Saturday, 12 April 2025

ಅಗಲಿದ ಕಮಲಕ್ಕ


ಹೌದು. ನಮ್ಮೆಲ್ಲರ ಪ್ರೀತಿಯ ಹಿರಿಯ ಜೀವ ಕಮಲಕ್ಕ ನಿನ್ನೆ ನಮ್ಮೆಲ್ಲರನ್ನು ಅಗಲಿದರೆಂದು ತಿಳಿದು ಸಂಕಟವೂ ಸ್ವಲ್ಪಸಮಾಧಾನವೂ ಆಯಿತು. ಇದೇನು? ಯಾರದಾದರೂ ಸಾವಿಗೆ ಸಮಾಧಾನವೇ? ಅನ್ನಬೇಡಿ. ಸಮಾಧಾನ ಏಕೆಂದರೆ ಸುಖವಾಗಿರಬೇಕಿದ್ದ ಕೊನೆಯ ದಿನಗಳಲ್ಲಿ ಕೆಲವು ತಿಂಗಳು ಮೈ ಮುಟ್ಟಿದರೆ ಚರ್ಮ ಕಿತ್ತುಬರುವಂತೆ ಸೊರಗಿದ್ದರು, ಬಹು ಅಂಗಾಂಗ ವೈಫಲ್ಯವಾಗಿತ್ತು, ಒಬ್ಬರ ನೆರವಿಲ್ಲದೇ ಸ್ವಂತ ಕೆಲಸ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ, ಕಷ್ಟ ತಿಂದ ಜೀವ ಸಹಜ ಸಾವನ್ನು ಕಂಡು ನರಳಾಟದಿಂದ ಮುಕ್ತಿ ಪಡೆಯಿತು ಎಂಬ ಸಮಾಧಾನವಷ್ಟೇ.
ನಿಜ. ಮನುಷ್ಯ ಎಷ್ಟೇ ಕಷ್ಟಪಡಲಿ ಅವನಿಗೆ ಎಷ್ಟು ದಕ್ಕಲಿದೆಯೋ ಅಷ್ಟೇ ಸಿಗುವುದು ಎಂಬ ನಮ್ಮ ಸಂಪ್ರದಾಯದ ಕರ್ಮ ಸಿದ್ಧಾಂತ ನಿಜ ಅನಿಸುವ ಸಾಕಷ್ಟು ನಿದರ್ಶನಗಳನ್ನು ಕಂಡಿದ್ದೇನೆ. ಅದಕ್ಕೆ ಉತ್ತಮ ನಿದರ್ಶನ ನಮ್ಮ ಕಮಲಕ್ಕ. ನೀವು ಏನೇ ಅನ್ನಿ. ಕಷ್ಟಪಡುವವರಿಗೆಲ್ಲ ಸುಖ ಕಟ್ಟಿಟ್ಟ ಬುತ್ತಿ ಅನ್ನಲಾಗದು. ಕಷ್ಟಪಟ್ಟರೆ ಸುಖ ಸಿಗುವ ಛಾನ್ಸ ಜಾಸ್ತಿ ಎಂದಷ್ಟೇ ಇದರ ಅರ್ಥ. ನ್ಯಾಯದ ಹಾದಿಯಲ್ಲಿ ಬರೀ ಸುಖಕ್ಕಾಗಿ ಕಳ್ಳಹಾದಿ ಹಿಡಿಯುವವರ ಬಗ್ಗೆ ನನಗೆ ತಿಳಿದಿಲ್ಲ, ನಾನೂ ನೋಡಿದ್ದೇನೆ, ನಾನು ಸಣ್ಣವನಾಗಿದ್ದಾಗಿನಿಂದ. ಅಂದು ಜೀವ ಬಗ್ಗಿಸಿ ಎಷ್ಟು ಕಷ್ಟ ಪಡುತ್ತಿದ್ದರೋ ಅವರೆಲ್ಲ ಇನ್ನೂ ಹಾಗೆಯೇ ಇದ್ದಾರೆ, ಆದರೆ ಕೆಲವರಿಗೆ ಜೀವನ ಬದಲಾಗಿ ಸ್ವಲ್ಪ ಸುಖದ ಹಾದಿ ಕಾಣಿಸಿದೆ. ಈ ಕಮಲಕ್ಕ ಅಂಥವರಾಗಿದ್ದರು. ವಾವೆಯಲ್ಲಿ ಅವರು ನನ್ನ ಸಹೋದರಿಯ ಖಾಸಾ ಅತ್ತೆ ಅಂದ್ರೆ ನನಗೂ ಬಾವನ ಅಮ್ಮ. ಆದರೆ ನಾವೆಲ್ಲ ಅವರ ಕಾಲೆಳೆಯಲು ಕಮಲಕ್ಕ ಎಂದೇ ಪ್ರೀತಿಯಿಂದ ಕರೆಯುತ್ತಿದ್ದುದು. ಅಕ್ಕಪಕ್ಕದ ಮನೆಯವರು ಕರೆಯುತ್ತಿದ್ದಂತೆ, ಆದರೆ ಬಗೆಬಗೆಯ ೮೫ ವಸಂತಗಳನ್ನು  ಕಂಡಿದ್ದ ಅವರು ನಮ್ಮಂಥ ಎಳೆಯರು ಮಾಡುತ್ತಿದ್ದ ಕುಚೇಷ್ಟೆಗಳನ್ನು ಣ್ಣಗೆ ಹೊಟ್ಟೆಗೆ ಹಾಕಿಕೊಂಡು ನಗುಮುಖದಿಂದ ಇರುತ್ತಿದ್ದರು. ಅವರ ಬಾಲ್ಯದಿಂದಲೇ ಕಷ್ಟಗಳು ಇವರ ಹುಟ್ಟಿಗಾಗಿ ಕಾಯುತ್ತಿದ್ದವೇನೋ ಎಂಬಂತೆ ಒಂದರ ಹಿಂದೆ ಒಂದರಂತೆ ಅಮರಿಕೊಂಡವು. ಹುಟ್ಟಿದ ಕೆಲ ತಿಂಗಳಲ್ಲಿ ಅವರ ಪೋಷಕರು ಕಣ್ಣುಮುಚ್ಚಿದರು. ವಿದ್ಯೆ ಕಲಿಯಲಾಗಲಿಲ್ಲ, ಸಹೋದರರು ಜೊತೆಯಾಗಿದ್ದು ಮದುವೆ ಮಾಡಿಸಿದರು, ಗಂಡ ಸಜ್ಜನ, ಶ್ರೀಮಂತರಾಗಿರಲಿಲ್ಲ, ಹೊಟ್ಟೆಬಟ್ಟೆಗೆಕೊರತೆ ಇರದಂತೆ ಮರ್ಯಾದೆಯಿಂದ ಜೀವನ ನಡೆಸಿತ್ತಿದ್ದವರು. ಒಂದಿಷ್ಟು ಪಾಕವಿದ್ಯೆ ಕೈಗೆ ಹತ್ತಿತ್ತು. ಅದನ್ನೇ ನಂಬಿ ಹೊಸ ಜೀವನ ಕಟ್ಟಿಕೊಳ್ಳಲು ಕುಮಟಾದ ಹೆಗಡೆ ಎಂಬಲ್ಲಿಗೆ ಯಾರೋ ಹಿತೈಷಿಗಳೋ ಹಿತಶತ್ರುಗಳೋ ಹೇಳಿದ ಮಾತು ನಂಬಿ ಪಾಪದ ಗಂಡನೊಂದಿಗೆ ಹೆಜ್ಜೆ ಹಾಕಿದರು. ಅಲ್ಲಿ ಕೆಲಕಾಲ ಜೀವನ ಕಟ್ಟಿಕೊಳ್ಳುವ ವ್ಯರ್ಥ ಸಾಹಸ ಮಾಡಿ ಕೈಸುಟ್ಟುಕೊಂಡು ವಾಪಸು ಮೂಲ ನೆಲೆಗೆ ಬಂದರೆ ಇಲ್ಲಿ ಇದ್ದ ಬಿದ್ದ ಆಸ್ತಿ ದಾಯಾದಿಗಳ ಪಾಲಾಗಿತ್ತು, ಎಲ್ಲ ಕಡೆಯೂ ನಾಸ್ತಿ ನಾಸ್ತಿ. ಒಬ್ಬ ಮಗ ಜನಿಸಿದ್ದ. ಅವನನ್ನೂ ಕಟ್ಟಿಕೊಂಡು ಮತ್ತೆ ಅಲ್ಲಿ ಇಲ್ಲಿ ಜೀವ ಸವೆಸಿದರು, ಇಲ್ಲ, ಅನಂತರ ಕೆಲವು ಬಂಧುಗಳ ನೆರವಿನಿಂದ ತಾವಿರುವ ಜಾಗದಲ್ಲೇ ನಾಲ್ಕಾರು ದಶಕಗಳ ಹಿಂದೆ ಮನೆಯೂಟ ಹಾಕುವ ಕಾಯಕ ಶುರು ಮಾಡಿದರು, ಲಾಭದ ಆಸೆಗೆ ಅಲ್ಲ, ಏನಾದರೂ ಕೆಲಸ ಮಾಡಬೇಕು ಸುಮ್ಮನಿರಬಾರದೆಂಬ ಕಾರಣಕ್ಕೆ. ಆಯಿತು. ಅಚ್ಚುಕಟ್ಟಾಗಿ ಸ್ವಂತ ಮನೆಯ ಜನರಿಗೆ ಅಡುಗೆ ಮಾಡುತ್ತಿದ್ದೇನೆಂಬ ಪ್ರೀತಿಯಿಂದ ಪೇಟೆ ಕೆಲಸಕ್ಕೆ ಬಂದು ಇವರ ಮನೆಯ ಕದ ತಟ್ಟಿದವರಿಗೆಲ್ಲ ಅವರ ಕಷ್ಟ ಸುಖ ಕೇಳಿ ಹೊಟ್ಟೆ ತುಂಬ ಬಡಿಸಿ ಕಳಿಸುತ್ತಿದ್ದರು. ಅಷ್ಟರಲ್ಲಿ ನಮಗೆ ಅವರ ನೆಂಟಸ್ತನ ಬೆಳೆದಿತ್ತು. ನಾನು ಒಂದಿಷ್ಟು ಅದೂ ಇದೂ ಓದಿಕೊಂಡಿದ್ದೆ ಶಿವಕೋಟ್ಯಚಾರ್ಯನ ವಡ್ಡಾರಾಧನೆ ತಿಳಿದಿತ್ತು. ಅದರಲ್ಲಿ ಅನೇಕ ಬಾರಿ ಅಡುಗೋಲಜ್ಜಿಯ ಪ್ರಸ್ತಾಪ ಬರುತ್ತದೆ. ಯಾವುದೋ ಊರು, ಪಟ್ಟಣ, ಬಂಧು ಬಳಗವಿಲ್ಲ, ದಾರಿಹೋಕರು ಬಳಲಿ ಬೆಂಡಾಗಿ ಬಂದರೆ ಊಟವಿರಲಿ, ಒಂದು ಗುಟುಕು ನೀರು ಕೊಡುವವರು ಯಾರು? ಅಂಥ ಕೆಲಸ ಮಾಡುತ್ತಿದ್ದವಳು ಅಡುಗೂಲಜ್ಜಿ. ಇದು ಕೋಳು ಇಡುವ ಅಜ್ಜಿ ಕೂಳು ಅಂದ್ರೆ ಊಟ. ಅಡುಗೆ ಮಾಡಿ ಬಡಿಸುವವಳು ಎಂದರ್ಥ. ಸುಮ್ಮನೇ ಹೇಗೋ ಮಾಡಿದ  ಅಡುಗೆಯನ್ನು ಬಂದವರಿಗೆ ಒಟ್ಟುವುದಲ್ಲ, ಬಂದವರು ಗೌರವಾನ್ವಿತ ಅತಿಥಿಗಳು ಅವರೇ ದೇವರು ಎಂಬಂತೆ, ನಮ್ಮ ಸಂಪ್ರದಾಯದ ರೀತಿ ನೀತಿ ತಪ್ಪದಂತೆ ಊಟ ಬಡಿಸುವರು, ಅವರ ಆತಿಥ್ಯ ಕಂಡಾಗಲೆಲ್ಲ ನನಗೆ ವಡ್ಡಾರಾಧನೆಯ ಅಡುಗೂಲಜ್ಜಿಯ ನೆನಪಾಗುತ್ತಿತ್ತು. ಆಗ ಟಿವಿ ವಾಹಿನಿಗಳಿರಲಿಲ್ಲ, ದೂರದರ್ಶನ ವಿತ್ತು, ಒಂದಿಷ್ಟು ರಾಷ್ಟ್ರೀಯ ಅಂತಾರಾಷ್ಟ್ರೀಯ ಸುದ್ದಿಗಳು ಯಾವಾಗಲೋ ಬರುತ್ತಿದ್ದವು, ಆದರೆ ಕಮಲಕ್ಕನಿಗೆ ಅವರು ಇರುವಲ್ಲೇ ತಾಜಾ ತಾಜಾ ಲೋಕಲ್ ನ್ಯೂಸ್ ಬಂದು