ತೀವ್ರ ಬಡತನ ಎಂದರೆ ವಿಶ್ವಬ್ಯಾಂಕ್ ಪ್ರಕಾರ ದಿನ ನಿತ್ಯ ಒಬ್ಬ ವ್ಯಕ್ತಿಯ ದುಡಿಮೆ ೨.೧೫ ಅಮೆರಿಕನ್ ಡಾಲರ್ ಗಿಂತ ಕಡಿಮೆ ಇರುವುದಾಗಿದೆ ಅಂದರೆ ಭಾರತೀಯ ಹಣದ ರೂಪದಲ್ಲಿ ಇದು ಸುಮಾರು ೧೮೫ ರೂ ಆಗುತ್ತದೆ. ನಮ್ಮ ದೇಶದಲ್ಲಿ ದುಡಿಯುವವರು ಇದಕ್ಕಿಂತ ಕಡಿಮೆ ಸಂಪಾದನೆ ಮಾಡುವುದಿಲ್ಲ. ಏಕೆಂದರೆ ನಿತ್ಯದ ಕನಿಷ್ಠ ಕೂಲಿಯ ದರವನ್ನು ಸರ್ಕಾರ ಸುಮಾರು ೨೦೦ ರೂಗಳಷ್ಟು ಮಾಡಿದೆ, ಅಲ್ಲದೇ ಈ ದರ ಕೌಶಲ್ಯ ರಹಿತ ಹಾಗೂ ಸಹಿತ ಅನ್ನುವುದರ ಮೇಲೆ ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗುತ್ತದೆ, ಇಷ್ಟಾದರೂ ಇದು ಬಡತನ ರೇಖೆಯ ಕೆಳಗೆ ಬರುವುದಿಲ್ಲ. ಅಷ್ಟಕ್ಕೂ ಜನರು ದುಡಿದ ಹಣವನ್ನು ಖರೀದಿಸುವ ಶಕ್ತಿಯ ಆಧಾರದಲ್ಲಿ ದೇಶದ ಹಣಕಾಸಿನ ಶಕ್ತಿ ಹಾಗೂ ಜಿಡಿಪಿ ದರ ನಿಗದಿ ಆಗುವುದರಿಂದ ಜನರು ದುಡಿಯುವಂತೆ ಸರ್ಕಾರಗಳು ಉತ್ತೇಜಿಸಿದರೆ ದೇಶದ ಆರ್ಥಿಕತೆಗೆ ಬಲ ಬರುತ್ತದೆಯೇ ಹೊರತೂ ಎಲ್ಲವನ್ನೂ ಉಚಿತವಾಗಿ ಕೊಡುವುದರಿಂದ ರಾಜಕೀಯ ಮಾಡಬಹುದೇ ವಿನಾ ಮತ್ತೇನೂ ಸಾಧಿಸಲು ಸಾಧ್ಯವಿಲ್ಲ, ಏಕೆಂದರೆ ಆಗ ಜನ ಖರೀದಿಸುವ ಅಗತ್ಯವೇ ಬರುವುದಿಲ್ಲ, ದುಡಿಮೆಯ ಆಸಕ್ತಿ ಕಡಿಮೆಯಾಗಿ ಆರ್ಥಿಕತೆ ಅಧೋಗತಿಗೆ ಹೋಗುತ್ತದೆ. ಇದಕ್ಕಿರುವ ಏಕೈಕ ಮಾರ್ಗವೆಂದರೆ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡುವುದು, ಇದರಿಂದ ಗ್ರಾಮೀಣ ಜನರ ಆರ್ಥಿಕ ಸಬಲತೆ ಹೆಚ್ಚಿ ಗ್ರಾಮೋದ್ಯೋಗ ಹಾಗೂ ಉಪ ಕೈಗಾರಿಕೆಗಳು ವೃದ್ಧಯಾಗಿ ನಿರುದ್ಯೋಗ ಹೇಳ ಹೆಸರಿಲ್ಲದೇ ವೇಗವಾಗಿ ಅಭಿವೃದ್ಧಿ ಸಾಧ್ಯವಾಗುತ್ತದೆ. ರೈತರ ಸಮಸ್ಯೆಗಳಿಗೆ ರೈತರಿಗೆ ಏನು ಅಗತ್ಯ ಎಂದು ಅವರ ಅಭಿಪ್ರಾಯ ಪಡೆಯುವ ಪದ್ಧತಿಯೇ ನಮ್ಮಲ್ಲಿ ಬೆಳೆದಿಲ್ಲ, ಉಳಿದೆಲ್ಲ ಕ್ಷೇತ್ರಗಳಲ್ಲಿ ಮಾಡಿದಂತೆ ಹೆಚ್ಚೆಂದರೆ ಇಲ್ಲಿಯೂ ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಪಡೆಯಲಾಗುತ್ತದೆ, ಆದರೆ ದುರಂತವೆಂದರೆ ಅದರಲ್ಲಿ ಒಬ್ಬ ರೈತನೂ ಇರುವುದಿಲ್ಲ, ಸಮಸ್ಯೆ ಇರುವವರನ್ನು ಕೇಳಿ ಪರಿಹಾರ ಕೊಡುವ ಕನಿಷ್ಠ ವೈಜ್ಞಾನಿಕ ಅರುವೂ ಇಲ್ಲದ ಇಂಥ ಸ್ಥಿತಿಯಲ್ಲಿ ಕೃಷಿಯಲ್ಲಿ ವೈಜ್ಞಾನಿಕತೆ, ಬೆಳೆಗೆ ವೈಜ್ಞಾನಿಕ ದರ ನಿಗದಿ ಇತ್ಯಾದಿಗಳು ಸಾಧ್ಯವೇ? ಇಷ್ಟೆಲ್ಲ ಸಮಸ್ಯೆಗಳಿದ್ದರೂ ದೇಶ ಆರ್ಥಿಕತೆಯಲ್ಲಿ ಪ್ರಗತಿ ಕಾಣುತ್ತಿದೆ ಎಂಬುದು ಸಮಾಧಾನದ ಸಂಗತಿ. ಇದನ್ನು ಮತ್ತಷ್ಟು ಮುಂದೆ ಒಯ್ಯುವ ಮಾರ್ಗವನ್ನು ನಾವು ಸಮಷ್ಟಿಯಾಗಿ ಕಂಡುಕೊಳ್ಳಬೇಕಿದೆ.
ಇದೀಗ ವಿಶ್ವಬ್ಯಾಂಕ್ ಪ್ರಪಂಚದ ಬಡತನ ಪ್ರಮಾಣದ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ತೀವ್ರ ಬಡತನ ಪ್ರಮಾಣ ತೀವ್ರವಾಗಿ ಕುಸಿದಿದೆ ಎಂದು ಹೇಳಲಾಗಿದೆ. ೨೦೧೧ರಲ್ಲಿ ಶೇ. ೨೭ರಷ್ಟಿದ್ದ ಇದು ಈಗ ಶೇ. ೫.೩ರಷ್ಟಾಗಿದೆ ಎಂದು ಹೇಳಲಾಗಿದೆ. ಕೃಷಿ ಕ್ಷೇತ್ರಕ್ಕೆ ಕೊಟ್ಟ ಆದ್ಯತೆ ಹಾಗೂ ಆಹಾರ ಧಾನ್ಯಗಳ ವಿತರಣೆಯಲ್ಲಿನ ಬದಲಾವಣೆ ಇದಕ್ಕೆ ಮುಖ್ಯ ಕಾರಣವೆಂದು ಗುರುತಿಸಲಾಗಿದೆ. ಆದರೆ ಇನ್ನು ಕೂಡ ನಮ್ಮ ದೇಶದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ಹಾಗೂ ಸಮರ್ಪಕ ವಿತರಣೆ ಸಂಪೂರ್ಣ ಸರಿಯಾಗಿಲ್ಲ ಎಂಬುದನ್ನು ಯಾರಾದರೂ ಒಪ್ಪುತ್ತಾರೆ. ನಮ್ಮ ದೇಶದಲ್ಲಿ ಶೇ ೬೦ರಷ್ಟು