ಯುವ ವಿದ್ವಾಂಸರೂ ಅನುವಾದಕರೂ ದಕ್ಷ ಆಡಳಿತಗಾರರೂ ಆದ ಅಜಕ್ಕಳ ಗಿರೀಶ ಭಟ್ಟರ ಹೊಸ ಕೃತಿ ರಾಷ್ಟ್ರಧರ್ಮ ಇದೀಗ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ ಹತ್ತು ಅಧ್ಯಾಯಗಳಿದ್ದು ನೂರು ಪುಟಗಳ ವ್ಯಾಪ್ತಿ ಇದೆ. ಆದರೆ ಕತೆ ಇಷ್ಟೇ ಅಲ್ಲ, ಈ ನೂರು ಪುಟಗಳು ಜನ್ನನ ಯಶೋಧರ ಚರಿತೆಯಂತೆ ಕೃತಿ ಸಣ್ಣದಾದರೂ ಚಿಂತನೆ ಹಿರಿಯದು. ಮಹಾಕೃತಿಯ ಆಳ ಅಗಲ ಇದಕ್ಕಿದೆ. ಒಂದೊಂದು ಅಧ್ಯಾಯವೂ ಸಂಕ್ಷಿಪ್ತವಾಗಿದೆ, ಇವನ್ನು ವಿಸ್ತರಿಸಿದರೆ ಒಂದೊಂದು ಪಿ.ಎಚ್.ಡಿ. ಆಗಬಲ್ಲವು. ಅಂಥ ಆಸಕ್ತಿ ಮತ್ತು ಶಕ್ತಿ ಇರುವವರು ಹಾಗೂ ಪಿ.ಎಚ್.ಡಿ. ಸರಿಯಾದ ಶೀರ್ಷಿಕೆ ಮತ್ತು ಸತ್ವವುಳ್ಳ ವಿಷಯ ಆಯ್ಕೆ ಮಾಡಿಕೊಳ್ಳದೇ ಕಿತ್ತುಹೋದ ಅವರಿವರ ಜೀವನ, ಸಾಧನೆ ಎಂದೆಲ್ಲ ಪದವಿಗಾಗಿ ಅಧ್ಯಯನ ಮಾಡುವವರು ಇಂಥ ಕೃತಿಗಳನ್ನು ಒಮ್ಮೆ ಅಗತ್ಯ ಗಮನಿಸಬೇಕು. ಇಲ್ಲ ಅಂಥ ಅಧ್ಯಯನ ಮನೋಧರ್ಮವೇ ನಮ್ಮ ಶಿಕ್ಷಣ ವಲಯದಿಂದ ನಾಪತ್ತೆಯಾಗಿ ದಶಕಗಳೇ ಸಂದಿವೆ, ಕಿತ್ತುಹೋದ ವಸಾಹತುಶಾಹಿ ಕಾಲದ ಚಿಂತನೆಗಳನ್ನೇ ಪುನರುತ್ಪಾದನೆ ಮಾಡುವುದು ಅಥವಾ ಅವುಗಳಿಗೆ ಪೂರಕವಾದ ಒಂದಿಷ್ಟು ಮಾಹಿತಿಗಳನ್ನು ಅಲ್ಲಿಲ್ಲಿಂದ ಕದ್ದು ಕೊಡುವುದೇ ಸಂಶೋಧನೆಯಾಗಿಬಿಟ್ಟಿದೆ, ಪರಿಸ್ಥಿತಿ ಹೇಗಿದೆ ಅಂದರೆ ಸ್ಥಾಪಿತ ಚಿಂತನಾಕ್ರಮಕ್ಕೆ ವಿರುದ್ಧವಾದ ಒಂದು ಮಾತು ಬಂದರೂ ಶೈಕ್ಷಣಿಕ ವಲಯ ಅದನ್ನು ಗಂಭೀರವಾಗಿ ಚರ್ಚೆಗೆ ಸ್ವೀಕರಿಸುವ ಮನಃಸ್ಥಿತಿಯಲ್ಲಿಲ್ಲ, ಅಷ್ಟರಮಟ್ಟಿಗೆ ನಾವು, ನಮ್ಮ ಶೈಕ್ಷಣಿಕ ವಲಯ ವಸಾಹತುಗಳ ವಶದಲ್ಲಿ ನಮ್ಮನ್ನು ಮಾರಿಕೊಂಡಿದ್ದೇವೆ, ಇಂಥ ಮಾರಿಕೊಂಡ ಸಂಗತಿಗಳನ್ನು ಮನಗಾಣಿಸುವ ಕೆಲಸವನ್ನು ಈಗೀಗ ಹಲವರು ಮಡುತ್ತಿದ್ದಾರೆ, ಅಂಥವರಲ್ಲಿ ಅಜಕ್ಕಳರೂ ಒಬ್ಬರು. ಅವರು ಸುಮ್ಮನೇ ಕೂರುವವರಲ್ಲ, ಅದರ ಅಗತ್ಯವೂ ಇಲ್ಲ, ಓದು ಬರಹದ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡ ಫಲವೋ ಏನೋ ನೆಲದಲ್ಲಿ ಕಾಣುವ ಹೊಸತನ ಅವರ ಚಿಂತನೆಯಲ್ಲೂ ಕಾಣಿಸುತ್ತದೆ. ಈ ಕೃತಿಯಲ್ಲೂ ಅಂಥ ಒಳನೋಟಗಳಿವೆ, ಅವರು ನಿರಂತರ ಅಧ್ಯಯನಶೀಲರಾದ ಕಾರಣ ಹತ್ತು ಹಲವು ಚಿಂತನೆಗಳ ಪ್ರಭಾವ ಇಲ್ಲಿ ಕಾಣಿಸುತ್ತದೆ. ಇಂಥ ಪ್ರಭಾವಗಳಲ್ಲಿ ಭಾರತೀಯತೆಯ ಹುಡುಕಾಟದಲ್ಲಿ ದಶಕಗಳ ಶ್ರಮ ಸಾಧಿಸಿರುವ ಎಸ್ ಎನ್ ಬಾಲಗಂಗಾಧರ ಅವರ ಚಿಂತನೆಯೂ ಸೇರಿದೆ. ಸ್ಥಾಪಿತ ಚಿಂತನೆಗಳಿಗೆ ವಿರುದ್ಧವಾದ ಮಾತುಗಳಿಗೆ ಈ ಆಧುನಿಕ ಮುಕ್ತ ಸಮಾಜದ ಸಂದರ್ಭದಲ್ಲಿ ಬಹುಶಃ ಬಾಲಗಂಗಾಧರ ಅವರಷ್ಟು ಬಹಿಷ್ಕಾರಕ್ಕೆ ಒಳಗಾದವರು ಇರಲಿಕ್ಕಿಲ್ಲ, ದುರಂತವೆAದರೆ ಬಾಲಗಂಗಾಧರ ಅವರ ವಾದಕ್ಕೆ ಕೆಟ್ಟ ಮಾದರಿಯ ದೈಹಿಕ ಆಕ್ರಮಣ ಮಾಡುವಂಥ ಪ್ರತಿರೋಧ ಬಿಟ್ಟರೆ ತಾತ್ವಿಕವಾಗಿ ಸೈ ಅನಿಸುವಂಥ ವಾದಗಳೇ ಹುಟ್ಟುತ್ತಿಲ್ಲ ಎಂಬುದು ಅವರ ಸಂಶೋಧನೆಯ ಗಟ್ಟಿತನ ತೋರಿಸುತ್ತದೆ, ಯಾರಾದರೂ ಇಂದು ಭಾರತದಲ್ಲಿ ಹೊಸರೀತಿಯಲ್ಲಿ ಏನಾದರೂ ಹೇಳಬೇಕೆಂದಿದ್ದರೆ ಅದಕ್ಕೆ ಬಾಲು ಅವರ ಚಿಂತನೆಯ ದಾಟಿ ಅಗತ್ಯವಾಗುತ್ತದೆ. ಅಥವಾ ಬಾಲು ಅವರಂತೆ ಯೋಚಿಸಲು ಕಲಿಯಬೇಕಾಗುತ್ತದೆ, ಏಕೆಂದರೆ ಅನ್ಯ ಪ್ರಭಾವದಿಂದ ಬಿಡಿಸಿಕೊಂಡು ಸ್ವಂತ ಯೋಚನೆ ಮಾಡುವ ರೀತಿಯನ್ನು ಅವರ ಕಾಣಿಸುತ್ತಾರೆ, ಈ ಕೃತಿಯಲ್ಲೂ ಹೊಸ ಒಳನೋಟಗಳು ಕಾಣಿಸುತ್ತವೆ, ಒಂದು ಸಣ್ಣ ನಿದರ್ಶನ - ಪಾಶ್ಚಾತ್ಯರು ಭಾರತಕ್ಕೆ ಬಂದಮೇಲೆ ನಮ್ಮ ಸಮಾಹವನ್ನು ವ್ಯವಸ್ಥಿತವಾಗಿ ಒಡೆಯುವ ಕೆಲಸ ನಡೆಯುತ್ತ ಬಂದಿತು. ಇದರ ಫಲವಾಗಿ ಮೇಲು ಕೀಳು ಇತ್ಯಾದಿ ಭಾವನೆಗಳನ್ನು ಬಿತ್ತಲಾಯಿತು. ಇಲ್ಲಿಯೂ ಎಲ್ಲದಕ್ಕೂ ವೈದಿಕ ಪ್ರಭಾವ ಕಾರಣವೆನ್ನಲಾಗುತ್ತದೆ. ಆದರೆ ಸಂದರ್ಭ ಬಂದಾಗ ಜೈನ ಸಂಪ್ರದಾಯ ವೈದಿಕಕ್ಕಿಂತ ಹಳೆಯದು ಅನ್ನುತ್ತಾ ಇದರಲ್ಲಿ ಸಮಾನತೆ ಯನ್ನು ಮೊದಲು ಸಾಧಿಸಲಾಗಿದೆ ಎಂದು ಹೇಳಲಾಗುತ್ತದೆ, ನಿಜ ಸಂಗಿ ಎಂದರೆ ಆದಿಪುರಾಣದಂಥ ಕೃತಿಯಲ್ಲಿ ಸಮಾಜವನ್ನು ವೈಶ್ಯ ಶೂದ್ರ, ಸ್ಪೃಶ್ಯ, ಅಸ್ಪೃಶ್ಯ ಎಂದು ವಿಭಜಿಸಿದವನು ವೃಷಭನಾಥ ಅನ್ನಲಾಗುತ್ತದೆಯಾದರೂ ಇಂಥ ಸಂದರ್ಭದಲ್ಲಿ ಮನುಸ್ಮೃತಿ, ವೇದಗಳನ್ನೇ ಇದಕ್ಕೆ ಕಾರಣ ಮಾಡಲಾಗುತ್ತದೆಯೇ ವಿನಾ ಸತ್ಯವನ್ನು ಮುಂದೆ ಮಾಡುವ ಪ್ರವೃತ್ತಿ ಕಾಣಿಸುವುದಿಲ್ಲ ಎಂಬ ಸಂಗತಿಯ ಕಡೆಗೆ ಗಮನ ಸೆಳೆಯುತ್ತಾರೆ (ಪು. ೨೧). ಅದನ್ನು ವಿಸ್ತರಿಸುವ ಸಾಧ್ಯತೆಯೂ ಇದೆ, ಇದೇ ಮನೋಧರ್ಮ ವಚನ ಸಾಹಿತ್ಯಗಳ ಸಂದರ್ಭದಲ್ಲೂ ಕಾಣಿಸುತ್ತದೆ, ವಚನಗಳು ವೇದ ವಿರೋಧಿ ಆಗಿವೆ ಎಂಬ ಮಾತಿಗೆ ವಿರುದ್ಧ ಸಾಕ್ಷಿಗಳು ವಚನಗಳಲ್ಲೇ ಸಿಗುತ್ತವೆ, ಆದರೆ ಅವುಗಳ ಬಗ್ಗೆ ಯಾರೂ ಮಾತನಾಡುವುದಿಲ್ಲ, ಇಂಥ ಮನೋಧರ್ಮ ನಮಗೆ ಬಳುವಳಿಯಾಗಿ ಬಂದಿದ್ದು ವಸಾಹತುಗಳಿಂದ. ಇಂಥ ಹತ್ತು ಹಲವು ಸಂಗತಿಗಳ ಕಡೆಗೆ ನಮ್ಮ ಗಮನಹರಿಯುವಂತೆ ಮಾಡುತ್ತದೆ ಈ ಕೃತಿ, ಇಷ್ಟಲ್ಲದೇ ಹಲವರು ಪ್ರತಿಪಾದಿಸುವಂತೆ ರಾಷ್ಟ್ರದ ಕುರಿತ ಮನೋಭಾವನೆ ನಮಗೆ ಬಂದಿದ್ದು ವಸಾಹತುಗಳಿಂದ ಎಂಬ ಮಾತಿಗೆ ಭಿನ್ನವಾಗಿ ಅಜಕ್ಕಳರು ಇಲ್ಲಿ ಇಲ್ಲ, ನಮ್ಮ ರಾಷ್ಟ್ರ ಅಥವಾ ದೇಶ ಕುರಿತ ಭಾವನೆ ಹಾಗೂ ದೃಷ್ಟಿಕೋನ ಪಾಶ್ಚಾತ್ಯರಿಗಿಂತಲೂ ಭಿನ್ನ ಹಾಗೂ ವಿಸ್ತೃತ ಎಂದು ತೋರಿಸಿಕೊಡುತ್ತ ಇದು ಯಾವಾಗ ಅಪಾಯಕಾರಿ ಆಗುತ್ತದೆ, ಇಲ್ಲವಾದಲ್ಲಿ ಇದು ಸಮಾಜಕ್ಕೆ ಎಷ್ಟು ಉಪಯುಕ್ತ ಎಂಬುದನ್ನು ಮನಗಾಣಿಸುತ್ತಾರೆ, ಜೊತೆಗೆ ಸಾವರ್ಕರ್ ಅವರಂಥವರು ಇಂದಿನ ಜನಕ್ಕೆ ತಪ್ಪಾಗಿ ಏಕೆ ಕಾಣುತ್ತಾರೆ ಎಂಬುದನ್ನೂ ನಿರುಮ್ಮಳವಾಗಿ ಸಾವಧಾನದಿಂದ ಅರ್ಥ ಮಾಡಿಸುತ್ತಾರೆ. ನಮ್ಮ ವಿಶೇಷ ಇರುವುದೇ ಬಹುತ್ವದಲ್ಲಿ ಯಾವ ಸಂದರ್ಭದಲ್ಲೂ ನಮ್ಮ ಸಮಾಜ ಅದನ್ನು ಬಿಟ್ಟಿಲ್ಲ, ಎಲ್ಲವನ್ನೂ ಏಕರೂಪ ಮಾಡಲು ಹೊರಟಿದ್ದು ವಸಾಹತು ದೃಷ್ಟಿ, ಭಾರತದ ದೃಷ್ಟಿಯೇ ಬಹುಯ್ವ, ಅದರಲ್ಲೇ ಸಹಬಾಳ್ವೆಯ ಮೂಲದ್ರವ್ಯವಿದೆ, ಇದನ್ನು ನಾವು ಬೇರೆ ಕಡೆಯಿಂದ ಎರವಲು ಪಡೆಯಬೇಕಿಲ್ಲ, ನಮ್ಮ ರಾಷ್ಟçಧರ್ಮವೇ ಬೇರೆ, ನಾವೇ ಬೇರೆ ಅನ್ನುವುದನ್ನು ಸರಳವೂ ಸ್ಪಷ್ಟವೂ ಆದ ರೀತಿಯಲ್ಲಿ ಅರ್ಥ ಮಾಡಿಸುವ ಕೃತಿ ಇದು, ವಿಶೇಷ ಅಂದರೆ ನೂರಾರು ಕಡೆ ಹರಡಿಕೊಂಡಿರುವ ಇಂಥ ಗಂಭೀರ ವಿಷಯವನ್ನು ಕಿರು