ಕೆಲವೊಮ್ಮೆ ಇದನ್ನು ತ್ರಿಭಾಷಾ ಸೂತ್ರದೊಂದಿಗೂ ತರಲಾಗುತ್ತದೆ. ನಮ್ಮ ದೇಶದ ಬಹುಭಾಷಿಕ ಸಮಾಜದೊಂದಿಗೆ ಮುಂದಿನ ತಲೆಮಾರು ಹೊಂದಿಕೊಳ್ಳಬೇಕು ಎಂಬ ಸದಾಶಯ ಇದರಲ್ಲಿದೆ. ಸರಿ, ಆದರೆ ಯಾವುದೇ ಭಾಷೆಯ ಕಲಿಕೆ ಆಯ್ಕೆ ಮಕ್ಕಳಿಗೂ ಪಾಲಕರಿಗೂ ಇರಬೇಕಾದುದು ಸರ್ಕಾರಗಳ ಕರ್ತವ್ಯ, ಇದಕ್ಕೆ ಹೊರತಾಗಿ ಇದನ್ನೇ ಕಲಿಯಿರಿ ಎಂದು ಒತ್ತಾಯಿಸುವುದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧ. ಯಾರಾದರೂ ಸಂಸ್ಕೃತ ಅಥವಾ ಉರ್ದು ಕಲಿಯುತ್ತೇನೆ ಅಂದರೆ ಅದಕ್ಕೆ ಶಿಕ್ಷಕರ ಹಾಗೂ ಅಂಥ ವಾತಾವರಣ ಮತ್ತು ಕಲಿಕಾ ವ್ಯವಸ್ಥೆಯನ್ನು ರೂಪಿಸಿಕೊಡಬೇಕಾದುದು ಮಾತ್ರ ಸರ್ಕಾರದ ಕೆಲಸವಾಗಬೇಕು, ಹೊರತಾಗಿ ಇಲ್ಲ, ಕನ್ನಡವನ್ನೋ ತಮಿಳನ್ನೋ ಇಲ್ಲಿ ಕಲಿಯತಕ್ಕದ್ದು, ಬೇರೆ ಭಾಷೆಗಳ ಕಲಿಕೆಗೆ ಅವಕಾಶವಿಲ್ಲ ಎಂದು ನಿರಾಕರಿಸುವುದು ನಮ್ಮ ವ್ಯವಸ್ಥೆಗೆ ಪೂರಕವಲ್ಲ, ಅದಾಗಬಾರದು, ಈ ಕಾರಣಕ್ಕಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದಕ್ಕೆ ಸ್ವಲ್ಪ ಅವಕಾಶ ಕೊಟ್ಟಿದ್ದರೂ ಅದರಲ್ಲೂ ಮಿತಿಗಳಿವೆ.
ಆಗಾಗ ಕಾಣಿಸಿಕೊಳ್ಳುವ ನಮ್ಮ ದೇಶದಲ್ಲಿನ ಭಾಷಾ ಕಲಿಕೆಯ ಸಮಸ್ಯೆ ಇದೀಗ ಮತ್ತೆ ತಲೆ ಎತ್ತಿದೆ, ನಿಜವಾಗಿ ಈ ಸಮಸ್ಯೆ ಹುಟ್ಟಿದ್ದು ನಮ್ಮ ದೇಶವನ್ನು ರಾಜ್ಯಗಳಾಗಿ ವಿಂಗಡಿಸುವ ಸಂದರ್ಭದಲ್ಲಿ ಭಾಷೆಯನ್ನು ಆಧರಿಸಿ ರಾಜ್ಯಗಳ ವಿಂಗಡಣೆ ಮಾಡಿದಾಗಿನಿಂದ, ಆಗ ನೆಹರು ಮೊದಲಾದವರು ಪ್ರಾದೇಶಿಕ ಭಾಷೆಗಳಿಗೂ ಮಹತ್ವ ಇರಬೇಕು, ಜಾಗತಿಕ ಭಾಷಾ ಕಲಿಕೆಯಲ್ಲೂ ನಮ್ಮ ಮಕ್ಕಳು ಹಿಂದೆ ಉಳಿಯಬಾರದು ಎಂಬ ಕಾರಣಕ್ಕೆ ಶಾಲಾ ಕಲಿಕೆಯಲ್ಲಿ ಭಾಷೆಗಳನ್ನು ನಿಗದಿಪಡಿಸಿದರು, ಆಗ ಪ್ರಾದೇಶಿಕ ಭಾಷೆಯ ಜೊತೆಗೆ ಮಾತೃ ಭಾಷೆ, ಜಾಗತಿಕ ಭಾಷೆ ಎಂದು ಪರಿಗಣಿಸಿ ತ್ರಿಭಾಷಾ ಸೂತ್ರವನ್ನು ಎಲ್ಲರನ್ನೂ ಸಮಾಧಾನಪಡಿಸುವಂತೆ ರೂಪಿಸಿತು, ಸ್ವಲ್ಪ ಕಾಲ ಆದ ಮೇಲೆ ೧೯೬೫-೬೬ರಲ್ಲಿ ಇದರ ವಿರುದ್ಧ ಮೊದಲು ತಮಿಳುನಾಡು ದನಿ ಎತ್ತಿ ಹಿಂದಿ ಹೇರಲಾಗುತ್ತಿದೆ ಎಂದು ವಿರೋಧಿಸಿತು, ಜೊತೆಗೆ ದ್ರಾವಿಡ ಭಾಷೆಗಳನ್ನು ಒಗ್ಗೂಡಿಸಲು ದ್ರಾವಿಡರ ಮೇಲೆ ಉತ್ತರದ ಆರ್ಯರ ಯತ್ನವೆಂದು ಬಿಂಬಿಸಲಾಯಿತು, ಅದರ ಪರಿಣಾಮವಾಗಿ ದಕ್ಷಿಣ ಭಾರತದ ಪ್ರಮುಖ ರಾಜ್ಯಗಳು ಇದಕ್ಕೆ ಹೌದೆಂದು ತಲೆ ಹಾಕಿದವು. ಇದಕ್ಕೆ ಪೂರಕವಾಗಿ ಪೆರಿಯಾರ್ ಮೊದಲಾದವರ ರಾಜಕೀಯ ಆಸೆ ಮತ್ತು ನಿಲುವುಗಳು ಸೇರಿಕೊಂಡವು, ಇಲ್ಲಿಂದ ಭಾಷೆಯ ಜೊತೆಗೆ ರಾಜಕೀಯ ಬೆರೆತಿತು. ಅದಾದ ಮೇಲೆ ಈಗ ೨೦೨೫ರಲ್ಲಿ ಮೋದಿ ಸರ್ಕಾರ ಮಾತೃಭಾಷೆ, ಪ್ರಾದೇಶಿಕ ಭಾಷೆ ಹಾಗೂ ಜಾಗತಿಕ ಭಾಷೆ ಎಂಬ ತ್ರಿಭಾಷೆಗಳ ಕಲಿಕೆಗೆ ಮತ್ತೆ ಎನ್ ಇಪಿ ಹೆಸರಲ್ಲಿ ಯತ್ನಿಸಿ, ಯಾರು ಈ ಸೂತ್ರ ಒಪ್ಪುತ್ತಾರೋ ಆ ರಾಜ್ಯಗಳಿಗೆ ಅನುದಾನ ಕೊಡುವ ಯೋಜನೆ ಹಾಕಿದೆ, ಇದರಂತೆ ಉತ್ತರ ಪ್ರದೇಶ ಹೆಚ್ಚು ಅನುದಾನ ಪಡೆಯುತ್ತಿದ್ದರೆ ಇದರ ಬದಲಾಗಿ ಹಿಂದಿ ಕೈಬಿಟ್ಟ ತಮಿಳುನಾಡು ಮತ್ತು ಕರ್ನಾಟಕಗಳಿಗೆ ಅನುದಾನ ಸಿಗುತ್ತಿಲ್ಲ, ಜೊತೆಗೆ ಸದ್ಯ ನಮ್ಮ ದೇಶದಲ್ಲಿ ಭಾಷೆಯ ಗೊಂದಲ ಹೆಚ್ಚಾಗಿಯೇ ಇದೆ, ಒಂದೆಡೆ ಶಾಸ್ತ್ರೀಯ ಭಾಷೆಯಾಗಿ ಕೆಲವನ್ನು ಗುರುತಿಸಿ ಅವುಗಳ ಬೆಳವಣಿಗೆಯ ಹೆಸರಲ್ಲಿ ಅನುದಾನ ಕೊಡಲಾಗುತ್ತಿದೆ, ಆಡುವ ಭಾಷೆಗಳೆಲ್ಲ ಶಾಸ್ತ್ರೀಯವೇ ಎಂದು ಒಂದೆಡೆ ಇದಕ್ಕೆ ವಿರೋಧವಿದೆ, ಇನ್ನೊಂದೆಡೆ ಸಂವಿಧಾನ ೨೨ ಭಾಷೆಗಳನ್ನು ಅಧಿಕೃತ ಭಾರತೀಯ ಭಾಷೆಗಳಾಗಿ ಪರಿಗಣಿಸಿದೆ, ಆದರೆ ಶಾಲೆಗಳಲ್ಲಿ ಭಾರತದಲ್ಲಿ ೧೨೦ಕ್ಕೂ ಹೆಚ್ಚು ಭಾಷೆಗಳನ್ನು ಕಲಿಸಲಾಗುತ್ತಿದೆ, ಈ ಮಾತೃ ಭಾಷೆ ಹಾಗೂ ಪ್ರಾದೇಶಿಕ ಭಾಷೆ ಅನ್ನುವುದರಲ್ಲೇ ಗೊಂದಲ ಬೇಕಾದಷ್ಟಿದೆ. ಈಗ ಕರ್ನಾಟಕವನ್ನೇ ನೋಡಿ ಮೇಲ್ನೋಟಕ್ಕೆ ನಾನು ಕನ್ನಡಿಗ, ಕನ್ನಡದ ಹುಡುಗ. ನನ್ನ ಪ್ರಾದೇಶಿಕ ಭಾಷೆ ಕನ್ನಡ ಆದರೆ ಮಾತೃಭಾಷೆಯ ಪ್ರಶ್ನೆ ಬಂದರೆ ನನ್ನದು ಹವ್ಯಕ ಎಂಬ ಕನ್ನಡದ ಸಾಮಾಜಿಕ ಉಪಭಾಷೆ, ಹೀಗೆ ಕರ್ನಾಟಕದಲ್ಲಿರುವ ಸಾಮಾಜಿಕ ಉಪಭಾಷೆಗಳೇ ಮಾತೃ ಭಾಷೆಗಳಾದ ಜನಸಂಖ್ಯೆ ಕೋಟಿಗಳನ್ನು ದಾಟುತ್ತದೆ. ಹೀಗಿರುವಾಗ ಮಾತೃಭಾಷೆ ಎಂದು ಕಲಿಯುವ ವಿಧಾನ ಹೇಗೆ? ಎಲ್ಲಿ ಕಲಿಸಲು ಸಾಧ್ಯ? ಅದನ್ನು ಮನೆಯಲ್ಲೇ ಕಲಿಯಬೇಕು, ಇದನ್ನೆಲ್ಲ ಸರ್ಕಾರದ ಆದೇಶದ ಮೂಲಕ ಕಲಿಸಲು ಮುಂದಾದರೆ ಎದುರಾಗುವ ಸಮಸ್ಯೆಗಳಿಗೆ ಆದಿ ಅಂತ್ಯ ಇರುವುದಿಲ್ಲ, ಕೆಲವರು ನಮ್ಮದು ಕೊಡಗು ಕನ್ನಡ ಅಂದರೆ ಇನ್ನು ಕೆಲವರು ಮಳವಳ್ಳಿ ಕನ್ನಡ ಅಂತಾರೆ, ಇನ್ನು ಧಾರವಾಡ, ಮಲೆನಾಡು, ಕರಾವಳಿ, ಬೀದರ್ ಹೀಗೆ ಪ್ರಾದೇಶಿಕದಲ್ಲೂ ಒಳವಿಂಗಡಣೆಗೆ ಅವಕಾಶವಿದೆ, ಮಾತೃಭಾಷೆ ಇದೆಂದು ಗುರುತಿಸಲು ಹೊರಟರೆ ಅದು ಕಗ್ಗಂಟಾಗುತ್ತದೆ, ಈಗ ನೋಡಿ ಕನ್ನಡದ ಪತ್ರಿಕೆಗಳು, ಶಾಲಾ ಪಠ್ಯಗಳು ಸಾಮಾನ್ಯವಾಗಿ ಬಳಸುವ ಹಳೆಯ ಮೈಸೂರು ಮತ್ತು ಬೆಂಗಳೂರು ಕನ್ನಡವನ್ನು ರಾಜ್ಯದಲ್ಲಿ ಕನ್ನಡವೆಂದು ಪರಿಗಣಿಸಿ ಅದನ್ನೇ ಶಾಲೆಗಳ ಪಠ್ಯದಲ್ಲಿ ಕಲಿಸಲಾಗುತ್ತಿದೆ, ಇದರ ವಿರುದ್ಧವೂ ಕೂಗು ತುಳು, ಕೊಡವ, ಇತ್ಯಾದಿ ಸಮುದಾಯಗಳು ಪ್ರಶ್ನಿಸುತ್ತಿವೆ, ಸಾಮಾಜಿಕ ಉಪಭಾಷೆಗಳೆಲ್ಲ ಇದನ್ನೇ ಕೇಳಬಹುದು, ಹೀಗೆ ಭಾರತದಲ್ಲಿ ಒಂದು ಅಂದಾಜಿನಂತೆ ಇರುವ ಭಾಷೆಗಳ ಸಂಖ್ಯೆ ಮೂರು ಸಾವಿರಕ್ಕೂ ಹೆಚ್ಚು, ಇವುಗಳಲ್ಲಿ ಲಿಪಿ ಇರುವ ಹಾಗೂ ಇಲ್ಲದ ಭಾಷೆ, ಅವುಗಳ ಪ್ರಾಚೀನತೆಯ ಆಧಾರದ ವಿಂಗಡಣೆ ಇತ್ಯಾದಿ ಸಮಸ್ಯೆಗಳಿವೆ, ಇವಕ್ಕೆಲ್ಲ ನಿಯಮಗಳ ಮೂಲಕ ಪರಿಹಾರ ಎಂದಿಗೂ ಸಿಗಲು ಸಾಧ್ಯವಿಲ್ಲ. ಯಾವುದೇ ಭಾಷೆಯನ್ನು ಅದೊಂದು ಸಂವಹನ ಮಾಧ್ಯಮ ಎಂದು ಪರಿಗಣಿಸಿ ಎಲ್ಲಿ ಯಾವುದಕ್ಕೆ ಮಹತ್ವ ಅಗತ್ಯ ಎಂಬುದರ ಆಧಾರದಲ್ಲಿ ವ್ಯಕ್ತಿಗೆ ಕಲಿಯುವ ವಾತಾವರಣ ರೂಪಿಸಿ ಕೊಡುವ ಕೆಲಸವನ್ನು ಸರ್ಕಾರಗಳು ಮಾಡಿದರೆ ಸಕು. ಆಗ ಜನತೆ ತಮ್ಮ ಅಗತ್ಯ ಎಷ್ಟಿದೆ ಅನ್ನುವ ಆಧಾರದಲ್ಲಿ ಬೇಕಾದ ಭಾಷೆಗಳನ್ನು ಕಲಿತುಕೊಳ್ಳುತ್ತಾರೆ, ಇದನ್ನು ಬಿಟ್ಟು ಇದನ್ನೇ ಕಲಿಯಿರಿ, ಕಲಿಯಬೇಕು ಅಂದಾಗ ಸಮಸ್ಯೆ ಉಲ್ಬಣಿಸುತ್ತದೆ, ಇದಕ್ಕೆ ಭಾವನಾತ್ಮಕ ಅಂಶಗಳು ಸೇರಿ ಇಲ್ಲದ ಕಗ್ಗಂಟು ಸೃಷ್ಟಿಯಾಗುತ್ತದೆ. ಈಗ ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಆಗಿರುವುದು ಇದೇ. ಭಾಷೆಗಳ ವಿಷಯದಲ್ಲಿ ನಮ್ಮ ಪೂರ್ವಿಕರಾದ ಹಿರಿಯರು ಹಾಕಿದ ಸಮನ್ವಯ ಮಾರ್ಗ ನೋಡಿ, ದೇಶದ ಎಲ್ಲ ಪ್ರದೇಶಗಳಲ್ಲೂ ನಾವು ಕನಿಷ್ಠ ಎರಡು ಭಾಷೆ ಮಾತನಾಡುವವರನ್ನು ಕಾಣುವುದು ಸಹಜ, ಕೆಲವೆಡೆ ಈಗಲೂ ಮೂರು ನಾಲ್ಕನ್ನೂ ಮಾತನಾಡುತ್ತಾರೆ, ಒಂದೇ ಮನೆಯಲ್ಲಿ ನಾಲ್ಕಾರು ಭಾಷೆ ಮಾತನಾಡುವ ಒಂದೇ ಕುಟುಂಬದ ಸದಸ್ಯರು ಖುಷಿಯಾಗಿರುತ್ತಾರೆ, ಅಲ್ಲಿ ಯಾವುದೇ ಬಗೆಯ ಭಾಷಿಕ ಸಮಸ್ಯೆ ಹಬ್ಬ ಆಚರಣೆ ಇತ್ಯಾದಿ ಸಂದರ್ಭದಲ್ಲಿ ಎಂದಿಗೂ ಎದುರಾಗುವುದಿಲ್ಲ, ಹೇಗೆ? ಏಕೆ, ಮನೆಯವರೆಲ್ಲ ಭಾಷೆಯನ್ನು ಸಂವಹನ ಸಾಧನ ಎಂದು ಮಾತ್ರ ಪರಿಗಣಿಸುತ್ತಾರೆ. ಯಾವುದೇ ಭಾಷೆಯನ್ನು ಕಲಿಯುವ ಅಥವಾ ಬಿಡುವ ಆಯ್ಕೆಯನ್ನು ಜನತೆಗೆ ಬಿಡಬೇಕು, ಸರ್ಕಾರ ಇಂಥ ವಿಷಯಗಳಲ್ಲಿ ಕೈಹಾಕಿದಷ್ಟೂ ಸಮಸ್ಯೆ ಹೆಚ್ಚು. ಜನರಿಗೆ ಭಾಷೆ ಕಲಿಯಲು ಅಹತ್ಯ ಅನುಕೂಲ ಕಲ್ಪಿಸಿಕೊಡುವ ಕೆಲಸವನ್ನು ಮಾತ್ರ ಅದು ಕೈಗೊಂಡರೆ ಸಮಸ್ಯೆ ಆಗುವುದಿಲ್ಲ, ಆದರೆ ಇದು ನಮ್ಮ ರಾಜ್ಯ ಇಲ್ಲೇನಿದ್ದರೂ ನಮ್ಮ ಭಾಷೆಯನ್ನು ಮಾತ್ರವೇ ಆಡಬೇಕು ಅನ್ನುವುದಕ್ಕೆ ಮಿತಿ ಇದೆ. ಏಕೆಂದರೆ ಇದನ್ನು ಹೆಚ್ಚು ಎಳೆಯಲು ಆಗುವುದಿಲ್ಲ, ಕಾರಣ ನಮ್ಮದು ನಮ್ಮ ಸಂವಿಧಾನ ಹೇಳುವಂತೆ ಒಕ್ಕೂಟ ರಾಷ್ಟ್ರ ಇಲ್ಲಿ ಅಸಂಖ್ಯ ಭಾಷೆಗಳಿವೆ, ಸಮುದಾಯಗಳಿವೆ. ಇವೆಲ್ಲ ದೇಶವಾಗಿ ಕೂಡಿರಬೇಕಾದ ಅಗತ್ಯ ಯಾವಾಗಲೂ ಇದೆ, ಇದಕ್ಕೆ ಧಕ್ಕೆ ಆಗದಂತೆ ನಾವೆಲ್ಲ ಎಚ್ಚರದಿಂದ ಸಂವಿಧಾನಕ್ಕೆ ಸರ್ವೋಚ್ಚ ಗೌರವ ಕೊಡುವ ಕೆಲಸವನ್ನು ಮೊದಲು ಮಾಡಬೇಕು, ಇದಕ್ಕೆ ಕೇವಲ ಸಂವಹನ ಮಾಧ್ಯಮವಾಗಿಯಷ್ಟೇ ಕೆಲಸ ಮಾಡಬೇಕಾದ ಭಾಷೆಯನ್ನು ಭವನಾತ್ಮಕ ದೃಷ್ಟಿಯಿಂದ ದೊಡ್ಡದು ಮಾಡುವ, ಅದಕ್ಕೆ ಆಯಾ ಸರ್ಕಾರಗಳು ಒತ್ತು ಕೊಡದೇ ಸಂವಿಧಾನದ ಆಶಯ ಕಾಯುವ ಕೆಲಸಕ್ಕೆ ಮಾತ್ರ ಆದ್ಯತೆ ಕೊಡಬೇಕು.
ಭಾಷೆಯ ಪ್ರಾಚೀನತೆಯನ್ನು ಹೇಳಿಕೊಂಡು ಸಂಭ್ರಮಿಸುವ ಜನರಿದ್ದಾರೆ. ಆದರೆ ಯಾವ ಭಾಷೆ ಎಷ್ಟು ಹಳೆಯದಾದರೆ ಏನು? ಅದನ್ನು ಹೇಗೆ ಉಳಿಸಿ ಬೆಳೆಸುತ್ತೇವೆ ಎಂಬುದು ಮುಖ್ಯ. ಆದರೆ ನಮ್ಮ ಜನರಿಗೆ ಭಾಷೆಯ ಹೆಸರಲ್ಲಿ ರಾಜಕೀಯ ಮಾಡುವುದರಲ್ಲಿ ಇರುವ ಆಸಕ್ತಿ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕಾಣುವುದಿಲ್ಲ, ಸಾಲದ್ದಕ್ಕೆ ಭಾಷೆ ಉಳಿಸುವುದು ಎಂದರೆ ಬೇರೆ ಭಾಷೆಯವರ ಮೇಲೆ ಬಲಾತ್ಕಾರ ಮಾಡುವುದು, ಹಲ್ಲೆ ಮಾಡಿ ಹೆಚ್ಚುಗಾರಿಕೆ ಮೆರೆಯುವುದು, ಅನ್ಯ ಭಾಷೆಯ ಫಲಕಗಳಿಗೆ ಮಸಿ ಬಳಿಯುವುದು ಎಂಬ ಪರಿಕಲ್ಪನೆ ಬೆಳೆದುಬಿಟ್ಟಿದೆ. ಇದು ಸರಿಯಲ್ಲ, ಹೌದು, ದೇಶದ ಬೇರೆ ಯಾವುದೇ ಸಮುದಾಯಕ್ಕೆ ಹೋಲಿಸಿದರೆ ಕನ್ನಡ ಸಮುದಾಯದ ಜನ ಬಹಳ ಹಿಂದಿನಿಂದಲೂ ಉದಾರಿಗಳು. ಇದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ, ಇದರಲ್ಲಿ ಸತ್ಯಾಂಶ ಇಲ್ಲದಿಲ್ಲ, ಕೆಲವು ಕಡೆ ಭಾಷೆ ಕಲಿಕೆ ಕಡ್ಡಾಯ ಮಾಡದಿದ್ದರೆ ಆಗುವುದೇ ಇಲ್ಲ ಎಂಬ ವಾತಾವರಣವಿದೆ. ಉದಾಹರಣೆಗೆ ಬೆಂಗಳೂರಿನ ಶಾಲಾ ಕಾಲೇಜುಗಳಲ್ಲಿ ಕನ್ನಡ ಕಲಿಕೆ ಕಡ್ಡಾಯವೆಂಬ ನಿಯಮ ಇಲ್ಲದಿದ್ದರೆ ಕನ್ನಡ ಎಂದೋ ಕಳೆದುಹೋಗಿರುತ್ತಿತ್ತು, ಇನ್ನು