ಬ್ರಿಟಿಷರ ವಿರುದ್ಧ ಬೇಡರು, ಸಂತಾಲರು ಮೊದಲಾದವರೆಲ್ಲ ಹೋರಾಟಮಾಡಿದ್ದು ತಮ್ಮ ಅಸ್ತಿತ್ವದ ಮೇಲೆ ಅಡ್ಡಿಯಾದಾಗ ಎಂಬುದನ್ನು ಗಮನಿಸಬೇಕು. ತಮ್ಮ ಸುರಕ್ಷತೆಗಾಗಿ ಇಲ್ಲ ಸಲ್ಲದ ನಿಯಮ ಜಾರಿಗೊಳಿಸಿ ಬಲಾತ್ಕಾರ ಮಾಡಿದ ಬ್ರಿಟಿಷರು ಅಸ್ತ್ರಾಸ್ತ್ರ ನಿಷೇಧ ಮಾಡುವಾಗ ಆದಿವಾಸಿಗಳ ಆಯುಧಗಳನ್ನೂ ನಿಷೇಧಿಸಿದ್ದರು. ಆದರೆ ಬ್ರಿಟಿಷರ ನಿಯಮ ಆದಿವಾಸಿಗಳ ಬದುಕಿನ ಮೇಲೆ ದಾಳಿ ಮಾಡಿತ್ತು. ಇದಕ್ಕಾಗಿ ಬ್ರಿಟಿಷರು ದೊಡ್ಡ ಬೆಲೆ ತೆರಬೇಕಾಯಿತು. ಅದು ಇತಿಹಾಸ. ಆದರೆ ಇಂದಿನ ಆಧುನಿಕ ಸಮಾಜ ಕೂಡ ಬ್ರಿಟಿಷರ ವಿಧಾನವನ್ನೇ ಇನ್ನೊಂದು ರೀತಿಯಲ್ಲಿ ಮಾಡುತ್ತಿದೆ.
ಆಧುನಿಕ ಸಮಾಜದಲ್ಲಿ ಮನರಂಜನೆಯ ಮಾಧ್ಯಮಗಳು ಮನರಂಜನೆಯ ಹೆಸರಲ್ಲಿ ಆದಿವಾಸಿಗಳ ಜೀವನದಲ್ಲಿ ಆಟವಾಡುತ್ತಿವೆ. ಇದರ ಅವಲೋಕನ ಮಾಡಬಹುದು, ಆದರೆ ಆಧುನಿಕ ಸಮಾಜದಲ್ಲೂ ಆದಿವಾಸಿಗಳ ಹಿತ ಕಾಯಲು ವಿವಿಧ ನಿಗಮ ಮಂಡಳಿಗಳಿವೆ, ಇವು ಎಲ್ಲ ಸಮಯದಲ್ಲೂ ಆದಿವಾಸಿಗಳ ಹಿತ ಕಾಯುವುದಿಲ್ಲ. ಉದಾಹರಣೆಗೆ ಒಂದೆರಡು ವರ್ಷಗಳ ಹಿಂದೆ ಕನ್ನಡ ರಿಯಾಲ್ಟಿ ಶೋವೊಂದರಲ್ಲಿ ಸೋಲಿಗ ಬುಡಕಟ್ಟಿನ ಯುವಕನೊಬ್ಬನನ್ನು ಕರೆತಂದು ಪ್ರಚಾರ ಗಿಟ್ಟಿಸಿಕೊಳ್ಳಲಾಗಿತ್ತು, ಮಾಧ್ಯಮಕ್ಕೆ ಬೇಕಾದ ಪ್ರಚಾರ ಸಿಕ್ಕ ಮೇಲೆ ಆ ಯುವಕನ ಪರಿಸ್ಥಿತಿಯತ್ತ ಮಾಧ್ಯಮ ಗಮನಕೊಡಲಿಲ್ಲ, ಇದರಿಂದ ಆತನ ಬದುಕು ಅಂತ್ಯವಾಯಿತು. ತೀರ ಈಚೆಗೆ ಇಂಥದ್ದೇ ಒಂದು ಶೋದಲ್ಲಿ ಸಿದ್ದಿ ಸಮುದಾಯದ ಯುವಕನೊಬ್ಬನನ್ನು ಕರೆತಂದು ಆದಿವಾಸಿಗಳ ಬಗ್ಗೆ ಮಾಧ್ಯಮಗಳಿಗೆ ಬಹಳ ಕಳಕಳಿ ಇದೆ ಎಂಬಂತೆ ತೋರಿಸಿಕೊಂಡು ಪ್ರಚಾರ ಪಡೆಯಲಾಯಿತು, ದುರಂತವೆAದರೆ ಈ ಇಬ್ಬರೂ ಯುವಕರು ಆಧುನಿಕ ಸಮಾಜದ ಒತ್ತಡ ತಡೆಯಲಾಗದೇ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರು, ಏಕೆ ಹೀಗೆಂದು ಯಾವ ಸಂಸ್ಥೆಯಾಗಲೀ ಸಮಾಜಶಾಸ್ತç ಅಧ್ಯಯನಕಾರರಾಗಲೀ ಗಮನಕೊಡಲಿಲ್ಲ. ನಿಜವಾಗಿ ಆಧುನಿಕ ಸಮಾಜ ಇವರನ್ನು ಸಾಯಿಸಿದೆ, ಆಧುನಿಕ ಸಮಾಜ ತಾನು ಜೀವಿಸುವ ಕ್ರಮದಲ್ಲೇ ಎಲ್ಲ ಸಮುದಾಯಗಳೂ ಜೀವಿಸಿದರೆ ಮಾತ್ರ ಅದು ಸಮಾನತೆ ಎಂದು ಭಾವಿಸಿ ಬಲಾತ್ಕಾರದಿಂದಲಾದರೂ ಅಂಥ ಸಮುದಾಯಗಳನ್ನು ತಾನು ಪ್ರಧಾನಧಾರೆ ಎಂದು ಕರೆಯುವ ಕ್ರಮಕ್ಕೆ ಎಳೆದುತರಲು ಒತ್ತಡ ಹಾಕುತ್ತದೆ. ಇದನ್ನು ಸೂಕ್ಷ್ಮ ಹಾಗೂ ಸರಳ- ಸಹಜ ಮನಸ್ಸಿನ ಬುಡಕಟ್ಟಿನ ಜನ ತಡೆದುಕೊಳ್ಳಲಾರರು. ಏಕೆಂದರೆ ಅಂಥ ಸಿದ್ಧತೆ ಅಥವಾ ಬದುಕಿನ ಪರಿಚಯವೇ ಅವರಿಗೆ ಅಪರಿಚಿತ. ಇಲ್ಲಿನ ಎರಡೂ ಪ್ರಕರಣಗಳಲ್ಲಿ ಆಗಿದ್ದೂ ಇದೇ. ಆಧುನಿಕ ಸಮಾಜ ಮುಗ್ಧ ಜನರ ಮನಸ್ಸಿನಲ್ಲಿ ಮೊದಲು ಅನಂತ ಆಸೆಗಳನ್ನು ಹುಟ್ಟಿಸುತ್ತದೆ, ಕನಸುಗಳನ್ನು ಬಿತ್ತುತ್ತದೆ, ಇವೆಲ್ಲ ಅಗ್ಗದ ಪ್ರಚಾರ ಹಾಗೂ ಹಣವನ್ನು ಆಧರಿಸಿರುತ್ತವೆ. ಸಮಸ್ಯೆ ಬರುವುದೇ ಇಲ್ಲಿ. ಶೋದಲ್ಲಿ ಬೆಳಕಿಗೆ ಬಂದ ಆದಿವಾಸಿಗಳನ್ನು ಮಾಧ್ಯಮಗಳು ಮತ್ತು ಜನಸಾಮಾನ್ಯರು ಹೋದಲ್ಲಿ ಬಂದಲ್ಲಿ ಬೆನ್ನು ಬಿದ್ದು ಅಂಥ ಆಸೆಗಳಿಗೆ ಗರಿ ಮೂಡಿಸುತ್ತವೆ. ಇವು ಒಳಗಿನಿಂದ ಒಡ್ಡುವ ಒತ್ತಡ ಅಸಾಧ್ಯ. ಇದನ್ನು ಇಬ್ಬರೂ ಯುವಕರು ಅನುಭವಿಸಿದ್ದಾರೆ. ಒಂದು ಹಂತ ಮುಗಿದ ಮೇಲೆ ಈ ಮಾಧ್ಯಮಗಳು ಹಾಗೂ ಜನರ ಗುಂಪು ದೂರವಾಗಿ ಯುವಕರು ಒಂಟಿತನ ಅನುಭವಿಸಿ ಮಾನಸಿಕವಾಗಿ ಕುಗ್ಗುವಂತಾಗುತ್ತದೆ, ತಮ್ಮದಲ್ಲದ ಜೀವನಕ್ರಮ ಅಳವಡಿಸಿಕೊಂಡ ಕರಣಕ್ಕೆ ಅವರ ಬಂಧುವರ್ಗ ಅವರನ್ನು ಈಗಾಗಲೇ ದೂರ ಇಟ್ಟಿರುತ್ತದೆ, ಈಗ ಒಂಟಿತನ ಅನುಭವಿಸುವಾಗ ಅವರ ಜೊತೆಗೆ ಯಾರೂ ಇರುವುದಿಲ್ಲ, ಅಂತಿಮವಾಗಿ ಇದು ಆತ್ಮಹತ್ಯೆಯ ಮೂಲಕ ಅವರನ್ನು ಬಲಿ ಪಡೆಯುತ್ತದೆ. ಇದು ಆಧುನಿಕ ಸಮಾಜ ಆದಿವಾಸಿ ಅಥವಾ ಬುಡಕಟ್ಟುಗಳನ್ನು ನಾಶ ಮಾಡುತ್ತಿರುವುದರ ಸಂಕೇತವೂ ಆಗಬಹುದು. ನಿಜವಾಗಿ ಶತಶತಮಾನಗಳಿಂದ ನಿರ್ದಿಷ್ಟ ಭೂಪ್ರದೇಶದಲ್ಲಿ ತಮ್ಮ ಜೀವನ ಕಟ್ಟಿಕೊಂಡ ಆದಿವಾಸಿಗಳು ಆ ನೈಸರ್ಗಿಕ ಪರಿಸರವನ್ನು ಕಾದುಕೊಂಡು ಬರುತ್ತಿರುತ್ತಾರೆ ಅದಿಲ್ಲದೇ ತಮ್ಮ ಜೀವನವಿಲ್ಲ ಎಂಬ ಅರಿವು ಅವರಿಗೆ ಇರುತ್ತದೆ, ಅದರಲ್ಲಿ ಸಹಜವಾಗಿ ಬದುಕು ಸಾಗಿಸುವ ಕೌಶಲವನ್ನು ಅವರು ಕಲಿಯುತ್ತಾರೆ, ಇದೇ ಅವರ ಜೀವನ ಕ್ರಮ, ಆದರೆ ಆಧುನಿಕ ಸಮಾಜ ತಾನು ಅಳವಡಿಸಿಕೊಂಡ ಜೀವನ ವಿಧಾನವೇ ಮನುಷ್ಯ ಸಮಾಜದ ಅಂತಿಮ ಕ್ರಮ, ಇದರ ವ್ಯಾಪ್ತಿಗೆ ಬಾರದವರು ಅನಾಗರಿಕರು ಹಾಗೂ ಅಂಥವರನ್ನೆಲ್ಲ ತನ್ನ ಜೀವನ ಕ್ರಮಕ್ಕೆ ಎಳೆದು ತರುವುದು ತನ್ನ ಕರ್ತವ್ಯವೆಂದು ಭಾವಿಸಿ ಬಲತ್ಕಾರದ ಮೂಲಕವಾದರೂ ಹೀಗೆ ಮಾಡುವುದು ಮಾನವ ಸಮಾಜದ ಕರ್ತವ್ಯ ಹಾಗೂ ಅದೇ ಸಮಾನತೆಯ ಆದರ್ಶ ಎಂದು ತಿಳಿದು ಅಂಥ ಕೆಲಸಕ್ಕೆ ಕೈಹಾಕುತ್ತದೆ. ನಿಜವಾಗಿ ನಮ್ಮ ಆದರ್ಶ ಸಂವಿಧಾನ ಕೂಡ ಸಮುದಾಯಕ್ಕೆ ಮಾತ್ರವಲ್ಲ, ಪ್ರತೀ ವ್ಯಕ್ತಿಗೆ ಅವನ ಬದುಕಿನ ಸ್ವಾತಂತ್ರ್ಯ ನೀಡುತ್ತದೆ, ಆದರೆ ಆಧುನಿಕ ಸಮಾಜ ನಾಗರಿಕತೆಯ ಹೆಸರಲ್ಲಿ ತನ್ನಂತೆಯೇ ಎಲ್ಲರೂ ಇರತಕ್ಕದ್ದೆಂದು ಬಲಾತ್ಕರಿಸುತ್ತದೆ, ಇದನ್ನು ಪ್ರಶ್ನಿಸುವವರೇ ಇಲ್ಲದಿರುವುದು ಆಧುನಿಕತೆಯ ದುರಂತ. ನಿಜವಾಗಿ ಆಧುನಿಕ ಸಮಾಜಕ್ಕೆ ಆದಿವಾದಿಗಳ ಬದುಕಿನ ಬಗ್ಗೆ ಗೌರವವಿದ್ದರೆ ಅವರ ಪಾಡಿಗೆ ಅವರು ಇರುವ ವ್ಯವಸ್ಥೆ ಮಾಡಿಕೊಡುತ್ತಿತ್ತು. ಇಲ್ಲ, ಬದಲಾಗಿ ತನ್ನಂತೆಯೇ ಅವರೆಲ್ಲ ಇರಬೇಕೆಂದು ಬಲಾತ್ಕರಿಸುತ್ತದೆ.
