Sunday, 20 April 2025

ಮರೆಯಲಾಗದವರು


ನಾಳೆ ಏಪ್ರಿಲ್ ೨೧. ಕನ್ನಡದ ಮಹಾನ್ ಕಾದಂಬರಿಕಾರ ದಿವಂಗತ ತರಾ ಸುಬ್ಬರಾವ್ ಅವರ ಜನ್ಮದಿನ.

ಅದು ೧೯೮೦ರ ದಶಕ, ಮೈಸೂರಿನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದ ದಿನಗಳು, ಸಾಹಿತಿಗಳ ನೆಲೆವೀಡಾಗಿದ್ದ ಆ ಊರಿನ ಒಂದೊಂದು ಬೀದಿಯಲ್ಲೂ ಸಾಹಿತ್ಯ ಪ್ರೇಮಿ ಅಥವಾ ಸಾಹಿತಿ ಇರುತ್ತಿದ್ದರು, ಇದರಲ್ಲಿ ಕುವೆಂಪು, ತರಾಸು ಅವರಿಂದ ಹಿಡಿದು ಮಂಗಳಾ ಸತ್ಯನ್ ವರೆಗೆ ಎಲ್ಲ ಬಗೆಯವರೂ ಇದ್ದರು, ನಮಗೆ ಇವರನ್ನೆಲ್ಲ ಮಾತಾಡಿಸುವ ಚಟ. ವಾರಕ್ಕೊಂದು ಪಟ್ಟಿ ಇರುತ್ತಿತ್ತು.ಒಮ್ಮೆ ತರಾಸು ಅವರ ಭೇಟಿಗೆ ಯೋಜನೆ ಸಿದ್ಧವಾಯ್ತು, ಆದರೆ ಅವರು ವಾಸಿಸುತ್ತಿದ್ದ ಜಾಗ ತಿಳಿದಿರಲಿಲ್ಲ, ಒಮ್ಮೆ ಯಾದವಗಿರಿಯಲ್ಲಿರುತ್ತಾರೆಂದು ಗೊತ್ತಾಯಿತು, ಹೇಗೂ ಅಲ್ಲಿನ ಆಕಾಶವಾಣಿಗೆ ಎಡತಾಕುವಾಗ ಸರಿಯಾಗಿ ನೋಡಿದರಾಯ್ತೆಂದುಕೊಂಡೆ, ಆ ದಿನ ಬಂದೇ ಬಂತು. ಮೈಸೂರು ಆಕಾಶವಾಣಿ ಬಳಿ ರಾಮಕೃಷ್ಣ ಆಶ್ರಮಕ್ಕೆ ಹೋಗುವಲ್ಲಿ ಸಣ್ಣ ಇಳಿಜಾರಿನ ಬಳಿ ರಸ್ತೆ ತಿರುವಲ್ಲಿ ಮೊದಲ ಮನೆ ಅವರದಾಗಿತ್ತು. ಹೋಗಿದ್ದಾಯ್ತು. ಅಲ್ಲೇ ಆದಿನ ಭರ್ಜರಿ ಊಟ. ತಾಯಿ ಅನ್ನಪೂರ್ಣೆ ಅಂಬುಜಾ ತರಾಸು ಅವರ ಕೈರುಚಿ ನೋಡಿದ್ದಾಯ್ತು. ಆಮೇಲೆ ಅಂಥ ಎಷ್ಟೋ ಸಂದರ್ಭಗಳು. ಇಂದು ನಾಡಿನ ಖ್ಯಾತ ಪ್ರಕಾಶನ ಸಂಸ್ಥೆಯಾದ ಅಭಿನವದ ಶ್ರೀಮತಿ ಪಿ ಚಂದ್ರಿಕಾ ಅವರು ವರಸೆಯಲ್ಲಿ ತರಾಸು ಅವರ ಮೊಮ್ಮಗಳು, ಅವರ ಮೊದಲ ಪರಿಚಯ ಕೂಡ ಅಲ್ಲೇ ಆಯಿತು. ತರಾಸು ಅವರ ಮನೆ ಅಂದರೆ ಒಂದು ಪುಸ್ತಕದ ಅಂಗಡಿ ಅಥವಾ ಪ್ರಿಂಟಿಂಗ್ ಪ್ರೆಸ್ ಇದ್ದಂತೆ ಇತ್ತು, ಅಲ್ಲಿ ಇಲ್ಲಿ ಹರಡಿಬಿದ್ದ ಏನೋ ಪ್ರಿಂಟ್ ಆಗಿದ್ದ ಕಾಗದ ತುಂಡುಗಳು, ಪೇಪರ್ ಗಳು ಇತ್ಯಾದಿ, ಒಂದು ರೀತಿ ಅವೇ ರಂಗೋಲಿ ಹಾಕಿದಂತೆ ಬಿದ್ದಿರುತ್ತಿದ್ದವು. ಒಂದೆರಡು ಬಾರಿ ಮಾತ್ರ ತರಾಸು ಅವರನ್ನು ಕಂಡು ನಡುಗುತ್ತ ನಮಸ್ಕರಿಸಿ ಮಾತಾಡಿದ ನೆನಪು ಮಸುಕಾಗಿದೆ. ಆದರೆ ಅಲ್ಲಿ ಮೆದ್ದ ಅಂಬೊಡೆಯ ಘಮ ಇನ್ನೂ ಮೂಗು, ಬಾಯಲ್ಲಿದೆ. ನಾಲ್ಕು ದಶಕಗಳು ಕಳೆದರೂ ಇವೆಲ್ಲ ಹಸಿರು, ಕೆಲ ವರ್ಷಗಳ ಹಿಂದೆ ಅವರ ಮೈಸೂರು ಮನೆ ನೋಡುವ ಆಸೆ ಆಯ್ತು, ಹೋಗಿ ಹೊರಗಿಂದ ಕಂಡು ತೃಪ್ತನಾಗಿ ಬಂದಿದ್ದೆ.

ಈ ಸಾಹಿತಿಗಳೇ ಹೀಗೆ ತಮ್ಮ ನಡತೆಯಿಂದ ಸದಾ ಅಚ್ಚೊತ್ತಿದ ನೆನಪಾಗಿ ಹಸಿರಾಗಿರುತ್ತಾರೆ. ಅವರನ್ನು ನೋಡುವ ಮೊದಲೇ ಅವರ ಬಹುತೇಕ ಎಲ್ಲ ಕಾದಂಬರಿಗಳ ಓದನ್ನು ಮೈಸೂರಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಮುಗಿಸಿದ್ದೆ, ಆಗಿನ್ನೂ ಅವರು ದುರ್ಗಾಸ್ತಮಾನ ರಚನೆಯಲ್ಲಿದ್ದರು, ಅದನ್ನು ಬಹು ನಿರೀಕ್ಷೆಯಿಂದ ಕಾದು ಮೊದಲ ದಿನವೇ ಗೀತಾ ಬುಕ್ ಹೌಸ್ ಗೆ ಹೋಗಿ ಖರೀದಿಸಿ ಓದಿ ಸಂಭ್ರಮಿಸಿದ ಕ್ಷಣ ಹಸಿಯಾಗಿದೆ, ಏನು ಮಾಡುವುದು? ನಾನಿದ್ದ ಹಾಸ್ಟೆಲ್ ನಲ್ಲಿ ಅವರ ಭಯಂಕರ ಅಭಿಮಾನಿಗಳಿದ್ದರು, ಕಾದಂಬರಿಯನ್ನು ತಂದೆ.  ಆದರೆ ನನಗೆ ಅದು ದಕ್ಕಿದ್ದು ವಾರಗಳ ಅನಂತರ, ಅಕ್ಕಪಕ್ಕದ ಕೋಣೆಯ ಮಿತ್ರರು ಕಸಿದು ಕೊಂಡು ಓದಿದ ಮೇಲೆ, ಇದೂ ಒಂಥರಾ ಖುಷಿ. ತರಾಸು ಅವರ ಎಲ್ಲ ಕೃತಿಗಳೂ ನನಗೆ ಇಷ್ಟ, ಅದರಲ್ಲೂ ಚಂದವಳ್ಳಿಯ ತೋಟ, ಅಣ್ಣಾವ್ರು ನಟಿಸಿದ್ದ ಜೀವನ ಚೈತ್ರ, ಕೊನೆಯಲ್ಲಿ ಬಂದ ದುರ್ಗಾಸ್ತಮಾನಗಳು ಜೊತೆಗೆ ಹಂಸಗೀತೆ ಬಲು ಇಷ್ಟ, ಇವುಗಳನ್ನು ಓದದ ಕನ್ನಡ ಬಲ್ಲವರು ಬಹುಶಃ ಇರಲಾರರು. ನಾವು ಆ ಎಂಬತ್ತರ ದಶಕದಲ್ಲಿ ಗ್ರಂಥಾಲಯಕ್ಕೆ ಹೋದಾಗ ಮೊದಲು ಹುಡುಕುತ್ತಿದ್ದ ಕಾದಂಬರಿಗಳಲ್ಲಿ ತರಾಸು, ಕಾರಂತ, ಭೈರಪ್ಪ ಮತ್ತು ಯಂಡಮೂರಿಯವರ ಕಾದಂಬರಿಗಳ ಅನುವಾದಗಳು ಸೇರಿದ್ದವು. ಕನ್ನಡದ ಬಗ್ಗೆ ಹುಚ್ಚು ಹಿಡಿಸಿದ ಲೇಖಕರಲ್ಲಿ ಇವರೂ ಒಬ್ಬರು. ಇಂದಿಗೂ ಕನ್ನಡ ಸಾಹಿತ್ಯ ಅವರನ್ನು ಮರೆತಿಲ್ಲ, ಅವರ ಕೃತಿ ನಾಗರಹಾವು ಸಿನಿಮಾ ಆಗಿ ಇನ್ನಿಲ್ಲದ ಜನಪ್ರಿಯತೆ ತಂದುಕೊಟ್ಟಿತು, ಅವರ ಕೃತಿಗಳು ಇಂದಿಗೂ ಮತ್ತೆ ಮತ್ತೆ ಮುದ್ರಣ ಕಾಣುತ್ತಲೇ ಇವೆ, ಅವರಂಥ ಲೇಖಕರಿಲ್ಲದ ಕಾರಣದಿಂದಲೋ ಏನೋ ಕನ್ನಡ ಸಿನಿಮಾಗಳು ಕೂಡ ಕೃಶವಾಗಿ ಹೋಗಿವೆ, ಡಬ್ಬಾ ಸಿನಿಮಾ ಕತೆಗಳು, ಚಿಲ್ಲರೆ ಹಾಸ್ಯಗಳು, ನೆನಪಲ್ಲಿ ಉಳಿಯುವ ಸಿನಿಮಾಗಳೇ ದುರ್ಲಭವಾಗಿವೆ, ಹೀಗೆ ಏಕಕಾಲಕ್ಕೆ ಕನ್ನಡ ಸಾಹಿತ್ಯಕ್ಕೂ ಸಿನಿಮ ಸಂಸ್ಕೃತಿಗೂ ಬಲ ತುಂಬಿದ ದೊಡ್ಡ ಶಕ್ತಿ ಅವರಾಗಿದ್ದರು, ಇಂಥವರ ಅಗಲಿಕೆ ನಿಜಕ್ಕೂ ಶೂನ್ಯ ಸೃಷ್ಟಿಸುತ್ತದೆ. ಇಂದು ಯಾರೇ ನಿಧನರಾದರೂ ಇವರ ಸಾವು ಶೂನ್ಯ ಸೃಷ್ಟಿಸಿದೆ, ಕ್ಷೇತ್ರ ಬಡವಾಗಿದೆ ಎಂದು ಹೇಳುವ ಮಾತು ಕ್ಲೀಷೆ ಆಗಿಬಿಟ್ಟಿದೆ. ಆದರೆ ತರಾಸು ಅವರ ಅಗಲಿಕೆಯಿಂದ ಖಾಲಿಯಾದ ಸ್ಥಾನವನ್ನು ಯಾರಾದರೂ ತುಂಬುವುದಿರಲಿ, ಆ ಬಗ್ಗೆ ಲಕ್ಷ್ಯ ಹಾಕಲೂ ಆಗಿಲ್ಲ ಎಂಬುದು ಅವರ ಹೆಚ್ಚುಗಾರಿಕೆ ತೋರಿಸುತ್ತದೆ, ಅವರನ್ನು ಮಡಿಲಲ್ಲಿ ಹಾಕಿಕೊಂಡು ಅವರ ಜನ್ಮಕ್ಕೆ ಕಾರಣವಾಗಿದ್ದ ಚಿತ್ರದುರ್ಗದ ತಳುಕಿನ ಬಗ್ಗೆ ಹೊಟ್ಟೆಕಿಚ್ಚು ಆಗುತ್ತದೆ, ನಮ್ಮಲ್ಲೂ ಇಂಥವರೊಬ್ಬರ ಜನನ ಆಗಬಾರದೇ ಅನಿಸುತ್ತದೆ, ಇಂಥವರ ಬಗ್ಗೆ ಪ್ರತಿಷ್ಠಾನ ಆಗಬೇಕೆಂಬ ಊಗು ಬಹಳ ಹಿಂದಿನಿಂದ ಸರ್ಕಾರದ ಮುಂದೆ ಇದೆ, ಈಗಲಾದರೂ ಇದು ಆಗುತ್ತದೆಯೇ ನೋಡಬೇಕಿದೆ.

   


No comments:

Post a Comment