
ಇದು ಮೊನ್ನೆ ನಾನು ಪಡೆದುಕೊಂಡ ಡಾ. ಸಿ ಆರ್ ಸಿ ಅವರ ಎರಡನೆಯ ಕೃತಿ - ವಿದ್ಯಾರ್ಥಿಗಳೇ ನಿಮ್ಮಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ, ಎಂಬುದು. ಇದು ಕೂಡ ಕಿರು ಕೃತಿ, ಗಾತ್ರದಲ್ಲಿ, ಪರಿಣಾಮ ಅಗಾಧ, ಇದನ್ನು ಈ ಕೃತಿ ೨೦೦೩ರಲ್ಲಿ ಪ್ರಕಟವಾದ ಅನಂತರ ೨೦೨೫ರ ಅವಧಿಯಲ್ಲಿ ೨೧ ಬಾರಿ ಮರು ಮುದ್ರಣವಾದ ಬಗೆಯೇ ತಿಳಿಸುತ್ತದೆ, ಕೆಲವು ವರ್ಷಗಳಲ್ಲಿ ಇದು ಎರಡಕ್ಕಿಂತ ಹೆಚ್ಚುಬಾರಿ ಒಂದೇ ವರ್ಷದಲ್ಲಿ ಮುದ್ರಣವಾಗಿದೆ ಎಂಬುದು ದೊಡ್ಡ ಸಂಗತಿ, ಯಾಕೆಂದರೆ ಕನ್ನಡದಲ್ಲಿ ಕತೆ ಕಾದಂಬರಿಗಳು ಅದರಲ್ಲೂ ಭೈರಪ್ಪರಂಥವರು ಬರೆದ ಕೃತಿಗಳು ಹೀಗೆ ಮರು ಮುದ್ರಣವಾಗುವುದುಂಟು, ಹೀಗಿರುವಾಗ ಮನೋ ವಿಜ್ಞಾನದ ಕೃತಿಗಳು ಹೀಗೆ ಮರು ಮುದ್ರಣವಾಗುವುದು ಅದ್ಭುತವೇ ಸರಿ, ಜೊತೆಗೆ ಇದು ಲೇಖಕರ ಜನಪ್ರಿಯತೆಯನ್ನೂ ತೋರಿಸುತ್ತದೆ. ಈ ಕೃತಿಯಲ್ಲಿ ಮಕ್ಕಳು ಅದರಲ್ಲೂ ಯೌವ್ವನಾವಸ್ಥೆಗೆ ಬರುತ್ತಿರುವ ಗಂಡು - ಹೆಣ್ಣು ಮಕ್ಕಳ ಸಮಸ್ಯೆಯನ್ನು ವಿಶೇಷವಾಗಿ ಗಮನಿಸಲಾಗಿದೆ. ಸಿ ಆರ್ ಸಿ ಅವರು ಮೂರ್ನಾಲ್ಕು ದಶಕಗಳ ಕಾಲ ಸಮಾಜದ ಸೇವೆ ಮಾಡುತ್ತಾ, ಸಮಾಲೋಚನೆ ನಡೆಸುತ್ತಾ ಬರುವಾಗ ಅವರಿಗೆ ಯುವ ಜನತೆ ಬೇರೆ ಬೇರೆ ಕಡೆ ಕೇಳಿದ ವಾಸ್ತವಿಕ ಸಮಸ್ಯೆಗಳ ಆಧಾರದಲ್ಲಿ ಸಮಾಜದಲ್ಲಿ ಇಂಥ ಸಮಸ್ಯೆಗಳಿವೆ ಎಂದು ತಿಳಿದು ಇವುಗಳಿಗೆ ತಮ್ಮ ಅನುಭವ ಮತ್ತು ಓದಿನ ಮೂಲಕ ಪರಿಹಾರ ಕಾಣಿಸಿ ಸಮಾಜವನ್ನು ತಿದ್ದುವ ಸಮಸ್ಯೆಗೆ ಪರಿಹಾರ ತೋರಿಸಿ ಸಮಾಧಾನ ನೀಡುವ ಕೆಲಸವನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ಈ ಕೃತಿಯಲ್ಲಿ ಇರುವ ಪುಟಗಳು ಕೇವಲ ೫೬, ಬೆಲೆ ರೂ ೬೦, ಆದರೆ ಯಥಾಪ್ರಕಾರ ಅಪಾರ ಉಪಯುಕ್ತ ಕೃತಿ ಇದು ಯಾವ ಮನೆಯಲ್ಲಿ ಮಕ್ಕಳು ಬೆಳೆಯುತ್ತಿದ್ದಾರೋ ಅಲ್ಲೆಲ್ಲ ಈ ಕೃತಿ ಇರಲೇಬೇಕು, ಏಕೆಂದರೆ ಇಲ್ಲಿರುವ ವಿಷಯ ಬೆಳೆಯುತ್ತಿರುವ ಮಕ್ಕಳಿಗೆ ನೇರವಾಗಿ ಸಂಬAಧಿಸಿದೆ. ಪ್ರೌಢಶಾಲೆ ಮುಗಿಸಿ ಪ್ರೌಢಾವಸ್ಥೆಗೆ ಬರುತ್ತಿರುವ ಮನೆ ಹಾಗೂ ಸಮಾಜದಲ್ಲಿ ಜವಾಬ್ದಾರಿ ಹೊತ್ತುಕೊಳ್ಳುವ ವಯಸ್ಸಿನ ಮಕ್ಕಳ ಮನಸ್ಸಿನ ಮೇಲೆ ಬೀಳುವ ವಿವಿಧ ಬಗೆಯ ಒತ್ತಡಗಳು ಸಮಸ್ಯೆಗಳಾಗಿ ವಿಶೇಷವಾಗಿ ಕಾಣಿಸಿಕೊಂಡು ಅಂಥ ಮಕ್ಕಳ ಸಾಮರ್ಥ್ಯ ಕುಂಠಿತವಾಗುತ್ತದೆ, ಇದನ್ನು ಬಗೆ ಹರಿಸದಿದ್ದರೆ ಅದು ಸಮಾಜಕ್ಕೆ ಅಪಾಯಕಾರಿಯಾಗುತ್ತದೆ, ಅಂಥ ಅಪಾಯವನ್ನು ಗದ್ದಲವಿಲ್ಲದೇ ಮೌನವಾಗಿ ಪರಿಹರಿಸುವ ಬಗೆಯನ್ನು ಇಲ್ಲಿ ಸಿ ಆರ್‌ಸಿಯವರು ಮಾಡಿದ್ದಾರೆ, ಇಂಥ ಸಮಸ್ಯೆ ಎದುರಿಸುವ ಬಹುತೇಕ ಮಕ್ಕಳು ಮೊದಲು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಾರೆ, ಧೈರ್ಯ ಸಾಲದೇ ಅದನ್ನು ಕೈಬಿಡುತ್ತಾರೆ, ಆದರೂ ಅಂಥ ಪ್ರಯತ್ನ ಮಾಡುವುದಿಲ್ಲ ಎಂದೇನೂ ಇಲ್ಲ, ಈ ಬಗೆಯ ಸಮಸ್ಯೆಗಳು ಮುಕ್ಕಾಲು ಪಾಲು ಯುವಜನತೆಯಲ್ಲಿ ಸಾಮಾನ್ಯ, ಅಕಸ್ಮಾತ್ ಅವರೆಲ್ಲ, ಆತ್ಮಹತ್ಯೆಗೆ ಶರಣಾಗತೊಡಗಿದರೆ ಸಮಾಜದ ಗತಿ ಏನು? ಇದನ್ನು ಕಾನೂನು ತಡೆಯಲಾಗದು, ಇದು ಸಾಧ್ಯವಾಗುವುದು ಇಂಥ ವೈದ್ಯರಿಂದ ಮಾತ್ರ, ಮನಸ್ಸಿನ ಒಳ ಹೋಗಬಲ್ಲವರಿಂದ ಮಾತ್ರ, ಅದಾಗಬೇಕು, ಇಲ್ಲಿನ ಸಮಸ್ಯೆಗಳನ್ನು ಮಕ್ಕಳು ಹೇಳಿಕೊಂಡ ರೀತಿಯಲ್ಲಿಯೇ ಮೊದಲು ಓದುಗರ ಮುಂದೆ ಇಟ್ಟಿದ್ದಾರೆ, ಅನಂತರ ಸಾಮಾನ್ಯ ಬರೆಹದ ಮೂಲಕ ಪರಿಹಾರ ಕೊಟ್ಟಿದ್ದಾರೆ. ಆಯಾ ಸಮಸ್ಯೆಗೆ ಅಲ್ಲಿಯೇ ಉತ್ತರ ಕೊಟ್ಟಿಲ್ಲ, ಇಲ್ಲಿರುವ ಪ್ರಶ್ನೆಗಳನ್ನು ಆಧರಿಸಿ ಸಿರ‍್ಸಿ ಅವರು ಇವನ್ನು ಅಧ್ಯಯನಕ್ಕೆ ಸಂಬಂಧಿಸಿದವು, ಪರೀಕ್ಷಾ ಭಯ, ಕೌಟುಂಬಿಕ, ಲೈಂಗಿಕ ಸಮಸ್ಯೆ, ಆಡಳಿತಾತ್ಮಕ, ಹಾಸ್ಟೆಲ್ ಸಮಸ್ಯೆ, ಸಹಪಾಠಿ ಸಮಸ್ಯೆಗಳೆಂದು ಸ್ಥೂಲವಾಗಿ ವಿಂಗಡಿಸಿದ್ದರೂ ಇವನ್ನು ಮತ್ತಷ್ಟು ವಿವರವಾಗಿ ವಿಂಗಡಿಸಬಹುದೆಂದು ಸೂಚಿಸುತ್ತಾರೆ, ಆದರೆ ಇಲ್ಲಿ ಈ ಕೃತಿಯ ವ್ಯಾಪ್ತಿಗೆ ಇದು ಸಾಕಾಗಿದೆ, ಇವೇ ಸಾಕಷ್ಟು ಸಾಮಗ್ರಿಯನ್ನು ನಮಗೆ ನೀಡುತ್ತವೆ, ಪ್ರೌಢ ವಯಸ್ಸಿಗೆ ಬರುತ್ತಿರುವ ಮಕ್ಕಳಿಗೆ ಆ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನ ದೊರೆಯದಿದ್ದಲ್ಲಿ ಅವರ ಜೀವನ ಮೂರಾಬಟ್ಟೆಯಾಗುತ್ತದೆ, ಏಕೆಂದರೆ ಅವರ ದೈಹಿಕ ಬೇಡಿಕೆ, ಸುತ್ತಲಿನ ಆಕರ್ಷಣೆ, ಕುಟುಂದ ಒತ್ತಡ, ಸಮಾಜದ ನಿರೀಕ್ಷೆಗಳೆಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಮತ್ತು ಸಾಮರ್ಥ್ಯ ಅವರಿಗೆ ಇನ್ನೂ ಬಂದಿರುವುದಿಲ್ಲ, ಅವರಿಗೆ ತಮ್ಮ ಸಮಸ್ಯೆ ಯಾವುದೆಂಬ ಕಲ್ಪನೆ ಕೂಡ ಇರುವುದಿಲ್ಲ, ಇವನ್ನು ಪರಿಹರಿಸಿಕೊಳ್ಳುವ ಬಗೆಯ ಬಗ್ಗೆಯೂ ಸೂಕ್ತ ತಿಳಿವಳಿಕೆ ಇರುವುದಿಲ್ಲ, ಆದರೆ ದೇಹದ ಹಾರ್ಮೋನುಗಳ ಬದಲಾವಣೆ, ಮಾನಸಿಕ ಸೆಳೆತಗಳು ಬುದ್ಧಿಯನ್ನು ನಿಯಂತ್ರಿಸುತ್ತಿರುತ್ತವೆ, ಕುಟುಂಬವಾಗಲೀ ಸಮಾಜವಾಗಲೀ ಅವರಿಂದ ನಿರೀಕ್ಷೆ ಮಾಡುತ್ತದೆಯೇ ವಿನಾ ಅವರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಾರಿ ತೋರಿಸುವ ಕ್ರಮ ಹಾಕಿಕೊಡುವುದಿಲ್ಲ, ಆದರೂ ಹೇಗೋ ಮಕ್ಕಳು ಅದೃಷ್ಟವಶಾತ್ ತಮ್ಮನ್ನು ಸಮತೋಲದಲ್ಲಿಟ್ಟುಕೊಂಡು ಆ ಅವಧಿಯನ್ನು ನಮ್ಮ ಸಮಾಜದಲ್ಲಿ ದಾಟಿಬರುತ್ತಿದ್ದಾರೆ. ಅದರೆ ಎಲ್ಲರಿಗೂ ಇದು ಸುಲಭದ ದಾರಿಯಲ್ಲ, ವಿಶೇಷವಾಗಿ ಲೈಂಗಿಕತೆಯ ಬಯಕೆಯನ್ನು ತಡೆದುಕೊಳ್ಳುವ ಅದಕ್ಕೆ ಸೂಕ್ತ ಮಾರ್ಗ ಹುಡುಕಿಕೊಳ್ಳುವ ಕ್ರಮ ಸುಲಭದಲ್ಲಿ ಸಿಗುವುದಿಲ್ಲ, ಕದ್ದು ಮುಚ್ಚಿ ಇಂಥ ಬಯಕೆಯನ್ನು ತೀರಿಸಿಕೊಳ್ಳುವವರ ಸಂಖ್ಯೆಯೇ ಹೆಚ್ಚು, ಇದು ಅಪಾಯದ ಕಡೆಗೆ ಒಯ್ಯುತ್ತದೆ, ಇಂಥ ಸಂದರ್ಭದಲ್ಲೇ ಮಕ್ಕಳು ಹಾದಿ ತಪ್ಪುವುದು, ಮಾದಕ ದ್ರವ್ಯಗಳ ದಾಸರಾಗುವುದು, ಆತ್ಮಹತ್ಯೆಗೆ ಒಳಗಾಗುವುದು ಮಾಡಿಕೊಳ್ಳುತ್ತಾರೆ, ಈಗ ಬೇಕಿರುವುದು ಆಪ್ತ ಸಲಹೆ. ಸಣ್ಣ ಕುಟುಂಬದಲ್ಲಿ ಮಕ್ಕಳಿಗೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು, ಅವಕಾಶ ಸಿಕ್ಕಿದರೂ ಸೂಕ್ತ ಪರಿಹಾರ ದೊರೆಯುವ ನಿರೀಕ್ಷೆ ಇರುವುದಿಲ್ಲ, ಜೊತೆಗೆ ಇದರಿಂದ ತಾವು ಅವಮಾನಕ್ಕೆ ಒಳಗಾದರೆಂಬ ಭಯ ಕೂಡ ಇರುತ್ತದೆ, ಹಾಸ್ಟೆಲ್ ನಂಥ ಕಡೆಗಳಲ್ಲಿ ಎಲ್ಲ ಕಡೆಯೂ ಆಪ್ತ ಸಲಹಾಗಾರರು ಇರುವುದಿಲ್ಲ, ಹಾಸ್ಟೆಲ್ ವಾರ್ಡನ್ ಇದನ್ನು ನಿರ್ವಹಿಸಬೇಕು, ಆತ ಆದೇಶ ಕೊಡಬಲ್ಲನೇ ವಿನಾ ಸಂತೈಸಲಾರ, ನಾನು ಬಹಳ ವರ್ಷ ಹಾಸ್ಟೆಲ್ ನಲ್ಲೇ ಇದ್ದೆ, ಅಲ್ಲಿ ಆಪ್ತ ಸಲಹೆ ಎಂಬುದೇ ಇರಲಿಲ್ಲ, ಏನಿದ್ದರೂ ಸಹಪಾಠಿಗಳು ಅಥವಾ ಹಿರಿಯ ವಿದ್ಯಾರ್ಥಿಗಳು ದಾರಿ ತೋರಿಸಬೇಕಿತ್ತು, ಅನೇಕ ಬಾರಿ ಇಂಥ ಸಂದರ್ಭದಲ್ಲಿ ರ‍್ಯಾಗಿಂಗ್ ನಡೆದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವುದೇ ಹೆಚ್ಚು. ಹೀಗಿರುವಾಗ ನಿರ್ಭಯವಾಗಿ ನಿಷ್ಪಕ್ಷಪಾತವಾಗಿ ದಾರಿ ತೋರುವವರೆಂದರೆ ಆಪ್ತ ಸಲಹೆಗಾರರು ಮಾತ್ರ, ಸಮಾಜ ಮತ್ತು ಸರ್ಕಾರ ಯುವಜನತೆಯ ಇಂಥ ಸಮಸ್ಯೆಯನ್ನು ಇನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುವುದಿಲ್ಲ.