ಹಣ್ಣುಗಳು ಮನುಷ್ಯನ ಆರೋಗ್ಯಕ್ಕೆ ಒಳ್ಳೆಯದು ಅನ್ನುತ್ತಾರೆ, ಆದರೆ ಯಾವ ಹಣ್ಣನ್ನು ಯಾವಾಗ ತಿಂದರೆ ಒಳ್ಳೆಯದು ಎಂದು ನಮ್ಮ ಹಿರಿಯರು ಅನುಭವದಿಂದ ಕಂಡು ಹೇಳಿದ್ದಾರೆ, ಗಾದೆಗಳಿವೆ, ಉಂಡು ಮಾವು ತಿನ್ನು ಹಸಿದು ಹಲಸು ತಿನ್ನು ಎಂಬ ಗಾದೆ ಇದೆ, ‘ಯೇ’ ಯಾರು ಹೇಳಿದ್ದಾರೆ ಅನ್ನುತ್ತಾ ಇದನ್ನು ಉಲ್ಟಾ ಮಾಡಿ ನೋಡಿ, ನಿಮ್ಮ ಆರೋಗ್ಯ ದಿನ ಒಪ್ಪತ್ತಿನಲ್ಲಿ ಕೆಡದಿದ್ದರೆ ಹೇಳಿ. ಮಾವಿನ ಆರೋಗ್ಯ ಕಾರಣಗಳು ಹಲವಾರಿವೆ ಅನ್ನುತ್ತಾರೆ ವೈದ್ಯರು
ನಿಜ, ನಮ್ಮ ದೇಶದಲ್ಲಿ ಭೂಪ್ರದೇಶ ಹೇಗೆ ವೈವಿಧ್ಯಮಯವಾಗಿದೆಯೋ ಹಾಗೆ ಇಲ್ಲಿನ ಆಹಾರ ಕೂಡ. ಒಂದೊಂದು ಭಾಗದಲ್ಲಿ ಒಂದೊಂದು ಆಹಾರ ಗುರುತಿಸಿಕೊಂಡಿದೆ, ಸಸ್ಯಾಹಾರ, ಮಾಂಸಾಹಾರ ಎಂದಲ್ಲ, ಸಾಮಾನ್ಯವಾಗಿ ಆಹಾರದ ವಿಷಯ ಬಂದಾಗ ಸಸ್ಯಾಹಾರ ಮತ್ತು ಮಾಂಸಾಹಾರವೆಂದು ಯಾವುದು ಶ್ರೇಷ್ಠವೆಂದು ಕೆಲಸಕ್ಕೆ ಬಾರದ ಗದ್ದಲ ಮಾಡಲಾಗುತ್ತದೆ, ಆದರೆ ಆಹಾರ ಎಂದರೆ ವಾಹನಕ್ಕೆ ಇಂಧನ ಇದ್ದಂತೆ ಮಾತ್ರ ಎಂಬುದನ್ನು ನಾವು ಮರೆಯುತ್ತೇವೆ. ಯಾವ ವಾಹನಕ್ಕೆ ಯಾವ ಇಂಧನ ಸೂಕ್ತವೋ ಅದನ್ನು ಬಳಸಿದರೆ ಆಯುತು, ಈಗ ಇಂಧನಗಳಲ್ಲಿ ಪೆಟ್ರೋಲ್ ಶ್ರೇಷ್ಠವೋ ಡೀಸಲ್ಲೋ ಎಂದು ಒಣ ಚರ್ಚೆ ಮಾಡುತ್ತ ನಾವು ಎಂದೂ ಕೂರುವುದಿಲ್ಲ,ಆಹಾರದಲ್ಲೂ ಹೀಗೆ ಇರಲು ಏನು ಕಷ್ಟ? ನಿಮ್ಮ ಬಳಿ ಪೆಟ್ರೋಲ್ ವಾಹನವಿದೆ ಅಂದುಕೊಳ್ಳಿ, ಅದು ಡೀಸಲ್ ನಲ್ಲೂ ಸೀಮೆ ಎಣ್ಣೆಯಲ್ಲೂ ಓಡಬಹುದು, ಆದರೆ ಅದರಿಂದ ವಾಹನದ ದಕ್ಷತೆ ಕಡಿಮೆ ಆಗುತ್ತದೆ ಎಂಬುದನ್ನು ಗಮನಿಸಬೇಕು, ಆಹಾರ ಸೇವಿಸುವ ಎಲ್ಲ ಜೀವಿಗಳ ದೇಹದ ಗುಣ ಲಕ್ಷಣದ ಆಧಾರದಲ್ಲಿ ಅದರ ಆಹಾರ ಏನು ಯಾವುದು ಸರಿ ಎಂದು ನಿರ್ಧಾರವಾಗುತ್ತದೆ. ಆಹಾರವನ್ನು ಹೆಬ್ಬಾವೂ ಸೇವಿಸುತ್ತದೆ, ನಾವೂ ಸೇವಿಸುತ್ತೇವೆ, ಆದರೆ ಎರಡರ ಜೀರ್ಣ ವ್ಯವಸ್ಥೆ ಬೇರೆಯಾದ ಕಾರಣ ಎರಡೂ ಆಹಾರ ಸೇವಿಸುವ ಕ್ರಮ ಬೇರೆ, ಹೆಬ್ಬಾವಿನಂತೆ ನಾವು ಆಹಾರ ಸ್ವೀಕರಿಸಿದರೆ ನಾವು ಬದುಕಲು ಸಾಧ್ಯವಿಲ್ಲ. ನಮ್ಮ ಜೀರ್ಣ ವ್ಯವಸ್ಥೆ ಹಣ್ಣು, ತರಕಾರಿ ಹಾಗೂ ಸುಲಭವಾಗಿ ಜೀರ್ಣವಾಗುವ ನಾರಿನ ಆಹಾರಕ್ಕೆ ಹೇಳಿ ಮಾಡಿಸಿದೆ ಎಂದು ವೈದ್ಯ ವಿಜ್ಞಾನ ಹೇಳುತ್ತದೆ, ಬೇರೆ ತಿನ್ನಬಾರದೆಂದಲ್ಲ, ಆದರೆ ಅದರ ಪರಿಣಾಮಗಳು ನಮ್ಮ ದೇಹದ ಮತ್ತು ಮನಸ್ಸಿನ ಮೇಲೆ ಬೇರೆಯಾಗುತ್ತದೆ, ಇದನ್ನು ತಿಂದು ಅನುಭವಿಸಿ ತಿಳಿಯಬೇಕು, ನಾರಿನಂಶವುಳ್ಳ, ಸುಲಭವಾಗಿ ಜೀರ್ಣವಾಗುವ ಹಗುರ ಆಹಾರ ಸೇವಿಸಿದಾಗ ನಮ್ಮ ದೇಹ ಹೇಗೆ ಪ್ರತಿಕ್ರಿಯಿಸುತ್ತದೆ, ಜಡವಾದ ಘನ ಆಹಾರ ಸ್ವೀಕರಿಸಿದಾಗ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಆಧಾರದ ಮೇಲೆ ನಾವು ನಮ್ಮ ದೇಹಕ್ಕೆ ಯಾವ ಆಹಾರ ಸೂಕ್ತ ಎಂದು ಕಂಡುಕೊAಡರೆ ಕತೆ ಮುಗಿಯಿತು. ಇಲ್ಲ, ಸಸ್ತಾಹಾರವೇ ಶ್ರೇಷ್ಠ ಎಂದು ಕೆಲವರು, ಇಲ್ಲ ಮಾಂಸಾಹಾರ ಶ್ರೇಷ್ಠ ಸಸ್ಯಾಹಾರ ಅಂದರೆ ಪುರೋಹಿತಶಾಹಿ ಉತ್ಯಾದಿ ಎಂದು ವಿರೋಧಗಳು ಕಚ್ಚಾಡಿ ಆನಂದಿಸುತ್ತಾರೆ, ಇದರ ಬದಲು ಅವರವರಿಗೆ ಇಷ್ಟವಾದ ಆಹಾರ ತಿಂದು ಸುಖವಾಗಿರಬಾರದಾ? ಆದರೆ ಹಣ್ಣುಗಳ ವಿಷಯ ಹೀಗೆ ಸಸ್ಯಾಹಾರ, ಮಾಂಸಾಹಾರ ಎಂದಿಲ್ಲ, ಇಲ್ಲಿರುವುದು ಕಾಲದ ವಿಷಯ ಮಾತ್ರ, ಯಾವ ಕಾಲದಲ್ಲಿ ಪ್ರಕೃತಿಯಲ್ಲಿ ಯಾವ ತಿನ್ನಬಲ್ಲ ಹಣ್ಣು ಸಿಗುತ್ತದೋ ಅದನ್ನು ಆಗ ಸುಮ್ಮನೇ ಸೇವಿಸಬೇಕು. ಅಕಾಲದಲ್ಲಿ ಬಾಯಿ ಚಪಲಕ್ಕಾಗಿ ಕೃತಕ ರೀತಿಯಲ್ಲಿ ಬೆಳೆಸಿ ನಿಸರ್ಗ ನಿಯಮ ವಿರುದ್ಧ ಹಣ್ಣು ಸೇವನೆ ಒಳಿತಲ್ಲ, ಇಷ್ಟೇ ಇಲ್ಲಿರುವುದು. ಈಗೀಗ ವಷಧವಿಡೀ ಹಲಸಿನ ಹಣ್ಣು ಸಿಗುವ ಸಂಶೋಧನೆ ಮಾಡಿ ಯಶಸ್ಸು ಕಾಣಲಾಗಿದೆ, ಆದರೆ ಹಲಸಿನ ನಿಜವಾದ ಕಾಲ ಮುಂಗಾರಿನ ವೇಳೆ. ಅದನ್ನು ಬಾಯಿ ಚಪಲಕ್ಕೆ ಚಳಿಗಾಲದಲ್ಲಿ ತಿಂದರೆ ಜೀರ್ಣ ಕ್ರಿಯೆ ಕೆಡುವುದು ನಿಜ. ಸಹಜವಾಗಿ ಕಾಲಕಾಲಕ್ಕೆ ಕಭಿಸುವ ಕಾಡು ಹಣ್ಣುಗಳನ್ನು ಎಷ್ಟು ಬೇಕಾದರೂ ತಿನ್ನಬಹುದು, ಈಗ ಕಾಡೂ ಇಲ್ಲ, ಇರುವಲ್ಲಿ ಸಿಗುವ ಹಣ್ಣುಗಳ ಪರಿಚಯ ಇರುವವರೂ ವಿರಳ. ಹೀಗಿರುವಾಗ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳನ್ನೇ ನೆಚ್ಚಬೇಕು, ಆದರೆ ವ್ಯಾಪಾರದ ಆಸೆಗೆ ಮಾರುಕಟ್ಟೆ ಏನೇನೋ ಅಡ್ಡ ಮಾರ್ಗ ಹಿಡಿದು ಮೋಸ ಮಾಡಿ ಆರೋಗ್ಯ ಕೆಡಿಸುತ್ತದೆ, ಇದರ ಬಗ್ಗೆ ಎಚ್ಚರ ಅಗತ್ಯ, ನಾನು ಮಲೆನಾಡಿನಿಂದ ಬೆಂಗಳೂರಿಗೆ ಬಂದ ಹೊಸದರಲ್ಲಿ ಒಂದೆರಡು ಬಾರಿ ಮಾತ್ರ ಗೇರು ಹಣ್ಣುಗಳನ್ನು ನೋಡಿ ಖರೀದಿ ಮಾಡಿದ್ದೆ, ಆಮೇಲೆ ಅದನ್ನು ಎಲ್ಲಿಯೂ ಮಾರುವುದನ್ನು ಕಂಡಿಲ್ಲ, ಇದರ ಕತೆಯೇ ಹೀಗಾದರೆ ಇನ್ನು ಗುಡ್ಡೆ ಕೇರು, ಮುಳ್ಳುಹಣ್ಣುಗಳಂಥ ಹಣ್ಣುಗಳ ಕತೆಯನ್ನು ಹೇಳುವುದೇ ಬೇಡ. ಇನ್ನೂ ನೂರಾರು ಬಗೆಯ ಕಾಡು ಹಣ್ಣುಗಳಿದ್ದು ಅವು ಆಯಾ ಕಾಲಕ್ಕೆ ನಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಿ ಆರೋಗ್ಯ ಕಾಪಾಡುತ್ತದೆ, ಇವುಗಳ ಬಗ್ಗೆ ನಮ್ಮ ತಿಳಿವಳಿಕೆ ಬಹಳ ಕಡಿಮೆ. ಆಧುನುಕ ಶಿಕ್ಷಣ ಕೂಡ ಈ ವಿಷಯವನ್ನು ಕಡೆಗಣಿಸುತ್ತದೆ, ಇದು ನಮ್ಮ ದುರಂತ ಮಾತ್ರವಲ್ಲ, ನಿಸರ್ಗದಿಂದ ನಾವು ದೂರವಾಗಲು ಕೂಡ ಕಾರಣ. ಇದನ್ನು ಮರಳಿ ಗಳಿಸುವ ಕೆಲಸ ಆಗಬೇಕಿದೆ.

No comments:
Post a Comment