ಕೂಡ ಕೆಲವು ಕಲಿಕೆಗಳಲ್ಲಿ ಕನ್ನಡದ ಗಂಧವೇ ಇಲ್ಲ, ಇದು ಯಾಕೋ ಸರ್ಕಾರದ ಗಮನಕ್ಕೂ ಬಂದಿಲ್ಲ. ಉದಾಹರಣೆಗೆ ಬೆಂಗಳೂರು ಒಂದರಲ್ಲೇ ದೈಹಿಕ ಚಿಕಿತ್ಸಾ ಕ್ರಮ ಕಲಿಸುವ ಪಿಸಿಯೋತೆರಪಿಯ ೫೦ ಕ್ಕೂ ಹೆಚ್ಚು ಕಾಲೇಜುಗಳಿವೆ, ಇವುಗಳಲ್ಲಿ ಕನ್ನಡದವರಿಗಿಂತ ಹೊರ ರಾಜ್ಯ ಅದರಲ್ಲೂ ಕೇರಳ ಹಾಗೂ ಬಿಹಾರಗಳ, ಉತ್ತರ ಭಾರತ, ಅಸ್ಸಾಂ ಕಡೆಯ ವಿದ್ಯಾರ್ಥಿಗಳು ಶೇ. ೯೦ರಷ್ಟಿದ್ದಾರೆ. ಇವರಿಗೆ ಕನ್ನಡ ಅನಿವಾರ್ಯ ಅನಿಸುವುದು ಅವರಿಗೆ ಕಾಲೇಜು ವಹಿಸುವ ನಿಯೋಜಿತ ಕಾರ್ಯ ಪೂರೈಸುವಾಗ ಮಾತ್ರ. ಏಕೆಂದರೆ ಅವರು ಬೇರೆ ಬೇರೆ ಆಸ್ಪತ್ರೆಗಳಿಗೆ ಹೋಗಿ ರೋಗಿಗಳಿಗೆ ನಿಗದಿತ ಅರ್ಜಿ ನಮೂನೆ ಕೊಟ್ಟು ಮಾಹಿತಿ ಪಡೆಯ ಬೇಕಾಗುತ್ತದೆ, ಆಗ ಮಾತ್ರ, ಇವರಲ್ಲಿ ಬಹುತೇಕರು ಕನ್ನಡ ಬಲ್ಲ ಜನರಿಂದ ಕೆಲಸ ಮಾಡಿಸಿಕೊಂಡು ಹಣ ಕೊಡುತ್ತಿದ್ದಾರೆ, ಅವರಿಗೆ ಕನ್ನಡ ಕಡ್ಡಾಯವಾಗಿಲ್ಲ. ಭಾಷೆ ತಾನೇ ಯಾವುದಾದರೂ ಕಲಿಯಲಿ ಎಂದು ಹೇಳುವಂತಿಲ್ಲ, ಈ ಪಿಸಿಯೋತೆರಪಿ ಕಾಲೇಜುಗಳನ್ನೇ ನೋಡಿ. ಈಚೆಗೆ ಈ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳನ್ನು ವೈದ್ಯರೆಂದು ಐಐಎಂ ಘೋಷಿಸಿದೆ. ಇದರಿಂದ ಮುಖ್ಯಧಾರೆಯಲ್ಲಿ ನೀಟ್ ಪಾಸಾಗದವರು ಆರಾಮವಾಗಿ ಇಂಥ ಕಾಲೇಜುಗಳ ಫೀಸು ಕಟ್ಟಿ ಪ್ರವೇಶಪಡೆದು ವೈದ್ಯರೆನಿಸಿಕೊಳ್ಳುತ್ತಾರೆ, ಇಲ್ಲೇ ನೆಲೆಯೂರುತ್ತಾರೆ, ನಮ್ಮ ನೆಲ, ಜಲ, ಜನ, ಆದರೆ ಭಾಷೆ ಕಲಿಯುವ ಅವಶ್ಯಕತೆ ಇರುವುದೇ ಇಲ್ಲ, ವೈದ್ಯರೆಂಬ ಹೆಗ್ಗಳಿಕೆ ಬೇರೆ. ಇಷ್ಟಾದರೆ ನಷ್ಟ ಯಾರಿಗೆ? ನನಗೆ ಅರ್ಥವಾಗದ ವಿಷಯವೆಂದರೆ ಹಿಂದೆ ಎಂಜಿನಿಯರಿಂಗ್ ನಂಥ ಬಿ ಇ, ವೃತ್ತಿಪರ ಕೋರ್ಸ್ಗಳಲ್ಲಿ ಕನ್ನಡ ಭಾಷೆ ಜಡ್ಡಾಯವೆಂದು ಸಮಿತಿಯ ಮೂಲಕ ಶಿಫಾರಸು ಕೊಡಲಾಗಿತ್ತು. ಅದು ನಮ್ಮ ರಾಜ್ಯದ ವಿಟಿಯು ಅಡಿ ಬರುವ ಕಾಲೇಜುಗಳಲ್ಲಿ ಅಳವಡಿಸಲಾಗಿದೆ.ಇದು ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿ ಬರಲಿದೆ, ಆ ಪದವಿಗಳ ಪಠ್ಯ ಕೂಡ ಅನುವಾದವಾಗಿವೆ, ಲಭ್ಯವಿವೆ, ಆದರೆ ಈ ವೈದ್ಯಕೀಯ ಹಾಗೂ ಪೂರಕ ವೈದ್ಯಕೀಯ ವೃತ್ತಿಪರ ಕೋರ್ಸಗಳಲ್ಲಿ ಕನ್ನಡ ಭಾಷೆಯನ್ನು ಯಾಕೆ ಕಡ್ಡಾಯಗೊಳಿಸಲಾಗಿಲ್ಲ ಎಂಬುದು. ಇದು ಕೂಡಲೇ ಆಗದಿದ್ದರೆ ನಮ್ಮ ಜನರಿಗೆ, ಕನ್ನಡ ಪದವೀಧರರಿಗೆ ಅನ್ಯಾಯವಾಗುತ್ತಲೇ ಇರುತ್ತದೆ, ಇಲ್ಲಿ ಕಲಿಯಲು ಬರುವವರು ಮೊದಲು ಕನಿಷ್ಠ ನಿತ್ಯ ಬಳಕೆಯ ಭಾಷೆಯನ್ನಾದರೂ ಕಲಿಯಲಿ, ಇಲ್ಲವಾದಲ್ಲಿ ಹೊಗಿನಿಂದ ಬರುವವರು ತಮ್ಮ ಭಾಷೆಯಲ್ಲಿ ಮಾತನಾಡಿ ವ್ಯವಹಾರ ಮುಗಿಸಿ ಹೋಗುತ್ತಾರೆ, ವ್ಯಾಪಾರಿಗಳಿಗೆ ವ್ಯಾಪಾರ ಮುಖ್ಯವೇ ವಿನಾ ಅವರು ಭಾಷೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ಕಾಲೇಜುಗಳು ವಿದ್ಯಾರ್ಥಿಗಳಿಂದ ಲಕ್ಷಾಂತರ ಸುಲಿಯುತ್ತವೆ, ಕನ್ನಡವೆಂದರೆ "ಆ" "ಊ" ಅನ್ನದೇ ಅವರೆಲ್ಲ ವೈದ್ಯ ಪದವಿ ಪಡೆದು ಹೋಗುತ್ತಾರೆ, ಈ ಬಗ್ಗೆ ಸರ್ಕಾರಮ ಸಾಹಿತ್ಯ ಪರಿಷತ್ತು ಆದಷ್ಟು ಬೇಗ ಗಮನಹರಿಸಿ ಕ್ರಮ ಕೈಗೊಳ್ಳಬೇಕು.

No comments:
Post a Comment