ಬೀಳುತ್ತಿದ್ದವು. ಆದರೆ ಇವನ್ನು ಅವರು ಎಂದೂ ಬಾಯಿಚಪಲ ಕ್ಕೆ ಬಳಸದೇ ಬಂದವರ ಕಷ್ಟಕ್ಕೆ ಕೊರಗಿ ಒಂದಿಷ್ಟು ಸಮಾಧಾನ ಹೇಳಿ ಯಾರಿಗೆ ಎಷ್ಟು ತಿಳಿಸಬೇಕೋ ಅಗತ್ಯವಿದ್ದರೆ ಅಷ್ಟು ಮಾಡಿ ಮರೆಯುತ್ತಿದ್ದರು, ಬೇಕಿದ್ದರೆ ಅವರು ಯಾರೋ ಏನೋ ಯಾರ ಬಗ್ಗೆಯೋ ಹೇಳಿದ ಮಾತನ್ನು ಹಣದ ಆಸೆಗೆ ಬಳಸಿಕೊಳ್ಳುವ ಇಂದಿನ ಪೀತ ಪತ್ರಿಕೆಗಳು ಮಾಡುವಂತೆ ಬಳಸಿಕೊಂಡಿದ್ದರೆ ಸಾಕಷ್ಟು ಆಸ್ತಿ ಮಾಡಬಹುದಿತ್ತು, ಏಕೆಂದರೆ ಅವರಿಗೆ ಊರಿನ ಸಾಕಷ್ಟು ಶ್ರೀಮಂತ ಕುಳಗಳ ಬಂಡವಾಳದ ಬಗ್ಗೆ ಮಾಹಿತಿ ಸಿಕ್ಕಿರುತ್ತಿತ್ತು. ಇಲ್ಲ, ಅವರೆಂದೂ ಹಾಗೆ ಮಾಡಿಲ್ಲ, ಅಲ್ಲ, ಯೋಚನೆಯನ್ನೂ ಮಾಡಲಿಲ್ಲ, ಏಕೆಂದರೆ ಅವರು ಆಧುನಿಕ ಶಿಕ್ಷಣ ಪಡೆದಿರಲಿಲ್ಲ, ಸತ್ಯಸಂಧರಾಗಿ ತಮ್ಮ ಪಾಲಿಗೆ ಬದುಕು ಎಷ್ಟು ಕೊಟ್ಟಿತೋ ಅಷ್ಟನ್ನೇ ನೆಚ್ಚಿ ಕಾಲ ಕಳೆದರು. ಕೆಲವೊಮ್ಮೆ ಪಾಪ ಇವರ ಬಳಿ ಅಡುಗೆ ಮಾಡಲು ತರಕಾರಿ ಅಕ್ಕಿಯಾದಿ ಮೂಲ ದ್ರವ್ಯಗಳೇ ಇರುತ್ತಿರಲಿಲ್ಲ, ಆದರೂ ತಾವು ತಮ್ಮೆಜಮಾನರು ಕೋಡಿಟ್ಟ ಅಲ್ಪಸ್ವಲ್ಪ ಹಣದಿಂದ ಎಷ್ದಟು ಸಾಧ್ಯವೋ ಅಷ್ಟು ಅನ್ನ, ಸಾರು ಪಲ್ಯವನ್ನಾದರೂ ಮಾಡಿಡುತ್ತಿದ್ದರು. ಯಾರಾದರೂ ತಮ್ಮನ್ನು ನಂಬಿ ಬಂದರೆ ಎಂದು. ಕಷ್ಟ ಎಷ್ಟೇ ಇರಲಿ, ಹಸಿದು ಬಂದವರನ್ನು ಹಾಗೇ ಹಿಂದೆ ಕಳಿಸಿದ ಜೀವ ಅದಾಗಿರಲಿಲ್ಲ, ಕೆಲವೊಮ್ಮೆ ತಮ್ಮ ಊಟವನ್ನೇ ಬಂದವರಿಗೆ ತೃಪ್ತಿಯಿಂದ ಬಡಿಸಿ ಕನ್ನಡದ ಪಂಢರೀಬಾಯಿ ಸಿನಿಮಾ ಪಾತ್ರದಂತೆ ಸಮಾಧಾನ ಪಟ್ಟುಕೊಂಡ ದಿನಗಳಿಗೆ ಲೆಕ್ಕವಿಲ್ಲ, ಅವರ ಬಳಿ ಬರುವ ಆಸಾಮಿಗಳಾದರೂ ಎಂಥವರು? ಇವರಾದರೋ ಊಟಕ್ಕೆ ಇಷ್ಟೆಂದು ಹಣ ನಿಗದಿ ಮಾಡಿರಲಿಲ್ಲ, ಏಕೆಂದರೆ ಅದು ಅವರ ವ್ಯವಹಾರವಾಗಿರಲಿಲ್ಲ, ಅನ್ನವನ್ನು ಮಾರಬಾರದೆಂಬ ಸಂಪ್ರದಾಯದ ಮಾತಲ್ಲಿ ನಂಬಿಕೆ ಇಟ್ಟಿದ್ದರು, ಮತ್ತೆ ಜೀವನ? ದೇವರಿದ್ದಾನೆ ಅನ್ನುತ್ತಿದ್ದರು. ಒಮ್ಮೆ ನಾನೂ ನೋಡುತ್ತಿದ್ದೆ ಮಾಡಿದ್ದ ಅಡುಗೆಯೆಲ್ಲ ಮುಗಿದು ಪಾತ್ರೆ ತಳ ಹಿಡಿದಿತ್ತು. ನಿತ್ಯ ಇದೇ ಕತೆ ಅನ್ನಿ, ಇನ್ನೇನು ತಾವು ಏನಾದರೂ ತಿನ್ನಬೇಕೆಂದು ಅವಲಕ್ಕಿ ಹುಡುಕುತ್ತಿದ್ದರು, ಅಷ್ಟರಲ್ಲಿ ಮಾಗಿಲಲ್ಲಿ ಯಾರೋ ಕಮಲ್ಲಕ್ಕಾ ಊಟ ಇದ್ಯಾ ಅಂದ್ರು, ಇವರು ಅವಲಕ್ಕಿ ಪಾತ್ರೆ ಅಲ್ಲೇಬಿಟ್ಟು ಅಯ್ಯೋ ಅಲ್ಲೇ ಯಾಕೆ ನಿಂತಿದ್ದೀರಾ ಒಳಗೆ ಬನ್ನಿ ಅನ್ನುತ್ತಾ ಬಂದವರಿಗೆ ನೀರು ಮಜ್ಜಿಗೆ ಕೊಟ್ಟು ಎಲೆ ಅಡಕೆ ಬಟ್ಟಲು ನೀಡಿ  ಸ್ವಲ್ಪ ತಾಳಿ ಇನ್ನೇನು ಅಡುಗೆ ಆಗುತ್ತದೆ ಅಂದರು, ಅನಂತರ ಅವರಿಗೆ ಅವಲಕ್ಕಿ ಉಪಾಹಾರ ಬಡಿಸುತ್ತ ಇಂದು ಹೆಚ್ಚು ಏನೂ ಮಾಡಲಿಲ್ಲ, ಕ್ಷಮಿಸಿ ಅನ್ನುವಂತೆ ಕೇಳಿದರು, ಬಂದವರು ಅಷ್ಟರಲ್ಲೇ ತೃಪ್ತಿಯಿಂದ ಉಂಡು ಏನನ್ನೂ ಕೊಡದೇ ಎದ್ದು ಹೋದರು, ನಾನು ಕಮಲಕ್ಕಾ ಅವರು ಏನೂ ಕೊಡಲಿಲ್ಲ ಅಂದೆ, ಹುಚ್ಚ ಹಂಗೆಲ್ಲ ಹೇಳಬಾರದು. ಕೊಡುವವರು ಕೊಡ್ತಾರೆ ಅಂದರು, ಇನ್ನೊಂದು ದಿನ ಹೀಗೆ ಬಂದು ಉಂಡವರು ಸುಮ್ಮನೇ ಒಂದಿಷ್ಟು ಹಣ ತೆಗೆದು ಇವರಿಗೆ ಕೊಟ್ಟು ಹೋದರು ಎಷ್ಟಂದು ಅವರೂ ಕೇಳಲಿಲ್ಲ, ಇವರೂ ಹೇಳಲಿಲ್ಲ, ನಾನು ಎರಡಕ್ಕೂ ಮೂಕ ಸಾಕ್ಷಿ ಆಗಿದ್ದೆ. ನೋಡು ಆದಿನ ಸಿಗದ್ದು ಇಂದು ಬಂತು, ದೇವರು ಹೇಗೋ ಕೊಡ್ತಾನೆಂದು ತತ್ತ್ವ ತಿಳಿಸಿದರು. ತಲೆ ಹಾಕಿದೆ. ಇಷ್ಟರಲ್ಲೇ ಜೀವನ ಸುಖ ಕಂಡ ಅವರ ಮಗ ಅರೆಕಾಲಿಕ ಅಂಚೆ ಸೇವೆಯಲ್ಲಿದ್ದು ಇನ್ನೇನು ಕಾಯಂ ಆಗುತ್ತದೆ ಅನ್ನುವಷ್ಟರಲ್ಲಿ ದಿಢೀರನೆ ಕಣ್ಣು ಮುಚ್ಚಿದ್ದ. ಈ ಸೊಸೆಯ ಜೊತೆಗೆ ಇಬ್ಬರು ಪುಟ್ಟ ಮಕ್ಕಳ ಜವಾಬ್ದಾರಿಯನ್ನೂ ಕೊಟ್ಟು ಹೋಗಿಬಿಟ್ಟ ಎಂದು ಅಲವತ್ತುಕೊಂಡರು. ದುರಂತ ಎಂದರೆ ಅವರ ಜೀವನ ಸಂಗಾತಿ ಮೊದಲೇ ಹೋಗಿದ್ದರು,  ಆದರೆ ಅವರ ಕಷ್ಟಕ್ಕೆ ಸೊಸೆ ನಿಂತಳು. ಅವಳನ್ನು ಸ್ವಂತ ಮಗಳಂತೆ ಕಂಡರು. ಪೇಟೆಗೆ ಬಂದ ಬಡವರ ಪಾಲಿಗೆ ಅನ್ನಪೂರ್ಣೆ ಆಗಿದ್ದ ಕಮಲಕ್ಕೆ ಮಕ್ಕಳಿಗೂ ಸೊಸೆಗೂ ಉತ್ತಮ ಸಂಸ್ಕಾರ ಕೊಟ್ಟರು, ಅವರ ಪುಣ್ಯ ಸ್ವಲ್ಪ ಕೈ ಹಿಡಿಯಿತು, ಮೊಮ್ಮಕ್ಕಳು ಬೆಳೆದು ಸ್ವಂತ ಜೀವನ ನಡೆಸುತ್ತ ಮದುವೆ ಆಗಿ ಮರಿ ಮಕ್ಕಳನ್ನು ಅವರ ಕೈಗೆ  ಕೊಟ್ಟರು. ಆನಂದ ಪಟ್ಟರು, ಬದುಕಿನುದ್ದಕ್ಕೂ ಏಗಿದರು, ಕೊನೆಯಲ್ಲಿ ಒಂದಿಷ್ಟು ನೆಮ್ಮದಿ ಕಂಡರು, ಆಸ್ತಿ ಮಾಡಲಿಲ್ಲ, ಅವರಾಗಲಿ ನಡು ವಯಸ್ಸಿಗೇ ವಿದಾಯ ಹೇಳಿದ ಅವರ ಮಗನಾಗಲಿ ಮಾಡಿದ ಆಸ್ತಿ ಎಂದರೆ ಜನರ ಸಂಪಾದನೆ, ಅವರ ಮಗ ತೀರಿಕೊಂಡಾಗ ಧೋ ಎಂದು ಸುರಿಯುವ ಮಲೆನಾಡಿನ ಬಿರುಮಳೆ. ಮನೆಯ ಮುಂದೆ ಕೋರಲು ಜಾಗವಿಲ್ಲ, ಆದರೆ ಹೀಗಾಯ್ತಂತೆ ಹೋದರಂತೆ ಎಂದು ಮಾತು ಕೇಳಿ ಮಳೆಯನ್ನೂ ಲೆಕ್ಕಿಸದೇ ಬಂದ ಜನರ ನೂಕು ನುಗ್ಗಲು ಕಂಡು ಗಾಬರಿ ಬಿದ್ದಿದ್ದೆ, ಸಾಲದ್ದಕ್ಕೆ ಇವರ ಅಂತಿಮ ಕಾರ್ಯಕ್ಕೆ ತನ್ನ ಕೊಡುಗೆ ಇಷ್ಟು ತನ್ನದು ಇದು ಎಂದು ಇವರ ಮನೆಯೂಟಕ್ಕೆ ದವಸಧಾನ್ಯ ಕೊಡುತ್ತಿದ್ದ ಮಾಲೀಕರು ಜಾತಿ ಮತ ಭೇದವಿಲ್ಲದೇ ಬೇಡವೆಂದರೂ ಚಂದಾ ಕೊಡುತ್ತಿದ್ದರು, ಅನ್ಯಧರ್ಮದ ಒಬ್ಬನಂತೂ ತನ್ನಿಂದ ಆಗುವುದಿಷ್ಟು ಅನ್ನುತ್ತ ನೂರು ತೆಂಗಿನ ಕಾಯಿ ಮೂಟೆ ಇಟ್ಟು ಹೋಗಿಬಿಟ್ಟಿದ್ದ. ಮನುಷ್ಯನಾಗಿ ಹುಟ್ಟಿದ್ದು ಇದೀಗ ಸಾರ್ಥಕ ಅನಿಸಿತ್ತು, ಹಣವಂತರು ಇಂದಿಗೂ ಕೆಲವೆಡೆ ಸತ್ತಾಗ ಅಳಲು ಹಣಕೊಟ್ಟು ಜನರನ್ನು ಕರೆಸುತ್ತಾರೆ, ಆದರೆ ನಿಜಕ್ಕೂ ಸಂಬಂಧವಿಲ್ಲದೆ ಬಿಕ್ಕಳಿಸುವ ಜನರನ್ನು ಅವರು ತೋರಿಸಿದ್ದರು, ಕಮಲಕ್ಕನೂ ಅಷ್ಟೇ. ಇಂಥ ಕಮಲಕ್ಕ ಕೆಲವು ವಿಚಾರಗಳನ್ನು ನಮ್ಮ ಮುಂದೆ ಚಿಂತಿಸಲು ಬಿಟ್ಟುಹೋಗಿದ್ದಾರೆ, ಅವರು ಬಾಲ್ಯದಲ್ಲಿ ಪಾಲಕರನ್ನು ಕಳೆದುಕೊಂಡರು, ಬಾಳುವ ಕಾಲದಲ್ಲಿ ಪತಿಯನ್ನು ಕಳೆದುಕೊಂಡರು, ಎಳೆಯ ಪ್ರಾಯದ ಮಗನನ್ನೂ ಕಳೆದುಕೊಂಡರು, ತಮ್ಮ ಜೊತೆಗೆ ಎಳೆಯ ಸೊಸೆಯ ವೈಧವ್ಯವನ್ನೂ ಹೊಟ್ಟೆಯಲ್ಲಿಟ್ಟುಕೊಂಡರು, ನೋಡಿ ನಮ್ಮ ಸುತ್ತಮುತ್ತಲಿನ ಸಿನಿಮಾ ಕತೆ ಕಾದಂಬರಿಗಳು ಧಾರಾವಾಹಿಗಳು ಕಮಲಕ್ಕನ ಜೀವನದಂಥ ವಿಷಯಗಳಿಗೆ ಏನು ಕಟ್ಟಿಕೊಡುತ್ತವೆ ಗಮನಿಸಿ, ಒಬ್ಬ ವಿಧವೆ ಅಂದರೆ ಹಾಗಿರಬೇಕು, ಹೀಗಿರಬೇಕು, ಗಂಡನೊAದಿಗೆ ಆಕೆಯ ಬುಕು ಮುಗಿದುಹೋಗುತ್ತದೆ ಇತ್ಯಾದಿ ಫಣಿಯಮ್ಮನಂತೆ, ಇನ್ನೂ ಕೆಲವು ಮೂಕಜ್ಜಿಯಂತೆ, ಇಂಥವರು ನಮ್ಮ ಸಮಾಜದಲ್ಲಿ ಬೇಕಾದಷ್ಟಿದ್ದಾರೆ, ಇವುಗಳನ್ನು ಕಂಡೂ ನಾವು ಮತ್ತೆ ಮತ್ತೆ ಒಬ್ಬ ವಿಧವೆ ಅಂದ್ರೆ ಹೀಗೆ ಎಂದೇ ಭಾವಿಸುತ್ತೇವೆ, ಇಲ್ಲ, ಸ್ವಂತ ಮಗನ ವಿಧವೆಗೂ ಬದುಕಿನ ಶಕ್ತಿ ತುಂಬಿ ಬಂದ ಬಾಳನ್ನು ಬಂದಂತೆ ಎದುರಿಸಿ ಅದರಲ್ಲೇ ಆನಂದ ಕಂಡು ಏನನನೋ ಹೇಳಿ ಹೋದರು. ಅವರಿಗೂ ಇನ್ನೂ ಚೆನ್ನಾದ ಬದುಕು ತನಗೆ ಇರಬೇಕಿತ್ತು ಅನಿಸಿರಬಹುದು ಆದರೆ ಅದರಲ್ಲೇ ಕೊರಗಿ ಇರುವ ಬದುಕನ್ನು ಹಾಳುಮಾಡಿಕೊಳ್ಳಲಿಲ್ಲ. ಪಾಲಿಗೆ ಬಂದ ಬದುಕಿನಲ್ಲೇ ಆನಂದ ಕಂಡರು, ಕಷ್ಟ ನಷ್ಟ ಇದ್ದೇ ಇತ್ತು ಅನ್ನಿ ಆದರೆ ಹೀಗೆ ಬದುಕನ್ನು ಸ್ವೀಕರಿಸುವ ಸಾಧ್ಯತೆ ನಮ್ಮ ಸಂಪ್ರದಾಯದಿಂದಲೇ ಅವರಿಗೆ ಸಿಕ್ಕಿದೆ, ಅವರು ಆಧುನಿಕ ಶಿಕ್ಷಣ ಪಡೆದವರಲ್ಲ, ಅತ್ರೀವಾದ ಆ ವಾದ ಈ ವಾದಗಳೆಲ್ಲ ತಿಳಿದವರಲ್ಲ, ಹೋರಾಟ ಇತ್ಯಾದಿಗಳ ಗಂಧ ಮೂಸಿದವರಲ್ಲ, ಅಂಥಾದ್ರಲ್ಲೂ ಅವರು ಎದುರಾದ ಕಷ್ಟಗಳಿಗೆ ಹೆದರಲಿಲ್ಲ, ಬಾಳಿದರು ಕಡುಕಷ್ಟಗಳನ್ನು ನುಂಗಿ ಮತ್ತೆ ಸಹಜವಾಗಿ ನಿಂತು ಬದುಕಿದರು, ಕಷ್ಟದಲ್ಲಿ ಅವರಿಗೆ ಸಮಾಧಾನ ಕೊಟ್ಟ  ವಿಷಯ ಇದು ನನ್ನ ಪ್ರಾರಬ್ಧವೋ ಮತ್ತೊಂದೋ ಕರ್ಮ ಎಂಬ ಮಾತಷ್ಟೇ ಆಗಿತ್ತು. ಇಂಥದ್ದೊಂದು ಜೀವನ ನಡೆಸುವ ಶಕ್ತಿಯನ್ನು ನಮ್ಮ ಪರಂಪರೆ ಕಲಿಸಿಕೊಡುತ್ತದಲ್ಲಾ ಅದು ನಾವು ಈ ಕಮಲಕ್ಕನ ಜೀವನದಲ್ಲಿ ಕಾಣುವ ಸಂಗತಿ, ಇಂಥ ಕಮಲಕ್ಕಂದಿರು ಸಾವಿರಾರು ಇದ್ದಾರೆ, ಇಂಥ ಜೀವನ ನಮ್ಮ ಮುಂದೆ ಇರುವುದನ್ನೂ ನಾವು ಗಣಿಸುವುದಿಲ್ಲ, ಮತ್ತೆ ಸಂಪ್ರದಾಯದ ಮಾತು ಬಂದರೆ ಅದೆಲ್ಲ ಗೊಡ್ಡುಎಂದೇ ಭಾವಿಸಿಬಿಡುತ್ತೇವೆ, ಅಲ್ಲ, ಹೀಗೂ ಇದೆ ಎಂದು ತೋರಿಸುತ್ತಾರೆ ಕಮಲಕ್ಕನಂಥ ಜೀವಗಳು. 

ಆ ದೇವರು ನಿಜಕ್ಕೂ ಎಲ್ಲಾದರೂ ಇದ್ದ ಕಲ್ಪನೆ ಆಗಿದ್ದರೆ ಅದಕ್ಕೆ ಆರೋಪಿಸಿದ ಗುಣಗಳು ನಿಜವೇ ಆಗಿದ್ದರೆ ಕಮಲಕ್ಕ ಮತ್ತು ಅವರ ಕುಟುಂಬಕ್ಕೆ ಒಳಿತು ಮಾಡಿಯೇ ಮಾಡಬೇಕು, ದೇವರನ್ನು ಅಂಥ ಇಕ್ಕಟ್ಟಿನಲ್ಲಿ ಸಿಲುಕಿಸಿ ಈ ಲೋಕದ ವ್ಯವಹಾರ ಮುಗಿಸಿ ಆ ಜೀವ ಈಗ ಹೋಗಿದೆ. ಬಹುಶಃ ಆ ದೇವರಿಗೂ ಛೆ ಏನು ಮಾಡುವುದಪ್ಪಾ ಈಗ ಅನಿಸಿರಬೇಕು, ಇಷ್ಟು ಸಾಕಲ್ವಾ ಸಾರ್ಥಕತೆಗೆ?    

No comments:

Post a Comment