ಗಮಕ ಗಂಧರ್ವ, ಪದ್ಮಶ್ರೀ ಹೊಸಹಳ್ಳಿ ಕೇಶವಮೂರ್ತಿಗಳ ಮತ್ತು ನನ್ನ ಮೊದಲ ಸಮಾಗಮವೇ, ಅವರ ಗಮಕ ವಾಚನಕ್ಕೆ ವ್ಯಾಖ್ಯಾನ ನೀಡುವ ಮೂಲಕ ಆದುದು ನನ್ನ ಭಾಗ್ಯ. ಆವರೆಗೆ ಅವರ ಗಮಕವಾಚನಗಳನ್ನು ಧ್ವನಿಸುರಳಿಗಳ ಮೂಲಕ ಕೇಳಿ ಮಾರು ಹೋಗಿದ್ದ ನಾನು, ಅವರ ಕೆಲವು ಗಮಕ ಕಛೇರಿಗಳನ್ನು ದೂರದಲ್ಲಿ ಕುಳಿತು ಕೇಳಿದ್ದೆನಷ್ಟೆ. ಆಗಿನ್ನೂ ನಾನು ವ್ಯಾಖ್ಯಾನವನ್ನು ಪ್ರಾರಂಭಿಸಿರಲಿಲ್ಲ. ಇವರ ವಾಚನ ಕೇಳುತ್ತಲೇ ನಾನು ನನ್ನ ಪತ್ನಿಯ ವಾಚನಕ್ಕೆ ವ್ಯಾಖ್ಯಾನ ನೀಡಲು ಪ್ರಾರಂಭಿಸಿದ್ದೆ. ಹೀಗೆ ಹತ್ತಾರು ವರ್ಷ ಕಳೆಯುತ್ತಲೇ 2000ನೇ ವರ್ಷದಲ್ಲಿ ಬೆಂಗಳೂರಿನ ಕನಕಗಿರಿ ಗಮಕ ಕಲಾ ಪರಿಷತ್ತಿನವರು ಕುಮಾರವ್ಯಾಸ ತನ್ನ ಕಾವ್ಯವನ್ನು ರಚಿಸಿದ ಗದುಗಿನ ವೀರನಾರಾಯಣನ ದೇವಸ್ಥಾನದ ಆವರಣದಲ್ಲಿಯೇ ಏರ್ಪಡಿಸಿದ್ದ ಗಮಕ ಕಲಾ ಉತ್ಸವದಲ್ಲಿನ ಮೊದಲ ಕಾರ್ಯಕ್ರಮವೇ ಪೂಜ್ಯ ಕೇಶವಮೂರ್ತಿಗಳ ವಾಚನ ಮತ್ತು ನನ್ನ ವ್ಯಾಖ್ಯಾನ. ಇದೇ ನನಗೆ ಅವರ ಪ್ರಥಮ ಸಮೀಪದರ್ಶನ – ಎಲ್ಲ ಅರ್ಥಗಳಲ್ಲೂ !
ಅಂದಿನ ಕಾರ್ಯಕ್ರಮಕ್ಕೆ ನಿಗದಿಗೊಳಿಸಿದ್ದ ಕಾವ್ಯಭಾಗ ಕುಮಾರವ್ಯಾಸ ಭಾರತದ ಉದ್ಯೋಗಪರ್ವದ ‘ಕರ್ಣಭೇದನ’.
ಕಾರ್ಯಕ್ರಮದ ಪ್ರಾರಂಭಕ್ಕೆ ಮೊದಲೇ ನನ್ನಲ್ಲಿ ಯಾವುದೋ ಭಯವಲ್ಲದ ಭೀತಿ – ಎಂದೂ ಇಲ್ಲದ ಆತಂಕ, ಇಂತಹ ಹಿರಿಯರ ಪಕ್ಕದಲ್ಲಿ ಕುಳಿತು ವ್ಯಾಖ್ಯಾನ ಮಾಡಲು ನನಗೆ ಸಾಧ್ಯವೇ ಎಂಬ ಅಳುಕು. ಎದುರಿಗೆ ಕುಳಿತಿರುವವರು ಭವ್ಯಾಕೃತಿಯ ಮಾರ್ಕಂಡೇಯ ಅವಧಾನಿಗಳು. ನನ್ನ ಗಂಟಲು ಒಣಗಲು ಇನ್ನೇನು ಬೇಕು. ಮೊದಲು ನಾಂದೀ ಪದ್ಯಗಳೊಂದಿಗೆ ಪ್ರಾರಂಭಿಸಬೇಕಾದವರು ಆ ಹಿರಿಯರು. ಆದರೆ ಮೊದಲೇ ನೀರು ಕುಡಿದವನು ನಾನು.
ಬಹು ನಿರೀಕ್ಷಿತ ವಾಚನ ಪ್ರಾರಂಭವಾಯಿತು. ಸ್ವಸ್ತಿವಾಚನ, ನಾಂದೀ ಪದ್ಯಗಳನ್ನು ತಲೆದೂಗುವಂತೆ ಹಾಡಿದ ನಂತರ ನನ್ನ ಕಡೆಗೊಮ್ಮೆ ಸೌಮನಸ್ಯದ ನೋಟ ಬೀರಿ “ಸೆಣಸುವದಟರಗಂಡ ಸಮರಾಂಗಣಕತುಳ ಭೇರುಂಡನಾ ...........”
ಎಂಬ ಸೂಚನಾ ಪದ್ಯ ವಾಚಿಸಿ ನನ್ನ ವ್ಯಾಖ್ಯಾನಕ್ಕೆ ಬಿಟ್ಟರು. ಆವರೆಗೂ ಕಾರ್ಯಕ್ರಮದ ಬಗ್ಗೆ ನನಗಿದ್ದ ವಿವಿಧ ಭಾವಾನುಭಾವಗಳು ಕ್ಷಣ ಮಾತ್ರದಲ್ಲಿ ಮರೆಯಾಗಿ, ನನ್ನ ಸಹಜವಾದ ವ್ಯಾಖ್ಯಾನ ಶೈಲಿಯ ಪ್ರಕಾಶವಾಯಿತು. ಇನ್ನು ಮುಂದಿನದು ಅವರ ಲೀಲಾಜಾಲವಾದ, ವಿವಿಧ ರಸಾನುಭವಗಳಿಗೆ ಕಾರಣವಾಗುವ ವಿವಿಧ ರಾಗಗಳಲ್ಲಿ ಗಮಕವಾಚನ ಪ್ರಸ್ತುತಿ. ಅದಕ್ಕೆ ನನ್ನ ಅಳುಕಿಲ್ಲದ ವ್ಯಾಖ್ಯಾನ. ವ್ಯಾಖ್ಯಾನದ ನಂತರ ಕೆಲವು ಸಂದರ್ಭಗಳಲ್ಲಿ ಅವರು ನನ್ನನ್ನು ಶಾಂತ ಭಾವದಿಂದ ನೋಡಿ ವಾಚನ ಪ್ರಾರಂಭಿಸುತ್ತಿದ್ದ ರೀತಿ ಯಾವತ್ತೂ ಮರೆಯಲಾಗದ್ದು.
ಈ ಕಾರ್ಯಕ್ರಮ ನನ್ನ ದೃಷ್ಟಿಯಲ್ಲಿ ಅತ್ಯಂತ ಯಶಸ್ವಿಯಾಯಿತು ಎನ್ನಲಡ್ಡಿಯಿಲ್ಲ. ಇದರಲ್ಲಿ ಅತಿ ಹೆಚ್ಚಿನ ಪಾಲು ಶ್ರೀ ಹೆಚ್.ಆರ್.ಕೆ. ಅವರಿಗೆ ಸಲ್ಲುತ್ತದೆ. ನಂತರದ್ದು ಸನಕಾದಿ ಜಂಗಮ ಜನಾರ್ದನರಂತಿದ್ದ ಕೇಳುಗರಲ್ಲಿ ಮೊದಲ ಸಾಲಿನಲ್ಲಿ ಆಸೀನರಾಗಿದ್ದ ವೇ. ಮಾರ್ಕಂಡೇಯ ಅವಧಾನಿಗಳದ್ದು, ಅಂತಹ ಒಬ್ಬೊಬ್ಬ ಶ್ರೋತೃಗಳು ಸಾವಿರ ಶ್ರೋತೃಗಳಿಗೆ ಸಮ. ಕಿರಿಯರನ್ನು ಪ್ರೋತ್ಸಾಹಿಸುವ ಅವರ ರೀತಿ ಅನನ್ಯ !
ಇದಾದ ಸುಮಾರು ದಿನಗಳ ನಂತರ ಅವರೊಂದಿಗೆ ಕಾರ್ಯಕ್ರಮಕ್ಕಾಗಿ ಪ್ರಯಾಣಿಸುತ್ತಿದ್ದೆ. ಮೊದಲ ಕಾರ್ಯಕ್ರಮ ಗದುಗಿನಲ್ಲಿ ನಡೆದುದು ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ಅಂದು ನನಗೆ ಮುಜುಗರ ಹೋಗಿ, ಅವರೊಂದಿಗೆ ವ್ಯಾಖ್ಯಾನ ಮಾಡಿದಾಗಿನ ಧೈರ್ಯ ಎಲ್ಲಿಂದ ಬಂತು ಎಂಬ ಪ್ರಶ್ನೆ ಮೂಡಿ ಬಂತು. ಪ್ರಯಾಣದ ಅರ್ಧದೂರ ಮನಸ್ಸು ಮಥಿಸುತ್ತಿತ್ತು. ನಿಧಾನವಾಗಿ ಉತ್ತರ ತೇಲಿ ಬರುತ್ತಿತ್ತು. ಅದನ್ನು ಒಂದೇ ಮಾತಿನಲ್ಲಿ ಹೇಳಬೇಕೆಂದರೆ – ಅದು ಹೆಚ್.ಆರ್.ಕೆ. ಅವರ ಗಾಯನದಲ್ಲಿನ ರಮಣೀಯವಾದ ಮಾರ್ದವತೆ. ಅದೇ ನನ್ನಲ್ಲಿ ಧೈರ್ಯವನ್ನು ತುಂಬಿದುದು.
ಕುಮಾರವ್ಯಾಸನ ಪ್ರತಿ ವಾಕ್ಯವನ್ನು ಹಾಡುವಾಗ ಅವರು ಆ ವಾಕ್ಯಕ್ಕೆ ಭಾವಗಳನ್ನು ತುಂಬಿ ರಸೋತ್ಪತ್ತಿ ಮಾಡುವ ಕ್ರಮ, “ಭೇದವಿಲ್ಲೆಲೆ ಕರ್ಣ................” ಎಂದು ಅವರು ಹಾಡುವಾಗ ವ್ಯಾಖ್ಯಾನಕಾರರೂ ಒಳಗೊಂಡಂತೆ ಅವರಲ್ಲಿಯೇ ಸೇರಿ ಹೋಗುತ್ತಾರೆ. ಅಂತಹ ಪ್ರಭಾವ ಅವರ ವಾಚನದ್ದು. ನಾಂದಿ ಮತ್ತು ಸೂಚನಾ ಪದ್ಯಗಳಲ್ಲಿಯೇ ಅವರು ನನ್ನಲ್ಲಿದ್ದ ಹಿಂಜರಿಕೆಯನ್ನು ಅಟ್ಟಿಬಿಟ್ಟಿದ್ದರು. ಆ ನಂತರದ ನಯ-ವಿನಯ, ಬಾಗು-ಬಳಕುಗಳು, ಏರು-ಇಳಿತಗಳು ಇವೆಲ್ಲವೂ ವ್ಯಾಖ್ಯಾನಕಾರರಿಗೆ, ಮುಂದೆ ಹೇಳಬೇಕಾದ ಮಾತುಗಳನ್ನು ಸೂಚಿಸಿಬಿಡುತ್ತದೆ.