ಕೈಪಿಡಿ ರೂಪದ ಈ ಕೃತಿಯಲ್ಲಿ ಗೊಂದಲಕ್ಕೆಡೆ ಇಲ್ಲದಂತೆ ಹಣೆದುಕೊಟ್ಟಿದ್ದಕ್ಕೆ ನಾವೆಲ್ಲ ಅಜಕ್ಕಳರಿಗೆ ಆಭಾರಿಗಳಾಗಿರಬೇಕಿದೆ, ಜೊತೆಗೆ ಮಾನವಿಕದಲ್ಲಿ ಉನ್ನತ ವ್ಯಾಸಂಗ ಹಾಗೂ ಸಂಶೋಧನೆ ಮಾಡಲು ಬಯಸುವವರಿಗೆ ಕೈಮರವಾಗಿಯೂ ಕೆಲಸ ಮಾಡುವ ಕಾರಣಕ್ಕೆ ಇದರ ಹಿರಿಮೆ ಮತ್ತಷ್ಟು ಚ್ಚಿದೆ, ಇಂಥ ಕೃತಿಯನ್ನು ಸಾಮಾನ್ಯವಾಗಿ ಶೈಕ್ಷಣಿಕ ವಲಯ ಹಾಗೂ ತಥಾ ಕಥಿತ ಬೌದ್ಧಿಕ ವಲಯ ನಿರಾಕರಿಸುವ ಸಾಧ್ಯತೆ ಇರುವ ಕಾರಣಕ್ಕೆ ಪ್ರಕಟಣೆ ಮಾಡಲು ಯಾರೂ ಮುಂದಾಗುವುದಿಲ್ಲ, ಅಂಥಾದ್ರಲ್ಲಿ ಬೆಂಗಳೂರಿನ ಅಯೋಧ್ಯಾ ಪ್ರಕಾಶನ ಇದಕ್ಕೆ ಮುಂದಾಗಿ ಸುಂದರವಾಗಿ ಪ್ರಕಟಿಸಿ ಮುಕ್ತ ಚರ್ಚೆಗೆ ವೇದಿಕೆ ಹಾಕಿಕೊಟ್ಟಿದೆ, ಈ ಕೃತಿ ಆನ್ ಲೈನ್ ಮಾರುಕಟ್ಟೆಯಲ್ಲೂ ಸುಲಭದಲ್ಲಿ ಸಿಗುವಂತಾಗಲಿ, ಗಂಭೀರ ಸಾಹಿತ್ಯ ಪ್ರೇಮಿಗಳು ಇದಕ್ಕೆ ಮುಂದಾಗಬೇಕಿದೆ, ಇನ್ನು ಘೋಡಾ ಹೈ, ಮೈದಾನ್ ಹೈ ಅನ್ನಬೇಕು ಅಷ್ಟೇ, ಇಂಥ ಸಾವಿರ ಕೃತಿಗಳು ಬರಲಿ, ಬರಡಾಗಿ ಸತ್ವ ಕಳೆದುಕೊಂಡು ಕೊಳೆತ ನೀರಾದ ನಮ್ಮ ಮಾನವಿಕ ವಲಯ ಆರೋಗ್ಯಕರ ಚರ್ಚೆಗೆ ಮುಂದಾಗಿ ಮರುಜೀವ ಪಡೆಯಲಿ, ಇಷ್ಠೇ ಹೇಳಬಹುದು ಸದ್ಯಕ್ಕೆ.
ಕೃತಿ ವಿವರ -
ರಾಷ್ಟ್ರಧರ್ಮ- ಇದು ಬೌದ್ಧಿಕ ಆಯುಧ
ಲೇಖಕರು - ಅಜಕ್ಕಳ ಗಿರೀಶ ಭಟ್
ಪ್ರಕಟಣೆ - ಯೋಧ್ಯಾ ಪಬ್ಲಿ ಕೇಶನ್ಸ್, ಬನಶಂಕರಿ, ಬೆಂಗಳೂರು, ಬೆಲೆ- ೧೨೦ ರೂ, ಪುಟಗಳು- ೧೦೦, ಐ ಎಸ್ ಬಿಎಬ್ ಇದೆ, ಸಂಪರ್ಕ- ೯೬೨೦೯೧೬೯೯೬

No comments:
Post a Comment