Sunday, 6 July 2025

ಜಾಗತಿಕ ಆರ್ಥಿಕ ಹಿಂಜರಿತ ನಿರೀಕ್ಷೆ - ೨೦೨೫


ಈಚೆಗೆ ಕೆಲವು ಜಾಗತಿಕ ಅರ್ಥಶಾಸ್ತ್ರಜ್ಞರು ೨೦೨೫ರಲ್ಲಿ ಆರ್ಥಿಕ ಹಿಂಜರಿತ ಸಂಭವಿಸುವ ಸಾಧ್ಯತೆ ಇದೆ ಎಂದು ವಾದಿಸತೊಡಗಿದ್ದಾರೆ, ಇದಕ್ಕೆ ಕಾರಣವಿಲ್ಲದಿಲ್ಲ. ಸಾಮಾನ್ಯವಾಗಿ ಪ್ರಪಂಚದೆಲ್ಲೆಡೆ ಅನೇಕ ದೇಶಗಳಲ್ಲಿ ಆರ್ಥಿಕ ಕುಸಿತ ಕಾಣಿಸಿಕೊಳ್ಳತೊಡಗಿದಾಗ ಇಂಥ ಸನ್ನಿವೇಶವನ್ನು ಊಹಿಸಲಾಗುತ್ತದೆ, ಸದ್ಯ ಜಾಗತಿಕವಾಗಿ ಆರ್ಥಿಕ ಬೆಳವಣಿಗೆ ಕೇವಲ ೨.೫ರಷ್ಟಿರುವುದು, ನಿರುದ್ಯೋಗ ಸಮಸ್ಯೆ ಏರುತ್ತಿರುವುದು, ರಿಯಲ್ ಎಸ್ಟೇಟ್ ಉದ್ಯಮ ಹಿಂಜರಿಯುವುದು, ಸಾಮಾನ್ಯ ಜನರ ಕೊಳ್ಳುವ ಶಕ್ತಿ ಕುಂಠಿತವಾಗುವುದು ಇದಕ್ಕೆ ಪ್ರಮುಖ ಕಾರಣಗಳು, ಇಂಥ ಲಕ್ಷಣಗಳು ಸದ್ಯ ಜಾಗತಿಕವಾಗಿ ಕಾಣಿಸತೊಡಗಿರುವುದು ಇಂಥ ಊಹೆಗೆ ಬಲ ನೀಡುತ್ತಿದೆ. ೨೦೧೮ರ ಕೊರೋನಾ ಹೊಡೆತದ ಪರಿಣಾಮವಾಗಿ ಜಗತ್ತು ಇಂಥ ಹಿಂಜರಿತ ಕಂಡಿತ್ತು, ಆದರೆ ಇನ್ನೂ ಬಹುತೇಕ ದೇಶಗಳು ಈ ಹೊಡೆತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದರ ಮಧ್ಯೆ ಮತ್ತೆ ಹಿಂಜರಿತದ ಭೀತಿ ಆವರಿಸತೊಡಗಿದೆ.