ನಾನು ಅವರ ವಾಚನಕ್ಕೆ ವ್ಯಾಖ್ಯಾನ ನೀಡಿದ ಮತ್ತೊಂದು ಸಂದರ್ಭ ನನಗೆ ಯಾವಾಗಲೂ ಸ್ಮರಣೆಗೆ ಬರುತ್ತಿರುತ್ತದೆ. ಅದು ನಡೆದದ್ದು ಬೆಂಗಳೂರು ಬಸವನಗುಡಿಯ ಮಾಡೆಲ್ ಹೌಸ್ ಕಾಲೋನಿಯ ರಾಮ ಮಂದಿರದ ವಿಶಾಲವಾದ ಸಭಾಭವನದಲ್ಲಿ. 3 ದಿನಗಳು ನಡೆದ ಈ ಕಾರ್ಯಕ್ರಮದಲ್ಲಿ, ನಾವು ಸಮಯಕ್ಕೆ ಸರಿಯಾಗಿ ವೇದಿಕೆಗೆ ಬಂದರೆ ಕಿಕ್ಕಿರಿದು ನೆರೆದಿರುತ್ತಿದ್ದ ಸಭಾಸದರುಗಳು ಎದ್ದು ನಿಂತು ಸುದೀರ್ಘ ಕರತಾಡನದೊಂದಿಗೆ ಸ್ವಾಗತ ನೀಡುತ್ತಿದ್ದರು. ಇದು ಸಭಾಸದರು ಶ್ರೀ ಕೇಶವಮೂರ್ತಿಗಳಿಗೆ ತೋರಿಸುತ್ತಿದ್ದ ಆದರ, ಅಭಿಮಾನ, ಗೌರವ ! ಪ್ರಾರಂಭದಲ್ಲಿಯೇ ಅಂತಹ ಉತ್ಸಾಹೀ ಶ್ರೋತೃಗಳಿದ್ದಲ್ಲಿ ಕಾರ್ಯಕ್ರಮ ಬಹುಪಾಲು ಯಶಸ್ವಿಯಾದಂತೆಯೇ. ಕೇಶವಮೂರ್ತಿಗಳ ಬಗ್ಗೆ ಯಾವುದೇ ಊರಿನ, ಯಾವುದೇ ವೇದಿಕೆಯ, ಯಾವುದೇ ಪ್ರೇಕ್ಷಕರಿಗಾದರೂ ಒಂದೇ ರೀತಿಯ ಗೌರವಪೂರ್ವಕವಾದ ಪೂಜ್ಯಭಾವ ಆವಿರ್ಭವಿಸಲು ಅನೇಕ ಕಾರಣಗಳುಂಟೆಂಬುದನ್ನು ಅವರೊಂದಿಗಿನ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಕಂಡುಕೊಂಡಿದ್ದೇನೆ. ಜನ ಅವರ ವಾಚನದಿಂದ ಹೇಗೆ ಆಕರ್ಷಿತರಾಗಿ ಮಂತ್ರಮುಗ್ಧರಾಗುತ್ತಾರೋ, ಹಾಗೆಯೇ ಅವರ ಚಂದ್ರಮುಖ, ಲಲಾಟಭಸ್ಮ, ಕುಂಕುಮ, ಶುದ್ಧವಾದ ಶ್ವೇತವಸ್ತ್ರಗಳು, ಮುಗ್ಧ ಸ್ನಿಗ್ಧ ಮಂದಹಾಸ, ಅವರ ಶ್ರೇಷ್ಠವಾದ ನಡತೆ ಯಾರೊಬ್ಬರನ್ನೂ ನೋಯಿಸದ ಹಿರಿದಾದ ಗುಣ, ಇವುಗಳೂ ಸಹ ಒಬ್ಬ ಪರಿಪೂರ್ಣ ‘ಗಮಕಿ’ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಹೆಚ್.ಆರ್.ಕೆ. ಅವರ ಶ್ರೇಷ್ಠ ಗುಣಗಳು ಮಹಾಕವಿಯ ಮಾತನ್ನೂ ಸುಳ್ಳು ಮಾಡುತ್ತವೆ. ರನ್ನ ಹೇಳುತ್ತಾನೆ :-
