Friday, 8 August 2025

ಟಿಪ್ಪೂ ಕೊಡುಗೆ


ಕೆ ಆರ್ ಎಸ್ ಅಣೆಕಟ್ಟು ಕಟ್ಟಿಸಲು ಅಡಿಗಲ್ಲು ಹಾಕಿದ್ದು ಟಿಪ್ಪೂ ಸುಲ್ತಾನ ಎಂದು ಈಚೆಗೆ ಒಬ್ಬರು ರಾಜಕಾರಣಿ ಹೇಳಿದ್ದರ ವಿವಾದ ಇನ್ನೂ ನಿಂತಿಲ್ಲ, ಟಿಪ್ಪೂ ಮಾಡಿದ ಜನೋಪಯೋಗಿ ಘನ ಕಾರ್ಯಗಳೇನು ಎಂಬುದು ಬಿಚ್ಚಿಟ್ಟ ಚರಿತ್ರೆ ಓದಿದರೆ ತಿಳಿಯುತ್ತದೆ, ಮೇಲುಕೋಟೆ, ಕೊಡಗು ಜನರ ಇತಿಹಾಸ ಗಮನಿಸಿದರೆ ಸ್ವಲ್ಪ ಅರ್ಥವಾಗುತ್ತದೆ, ಕೇರಳದ ಮಾಪಿಳ್ಳೆಗಳ ಕತೆ ಕೇಳಿದರೂ ತಿಳಿಯುತ್ತದೆ, ಅದು ಹಾಗಿರಲಿ, ಅಷ್ಟಕ್ಕೂ ಈ ರಾಜಕಾರಣಿಗಳಿಗೆ ಇರುವ ನಮ್ಮ ಚರಿತ್ರೆ, ಸಂಸ್ಕೃತಿ ಹಾಗೂ ಸಾಹಿತ್ಯಗಳ ತಿಳಿವಳಿಕೆ ಅಷ್ಟರದ್ದೇ, ಇಷ್ಟು ನಮಗೆ ಗೊತ್ತಿದ್ದರೆ ಸಾಕು. ಇನ್ನುಕೆ ಆರ್ ಎಸ್ ಅಣೆಕಟ್ಟು ರಾತ್ರಿ ಬೆಳಗಾಗುವುದರೊಳಗೆ ಎದ್ದು ನಿಂತಿಲ್ಲ. ೧೯೧೧ರಿಂದ೧೯೩೨ರವರೆಗೆ ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿಯವರು ರಾತ್ರಿ ಬೆಳಗು ಕಣ್ಣು ಮಿಟುಕಿಸದೇ ತಮ್ಮ ಇದ್ದ ಬಿದ್ದ ಸಂಪತ್ತನ್ನೆಲ್ಲ ಧಾರೆ ಎರೆದು ಜನಸಾಮಾನ್ಯರ ನೆರವು ಪಡೆದು ಕಟ್ಟಿಸಿದ ಇತಿಹಾಸ ಅದು.

