ಇನ್ನೊಂದು ಸಂಗತಿ ಎಂದರೆ ಮನಶ್ಯಾಸ್ತ್ರಜ್ಞರು ಸಮಾಜ ವಿಜ್ಞಾನಿಗಳೂ ಆಗಿರುತ್ತಾರೆ, ಈ ದೃಷ್ಟಿಯಲ್ಲಿ ಅವರು ಸಮಾಜ ಅಧ್ಯಯನಕ್ಕೆ ಬೇಕಾದ ಸಮಗ್ರಿಗಳನ್ನು ಶಿಕ್ಷಣಕ್ಷೇತ್ರಕ್ಕೆ ಒದಗಿಸುತ್ತಾರೆ, ಇಲ್ಲಿ ಇಂಥ ಹತ್ತು ಹಲವು ಸಮಾಜ ಅಧ್ಯಯನ ಸಂಗತಿಗಳಿವೆ, ಪಾಲಕರ ನಡೆ, ಮಕ್ಕಳ ವರ್ತನೆ, ಸಮಾನ್ಯರ ಪ್ರತಿಕ್ರಿಯೆ ಇತ್ಯಾದಿ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಸಮಾಜ ಅಧ್ಯಯನದಲ್ಲಿ ಈಚೆಗೆ ಸಂಶೋಧನೆ ಮಾಡುವವರು ಸೂಕ್ತ ವಿಷಯ ಸಿಗದೇ ಚರ್ವಿತ ಚರ್ವಣ ಪಿ.ಎಚ್.ಡಿ. ಮಾಡುತ್ತಿದ್ದಾರೆ, ಜೊತೆಗೆ ಕನ್ನಡದಂಥ ವಿಷಯದಲ್ಲೂ ಗಮನಸೆಳೆಯುವ ವಿಷಯಗಳ ಕೊರತೆ ಕಾಣುತ್ತಿದೆ, ಆ ಈ ಕವಿ ಕೃತಿಗಳ ಒಂದು ಅಧ್ಯಯನ ಮಾಡಲಾಗುತ್ತಿದೆ. ಈ ಕೃತಿಯ ಶುರುವಾತಿನಲ್ಲಿ ಸಿಆರ್ ಸಿಯವರು ಒಂದು ವಿಷಯದ ಕಡೆಗೆ ಗಮನ ಸೆಳೆಯುತ್ತಾರೆ. ಅದೆಂದರೆ ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಎಲ್ಲೆಲ್ಲಿ ಮನಸ್ಸನ್ನು ಕುರಿತ ಮಾಹಿತಿಗಳು ಚಿಂತನೆಗಳಿವೆ ಎಂಬ ಉಲ್ಲೇಖಗಳನ್ನು ಕೊಡುತ್ತಾರೆ, ಇವುಗಳಲ್ಲಿ ವಚನ ಸಹಿತ್ಯದಿಂದ ಆಧುನಿಕ ಕನ್ನಡ ಸಾಹಿತ್ಯದ ಸಲುಗಳನ್ನು ಉಲ್ಲೇಖಿಸಿದ್ದಾರೆ, ಇದೊಂದು ಕೈ ದೀವಿಗೆ. ಇದನ್ನು ಇಟ್ಟುಕೊಂಡು ಮುಂದಿನ ಅಧ್ಯಯನಕಾರರು ಕನ್ನಡದಲ್ಲಿ ಮನಸ್ಸನ್ನು ಕುರಿತ ಸಂಶೋಧನೆಗೆ ತೊಡಗಬಹುದು, ಇಂಥ ಪ್ರಯತ್ನವನ್ನು ಕನ್ನಡ ಸಹಿತ್ಯದ ಸಂಶೋಧಕರು ಇನ್ನೂ ನಡೆಸಿದಂತೆ ಕಾಣುವುದಿಲ್ಲ, ನನಗಂತೂ ಇದು ಆಕರ್ಷಕ ಅನಿಸಿದೆ. ಹೀಗೆ ಆಕಾರ ಸಣ್ಣದಾದರೂ ಗುಣದಲ್ಲಿ ಬೃಹತ್ತಾದುದು ಇದು. ಜಗತ್ತು ಈಗ ಹೊಸಹೊಸ ವಿಷಯಗಳ ಕಡೆಗೆ ಹೊರಳುತ್ತಿರುವಾಗ ಕನ್ನಡದಂಥ ವಿಷಯದ ಬಗ್ಗೆ ಹಳೆದೆಂದು ಮೂಗು ಮುರಿಯುವಾಗ ಶಿಕ್ಷಕರು, ಸಂಶೋಧಕರು ಕನ್ನಡದಲ್ಲಿರುವ ಇಂಥ ಅಮೂಲ್ಯ ಸಾಮಗ್ರಿಯನ್ನು ಆಧುನಿಕ ರೀತಿಯಲ್ಲಿ ಶೋಧಿಸಿಕೊಟ್ಟರೆ ಅದರಿಂದ ಸಂಶೋಧನೆಗೂ ಅದನ್ನು ಮಾಡಿದವರಿಗೂ ಖಂಡಿತ ಶ್ರೇಯಸ್ಸು. ಈ ನಿಟ್ಟಿನಲ್ಲಿ ಆಸಕ್ತರು ಇದನ್ನು ಗಮನಿಸಲಿ. ನಮ್ಮ ನಿತ್ಯ ಬದುಕಿನ ಚಿಂತೆಗಳಿಗೆ ಅಂತ್ಯವಿಲ್ಲ, ಹುಟ್ಟಿನಿಂದ ಸಾಯುವವರೆಗೂ ನಾವು ಒಂದಲ್ಲ ಒಂದು ಚಿಂತೆಯಲ್ಲೇ ಇರುತ್ತೇವೆ, ಓದಪ್ಪಾ ಅಂದರೆ ಆಮೇಲೆ ಏನು ಎಂಬ ಚಿಂತೆ, ಅನಂತರ ನೌಕರಿ, ಆಮೇಲೆ ಮದುವೆ, ಮಕ್ಕಳ ಚಿಂತೆ, ಸರಿಯಾಗಿ ಹುಟ್ಟುತ್ತವೋಇಲ್ಲವೂ ಹುಟ್ಟಿದರೆ ಮುಂದೆ ಅವರಿಗೇನು, ಅವರ ಮದುವೆ, ಮನೆಯ ಚಿಂತೆ ಹೀಗೆ ಸದಾ ಚಿಂತೆಯಲ್ಲೇ ಸತ್ತ ಮೇಲೆ ಸತ್ ಮೇಲೆ ಎಲ್ಲಿಗೆ ಹೋಗುತ್ತೇನೋ ಎಂಬ ಚಿಂತೆ ಒಟ್ಟಿನಲ್ಲಿ ಇದು ನಮ್ಮ ಬೆನ್ನು ಬಿಡದ ಭೂತ, ಇದಕ್ಕೆಲ್ಲ ಮನಸ್ಸೇ ಮೂಲ ಅದನ್ನು ಸರಿ ಇಟ್ಟರೆ ಎಲ್ಲವೂ ಸುಗಮ. ಅದನ್ನೇ ಇಲ್ಲಿ ಸಿ ಆರ್ ಸಿ ತೋರಿಸಿದ್ದಾರೆ, ಸಮಾಜದಲ್ಲಿ ಎಲ್ಲರೂ ಓದಬೇಕಾದ ಕೃತಿ ಇದು. ಬೆಲೆಯೂ ಹೆಚ್ಚಿಲ್ಲ, ನ್ಯಾಯವಗಿದೆ. ಎಲ್ಲೆಂದರಲ್ಲಿ ಒಯ್ಯಲೂ ಬಹುದು. ನಮ್ಮ ಹಿರಿಯರು ಯಾವಾಗಲೂ ಹೇಳುತ್ತಾರೆ - ನಿಮ್ಮನ್ನು ನೀವು ನೋಡಿಕೊಳ್ಳಿ ಎಂದು, ನಮ್ಮನ್ನು ನಾವು ನೋಡಿಕೊಳ್ಳುವುದು ಎಂದರೆ ನಮ್ಮ ನಮ್ಮ ಮನಸ್ಸು ನೋಡಿಕೊಳ್ಳುವುದು ಎಂದರ್ಥ. ಆದರೆ ಅವ್ಯಕ್ತ ಮನಸ್ಸನ್ನು ನೋಡುವುದು ಹೇಗೆ? ಅದನ್ನು ಕೈಕಾಲು ಮುಖ ನೋಡಿಕೊಂಡಂತೆ ನೋಡಲಾಗದು, ಅದು ನಮ್ಮ ವರ್ತನೆಯ ಮೂಲಕವ್ಯಕ್ತವಾಗುತ್ತದೆ ಅಷ್ಟೇ, ಅಂದರೆ ವಿವಿಧ ಸಂದರ್ಭದಲ್ಲಿ ನಮ್ಮ ಮನಸ್ಸು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಅವರ ಕೃತಿಗಳು ಸರಳವಾಗಿ ತಿಳಿಸುತ್ತವೆ. ಅವರು ಕನ್ನಡದಲ್ಲಿ ಮನಶ್ಯಾಸ್ತ್ರದ ಕೃತಿಗಳನ್ನು ರಚಿಸುವವರೆಗೆ ಕನ್ನಡದಲ್ಲಿ ಬೆರಳೆಣಿಕೆಯ ಲೇಖನಗಳಿದ್ದವಷ್ಟೇ. ಪೂರ್ಣ ಪ್ರಮಾಣದಲ್ಲಿ ಕನ್ನಡದ ಮನಶ್ಯಾಸ್ತçದ ಪುಸ್ತಕಗಳು ಇರಲಿಲ್ಲ, ಆದರೆ ಈಗ ಅವರು ಉಂಟುಮಾಡಿದ ಜಾಗೃತಿಯ ಫಲವಾಗಿ ಕನ್ನಡ ಸಾಹಿತ್ಯ ಮನಶ್ಯಾಸ್ತ್ರದ ಕೃತಿಗಳ ವಿಷಯದಲ್ಲಿ ಸಮೃದ್ಧವಾಗಿದೆ. ಇದು ಅವರು ಕನ್ನಡಕ್ಕೆ ನೀಡಿದ ವಿಶೇಷ ಕೊಡುಗೆ. ಇದಕ್ಕಾಗಿ ಕನ್ನಡಿಗರು ಅವರಿಗೆ ಕೃತಜ್ಞರಾಗಿರಬೇಕು. ಕನ್ನಡಸಾಹಿತ್ಯ ಲೋಕ ಇನ್ನೂ ಕೆಲವು ಸಂಕುಚಿತ ಮನೋಧರ್ಮಗಳಿಂದ ಹೊರಬರಬೇಕಿದೆ, ಅವುಗಳಲ್ಲಿ ಒಂದೆಂದರೆ ಅಖಿಲಭಾರತ ಸಾಹಿತ್ಯ ಸಮ್ಮೇಳನ ನಡೆಯುತ್ತ ಬಂದು ಇಷ್ಟು ವರ್ಷಗಳಾದರೂ ಒಂದು ಬಾರಿಯೂ ಕನ್ನಡ ವಿಜ್ಞಾನ ಬರೆಹಗಾರರಿಗೆ ಇದರ ಅಧ್ಯಕ್ಷತೆಯ ಭಾಗ್ಯ ಒಲಿದು ಬಂದಿಲ್ಲ, ಸಿ.ಆರ್.ಸಿ. ಖಂಡಿತ ಇದಕ್ಕೆ ಅರ್ಹರು. ಮುಂದಿನ ಬಾರಿಯಾದರೂ ಕನ್ನಡ ಸಾಹಿತ್ಯ ಪರಿಷತ್ತು ಈ ಬಗ್ಗೆ ಗಮನಹರಿಸಲಿ ಎಂಬುದು ಸಾಹಿತ್ಯಪ್ರಿಯರ ಹಾರೈಕೆ. ಸಿ.ಆರ್.ಸಿ. ರವರು ಕನ್ನಡದಲ್ಲಿ ಮನಶ್ಯಾಸ್ತ್ರದ ವಿಷಯವುಳ್ಳ ಶರಪಂಜರದಂಥ ಕಾದಂಬರಿಗಳು ಬಂದಿದ್ದವಷ್ಟೇ. ಆದರೆ ಹಳಗನ್ನಡದಲ್ಲಿ ವಡ್ಡಾರಾಧನೆಯಂಥ ಕಥಾ ಸಾಹಿತ್ಯದಲ್ಲಿ ಮನೋ ಲೋಕದ ಕೆಲವು ಮಾದರಿಗಳು ದೊರೆಯುತ್ತವೆ. ತಂದೆಯೇ ಮಗಳನ್ನು ಮೋಹಿಸುವ ವಿವರ ಅದರಲ್ಲಿನ ಕಾರ್ತಿಕ ಋಷಿಯ ಕಥೆಯಂಥ ವಿವರಗಳಲ್ಲಿ ದೊರೆಯುತ್ತವೆ. ಆದರೆ ಇವುಗಳ ಅರ್ಥ ನಮಗೆ ಆಗಬೇಕೆಂದರೆ ಸಿ ರ‍್ಸಿಯಂಥಬವರ ನೆರವು ನಮಗೆ ಅತ್ಯಗತ್ಯ. ಶರೆಪಂಜರ ಜನಪ್ರಯವಾಯ್ತು. ಆದರೆ ಅದರಲ್ಲಿನ ವಸ್ತು ಜನಕ್ಕೆ ಸರಿಯಾಗಿ ಅರ್ಥವಾಗಿದ್ದು ಸಿ.ಆರ್.ಸಿ. ಯವರು ಅಂಥ ಮನಸ್ಥಿತಿಯನ್ನು ಸರಳವಾಗಿ ವಿವರಿಸಿದ ಮೇಲೆ, ಆದರೆ ಆ ಸಿನಿಮಾ ಜನಪ್ರಿಯವಾದುದು ಕಲಾವಿದರ ಪ್ರತಿಭೆಯಿಂದ, ಬಿಗಿಯಾದ ಕಥೆಯಿಂದ, ನಿರ್ದೇಶನದಿಂದ, ಅದಿರಲಿ, ಸಿ.ಆರ್.ಸಿ ಯವರು ಮನುಷ್ಯನ ಮನಸ್ಸಿನ ಲೋಕವನ್ನು ಕನ್ನಡದಲ್ಲಿ ತೆರೆದು ತೋರಿಸಿದವರು ಸಿ.ಆರ್.ಸಿ. ಈ ದೃಷ್ಟಿಯಿಂದ ಅವರು ಕನ್ನಡದ ಸಿಗ್ಮಂಡ್ ಫ್ರಾಯ್ಡ್ ಅಂದರೆ ತಪ್ಪಾಗದೆನಿಸುತ್ತದೆ.
