Tuesday, 21 February 2023

ಚುನಾವಣಾ ಕಾರ್ಯ: ಖಾಸಗಿ ಸಹಭಾಗಿತ್ವದ ಅಗತ್ಯ


ಇದೀಗ ದೇಶಾದ್ಯಂತ ಅನೇಕ ರಾಜ್ಯಗಳ ಚುನಾವಣೆ ತಯಾರಿ ನಡೆಯುತ್ತಿದೆ. ನಮ್ಮ ರಾಜ್ಯದಲ್ಲಿ ಕೂಡ ತಯಾರಿ ಶುರುವಾಗಿದೆ. ಪ್ರತೀ ಬಾರಿ ಚುನಾಣೆ ಶುರುವಾದಾಗಿನಿಂದ ಮುಗಿದ ಕೆಲವು ತಿಂಗಳವರೆಗೆ ಸರ್ಕಾರಿ ಯಂತ್ರಗಳು ಈ ಗುಂಗಿನಿಂದ ಇನ್ನೂ ಹೊರಬರುವುದಿಲ್ಲ. ಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಸರ್ಕಾರಿ ಯಂತ್ರಗಳು ಕಾರ್ಯನಿರ್ವಹಿಸುವ ಬಗೆಯೇ ಬೇರೆಯಾಗುತ್ತದೆ. ಪಂಚಾಯ್ತಿಯಿಂದ ಹಿಡಿದು ಪೊಲೀಸ್ ಸ್ಟೇಶನ್, ಪುರಸಭೆ, ಮಹಾನಗರ ಪಾಲಿಕೆ, ವಿದ್ಯುತ್ ನಿಗಮ ಹೀಗೆ ಯಾವುದೇ ಕಚೇರಿಗೆ ಹೋದರೂ ಕಡತಗಳ ರಾಶಿ ರಾಶಿ! ಮೊದಲೇ ನಮ್ಮ ಸರ್ಕಾರಿ ಯಂತ್ರ ನಿಧಾನಗತಿಯಲ್ಲಿ ಕೆಲಸ ಮಾಡುತ್ತದೆ. ಇನ್ನು ಚುನಾವಣೆಯಂಥ ಕಡ್ಡಾಯ ಕರ್ತವ್ಯದ ನೆಪ ಸಿಕ್ಕರೆ ಕೇಳಬೇಕೇ?

ಕಳೆದ ಬಾರಿ ಚುನಾವಣೆ ಘೋಷಣೆಯಾದಾಗ ಬೆಂಗಳೂಲಿನ ಎಚ್‌.ಎಸ್‌.ಆರ್. ಲೇಔಟಿನ ವಸತಿ ಸಂಕೀರ್ಣದಲ್ಲಿ ಸರಣಿ ಕಳ್ಳತನ ನಡೆಯಿತು. ಠಾಣೆಗೆ ದೂರು ಕೊಡಲು ಹೋದರೆ ದೂರು ಸ್ವೀಕರಿಸುವವರೇ ಇರಲಿಲ್ಲ. ಅವರೆಲ್ಲರ ಗಮನ ಚುನಾವಣಾ ಕರ್ತವ್ಯದ ಮೇಲಿತ್ತು! ನೊಂದ ನಾಗರಿಕರು ಮಾಧ್ಯಮಗಳಿಗೆ ದೂರು ನೀಡಿದರು! ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ಮಾಡಬೇಕಾದ ವೈದ್ಯರಿಲ್ಲ, ನರ್ಸ್‌ಗಳಿಲ್ಲ, ಕಾಲೇಜುಗಳಲ್ಲಿ ಪಾಠ ಮಾಡುವ ಮೇಷ್ಟ್ರುಗಳಿಲ್ಲ, ಬೀದಿ ಸ್ವಚ್ಛಗೊಳಿಸುವವಲಿಲ್ಲ, ಅವರನ್ನು ಕೇಳುವವರಿಲ್ಲ. ಇವರೆಲ್ಲ ಎಲ್ಲಿ ಹೋಗುತ್ತಾರೆ? ಉತ್ತರ: ಎಲೆಕ್ಷನ್ ಡ್ಯೂಟಿ ಸಾರ್!


ಚುನಾವಣೆ ಘೋಷಣೆ ಆದಾಗಿನಿಂದ ತಾಲ್ಲೂಕಾಫೀಸು, ಜಿಲ್ಲಾಧಿಕಾರಿ ಕಚೇಲಿಯಿಂದ ಹಿಡಿದು ಎಲ್ಲ ಕಡೆ ನಿತ್ಯ ಕೆಲಸಗಳೆಲ್ಲ ಹೆಚ್ಚಕಡಿಮೆ ನಿಂತೇ ಹೋಗುತ್ತವೆ. ಚುನಾವಣೆ ಮುಗಿದು ಮತ್ತೆ ಕಚೇರಿ ಕೆಲಸಕ್ಕೆ ಹಾಜರಾದಾಗ ತಿಂಗಳ ಕಾಲ ಬಾಕಿ ಬಿದ್ದ ಕಡತಗಳು, ಹೊಸದಾಗಿ ಬರುವ ಅರ್ಜಿ-ಅಹವಾಲುಗಳ ರಾಶಿಯನ್ನು ಸಿಬ್ಬಂದಿ ವಿಲೇವಾರಿ ಮಾಡುವ ವೇಳೆಗೆ ಜನರ ಪಾಡು ಮತ್ತಷ್ಟು ಹದಗೆಟ್ಟಿರುತ್ತದೆ. ಮೊದಲೇ ಭ್ರಷ್ಟಾಚಾರದಲ್ಲಿ ಮುಳುಗಿದ ವ್ಯವಸ್ಥೆಯಲ್ಲಿ ಶೀಘ್ರ ಅರ್ಜಿ ವಿಲೇವಾರಿಗೆ ಮತ್ತಷ್ಟು ಭ್ರಷ್ಟತೆಗೆ ಅವಕಾಶವಾಗುತ್ತದೆ. ಜನರ ಕಲ್ಯಾಣಕ್ಕಾಗಿ ನಡೆಯುವ ಚುನಾವಣಾ ವ್ಯವಸ್ಥೆ ಅದೇ ಜನರನ್ನು ಹೇಗೆ ಕಾಡುತ್ತದೆ ನೋಡಿ.


ಸದ್ಯ ನಡೆಯಬೇಕಿರುವ ಚುನಾವಣೆಯಲ್ಲಿ ಅಂದಾಜು ಸಾವಿರೋಟಿ ರೂ ವ್ಯಯವಾಗುವ ನಿರೀಕ್ಷೆ ಇದೆ. ಸಾವಿರಾರು ಮತಗಟ್ಟೆಗಳು, 9,30,000 ಮತಗಟ್ಟೆಗಳು, ಅನೇಕ ಹಂತದ ಚುನಾವಣೆ! ಕೋಟ್ಯಂತರ ಇದು ದೇಶದ ಸ್ಥಲ ಚಿತ್ರಣ. ಕರ್ನಾಟಕವನ್ನೇ ಇಟ್ಟುಕೊಂಡು ಚುನಾವಣೆಯ ಕಾರ್ಯವಿಧಾನ ಗಮನಿಸಬಹುದು. ಇಲ್ಲಿರುವುದು ಸುಮಾರು 54,261 ಮತಗಟ್ಟೆಗಳು. ಇದಕ್ಕೆ ಪ್ರಿಸೈಡಿಂಗ್ ಆಫೀಸರ್ ಜೊತೆ ಮೂವರು ಅಧಿಕಾರಿಗಳಂತೆ ಒಟ್ಟು 2,17,044 ಸಿಬ್ಬಂದಿಗಳು. ಜೊತೆಗೆ ಒಬ್ಬ ಅಟೆಂಡರ್. ಇಷ್ಟೇ ಅಲ್ಲ, ಚುನಾವಣೆ ಘೋಷಣೆ ಆದಾಗಿನಿಂದ ಮತದಾರ ಪಟ್ಟಿ ಪರಿಷ್ಕರಣೆ, ಹೆಸರು ಸೇರ್ಪಡೆ, ಚುನಾವಣಾ ಅಕ್ರಮ ತಡೆ ತಂಡಗಳು, ಟರ್ನಿಂಗ್, ಸಹಾಯಕ ಶಿಟರ್ನಿಂಗ್ ಅಧಿಕಾರಿಗಳು ಹೀಗೆ ಸಾವಿರಾರು ಜನ ಟೊಂಕಕಟ್ಟಿ ರಜೆ, ಹೊತ್ತು ಗೊತ್ತಿನ ಪರಿವೆಯೇ ಇಲ್ಲದಂತೆ ಕೆಲಸಮಾಡಬೇಕಾಗುತ್ತದೆ. ಇಷ್ಟು ದೊಡ್ಡ ಜನತಂತ್ರ ವ್ಯವಸ್ಥೆಯಲ್ಲಿ ನ್ಯಾಯಯುತ, ಗೌಪ್ಯ, ನಿಷ್ಪಕ್ಷಪಾತ ಚುನಾವಣೆ ನಡೆಸುವುದು ಅಂದರೆ ಹುಡುಗಾಟವೇ? ಅದಿರಲಿ, ಈ ಕೆಲಸದಲ್ಲಿ ತೊಡಗಿಸಿಕೊಂಡ ಇವರೆಲ್ಲ ಯಾರು? ಈಗಾಗಲೇ ಹೇಳಿದ ಸರ್ಕಾರಿ ಕಚೇರಿಯವರು ಇಲ್ಲವೇ ಅರೆ ಸರ್ಕಾರಿ ನೌಕರರು, ಶಿಕ್ಷಕರು, ಬ್ಯಾಂಕ್, ವಿಮೆ ನೌಕಕರು ಇತ್ಯಾದಿ. ಒಟ್ಟಿನಲ್ಲಿ ಸರ್ಕಾರದ ಅಡಿಯಲ್ಲಿ ಬರುವ ಯಾವ ಕಚೇಲಿಯೂ ಚುನಾವಣಾ ಕರ್ತವ್ಯದಿಂದ ಹೊರಗಿರುವುದಿಲ್ಲ. ಪರಿಣಾಮ ಆಡಳಿತ ಯಂತ್ರದ ಮೇಲೆ ಇನ್ನಷ್ಟು ಹೊರೆ. ಹೀಗೇಕೆ?


25 ಅಕ್ಟೋಬರ್ 1951 ರಿಂದ 21 ಫೆಬ್ರವರಿ 1952ರವರೆಗೆ ದೇಶದಲ್ಲಿ ಮೊದಲ ಮಹಾಚುನಾವಣೆ ನಡೆಯಿತು. ಅಂದಿನ ಸ್ಥಿತಿಯಲ್ಲಿ ಇದ್ದ ಒಂದಿಷ್ಟು ಸರ್ಕಾರಿ ನೌಕರರನ್ನು ಬಳಸಿಕೊಳ್ಳದೇ ಅನ್ಯ ಮಾರ್ಗವಿರಲಿಲ್ಲ. ದೇಶ ಇಬ್ಬಾಗವಾಗಿ ಜನ ಅತ್ತಿತ್ತ ಚದುರಿದ್ದರು. ಆಡಳಿತಾನುಭವವಿದ್ದ ಬ್ರಿಟಿಷರು ದೇಶಬಿಟ್ಟಿದ್ದರು. ಅವರಡಿ ಸೇವೆಯಲ್ಲಿದ್ದ ಹಿರಿಯ ಅಧಿಕಾರಿಗಳ ಸೇವೆಯನ್ನು ನೆಚ್ಚಿಕೊಳ್ಳುವಂತಿರಲಿಲ್ಲ. ಅನಕ್ಷರತೆ ಶೇ. 80 ದಾಟಿತ್ತು. ಅಂಥ ಸಂದರ್ಭದಲ್ಲಿ ಒಂದಿಷ್ಟು ಓದಿ ಬರೆದು ಮಾಡಬಲ್ಲ, ಕಾನೂನು ಅರಿತು ವ್ಯವಸ್ಥೆ ಮುನ್ನಡೆಸಬಲ್ಲ ಸರ್ಕಾರಿ ನೌಕರರನ್ನೇ ಈ ಕೆಲಸಕ್ಕೆ ನೇಮಿಸಲಾಯಿತು. ಅಲ್ಲದೇ ನಮ್ಮ ಸರ್ಕಾರಿ ನೌಕರರು ಅಕ್ಕಪಕ್ಕದ ದೇಶದ ನೌಕರರಂತಲ್ಲ. ದೇಶ ಹಾಗೂ ವ್ಯವಸ್ಥೆಗೆ ಅವರು ನಿಷ್ಠರು. ಅವರಲ್ಲಿ ಭ್ರಷ್ಟತೆ ಇರಬಹುದು. ಆದರೆ ಎಂಥ ದುರ್ಬಲ ಸರ್ಕಾರ ಇದ್ದಾಗಲೂ ನೆರೆಯ ದೇಶಗಳಲ್ಲಾದಂತೆ ಸೇನಾಕ್ರಾಂತಿಗೆ ಅವಕಾಶಕೊಟ್ಟಿಲ್ಲ. ನಿಷ್ಪಕ್ಷಪಾತವಾಗಿ, ವಸ್ತುನಿಷ್ಠವಾಗಿ ಅವರು ಕಾರ್ಯ ನಿರ್ವಹಿಸಿದ್ದಾರೆ. ಊಟ, ಕನಿಷ್ಠ ಸವಲತ್ತುಗಳ ಕೊರತೆಯಲ್ಲೂ ಚುನಾವಣಾ ಕಾರ್ಯವನ್ನು ಅವರು ಶ್ರದ್ಧೆಯಿಂದ ಮಾಡುತ್ತಾರೆಂಬುದೇನೋ ಸರಿ, ಇದೇನು ನಿತ್ಯದ ಕೆಲಸವಲ್ಲ, ಎಲ್ಲೋ ಐದು ವರ್ಷಕ್ಕೊಮ್ಮೆ ಅಥವಾ ಅಗತ್ಯಬಿದ್ದಾಗ ಮಾತ್ರ ಮಾಡುವ ಕರ್ತವ್ಯ ಎಂಬುದೂ ಸರಿ. ಆದರೆ ಅವರ ಕೆಲಸ ಬೇರೆ ಇದೆ.


ನಮ್ಮ ವ್ಯವಸ್ಥೆಯಲ್ಲಿ ಕೆಲವು ಸಂಗತಿಗಳಿವೆ. ಉದಾಹರಣೆಗೆ ವಿರೋಧ ಪಕ್ಷದವರು ಸಭಾಧ್ಯಕ್ಷರ ಎಡ ಭಾಗದಲ್ಲಿ ಕೂರುವುದು. ಆಡಳಿತದವರು ಬಲಭಾಗಕ್ಕೆ ಕೂರುವುದು. ಸೈದ್ಧಾಂತಿಕವಾಗಿ ಎಡವಾದಿಗಳಾದರೂ ಸರ್ಕಾರ ನಡೆಸುವಾಗ ಅವರು ಬಲಕ್ಕೆ ಇರಬೇಕು, ಬಲವಾದಿಗಳು ವಿರೋಧಪಕ್ಷದಲ್ಲಿದ್ದರೆ ಅವರು ಎಡಕ್ಕೇ ಇರಬೇಕು! ಯಾಕೆ ಹೀಗೆ? ಈ ಪದ್ಧತಿ ಫ್ರಾನ್ಸ್‌ನಲ್ಲಿತ್ತು, ಇಂಗ್ಲೆಂಡ್ ಬಂತು, ನಾವು ಅದನ್ನೇ ಚಾಚೂ ತಪ್ಪದೇ ಅಳವಡಿಸಿಕೊಂಡೆವು ಎಂಬುದು ಇದಕ್ಕೆ ಉತ್ತರ. ಹೀಗಾಗಿ ಇದೊಂದು ಸಂಪ್ರದಾಯ. ಇದು ಮೌಢವೋ ಅಲ್ಲವೋ ಬೇರೆ ಪ್ರಶ್ನೆ. 19520 ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರನ್ನೇ ಚುನಾವಣಾ ಕಾರ್ಯಕ್ಕೆ ಹಾಕಬೇಕಾದ ಅನಿವಾರ್ಯತೆ ಇತ್ತು. 1957ರಲ್ಲಿ ಮತ್ತೆ ಅದೇ ಮಾರ್ಗ ಅನುಸರಿಸಲಾಯಿತು. ಇದೇ ರೀತಿ ಕಳೆದ 15 ಚುನಾವಣೆಗಳಲ್ಲೂ ನಡೆಯಿತು. ಮಾತ್ರವಲ್ಲ, ಸ್ಥಳೀಯ ಸಂಸ್ಥೆಗಳು, ಸಹಕಾರಿ ಸಂಘಗಳು, ಜಾತಿ ಸಂಘಟನೆಗಳು-ಹೀಗೆ ಎಲ್ಲೇ ಚುನಾವಣೆ ನಡೆಯುತ್ತದೆ ಎಂದಾದರೆ ಅದನ್ನು ಸರ್ಕಾರಿ ನೌಕರರೇ ನಡೆಸಿಕೊಡಬೇಕು ಎನ್ನುವ ಪರಿಸ್ಥಿತಿ ಸಿದ್ಧವಾಯಿತು. ಜನತಂತ್ರದ ನಮ್ಮ ದೇಶದಲ್ಲಿ ಈಗೀಗಂತೂ ಸೌರಮಂಡಲದಲ್ಲಿ ನಿತ್ಯ ಒಂದಲ್ಲ ಒಂದು ಗ್ರಹಣ ನಡೆಯುತ್ತಲೇ ಇರುವಂತೆ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ಹಾಗಾಗಿ ಎರಡೂ ಕೈಗಳ ಎಲ್ಲ ಬೆರಳೂ ಸರಿ ಇರುವ ವ್ಯಕ್ತಿ ಹತ್ತಾರು ಸಂಘ ಸಂಸ್ಥೆಗಳ ಒಡನಾಟ ಇಟ್ಟುಕೊಂಡರೆ ಈ ಚುನಾವಣೆಯಲ್ಲಿ ಗುರುತು ಮಾಡಲು ಜಾಗವೇ ಇರದಂಥ ಸ್ಥಿತಿ ಇದೆ. ಇದೇ ಕಾರಣಕ್ಕೆ ಸಾಮಾನ್ಯವಾಗಿ ಎಡಗೈ ತೋರುಬೆರಳಿಗೆ, ಕಿರುಬೆರಳಿಗೆ ಹಾಕುತ್ತಿದ್ದ ಶಾಯಿಗೆ ಯಾವ ಬೆರಳೂ ಖಾಲಿ ಇರದಷ್ಟು ಚುನಾವಣೆಗಳು ನಡೆಯುತ್ತವೆ. ಸಂಖ್ಯೆಯ ದೃಷ್ಟಿಯಿಖಂದಲೂ ಈ ಪಾಟಿ ಚುನಾವಣೆಗಳು ನಡೆಯುತ್ತ, ಅದಕ್ಕೆಲ್ಲ ಸರ್ಕಾರಿ ನೌಕರರೇ ಸಿಬ್ಬಂದಿಗಳಾದರೆ ಸರ್ಕಾರದ ಕೆಲಸವನ್ನು ದೇವರೇ ಬಂದು ಮಾಡಬೇಕಾಗುತ್ತದೆ. ಹಾಗಾದರೆ ಪರ್ಯಾಯವೇನು? ಖಾಸಗಿ ಸಹಭಾಗಿತ್ವ.


ಅನೇಕ ಕ್ರಾಂತಿಕಾರಕ ಬದಲಾವಣೆ ತಂದ ಮೋದಿ ಸರ್ಕಾರವೇ ಇದನ್ನೂ ಜಾರಿಗೆ ತರಲು ಮುಂದಾಗಬೇಕು. ರಕ್ಷಣಾ ಇಲಾಖೆ, ಪೊಲೀಸ್, ಸಂಸತ್ತು, ವಿಧಾನಸಭೆಯ ಆಯ್ದ ಘಟಕಗಳನ್ನು ಬಿಟ್ಟರೆ ಎಲ್ಲ ಕಡೆಯೂ ಅನುಸರಿಸಲಾಗುತ್ತಿರುವ ಸ್ಥಾಪಿತ ಪದ್ಧತಿ ಸರ್ಕಾಲಿ-ಖಾಸಗಿ ಸಹಭಾಗಿತ್ವ. ನಮ್ಮ ದೇಶದಲ್ಲಿ ನ್ಯಾಶನಲ್ ಸ್ಯಾಂಪಲ್ ಸರ್ವೇಯ ವರದಿಯಂತೆ ನಿರುದ್ಯೋಗಿಗಳ ಸಂಖ್ಯೆ ಸಾವಿರ ಜನಕ್ಕೆ 27, ದೇಶದಲ್ಲಿ ಕೋಟಿಗಟ್ಟಲೆ ವಿದ್ಯಾವಂತ ನಿರುದ್ಯೋಗಿಗಳಿದ್ದಾರೆ. ಇವರನ್ನು ಚುನಾವಣಾ ಕಾರ್ಯದಲ್ಲಿ ಏಕೆ ತೊಡಗಿಸಿಕೊಳ್ಳಬಾರದು? ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಚುನಾವಣಾ ಆಯೋಗ ಈ ಕೆಲಸಕ್ಕೆ ಸ್ವತಂತ್ರವಾಗಿ ನೇಮಕಾತಿ ಮಾಡಿಕೊಳ್ಳಲಾಗದು ಎಂಬುದು ಸಲಿ, ಆದರೆ ಕಾರ್ಯಕ್ರಮ ಸಂಘಟಿಸುವ ಕಂಪನಿಗಳಿಗೆ ಕಾನೂನು ಪ್ರಕಾರ ಗುತ್ತಿಗೆ ನೀಡಿ ಈ ಕೆಲಸ ಮಾಡಿಸಿಕೊಳ್ಳಬಹುದು. ಪಂಚಾಯ್ತಿ ಮಟ್ಟದ ಚುನಾವಣೆಯಲ್ಲಿ ಪ್ರಯೋಗಾತ್ಮಕವಾಗಿ ಹೀಗೆ ಮಾಡಿನೋಡಬಹುದು. ಡಬ್ಬಿಗಳಿಗೆ ಬದಲಾಗಿ 1981ರಲ್ಲಿ ವಿದ್ಯುನ್ಮಾನ ಮತಯಂತ್ರ ಮೊದಲ ಬಾರಿ ಕೇರಳದಲ್ಲಿ ಬಳಕೆಯಾದಾಗಲೂ ಇದು ಸರಿಯಾಗದೇನೋ ಎಂಬ ಆತಂಕ ಜನರಲ್ಲಿತ್ತು. ಈಗ ಎಲ್ಲೂ ಡಬ್ಬಿಗಳೇ ಇಲ್ಲ! ಹೊಸದನ್ನು ಜನ ಯಾವಾಗಲೂ ಗುಮಾನಿಯಿಂದಲೇ ನೋಡುತ್ತಾರೆ. ಈ ಪ್ರಯೋಗವನ್ನೂ ಹಾಗೆಯೇ ನೋಡಬಹುದು.


ಎರಡು ಬಗೆಯಲ್ಲಿ ಬದಲಾವಣೆ ತರಬಹುದು. ಈಗಿರುವಂತೆ ಮಾನವ ಶಕ್ತಿಯನ್ನು ಹೆಚ್ಚಾಗಿ ನೆಚ್ಚಿಕೊಳ್ಳುವುದು ಮೊದಲನೆಯದು. ಈಗಿನ ವ್ಯವಸ್ಥೆಯಂತೆ ಜಿಲ್ಲಾ ಚುನಾವಣಾಧಿಕಾರಿಯಿಂದ ಹಿಡಿದು ಮತಗಟ್ಟೆಯಲ್ಲಿ ಬೆರಳಿಗೆ ಶಾಯಿ ಹಚ್ಚುವ ಅಧಿಕಾರಿಯವರೆಗೆ ಎಲ್ಲ ಕಡೆ ಮಾನವ ಶಕ್ತಿಯನ್ನು ಬಳಸಿಕೊಳ್ಳುವುದು. ಇಂಥ ಸಂದರ್ಭದಲ್ಲಿ ರೂಟ್ ಆಫೀಸರ್, ಬ್ಲಾಕ್ ಆಫೀಸರ್, ಪ್ರಿಸೈಡಿಂಗ್, ಮೊದಲ, ಎರಡನೆಯ ಹಾಗೂ ಮೂರನೆಯ ಮತಗಟ್ಟೆ ಅಧಿಕಾರಿ ಮುಂತಾದ ಪೂರಕ ಜವಾಬ್ದಾರಿಗಳನ್ನು ಹೊರಗುತ್ತಿಗೆ ನೀಡಿ ಅದರಲ್ಲಿ ನಿರುದ್ಯೋಗಿಗಳನ್ನು ಬಳಸಿಕೊಳ್ಳುವುದು. ಮತಪತ್ರ, ಗುರುತಿನ ಚೀಟಿ ಪರಿಶೀಲನೆ ಹಾಗೂ ಬೆರಳಿಗೆ ಶಾಯಿ ಹಚ್ಚಲು ವೈದ್ಯರು, ಶಿಕ್ಷಕರು, ಎಫ್‌ಡಿಸಿ, ಎಸ್‌ಡಿಸಿ ಮೊದಲಾದ ಕಾಯಂ ನೌಕರರೇ ಬೇಕೆ? ವಿದ್ಯುನ್ಮಾನ ಮತಯಂತ್ರ, ಕಡ್ಡಾಯ ಗುರುತಿನ ಚೀಟಿ ಇತ್ಯಾದಿಗಳು ಬಂದ ಮೇಲೆ ಮತಗಟ್ಟೆಯಲ್ಲಿ ಯಾರೂ ಅಕ್ರಮ ಎಸಗಲು ಸುಲಭಕ್ಕೆ ಸಾಧ್ಯವಿಲ್ಲ. ಹೀಗಾಗಿ ಈ ಕೆಲಸಗಳಿಗೆ ಕಾಯಂ ನೌಕಕರಿದ್ದರೂ ಒಂದೇ ಇತರರು ಇದ್ದರೂ ಒಂದೇ, ಅಕ್ರಮ ನಡೆದರೆ ಕಾನೂನು ಪ್ರಕಾರ ಅಂಥವರನ್ನು ಶಿಕ್ಷಿಸಲು ಅವಕಾಶ ಇದ್ದೇ ಇದೆ. 


ಎರಡನೆಯ ವಿಧಾನ ಎಂದರೆ ತಂತ್ರಜ್ಞಾನದ ಮೂಲಕ ಮತ್ತಷ್ಟು ಕ್ರಾಂತಿ ತರುವುದು. ಈಗಾಗಲೇ ಯಾವುದಕ್ಕೂ ಬೇಕಿಲ್ಲದ, ಆದರೆ ಎಲ್ಲರಿಂದಲೂ ಕಡ್ಡಾಯವಾಗಿ ಪಡೆದುಕೊಂಡ ಆಧಾರ್ ಮಾಹಿತಿಗಳಲ್ಲಿ ಬೆರಳಚ್ಚುಗಳಿವೆ. ನಿರ್ದಿಷ್ಟ ವ್ಯಕ್ತಿ ಸಂಖ್ಯೆಗಳಿವೆ. ಇದನ್ನು ಬಳಸಿಕೊಂಡು ಬಯೋಮೆಟ್ರಿಕ್ ಪದ್ಧತಿಯ ಉಪಕರಣದ ಮೂಲಕ ಮತದಾನ ಮಾಡಿಸುವುದು. ಇದರಿಂದ ಗುರುತಿನ ಪತ್ರದ ಕಾಟವಿಲ್ಲ, ಶಾಯಿ ಇಲ್ಲ, ಖೋಟಾ ಮತದಾನವಾಗುವ ಸಂಭವವೇ ಇಲ್ಲ. ಇದೇ ರೀತಿ ಮೊಬೈಲ್ ನೊಂದಣಿ, ಕಂಪ್ಯೂಟರ್ ಐಪಿ ಅಡ್ರೆಸ್ ದಾಖಲೆ ಸಂಗ್ರಹಿಸುವ ಮೂಲಕ ಎಲ್ಲೇ ಇದ್ದರೂ ಅವುಗಳ ಮೂಲಕ ನೋಂದಾಯಿತ ಮತ ಚಲಾಯಿಸುವಂತೆ ಮಾಡುವುದು. ಅದನ್ನು ಆಯಾ ಕ್ಷೇತ್ರದ ಸರ್ವ‌್ರಗಳಿಗೆ ಹೋಗುವಂತೆ ಮಾಡುವುದು. ಎಪಿಕ್ ಸಂಖ್ಯೆ, ನಿರ್ದಿಷ್ಟ ನೋಂದಣಿ ಸಂಖ್ಯೆಯ ಮೂಲಕ ಅಧಿಕೃತ ವ್ಯಕ್ತಿ ಹೀಗೆ ಒಂದು ಬಾರಿ ಮಾತ್ರ ಮತದಾನ ಮಾಡಲು ಸಾಧ್ಯವಾಗುವಂತೆ ಮಾಡುವುದು ಕಷ್ಟವಲ್ಲ. ಹೀಗೆ ಚಲಾವಣೆಯಾದ ಮತಗಳನ್ನು ಮತ ಎಣಿಕೆ ದಿನದಂದು ಕ್ರಮದಂತೆ ಎಣಿಸುವುದು, ವಿಜಯ ಅಭ್ಯರ್ಥಿಯನ್ನು ಘೋಷಿಸುವುದು ಮೊದಲಾದವೆಲ್ಲ ಇದರಿಂದ ಸುಲಭವಾಗುತ್ತದೆ. ಇದರಿಂದ ಮತಗಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ವ್ಯಯವಾಗುವ ಸ್ಟೇಶನಲಿ ಸಾಮಗ್ರಿಗಳು, ಮತದಾನ ಸಮಯದಲ್ಲಿ ಸಿಬ್ಬಂದಿಗಳ ಮೇಲಿನ ಒತ್ತಡ, ಮತದಾನದ ನಂತರ ಘೋಷಣೆಯಾಗುವವರೆಗೆ ಭದ್ರತೆಯೂ ಸೇರಿದಂತೆ ಹತ್ತು ಹಲವು ಸಿಬ್ಬಂದಿಗಳ ಕಾರ್ಯಭಾರಗಳನ್ನು ಗಣನೀಯವಾಗಿ ಇಲ್ಲವಾಗಿಸಬಹುದು. ಅತ್ಯಂತ ಗೌಪ್ಯವಾಗಿ ಹಾಗೂ ಪಾರದರ್ಶಕವಾಗಿ, ನ್ಯಾಯಯುತವಾಗಿ ಹಾಗೂ ನಿಯಮದಂತೆಯೇ ನಡೆಯುವ ಬಹುತೇಕ ಪರೀಕ್ಷಾಕಾರ್ಯಗಳನ್ನು ಇದೇ ರೀತಿ ಹೊರಗುತ್ತಿಗೆಯಲ್ಲಿ ಬಹಳಷ್ಟು ವಿವಿಗಳು, ವಿದ್ಯಾಸಂಸ್ಥೆಗಳಲ್ಲಿ ನಡೆಸಲಾಗುತ್ತಿದೆ. ಇದರ ಮಾದರಿಯನ್ನು ಅವಲೋಕಿಸಬಹುದು. ಈ ವ್ಯವಸ್ಥೆಯ ಜಾಲಿಗೆ ತಜ್ಞರೊಂದಿಗೆ ಮತ್ತಷ್ಟು ಚರ್ಚಿಸಬಹುದು.


ಖಾಸಗಿ ಕಂಪನಿಗಳಿಗೆ ಚುನಾವಣೆ ಗುತ್ತಿಗೆ ನೀಡುವುದು ಅಂದರೆ ಅಧಿಕಾರ ಸರ್ವಸ್ವವನ್ನೂ ಅವರಿಗೆ ವಹಿಸುವುದಲ್ಲ. ಭದ್ರತೆ, ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ಲಿಟರ್ನಿಂಗ್ ಆಫೀಸರ್‌ಗಳು, ಅಲ್ಸರ್‌ವರ್‌ಗಳಂಥ ಆಯಕಟ್ಟಿನ, ನಿಗಾ ಇಡುವ ಹಾಗೂ ಕ್ರಮ ತಪ್ಪಿದರೆ ಶಿಕ್ಷಿಸುವ ಅಧಿಕಾರ ಮೊದಲಾದವೆಲ್ಲ ಸರ್ಕಾರದ ಹಿಲಿಯ ಅಧಿಕಾಲಿಗಳ ಬಳಿಯೇ ಇರಬೇಕು. ಆದರೆ ರೂಟ್ ಆಫೀಸರ್, ಪ್ರಿಸೈಡಿಂಗ್ ಆಫೀಸರ್ ಆದಿಯಾಗಿ ಮತ್ತೆಲ್ಲ ಕೆಲಸಗಳನ್ನು ಕ್ರಮದಂತೆ ಮಾಡಿಕೊಡುವ ಕೆಲಸವನ್ನು ಕಂಪನಿಗಳಿಗೆ ನಿಯಮಾನುಸಾರ ಗುತ್ತಿಗೆ ಕೊಡಬಹುದಲ್ಲ? ಹೀಗಾದಾಗ ನಿರುದ್ಯೋಗಿಗಳಿಗೆ ಕೆಲಸ ಸಿಗುವುದರ ಜೊತೆಗೆ ಸರ್ಕಾರಿ ಕಚೇರಿಗಳ ಕೆಲಸ ಕಾರ್ಯ ಎಂದಿನಂತೆ ನಡೆಯಲೂ ಅನುಕೂಲವಾಗುತ್ತದೆ.


ಚುನಾವಣಾ ಸಂದರ್ಭ ಸರ್ಕಾರದ ಕಂದಾಯ ಇಲಾಖೆಗೆ ಮಾಲಿ ಹಬ್ಬ. ಎಲ್ಲಿ ಹೇಗೆ ಹಣ ಖರ್ಚಾದರೂ ಚುನಾವಣೆಯ ನೆಪ ಹೇಳಿ ಲೆಕ್ಕ ತಪ್ಪಿಸುತ್ತಾರೆ. ಜೊತೆಗೆ ಚುನಾವಣೆಗೆ ಕೊಡುವ ಸ್ಟೇಶನಲಿ ಸಾಮಗ್ರಿಗಳಲ್ಲಿ ಒಂದಿಷ್ಟು ಟ್ಯಾಗು ಗುಂಡುಪಿನ್ನು ಬಿಳಿ ಹಾಳೆಗಳು ಅಂಟು, ಸ್ಟೆಪ್ಲರ್ ಇತ್ಯಾದಿ ಇರುತ್ತವೆ, ಇವನ್ನೆಲ್ಲ ಚುನಾವಣೆಗೆ ಹೊರಡುವ ಮುನ್ನ ಒಂದು ಚೀಲತುಂಬಿ ಅಧಿಕಾರಿಗೆ ಕೊಡಲಾಗುತ್ತದೆ. ವಾಪಸು ಬಂದು ಮತ ಪೆಟ್ಟಿಗೆ ಕೊಡುವಾಗ ಚೀಲದ ಪರಿಶೀಲನೆ ನಡೆಯುವುದಿಲ್ಲ. ಕೋಣೆಯ ಮೂಲೆಗೆ ಎಸೆಯಲಾಗುತ್ತದೆ, ಲಿಟರ್ನಿಂಗ್ ವೇಳೆ ಲೆಕ್ಕಕ್ಕೆ ಬರುವುದು ಮ್ಯಾಂಡೇಟಲಿ ಫಾರಂ ಮತ್ತು ಕೆಲವು ಕಡ್ಡಾಯ ನಿಯಮಬದ್ಧ ಲಕೋಟೆಗಳು ಮಾತ್ರ ಉಳಿದವೆಲ್ಲ. ಕಸ, ಆದರೆ ಇವುಗಳಿಗೆ ಲಕ್ಷಾಂತರ ಖರ್ಚಾಗುತ್ತದೆ. ಮಧ್ಯವರ್ತಿಗಳಿಗೆ ಲಾಭವಾಗುವುದು ಇಂಥ ಕಡೆ.


1950ರಲ್ಲಿ ಭಾರತ ಚುನಾವಣಾ ಆಯೋಗ ಸ್ಥಾಪನೆಯಾಗಿ ಅನೇಕ ಚುನಾವಣೆಗಳನ್ನು ನಡೆಸಿದ್ದರೂ ಅಂಥದ್ದೊಂದು ಆಯೋಗವಿದೆ, ಅದಕ್ಕೆ ಅಪಾರ ಅಧಿಕಾರವಿದೆ ಎಂದು ದೇಶಕ್ಕೆ ತಿಳಿದಿದ್ದು 1990ರಲ್ಲಿ ದೇಶದ 10ನೆಯ ಮುಖ್ಯ ಚುನಾವಣಾ ಆಯುಕ್ತರಾಗಿ ಟಿ ಎನ್ ಶೇಷನ್ ಬಂದಮೇಲೆಯೇ, ಚುನಾವಣೆಗೆ ಒಂದು ಕ್ರಮ ಇದೆ ಎಂಬುದು ತಿಳಿದ್ದಿದ್ದೂ ಆಗಲೇ. ಅಂದಿನಿಂದ ನಡೆಯುತ್ತ ಬಂದ ಚುನಾವಣಾ ಸುಧಾರಣೆ ಇಂದಿಗೂ ನಿಂತಿಲ್ಲ. ಇದರ ಮುಂದುವರಿಕೆಯಾಗಿ ಖಾಸಗಿ ಸಹಭಾಗಿತ್ವವನ್ನು ಅಳವಡಿಸಿಕೊಂಡರೆ ಚುನಾವಣೆಯ ವೆಚ್ಚವನ್ನೂ ಇಳಿಸಬಹುದು. ಎಲ್ಲೇ ಇದ್ದರೂ ಮತ ಚಲಾಯಿಸಬಲ್ಲ ಮೊಬೈಲ್ ಅಥವಾ ಕಂಪ್ಯೂಟರೈಸ್ ವೋಟಿಂಗ್, ಬಯೋಮೆಟ್ರಿಕ್‌ನಂಥ ಹೊಸ ತಂತ್ರಜ್ಞಾನದ ಅಳವಡಿಕೆಯಿಂದ ಶಾಯಿ ಕಾಟವನ್ನೂ ತಪ್ಪಿಸಬಹುದು, ಕಳ್ಳವೋಟನ್ನೂ ಇಲ್ಲವಾಗಿಸಬಹುದು, ಮಾನವ ಶ್ರಮವನ್ನೂ ಇಳಿಸಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಮತದಾನದ ಪ್ರಮಾಣವನ್ನು ಹೆಚ್ಚಿಸಬಹುದು. ಈಗ ನಡೆದ ಚುನಾವಣಾ ಕಾರ್ಯದಲ್ಲಿ ಎರಡು ಲಕ್ಷ ಮೀರಿದ ನೌಕರರು ಬೇರೆಯವರಿಗೆ ಮತ ಹಾಕಿಸಲು ತಮ್ಮ ಮತವನ್ನು ಕಳೆದುಕೊಂಡಿದ್ದಾರೆ! ಅವರಿಗೆ ಅಂಚೆ ಮತದ ಸೌಲಭ್ಯ ಇದ್ದರೂ ಅದು ಗಣನೆಗೆ ಬರುತ್ತದೆಯೇ ಎಂಬುದು ಪ್ರಶ್ನೆ, ನಾನೂ ಮತಹಾಕಿದ್ದೇನೆ ಎಂಬ ಸಮಾಧಾನ ಅವರಿಗೆ ಇರಬಹುದು ಅಷ್ಟೆ.


ಎಲ್ಲ ಕ್ಷೇತ್ರಗಳಲ್ಲೂ ಕ್ರಾಂತಿ ಉಂಟುಮಾಡಿದ ತಂತ್ರಜ್ಞಾನದ ನೆರವನ್ನು ಚುನಾವಣಾ ವ್ಯವಸ್ಥೆಯಲ್ಲೂ ಬಳಸಿಕೊಳ್ಳಬಹುದು. ಹಳೆ ಪದ್ಧತಿಗೆ ಜೋತು ಬೀಳುವ ಮನೋಭಾವದ ಸರ್ಕಾರಿ ಯಂತ್ರ ಹಾಗೂ ನೇತಾಗಲು ಇದಕ್ಕೆ ಮನಸ್ಸು ಮಾಡಬೇಕಷ್ಟೆ.