ಇದಿರಲಿ, ಇಂದಿನ ಸಂದರ್ಭದಲ್ಲಿ ಆದಿವಾಸಿಗಳನ್ನು ಆಧುನಿಕ ಸಮಾಜಕ್ಕೆ ಎಳೆದುತರುವ ಉದ್ದೇಶಕ್ಕಾಗಿ ಸರ್ಕಾರೇತರ ಸಂಸ್ಥೆಗಳು ಅಥವಾ ಎನ್‌ಜಿಒ ಗಳು ಕೆಲಸ ಮಾಡುತ್ತವೆ. ಈ ಸಂಸ್ಥೆಗಳು ಆಧುನಿಕತೆಗೆ ಇನ್ನೂ ತೆರೆದುಕೊಳ್ಳದ ಸಮುದಾಯಗಳನ್ನು ಗುರುತಿಸಿ ಅವುಗಳಿಗೆ ಆಧುನಿಕ ಶಿಕ್ಷಣ, ವೈದ್ಯ ವ್ಯವಸ್ಥೆಗಳನ್ನು ಒದಗಿಸುವ ಹಞಆಗೂ ಊಟ ವಸತಿಗಳನ್ನು ಒದಗಿಸುವ ಉದ್ದೇಶದಿಂದ ಸಾಕಷ್ಟು ಹಣ ಪಡೆದುಕೊಳ್ಳುತ್ತವೆ, ಇಂಥ ಸಂಸ್ಥೆಗಳಿಗೆ ಹಣ ಮಾಡುವ ದಂಧೆಗೂ ಈ ಆದಿವಾಸಿ ಪಂಗಡಗಳು ಅನುಕೂಲ ಮಾಡಿಕೊಟ್ಟಿವೆ, ಇದ್ಯಾವುದೂ ಆದಿವಾಸಿಗಳಿಗೆ ತಿಳಿದೇ ಇಲ್ಲ. ಒಂದು ಸಂದರ್ಭದಲ್ಲಿ ಮೈಸೂರಿನ ಸಮಾಜಶಾಸ್ತ್ರ ಅಧ್ಯಯನಕಾರರೊಬ್ಬರು ಆದಿವಾಸಿ ಕುಣಬಿ ಸಮುದಾಯದ ಬಗ್ಗೆ ತಾವು ಕೈಗೊಂಡ ಅಧ್ಯಯನ ವಿವರಿಸಲು ಒಬ್ಬ ಕುಣಬಿ ವ್ಯಕ್ತಿ ಹಾಗೂ ಮಹಿಳೆಯನ್ನು ಕರೆದುಕೊಂಡು ಬಂದು ಪ್ರದರ್ಶನಕ್ಕೆ ತಂದಿದ್ದರು, ಇದನ್ನು ನಾನು ಪ್ರಶ್ನಿಸಿದ್ದೆ. ಹೀಗೆ ಆದಿವಾಸಿಗಳು ಆಧುನಿಕ ಸಮಾಜಕ್ಕೆ ಪ್ರದರ್ಶನದ ವಸ್ತುವೂ ಆಗಿಬಿಟ್ಟಿದ್ದಾರೆ. ಇದು ಸರಿಯಲ್ಲ ಎಂಬ ಭಾವನೆಯೂ ನಮಗೆ ಕಾಡುವುದಿಲ್ಲ. ಹೀಗೆಯೇ ಈಗ ತಮ್ಮ ರ್ಸ್ವೃದಿಂದ ಪ್ರಾಣ ಕಳೆದುಕೊಂಡ ಇಬ್ಬರು ಬುಡಕಟ್ಟಿನ ಯುವಕರ ಬಗ್ಗೆ ಕೂಡ ಯಾವುದೇ ಮಾಧ್ಯಮ ಅದೊಂದು ಸುದ್ದಿ ಎಂಬಂತೆ ಬಿಂಬಿಸಿದ್ದು ಬಿಟ್ಟರೆ ಇನ್ನೇನೂ ಮಾಡಲಿಲ್ಲ, ಅದರ ಅಪಾಯದ ಆಯಾಮವೂ ಚಿಂತನಾರ್ಹ ಅನಿಸಲಿಲ್ಲ, ಒಟ್ಟಿನಲ್ಲಿ ಆಧುನಿಕತೆಯ ಹೆಸರಲ್ಲಿ ನಾವು ಏನೇ ಮಾಡಿದರೂ ಅದು ಅನುಸರಣೆಗೆ ಯೋಗ್ಯವೆಂದು ಭಾವಿಸಬೇಕೆಂದು ಈ ಸಮಾಜ ನಿರೀಕ್ಷೆ ಮಾಡುತ್ತದೆ, ಆದರೆ ಇದು ಮಾಡುತ್ತಿರುವ ಕೆಲಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರ ದೂರಗಾಮಿ ಅಪಾಯಗಳು ಗೋಚರವಾಗುತ್ತದೆ. ಇಂಥ ಮನಸ್ಥಿತಿಗೆ ಹೊರತಾಗಿ ಆದಿವಾಸಿಗಳನ್ನು ನಡೆಸಿಕೊಳ್ಳುವ ಅನ್ಯ ಮಾರ್ಗವೇ ಇಲ್ಲವೇ? ಇದನ್ನು ಚಿಂತಿಸಬೇಕಿದೆ. ನಿಜವಾಗಿ ನಾವು ನಾಗರಿಕರೇ ಆಗಿದ್ದರೆ ಇದು ಎಲ್ಲ ಮನುಷ್ಯರನ್ನೂ ಗೌರವದಿಂದ ಕಾಣುತ್ತದೆ ಎಂದಾದರೆ ಆದಿವಾಸಿಗಳ ಬದುಕನ್ನು ಅವರು ಬಾಳಲು ಬಿಡಬೇಕು. ಅದಕ್ಕೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು. ಆದರೆ ಆದಿವಾಸಿಗಳನ್ನು ನಮ್ಮಂತೆ ಬದಲಿಸುವುದೇ ದೊಡ್ಡ ಆದರ್ಶ ಎಂಬಂತೆ ಸರ್ಕಾರವೂ ಸೇರಿದಂತೆ ಎಲ್ಲರೂ ಭಾವಿಸುವುದರಿಂದ ಇಂಥ ನಿರೀಕ್ಷೆ ಅರ್ಥಹೀನ ಎನಿಸುತ್ತವೆ. ಮನುಷ್ಯನಾಗಿ ಹುಟ್ಟಿದ ಮೇಲೆ ಆತ ಜೀವಿಸುವ ಸಾಧ್ಯತೆ ಕೂಡ ಹಲವಾರು ಇವೆ. ನಮ್ಮ ಆಧುನಿಕ ಜೀವನ ಕ್ರಮ ಒಂದು ಬಗೆಯಾದರೆ ಆದಿವಾಸಿ ಜೀವನ ಇನ್ನೊಂದು ಬಗೆ, ಅದೇ ಸರಿ, ಇದೇ ಸರಿ ಎಂದು ಹೇಳುವುದು ಸರಿಯಲ್ಲ. ಇದು ನಮಗೆ ಅರ್ಥವಾಗುವುದು ಯಾವಾಗ ಎಂಬುದು ಪ್ರಶ್ನೆ.

No comments:
Post a Comment