Monday, 14 July 2025

ಓದಬಲ್ಲವರೆಲ್ಲ ಗಮನಿಸಬೇಕಾದ ಕೃತಿ


ನಮ್ಮ ದೇಶದ ಕಲಿಕಾ ವಲಯದಲ್ಲಿ ೨೦೦೦ದಿಂದ ಈಚೆಗೆ ಹೊಸ ಬದಲಾವಣೆ ಶುರುವಾಗಿದೆ, ಇದುವರೆಗೆ ಒಂದೆರಡು ಶತಮಾನಗಳಿಂದ ನಾವು ಪಾಶ್ಚಾತ್ಯರ ಪ್ರಭಾವದಿಂದ ರೂಪಿಸಿಕೊಂಡಿದ್ದ ಆಧುನಿಕ ಶಿಕ್ಷಣ ವಿಧಾನ ತನ್ನೆಲ್ಲ ಸತ್ವ ಕಳೆದುಕೊಂಡ ಬರಡು ಹಸುವಿನಂತಾಗಿ ಸಾಯುವ ಹಂತ ತಲುಪಿದ ಕಾರಣಕ್ಕೆ ಇದನ್ನು ಗಮನಿಸಿದ ಹಿರಿಯ ಶಿಕ್ಷಣವೇತ್ತರು ಹಾಗೂ ಚಿಂತಕರು ಕಲಿಕೆಗೆ ಏನಾದರೂ ಹೊಸ ಮಾರ್ಗ ಹುಡುಕಬೇಕೆಂದು ಚಿಂತಿಸಿದ ಕಾರಣಕ್ಕೆ ಸಿಕ್ಕಿದ್ದು ಭಾರತೀಯ ಕಲಿಕೆ ಹಾಗೂ ಶಿಕ್ಷಣ ಪರಂಪರೆಯ ವಿಧಾನ ಹಾಗೂ ಶತಮಾನಗಳ ಹಳೆಯ ಅಸಂಖ್ಯಾತ ಜ್ಞಾನ ಶಾಖೆಯ ಕವಲುಗಳು. ಇವನ್ನು ಗಂಭೀರವಾಗಿ ಅಧ್ಯಯನಕ್ಕೊಳಪಡಿಸಿದರೆ ನಮ್ಮ ಸಮಾಜಕ್ಕೆ ಹೊಸ ನೋಟ ಹಾಗೂ ಹೊಸ ಚೈತನ್ಯ ದೊರೆಯುತ್ತದೆ ಎಂದು ಕೇಂದ್ರ ಶಿಕ್ಷಣ ಇಲಾಖೆಗೆ ಮನವರಿಕೆ ಮಾಡಿದ ಪರಿಣಾಮವಾಗಿ ೨೦೨೦ರಲ್ಲಿ ಕೇಂದ್ರ ಸರ್ಕಾರ ತನ್ನ ಶಿಕ್ಷಣ ಇಲಾಖೆಯಡಿಯಲ್ಲಿ ಆರಂಭಿಸಿದ ಯೋಜನೆ ಅನನ್ಯವಾದ ಐಕೆಎಸ್ ಅಥವಾ ಭಾರತೀಯ ಜ್ಞಾನ ವ್ಯವಸ್ಥೆ ಎಂಬ ಘಟಕ, ಇದು ಅಂದಿನಿಂದ ಉನ್ನತ ಶಿಕ್ಷಣ ಹಂತದವರೆಗೆ ಹೊಸ ಬಗೆಯ ಅಧ್ಯಯನಗಳಿಗೆ ಭಾರತೀಯ ಮೂಲದ ಜ್ಞಾನಪರಂಪರೆಯನ್ನು ಆಧುನಿಕ ಶಿಸ್ತುಗಳೊಂದಿಗೆ ಸಂಯೋಜಿಸಿ ಹೊಸ ದಿಕ್ಕು ತೋರಿಸುವ ಅಧ್ಯನಾಕಾಂಕ್ಷಿಗಳನ್ನು ಉತ್ತೇಜಿಸುತ್ತ ಬಂದಿದೆ. ಇದರ ಫಲವಾಗಿ ದೇಶದಲ್ಲಿ ನವೋದ್ಯಮಗಳು ಶುರುವಾಗಿ ಯುವ ಜನತೆಯಲ್ಲಿ ನವಚೈತನ್ಯ ಉಂಟಾಗಿದೆ, ಹೊಸ ಹೊಸ ಶೋಧಗಳಿಗೆ ಮನ್ನಣೆ ಲಭಿಸುತ್ತಿದೆ, ಇದು ತಥಾಕಥಿತ ಪಾಶ್ಚಾತ್ಯ ಮಾದರಿಯ ಅಧ್ಯಯನಗಳಿಗೆ ಬದಲಾಗಿ ಪರ್ಯಾಯ ಕಲಿಕಾ ಕ್ರಮವನ್ನು ಕಟ್ಟಿ ಬೆಳೆಸಲು ಯತ್ನಿಸುತ್ತಿದೆ, ಪಾಶ್ಚಾತ್ಯರಿಂದ ನಾವು ಕಲಿತ ಹಳೆಯದೆಲ್ಲ ಅವೈಜ್ಞಾನಿಕ ಹಾಗೂ ಅಜ್ಞಾನ ಎಂಬ ಭ್ರಮೆಯನ್ನು ಹೋಗಲಾಡಿಸಲು ಯತ್ನಿಸುತ್ತ ನಮ್ಮ ಸಂಪ್ರದಾಯದ ಮೌಲ್ಯ ಏನು ಎಂಬುದನ್ನು ಆಧುನಿಕ ರೀತಿಯಲ್ಲೇ ಸಮಾಜಕ್ಕೆ ತಿಳಿಸುವ ಯತ್ನ ಮಾಡುತ್ತಿದೆ, ಇಂಥ ಒಂದು ಪ್ರಯತ್ನದ ಝಲಕ್ ಈಗ ಒಂದು ಸಂಕಲನದ ರೂಪದಲ್ಲಿ ದೇಶದ ಪ್ರತಿಷ್ಠಿತ ಶಿಕ್ಷಣ ಕೇಂದ್ರವಾದ ಜವಾಹರ ಲಾಲ್ ವಿಶ್ವವಿದ್ಯಾಲಯದಿಂದ ನಮ್ಮ ಮುಂದೆ ಸದ್ಯ ಇದೆ. ಐಕೆ ಎಸ್ ವರ್ಷಕ್ಕೊಮ್ಮೆ ಒಂದೆಡೆ ಸಭೆ ಸೇರಿ ಸಾಂಪ್ರದಾಯಿಕ ಜ್ಞಾನದ ಬಗ್ಗೆ ಗಂಭೀರ ಸಮ್ಮೇಳನ ನಡೆಸುತ್ತದೆ, ಈ ಬಾರಿ ಇದು ಜೆ ಎನ್ ಯುವಿನಲ್ಲಿ ನಡೆದಿದ್ದು ಇದರಡಿ ನಡೆದ ಸಂಶೋಧನಾ ಫಲಿತಗಳನ್ನು ಸಂಕಲನ ರೂಪದಲ್ಲಿ ಹೊರತರಲಾಗಿದೆ. ಈ ಬಾರಿಯ ಸಂಕಲನದಲ್ಲಿ ಒಟ್ಟೂ ೮೮ ಲೇಖನಗಳಿದ್ದು ಕೆಲವು ಸಂಶೋಧಕರು ಒಂದಕ್ಕಿಂತ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ರಚಿಸಿದ್ದಾರೆ, ಹಾಗೂ ಬಹುತೇಕ ಪ್ರಬಂಧಗಳು ಕನಿಷ್ಠ ಇಬ್ಬರ ಸಂಯೋಜನೆಯಿಂದ ಸೃಷ್ಟಿಯಾಗಿವೆ, ಹೀಗಾದಾಗ ಪ್ರಬಂಧದ ಮೌಲ್ಯ ಇಬ್ಬರ ಚಿಕಿತ್ಸಕ ನೋಟದಿಂದ ಹೆಚ್ಚಾಗುತ್ತದೆ, ಹೀಗೆ ಇದರಲ್ಲಿ ತೊಡಗಿಸಿಕೊಂಡ ಸಂಶೋಧನಾ ಲೇಖಕರ ಸಂಖ್ಯೆ ೧೫೦ ಕ್ಕೂ ಹೆಚ್ಚಿದೆ, ಅದಿರಲಿ, ಇಲ್ಲಿ ಸಂಕಲಿತವಾದ ವಿಷಯ ವ್ಯಾಪ್ತಿಯ ಮೇಲೆ ಸುಮ್ಮನೇ ಕಣ್ಣಾಡಿಸಿದರೆ ಬೆರಗು ಮೂಡುತ್ತದೆ, ಪ್ರಸ್ತುತ ಇದಕ್ಕೆ ಮುನ್ನುಡಿ ಬರೆದ ಯುಗಾಂಕ್ ಗೋಯಲ್ ಮತ್ತು ಎಂಎಸ್ ಚೈತ್ರ ಅವರು ಹೇಳಿದಂತೆ ಭಾರತೀಯ ಜ್ಞಾನ ಪರಂಪರೆಯ ವ್ಯಾಪ್ತಿ ಅಗಾಧವಾಗಿದೆ, ಇದಕ್ಕೆ ಇಲ್ಲಿಯೇ ಪುಷ್ಟಿ ಸಿಗುತ್ತದೆ, ಇಲ್ಲಿ ಆಹಾರ, ಆರೋಗ್ಯ, ಶಬ್ದಕೋಶ, ಭಾಷೆ, ವ್ಯಾಕರಣ, ಶಿಲ್ಪ, ನೃತ್ಯ, ಸಂಗೀತ, ವಿಜ್ಞಾನ, ತಂತ್ರಜ್ಞಾನ, ಪರಿಸರ ರಕ್ಷಣೆ, ಕೆರೆ ಕಟ್ಟೆಗಳು ಜಲ ಸಂರಕ್ಷಣೆ ಜೀವ ವೈವಿಧ್ಯ ಕಾಪಾಡುವಿಕೆ ಕಲಿಕಾ ರೀತಿ, ಭಾರತೀಯ ವಾದ ಸಂವಾದ ತಾರ್ಕಿಕ ವಿಧಾನ, ಜಪ ತಪಗಳ ಪ್ರಯೋಜನ ಹೀಗೆ ಒಂದೇ ಎರಡೇ, ಮೂರ್ತ ಅಮೂರ್ತ ಸಂಗತಿಗಳ ಬಗ್ಗೆ ಸಂಶೋಧನಾತ್ಮಕ ಒಳನೋಟಗಳನ್ನು ಒದಗಿಸಿ ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ಅಸಾಧಾರಣ ಆಸಕ್ತಿ ಮತ್ತು ಕುತೂಹಲ ಹುಟ್ಟುವಂತೆ ಮಾಡಲಾಗಿದೆ, ಆದರೆ ಇಲ್ಲಿರುವ ವಿಷಯಗಳ ಸಂಶೋಧನೆ ಮಾಡಿದ ವಿದ್ವಾಂಸರು ಸ್ಥಳೀಯ ಮಾದರಿಗಳನ್ನು ಎದುರು ಇಟ್ಟುಕೊಂಡಿದ್ದಾರೆ, ಆದರೆ ಇಲ್ಲಿನ ಸಂಗತಿಗಳು ದೇಶಾದ್ಯಂತ ಹರಡಿಕೊಂಡಿದ್ದು ದೇಶದೆಲ್ಲೆಡೆ ಇಂಥ ಅಧ್ಯಯನಗಳಾದರೆ ಇನ್ನಷ್ಟು ಮತ್ತಷ್ಟು ಆಸಕ್ತಿಕರ ಸಂಗತಿಗಳು ಲಭಿಸುವುದರಲ್ಲಿ ಅನುಮಾನವಿಲ್ಲ, ಈ ಕೃತಿಯ ನಿಜವಾದ ಉದ್ದೇಶ ಈಡೇರಬೇಕಾದರೆ ಇದು ದೇಶದ ಎಲ್ಲ ಭಾಷೆಗಳಿಗೂ ಅನುವಾದವಾಗಬೇಕು, ಮನೆ ಮನೆಯನ್ನು ತಲುಪಬೇಕು, ಕೇವಲ ಉನ್ನತ ಶಿಕ್ಷಣ ಕೇಂದ್ರವಲ್ಲ, ಪ್ರಾಥಮಿಕ ಕಲಿಕಾ ಕೇಂದ್ರಗಳನ್ನೂ ತಲುಪಬೇಕಿದೆ, ಆಗ ನಮ್ಮ ದೇಶದ ಶೈಕ್ಷಣಿಕ ವಿಧಾನ ಮತ್ತು ಅದರ ಉದ್ದೇಶ ಸಾರ್ಥಕತೆ ಕಾಣುತ್ತದೆ ಅನ್ನಲು ಅಡ್ಡಿ ಇಲ್ಲ, ಜೊತೆಗೆ ಇಂದು ಉನ್ನತ ಶಿಕ್ಷಣ ಕೇಂದ್ರಗಳಲ್ಲಿನ ಸಂಶೋಧನೆ ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಏನೆಲ್ಲ ಸಂಗತಿಗಳು ಸಂಶೋಧನೆಗೆ ಒಳಗಾಗುತ್ತಿವೆ ಎಂಬುದೂ ತಿಳಿಯುತ್ತದೆ, ಇಂಥ ಹೊಸ ವಿಷಯಗಳ ಪತ್ತೆಗೆ ಉತ್ತೇಜನ ನೀಡುತ್ತದೆ.

ಏನೇ ಆಗಲಿ ಆಧುನಿಕ ಶಿಕ್ಷಣದ ಹೊಡೆತದಲ್ಲಿ ಇದುವರೆಗೆ ನಗಣ್ಯವಾಗಿದ್ದ ಭಾರತೀಯ ಜ್ಞಾನ ತಡವಾಗಿಯಾದರೂ ಗಂಭೀರ ಅಧ್ಯಯನಕ್ಕೆ ಒಳಗಾಗುವಂತೆ ಆಯ್ತಲ್ಲ ಎಂಬುದೇ ಸಮಾಧಾನ, ಆದರೆ ಇಷ್ಟು ಕಾಲ ನಾವು ಇಂಥ ಯತ್ನಕ್ಕೆ ಕೈ ಹಾಕದೆ ನಿರ್ಲಕ್ಷಿಸಿದ ಕಾರಣಕ್ಕೆ ಉಳಿಸಿಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೇ ಜಾಸ್ತಿ ಎಂದು ಕೃತಿ ಓದುವಾಗ ಯಾರಿಗಾದರೂ ಅರ್ಥವಾಗುತ್ತದೆ. ಏಕೆಂದರೆ ಇದನ್ನೋದುವ ಎಲ್ಲರಿಗೂ ಅವರ ಹಿರಿಯರುಅನುಸರಿಸುತ್ತಿದ್ದ ವೈದ್ಯೋಪಚಾರವೋ ಮತ್ತೊಂದೋ ವಿಧಾನದ ಪರಿಚಯ ಇದ್ದೇ ಇರುವ ಕಾರಣಕ್ಕೆ ಇಲ್ಲಿನ ಲೇಖನ ಓದುವಾಗ ಓದುಗರ ಮನದಲ್ಲಿ ಅಂಥ ಒಂದಾದರೂ ಪ್ರಸಂಗ ಹಾದುಹೋಗದೇ ಇರುವುದಿಲ್ಲ, ಹಾಗೂ ಅದು ಇಲ್ಲಿ ದಾಖಲಾಗಿಲ್ಲ ಎಂದೂ ಅನಿಸುತ್ತದೆ.