Saturday, 18 February 2023

ಸಕಾರಾತ್ಮಕ ಬಜೆಟ್


ಫೆಬ್ರವರಿ 17ರಂದು 2023ರ ಸಾಲಿನ ಕರ್ನಾಟಕದ ಬಹು ನಿರೀಕ್ಷಿತ ಆಯವ್ಯಯ ಮಂಡನೆಯಾಗಿದ್ದು ಇದರಲ್ಲಿ ಕೆಲವು ಉತ್ತಮ ಹೊಸ ಸಂಗತಿಗಳು ಸೇರಿವೆ. ನಿರೀಕ್ಷೆಯಂತೆ ಸರಿಸುಮಾರು ಮೂರು ಲಕ್ಷ ಕೋಟಿ ರೂಗಳ ಬಜೆಟ್ ಇದಾಗಿದೆ.

ಕಳೆದ ಬಾರಿಯ ಬಜೆಟ್ ನಲ್ಲಿ ಘೋಷಿಸಲಾದ ಯೋಜನೆ ಹಾಗೂ ಮೀಸಲಾದ ಹಣದಲ್ಲಿ ಕೇವಲ ಶೇ.46 ಹಣ ವ್ಯಯಿಸಲಾಗಿದ್ದು ಉಳಿದ ಮೀಸಲು ಹಣ ಹಾಗೆಯೇ ಉಳಿದಿದೆ ಅನ್ನಲಾಗಿದೆ. ಈ ದೃಷ್ಟಿಯಿಂದ ಬಜೆಟ್ ನಲ್ಲಿ ಘೋಷಿಸಲಾದ ಎಲ್ಲವನ್ನೂ ಪೂರೈಸಲು ಸಾಧ್ಯವಾಗದಿದ್ದರೂ ಅದರಲ್ಲಿ ಅರ್ಧದಷ್ಟಾದರೂ ಉಪಯೋಗ ಕಾಣಬೇಕಿತ್ತು. ಆಗ ಅದು ಬಜೆಟ್ ಸದುಪಯೋಗವಾಗಿದೆ ಅನ್ನಲು ಸಾಕಾಗುತ್ತಿತ್ತು. ಆದರೆ ರಾಜ್ಯ ತಲಾದಾಯದಲ್ಲಿ ಶೇ.9 ರಷ್ಟು ಏರಿಕೆ ಆಗಿರುವುದು ತೃಪ್ತಿದಾಯಕ ಸಂಗತಿ. ಮೂರು ಲಕ್ಷ ಕೋಟಿಯನ್ನು ಮೀರಿದ ಹೆಚ್ಚುವರಿ ಬಜೆಟ್ ಈ ಬಾರಿ ಮಂಡನೆಯಾಗಿದ್ದು ಆರ್ಥಿಕ ಶಿಸ್ತು ಕಾಪಾಡಿಕೊಂಡಿದ್ದು ಉತ್ತಮ ಸಂಗತಿ. ರೈತರಿಗೆ ಹೆಚ್ಚಿನ ಸಾಲದ ಪ್ರೋತ್ಸಾಹ, ಯುವಕರಿಗೆ ಮಹಿಳೆಯರಿಗೆ ಪ್ರೋತ್ಸಾಹಗಳು ಉತ್ತೇಜನಕಾರಿಯಾಗಿವೆ. ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕ್ರೀಡಾಂಗಣ ನಿರ್ಮಾಣ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹದ ಜೊತೆಗೆ ಕ್ರೀಡಾ ತರಬೇತಿ ಸಂಸ್ಥೆಗಳಿಗೆ ಪ್ರೋತ್ಸಾಹಧನ ಮೊದಲಾದವು ನಿಜಕ್ಕೂ ಉತ್ತಮ ಬೆಳವಣಿಗೆಗಳು. ಸಕಾರಿ ನೌಕರರಿಗೆ ಸಂಬಂಧಿಸಿದಂತೆ ಏಳನೆಯ ವೇತನ ಆಯೋಗ ರಚನೆಗೆ ಸಂಬಂಧಿಸಿದ ಉಲ್ಲೇಖ ಬಜೆಟ್ನಲ್ಲಿ ಇಲ್ಲವಾದರೂ ಇಂಥ ಉದ್ದೇಶಕ್ಕಾಗಿ ಮೀಸಲಿಟ್ಟ ಆರುಸಾವಿರ ಕೋಟಿ ರೂಗಳಲ್ಲಿ ಇದನ್ನು ಈಡೇರಿಸಬಹುದಾಗಿದೆ, ಅಲ್ಲದೇ ಎಲ್ಲವನ್ನೂ ಬಜೆಟ್ ಘೋಷಣೆಯ ಮೂಲಕವೇ ಮಾಡಬೇಕಿಲ್ಲ. ಶಾಲಾಲಾ ಶಿಕ್ಷಕರ ನೇಮಕಾತಿ ಘೋಷಣೆಯಾದುದು ನಿರೀಕ್ಷೆಯಂತೆ ನಡೆದಿದೆ. ಮೂಲಸೌಕರ್ಯ ಅಭಿವೃದ್ಧಿಗೂ ಸಾಕಷ್ಟು ಉತ್ತೇಜನ ಕೊಡಲಾಗಿದೆ. ಇದೇ ಮೊದಲ ಬಾರಿಗೆ ನಮ್ಮ ರಾಜ್ಯ ಬಜೆಟ್ 3 ಲಕ್ಷ ಕೋಟಿ ರೂಗಳನ್ನು ದಾಟಿದೆ. ಕೊರೋನಾ ಕಾಟದ ಹೊಡೆತದಿಂದ ಚೇತರಿಸಿಕೊಂಡು ಈ ಮಟ್ಟಿಗೆ ಬಜೆಟ್ ನೀಡಿರುವುದು ಎಲ್ಲವನ್ನೂ ಸರಿದೂಗಿಸಿದ್ದು ಸಣ್ಣ ಸಾಧನೆಯಲ್ಲ. ವಾರ್ಷಿಕ ಜಿ.ಎಸ್.ಟಿ ಸಂಗ್ರಹಣೆ ಶೇ. 26ಕ್ಕೇರಿದೆ. ತೆರಿಗೆ ಸಂಗ್ರಹಣೆ ಶೇ. 21ಕ್ಕೇರಿದೆ. ತಮ್ಮ ತವರು ಜಿಲ್ಲೆ ಹಾವೇರಿಗೆ ಹೊಸ ಯೋಜನೆಗಳನ್ನು ಕೊಟ್ಟಿದ್ದಾರೆ, ತುಮಕೂರು ಸೇರಿದಂತೆ ಉಳಿದೆಡೆಯ ಬೇಡಿಕೆಗಳು  ಹಾಗೆಯೇ ಉಳಿದಿವೆ. ಮಠ ಮಾನ್ಯಗಳಿಗೆ ಬಿಜೆಪಿ ಸರ್ಕಾರ ಅನುದಾನ ಕೊಡುವುದು ಹೊಸದಲ್ಲ, ಈ ಬಾರಿ ಬೊಮ್ಮಾಯಿ ಅದನ್ನು ಮುಂದುವರೆಸಿದ್ದಾರೆ. ಒಂದು ಅರ್ಥದಲ್ಲಿ ಮಠ ಮಾನ್ಯಗಳು ಆಯಾ ಸಮುದಾಯಗಳನ್ನು ಪ್ರತಿನಿಧಿಸಿ ಸಮುದಾಯಗಳ ಅಭಿವೃದ್ಧಿಗೆ ಮುಂದಾಗುತ್ತವೆ. ಹೀಗಾಗಿ ಸಮುದಾಯಗಳು ಅಭಿವೃದ್ಧಿಯಾದರೆ ಸಮಾಜದ ಅಭಿವೃದ್ಧಿ ಸಹಜವಾಗಿ ಆಗುತ್ತದೆ. ಕೆಲವು ಮಠ ಮಾನ್ಯಗಳು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅನುದಾನ ನೀಡುವಾಗ ಸರ್ಕಾರ ಇಂಥ ಸಂಗತಿಯನ್ನು ಗಮನಿಸಬೇಕು. ಸಮಾಜದ ತೆರಿಗೆ ಹಣ ಸಮಾಜಕ್ಕೆ ಪರೋಕ್ಷ ಅಥವಾ ಪ್ರತ್ಯಕ್ಷ ರೀತಿಯಲ್ಲಿ ತಲುಪಬೇಕು ಅದರಲ್ಲಿ ಪಕ್ಷಪಾತ ಆಗಬಾರದು ಇದು ಆಯವ್ಯಯದ ಮೂಲಮಂತ್ರವಾಗಿರಬೇಕು. ಈ ನಿಟ್ಟಿನಲ್ಲಿ ಸದ್ಯದ ಬಜೆಟ್ ನ್ಯಯ ಕೊಡಲು ಯತ್ನಿಸಿದೆ ಅನ್ನಬೇಕು. ಚುನಾವಣಾ ವರ್ಷದಲ್ಲಿ ಬರುವ ಬಜೆಟ್ಟಿಗೆ ಯಾವಾಗಲೂ ಮತವನ್ನು ತಗುಲಿಸಲಾಗುತ್ತದೆ, ಈ ಬಾರಿಯೂ ಇದೇ ನಡೆದಿದೆ. ಬಹುತೇಕ ಸಮುದಾಯಗಳನ್ನು ತಲುಪುವ ಕೆಲಸ ಬಜೆಟ್ಟಿನಲ್ಲಿನಡೆದಿರುವ ಕಾರಣ ಇದನ್ನು ಆ ಹಿನ್ನೆಲೆಯಲ್ಲಿಯೇ ನೋಡಲಾಗುತ್ತಿದೆ. ಇದರಲ್ಲಿ ತಪ್ಪಿಲ್ಲ.  

