ಇದೇಗ ಕರ್ನಾಟಕದಲ್ಲಿ ಈ ಬಾರಿಯ ಪಿಯುಸಿ ಫಲಿತಾಂಶ ಬಂದಿದ್ದು ಮರುದಿನದ ವೇಳೆಗೆ ರಾಜ್ಯಾದ್ಯಂತ ಆರು ಮಕ್ಕಳು ಆತ್ಮ ಹತ್ಯೆ ಮಾಡಿಕೊಂಡು ಸತ್ತಿವೆ. ಈಗ ಅವರು ಏನು ಸಾಧಿಸಿದಂತಾಯ್ತು? ಗೊತ್ತಿಲ್ಲ, ಇದ್ದುಸಾಧಿಸಬೇಕು ಅಂತಾರೆ. ಆದರೆ ಸಾಧಿಸುವುದು ಅಂದರೆ ಮತ್ತೆ ಪರೀಕ್ಷೆ ಬರೆದು ಉತ್ತಮ ಫಲಿತಾಂಶ ಪಡೆಯುವುದು ಎಂದಲ್ಲ, ಸಾಯದೇ ಬದುಕಿ ಚೆನ್ನಾಗಿಬದುಕಿ ತೋರಿಸುವುದು, ಸಾವು ತಾನಾಗಿ ಬರುವವರೆಗೆ ಎಂದರ್ಥ. ನಮ್ಮ ಶಿಕ್ಷಣ ವ್ಯವಸ್ಥೆ ನಿಜಕ್ಕೂ ಗಬ್ಬೆದ್ದುಹೋಗಿದೆ. ಪ್ರತಿ ವರ್ಷ ಶಾಲಾ ಕಾಲೇಜು ಅಧ್ಯಯನಕ್ಕೆ ನಿಗದಿಪಡಿಸಿದ ಪಠ್ಯಗಳು ವಿವಾದಕ್ಕೆ ದೊಡ್ಡ ವಿವಾದಕ್ಕೆ ಕಾರಣವಾಗುತ್ತದೆ. ಇಲ್ಲಿ ವಿವಾದ ಆಗುವುದು ಕೂಡ ರಾಜಕೀಯ ನಿಲುವುಗಳ ವಿಷಯ. ಆದರೆ ಶಾಲಾ ಕಾಲೇಜು ಮಕ್ಕಳಿಗೆ ಈ ಕಲಿಕೆ ನಿಜವಾಗಿ ಜೀವನವಲ್ಲ, ಇದರಲ್ಲಿ ಪಾಸಾಗಲೀ ಫೇಲಾಗಲಿ, ವ್ಯತ್ಯಾಸವಾಗುವುದಿಲ್ಲ, ನಿಜವಾದ ಪರೀಕ್ಷೆ ಜೀವನ, ಅದು ಇನ್ನೂ ನಿಮ್ಮ ಮುಂದಿದೆ ಎಂದು ಕಲಿಸುವ ಪಾಠಗಳಿಲ್ಲ, ಈ ದೃಷ್ಟಿಯಿಂದ ಶಾಲಾ ಕಾಲೇಜು ಪಠ್ಯಗಳಲ್ಲಿ ಇಂಥ ಪರೀಕ್ಷೆಗಳಲ್ಲಿ ಫೇಲಾದ ಅಥವಾ ಶಾಲಾ ಕಾಲೇಜು ಮೆಟ್ಟಿಲು ಹತ್ತದೇ ಸಮಾಜದಲ್ಲಿ ಅಸಾಧಾರಣ ಸಾಧನೆ ಮಾಡಿದ ಜನರ ಜೀವನಕತೆಗಳನ್ನು ಪಾಠವಾಗಿ ಇಡಬೇಕು. ಬದಲಾಗಿ ನಾವು ಇಂಥ ಪರೀಕ್ಷೆಗಳೇ ಸರ್ವಸ್ವ ಅನ್ನುವಂಥ ಪಾಠವನ್ನು ಸಾಮಾಜಿಕ ಕೌಟುಂಬಿಕ ದೃಷ್ಟಿಕೋನವನ್ನು ಹುಟ್ಟಿಸುತ್ತಿದ್ದೇವೆ. ನಮ್ಮ ಶಿವರಾಮ ಕಾರಂತರು ಕಾಲೇಜು ಮೆಟ್ಟಿಲೇ ಹತ್ತಿಲ್ಲ, ಆದರೆ ಅವರ ಸಾಧಶನೆ ಅಸಾಧಾರಣ. ಇಂಥ ವ್ಯಕ್ತಿತ್ವಗಳನ್ನು ಮಕ್ಕಳಿಗೆ ಮತ್ತೆ ಮತ್ತೆ ಕೊಡಬೇಕು, ಅಯ್ಯೋ ನಾನು ಇಲ್ಲಿ ಪಾಸಾದರೆಷ್ಟು ಬಿಟ್ಟರೆಷ್ಟು ಎಂಬ ಧೋರಣೆ ಬೆಳೆಯುವಂತೆ ಮಾಡಬೇಕು. ದುರಂತವೆಂದರೆ ನಮ್ಮ ಸಾಮಾಜಿಕ ವಲಯ ಮಕ್ಕಳ ಸಹಪಾಠಿಗಳಲ್ಲಿ ಯಾರಾದರು ತಮ್ಮ ಮಕ್ಕಳಿಗಿಂತ ಒಂದು ಅಂಕ ಜಾಸ್ತಿ ಪಡೆದರೆ ಅದನ್ನು ಮತ್ತೆ ಮತ್ತೆ ಹೇಳಿ ತಮ್ಮ ಮಕ್ಕಳನ್ನು ಚುಚ್ಚಿ ಮಾತಾಡಿ ಹಿಂಸೆ ಕೊಡುತ್ತಾರೆ, ಮಕ್ಕಳ ಮನಸ್ಸು ಇದನ್ನು ಹೇಗೆ ತೆಗೆದುಕೊಳ್ಳುತ್ತದೆ ತಿಳಿಯುವುದಿಲ್ಲ, ಬದಲಾಗಿ ನೋಡಿ ಮಕ್ಕಳೇ ಈ ಶಲೆ, ಕಾಲೇಜು ಇವೆಲ್ಲ ನಿಮ್ಮ ವಯಸ್ಸಿನ ಮಕ್ಕಳನ್ನು ಒಂದೆಡೆ ಕೂಡಿ ಹಾಕಿಡುವ ತಾತ್ಕಾಲಿಕ ವ್ಯವಸ್ಥೆಗಳು ಯಾಕೆಂದರೆ ಸದಾಕಾಲ ನೀವು ಮನೆಯಲ್ಲೇ ಇರಲಾಗುವುದಿಲ್ಲ, ನಿಮ್ಮ ಹೆತ್ತವರಿಗೂ ನಿಮ್ಮನ್ನು ನೋಡುತ್ತಲೇ ಇರಲಾಗುವುದಿಲ್ಲ, ಅದಕ್ಕಾಗಿ ಇರುವ ವ್ಯವಸ್ಥೆ, ಆದರೆ ಅಲ್ಲಿಯೂ ಒಂದು ಕ್ರಮವಿರುತ್ತದೆ ಅದನ್ನು ಅನುಸರಿಸಿ, ಅದಕ್ಕಿಂತ ಹೆಚ್ಚು ಏನೂ ಇಲ್ಲ ಎಂಬ ನೈಜ ಭಾವನೆ ಮೂಡಿಸುವ ಕೆಲಸ ಆಗಬೇಕು ಬದಲಾಗಿ ನಾವು ಈ ಶಾಲಾ ಕಾಲೇಜುಗಳೇ ಸರ್ವ ಶ್ರೇಷ್ಠ, ಅಲ್ಲಿ ರ‍್ಯಾಂಕ್ ಬಂದರೆ ಜೀವನ ಸಾರ್ಥಕ ಎಂಬ ಭ್ರಮೆ ಬರಿಸುತ್ತೇವೆ, ಚೆನ್ನಾಗಿ ಮಾರ್ಕ್ಸ್ ಪಡೆಯದಿದ್ದರೆ ಅಷ್ಠೇ, ಮನೆಯಿಂದ ಹೊರಗೆ ಹಾಕ್ತೇವೆ ಎಂದು ಬೆದರಿಸಿ ಮಕ್ಕಳ ಮನಸ್ಸನ್ನು ಮೊದಲೇ ಕದಕುವ ಪಾಲಕರೂ ಬೇಕಾದಷ್ಟಿದ್ದಾರೆ, ಇವರೆಲ್ಲ ಬುದ್ಧಿ ಹೀನ ಅವಿವೇಕಿಗಳು. ಆಯ್ತಪ್ಪಾ ಒಳ್ಳೆಯ ಅಂಕ ಪಡೆದರೆ ಏನಾಗುತ್ತದೆ ಎಂದು ಪ್ರಶ್ನಿಸುವ ಮಕ್ಕಳು ನಮಗೆ ಬೇಕಿದೆ, ಈ ದರಿದ್ರ ವ್ಯವಸ್ಥೆಯಲ್ಲಿ ಕೆಲಸಕ್ಕೆ ಬರುವುದು ಅಂಕಪಟ್ಟಿ ಅಲ್ಲ, ನಿಮ್ಮ ಪ್ರತಿಭೆ ಮತ್ತು ಗಳಿಸುವ ಕೌಶಲ್ಯ. ಅದಕ್ಕೆ ಶಾಲಾ ಕಾಲೇಜು ಅನಿವಾರ್ಯ ಅಲ್ಲ, ಅವು ಕೇವಲ ಮಾರ್ಗದರ್ಶಿ ಕೇಂದರಗಳು ಎಂಬುದನ್ನು ಮಕ್ಕಳಿಗೆ ತಿಳಿಸಬೇಕಲ್ಲ, ಹೇಗೆ ಎಲ್ಲಿಂದ? ನನ್ನದೇ ಉದಾಹರಣೆ ಕೊಡುತ್ತೇನೆ, ಹೆಚ್ಚುಗಾರಿಕೆಗೆ ಅಲ್ಲ, ವಾಸ್ತವ ಕಾಣಿಸಲು. ಎಲ್ಲ ಮಕ್ಕಳಂತೆ ನಾನು ಕೂಡ ಪ್ರೌಢಶಾಲಾ ಶಿಕ್ಷಣದವರೆಗೆ ಹೆಚ್ಚು ಅಂಕ ತರಬೇಕು ಎಂಬ ಮೌಢ್ಯದಲ್ಲೇ ಬೆಳೆದೆ, ಸಾಧಾರಣ ಅಂಕ ಪಡೆದು ಬಂದೆ. ಪುಣ್ಯ ಸಾಯಲಿಲ್ಲ, ಅಂಥ ಮನಸ್ಸು ಬರಲೂ ಇಲ್ಲ, ಏನೇ ಆಗಲಿ ದೇವರಿದ್ದಾನೆಂಬ ಪಾಠ ಅಪ್ಪನಿಂದ ಬಂದಿತ್ತು, ಆಯಿತು ಅನಂತರ ಎಲ್ಲರಂತೆ ಕಾಲೇಜಿಗೆ ಹೋದೆ, ಅಲ್ಲಿಯೂ ಅಂಕ ಅಷ್ಟಕ್ಕಷ್ಟೇ, ಆಗಲೂ ಆರಾಮವಾಗಿದ್ದೆ, ಮುಂದೆ ಉನ್ನತ ವ್ಯಾಸಂಗಕ್ಕೆ ಸೇರಿದೆ, ಆಟವಾಡಿಕೊಂಡು, ಪರೀಕ್ಷೆ ಮಧ್ಯಾಹ್ನ ಅನ್ನುವಾಗ ಮಾರ್ನಿಂಗ್ ಶೋ ಸಿನಿಮಾ ನೋಡಿಕೊಂಡು ಒತ್ತಡ ಇಲ್ಲದೇ ಪರೀಕ್ಷೆ ಬರೆದು ರ‍್ಯಾಂಕ್ ಬಂದು ಎರಡು ಚಿನ್ನದ ಪದಕ ಪಡೆದೆ, ಮೂರ್ನಾಲ್ಕು ವರ್ಷ ಎಲ್ಲಿಊ ಕೆಲಸ ಸಿಗಲಿಲ್ಲ, ಸಾಯಲಿಲ್ಲ, ಅದೂ ಇದೂ ಓದುತ್ತ ಕಂಪ್ಯೂಟರ್ ಕಲಿಯುತ್ತ, ಅನುವಾದ ಮಾಡುತ್ತ ಬರೆಯುತ್ತ ಕಾಲಯಾಪನೆ ಮಾಡಿಕೊಂಡು ಸುಖವಾಗಿದ್ದೆ ಅನೇಕ ವರ್ಷ ಹೀಗೆ ಕಳೆಯಿತು. ಮೈಸೂರಲ್ಲಿ ಅರೆಕಾಲಿಕ ಕೆಲಸ ಮಾಡಿದೆ, ಅನುವಾದದಲ್ಲಿ ಕೈ ಪಳಗಿಸಿಕೊಂಡೆ, ಅಷ್ಟಿಷ್ಟು ಹಣವೂ ಆಗಾಗ ನ್ಯಾಯವಾಗಿ ಬಂತು ಕೆಲವು ಇನ್ನೂ ಬರಲಿಲ್ಲ, ಆಸೆಯನ್ನೂ ಇಟ್ಟುಕೊಂಡಿಲ್ಲ, ಆಮೇಲೆ ಉತ್ತಮ ಕೆಲಸ ಸಿಕ್ಕಿತು. ನಾನೊಬ್ಬ ಸಾಧಾರಣ ವಿದ್ಯಾರ್ಥಿ. ನನ್ನ ಶಾಲಾ ಕಾಲೇಜಿನ ಅಂಕಪಟ್ಟಿಗಳನ್ನು ನೋಡಿದರೆ ಯಾರದರೂ ನಗ್ತಾರೆ, ಪರವಾಗಿಲ್ಲ, ನಾನು ಇಂದಿಗೂ ಚೆನ್ನಾಗಿದ್ದೇನೆ, ಆರಾಮವಾಗಿದ್ದೇನೆ, ಕಡಿಮೆ ಅಂಕ ಬಂತೆಂದು ಯಾರೂ ಸಾಯಬೇಕಿಲ್ಲ, ಯಾಕೆಂದರೆ ಅದಷ್ಟೇ ಜೀವನವಲ್ಲ, ನಮ್ಮ ಮುಂದಿನ ಜೀವನಹೇಗಿರುತ್ತದೆ ಎಂಬ ಕುತೂಹಲದಲ್ಲಿ ನ್ಯಾಯವಾಗಿ ಸತ್ಯವಾಗಿ ನಿತ್ಯ ಬದುಕು ಸಾಗಿಸುವ ಕ್ರಮ ರೂಢಿಸಿಕೊಂಡರೆ ಅಷ್ಟು ಸಾಕು. ಮಿಕ್ಕಿದ್ದನ್ನು ಜೀವನ ನೋಡಿಕೊಳ್ಳುತ್ತದೆ, ಒಳ್ಳೆಯದಾಗುತ್ತದೆ.

No comments:
Post a Comment