ಆ ಕಾಲಕ್ಕೆ ಇದರ ನಿರ್ಮಾಣ ವೆಚ್ಚ ೨.೫ ಕೋಟಿ ರೂಗಳು. ಇದನ್ನು ಭರಿಸಲು ರಾಜರು ಹರಸಾಹಸ ಪಟ್ಟಿದ್ದಾರೆ, ಬ್ರಿಟಿಷರು ಮತ್ತು ತಮಿಳುನಾಡು ನೀಡಿದ ಕಾಟವನ್ನು ಸಹಿಸಿಕೊಂಡು ಸಾಧಿಸಿದ್ದಾರೆ. ಇದನ್ನು ನಿರ್ಮಿಸುವ ಮೊದಲು ಮೈಸೂರು ಸುತ್ತ ಕಾವೇರಿ ನದಿಗೆ ೩೬ ಒಡ್ಡುಗಳಿದ್ದವು. ಅವುಗಳ ಸಾಮರ್ಥ್ಯ ಬಹಳ ಕಡಿಮೆ, ಅಷ್ಟಾಗಿ ಕೃಷಿಗೆ ಅನುಕೂಲವಾಗ್ತಿಲ್ಲ ಎಂದು ತಿಳಿದ ರಾಜರು ನೀರಿನ ಬವಣೆ ನೀಗಿಸುವ ಹಠ ತೊಟ್ಟು ಇದರ ನಿರ್ಮಾಣಕ್ಕೆ ಕೈ ಹಾಕುತ್ತಾರೆ, ಆಗ ತಾನೆ ತಂತ್ರಜ್ಞರಾಗಿ ಪದವಿ ಪಡೆದು ಬಂದಿದ್ದ ವಿಶ್ವೇಶ್ವರಯ್ಯ ಇದರ ಹೊಣೆ ಹೊರುತ್ತಾರೆ, ರಾಜರು ದೊಡ್ಡ ಜವಾಬ್ದಾರಿ ವಹಿಸಿದ್ದನ್ನು ಅರಿತ ಇದಕ್ಕೆ ಪೂರ್ವತಯಾರಿ ಎಂಬಂತೆ ವಿಶ್ವೇಶ್ವರಯ್ಯನವರು ಮೈಸೂರಿನ ಕೆ ಆರ್ ಎಸ್ ಕಟ್ಟುವ ಮುಂಚೆ ಚಿತ್ರದುರ್ಗದ ಮಾರಿಕಣಿವೆಯ ಅಣೆಕಟ್ಟು ರಚಿಸಿ ಅನುಭವ ಗಳಿಸಿದ್ದರು. ಅದನ್ನು ವೇದವತಿ ನದಿಗೆ ೧೯೦೭ರಲ್ಲಿ ಕಟ್ಟಲಾಗಿದೆ. ಅನಂತರ ೧೯೩೮ರಲ್ಲಿ ಅವರು ತುಮಕೂರಿನ ಮಾರ್ಕೋನಹಳ್ಳಿ ಎಂಬಲ್ಲಿ ಒಂದು ದೊಡ್ಡ ಅಣೆಕಟ್ಟು ನಿರ್ಮಿಸುತ್ತಾರೆ, ಅದು ಸುಮ್ಮನೇ ನಿರ್ಮಿಸಿದ್ದಲ್ಲ, ಅದರ ಉಪಯೋಗ ಇಂದಿಗೂ ತುಮಕೂರಿಗೆ ಅಪಾರವಾಗಿದೆ. ಅದರ ಸ್ವರೂಪ ಕೃಷ್ಣರಾಜಸಾಗರದ ಪ್ರತಿರೂಪದಂತೆ ಇದೆ. ಅಲ್ಲಿನ ಉದ್ಯಾನ ಕೂಡ. ಆದರೇನು ಅದರ ನಿರ್ವಹಣೆ ಸರಿಯಾಗಿಲ್ಲದ ಕಾರಣ ಅದು ಸೊರಗಿದೆ ಅಷ್ಟೇ. ಅಲ್ಲಿ ಕಸ ತೆಗೆಯುವವರೂ ಇಲ್ಲ, ಜನ ಅಲ್ಲಿ ತೊಳೆದುಕೊಳ್ಳಲು ಬರುವಂತಾಗಿದೆ. ಅದಕ್ಕೂ ತುಮಕೂರಿನ ಅರಣ್ಯ ಇಲಾಖೆ, ತೋಟಗಾರಿಕೆ ಅಥವಾ ಜಿಲ್ಲಾಡಳಿತ ಎಲ್ಲಕ್ಕೂ ಮುಖ್ಯವಾಗಿ ನೇತಾಗಳು ಅನಿಸಿಕೊಂಡವರು ಆಸಕ್ತಿ ತೋರಿಸಿದರೆ ಅಲ್ಲೊಂದು ಮಿನಿ ಸುಂದರ ಉದ್ಯಾನ ನಿರ್ಮಾಣವಾಗಿ ಜನರನ್ನು ಸೆಳೆಯುವುದರಲ್ಲಿ ಅನುಮಾನವಿಲ್ಲ, ಆದರೆ ಇದಕ್ಕೆ ಯಾರೊಬ್ಬರೂ ಆಸಕ್ತಿ ತೋರಿಸದಿರುವುದು ತುಮಕೂರಿನ ದುರಂತ. ಇದು ಈಗಲೂ ೪ ಸಾವಿರ ಹಳ್ಳಿಗಳ ಬಾಯಾರಿಕೆ ನೀಗಿಸುತ್ತಿದೆ. ಇದನ್ನು ಸಮೀಪದ ಯೆಡೆಯೂರಿನ ಸಿದ್ದಲಿಂಗೇಶ್ವರ ದೇವಾಲಯಕ್ಕೆ ಬರುವ ಪ್ರವಾಹ ನಿಯಂತ್ರಿಸಲು ಕಾವೇರಿಯ ಉಪನದಿ ಶಿಂಷಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಪ್ರಪಂಚದಲ್ಲಿ ಮೊದಲ ಬಾರಿಗೆ ಅಟೋಮೆಟಿಕ್ ರೀತಿಯಲ್ಲಿ ನೀರು ಹೊರಹೋಗುವಂತೆ ಸಿಪೋನ್ ವ್ಯವಸ್ಥೆಯಲ್ಲಿ ರೂಪಿತವಾದ ಅಣೆಕಟ್ಟು ಎಂಬ ಹೆಗ್ಗಳಿಕೆ ಇದಕ್ಕಿದೆ. ನಿಜವಾಗಿ ವಿಜಯನಗರ ಸಾಮ್ರಾಜ್ಯ ಬಿಟ್ಟರೆ ಜನಸಾಮಾನ್ಯರ ಹಿತವನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿದವರೆಂದರೆ ಮೈಸೂರು ಅರಸರು. ಆದ್ದರಿಂದಲೇ ಮೈಸೂರು ಸುತ್ತಮುತ್ತಲಿನ ಜನ ನಿತ್ಯ ಬೆಳಗಾದರೆ ಮನೆ ದೇವರ ಜೊತೆಗೆ ಅರಸರಿಗೆ ಅದರಲ್ಲೂ ನಾಲ್ವಡಿಯವರಿಗೆ ಒಂದು ನಮಸ್ಕಾರ ಹಾಕಲು ಮರೆಯುವುದಿಲ್ಲ, ಇತಿಹಾಸದಲ್ಲಿ ದಾಖಲಾಗಲಿ, ಯಾರದೋ ಪಿತೂರಿಯಿಂದ ದಾಖಲಾಗದಿದ್ದರೂ ಟಿಪ್ಪೂ ಅಂಥ ಕೆಲಸವನ್ನು ಒಂದಾದರೂ ಮಾಡಿದ್ದಿದ್ದರೆ ಅಲ್ಲಿನ ಅಥವಾ ಅವನ ಆಡಳಿತದೊಳಗಿದ್ದ ಜನ ಇಂದಿಗೂ ಖಂಡಿತ ದೇವರ ಮನೆಯಲ್ಲಿ ಅವನ ಚಿತ್ರವನ್ನು ಇಟ್ಟುಕೊಳ್ಳುತ್ತಿದ್ದರು, ನೆನೆಯುತ್ತಿದ್ದರು, ಅಲ್ಲವೇ?

