ್ತಿದೆ ಎಂಬುದು ಸರಿ ಆದರೆ ಒಂದೆಡೆ ಸವಲತ್ತು ಅನುಭವಿಸುವ ಜನತೆ ಮತೆರಡುಕಡೆ ಬೆಲೆ ಏರಿಕೆ ಹೊಡೆತ ತಿನ್ನಬೇಕಾಗಿದೆ ಎಂಬುದೂ ಸುಳ್ಳಲ್ಲ. ಹೀಗಾದರೆ ಸವಲತ್ತುಗಳ ನೈಜ ಉದ್ದೇಶ ಈಡೇರುವುದಿಲ್ಲ, ಸದ್ಯ ಸರ್ಕಾರ ೧.೯ ಲಕ್ಷಕೋಟಿ ರೂಗಳ ಆದಾಯ ತೆರಿಗೆ ನಿರೀಕ್ಷೆ ಮಾಡುತ್ತಿದೆ. ಮುಖ್ಯವಾಗಿ ಅಬಕಾರಿ ಮತ್ತು ಇಂಧನಗಳ ಬೆಲೆ ಹೆಚ್ಚಳ ಇದರ ಮೂಲ ಮಾರ್ಗ. ಇಂಧನ ಬೆಲೆ ಹೆಚ್ಚಳ ಕಂದಾಯ ಹೆಚ್ಚಿಸುವ ಜೊತೆಗೆ ಬೆಲೆ ಹೆಚ್ಚಳದ ಬರೆಯನ್ನೂ ಹಾಕುತ್ತದೆ. ಬೆಲೆ ಹೆಚ್ಚಿಸದೇ ಸೌಲಭ್ಯವನ್ನು ಕೊಡಲಾಗದು. ಇವೆರಡರ ನಡುವೆ ಸಮತೋಲ ಸಾಧಿಸುವುದು ಈ ಬಾರಿಯ ಬಜೆಟ್ ಮುಂದಿರುವ ಸವಾಲಾಗಿದೆ. ಈ ಬಾರಿಯ ಬಜೆಟ್ ಗಾತ್ರ ಹೆಚ್ಚಾಗಲು ಜನ ತೆರುತ್ತಿರುವ ತೆರಿಗೆಯ ಜೊತೆಗೆ ಕೇಂದ್ರದ ನೆರವು ಕೂಡ ಪೂರಕವಾಗಿದೆ. ಆದರೆ ಸಂಪೂರ್ಣವಾಗಿ ರಾಜ್ಯದ ಹೊಣೆ ಆಗಿರುವ ಕೆಲವು ಕ್ಷೇತ್ರಗಳ ವೆಚ್ಚ ನಿಭಾವಣೆಗೆ ಸರ್ಕಾರ ಕೈಗೊಳ್ಳುವ ನಿಲುವು ಕೂಡ ಜನರ ಕುತೂಹಲಕ್ಕೆ ಕಾರಣವಾಗಿದೆ. ಏಕೆಂದರೆ ರಾಜ್ಯಾದಾಯದ ಶೇ. ಹತ್ತರಷ್ಟು ಹಣ ಸದಯದ ಉಚಿತ ಯೋಜನೆಗಳಿಗೆ ವ್ಯಯವಾಗುತ್ತಿದೆ. ಜೊತೆಗೆ ಇವುಗಳ ನಿರ್ವಹಣೆ ಇನ್ನೊಂದು ಸವಾಲು. ಉದಾಹರಣೆಗೆ ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿದರೆ ಬಸ್ ಗಳ ನಿರ್ವಹಣೆಗೆ ಬೇರೆ ಕಡೆಯಿಂದ ಹಣ ಹೊಂದಿಸಬೇಕಾಗುತ್ತದೆ, ಇದೇ ರೀತಿ ಉಳಿದ ಯೋಜನೆಗಳು.

No comments:

Post a Comment