ನನಗೆ ಕತೆಗಾರ ಮೊಗಳ್ಳಿ ಗಣೇಶ ಪರಿಚಯವಾಗಿದ್ದು ೮೦ರ ದಶಕದಲ್ಲಿ. ನಾನಾಗ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಓದುತ್ತಿದ್ದೆ. ನಮಗೆ ಅವರು ಅರೆಕಾಲಿಕ ಶಿಕ್ಷಕರಾಗಿದ್ದರು. ಅವರು ಜೀಶಂಪ ಅವರ ಶಿಷ್ಯರಾಗಿ ಅಪಾರ ಜಾನಪದ ಪ್ರೇಮ ಹೊಂದಿದ್ದವರು. ಅವರು ದ್ವತಃ ಅಗಾಧ ಓದು ಪ್ರಿಯರು. ಉಳಿದವರೂ ಓದುವಂತೆ ಪ್ರೇರೇಪಿಸುತ್ತಿದ್ದರು. ನಾನು ಅವರ ಪ್ರಭಾವದಿಂದಲೇ ಸ್ವಲ್ಪ ಜಾಸ್ತಿಯಾಗಿ ಗಂಗೋತ್ರಿಯ ಗ್ರಂಥಾಲಯದಲ್ಲಿ ಸಮಯ ಕಳೆತೊಡಗಿದೆ. ಸಾಲದ್ದಕ್ಕೆ ಆಗಾಗ ಬಳಿ ಬಂದು ಹೊಸ ಹೊಸ ಪುಸ್ತಕಗಳ ಬಗ್ಗೆ ಹೇಳಿ ಗ್ರಂಥಾಲಯದಿಂದ ತೆಗೆದುಕೊಡುತ್ತಿದ್ದರು. ಅವರೇ ನನಗೆ ಮೊದಲ ಬಾರಿಗೆ ಕಾಲಿನ್ಸ್, ವೆಬ್‌ಸ್ಟರ್, ಲಾಂಗ್ ಮನ್ ಮೊದಲಾದ ಶಬ್ದಕೋಶಗಳು, ಬ್ರಿಟಾನಿಕಾ ವಿಶ್ವಕೋಶ ಹಿಡಿದು ತೋರಿಸಿದವರು. ವಿಮೆನ್ ಎಂಬ ಅಪೂರ್ವ ಗ್ರಂಥ ಸಂಪುಟ ಅಲ್ಲದೇ ಅಂಬೇಡ್ಕರ್ ಸಂಪುಟಗಳು ಅವರಿಂದ ಪರಿಚಿತವಾದವು. ಗಂಗೋತ್ರಿಯ ಮುಖ್ಯ ಗ್ರಂಥಾಲಯದ ರೇರ್ ಮಾತ್ರವಲ್ಲ, ವೆರಿ ರೇರ್ ಪುಸ್ತಕಗಳ ವಿಭಾಗಕ್ಕೂ ಅಲ್ಲಿನ ಗ್ರಂಥಪಾಲಕರಾಗಿದ್ದ ರಾಮಶಢಷು ಅವರಿಂದ ಪ್ರವೇಶ ಕೊಡಿಸಿ ತೃಪ್ತಿಯಾಗುವಷ್ಟು ಓದಲು ಅವಕಾಶ ಮಾಡಿಸಿದರು. ಇದಕ್ಕಾಗಿ ನಾನು ಅವರನ್ನು ಎಂದೂ ಮರೆಯಲಾರೆ. ಅವರು ಕಲಿಸಿದ ಹೊಸ ವಿಷಯಗಳ ಓದಿನ ಹುಚ್ಚನ್ನು ಮುಂದುವರೆಸಿದ್ದೇನೆ. ಫಲವಾಗಿ ಚೌಚೌ ಓದುಗನಾಗಿ ಕಂಡವರಿಂದ ನಿಮಗೆ ನಿಮ್ಮದೇ ಸ್ವಂತ ವಿಷಯ ತಜ್ಞತೆ ಇಲ್ಲವೆಂದು ಮನೆಯವರಾದಿಯಾಗಿ ಬೈಸಿಕೊಳ್ಳುತ್ತಿದ್ದೇನೆ. ಇದರಲ್ಲೂ ಒಂಥರಾ ಖುಷಿ ಇದೆ. ಕೆಲವೊಮ್ಮೆ ನಮ್ಮ ನಡುವೆ ಭಿನ್ನಾಬಿಪ್ರಾಯಗಳಿದ್ದರೂ, ಅವರಲ್ಲಿ ಇದ್ದದ್ದು ಪ್ರೀತಿ ಮಾತ್ರ.
