ಮೊನ್ನೆ ಗುರುವಾರ ಉಪ ರಾಷ್ಟ್ರಪತಿಗಳಾದ ಮಾನ್ಯ ಜಗದೀಪ್ ಧನಕರ್ ಅವರು ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಕುರಿತು ತಾರ್ಕಿಕ ರೀತಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ, ಇದನ್ನು ಕುರಿತು ಪರ ವಿರೋಧ ಚರ್ಚೆಗಳಾಗುತ್ತಿವೆ. ಆದರೆ ಧನಕರ್ ಅವರು ಹೇಳಿದ್ದು ತಪ್ಪು ಎಂದು ಯಾರೂ ಹೇಳುತ್ತಿಲ್ಲ, ಕಾರಣವೇನೆಂದರೆ ಇಲ್ಲಿ ೯ನೆ ನ್ಯಾಯಾಲಯ ತನ್ನನ್ನು ಎಲ್ಲರಿಂದಲೂ ಮೇಲು ಎಂದು ಭಾವಿಸಿ ಮಾನ್ಯ ರಾಷ್ಟçಪತಿಗಳಿಗೇ ಆದೇಶ ಕೊಟ್ಟಿದೆ. ತಮಾಷೆ ಅಂದರೆ ಈ ನ್ಯಾಯಮೂರ್ತಿಗಳನ್ನು ನೇಮಿಸುವವರೇ ರಾಷ್ಟ್ರಪತಿಗಳು. ಅವರಿಗೇ ಈಗ ನ್ಯಾಯಾಲಯ ಆದೇಶ ಕೊಡುವ ಮಟ್ಟಕ್ಕೆ ತನ್ನನ್ನು ಏರಿಸಿಕೊಂಡಿದೆ. ಅಂದರೆ ರಾಷ್ಟ್ರಪತಿಗಳು ಪ್ರಶ್ನಾತೀತರು ಎಂದಲ್ಲ, ಅವರನ್ನು ಕೇಳಲು ಸಂಸತ್ತು ಇದೆ. ಮೊದಲು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಹೇಗಿದೆ ತಿಳಿಯುವಾ - ಮುಖ್ಯವಾಗಿ ನಮ್ಮಲ್ಲಿ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಿವೆ, ಇವುಗಳಲ್ಲಿ ಒಂದರಲ್ಲಿ ಇನ್ನೊಂದು ಮೂಗು ತೂರಿಸುವಂತಿಲ್ಲ, ಆದರೆ ಅಂತಿಮ ನಿರ್ಧಾರ ಶಾಶಕಾಂಗದ್ದು, ಕಾರಣ ಅದು ಜನರಿಂದ ಆಯ್ಕೆ ಆಗಿದೆ ಎಂಬ ಕಾರಣಕ್ಕೆ ಆದರೆ ಅದಕ್ಕೂ ರೀತಿ ನೀತಿಗಳಿವೆ, ಒಂದಕ್ಕೊಂದು ಅವಲಂಬನೆಯಾಗಿ ಕೆಲಸ ಮಾಡುವಂತೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಸದ್ಯ ಈ ವಿಚಾರ ಏಕೆ ಚರ್ಚೆಗೆ ಬಂದಿದೆ ನೋಡುವಾ - ತಮಿಳುನಾಡು ಸರ್ಕಾರ ಈಚೆಗೆ ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನ ಮಾನ ಇರಬೇಕೆಂದು ಸದನದಲ್ಲಿ ಮಸೂದೆ ಮಂಡಿಸಿ ಅನುಮೋದನೆಗಾಗಿ ರಾಜ್ಯಪಾಲರಿಗೆ ಕಳಿಸಿತು, ಇದರ ಬಗ್ಗೆ ತೀಮರ್ಶಾನ ಕೈಗೊಳ್ಳದ ರಾಜ್ಯಪಾಲರು ಅದನ್ನು ರಾಷ್ಟ್ರಪತಿಗಳಿಗೆ ಕಳಿಸಿದರು, ಅದು ಅನುಮೋದನೆ ಪಡೆಯದೇ ಅಲ್ಲೇ ಉಳಿಯಿತು, ಕರ್ನಾಟಕದಲ್ಲೂ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನಿಗದಿಪಡಿಸಿ ಮಸೂದೆಯ ಅನುಮೋದನೆಗೆ ಕಳಿಸಿದ್ದು ಕೂಡ ಹೀಗೆಯೇ ಉಳಿಯಿತು, ಇಂಥ ಕಾರಣಕ್ಕೆ ಪ್ರಕರಣ ಸರ್ವೋಚ್ಚ ನ್ಯಾಯಾಲಯ ಮೆಟ್ಟಿಲು ಹತ್ತಿತು. ಅಲ್ಲಿ ನ್ಯಾಯಾಲಯ ಇಂಥ ಮಸೂದೆಗಳಿಗೆ ಗರಿಷ್ಠ ಆರು ತಿಂಗಳಲ್ಲಿ ಅನುಮೋದನೆ ಕೊಡಬೇಕು ಇಲ್ಲದಿದ್ದರೆ ಮಸೂದೆ ಸ್ವತಃ ಕಾನೂನಾಗುತ್ತದೆ ಎಂದು ರಾಷ್ಟ್ರಪತಿಗಳಿಗೆ ಕಾಲಮಿತಿ ಹಾಕಿದೆ, ಇದನ್ನು ಕುರಿತು ಉಪ ರಾಷ್ಟ್ರಪತಿಗಳು ಟೀಕೆ ಮಾಡಿದ್ದಾರೆ, ಆ ಸಂದರ್ಭದಲ್ಲಿ ಅವರು ಒಂದು ಸಂದರ್ಭವನ್ನು ಉಲ್ಲೇಖಿಸಿದ್ದಾರೆ, ಅಲ್ರೀ ನ್ಯಾಯಾಧೀಶರೇ ನೀವು ನ್ಯಾಯಾಲಯ ವ್ಯವಸ್ಥೆಯಲ್ಲಿ ಸರ್ವೋಚ್ಚರೇ ವಿನಾ ಎಲ್ಲ ವ್ಯವಸ್ಥೆಗೂ ಮೇಲಿನವರಲ್ಲ ಅಂನ್ನುತ್ತಾ, ಈಚೆಗೆ ದೆಹಲಿಯಲ್ಲಿ ನಿಮ್ಮಂಥ ನ್ಯಾಯಾಧೀಶರೊಬ್ಬರ ಮನೆಯಲ್ಲಿ ಮೋಟೆಗಟ್ಟಲೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹಣದ ವಿಷಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಮೇಲೆ ನೀವು ಆ ನ್ಯಾಯಾಧೀಶರನ್ನು ವರ್ಗ ಮಾಡಿ ಕೈ ತೊಳೆದುಕೊಂಡಿರಿ, ಅವರ ಮೇಲೆ ಬೇರೆ ಕಾನೂನು ಕ್ರಮವೇ ಆಗಲಿಲ್ಲ, ಆದರೆ ನೀವು ಈಗ ಶಾಸಕಾಂಗಕ್ಕೆ ಪಾಠ ಹೇಳಲು ಬಂದಿದ್ದೀರಿ ಅಂದಿದ್ದಾರೆ, ನಿಜ. ಅನೇಕ ಸಂದರ್ಭಗಳಲ್ಲಿ ನಮ್ಮ ಶಾಸಕಾಂಗಕ್ಕೆ ಸರಿಯಾಗಿ ಚಾಟಿ ಬೀಸಿ ಸರಿದಾರಿಗೆ ತರುವ ಕೆಲಸವನ್ನು ನ್ಯಾಯಾಲಯಗಳು ಮಾಡಿವೆ. ಆ ಕಾರಣಕ್ಕೆ ನ್ಯಾಯಾಲಯದ ಮೇಲೆ ಗೌರವ ಮುಮ್ಮಡಿ ಆದದ್ದೂ ನಿಜ. ಹಾಗಂತ ನ್ಯಾಯಾಲಯ ಎಲ್ಲ ಕಡೆ ಸುಪ್ರೀಮಸಿ ಮೆರೆಯಲು ಆಗದು. ನ್ಯಾಯಾಧೀಶರನ್ನೂ ಹೇಳಿ ಕೇಳುವ ವ್ಯವಸ್ಥೆ ಬೇಕಲ್ಲವೇ? ಈ ಸಂದರ್ಭದಲ್ಲಿ ಅವರು ೧೪೨ನೆಯ ವಿಧಿಯನ್ನು ಅಣುಕ್ಷಿಪಣಿಗೆ ಹೋಲಿಸಿ ದ್ದಾರೆ. ಧನಕರ್ ಅವರು ಮೊದಲು ಸರ್ವೋಚ್ಚ ನ್ಯಾಯಾಲಯದಲ್ಲಿ ವಕೀಲರಾಗಿದ್ದವರು ಅನಂತರ ರಾಜ್ಯಪಾಲರಾಗಿಯೂ ಕೆಲಸ ಮಡಿದವರು. ಅವರಿಗೆ ಇವೆಲ್ಲದರ ಪರಿಚಯ ಚೆನ್ನಾಗಿದೆ. ಈ ೧೪೨ ನೆಯ ವಿಧಿ ಏನು? ವಿಧಿ ೧೪೨ ರ ಪ್ರಕಾರ ನ್ಯಾಯಾಲಯ ತನ್ನ ಮುಂದೆ ಬಾಕಿ ಇರುವ ಪ್ರಕರಣ ಕುರಿತು ನ್ಯಾಯ ಒದಗಿಸಲು ಅಗತ್ಯ ಆದೇಶಗಳನ್ನು ಕೊಡಬಹುದಾಗಿದೆ ಎಂದು ಹೇಳುತ್ತದೆ. ಅಂದರೆ ನ್ಯಾಯದಾನಕ್ಕಾಗಿ ನ್ಯಾಯಾಲಯ ಅಂಥ ತೀರ್ಮಾನ ಕೈಗೊಳ್ಳುವ ವಿವೇಚನೆ ಕೈಗೊಳ್ಳುವ ಅವಕಾಶವನ್ನು ಇದು ಕೊಡುತ್ತದೆ, ಆದರೆ ಇದರ ಪರಿಣಾಮ ಕುರಿತು ಗಮನಿಸಬೇಕಾದವರು ಯಾರು? ಘನ ನ್ಯಾಯಾಲಯ ತನಗೆ ತಾನೇ ಸರ್ವೋಚ್ಚ ಅಧಿಕಾರವನ್ನು ಕೊಟ್ಟುಕೊಳ್ಳಬಹುದಾ ಎಂಬುದು ಪ್ರಶ್ನೆ. ನ್ಯಾಯ ವ್ಯವಸ್ಥೆಯಲ್ಲಿ ಜಿಲ್ಲಾ, ರಾಜ್ಯ, ದ್ವಿಸದಸ್ಯ ಇತ್ಯಾದಿ ಪೀಠಗಳಿವೆಯಲ್ಲಾ, ಹಾಗೆ ಸರ್ವೋಚ್ಚ ನ್ಯಾಯಾಲಯದಲ್ಲೂ ಪೀಠಗಳಿದ್ದು ಅಲ್ಲಿ ಬಹುಮತ ಉಳ್ಳ ಪೀಠ ವ್ಯವಸ್ಥೆ ಕೊಡುವ ತೀರ್ಪು ಅಂತಿಮವಾಗಿರುತ್ತದೆ, ಇಂಥ ನ್ಯಾಯ ವ್ಯವಸ್ಥೆಯಲ್ಲಿ ಅದು ಸರ್ವೋಚ್ಚ ಅಷ್ಟೇ. ಎಲ್ಲ ಕಡೆ ಅಲ್ಲ, ಅದನ್ನು ನಮ್ಮ ವ್ಯವಸ್ಥೆಯಲ್ಲಿ ಶಾಸಕಾಂಗ ಹಾಗೂ ರಾಷ್ಟ್ರಪತಿಗಳು ನಿಯಂತ್ರಿಸುತ್ತಾರೆ. ಈಗ ರಾಷ್ಟ್ರಪತಿಗಳನ್ನೇ ನಿಯಂತ್ರಿಸುವ ಕೆಲಸಕ್ಕೆ ಅದು ಕೈಹಾಕಿದೆ. ಇದನ್ನು ಧನಕರ್ ಪ್ರಶ್ನಿಸಿದ್ದಾರೆ, ಒಬ್ಬರು ಹೀಗೆ ಕೇಳುವವರು ಬೇಕಿತ್ತು ಬಿಡಿ. ಈಗ ಅದಾಗಿದೆ, ಸೂಕ್ತ ಚರ್ಚೆ ಆಗಬೇಕಿದೆ. ನಮ್ಮ ವ್ಯವಸ್ಥೆಯಲ್ಲಿ ಮೂರು ಅಂಗಗಳಲ್ಲಿ ಅನಗತ್ಯವಾಗಿ ಯಾವುದೂ ಯಾವುದರಲ್ಲೂ ಮೂಗು ತೂರಿಸುವಂತಿಲ್ಲ, ನ್ಯಾಯಾಂಗಕ್ಕೆ ಹೊಣೆಗಾರಿಕೆ ಅಗತ್ಯವೆಂದು ಹೇಳಿದ್ದಾರೆ, ಹೀಗಾದರೆ ಕಾರ್ಯಾಂಗವನ್ನು ಯಾರು ನಡೆಸುತ್ತಾರೆಂದು ಕೇಳಿದ್ದಾರೆ. ನ್ಯಾಯಾಲಯ ಸೂಪರ್ ಪಾರ್ಲಿಮೆಂಟ್‌ನಂತೆ ವರ್ತಿಸುತ್ತಿದೆ ಎಂದಿದ್ದಾರೆ. ಹೌದು, ನಮ್ಮ ವ್ಯವಸ್ಥೆಯಲ್ಲಿ ಸಂಸತ್ತೇ ಆತ್ಯಂತಿಕ ಅಧಿಕಾರ ಹೊಂದಿದೆ. ಅದರ ಮೇಲೆ ಯಾರೂ ಸವಾರಿ ಮಾಡಲಾಗದು. ನೆಲದ ಕಾನೂನು ತಮಗೆ ಅನ್ವಯವಾಗುವುದಿಲ್ಲ ಅನ್ನುವಂತೆ ನ್ಯಾಯಾಧೀಶರು ವರ್ತಿಸುತ್ತಿದ್ದಾರೆಂದು ಅವರು ಹೇಳಿದ್ದಾರೆ. ರಾಷ್ಟ್ರಪತಿಗಳಿಗೆ ೧೪೫ ಎ ವಿಧಿಯಡಿ ಮಾತ್ರ ನಿರ್ದೇಶನ ಕೊಡುವ ಅಧಿಕಾರವಿದೆ ಅಂದಿದ್ದಾರೆ. ಸರ್ಕಾರಗಳು ಸಂಸತ್ತು ಮತ್ತು ದೇಶದ ಜನತೆಗೆ ಬಾಧ್ಯಸ್ಥ,ಇವುಗಳ ಮೇಲೆ ನ್ಯಾಯಾಲಯ ಸವಾರಿ ಮಾಡಿದರೆ ಅದಕ್ಕೆ ಯಾರು ಬಾಧ್ಯಸ್ಥರೆಂದು ಅವರು ಪ್ರಶ್ನಿಸಿದ್ದಾರೆ, ಇದು ಚಿಂತಿಸಬೇಕಾದ ವಿಷಯ.ನಮ್ಮ ವ್ಯವಸ್ಥೆಯಲ್ಲಿ ಹೊಣೆಗಾರಿಕೆಯ ಕ್ರಮವಿದೆ. ಜನರಿಂದ ಆಯ್ಕೆಯಾದ ಸರ್ಕಾರಗಳು ಸಂಸತ್ತಿಗೆ ಅಧೀನ, ಸಂಸತ್ತಿನಲ್ಲಿ ಟೀಕಾತ್ಮಕ ಪ್ರಶ್ನೆಗಳಿಗೆ ಅವಕಾಶವಿದೆ, ಇಂಥ ವ್ಯವಸ್ಥೆಯನ್ನು ನ್ಯಾಯಾಲಯ ನಿಯಂತ್ರಿಸಿದರೆ ಅದನ್ನು ಕೇಳುವವರು ಯಾರು ಎಂದು ಕೇಳಿದ್ದಾರೆ,ನ್ಯಾಯಾಲಯ ಕೊಡುವ ಇಂಥ ತೀರ್ಪುಗಳು ಸಂವೈಧಾನಿಕವಲ್ಲ ಎಂದು ಧನಕರ್ ಹೇಳಿದ್ದಾರೆ. ಆದರೆ ಕಾಂಗ್ರೆಸ್ ನ ಸುರ್ಜೇವಾಲ ರಾಜ್ಯಪಾಲರಿಗೂ ರಾಷ್ಟ್ರಪತಿಗಳಿಗೂ ಇಂಥ ನಿರ್ದೇಶನ ಕೊಡುವ ಅಗತ್ಯವಿತ್ತು ಎಂದು ಹೇಳಿದ್ದಾರೆ ಅಂತೂ ಇಂಥ ಚರ್ಚೆ ಆಗುವ ಅಗತ್ಯ ನಮ್ಮ ದೇಶದಲ್ಲಿತ್ತು, ಇದು ನಮ್ಮ ವ್ಯವಸ್ಥೆಯ ಸೌಂದರ್ಯ.

No comments:
Post a Comment