Saturday, 3 May 2025

ಯಕ್ಷಮಾಣಿಕ್ಯ ಚಿಂತನಾ ಹೆಗಡೆ ಮಾಳ್ಕೋಡು


ಕರ್ನಾಟಕದ ಯಕ್ಷಗಾನ ಬಹಳ ಪುರಾತನವಾದುದು, ಸಾವಿರಾರು ವರ್ಷಗಳ ಇತಿಹಾಸ ಇದಕ್ಕಿದೆ, ಅಂತೆಯೇ ತಮಿಳುನಾಡಿನ ತೆರವುಕೂತ್, ಕೇರಳದ ಕಥಕಳಿಗಳು ಕೂಡ ಯಕ್ಷ ಪ್ರಕಾರಗಳೇ, ಈ ಎಲ್ಲ ಪ್ರಕಾರಗಳಲ್ಲಿ ಗಂಡಸರದೇ ಮೆರೆದಾಟವಾದ ಕಾರಣ ಇದನ್ನು ಗಂಡು ಕಲೆ ಎಂದು ಕರೆಯಲಾಗುತ್ತದೆ, ಆದರೆ ಇತ್ತೀಚೆಗೆ ಈ ಕಲಾ ಪ್ರಕಾರದಲ್ಲಿ ಐದು ಅಂಗಗಳಾದ ಭಾಗವಂತಿಕೆ, ಮಾತುಗಾರಿಕೆ, ನಾಟ್ಯ, ಸಂಗೀತ, ಮತ್ತು ವಾದ್ಯಗಳಲ್ಲಿ ಮಹಿಳೆ ಕಾಣಿಸಿಕೊಳ್ಳುತ್ತಿದ್ದಾಳೆ, ಮಾತ್ರವಲ್ಲ, ಸಾಕಷ್ಟು ಛಾಪು ಮೂಡಿಸುತ್ತಿದ್ದಾರೆ, ದಕ್ಷಿಣೋತ್ತರಕನ್ನಡ ಜಿಲ್ಲೆಗಳಲ್ಲಿ ಈ ಕಲೆ ಹೆಚ್ಚು ಪ್ರಸಿದ್ಧ, ಈ ಭಾಗಗಳಲ್ಲಿ ನೃತ್ಯಪ್ರಧಾನ ಯಕ್ಷಗಾನದ ಜೊತೆಗೆ ಕೇವಲ ಮಾತುಗಾರಿಕೆಯಲ್ಲೇ ಕಥನ ಕಟ್ಟಿಕೊಡುವ ತಾಳಮದ್ದಲೆ ಕೂಡ ಅಷ್ಟೇ ಪರಿಚಿತ. ಈ ಪ್ರಕಾರದಲ್ಲೂ ಸಾಕಷ್ಟು ಮಹಿಳೆಯರು ಸಾಧನೆ ಮಾಡಿದ್ದಾರೆ, ಈ ಪ್ರಕಾರದಲ್ಲಿ ಉತ್ತಮ ಸಂಶೋಧನೆಯನ್ನು ಕೂಡ ಮಾಡಲಾಗಿದೆ. 

ಇವೆಲ್ಲದರ ಜೊತೆ ದಕ್ಷಿಣೋತ್ತರಕನ್ನಡಗಳ ಜೊತೆಗೆ ಉಡುಪಿಯ ಯಕ್ಷಗಾನವೂ ಸೇರಿ ತೆಂಕು ಮತ್ತು ಬಡಗು ತಿಟ್ಟುಗಳಿದ್ದು ಇವುಗಳ ಸ್ವಂತಿಕೆ ಪ್ರತ್ಯೇಕವೇ ಆಗಿದೆ, ಜೊತೆಗೆ ಶಿವಮೊಗ್ಗ ಭಾಗದಲ್ಲೂ ಇದು ಕಾಣಿಸುತ್ತದೆ, ಈ ಎಲ್ಲ ಭಾಗದಲ್ಲೂ ಅದ್ಭುತ ಕಲಾವಿದರಿದ್ದಾರೆ, ಅದರಲ್ಲೂ ಇತ್ತೀಚೆಗೆ ಹೆಣ್ಣುಮಕ್ಕಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಲಾಗಾಯ್ತಿನಿಂದ ತೆಂಕು ಮತ್ತು ಬಡಗು ತಿಟ್ಟುಗಳಲ್ಲಿ ವೇಷಗಾರಿಕೆ, ಮಾತು, ವಾದ್ಯ, ಭಾಗವಂತಿಕೆಗಳಲ್ಲಿ ವ್ಯತ್ಯಾಸವಿದ್ದು ಎರಡೂ ಸಾಕಷ್ಟು ಅಂತರ ಕಾಯ್ದುಕೊಂಡಿವೆ, ಇವನ್ನು ಕಲೆಯ  ದೃಷ್ಟಿಯಿಂದ ಒಂದೇ ವೇದಿಕೆಯಲ್ಲಿ ತರುವ ಯತ್ನವನ್ನು ಕೂಡ ಮಹಿಳೆಯರೇ ನಾಡುತ್ತಿದ್ದಾರೆ ಇಂಥವರಲ್ಲಿ ಮೊದಲಿಗರು ಭವ್ಯಶ್ರೀ ಕಲ್ಕುಂದ ಮುಖ್ಯರು, ಇವರು ಭಾವತರೂ ಹೌದು, ಇವರದು ತೆಂಕು ತಿಟ್ಟಿನ ಭಾಗವಂತಿಕೆ. ಈಗ ಬಡಗು ತಿಟ್ಟಿನಲ್ಲೂ ಹೊನ್ನಾವರದ ಚಿಂತನಾ ಹೆಗಡೆಯವರು ಕಾಣಿಸಿಕೊಂಡಿದ್ದು ತಮ್ಮ ಅಪೂರ್ವ ಕಂಠಸಿರಿಯಿಂದ ಯಕ್ಷಪ್ರಿಯರ ಗಮನ ಸೆಳೆಯುತ್ತಿದ್ದಾರೆ.