ಸಿ.ಆರ್.ಸಿ. ಅವರು ತಮ್ಮ ವೃತ್ತಿ ಜೀವನದಲ್ಲಿ ಎಷ್ಟು ನಿಷ್ಠರೆಂದರೆ ನಿರಂತರವಾಗಿ ಅವರು ಮನೋ ವಿಜ್ಞಾನ ಕುರಿತು ಜನಸಾಮಾನ್ಯರಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರಲ್ಲಿ ಅನೇಕ ರೀತಿಯಲ್ಲಿ ದಶಕಗಳಿಂದ ಜಾಗೃತಿ ಮೂಡಿಸುತ್ತಿದ್ದಾರೆ, ಪ್ರಖ್ಯಾತ ನಿಮಾನ್ಸ್ ಸಂಸ್ಥೆಯಲ್ಲಿ ನಾಲ್ಕು ದಶಕಗಳ ಕಾಲ ವೈದ್ಯರಾಗಿ ದುಡಿದು ನಿವೃತ್ತರಾದರೂ ಬರೆಯುವ, ಜಾಗೃತಿ ಮೂಡಿಸುವ ಪ್ರವೃತ್ತಿಗೆ ನಿವೃತ್ತಿ ಹೇಳಿಲ್ಲ, ಇದು ಖುಷಿಯ ಸಂಗತಿ. ಈ ದೃಷ್ಟಿಯಿಂದ ಅವರು ಕನ್ನಡಕ್ಕೆ ನೀಡುತ್ತಿರುವ ಕೊಡುಗೆ ಅಪೂರ್ವವಾದುದು. ಅವರು ಕನ್ನಡಕ್ಕೆ ದೊರಕಿದ ಅನರ್ಘ್ಯ ರತ್ನ. ಅವರು ಹೀಗೆಯೇ ತಮ್ಮ ಕನ್ನಡ ಸಾಹಿತ್ಯ ದೇವಿಯ ಕೈಂಕರ್ಯ ಸದಾಕಾಲ ಮಾಡುತ್ತಿರಲಿ, ನಾವೆಲ್ಲ ಅವುಗಳನ್ನು ಓದಿ ಸವಿಯುತ್ತಿರೋಣ. ಜೇಬಿಗೂ ಕೈಗೂ ಭಾರವೆನಿಸದ ಇಂಥ ಕೃತಿಗಳು ಯಾವುದೇ ಮನೆಗೆ ಶೋಭೆಕೊಡುತ್ತವೆ. ಕನ್ನಡದ ಎಲ್ಲರ ಮನೆಯಲ್ಲಿರಬೇಕಾದ ಕೃತಿ ಇದು. ನಿಮ್ಮಿಂದ ಏನಾಗುತ್ತದೋ ಬಿಡುತ್ತದೋ ಈ ಕೃತಿಯನ್ನು ಕೊಂಡು ಓದಿ, ಅಷ್ಟು ಸಾಕು.
ಕೃತಿ ವಿವರ -
ಚಿಂತೆ ಬಿಡು ಮನವೇಲೇ- ಡಾ. ಸಿ.ಆರ್. ಚಂದ್ರಶೇಖರ್
ಪ್ರಕಾಶಕರು- ಕರ್ನಾಟಕ ಹವ್ಯಾಸಿ ಆಪ್ತಸಮಾಲೋಚಕರ ವೇದಿಕೆ
ಬೆಂಗಳೂರು-, ಮೊದಲ ಮುದ್ರಣ- ೨೦೨೫, ಪುಟಗಳು-೮೮, ಬೆಲೆ- ೯೦ ರೂ.
ಸಂಪರ್ಕ- ೦೮೦- ೨೬೪೮೨೯೨೯

No comments:
Post a Comment