Saturday, 31 May 2025

ಆರ್ಥಿಕವಾಗಿ ನಾಲ್ಕೆನೆ ಮೆಟ್ಟಿಲಲ್ಲಿ ಭಾರತ


ಈಗ ಜಾಗತಿಕ ಆರ್ಥಿಕ ವರದಿ ಬಿಡುಗಡೆಯಾಗಿದ್ದು, ಪ್ರಪಂಚದಲ್ಲಿ ಭಾರತ ನಾಲ್ಕನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ, ಇದು ಕೂಡ ಹತ್ತು ವರ್ಷಗಳ ಅವಧಿಯಲ್ಲಿ. ಇದಕ್ಕಾಗಿ ಮೋದಿಯವರು ರೂಪಿಸಿದ ಆರ್ಥಿಕ ಯೋಜನೆಗಳು ಮತ್ತು ಅವುಗಳ ಸಮರ್ಪಕ ಜಾರಿ ಕಾರಣ. ೨೦೧೪ರಲ್ಲಿ ಮೋದಿಯವರು ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದಲೂ ಜಾಗತಿಕ ಮಟ್ಟದಲ್ಲಿ ದೇಶವನ್ನು ಬಲಗೊಳಿಸುವ ಸಂಕಲ್ಪ ಮಾಡಿದ್ದರು, ಅವುಗಳಲ್ಲಿ ಆರ್ಥಿಕತೆ ಹಾಗೂ ಸೇನಾ ವ್ಯವಸ್ಥೆಗಳು ಮುಖ್ಯವಾಗಿದ್ದವು. ಇವೆರಡೂ ಈಗ ಸಾಧ್ಯವಾಗಿದೆ. ಅವರಿಗೆ ದೇಶದ ಬಗ್ಗೆ ಇನ್ನೂ ಅನೇಕ ಆಸೆಗಳಿವೆ. ಹಂತ ಹಂತವಾಗಿ ಅವು ಜಾರಿಗೆ ಬರುತ್ತವೆ ಎಂದು ಭಾವಿಸಬಹುದು. ಅವರ ದೃಷ್ಟಿಯಲ್ಲಿ ದೇಶದ ಆರ್ಥಿಕತೆ ಮೊದಲ ಆದ್ಯತೆ ಇತ್ತು ಇದಕ್ಕಾಗಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ ೨೬ ಯೋಜನೆಗಳನ್ನು ಹಂತಹಂತವಾಗಿ ಜಾರಿಗೆ ತಂದರು, ಹಾಗೂ ಇವೆಲ್ಲ ಒಂದಕ್ಕೊಂದು ಪೂರಕವಾಗಿದ್ದವು, ಯಾವಾಗಲೂ ಅಷ್ಟೆ, ಯಾವುದೇ ಯೋಜನೆ ಮುಂದಿನ ಯೋಜನೆಗೆ ದಾರಿ ಮಾಡಬೇಕು, ಅವು ಪೂರಕವಾಗಿರಬೇಕು. ಈ ೨೬ಯೋಜನೆಗಳು ಹಾಗೆ ಇದ್ದುದರಿಂದ ದೇಶದ ಆರ್ಥಿಕತೆ ವೇಗವಾಗಿ ಬೆಳೆಯಲು ಸಹಕಾರಿಯಾಯಿತು. ಮೊದಲು ಅವರು ಜಾರಿ ಮಾಡಿದ್ದು ಜನಧನ್ ಯೋಜನೆ, ದೇಶದ ಬಹುತೇಕ ಜನ ಬ್ಯಾಂಕ್ ನೋಡಿಯೇ ಇರಲಿಲ್ಲ, ಅವರೆಲ್ಲ ಒಂದಲ್ಲ ಒಂದು ಬ್ಯಾಂಕ್ ಖಾತೆ ಹೊಂದುವಂತೆ ಮೊದಲು ಮಾಡಲಾಯಿತು. ಇದರಿಂದ ಜನಸಾಮಾನ್ಯರಲ್ಲಿ ವ್ಯವಹಾರದ ಬಗ್ಗೆ ತಿಳಿವಳಿಕೆ ಬರುವಂತಾಯಿತು. ಇದು ಮೊದಲ ಸಡಿಪಾಯವಾಯ್ತು. ಅನಂತರ ಕೌಶಲ್ಯಕ್ಕೆ ಮಹತ್ವ ನೀಡುವ ಯೋಜನೆ ಜಾರಿಯಾಯ್ತು.ಅನಂತರ ಕ್ರಮವಾಗಿ ಆದಶ ಗ್ರಾಮ ಹಾಗೂ ಶ್ರಮೇವ ಜಯತೆ ಜಾರಿ ಆದವು, ಜೊತೆಗೆ ಆರೋಗ್ಯ ಯೋಜನೆಗಳು, ವಿಮಾ ಯೋಜನೆಗಳು ಬಂದವು, ಸ್ಮಾರ್ಟ್ ಸಿಟಿ, ಡಿಜಿಟಲ್ ಇಂಡಿಯಾ ಉಪಕ್ರಮಗಳು ಇವುಗಳಿಗೆ ನೆರವಾದವು, ಜನರಲ್ಲಿ ಸ್ವಾವಲಂಬನೆ ಹಾಗೂ ಆತ್ಮ ವಿಶ್ವಾಸ ಹೆಚ್ಚಿಸಿದವು. ಜೊತೆಗೆ ಚಿನ್ನದ ಯೋಜನೆಗಳು, ಸ್ಟಾರ್ಟ್ಅಪ್ ಜಾರಿಯಾದವು. ಮುಖ್ಯವಾಗಿ ಪಿಎಂ ಕಿಸಾನ್ ಯೋಜನೆ ಇವುಗಳಿಗೆ ಬೆನ್ನೆಲುಬಾಯಿತು.  

ಇದು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವಾರ್ಷಿಕ ಹಣಕಾಸಿನ ಬಲ ನೀಡಿತು, ರೈತರಿಗೆ ಬಲ ಬರುತ್ತಿದ್ದಂತೆ ಅವರು ತಮ್ಮ ಉತ್ಪನ್ನಗಳ ಮೌಲ್ಯ ವರ್ಧಿತ ವ್ಯವಹಾರಕ್ಕೆ ತೊಡಗಿದರು. ದೇಶದ ಜಿಡಿಪಿ ಏರತೊಡಗಿತು, ಕೊರೊನಾ ಆರ್ಭಟ ದೇಶದಾರ್ಥಿಕ ಬೆಳವಣಿಗೆಗೆ ಹೊಡೆತಕೊಟ್ಟರೂ ಬೆಳವಣಿಗೆ ನಿಲ್ಲಲಿಲ್ಲ. ಜೊತೆಗೆ ಗ್ರಾಮೋದಯ ಯೋಜನೆ ಇದಕ್ಕೆ ಮತ್ತಷ್ಟು ಬಲ ನೀಡಿತು. ಎಲ್ಲಕ್ಕಿಂತ ಮುಖ್ಯವಾಗಿ ನೈಸರ್ಗಿಕ ವಿಕೋಪದಿಂದ ಕಷ್ಟಕ್ಕೆ ಒಳಗಾಗುವ ರೈತರಿಗೆ ಕೃಷಿ ಸಂಕಷ್ಟ ಯೋಜನೆ ರೈತರ ಕೈ ಹಿಡಿಯಿತು, ನಿಜವಾಗಿ ದೇಶದ ಆರ್ಥಿಕತೆಗೆ ಶಕ್ತಿ ಕೊಟ್ಟಿದ್ದು ಕೃಷಿಗೆ ಕೊಟ್ಟ ಆದ್ಯತೆಯೇ ಆಗಿದೆ. ಯಾವಾಗಲೂ ಕೃಷಿ ಬೆಳವಣಿಗೆ ಹೊಂದಿದರೆ ದೇಶ ಸಹಜವಾಗಿ ಬೆಳೆಯುತ್ತದೆ. ಕೃಷಿ ನಿರ್ಲಕ್ಷಿಸಿದರೆ ಬೇರೆ ಏನೇ ಮಾಡಿದರೂ ಉಪಯೋಗವಿಲ್ಲ, ಕುಮಾರವ್ಯಾಸ ಹೇಳುವಂತೆ ಕೃಷಿ ವಿಹೀನವಾದರೆ ಅಂಥ ದೇಶಕ್ಕೆ ಉಳಿಗಾಲವಿಲ್ಲ. ಅದು ಪಾಕಿಸ್ತಾನದಂತೆ ಆಗುತ್ತದೆ,