ಇಲ್ಲಿನ ಒಂದೊಂದು ಲೇಖನವೂ ನಮಗೆ ಅಚ್ಚರಿ ಹುಟ್ಟಿಸುವ ಜೊತೆಗೆ ಹೌದಾ ಅನಿಸುವ ಜೊತೆಗೆ ಗೊತ್ತೇ ಇರಲಿಲ್ಲ ಎಂದೂ ಅರಿವು ಮೂಡಿಸುತ್ತದೆ. ಉದಾಹರಣೆಗೆ ಭಾರತೀಯ ಕೋಶ ಹಾಗೂ ಆಧುನಿಕ ಶಬ್ದಕೋಶಗಳ ಅಂತರ, ಭಾರತೀಯ ಚಿಕಿತ್ಸಾ ಪದ್ಧತಿಯ ವಿಶಿಷ್ಟತೆ ಮೊದಲಾದವನ್ನು ಗಮನಿಸಬಹುದು. ಪ್ರಾಚೀನ ಭಾರತದ ವಾಣಿಜ್ಯ ಮತ್ತು ವ್ಯಾಪಾರ ಕುರಿತ ಅಧ್ಯಯನ ಕೂಡ ವಿಶಿಷ್ಟವಾಗಿದೆ, ಇದರ ಬಗ್ಗೆ ನಮ್ಮ ಆಧುನಿಕ ವಿಶ್ವ ವಿದ್ಯಾಲಯಗಳ ಕಾಮರ್ಸ್ ಅಧ್ಯಯನ ವಿಭಾಗಗಳು ಗಮನಹರಿಸಬೇಕಾದ ಅಗತ್ಯವಿದೆ, ಇದು ಮಾತ್ರವಲ್ಲ ಎಲ್ಲ ವಿಷಯಗಳಲ್ಲೂ ಇದೇ ಕತೆ, ಹೀಗಾದರೆ ಮಾತ್ರ ಇಂದು ಹೊಸದೇನೂ ಮಾಡಲಾಗದೇ ಸಾಯುವ ಹಂತ ತಲುಪಿದ ಪಾಶ್ಚಾತ್ಯ ಅನುಕರಣೆಯ ಆಧುನಿಕ ಶಿಕ್ಷಣ ಕೇಂದ್ರಗಳು ಮರುಜೀವ ಪಡೆಯಲು ಸಾಧ್ಯ ಅದಿಲ್ಲವಾದರೆ ಇರುವ ವಿಭಾಗಗಳನ್ನು ಒಡೆಯುವುದು, ಅದಕ್ಕೊಂದು ವಿಶ್ವವಿದ್ಯಾಲಯ ಮಾಡುವುದು ಮುಂತಾದ ಅರ್ಥ ಹೀನ ಕಾರ್ಯದಲ್ಲೇ ಕಾಲ ಕಳೆಯುತ್ತಿರುವ ವಿಶ್ವವಿದ್ಯಾಲಯಗಳು ಹೊಸ ತನ ಕಾಣಲು, ಹೊಸ ಹುಮ್ಮಸ್ಸಿನಿಂದ ಕೆಲಸ ಮಾಡಿ ಸಮಾಜಕ್ಕೆ ನೈಜ ಮಾರ್ಗ ತೋರಿಸುವ  ಕೆಲಸ ಮಾಡಬಹುದು, ಈ ಕಾರಣಕ್ಕಾಗಿ ಪ್ರಸ್ತುತ ಸಂಕಲನ ದೇಶದ ಎಲ್ಲ ಉನ್ನತ ಶಿಕ್ಷಣ ಕೇಂದ್ರಗಳಲ್ಲೂ ಕೈಪಿಡಿಯಂತೆ ಇರಬೇಕಾದ ಅಗತ್ಯವಿದೆ. ತಥಾಕಥಿತ ವಿಷಯಗಳನ್ನೇ ಕುರಿತು ನಡೆಯುವ ಸಂಶೋಧನೆಗಳ ಬದಲು ಹೊಸದನ್ನೇನಾದರೂ ಮಾಡಲು ಸಾಧ್ಯವಿದೆ. 