ಶ್ರೀಯುತನೊಳುದಾರತೆ ವಾಕ್
ಶ್ರೀಯುತನೊಳಮತ್ಸರಮಾಗದುದಾರಂ
ಶ್ರೀಯುತನಮತ್ಸರನ್ ವಾಕ್
ಶ್ರೀಯುತನಾದೊಡೆ ಕೃತಾರ್ಥರಾಗರೆ ಕವಿಗಳ್
ಇವರು ವಾಕ್ ಶ್ರೀಯುತರಾಗಿದ್ದೂ ಸಹ ಇತರ ಗಮಕಿಗಳ ಬಗ್ಗೆ ಮತ್ಸರಿಗಳಲ್ಲ. ಹಿರಿಯರು – ಕಿರಿಯರೆನ್ನದೆ, ಎಲ್ಲರನ್ನೂ ಪ್ರೋತ್ಸಾಹಿಸಿದರು. ನಿರ್ವಂಚನೆಯಿಂದ ಗಮಕ ಪಾಠವನ್ನು ಸಾವಿರಾರು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟರು. ಇಂದು ಅವರ ಶಿಷ್ಯರು ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಗಮಕ ಪ್ರಸಾರ ಮಾಡುತ್ತಿದ್ದಾರೆ.
ಈಗ ಪುನ: ಬಸವನಗುಡಿ ಕಾರ್ಯಕ್ರಮಕ್ಕೆ ಹಿಂದಿರುಗುತ್ತೇನೆ. ಅಂದು ಸರಣಿ ಕಾರ್ಯಕ್ರಮದ ಕಡೆಯ ದಿನ. ಕುಮಾರವ್ಯಾಸಭಾರತದ ಕರ್ಣ ಮೋಕ್ಷದ ಪ್ರಸಂಗ. ಪ್ರತಿ ಪದ್ಯಕ್ಕೂ ಕರತಾಡನಗಳ ವೈಭವ. ಅರ್ಜುನ, “ತೇರಿನಲಿ ಚಾಚಿದನು ಮೆಲ್ಲನೆ ಭಾರಿ ಧನುವನು, ಕೈಯ ಕಣೆಗಳನೋರೆಯಲಿ ಸೈತಿರಿಸಿ ಕಂಡನು ಮತ್ತೆ ಮುರವೈರಿ” ಎಂಬಲ್ಲಿಗೆ ಕಾರ್ಯಕ್ರಮಕ್ಕೆ ಮಧ್ಯಾಂತರ ಬಿಡುವು ನೀಡಲು ನಮಗೆ ಸೂಚಿಸಲಾಯಿತು. ನಮಗೆ ಮೊದಲೇ ಹೇಳದೆ ಅದ್ಧೂರಿಯ ಸನ್ಮಾನ. ಕೇಶವಮೂರ್ತಿಗಳಿಗೆ ಮೊದಲು ಮಲ್ಲಿಗೆ ಮೊಗ್ಗಿನ ಹಾರ, ಝಗಮಗಿಸುವ ಶಾಲು, ಅಂತಹುದೇ ಪೇಟ. ಅವರನ್ನು ಆ ರೂಪದಲಿ ನೋಡಿ ದಣಿಯವು ಕಣ್ಣುಗಳು ! ನನೆದವು ಕಣುಮನವೊಂದು ನಿಮಿಷದಲಿ ! ನಂತರ ನನ್ನ ಸರದಿ. ಈ ಕಾರ್ಯಕ್ರಮದ ನಂತರ, ವಾಚನ ಪ್ರಾರಂಭವಾಗಬೇಕು. ಅಷ್ಟರಲ್ಲಿ ಕೇಶವಮೂರ್ತಿಗಳು ಹಾರ-ಪೇಟಗಳನ್ನು ತೆಗೆಯಲು ಮುಂದಾದರು. ಇದನ್ನು ಕಂಡ ಪ್ರಾಯೋಜಕರು ಮತ್ತು ಎಲ್ಲ ಶ್ರೋತೃಗಳೂ “ಕಾರ್ಯಕ್ರಮ ಮುಗಿಯುವವರೆಗೂ ಹಾರಗಳನ್ನು ತೆಗೆಯುವುದು ಬೇಡ” ಎಂದು ಒಕ್ಕೊರಲಿನಿಂದ ಒತ್ತಾಯ ಮಾಡಿದರು. ಒಪ್ಪಿದ ನಾವು ಹಾಗೆಯೇ ಮುಂದುವರಿಸಿದೆವು. ನಾನು ಮುಂದಿನ ಪದ್ಯಕ್ಕೆ ಪೂರ್ವಭಾವಿಯಾಗಿ ಎರಡು ಮಾತು ಹೇಳಿ, ಈಗ ಪೂಜ್ಯರು ಮುಂದಿನ ಪದ್ಯ ಹಾಡುತ್ತಾರೆ. ಅದನ್ನು ಕೇಳಿ, ಹಾರದ ಬಗ್ಗೆ ನೀವೇ ತೀರ್ಮಾನಿಸಿ ಎಂದು ಹಾಸ್ಯವಾಗಿ ಹೇಳಿ “ಮೂರ್ತಿಯವರೇ ಹಾಡಿ ಹಾರವೇಕೈ..............” ಎಂದೆ. ಅಡಕೆ ಚೂರು ಮಾಡಿ ಬಾಯಿಗೆ ಒಂದು ಚೂರನ್ನು ಹಾಕಿಕೊಳ್ಳುವ ತಯಾರಿಯಲ್ಲಿದ್ದವರಿಗೆ ನಾನು ಹೇಳಿದ್ದು ಯಾವುದೂ ಗಮನಕ್ಕೆ ಬಂದಿರಲಿಲ್ಲ. ನನ್ನ ಕಡೆ ನೋಡಿದರು. ನಾನು “ಹಾರವೇಕೈ ..........” ಎಂದೆ. ಎಂದಿನ ಉತ್ಸಾಹದಲ್ಲಿಯೇ ಅವರು ಹಾರವೇಕೈ ಎಂದು ಸುಶ್ರಾವ್ಯವಾಗಿ ಹಾಡಲು ಪ್ರಾರಂಭಿಸಿದರಷ್ಟೇ, ಶ್ರೋತೃಗಳು ಸಶಬ್ದವಾಗಿ ನಗಲು ಪ್ರಾರಂಭಿಸಿಬಿಟ್ಟರು. ಆಗ ಅವರಿಗೆ ನಗುವಿನ ಮರ್ಮ ತಿಳಿದು ಅವರೂ ಸಹ ಗಟ್ಟಿಯಾಗಿ, ವಿಶಾಲವಾದ ಕೆಂಪು ನಗುವನ್ನು ಬೀರಿ, ಈಗಲಾದರೂ ಇದನ್ನು ತೆಗೆಯಲೇ ಎಂದರು. ಯಾರೂ ಒಪ್ಪಲಿಲ್ಲ. ನನ್ನ ವ್ಯಾಖ್ಯಾನದಲ್ಲಿ ಇದನ್ನು ವಿಸ್ತರಿಸಿ ಅನ್ವಯದ ತೊಡಕನ್ನು ವಿವರಿಸಿ, ಕಡೆಗೆ “ಪೂಜ್ಯ ಕೇಶವಮೂರ್ತಿಯವರು ವಿಶಾಲವಾಗಿ ನಗುವುದನ್ನು ನೀವು ತೋರಿಸಿಕೊಟ್ಟುದಕ್ಕೆ ತಮಗೆಲ್ಲರಗೂ ಧನ್ಯವಾದಗಳು ಎಂದೆ. ಸಭೆ ಕರತಾಡನದಿಂದ ಸಂಭ್ರಮಿಸಿತು.