ಭೂಮಿ ಮಳೆ ಆಧಾರಿತ ಕೃಷಿ ಮಾಡುತ್ತದೆ, ಹವಾಮಾನ ವೈಪರೀತ್ಯದಿಂದ ಯಾವಾಗಲೋ ಅಕಾಲಿಕ ಮಳೆಯಾಗುತ್ತದೆ, ಮಳೆಯ ಪ್ರಮಾಣ ಕೂಡ ರೈತನಿಗೆ ಅನಿರೀಕ್ಷಿತವಾಗುತ್ತದೆ, ನಮ್ಮ ದೇಶದ ಭೂಪ್ರದೇಶದ ವೈವಿಧ್ಯ ಹಾಗೂ ಹವಾಗುಣ ಭಿನ್ನಭಿನ್ನವಾಗಿದೆ, ಇದಕ್ಕೆ ತಕ್ಕಂತೆ ಬೆಳೆ ಕೂಡ ಭಿನ್ನ. ಬೆಳೆದ ಉತ್ಪನ್ನಗಳ ಸಮಸ್ಯೆ ಬೇರೆಯೇ ಆಗಿದೆ, ಇವುಗಳ ಸೂಕ್ತ ಸಂಗ್ರಹಣೆ ಹಾಗೂ ವಿತರಣೆ ಖಂಡಿತ ನಮ್ಮಲ್ಲಿ ಸರಿಯಾಗಿಲ್ಲ. ಟೊಮೆಟೋ ಕತೆ ನೋಡಿ ಆಗಾಗ ಇದು ಸುದ್ದಿಯಾಗುತ್ತಲೇ ಇರುತ್ತದೆ, ಒಮ್ಮೆ ವಿಪರೀತ ಉತ್ಪನ್ನದಿಂದ ಬೆಲೆ ಪಾತಾಳಕ್ಕೆ ಕುಸಿದು ದಿಢೀರನೆ ಬೆಲೆ ಗಗನಕ್ಕೇರುತ್ತದೆ, ಇದರಲ್ಲಿ ಕೃತಕ ಅಭಾವ ಸೃಷ್ಟಿಸುವ ದಲ್ಲಾಳಿಗಳ ಕೈವಾಡವೂ ಇರುತ್ತದೆ, ಇದನ್ನು ಸರಿದೂಗಿಸುವ ವ್ಯವಸ್ಥೆಯನ್ನು ಅಥವಾ ಉತ್ಪನ್ನವನ್ನು ಕೆಡದಂತೆ ಶೇಖರಿಸುವ ವ್ಯವಸ್ಥೆಯನ್ನು ಸರ್ಕಾರಗಳು ಇನ್ನೂ ರೈತರಿಗೆ ಕಾಣಿಸಿಲ್ಲ, ಇದು ಒಂದು ಕಡೆಯಾದರೆ ಬಹುತೇಕ ಬೆಳೆಗಳು ವಾರ್ಷಿಕ ಉತ್ಪನ್ನಗಳಾಗಿವೆ, ಇವುಗಳ ಉಪ ಉತ್ಪನ್ನಗಳಿಗೆ ಸದಾಕಾಲ ಬೇಡಿಕೆ ಇದ್ದರೂ ಅವುಗಳ ಲಾಭ ರೈತರಿಗೆ ದಕ್ಕುವಂತೆ ಮಾಡುವಲ್ಲಿ ಸರ್ಕಾರಗಳು ಸೋತಿವೆ. ಉದಾಹರಣೆಗೆ ಹಲಸು ನೋಡಿ. ಇದರ ಬೆಳೆದ ಕಾಯಿಯಿಂದ ತಯಾರಿಸುವ ಹಪ್ಪಳ ಹಾಗೂ ಚಿಪ್ಸ್ಗಳಿಗೆ ಬೇಡಿಕೆ ಸದಾ ಇದೆ, ಆದರೂ ಈ ಕಾಯಿಗಳ ದೀರ್ಘ ಕಾಲದ ರಕ್ಷಣೆಯ ವಿಧಾನ ಇನ್ನೂ ತಿಳಿದಿಲ್ಲ, ಬದಲಾಗಿ ಸದಾಕಾಲ ಹಲಸಿನ ಹಣ್ಣು ಕೊಡುವ ತಳಿಗಳ ಸಂಶೋಧನೆ ಮಾಡಲಾಗಿದೆ, ಆದರೆ ಎಲ್ಲ ಹಲಸುಗಳಿಂದಲೂ ಉತ್ತಮ ಗುಣಮಟ್ಟದ ಚಿಪ್ಸ್ ಅಥವಾ ಹಪ್ಪಳ ತಯಾರಿ ಸಾಧ್ಯವಿಲ್ಲ, ಹೀಗೆ ಒಂದು ಉತ್ಪನ್ನದ ಮೌಲ್ಯ ವರ್ಧಿತ ಮಾದರಿಯನ್ನು ರೈತರಿಗೆ ತೋರಿಸಿ ಆಧುನಿಕ ತಂತ್ರಜ್ಞಾನದ ನೆರವು ಅವರಿಗೆ ದೊರೆಯುವಂತೆ ಮಾಡಿದರೆ ದೇಶದ ಭವಿಷ್ಯವನ್ನು ನಮ್ಮ ರೈತರು ಖಂಡಿತ ಬದಲಾಯಿಸಬಲ್ಲರು. ಮಳೆ ಯಾವಾಗ ಅಂದಾಜು ಎಷ್ಟು ಪ್ರಮಾಣದಲ್ಲಿ ಬರಬಹುದೆಂಬ ಕನಿಷ್ಠ ತಿಳಿವಳಿಕೆನ್ನು ಕೂಡ ನಾವಿನ್ನೂ ರೈತರಿಗೆ ಮೊದಲೇ ತಿಳಿಸುವಲ್ಲಿ ಸಫಲರಾಗಿಲ್ಲ, ಬೆಳೆ ಬಿತ್ತಿ ಬೆಳೆಯುವ ಕಾಲಕ್ಕೆ ಸಮರ್ಪಕ ನೀರು ಸಿಗದೇ ಒದ್ದಾಡುವ ರೈತ ನೀರಿಗಾಗಿ ಒದಾಡಿ ಬೆಳೆ ಬೆಳೆದರೆ ಕೊಯ್ಲಿನ ವೇಳೆಗೆ ಭೀಕರ ಮಳೆಯಾಗಿ ಬೆಳೆದ ಫಸಲು ಕೈಗೆ ಬಾರದೇ ದುಪ್ಪಟ್ಟು ನಷ್ಟವಾಗುತ್ತದೆ, ಇದನ್ನು ತಪೊಪಿಸುವ ಮಾರ್ಗವಿನ್ನೂ ನಮಗೆ ತಿಳಿದಿಲ್ಲ, ಇಷ್ಟು ಸಾಧ್ಯವಾದರೆ ನಮ್ಮ ದೇಶದ ಹಣೆಬರೆಹ ಖಂಡಿತ ಬದಲಾಗುತ್ತದೆ. ಹೀಗೆ ರೈತರಿಗೆ ಅಗತ್ಯವಾದ ಬೆಳೆ ತೆಗೆಯಲು ಬೇಕಾದ , ಅದರ ಮಾರುಕಟ್ಟೆಯ ಮಾರ್ಗ ಕಾಣಿಸಿದರೆ ಗ್ರಾಮೀಣ ಭಾಗದಲ್ಲಿ ರೈತರು ಸಬಲರಾಗಿ ಉಪ ಹಾಗೂ ಗ್ರಾಮೀಣ ಕೈಗಾರಿಕೆಗಳು ಬೆಳೆದು ನಿರುದ್ಯೋಗ ಹೇಳ ಹೆಸರಿಲ್ಲದಂತೆ ನಾಪತ್ತೆಯಾಗಿ ದೇಶದ ಆರ್ಥಿಕತೆ ವೇಗವಾಗಿ ಬೆಳೆಯುತ್ತದೆ ನಮಗೆ ಈಗ ಬೇಕಾಗಿರುವು ಇದು. ಆದರೆ ರಾಜಕೀಯ ಕಾರಣಕ್ಕೆ ಜನರಿಗೆ ಉಚಿತ ಸವಲತ್ತುಗಳ ಆಮಿಷ ತೋರಿಸಿದರೆ ಜನ ದುಡಿಮೆಯ ಆಸಕ್ತಿ ಕಳೆದುಕೊಂಡು ದೇಶದ ಒರಗತಿಗೆ ಮಾರಕವಾಗುತ್ತಾರೆ ಅವರು ದುಡಿದು ಅವರ ಖರೀದಿ ಶಕ್ತಿ ಹೆಚ್ಚುವಂತೆ ಮಾಡಬೇಕು, ಸದ್ಯ ದೇಶ ಇಂಥ ಮಾರ್ಗದಲ್ಲಿದೆ, ಇದು ಗುಣಾತ್ಮಕ ಬೆಳವಣಿಗೆ, ಇದಕ್ಕೆ ವೇಗ ಬರುವಂತೆ ಮಾಡಬೇಕಿದೆ.

No comments:
Post a Comment