ಸುಮ್ಮನೇ ಆಧುನಿಕ ಶಿಕ್ಷಣ ಕೇಂದ್ರಗಳು ಇಲ್ಲಿಯವರೆಗೆ ಬೆಳೆದ ಬಗೆಯನ್ನು ನೋಡಿ, ಮೊದಲು ಅವು ಪಾಶ್ಚಾತ್ಯ ವಿಶ್ವವಿದ್ಯಾಲಯಗಳ ಪ್ರತಿಕೃತಿಗಳಂತೆ ಇದ್ದವು, ಅನಂತರ ಹೊಸದನ್ನು ಸಾಧಿಸುವಂತೆ ಇರುವ ವಿಭಾಗಗಳನ್ನು ಒಡೆದವು ಅನಂತರ ಹೊಸದೆಂಬಂತೆ ಅಂತರ್ ಶಿಸ್ತೀಯ ಅಧ್ಯಯನದ ಹೆಸರಲ್ಲಿ ಮತ್ತೆ ಒಂದಾಗಿ ಅಧ್ಯಯನ ಮಾಡತೊಡಗಿದವು ಮತ್ತೆ ಈಗ ಬಹು ಶಿಸ್ತಿನ ಅಧ್ಯಯನದ ಹೆಸರಲ್ಲಿ ಮೊದಲಿದ್ದ ರೂಪಕ್ಕೆ ಮರಳುವ ಯತ್ನ ಮಾಡುತ್ತ ಮಾಡಿದ ಕೆಲಸವನ್ನೇ ಮತ್ತೆ ಮತ್ತೆ ಮಾಡುತ್ತಿವೆ, ಬದಲಾಗಿ ಇಡೀ ಜಗತ್ತಿಗೆ ಜ್ಞಾನ ನೀಡಿದ ಸ್ಥಾನದಲ್ಲಿದ್ದ ನಮ್ಮ ದೇಶ ಮತ್ತೆ ಆ ಸ್ಥಾನ ಪಡೆಯಲು ಇಲ್ಲಿನ ಸಂಶೋಧನ ಲೇಖನಗಳು ದಾರಿ ತೋರಿಸುತ್ತವೆ, ನಮ್ಮ ದೇಶದಲ್ಲಿ ಆಧುನಿಕ ಶಿಕ್ಷಣ ಹರಡುವಲ್ಲಿ ಇದುವರೆಗೂ ಮುಂಚೂಣಿ ಸ್ಥಾನದಲ್ಲಿರುವ ದೆಹಲಿಯ ಜವಾಹರಲಾಲ್ ವಿಶ್ವವಿದ್ಯಾಲಯ ಈ ಕೃತಿಯ ಮೂಲಕ ಮತ್ತೆ ಹೊಸದಕ್ಕೆ ದಾರಿ ಕಾಣಿಸಿದೆ, ಇದು ದೇಶದ ಎಲ್ಲ ಉನ್ನತ ಶಿಕ್ಷಣ ಕೇಂದ್ರಗಳಿಗೆ ನೈಜ ಮಾರ್ಗ ತೋರಿಸಲಿ ಎಂದು ಆಶಿಸಬಹುದು.


ಕೃತಿ ವಿವರ - ಅಬ್‌ಸ್ಟಾçಕ್ಟ್ ಆಫ್ ಫಸ್ಟ್ ಆನುವಲ್ ಅಕಾಡೆಮಿಕ್ ಕಾನ್ಫರೆನ್ಸ್ ಆನ್ ಇಂಡಿಯನ್ ನಾಲೆಜ್ ಸಿಸ್ಟಮ್ಸ್, ೧೦-೧೨ಜುಲೈ ೨೦೨೫, ಜವಾಹರ ಲಾಲ್ ನೆಹರೂ ಯೂನಿವರ್ಸಿಟಿ, ನ್ಯೂ ಡೆಲ್ಲಿ, ಕೆಡಬ್ಲು ಪಬ್ಲಿಷರರ್ಸ್, ನ್ಯೂ ಡೆಲ್ಲಿ ಮೊದಲ ಮುದ್ರಣ- ೨೦೨೫, ಪುಟಗಳು- ೨೦೬,

ಬೆಲೆ- ನಮೂದಾಗಿಲ್ಲ.



    


No comments:

Post a Comment