ಬಜೆಟ್ ಮಂಡನೆಯಾದಾಗ ಬೆಂಗಳೂರಿಗೆ ಏನು ದೊರೆತಿದೆ ಎಂದು ನೋಡುವುದು ಈಚೆಗೆ ಸಾಮಾನ್ಯವಾಗಿದೆ. ರಾಜ್ಯದಲ್ಲಿ ಅತಿಹೆಚ್ಚು ತೆರಿಗೆಯನ್ನು ಬೆಂಗಳೂರು ಪಾವತಿಸುತ್ತದೆ ಎಂಬುದು ನಿಜವಾದರೂ ಉಳಿದ ಜಾಗಗಳನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. ಜೊತೆಗೆ ಬಜೆಟ್ಟಿನಲ್ಲಿ ನೀಡಿದ ಎಲ್ಲ ಯೋಜನೆಗಳು ಮತವನ್ನೇ ಗುರಿಮಾಡಿಕೊಂಡಿವೆ ಅನ್ನಲಾಗದು. ಆದರೆ ಈ ಬಜೆಟ್ ಸದ್ಯದಲ್ಲೇ ಒಂದೆರಡು ತಿಂಗಳಲ್ಲಿ ಬರಲಿರುವ ಚುನಾವಣೆವರೆಗೆ ಮಾತ್ರವಾದ್ದರಿಂದ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನವಂತೂ ಇದರಲ್ಲಿ ನಡೆದಿದೆ, ರಾಮನಗರದಲ್ಲಿ ರಾಮಮಂದಿರ ನಿರ್ಮಾಣ, ಹನುಮಾದ್ರಿ ಅಭಿವೃದ್ಧಿ ಯೋಜನೆಗಳು ಬಿಜೆಪಿ ಪಕ್ಷದ ಉದ್ದೇಶಗಳನ್ನು ತೋರಿಸುತ್ತವೆ. ನಿರುದ್ಯೋಗಿ ಮಹಿಳೆಯರಿಗೆ ಉಚಿತ ಬಸ್ ಮೀನುಗಾರರ ಅಭಿವೃದ್ಧಿ ಯೋಜನೆಗಳು ಉತ್ತಮವಾಗಿವೆಯಾದರೂ ಇದರಲ್ಲಿ ಸೂಕ್ತ ಫಲಾನುಭವಿಗಳ ಪತ್ತೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದು ಗಮನಾರ್ಹ. ಬಜೆಟ್ ನಲ್ಲಿ ವಿದ್ಯಾನಿಧಿ ಮತ್ತು ವಿದ್ಯಾ ಸಿರಿಗಳ ಹೆಸರಲ್ಲಿ ಮಕ್ಕಳ ಓದಿಗೆ ನೆರವಾದುದು ಹಾಗೂ ಸಣ್ಣ ಕೆರೆಗಳ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಹಾಗೂ ಅಂತರ್ಜಲ ಹೆಚ್ಚಳಕ್ಕೆ ಒತ್ತು ಕೊಟ್ಟಿರುವುದು ಜೊತೆಗೆ ನಿರುದ್ಯೋಗಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವಂತೆ ಉತ್ತೇಜಿಸಲು 2000ರೂ ಹಣ ಸಹಾಯ ಕೊಡಲು ಮುಂದಾದುದು ಕೂ ಡ ಪ್ರಶಂಸನೀಯ. ಆದರೆ ಈ ಹಣ ಅದೇ ಉದ್ದೇಶಕ್ಕೆ ಬಳಕೆಯಾಗಿದೆ ಎಂದು ಸ್ಪಷ್ಟಪಡಿಸುವ ದಾರಿಯನ್ನೂ ರೂಪಿಸಬೇಕಿದೆ, ಅಂದರೆ ಒಬ್ಬ ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಈ ಸಹಾಯ ದೊರಕುವಂತೆ, ಮತ್ತೆ ಮತ್ತೆ ಸಹಾಯಕ್ಕೆ ಹೋಗದಂತೆ ತಡೆಯುವ ಕ್ರಮವನ್ನೂ ಜಾರಿಗೆ ತರಬೇಕು. ಇಲ್ಲವಾದಲ್ಲಿ ಹಳ್ಳದ ಬಳಿ ಹಸಿದು ಕುಳಿತವನಿಗೆ ಎಲ್ಲೋ ಯಾರೋ ಹಿಡಿದ ಮೀನನ್ನು ಮಾನವೀಯತೆ ಹೆಸರಲ್ಲಿ ತಂದು ಉದಾರವಾಗಿ ಕೊಟ್ಟಂತಾಗುತ್ತದೆ, ಇಂಥ ಸಂದರ್ಭದಲ್ಲಿ ಹಸಿದವನು ಮೀನು ಹಿಡಿಯಲು ಕಲಿಯಬೇಕೇ ವಿನಾ ಹಿಡಿದ ಮೀನಿಗೆ ಕಾಯುವುದಲ್ಲ. ಸರ್ಕಾರ ಈ ಮೂಲಕ ಮೀನು ಹಿಡಿಯಲು ಕಲಿಸುವ ಯತ್ನ ಮಾಡುತ್ತಿದೆ. ಇಲ್ಲವಾದಲ್ಲಿ ತೂಕಡಿಸುವವನಿಗೆ ಹಾಸಿಗೆ ದಿಂಬು ಕೊಟ್ಟಂತಾಗುತ್ತದೆ. ಯಾವುದೇ ಸರ್ಕಾರ ಅಥವಾ ಪಕ್ಷ ನೆರವು ಅಥವಾ ಮಾನವೀಯತೆಯ ಹೆಸರಲ್ಲಿ ಇಂಥ ಅರ್ಥ ಹೀನ ನೆರವು ಕೊಡುವುದು ನಕಾರಾತ್ಮಕವಾಗುತ್ತದೆ. ಹಾಗಾಗಿ ಸರ್ಕಾರದ ಇಂಥ ದೃಷ್ಟಿ ಸರಿ ಅನ್ನಬಹುದು. ಜನರನ್ನು ಮೆಚ್ಚಿಸಿ ಓಟು ಪಡೆಯಲು ತೆರಿಗೆ ಹಣದಿಂದ ಪುಕ್ಕಟೆ ಆಮಿಷ ತೋರಿಸುವ ಯೋಜನೆಗಳು ಬಜೆಟ್ಟಿನಲ್ಲಿ ಮೊದಲು ನಿಲ್ಲಬೇಕು, ಅಂಥ ಬಜೆಟ್ ನೀತಿ ಜಾರಿಯಾಗಬೇಕು. ಒಂದು ವಿಷಯವೆಂದರೆ ಸದ್ಯದಲ್ಲೇ ಚುನಾವಣೆ ನಡೆದು ಹೊಸ ಸರ್ಕಾರ ಹೊಸ ಬಜೆಟ್ ಮಂಡುಸುವ ಅವಕಾಶ ಪಡೆಯುತ್ತದೆ ಹಾಗಾಗಿ ಇದು ಏನಿದ್ದರೂ ತಾತ್ಕಾಲಿಕ ಬಜೆಟ್ ಎಂಬುದು ಈ ರ್ಸಾರಕ್ಕೆ ತಿಳಿದಿದೆ. ಹಾಗಿದ್ದರೂ ಇದು ತನ್ನ ಎಲ್ಲ ಅಧಿಕಾರ ಬಳಸಿ ಲಭ್ಯವಿರುವ ಎಲ್ಲ ಸಂಪನ್ಮೂಲವನ್ನು ಬಳಸಿ ಪೂರ್ಣ ಪ್ರಮಾಣ ಅನಿಸುವ ಬಜೆಟ್ಟನ್ನೇ ನೀಡಿದೆ, ಎಲ್ಲ ವಲಯಗಳಿಗೆ ಹಣವನ್ನು ಮೀಸಲಿಟ್ಟಿದೆ. ಹೀಗಾಗಿ ಮುಂದೆ ಬರುವ ಸರ್ಕಾರ ಮತ್ತೆ ಬಜೆಟ್ ಮಂಡಿಸಲು ಹೆಣಗಬೇಕಾದ ಅಥವಾ ಇದೇ ಮುಂಗಡಪತ್ರವನ್ನು ಹೀಗೆಯೇ ಜಾರಿ ಮಾಡುವ ಪರಿಸ್ಥಿತಿಗೆ ಒಳಗಾಗುತ್ತದೆ.


ಡಾ. ಶ್ರೀಪಾದ ಭಟ್, ಕನ್ನಡ ವಿಭಾಗ ಹಾಗೂ ಪ್ರ. ಪಿ ಪರಮ ಶಿವಯ್ಯ. ವಾಣಿಜ್ಯಶಸ್ತ್ರ ಅಧ್ಯಯನ ವಿಭಾಗ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು


Thursday, 16 February 2023

ಇತಿಹಾಸ ಕುರಿತ ಹೊಸ ಆಯಾಮದ ಕೃತಿ


ಮೂಲತಃ ಇಂಜಿನಿಯರ್ ಅವರಾದ ಬಿ.ಎನ್. ಯಳಮಳ್ಳೀಯವರು ಸ್ವಂತ ಆಸಕ್ತಿಯ ಮೇಲೆ ಇತ್ತೀಚಿಗೆ 'ಭಾರತದ ಇತಿಹಾಸದ ತಿರುಚಿದ ಪುಟಗಳು' ಎಂಬ ಕೃತಿಯನ್ನು ರಚಿಸಿ ಹೊರತಂದಿದ್ದಾರೆ. ಇವರು ಇತಿಹಾಸ, ಸಾಹಿತ್ಯ ಅಥವಾ ಮಾನವಿಕ ವಿಷಯಗಳ ವಿದ್ಯಾರ್ಥಿ ಅಲ್ಲ. ಆದರೂ ಕುತೂಹಲ ಮತ್ತು ಆಸಕ್ತಿಗಳಿಂದ ಸಮಕಾಲೀನ ವಿದ್ಯಮಾನಗಳ ಬೆಳವಣಿಗೆಯಿಂದ ಭಾರತದ ನೈಜ ಇತಿಹಾಸ ಏನಿದೆ ಎಂಬ ಅಧ್ಯಯನಕ್ಕೆ ಮುಂದಾಗಿ ಈ ಕೃತಿಯನ್ನು ರಚಿಸಿದ್ದಾರೆ. ಇದಕ್ಕೆ ಮೂಲ ಕಾರಣ ಶಾಲಾ ಪಠ್ಯಪುಸ್ತಕ ರಚನೆಯ ವಿವಾದ ಇದನ್ನು ಲೇಖಕರು ತಮ್ಮ ಮಾತಿನಲ್ಲಿ ಹೇಳಿಕೊಂಡಿದ್ದಾರೆ: 'ವಿದ್ಯಾಸ್ಥಾನಗಳ ಪಠ್ಯ ಪುಸ್ತಕಗಳಲ್ಲಿ ಇತಿಹಾಸವನ್ನು ಮತ್ತು ಸಮಾಜ ಸರಕಾರ ನೇಮಿಸಿದ ಪಠ್ಯ ಪರಿಷ್ಕರಣ ಸಮಿತಿ ಏನು ಮಾಡಿತ್ತು. ಈಗಿನ ಸರಕಾರ ನೇಮಿಸಿದ ಸಮಿತಿ ಏನು ಮಾಡಿದೆ ಎನ್ನುವುದು ಒಂದು ಅತೀ ಸೀಮಿತ ವಿವಾದ. ಇಲ್ಲಿನ ವಿಷಯ ಇನ್ನೂ ತುಂಬಾ ಹಳೆಯದು, ಇನ್ನೂ ಗಹನವಾದುದು. ಭಾರತದ ಇತಿಹಾಸ ಕೇವಲ ಪಠ್ಯಪುಸ್ತಕಗಳ ಮಾತ್ರ ತಿರುಚಲ್ಪಟ್ಟಿದೆ.'

