ಈ ಸ್ಮೃತಿ ರಚಿಸಿದವರು ಹೆಸರೇ ಹೇಳುವಂತೆ ಪರಾಶರರು. ಪರಾಶರರು ವ್ಯಾಸರ ತಂದೆ, ಈ ಕೃತಿ ರಚನೆಯಾಗಿದ್ದು ಮಹಾಭಾರತ ಕಾಲದಲ್ಲೆಂದಾಯಿತು, ಅಂದರೆ ಮುಂಬರಲಿರುವ ಕಾಲಕ್ಕೆ ಮುಂಚೆಯೇ ಆ ಕಾಲದಲ್ಲಿ ಹೇಗಿರಬೇಕೆಂದು ತಿಳಿಸುವ ನಿಯಮ ತಿಳಿಸುವ ಕೃತಿ ಸಿದ್ಧವಿರುತ್ತಿತ್ತು ಅನ್ನಬಹುದು. ಅಂದರೆ ಕೃತಯುಗಕ್ಕೆ ತಿಳಿಸಲಾದ ಮನುಸ್ಮೃತಿಯನ್ನು ಸತ್ಯಯುಗದಲ್ಲಿ ರಚಿಸಲಾಗಿದೆ ಅನ್ನಬಹುದು, ಈ ಒಂದೊಂದು ಯುಗಗಳೂ ಸಾವಿರಾರು ವರ್ಷಗಳನ್ನು ಹೊಂದಿರುತ್ತವೆ ಅಂದರೆ ಮನುಸ್ಮೃತಿ ರಚನೆಯಾಗಿ ಅದೆಷ್ಟು ಸಾವಿರ ವರ್ಷಗಳಾಗಿವೆ ಊಹಿಸಿ, ಅಂಥ ಕೃತಿಯಲ್ಲಿ ದೋಷಗಳಿವೆ ಎಂದು ಈಗ ಚರ್ಚಿಸುವುದೇ ಮೂರ್ಖತನವಲ್ಲದೇ ಇನ್ನೇನು? ನಮ್ಮ ಕಲಿಯುಗಕ್ಕೆ ಹೇಳಲಾದ ಪರಾಶರ ಸ್ಮೃತಿಯಲ್ಲಿ ೨ ಅಧ್ಯಾಯಗಳಿದ್ದು ಆಚಾರ, ತಪ್ಪು ಮಾಡಿದಾಗ ಅನುಸರಿಸಬೇಕಾದ ಪ್ರಾಯಶ್ಚಿತ್ತ ಮೊದಲಾದ ವಿಚಾರಗಳಿವೆ.
ಪರಾಶರ ಸ್ಮೃತಿ ಯಲ್ಲಿ ಸ್ಮೃತಿಯ ಉದ್ದೇಶ ವರ್ಣಾಶ್ರಮ ಧರ್ಮವನ್ನು ವ್ಯವಸ್ಥಿತಗೊಳಿಸುವುದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆದರೆ ಇದು ಸಮಾಜ ಸರಿಯಾಗಿ ಸಾಗಲು ನಾಲ್ಕು ರೀತಿಯ ಕೆಲಸಗಳು ಅಗತ್ಯವಾಗಿದ್ದು ಅವನ್ನು ನಡೆಸಿಕೊಂಡು ಹೋದರೆ ಮಾತ್ರ ಸಮಾಜ ಆರೋಗ್ಯಕರವಾಗಿರುತ್ತದೆ, ಆದ್ದರಿಂದ ಇವನ್ನು ಮುನ್ನಡೆಸಿಕೊಂಡುಹೋಗಬೇಕೆಂದು ಸ್ಪಷ್ಟಪಡಿಸಲಾಗಿದೆಯಾದರೂ ವರ್ಣ ಹುಟ್ಟಿನಿಂದ ಬರುವುದಲ್ಲ, ಅದೊಂದು ಅರ್ಹತೆ ಅನ್ನಲಾಗಿದೆ. ಹುಟ್ಟಿನಿಂದ ಬ್ರಾಹ್ಮಣನಾಗಿ ಬ್ರಾಹ್ಮಣ ಧರ್ಮವನ್ನು ಅನುಸರಿಸದಿದ್ದರೆ ಆತನನ್ನು ಬ್ರಾಹ್ಮಣ ಅನ್ನಲಾಗದು ಎಂದು ಹೇಳಲಾಗಿದೆ. ಶಿಸ್ತುಬದ್ಧವಾಗಿ ನಿಷ್ಠೆಯಿಂದ ತನ್ನ ಕೆಲಸ ಮಾಡುವ ಶೂದ್ರ ಇಂಥ ಬ್ರಾಹ್ಮಣನಿಗಿಂತ ಶ್ರೇಷ್ಠ ಅನ್ನಲಾಗಿದೆ, ದಾನ ಕೊಡುವಾಗ ಯಾರಿಗೆ ಹೆಚ್ಚು ಅಗತ್ಯವಿದೆಯೋ ಅವರಿಗೆ ದಾನ ಕೊಡುವುದು ಒಳಿತು ಎಂಬ ಕಿವಿ ಮಾತು ಕೂಡ ಬರುತ್ತದೆ. ದಾನವನ್ನು ಬ್ರಾಹ್ಮಣರಿಗೇ ಕೊಡಬೇಕು ಎಂದಿಲ್ಲ, ಬ್ರಾಹ್ಮಣನಾದರೂ ಆ ಧರ್ಮವನ್ನು ಅಂದರೆ ಬ್ರಾಹ್ಮಣರಿಗೆ ವಿಧಿಸಲಾದ ವಿಧಿ ನಿಷೇಧಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವವರು ಮಾತ್ರ ದಾನ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಸ್ಮೃತಿಯಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಆಪತ್ಕಾಲದಲ್ಲಿ ತಮಗೆ ವಿಧಿಸಲಾದ ಧರ್ಮ ಕರ್ಮದ ವ್ಯತ್ಯಯದಲ್ಲಿ ವಿನಾಯ್ತಿ ಕೊಡಲಾಗಿದೆ. ಯಾವುದೇ ಆಪತ್ತಿನ ಕಾಲದಲ್ಲಿ ಜೀವ ರಕ್ಷಣೆ ಮೊದಲು ಅನಂತರ ಧರ್ಮ ಎಂದು ಇದು ಹೇಳುತ್ತದೆ. ಧರ್ಮಕ್ಕಾಗಿ ಜೀವಕೊಡು ಎಂದು ಹೇಳುವುದಿಲ್ಲ, ಜೀವನ್ ಭದ್ರಾಣಿ ಪಶ್ಯತಿ ಎಂಬುದಕ್ಕೆ ಇದು ಸಮರ್ಥನೆ ಕೊಡುತ್ತದೆ. ರೋಗಿಗಳು, ಮಕ್ಕಳು ಮತ್ತು ಮಹಿಳೆಗೆ ಅನೇಕ ವಿನಾಯ್ತಿಗಳನ್ನು ಇದು ಕೊಡುತ್ತದೆ. ಇನ್ನೊಂದು ಮುಖ್ಯ ಸಂಗತಿ ಎಂದರೆ ಇದು ಆಹಾರದಲ್ಲಿ ಭೇದ ಮಾಡದೇ ಆಹಾರವನ್ನು ಹಾಳು ಮಾಡಬಾರದೆಂದು ಹೇಳುತ್ತದೆ. ಅಜ್ಞಾನದಿಂದ ಮನುಷ್ಯರು ಮಾಡುವ ಯಾವುದೇ ಬಗೆಯ ತಪ್ಪುಗಳಿಗೆ ಸರಳ ಪರಿಹಾರವನ್ನು ಪ್ರಾಯಶ್ಚಿತ್ತ ರೂಪಗಳಲ್ಲಿ ಹೇಳಲಾಗಿದ್ದು ಬಹುತೇಕ ಇಂಥ ಸಂಗತಿಗಳು ದುಬಾರಿಯಲ್ಲದ ವಿಧಾನಗಳನ್ನು ಸ್ವತಃ ಮಾಡಿಕೊಳ್ಳಬಹುದಾದ ರೀತಿಯಲ್ಲಿವೆ. ಅಲ್ಲದೇ ಆರೋಗ್ಯದ ದೃಷ್ಟಿಯಿಂದ ಪರಿಹಾರ ಹೇಳಲಾಗಿದೆ ಎಂಬುದು ಸೂಕ್ಷ್ಮವಾಗಿ ಗಮನಿಸಿದಾಗ ಅರಿವಾಗುತ್ತದೆ.ಹೀಗೆ ಸಮಕಾಲೀನ ಯೋಚನೆಗಳಿಗೆ ಸಮೀಪ ಅನಿಸುವ ವಿಚಾರಗಳು ಇದರಲ್ಲಿ ಸಾಕಷ್ಟಿವೆ. ಯಾವುದೇ ಜೀವಿಯನ್ನಾಗಲಿ ವೃಥಾ ಹಿಂಸಿಸಬಾರದು, ಪೀಡಿಸಬಾರದೆಂಬ ಸಮಕಾಲೀನ ಮಾನವೀಯ ಮೌಲ್ಯವನ್ನು ತಿಳಿಸುತಯೀ ಯುಗದ ಮನುಷ್ಯರ ಬಗ್ಗೆ ಕೆಲವು ಮಾತುಗಳನ್ನು ಸ್ಪಷ್ಟಮಾಡಲಾಗಿದೆ. ಇವುಗಳಲ್ಲಿ ಒಂದು ಮಾತು ಹೀಗಿದೆ- ಕಲಿಯುಗದ ಮನುಷ್ಯರು ಉಳಿದ ಯುಗಕ್ಕಿಂತ ಅಲ್ಪಾಯುಷಿಗಳು.