ಹೀಗೆಯೇ ಪೂಜ್ಯರೊಂದಿಗೆ ಶಲ್ಯ ಸಾರಥ್ಯ, ವಿಶ್ವರೂಪ ದರ್ಶನ, ಅಕ್ಷಯ ಪಾತ್ರಾ ಪ್ರಸಂಗ ಇತ್ಯಾದಿ ಅನೇಕ ಪ್ರಸಂಗಗಳು, ರನ್ನನ ‘ಗದಾಯುದ್ಧಂ’ ಕಾವ್ಯದ ದುರ್ಯೋಧನ ವಿಲಾಪಂ’ ಎಂಬ ಭಾಗ ಮುಂತಾದ ವಾಚನಗಳಿಗೆ ವ್ಯಾಖ್ಯಾನ ಮಾಡಿದ ಧನ್ಯತೆ ನನ್ನಲ್ಲಿ ಚಿರಸ್ಥಾಯಿಯಾಗಿರುತ್ತದೆ. ಹೀಗೆಯೇ ಪೂಜ್ಯರ ನಿವಾಸದಲ್ಲಿ ಅವರ ಪಕ್ಕದಲ್ಲೇ ಕುಳಿತು, ಅವರ ಗಮಕವಾಚನದ ಬಗ್ಗೆ ಮಾತನಾಡುವ ಸದವಕಾಶವೂ ನನಗೆ ದೊರಕಿದೆ.
ಗದುಗಿನಲ್ಲಿ ಕುಮಾರವ್ಯಾಸನ ವಿಗ್ರಹವನ್ನು ಸ್ಥಾಪಿಸುವ ಕಾರ್ಯಕ್ರಮದಲ್ಲಿ ಕವಿಯ ನಾಂದೀ ಪದ್ಯಗಳನ್ನು ಅವರೇ ಹಾಡಬೇಕೆಂಬುದು ನಮ್ಮಗಳ ಆಶಯ. ಸ್ವಲ್ಪ ತೊಂದರೆಯಿದ್ದರೂ ಲೆಕ್ಕಿಸದೇ, ಗದುಗಿಗೆ ಬಂದು ಅತ್ಯಂತ ಸಂತೋಷದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
2009ರಲ್ಲಿ ಕರ್ನಾಟಕ ಸರಕಾರವು ಸ್ಥಾಪಿಸಿದ ಕುಮಾರವ್ಯಾಸ ಪ್ರಶಸ್ತಿಯು ಮೊದಲ ವರ್ಷವೇ ಹೆಚ್.ಆರ್.ಕೆ. ಅವರಿಗೆ ಬಂದುದು, ಪ್ರತಿ ಗಮಕಿಗೂ ತಮಗೇ ಬಂದಷ್ಟು ಸಂತೋಷವನ್ನುಂಟು ಮಾಡಿತು. ಆ ಪ್ರಶಸ್ತಿ ಸಾರ್ಥಕವಾಯಿತು. ಹಾಗೆಯೇ ರಾಷ್ಟ್ರದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ‘ಪದ್ಮಶ್ರೀ’ ಪ್ರಶಸ್ತಿಯು ಅವರಿಗೆ ಬಂದಾಗ ನಾಡಿಗೆ ನಾಡೇ ಸಂಭ್ರಮಿಸಿದೆ.