ನಿಜವಾಗಿ ಈ ಬಗೆಯ ದೃಷ್ಟಿಕೋನ ನಮ್ಮ ಸಮಾಜದಲ್ಲಿ ಇತ್ತೀಚೆಗೆ ಅದರಲ್ಲೂ ಕಳೆದ ವರ್ಷ ನಡೆದ ಅಯೋಧ್ಯೆಯ 'ಜ್ಞಾನವ್ಯಾಪಿ' ಮಸೀದಿ - ಮಂದಿರ ಗಲಭೆಯಿಂದ ತೀವ್ರವಾಗಿದೆ. ಸಮಾಜದಲ್ಲಿ ಅಕ್ಷರಬಲ್ಲವರೆಲ್ಲ ತಮ್ಮ ತಮ್ಮ ಊರಿನ ಗತವನ್ನು ಅಗೆಯಲು ಆರಂಭಿಸಿದ್ದಾರೆ. ಒಂದು ದೃಷ್ಠಿಯಲ್ಲಿ ಇದು ಉತ್ತಮ ಬೆಳವಣಿಗೆಯಾದರೂ ಯುರೋಪಿನ ಇತಿಹಾಸದದೃಷ್ಟಿ ಎರಡು ಪಕ್ಷಗಳನ್ನು ಸೃಷ್ಟಿಸಿ ಇಂಥ ವಿವಾದಗಳನ್ನು ಎಂದಿಗೂ ಸಾಯಲು ಬಿಡದೆ ಜಾಗೃತವಾಗಿ ಇಟ್ಟಿರುತ್ತದೆ. ಅಂದರೆ ಈ ಬಗೆಯ ಇತಿಹಾಸದ ದೃಷ್ಟಿಯಿಂದ ಯಾವುದೇ ಘಟನೆ ವಸ್ತು, ವ್ಯಕ್ತಿಗಳನ್ನು ಕುರಿತ ವಿವಾದ ಎಂದಿಗೂ ಅಂತ್ಯಕಾಣುವುದಿಲ್ಲ ಅಥವಾ ಶಾಂತಿ ಮೂಡಿಸುವುದಿಲ್ಲ. ಯುರೋಪಿನ ಹಿಸ್ಟ್ರಿ ಅಥವಾ ಇತಿಹಾಸ ಬೇಡುವ ಆಧಾರಗಳು ಎರಡು ಪಕ್ಷಗಳಿಗೆ ಸಾಕಷ್ಟು ಗ್ರಾಸ ಒದಗಿಸುತ್ತವೆ. ಟಿಪ್ಪು, ಔರಂಗಜೇಬ ಮೊದಲಾದವರಿಗೆ ಸಂಬಂಧಿಸಿದ ಐತಿಹಾಸಿಕ ಸಂಗತಿಗಳು ಈ ಬಗೆಯವು. ಪ್ರಸ್ತುತ ಕೃತಿಯಲ್ಲಿ ಲೇಖಕರು ಗ್ರಹಿಸುವಂತೆ 'ಇಸ್ಲಾಮಿಕ್ ಆಕ್ರಮಣಕಾರರು ಭಾರತದ ಮೇಲೆ ಇಸ್ಲಾಮಿಕ್ ಆಳ್ವಿಕೆಯನ್ನು ಹೂಡುವ ಸಲುವಾಗಿ ಭಾರತದ ಪ್ರವೇಶಿಸಿ, ಅತಿಕ್ರಮಿಸಿ ಸ್ವಾಧೀನಪಡಿಸಿಕೊಂಡು. ನಿಜವಾದ ಇತಿಹಾಸದ ಸಂಕೇತಗಳನ್ನು ಭೌತಿಕವಾಗಿ ನಾಶಪಡಿಸಿ,ಅವುಗಳ ಮೇಲೆ ಇಸ್ಲಾಮಿಕ್ ಚಿಹ್ನೆಗಳನ್ನು ನಿರ್ಮಿಸಿದರು. ನಂತರ ಬಂದ ಬ್ರಿಟಿಷರು ಆಕ್ರಣಕಾರರು ಮುಖ್ಯವಾಗಿ ಸಂಪತ್ತಿನ ಲೂಟಿಯ ಮೇಲೆ ಗಮನ ಕೇಂದ್ರೀರಿಸಿದರು. ಪ್ರಸ್ತುತ ಕೃತಿಯಲ್ಲಿ ಒಟ್ಟು 15 ಅಧ್ಯಾಯಗಳಿದ್ದು ಇತಿಹಾಸ ಎಂದರೇನು? ಎಂಬಂಲ್ಲಿಂದ ಹಿಡಿದು ಮಹಾನ್ ಇತಿಹಾಸಕಾರರು ಅವಲೋಕದವರೆಗೆ ಇದರ ವ್ಯಾಪ್ತಿ ಹರಡಿಕೊಂಡಿದೆ. ಪ್ರಸ್ತುತ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಸಿದ್ಧ ರಾಜಮನೆತನಗಳನ್ನು ಮತ್ತು ಆಡಳಿತಗರರನ್ನು ಮಾತ್ರ ಗಮನಿಸಿ ಸ್ಥಳೀಯ ರಾಜರು ಮತ್ತು ಪಾಳೆಪಟ್ಟುಗಳನ್ನು ನಿರ್ಲಕ್ಷ್ಯಮಾಡಲಾಗಿದೆ ಎಂದು ಲೇಖಕರು ಉದ್ದಕ್ಕೂ ಪ್ರತಿಪಾದಿಸುತ್ತಾರೆ. ಇದಕ್ಕಾಗಿ ಸಾಕಷ್ಟು ಆಧಾರಗಳನ್ನು ಕೂಡ ಸಂಗ್ರಹಿಸಿದ್ದಾರೆ. ಸಾಕಷ್ಟು ಶ್ರಮವಹಿಸಿ ಈ ಕೃತಿಯನ್ನು ರಚಿಸಿ ಇತಿಹಾಸದ ಇನ್ನೂಂದು ಆಯಾಮವನ್ನು ಸಮಾಜದ ಮುಂದೆ ತೆರೆದು ತೋರೊಸುವ ಪ್ರಮಾಣಿಕ ಪ್ರಯತ್ನ ಮಾಡಿದ್ದಾರೆ.