ಸದ್ಯ ಪದವಿ ಮತ್ತು ಮೇಲ್ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಅಪ್ತ ಸಮಾಲೋಚನೆಗೆ ವ್ಯವಸ್ಥೆ ದೊರೆಯುತ್ತಿದೆ, ಆದರೆ ಪ್ರೌಢಶಿಕ್ಷಣ ಹಾಗೂ ಪದವಿಪೂರ್ವ ಮಟ್ಟದಲ್ಲಿ ಹಾಗೂ ಗ್ರಾಮಗಳ ಮಟ್ಟದಲ್ಲಿ ಆಪ್ತ ಸಲಹಾಗಾರರು ಇರುವಂತೆ ಸ್ವಸ್ಥ ಸಮಾಜ ನಿರ್ಮಾಣವಾಗುವಂತೆ ಸರ್ಕಾರ ಗಮನಹರಿಸುವ ಅಗತ್ಯವಿದೆ. ಈ ಕೃತಿಯಲ್ಲಿರುವ ವಿವರಗಳನ್ನು ಗಂಭೀರವಾಗಿ ಪರಿಗಣಿಸಿದರೆ ನಮಗೆ ನಮ್ಮ ಸಮಾಜ ಎಲ್ಲಿ ಸೋಲುತ್ತಿದೆ ಎಂಬ ಅರಿವಾಗುತ್ತದೆ. ಈ ದೃಷ್ಟಿಯಿಂದ ನಮ್ಮ ಕಣ್ಣು ತೆರೆಯಿಸುವ ಕೃತಿ ಇದು. ಸಾಮಾನ್ಯವಾಗಿ ಪ್ರೌಢವಯಸ್ಸಿನ ಮಕ್ಕಳು ಅಥವಾ ಯುವಕರು ಲೈಂಗಿಕ ಬಯಕೆಯನ್ನು ಹತ್ತಿಕ್ಕಿಕೊಳ್ಳಲು ಹಸ್ತ ಮೈಥುನ ಮಾಡಿಕೊಳ್ಳುತ್ತಾರೆ, ಆದರೆ ಇದು ಸಮಾಜಿಕ ದೃಷ್ಟಿಯಿಂದ ಪಾಪ ಪ್ರಜ್ಞೆಯನ್ನೂ ಅವರಲ್ಲಿ ಉಂಟು ಮಾಡಿ ಅಡ್ಡದಾರಿ ಹಿಡಿಯುವಂತೆ ಮಾಡುತ್ತದೆ, ಇದನ್ನು ತಪ್ಪಿಸಲು ಸೂಕ್ತ ಮಾರ್ಗದರ್ಶನ ಅಗತ್ಯ, ತಿಳಿವಳಿಕೆ ಮೂಡಿಸುವ ಅಗತ್ಯವಿದೆ, ಲೈಂಗಿಕ ಬಯಕೆ ನೈಸರ್ಗಿಕವಾದರೂ ಅದನ್ನು ಪ್ರಾಣಿ ಪಕ್ಷಿಗಳಂತೆ ಮಾನವ ಸಮಾಜದಲ್ಲಿ, ಅದರಲ್ಲೂ ನಮ್ಮ ಸಮಾಜದಲ್ಲಿ ತೀರಿಸಿಕೊಳ್ಳಲು ಸಾಧ್ಯವಿಲ್ಲ, ಹತ್ತಿಕ್ಕಲೂ ಸಾಧ್ಯವಿಲ್ಲ, ಇಂಥ ವೇಳೆಯಲ್ಲಿ ವಯಸ್ಸಿಗೆ ಬರುತ್ತಿರುವ ಮಕ್ಕಳ ಕಡೆಗೆ ಗಮನಹರಿಸುವವರು ಯಾರು? ಹೇಗೆ? ಇದಕ್ಕೆ ಈ ಕೃತಿ ಉತ್ತರ ಕೊಡುತ್ತದೆ, ಪಾಲಕರೆಲ್ಲರ ಬಳಿ ಸಮಾಜದ ಪ್ರತಿಯೊಬ್ಬರ ಬಳಿ ಇರಬೇಕಾದ ಗ್ರಂಥ ಇದು, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆಧಾರಗಲ್ಲು ಇದು.