ಅವರು ಅಂದು ತೋರಿಸಿದ್ದ ವಿಮೆನ್ ಸೇರಿದಂತೆ ಹತ್ತು ಹಲವು ಪುಸ್ತಕಗಳನ್ನು ಅವಕಾಶ ಸಿಕ್ಕ ಎಲ್ಲ ಪುಸ್ತಕೋತ್ಸವಗಳಲ್ಲೂ ಹುಡುಕುತ್ತಿದ್ದೇನೆ, ಅವುಗಳಲ್ಲಿ ಒಂದೇ ಒಂದು ಪುಸ್ತಕ ಸ್ವಂತದ್ದಾಗುವುದಿರಲಿ, ಮೈಸೂರು ಗಂಗೋತ್ರಿ ಗ್ರಂಥಾಲಯ ಬಿಟ್ಟರೆ ಬೇರೆಲ್ಲೂ ನೋಡಲು ಸಿಕ್ಕಿಲ್ಲ. ಅಲ್ಲಿನ ಮಹಾರಾಜರು ತಮ್ಮ ಅಮೂಲ್ಯ ಗ್ರಂಥ ಸಂಗ್ರಹವನ್ನು ಗ್ರಂಥಾಲಯಕ್ಕೆ ದಾನ ಮಾಡಿದ್ದು ಇದಕ್ಕೆ ಕಾರಣವಿರಬೇಕು. ಅಂಥ ಅಪೂರ್ವ ಬಂಢಾರವನ್ನು ತೋರಿಸಿದ ಗಣೇಶ್ ನೆನಪಾಗಿದ್ದಾರೆ. ಸಾಂಪ್ರದಾಯಿಕ ಆಹಾರ ಪದ್ಧತಿ ಕುರಿತು ನಾನು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಡಿ. ಲಿಟ್ ಪ್ರಬಂಧವನ್ನು ಪುಸ್ತಕ ರೂಪದಲ್ಲಿ ತರುವಂತೆ ಒತ್ತಾಯಿಸಿ ಈಚೆಗೆ ಅದನ್ನು ಮುದ್ರಣಕ್ಕೂ ಕೊಡಿಸಿ ಅದಕ್ಕೊಂದು ಅದ್ಭುತ ಮುನ್ನುಡಿಯನ್ನೂ ಬರೆದು ತಡವಾಗುತ್ತದೆಂಬ ಕಾರಣಕ್ಕೆ ಸ್ವತಃ ಬಂದು ಕೊಟ್ಟುಹೋಗಿದ್ದರು.
ಇದಾಗಿ ಕೆಲವೇ ತಿಂಗಳಾಗಿವೆ, ಆಗ ಒಂದು ಸುಳಿವನ್ನೂ ಕೊಟ್ಟಿರಲಿಲ್ಲ, ಚೆನ್ನಾಗಿಯೇ ಇದ್ದರು, ಆದರೆ ಈಚೆಗೆ ಇದ್ದಕ್ಕಿದ್ದಂತೆ ಅವರ ಆರೋಗ್ಯ ಹದಗೆಟ್ಟಿತ್ತು. ಕಿಡ್ನಿ ಮತ್ತು ಲಿವರ್ ಕೈಕೊಟ್ಟಿದ್ದವು. ಇವು ಇಂದು ಬೆಳಿಗ್ಗೆ ಸಂಪೂರ್ಣ ಕೈಕೊಟ್ಟು ಅವರ ಉಸಿರನ್ನೇ ಕಿತ್ತವು. ನಾವೆಲ್ಲ ಕೆಲವು ವಿದ್ಯಾರ್ಥಿ ಮಿತ್ರರು ಸೇರಿ ಅವರ ಮದುವೆ ಮದ್ದೂರಿನಲ್ಲಾದಾಗ ಬಹಳ ಸಂಭ್ರಮದಿಂದ ಓಡಾಡಿದ್ದೆವು. ಅದಿನ್ನೂ ಮನದಲ್ಲಿ ಹಸಿರು. ಅವರ ಪತ್ನಿ ಶೋಭಾ ಅವರು ಸದ್ಗುಣಿ, ಅವರ ಸಕಲ ಶ್ರೇಯಸ್ಸು ಬಯಸಿದರು, ಮದುವೆಯಾದ ಹೊಸದರಲ್ಲಿ ಗಂಡನನ್ನು ಅನುಸರಿಸಿ ಬಯಲಸೀಮೆಯ ಹಂಪೆಗೆ ಗಂಡನೊಂದಿಗೆ ಹೋಗಿ ಸಂಸಾರ ಕಟ್ಟಿ ಬದುಕನ್ನು ಹಸಿರು ಮಾಡಿಕೊಂಡರು, ಮಕ್ಕಳೊಂದಿಗೆ ಚೊಕ್ಕ ಸಂಸಾರ ರೂಪಿಸಿಕೊಂಡರು, ಈಗ ವಿಧಿ ಅದರ ಮೇಲೆ ಸವಾರಿ ಮಾಡಿದೆ, ಅವರ ಮಕ್ಕಳಿಗೂ ಶೋಭಕ್ಕ ಅವರಿಗೂ ಸಕಲ ಶ್ರೇಯಸ್ಸು, ನೆಮ್ಮದಿ ಗಣೇಶರ ಸದ್ಗುಣದಿಂದ ಬದುಕಲ್ಲಿ ಲಭಿಸಲಿ, ಗಣೇಶರ ಬಗ್ಗೆ ಇಷ್ಟು ಬೇಗ ಇಂಥ ಮಾತು ಬರೆಯಬೇಕಾಗಿ ಬಂದುದು ದುಃಖಕರ, ಕನ್ನಡಕ್ಕೆ ಅವರು ಕೊಡಬೇಕಿದ್ದ ಕೊಡುಗೆಗಳು ಇನ್ನೂ ಸಾಕಷ್ಟಿದ್ದವು, ಅವನ್ನೆಲ್ಲ ಬಿಟ್ಟು ಹೋದಿರಲ್ಲಾ ಸಾರ್.

No comments:
Post a Comment