ಪೂಜ್ಯ ಕೇಶವಮೂರ್ತಿಯವರೊಂದಿಗೆ ನಾನು ವ್ಯಾಖ್ಯಾನ ಮಾಡಲು ಅನೇಕರು ಕಾರಣರಾಗಿದ್ದಾರೆ. ಕನಕಗಿರಿ ಕಲಾ ಸಂಘದ ಶ್ರೀಮತಿ ಮಾಲತಿ ಮಾಧವಾಚಾರ್, ಗಮಕ ಸಂಪದದ ರಾಜಾರಾಮಮೂರ್ತಿ, ಹೊಸಹಳ್ಳಿ ಗೋಪಾಲ್, ಹೊಸಹಳ್ಳಿ ಜಯರಾಂ ಮತ್ತು ಮನೆಯವರು, ಬಸವನಗುಡಿ ರಾಮಮಂದಿರದ ಜಗನ್ನಾಥ್ ಇವರುಗಳಿಗೆ ಅತ್ಯಂತ ಕೃತಜ್ಞನಾಗಿದ್ದೇನೆ.
ಗಮಕಸಂಪದ ಪತ್ರಿಕೆಯು 10 ವರ್ಷಗಳನ್ನು ಯಶಸ್ವಿಯಾಗಿ ಮುಗಿಸಿದ ಸಂದರ್ಭದಲ್ಲಿ ಹೊಸಹಳ್ಳಿಯ ಗಮಕ ಕಲಾ ಪರಿಷತ್ತು 2015ರ ಫೆಬ್ರವರಿ ತಿಂಗಳಿನ 6 – 7 – 8 ಈ ಮೂರೂ ದಿನಗಳ ಕಾಲ ವಿಜೃಂಭಣೆಯಿಂದ ನಡೆಸಿದ ರಾಜ್ಯ ಮಟ್ಟದ “ಗಮಕ ಸಮ್ಮೇಳನ”ಕ್ಕೆ ನನ್ನನ್ನು ಮತ್ತು ನನ್ನ ಪತ್ನಿ ಶ್ರೀಮತಿ ನಿರ್ಮಲಾ ಪ್ರಸನ್ನಳನ್ನು ಆಯ್ಕೆ ಮಾಡಿದ ಸಮಿತಿಯ ಗೌರವಾಧ್ಯಕ್ಷ ಸ್ಥಾನದಲ್ಲಿ ಶ್ರೀ ಹೊಸಹಳ್ಳಿ ಕೇಶವಮೂರ್ತಿಗಳು ವಿಜಾಜಮಾನರಾಗಿದ್ದುದು ನಮ್ಮ ಸೌಭಾಗ್ಯ. ಇದಕ್ಕಿಂತ ಹೆಚ್ಚಿನ ಸನ್ಮಾನ - ಬಿರುದುಬಾವಲಿಗಳು ಬೇಕೇ ?! ಇದು ನಮ್ಮಿಬ್ಬರ ಗಮಕಯಾನದಲ್ಲಿ ಸ್ಮರಣೀಯ ದಿನ ! ಕಾರಣರಾದವರಿಗೆಲ್ಲರಿಗೂ ಕೃತಜ್ಞತೆಗಳು.
ಕೇಶವಮೂರ್ತಿಯವರೊಂದಿಗಿನ ನನ್ನ ಸ್ಮರಣೀಯ ಸಂದರ್ಭಗಳನ್ನು ಬರೆಯುವುದು ಉದ್ದೇಶವಾದ್ದರಿಂದ, ಕೆಲವು ಕಡೆಗಳಲ್ಲಿ ‘ನಾನು’ ‘ನನ್ನ’ ‘ನಮ್ಮ’ ಮುಂತಾದ ‘ನಾನತ್ವ’ ಅನಿವಾರ್ಯವಾಗಿ ಬಂದಿದೆ. ಮನ್ನಿಸಲು ಪ್ರಾರ್ಥನೆ.
- ಡಾ|| ಎ.ವಿ. ಪ್ರಸನ್ನ