ಜನಪದರು ನೆರವನ್ನು ಮರೆಯುವವರಲ್ಲ ಎಂಬುದು ನಮಗೆ ನೆನಪಿರಲಿ. ಅಂಥದ್ದೊಂದು ನಿದರ್ಶನ ಕೂಡ ಟಿಪ್ಪೂ ವಿಷಯದಲ್ಲಿ ಎಲ್ಲಿಯೂ ಸಿಗುವುದಿಲ್ಲ ಅಂದರೆ ಆತ ಎಂಥ ಮಹಾರಾಜನಾಗಿದ್ದಿರಬಹುದೆಂದು ಊಹಿಸಬಹುದು. ಒಂದೆರಡು ವರ್ಷಗಳ ಹಿಂದೆ ಜನಪದ ತಜ್ಞರಾದ ಹನೂರು ಕೃಷ್ಣಮೂರ್ತಿ ಅವರು ಟಿಪ್ಪೂ ಕುರಿತು ಜನಪದರಿಂದ ದೊರೆತ ಮಾಹಿತಿಯ ಆಧಾರದಲ್ಲಿ ' ಅಜ್ಞಾತನೊಬ್ಬನ ಆತ್ಮ ಚರಿತ್ರೆ ಎಂಬ ಸುಂದರ ಕಾದಂಬರಿ ರಚಿಸಿಕೊಟ್ಟಿದ್ದಾರೆ, ಟಿಪ್ಪೂ ಜೀವನ ಹಾಗೂ ಅವನ ಅದ್ಭುತ ಕಾರ್ಯ ಯೋಜನೆಗಳು ಅದರಲ್ಲಿ ಇತಿಹಾಸದಂತೆ ದಾಖಲಾಗಿವೆ, ಆಸಕ್ತರು ಗಮನಿಸಿ. ಇಷ್ಟಲ್ಲದೇ ಅವನ ಭೀಕರ ಆಡಳಿತ ಜನಪದರ ಬಾಯಲ್ಲಿ ಇಂದಿಗೂ ಕೊಡಗು, ಮೇಲುಕೋಟೆಗಳಲ್ಲಿದೆ, ಕೇಳಿ ಆನಂದಿಸಬಹುದು. ಹೊರತಾಗಿ ಯಾರನ್ನೋ ಮೆಚ್ಚಿಸಲು ಇದ್ದಬಿದ್ದ ಜನೋಪಯೋಗಿ ಕಾರ್ಯಗಳ ಋಣವನ್ನು ಆತನಿಗೆ ಆರೋಪಿಸಬಹುದು, ಇವೆಲ್ಲ ನಿಜವಲ್ಲ.


  


No comments:

Post a Comment