ಶಾರೀರಿಕವಾಗಿ, ಮಾನಸಿಕವಾಗಿ ದುರ್ಬಲರು, ಕೃತಯುಗದಲ್ಲಿ ಮಾನವನ ಆಯಸ್ಸು ೪೦೦ ವರ್ಷವಾದರೆ ಕಲಿಯುಗದಲ್ಲಿ ಇದು ೧೦೦ ವರ್ಷ ಅನ್ನಲಾಗಿದೆ, ಇದು ನಿಜ. ನಮ್ಮಲ್ಲಿ ಯಾರಾದರೂ ನೂರು ವರ್ಷ ಪೂರೈಸಿದ್ದರೆ ಅದು ಸಂಭ್ರಮದ ಸಂಗತಿ.ಕಯುಗದಲ್ಲಿ ಪ್ರಾಣ ಅನ್ನಗತ. ಅಂದರೆ ಆಹಾರ ಬದ್ಧ ಅನ್ನಲಾಗಿದೆ. ಬ್ರಾಹ್ಮಣರು ಉದರ ನಿರ್ವಹಣೆಗೆ ಕೃಷಿ ಮಾಡಬಹುದೆಂದೂ ಹಸುಗಳನ್ನು ಸಾಕಬಹುದೆಂದು ಹೇಳುತ್ತದೆ. ಉಳಿದ ಬಹುತೇಕ ಸ್ಮೃತಿಗಳಂತೆ ಬ್ರಾಹ್ಮಣರಿಗೆ ಕೃಷಿ ನಿಷೇಧ ಎಂದು ಹೇಳುವುದಿಲ್ಲ.ಬಹುಶಃ ಈ ಮಾತನ್ನು ಅನುಸರಿಸಿಯೇ ಹವ್ಯಕ, ಸಂಕೇತಿ ಹೊಯ್ಸಳ ಕರ್ನಾಟಕ ಮೊದಲಾದ ಬ್ರಾಹ್ಮಣ ಪಂಗಡಗಳು ಇಂದಿಗೂ ಕೃಷಿ ಹಾಗೂ ಪಶುಸಾಕಣೆ ಮಾಡುತ್ತಿವೆ. ಇಂಥ ಹಲವು ಆದರ್ಶದ ದಾರಿಗಳು ಇದರಲ್ಲಿವೆ. ಈ ಕೃತಿಯಲ್ಲಿನ ಇನ್ನೊಂದು ಮುಖ್ಯ ಸಂಗತಿ ಎಂದರೆ ಪ್ರಾಯಶ್ಚಿತ್ತ ಪ್ರಕರಣ. ಮುಖ್ಯವಾಗಿ ಯಾವುದೇ ಸಂದರ್ಭದಲ್ಲಿ ಸ್ತ್ರೀಯನ್ನು ದೋಷಿಸಬಾರದೆಂದು ಈ ಸ್ಮೃತಿ ತಿಳಿಸುತ್ತದೆ. ವ್ಯಕ್ತಿ ತನಗೆ ಯಾವ ರೀತಿಯ ಜೀವನ ಸರಿಹೊಂದುತ್ತದೋ ಅದನ್ನು ಆಯ್ಕೆ ಮಾಡಿಕೊಳ್ಳಬಹುದೆಂದು ಹೇಳುವ ಇದು ಒಮ್ಮೆ ಅಂಥ ಆಯ್ಕೆ ಆದಮೇಲೆ ಆಯಾ ಕ್ರಮಕ್ಕೆ ನಿಷ್ಠವಾಗಿರಬೇಕೆಂಬ ಮಾತನ್ನೂ ಹೇಳುತ್ತದೆ.ಅಂದರೆ ವ್ಯಕ್ತಿಗೆ ಸ್ವಾತಂತ್ರ್ಯದ ಜೊತೆಗೆ ಜವಾಬ್ದಾರಿಯನ್ನೂ ವಿಧಿಸುತ್ತದೆ. ಜೊತೆಗೆ ರಾಜನಾದವನು ಜನರು ಸೋಮಾರಿಗಳಾಗುವ ದಾರಿಯನ್ನು ತೋರಿಸಬಾರದೆಂದು ಹೇಳುತ್ತದೆ. ವ್ಯಕ್ತಿಯ ವರ್ತನೆಗೆ ಹೆಚ್ಚು ಒತ್ತು ಕೊಡುವ ಇದು ಎಲ್ಲ ಸಂದರ್ಭಗಳಲ್ಲೂ ವ್ಯಕ್ತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತದೆ. ಇಂಥ ಹತ್ತಾರು ವಿಶಿಷ್ಟವೆನಿಸುವ ಮಾತು ಮತ್ತು ನಿರ್ದೇಶನಗಳಿರುವ ಈ ಸ್ಮೃತಿಯನ್ನು ಗಂಭೀರವಾಗಿ ಚರ್ಚಿಸುವ ಅಗತ್ಯ ಈ ಕಾಲದಲ್ಲಿ ಹೆಚ್ಚಾಗಿದೆ.
ಕೃತಿ ವಿವರ:
ಪರಾಶರ ಸ್ಮೃತಿ, ಚಕ್ರಕೋಡಿ ಈಶ್ವರ ಶಾಸ್ತ್ರಿ (ಸಂ)
ಸಮಾಜ ಪುಸ್ತಕಾಲಯ, ಧಾರವಾಡ, ೨೦೨೧, ಬೆಲೆ-೧೨೦ ರೂ.

No comments:
Post a Comment