ಜಾಗತಿಕ ಆರ್ಥಿಕ ಬೆಳವಣಿಗೆ ದರ ೨೦೨೫ರಲ್ಲಿ ಶೇ. ೨.೩ರಷ್ಟು ಆಗಬಹುದೆಂದು ವಿಶ್ವಬ್ಯಾಂಕ್ ಊಹಿಸಿದೆ.ಜೊತೆಗೆ ಎಲ್ಲ ಕಡೆ ಹಣದುಬ್ಬರ ಹೆಚ್ಚಾಗಿ ಬ್ಯಾಂಕುಗಳು ಬಡ್ಡಿದರ ಏರಿಸಿದ ಪರಿಣಾಮ ಖರೀದಿ ಶಕ್ತಿ ಕುಸಿದಿದೆ.ಜಾಗತಿಕವಾಗಿ ಏರುತ್ತಿರುವ ನಿರುದ್ಯೋಗ ಪ್ರಮಾಣ ಆರ್ಥಿಕ ಚಟುವಟಿಕೆಯನ್ನು ನಿಧಾನಗೊಳಿಸಿದೆ.ಆದಾಯದ ಅನಿಶ್ಚಿತತೆಯಿಂದ ಗ್ರಾಹಕರಲ್ಲಿ ಆತ್ಮವಿಶ್ವಾಸ ಕುಸಿದಿದೆ.ಜೊತೆಗೆ ಅಲ್ಪಾವಧಿ ಬಡ್ಡಿದರ ದೀರ್ಘಕಾಲೀನ ಸಾಲದ ಬಡ್ಡಿದರಕ್ಕಿಂತ ಹೆಚ್ಚಿದೆ.ಇವೆಲ್ಲವುಗಳಿಗೆ ಕಳಶವಿಟ್ಟಂತೆ ಜಾಗತಿಕ ರಾಜಕೀಯ ಸಂಬಂಧಗಳ ಅಸ್ಥಿರತೆ ಕೂಡ ಸೇರಿದೆ, ಪ್ರಪಂಚದಲ್ಲಿ ಅಲ್ಲಲ್ಲಿ ನಡೆಯುತ್ತಿರುವ ಯುದ್ಧಗಳು ರಷ್ಯಾ- ಉಕ್ರೇನ್, ಇಸ್ರೇಲ್ ಮತ್ತು ಇರಾನ್ ನಡುವಿನ ಕದನಗಳು ಜಗತ್ತಿನ ನಿದ್ರೆ ಕೆಡಿಸಿವೆ, ಇವೆಲ್ಲವುಗಳ ಹೊರತಾಗಿ ಆಗಾಗ ಸಂಭವಿಸುವ ನೈಸರ್ಗಿಕ ಪ್ರಕೋಪಗಳು ಹೊಡೆತಕೊಡುತ್ತಲೇ ಇರುತ್ತವೆ. ಅತಿವೃಷ್ಟಿ ಮತ್ತು ಅನಾವೃಷ್ಟಿಗಳಿಂದ ಉಂಟಾಗುವ ಬರಗಾಲ ಸಮಾಜಕ್ಕೆ ಚೇತರಿಸಿಕೊಳ್ಳಲು ಬಿಡುವುದಿಲ್ಲ.