ಭಾರತದ ಆರ್ಥಿಕ ಬೆಳವಣಿಗೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ ದೇಶಗಳನ್ನು ಅಚ್ಚರಿಗೆ ದೂಡಿದೆ. ಇದನ್ನು ಅರಿಯಲು ಪ್ರಮುಖ ದೇಶಗಳೊಂದಿಗೆ ತುಲನೆ ಮಾಡಬಹುದು. ಸದ್ಯ ಭಾರತ ಅಮೆರಿಕ, ಜರ್ಮನಿ ಹಾಗೂ ಚೀನಾಗಳ ಅನಂತರದ ನಾಲ್ಕನೆಯ ಸ್ಥಾನ ಪಡೆದಿದೆ.ವೆ.೧೯೯೦ ರಿಂದ ೨೦೨೩ರ ಅವಧಿಯಲ್ಲಿ ಈ ದೇಶಗಳ  ಸರಾಸರಿ ವಾರ್ಷಿಕ ಬೆಳವಣಿಗೆ ದರ  ಕ್ರಮವಾಗಿ ಹೀಗಿದೆ-ಅಮೆರಿಕ ಶೇ. ೩.೮,ಜರ್ಮನಿ ಶೇ,೩.೯,ಜಪಾನ್ ಶೇ.೨.೮, ಆದರೆ ಭಾರತದ ಬೆಳವಣಿಗೆ ದರ ಶೇ.೬.೭ ರಷ್ಟಿದೆ ಎಂದು ಐಎಂಎಫ್ ಹೇಳಿದೆ, ಇದನ್ನು ನಮ್ಮ ದೇಶದ ನೀತಿ ಆಯೋಗ ದೃಢೀಕರಿಸಿದೆ. ದೇಶದಲ್ಲಿ ಆಮದು ಕಡಿಮೆಯಾಗಿ ರಫ್ತು ಹೆಚ್ಚಾದುದು, ಬಹುತೇಕ ಸಾಮಗ್ರಿಗಳ ತಯಾರಿಕೆ ದೇಶದಲ್ಲೇ ಉತ್ಪಾದನೆ ಆಗುವಂತಾದುದು ಇದಕ್ಕೆ ಪ್ರಮುಖ ಕಾರಣ. ಈ ಮೊದಲು ಸಣ್ಣಪುಟ್ಟ ವಸ್ತುಗಳು ಕೂಡ ಆಮದಾಗುತ್ತಿದ್ದವು, ಎಲ್ಲಿಯವರೆಗೆಂದರೆ ಹಲ್ಲಿಗೆ ಅಂಟಿದ ಕಸ ತೆಗೆಯುವ ಟೂತ್ಪಿಕ್ ಕೂಡ ಆಮದಾಗುತ್ತಿತ್ತು. ಜೊತೆಗೆ ಇಸ್ರೋದ ಸಾಧನೆ ಇದರಲ್ಲಿ ಕಡಿಮೆಯಲ್ಲ, ಅದು ಯಶಸ್ವಿಯಾಗಿ ಉಪಗ್ರಹ ಉಡಾವಣೆ ಮಾಡಿ ಜಗತ್ತಿನ ಹಲವಾರು ದೇಶಗಳು ಇಸ್ರೋ ಮೂಲಕ ತಮ್ಮ ಉಪಗ್ರಹ ಉಡಾವಣೆ ಮಾಡಲು ಕೋಟ್ಯಂತರ ಡಾಲರ್ ಗೌರವ ಧನ ನೀಡತೊಡಗಿದ್ದು ದೇಶದ ಆರ್ಥಿಕ ಬೆಳವಣಿಗೆಗೆ ದೊಡ್ಡ ಕೊಡುಗೆ ನೀಡಿತು, ಇದು ಇನ್ನೂ ಬೆಳೆಯುತ್ತಿದೆ. ಇವೆಲ್ಲದರ ಆಧಾರದಲ್ಲಿ ಮಾನ್ಯ ಪ್ರಧಾನಿಗಳು ೨೦೪೭ರ ವೇಳೆಗೆ ನಮ್ಮ ದೇಶ ಅಭಿವೃದ್ಧಿ ಸಾಧಿಸಿದ ದೇಶವಾಗಲಿದೆ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಸದ್ಯ ನಮ್ಮ ದೇಶದಲ್ಲಿ ಸಣ್ಣ ಕೈಗಾರಿಕೆಗಳಿಗೆ ಹಾಗೂ ಗ್ರಾಮೀಣ ಮೌಲ್ಯ ವರ್ಧಿತ ಉತ್ಪನ್ನಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುತ್ತಿರುವುದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗವಕಾಶಗಳು ಹೆಚ್ಚಿ ದೇಶದ ಆರ್ಥಿಕತೆ ಮತ್ತಷ್ಟು ವೇಗ ಪಡೆಯುವುದು ನಿಶ್ಚಿತ ಅನಿಸುತ್ತದೆ. ಸಾಮಾನ್ಯ ಜನರಿಗೆ ಖರೀದಿ ಶಕ್ತಿ ಹೆಚ್ಚುವುದನ್ನು ಆಧರಿಸಿ ಇಂಥ ಶ್ರೇಣಿಯನ್ನು ನೀಡಲಾಗುತ್ತದೆ. ಉದ್ಯೋಗವಕಾಸ ಹಾಗೂ ಹಣದ ಓಡಾಟ ಜನರ ಕೈಯಲ್ಲಿ ಹೆಚ್ಚಿದಾಗ ಸ್ಥಾನ ಸಹಜವಾಗಿ ಏರುತ್ತದೆ. ನಮ್ಮ ದೇಶ ಈ ನಿಟ್ಟಿನಲ್ಲಿ ವೇಗವಾಗಿ ಸಾಗುತ್ತಿದೆ.





No comments:

Post a Comment