ಈ ಕೃತಿಯಲ್ಲಿ ಇನ್ನೂ ಸೇರಬೇಕಾದ ಸಂಗತಿಗಳು ಚರ್ಚಿಸಬೇಕಾದ ಹೊಸ ವಿಷಯಗಳು ಕೈಬಿಟ್ಟಿವೆ, ನಿಜ, ಇದು ೯೦ರ ದಶಕಕ್ಕಿಂತ ಹಿಂದೆ ಮಾಡಲಾದ ಸಮಾಲೋಚನೆಯ ಸಾಮಗ್ರಿಯನ್ನು ಒಳಗೊಂಡಿರುವುದು ಇದಕ್ಕೆ ಕಾರಣ, ಸಮಾಜ ಬದಲಾದಂತೆ ಸಮಸ್ಯೆಗಳ ಸ್ವರೂಪ ಕೂಡ ಬದಲಾಗುತ್ತದೆ ತಜ್ಞರು ಕೂಡ ಅದಕ್ಕೆ ಸೂಕ್ತ ಪರಿಹಾರ ಕೊಡುತ್ತಾರೆ, ಇದರಲ್ಲಿ ಮೊಬೈಲ್ ಸಮಸ್ಯೆ ಇತ್ಯಾದಿ ಸೇರಿಲ್ಲವೆಂದ ಮಾತ್ರಕ್ಕೆ ಇದು ಅಪರಿಪೂರ್ಣ ಎಂದಲ್ಲ, ಹಾಗೆ ನೋಡಿದರೆ ಇಲ್ಲಿ ಯಾವುದೂ ಪೂರ್ಣವಲ್ಲ, ಅಷ್ಟಕ್ಕೂ ಇದು ಮಾರ್ಗ ತೋರಿಸುವ ಕೃತಿ ಮಾತ್ರ. ಇದು ನೆನಪಿದ್ದರೆ ಸಾಕು. ಈ ದೃಷ್ಟಿಯಲ್ಲಿ ಈ ಕೃತಿ ಯಶಸ್ವಿಯಾಗಿದೆ. ಅಪಾರ ಸಾಮಾಜಿಕ ಕಳಕಳಿಯಿಂದ ಇಂಥ ಕೃತಿಯನ್ನು ನಮಗೆ ನೀಡಿದ ಸಿ ರ‍್ಸಿ ಅವರಿಗೂ ಇಂಥ ಕೃತಿಗಳನ್ನು ಸಮಾಜಕ್ಕೆ ಕೊಡುವ ಮೂಲಕ ಹೊಸ ಕರ್ನಾಟಕ ಕಟ್ಟುತ್ತಿರುವ ನವಕರ್ನಾಟಕ ಪ್ರಕಾಶನಕ್ಕೂ ನಾವೆಲ್ಲ ಆಭಾರಿಗಳು
ಕೃತಿ ವಿವರ -
ವಿದ್ಯಾರ್ಥಿಗಳೇ ನಿಮ್ಮ ಸಾಮಥರ್ಯವನ್ನು ಹೆಚ್ಚಿಸಿಕೊಳ್ಳಿ
ಲೇ - ಡಾ. ಸಿ ಆರ್ ಚಂದ್ರಶೇಖರ್; ಪ್ರಕಾಶಕರು - ನವಕರ್ನಾಟಕ ಪ್ರಕಾಶನ; ಮೊದಲ ಮುದ್ರಣ -೨೦೦೩; ಪುಟಗಳು - ೫೬; ಬೆಲೆ - ೬೦ ರೂ; ಇಪ್ಪತ್ತೊಂದನೆಯ ಮುದ್ರಣ - ೨೦೨೫.
No comments:
Post a Comment