ಈ ಅಮೆರಿಕದ ಟ್ರಂಪ್ ಮಾಡಿದಂತೆ ತಮ್ಮ ದೇಶದ ಆರ್ಥಿಕ ರಕ್ಷಣೆಗಾಗಿ ಬಿಗಿಯಾದ ಆರ್ಥಿಕ ನಿರ್ಬಂಧ ವಿಧಿಸಿ ಜಾಗತಿಕ ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದ್ದು ಕೂಡ ಈ ಕಾರಣಗಳಲ್ಲಿ ಸೇರುತ್ತದೆ, ಇಂಥ ಕ್ರಮದಿಂದ ಜಾಗತಿಕ ಆರ್ಥಿಕ ಚಟುವಟಿಕೆ ಸ್ತಬ್ದತೆಗೆ ಬರುತ್ತದೆ, ಜನರ ಖರೀದಿ ಶಕ್ತಿ ಕುಸಿಯುತ್ತದೆ, ಆಮದು ರಫ್ತು ಕ್ಷೇತ್ರಗಳ ಮೇಲಿನ ಹೊಡೆತ ಎಲ್ಲ ಕ್ಷೇತ್ರಗಳ ಮೇಲರಯೂ ಪ್ರಭಾವ ಬೀರುತ್ತದೆ. ಈ ಎಲ್ಲ ಸನ್ನಿವೇಶಗಳು ಈಗಾಗಲೇ ವಿಶ್ವಾದ್ಯಂತ ಆರ್ಥಿಕ ಹಿಂಜರಿತದ ಸೂಚನೆ ಕೊಡುತ್ತಿವೆ. ಇಂಥ ಪರಿಸ್ಥಿತಿ ಎದುರಾದರೆ ವೇಗವಾಗಿ ಬೆಳೆಯುತ್ತಿರುವ ಭಾರತದಂಥ ದೇಶಗಳ ಆರ್ಥಿಕತೆಗೆ ದೊಡ್ಡ ಹೊಡೆತ ಬೀಳುತ್ತದೆ. ನಿರೀಕ್ಷೆಯಷ್ಟು ಆರ್ಥಿಕ ಬೆಳವಣಿಗೆಯನ್ನು ಖಂಡಿತ ಸಾಧಿಸಲು ಸಾಧ್ಯವಿಲ್ಲವಾದರೂ ಮಂದಗತಿಯ ಅಭಿವೃದ್ಧಿ ಸಾಧಿಸಲು ಕೂಡ ಹರಸಾಹಸಪಡಬೇಕಾಗುತ್ತದೆ. ಈ ಬಾರಿ ಆರ್ಥಿಕ ಹಿಂಜರಿತ ಕಾಣಿಸಿದರೆ ಅದರ ಹಿಂದೆ ಇರುವ ಕಾರಣ ನಿಜಕ್ಕೂ ಭಾರತ ಅಂದರೆ ಅಚ್ಚರಿ ಆಗಬಹುದು, ಹೌದು. ಬೆಳೆಯುತ್ತಿರುವ ಭಾರತದ ಜಾಗತಿಕ ವರ್ಚಸ್ಸು ಮತ್ತು ಆರ್ಥಿಕ ಗತಿಯನ್ನು ತಡೆಯಲು ಅಮೆರಿಕ ಹಾಗೂ ಕುತಂತ್ರಿ ಚೀನಾದಂಥ ದೇಶಗಳು ಪಣತೊಟ್ಟು ನಿಂತಿವೆ. ಹೀಗಾಗಿ ಇವು ಭಾರತವನ್ನು ತಡೆಯಲು ಜಾಗತಿಕ ಮಟ್ಟದಲ್ಲಿ ನಿರ್ಬಂಧಗಳನ್ನು ವಿಧಿಸುತ್ತಿರುವುದು ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತಕ್ಕೆ ಎಡೆ ಮಾಡಿಕೊಡುತ್ತಿದೆ. 

ಸಾಮಾನ್ಯವಾಗಿ ಪ್ರತೀ ೮-೧೦ ವರ್ಷಗಳಿಗೊಮ್ಮೆ ಆರ್ಥಿಕ ಹಿಂಜರಿತ ಯಾವುದಾದರೂ ಒಂದು ಪ್ರಮಾಣದಲ್ಲಿ ಕಾಣಿಸುತ್ತದೆ ಎಂದು ಐಎಂಎಫ್ ಹೇಳುತ್ತದೆ. ಈ ಹಿಂದಿನ ಆರ್ಥಿಕ ಹಿಂಜರಿತಗಳಿಗೆ ರಿಯಲ್ ಎಸ್ಟೇಟ್ ಉದ್ಯಮದ ಕುಸಿತ, ಶೇರು ಮಾರುಕಟ್ಟೆ ಕುಸಿತ, ಹಣಕಾಸಿನ ಬಿಕ್ಕಟ್ಟು ಪ್ರಮುಖ ಕಾರಣಗಳಾಗಿದ್ದವು. ಆದರೆ ಈ ಬಾರಿ ಉಂಟಾಗಬಹುದಾದ ಆರ್ಥಿಕ ಹಿಂಜರಿತದಲ್ಲಿ ಪ್ರಮುಖವಾಗಿ ಗೋಚರಿಸುತ್ತಿರುವ ಸಂಗತಿ ಜಾಗತಿಕ ರಾಜಕೀಯ ಅಸ್ಥಿರತೆಯಾಗಿದೆ. ಜೊತೆಗೆ ಹವಾಮಾನ ವೈಪರೀತ್ಯ ಕೂಡ ಸೇರಿದೆ, ಇವುಗಳನ್ನು ತಹಬಂದಿಗೆ ತಂದರೆ ಹಿಂಜರಿತ ನಿಲ್ಲಿಸಬಹುದು, ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

No comments:

Post a Comment