ನಮ್ಮ ದೇಶದ ಸಂಪ್ರದಾಯವೇ ಹಾಗಿದೆ. ನಮ್ಮ ಕುಟುಂಬ ವ್ಯವಸ್ಥೆಯನ್ನು ಗಮನಿಸಿ, ಅದು ನಕ್ಕಳ ಬೆಳವಣಿಗೆಗೆ ಎಷ್ಟು ಆದ್ಯತೆ ಕೊಡುತ್ತದೆಯೋ ನೋಡಿ, ಒಮ್ಮೆ ಹಿರಿಯ ರಂಗಕರ್ಮಿ ಬಿ ವಿ ಕಾರಂತರು ಮಾತನಾಡುತ್ತಾ, ನಮ್ಮ ಮಕ್ಕಳ ರಕ್ತದಲ್ಲಿ ಸಾಂಸ್ಕೃತಿಕ ಸಂಗತಿ ಹರಿಯುತ್ತಲೇ ಇರುತ್ತದೆ, ನಮ್ಮ ಕುಟುಂಬ ಮತ್ತು ಸಮಾಜ ಹೀಗೆ ಮಾಡುತ್ತದೆ, ನಮ್ಮ ಪರಂಪರೆಯಲ್ಲಿ ಸಣ್ಣ ಮಕ್ಕಳ ಕೈಗೆ ಬಳಪ, ಪೆನ್ನು ಕೊಡುವುದು ಒಂದು ಸಡಗರದ ಹಬ್ಬ, ಪ್ರಪಂಚದ ಬೇರೆಲ್ಲೂ ಇಂಥ ಸಂಭ್ರಮವಿಲ್ಲ, ನೆರೆಯ ಪಾಕಿಸ್ತಾನದಲ್ಲಿ ಮಕ್ಕಳ ಕೈಗೆ ಗನ್ನು ಕೊಡುತ್ತಾರೆ, ಆದರೆ ನಮ್ಮಲ್ಲಿ ಪೆನ್ನು ಕೊಡಲಾಗುತ್ತದೆ, ಇಷ್ಟೇ ವ್ಯತ್ಯಾಸ, ಆದರೆ ಇದು ಉಂಟು ಮಾಡುವ ಪರಿಣಾಮ ಅಂತಿಂಥದ್ದಲ್ಲ, ಇದು ಜಗತ್ತಿನಲ್ಲಿ ನಮ್ಮ ದೇಶವನ್ನು ಬೇರೆಯಾಗಿಸಿದೆ, ಚಿಂತನಾ ಹೆಗಡೆ ಇದಕ್ಕೊಂದು ಉದಾಹರಣೆ. ಎಲ್ಲ ಮನೆಗಳಲ್ಲೂ ಇಂಥ ಪ್ರತಿಭೆಗಳಿರಬಹುದು, ಆದರೆ ಸರಿಯಾದ ಮಾರ್ಗವನ್ನು ಅವರಿಗೆ ತೋರಿಸಬೇಕು, ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು, ಆಗ ಯಶಸ್ಸು ಸಾಧ್ಯ,  ಚಿಂತನಾ ಅವರಿಗೆ ಇವೆರಡೂ ಸಿಕ್ಕಿದೆ, ಅವರು ಅದನ್ನು ಸರಿಯಾಗಿ ಬಳಸಿಕೊಂಡಿದ್ದಾರೆ, ಅವರಿಗೆ ಭವಿಷ್ಯದಲ್ಲಿ ಕ್ಷೇತ್ರದ ಸಕಲ ಸೌಭಾಗ್ಯಗಳೂ ಲಭಿಸಲಿ.

ಚಿಂತನಾ ಹೆಗಡೆ ಅವರ ಭಾಗವಂತಿಕೆಯನ್ನು ಒಮ್ಮೆ ಕೇಳಿದವರು ಅವರ ಅಭಿಮಾಯಾಗುವುದು ನಿಶ್ಚಿತ, ಒಮ್ಮೆ ಹಾಗೆಯೇ ಅಂತರ್ಜಾಲದಲ್ಲಿ ಯಕ್ಷಗಾನ ಜಾಲಾಡುವಾಗ ಚಿಂತನಾ ಹೆಗಡೆಯವರ ಗಾಯನ ಕೇಳಿಸಿಕೊಂಡೆ, ತಕೊಳಿ ಆಗಿನಿಂದ ಅವರ ಗಾಯನವನ್ನು ಅದೆಷ್ಟೋ ಬಾರಿ ಕೇಳಿದ್ದೇನೆ, ಗುರುವೆ ನಿನ್ನೊಳು ಸಮರಮಾಡುವೆ ಎಂಬ ಪದ್ಯವಂತೂ ರೋಮಾಂಚನಗೊಳಿಸುತ್ತದೆ, ಅಂತೆಯೇ ಅವರು ಹಾಡಿದ  ನನ್ನ ಮಗನೆಲ್ಲಿ ಹೋದನಮ್ಮಾ, ಗಿರಿಧರ, ಮರುಧರ ಗೀತೆಯಂತೂ  ಅತ್ಯದ್ಭುತವಾಗಿದೆ, ಅವರ ಹಾಡುಗಳನ್ನು ಯಕ್ಷರಂಗ ವೇದಿಕೆಯಲ್ಲಿ ಯೂಟ್ಯೂಬ್ ನಲ್ಲಿ ಕೇಳಿ ಆನಂದಿಸಬಹುದು. ಅವರ ಗಾಯನದಲ್ಲಿ ಮನಸೆಳೆಯುವ ಸಂಗತಿಯೆAದರೆ, ಹಾಡಿನ ಸ್ಪಷ್ಟ ಸಾಹಿತ್ಯ, ರಾಗ, ಭಾವ, ತಾಳ ಬದ್ಧತೆಗಳು, ಇವೆಲ್ಲ ಸೇರಿ ಇವರೊಬ್ಬ  ಕಾಳಿಂಗನಾವುಡರು ಹೀಗೆ ಮಹಿಳಾ ರೂಪದಲ್ಲಿ ಮತ್ತೆ ಬಂದಿದ್ದಾರೆ ಅನಿಸುತ್ತದೆ. ಒಮ್ಮೆ ಕೇಳಿದರೆ ಕಿವಿಯಲ್ಲಿ ದಿನಗಟ್ಟಲೆ ಸುಮ್ಮನೇ ಅದು ಗುನುಗುಡುತ್ತಿರುತ್ತದೆ. ಇದು ಅವರ ಗಾಯನದ ಹೆಚ್ಚುಗಾರಿಕೆ. ಅವರ ಕಂಠಶ್ರೀ ಪ್ರಪಂಚದಲ್ಲಿ ಮೊಳಗಲಿ. ಹೊನ್ನಾವರದ ಮಾಳ್ಕೋಡ್ ನಲ್ಲಿ ಯಕ್ಷಪಲ್ಲವಿಯ ಅಡಿಯಲ್ಲಿ ತಮ್ಮ ಕಾಯಕ ಮಡುತ್ತಿದ್ದಾರೆ, ಇವರ ಗಾಯನಕ್ಕೆ ಯಕ್ಷ ಮಾಣಿಕ್ಯ ಎಂಬ ಬಿರುದನ್ನು ಕೂಡ ಅವರಿಗೆ ಕೊಡಲಾಗಿದೆ, ಇವರಿಗೆ ದೂರದ ಮುಂಬೈನಲ್ಲಿ ದೊಡ್ಡ ಸನ್ಮಾನ ಕೂಡ ಆಗಿದೆ. ಇವರ ತಂದೆ ಮಾಳ್ಕೋಡ್ ಉದಯ ಹೆಗಡೆಯವರು ಪ್ರಸಿದ್ಧ ಯಕ್ಷಗಾನ ಕಲಾವಿದರು. ಅವರ ಉತ್ತೇಜನದಿಂದ ಮತ್ತು ಪ್ರಭಾವದಿಂದ ಯಕ್ಷಗಾನಕ್ಕೆ ಬಂದರು, ಎಂಟನೆಯ ತರಗತಿಯಲ್ಲೇ ಯಕ್ಷಗಾನದತ್ತ ಹೊರಳಿದರು, ತಾಯಿಯವರ ಪ್ರೇರಣೆಯಿಂದ ಯಕ್ಷಗಾನದಲ್ಲಿ ಭಾಗವತಿಕೆ ಆಯ್ದುಕೊಂಡರು, ಸಾರ್ಥಕವಾಯ್ತು. ತಂದೆ ತಾಯಿ ಮಕ್ಕಳಿಗೆ ಸರಿಯಾದ ಮಾರ್ಗ ತೋರಿದರೆ ಮಕ್ಕಳು ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಉತ್ತಮ ಉದಾಹರಣೆ ಆಗಿದ್ದಾರೆ. ಬಾಲ್ಯದಿಂದ ಭಜನೆ ಸಂಗೀತ ಮೊದಲಾದ ಪ್ರಕಾರದಲ್ಲಿ ತೊಡಗಿಸಿಕೊಂಡರು ಜೊತೆಗೆ ಇವರ ಸಹೋದರ ಸಾಥ್ ಕೊಟ್ಟರು, ಇವೆಲ್ಲದರ ಫಲವಾಗಿ ಚಿಂತನಾ ಹೆಗಡೆಯವರು ಯಕ್ಷಮಾಣಿಕ್ಯವಾಗಿ ರೂಪುಗೊಂಡಿದ್ದಾರೆ, ಇವರ ಕಂಚಿನ ಕಂಠ ಸಿರಿ ಜಗತ್ತನ್ನೇ ಆವರಿಸಲಿ, ಇನ್ನೇನು ಹೇಳುವುದಿದೆ?ನಮ್ಮೂರ ಅದ್ಭುತ ಕಲಾವಿದೆ ಬೆಳೆಯಲಿ, ಬೆಳಗಲಿ, ಅಷ್ಟೇ.  ಕರಾವಳಿ ಕರ್ನಾಟಕ ಯಕ್ಷಗನಕ್ಕೆ ಹೆಸರು-ಉಸಿರು ಅದರಲ್ಲೂ ಹೊನ್ನಾವರವಂತೂ ಅದಕ್ಕೆ ಮಡಿಲು, ಬಂದವರು ಚಿಂತನಾ ಹೆಗಡೆ,ಅದರಲ್ಲೂ ಗುಂಡಬಾಳದ ಆಂಜನೇಯನ ದೇವಸ್ಥಾನದಲ್ಲಿ ವರ್ಷದ ಯಾವ ದಿನ ಹೋದರೂ ಯಕ್ಷಗಾನ ಸೇವೆ ನಡೆದಿರುತ್ತದೆ, ದೇವರ ಸೇವೆಯ ಹೆಸರಲ್ಲಿ ಕಲಾಸೇವೆ ಅಲ್ಲಿ ನಿರಂತರ ನಡೆಯುತ್ತದೆ. ಹೊನ್ನಾವರ ಹೇಳಿ ಕೇಳಿ ಕೆರೆಮನೆ ಶಿವರಾಮ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಸಿಂಹ ನೃತ್ಯದ ಹಾಸ್ಯಗಾರ ಮನೆತನ, ಕೊಂಡದಕುಳಿ ಮನೆತನ, ಮೊದಲಾದ ಖ್ಯಾತ ಕಲಾವಿದರನ್ನು ಲೆಕ್ಕವಿಲ್ಲದಷ್ಟು ಕೊಟ್ಟ ಜಾಗ. ಇಂಥ ಪರಿಸರದಿಂದ ಬಂದವರು ಚಿಂತನಾ. ಇವರ ರಕ್ತದಲ್ಲಿ ಯಕ್ಷಗಾನವಿದೆ, ಅದು ಪರಿಪೂರ್ಣವಾಗಿ ಅವರ ಕಂಠಕ್ಕೆ ಇಳಿದಿದೆ, ಸುಮ್ಮನೇ ಅವರ ಹೆಸರನ್ನು ಯೂ ಟ್ಯೂಬ್ ಅಥವಾ ಗೂಗಲ್ ನಲ್ಲಿ ಜಾಲಾಡಿ, ಒಂದಿಷ್ಟು ಗಾಯನಗಳ ಪಟ್ಟಿ ಬರುತ್ತದೆ, ಕೇಳಿ, ಇಲ್ಲವಾದರೆ ನಿಮ್ಮ ಕಲೆ, ಸಾಹಿತ್ಯ, ಸಂಗೀತ ಪ್ರೇಮ ಏನಾದರೂ ನಿಮಗಿದ್ದರೆ ಅದೆಲ್ಲ ವ್ಯರ್ಥ ಎಂದಷ್ಟೇ ಹೇಳಬಹುದು. 





No comments:

Post a Comment