ಆದರೆ ಇವರು ಇತಿಹಾಸಕಾರರಲ್ಲದ ಅಥವಾ ಶಿಕ್ಷಣ ಕ್ಷೇತ್ರದವರು ಅಲ್ಲದ ಕಾರಣ ಇವರ ಕೃತಿ ಹೆಚ್ಚು ಚರ್ಚೆಗೆ ಬರುತ್ತಿಲ್ಲ. ಈ ಕೃತಿಯಲ್ಲಿ ಕೆಲವು ಚಚಾರ್ಹ ಸಂಗತಿಗಳಿದ್ದು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಉದಾಹರಣೆಗೆ ಬ್ರಿಟಿಷ್ ಅವಧಿಯ ನೀತಿಗಳು, ಮೆಕಾಲೆಯ ತಟಸ್ಥ ನೀತಿ, ಆರ್ಯರ ವಲಸೆ ಸಿದ್ಧಾಂತ ಮುಂತಾದವು ಈಗಾಗಲೇ ಸ್ಥಾಪಿತವಾದ ಜನಪ್ರಿಯ ತಪ್ಪು ಅಭಿಪ್ರಾಯಗಳನ್ನು ಪ್ರಶ್ನೆಸುತ್ತದೆ. ಪ್ರಜಾಪ್ರಭುತ್ವದ ಜಾಗೃತ ಸಮಾಜದಲ್ಲಿ ಇಂಥ ಸಂಗತಿಗಳು ಮುಕ್ತವಾಗಿ ಚರ್ಚೆಗೆ ಒಳಗಾಗಬೇಕಾದ ಅಗತ್ಯವಿದೆ. ಒಬ್ಬ ಪ್ರಾಮಾಣಿಕ ಪ್ರಜ್ಞಾವಂತ ಪ್ರಜೆ ಇಂಥ ಪ್ರಯತ್ನಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕಾದ ಅಗತ್ಯವಿದೆ. ಇಂಥ ಪ್ರಯತ್ನಗಳಿಂದ ಸಮುದಾಯ ಜಾಗೃತವಾಗಿರುತ್ತದೆ. ಆರೋಗ್ಯಕರ ಚರ್ಚೆಯಿಂದ ತನ್ನನ್ನು ತಾನು ಅವಲೋಕಿಸಿಕೊಳ್ಳುತ್ತದೆ. ಆದರೆ ಪ್ರಸ್ತುತ ಕೃತಿಯನ್ನು ಸಮಕಾಲೀನ ವ್ಯವಸ್ಥೆ ಮತ್ತು ಸಮಾಜ ಯಾವ ರೀತಿಯಲ್ಲಿ ಸ್ವೀಕರಿಸುತ್ತದೆ ಎಂಬುದನ್ನು ನೋಡಬೇಕಿದೆ. ಈ ಕೃತಿಯನ್ನು ಬೆಂಗಳೂರಿನ ಸಾಧನ ಪಬ್ಲಿಕೇಷನ್ ಪ್ರಕಟಿಸಿದೆ. ಇತಿಹಾಸೇತರ ಕ್ಷೇತ್ರದ ವ್ಯಕ್ತಿಯೊಬ್ಬರು ಈ ಬಗೆಯ ಪ್ರಯತ್ನಕ್ಕೆ ಕೈಹಾಕಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿ. ತಮ್ಮ ಪ್ರಯತ್ನಕ್ಕೆ ಅಡಿಪಾಯವಾಗಿ ಪ್ರಸಿದ್ಧ ಇತಿಹಾಸಕಾರರಾದ ಜದುನಾಥ ಸರ್ಕಾರ್,ರವರ "ಸತ್ಯವು ಹಿತಕರವೋ ಅಥವಾ ಅಪ್ರಿಯವೋ, ಮತ್ತು ಪ್ರಸ್ತುತ ದೃಷ್ಟಿಕೋನಗಳಿಗೆ ಅನುಗುಣವಾಗಿ ಅಥವಾ ವಿರುದ್ಧವಾಗಿದೆಯೋ ಎಮದು ನಾನು ಹೆದುರುವುದಿಲ್ಲ. ಸತ್ಯವು ನನ್ನ ದೇಶದ ವೈಭವಕ್ಕೆ ಮಾರಕವಾಗಿದೆಯೇ, ಇಲ್ಲವೇ ಎಂದು ನಾನು ಸ್ವಲ್ಪವೂ ತಲೆ ಕೆಡಿಸಿಕೊಳ್ಳುವುದಿಲ್ಲ ಅಗತ್ಯವಿದ್ದರೆ, ಸತ್ಯವನ್ನು ಬೋಧಿಸುವುದಕ್ಕಾಗಿ ಸ್ನೇಹಿತರ ಮತ್ತು ಸಮಾಜದ ಅಪಹಾಸ್ಯ ಮತ್ತು ನಿಂದನೆಗಳನ್ನು ನಾನುತಾಳ್ಮೆಯಿಂದ ಸಹಿಸಿಕೊಳ್ಳುತ್ತೇನೆ. ಆದರೆ ನಾನು ಸತ್ಯವನ್ನು ಹುಡುಕುತ್ತೇನೆ. ಸತ್ಯವನ್ನು ಅರ್ಥ ಮಾಡಿಕೊಳ್ಳುತ್ತೇನೆ ಮತ್ತು ಸತ್ಯವನ್ನು ಒಪ್ಪಕೊಳ್ಳುತ್ತೇನೆ ಎನ್ನುವುದು ನೈಜ ಇತಿಹಾಸಕಾರನ ದೃಢ ಸಂಕಲ್ಪವಾಗಿರಬೇಕು". ಎಂಬ ಮಾತನ್ನು ಉಲ್ಲೇಖಿಸಿ ಕೃತಿಯನ್ನು ಆರಂಭಿಸುತ್ತಾರೆ. ಲೇಖಕರು ತಮ್ಮ ಕೃತಿಯುದ್ದಕ್ಕೂ ಭಾರತದ ಇತಿಹಾಸವನ್ನು ಅಥವಾ ಇತಿಹಾಸವೆಂದು ನಂಬಲಾದ ಸಂಗತಿಗಳನ್ನು ಯಾವ ಯಾವ ಹಂತದಲ್ಲಿ ಯಾರೆಲ್ಲ ಹೇಗೆ ತಿರುಚಿದ್ದಾರೆ ಎಂಬುದನ್ನು ನಿರೂಪಿಸುವ ಯತ್ನಮಾಡಿದ್ದಾರೆ. ಕುತೂಹಲಕರ ಸಂಗತಿ ಎಂದರೆ ಅವರ ಈ ಪ್ರಯತ್ನ ಕೂಡ ಯುರೋಪಿನ ಇತಿಹಾಸ ದೃಷ್ಟಿಯಿಂದಲೇ ಹುಟ್ಟಿಕೊಂಡಿದೆ ಮತ್ತು ಪ್ರತಿಪಾದಿತವಾಗಿದೆ ಎಂಬುದು. ಈ ಬಗೆಯ ದೃಷ್ಟಿಕೋನ ಸಮಸ್ಯಾತ್ಮಕ. ಏಕೆಂದರೆ ರಾಮಾಯಣ, ಮಹಾಭಾರತಗಳ ಸಂಗತಿಗಳನ್ನು ಇಂಥ ದೃಷ್ಟಿಯಿಂದ ಪರಿಶೀಲಿಸುತ್ತಾ ಹೋದರೆ ಅದಕ್ಕೆ ಅಂತ್ಯವೇ ಇರುವುದಿಲ್ಲ ಉದಾಹರಣೆಗೆ ರಾಮಸೇತುವನ್ನು ಗಮನಿಸಬಹುದು. ಇದೊಂದು ಜನಪ್ರಿಯ ಸಂಗತಿ. ರಾಮಸೇತು ನಿಜಕ್ಕೂ ಇದೆಯೇ? ಎಲ್ಲಿದೆ ಹೇಗಿದೆ ಎಂಬುದು ಮೊದಲ ಪ್ರಶ್ನೆ ಅದನ್ನು ಕಟ್ಟಿದವರು ಯಾರು? ಅವರಿಗೆ ಪದವಿ ಪ್ರಶಸ್ತಿ ಕೊಟ್ಟ ಕಾಲೇಜು ಯಾವುದು ಇತ್ಯಾದಿ ಅರ್ಥಹೀನ ಪ್ರಶ್ನೆಗಳು ಒಂದರ ಹಿಂದೆ ಒಂದರಂತೆ ಹುಟ್ಟುತ್ತವೆ. ನಿಜವಾಗಿ ಸಮಾಜದ ನಂಬಿಕೆಯನ್ನು, ಐತಿಹ್ಯವನ್ನು ಯುರೋಪಿನ ಇತಿಹಾಸದ ದೃಷ್ಟಿಯಲ್ಲಿ ಪರಿಶೀಲನೆಗೆ ಒಡ್ಡಿದರೆ ಈ ಬಗೆಯ ಸಮಸ್ಯಗಳು ಎಂದಿಗೂ ನಿಲುಗಡೆ ಕಾಣುವುದಿಲ್ಲ. ಆದರೆ ಎರಡು ಭಿನ್ನ ದೃಷ್ಟಿಗಳ ಬದಲು ಯುರೋಪಿನ ದೃಷ್ಟಿಯಲ್ಲಿಯೇ ಭಾರತೀಯ ಇತಿಹಾಸವನ್ನು ಹೇಗೆ ತಿರುಚಲಾಗಿದೆ ದ್ವಂದ್ವ ರೀತಿಯಲ್ಲಿ ಹೇಗೆ ಪ್ರತಿಪಾದಿಸಲಾಗಿದೆ ಎಂಬುದನ್ನು ಈ ಕೃತಿ ನಿರೂಪಿಸುತ್ತದೆ. ಯಾವುದೇ ವಿವಾದ ಸೃಷ್ಟಿಸುವುದು ಇಲ್ಲಿನ ಉದ್ದೇಶವಲ್ಲ ಇದ್ದುದನ್ನು ಇರುವಂತೆ ತೆರೆದಿಡುವ ಪ್ರಯತ್ನ ಮಾತ್ರ ಎಂಬ ತಮ್ಮ ಮಾತಿಗೆ ಲೇಖಕರು ಬದ್ಧರಾಗಿದ್ದಾರೆ. ಇಂಥ ಕೃತಿಯನ್ನು ರಚಿಸಿದ ಯಳಮಳ್ಳೀಯವರು ಅಭಿನಂದನಾರ್ಹರು ಪ್ರಸ್ತುತ ಕೃತಿ ಶಿಕ್ಷಣ ವಲಯದ ಗಮನ ಸೆಳೆಯಲಿ ಹೆಚ್ಚು ಚರ್ಚೆಗೆ ಒಳಗಾಗಲಿ ಎಂದು ಬಯಸಬಹುದು.

Friday, 10 February 2023

ಒಂದು ಜನಪ್ರಿಯ ತಪ್ಪು ಉಲ್ಲೇಖ


ಮೊನ್ನೆ ರಾಜ್ಯಸಭೆಯಲ್ಲಿ ನಮ್ಮ ಹಿರಿಯರಾದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗ್ಗಡೆಯವರು ರಾಷ್ಟ್ರಪತಿಗಳ ಮಾತನ್ನು ಉಲ್ಲೇಖಿಸಿ ಅವರು ಕಾಯಕವೇ ಕೈಲಾಸ ಎಂದು ಬಸವಣ್ಣ ಹೇಳಿದ್ದನ್ನು ಉಲ್ಲೇಖಿಸಿದ್ದು ಖುಷಿ ಆಯಿತೆಂದು ಹೇಳಿದ್ದಾರೆ. ಹೆಗ್ಗಡೆಯವರು, ರಾಷ್ಟ್ರಪತಿಗಳು ಅಂತಲ್ಲ, ನಾವೆಲ್ಲರೂ ಹೀಗೆಯೇ ಭಾವಿಸಿದ್ದೇವೆ, ಅಥವಾ ನಮಗೆ ಹೀಗೆ ಹೇಳಿಕೊಡಲಾಗಿದೆ. ಆದರೆ ಇದು ತಪ್ಪು. ಈ ಮಾತನ್ನು ಹೇಳಿದವನು ಆಯ್ದಕ್ಕಿ ಮಾರಯ್ಯ ಎಂಬ ವಚನಕಾರ. ಆತನ ವಚನ ಹೀಗಿದೆ: ‘ಕಾಯಕದಲ್ಲಿ ನಿರತನಾದೊಡೆ ಗುರುದರ್ಶನವಾದೊಡೂ ಮರೆಯಬೇಕು ಲಿಂಗಪೂಜೆಯಾದೊಡೂ ಮರೆಯಬೇಕುಜಂಗಮ ಮುಂದೆ ನಿಂದಿದ್ದರೂ ಹಂಗ ಹರಿಯಬೇಕು ಕಾಯಕವೇ ಕೈಲಾಸವಾದ ಕಾರಣ ಅಮರ ಲಿಂಗವಿತ್ತೊಡಾದರೂ ಕಾಯಕದೊಳು’.

ವಚನಕಾರರಿಗೆ ಲಿಂಗ, ಜಂಗಮ, ಗುರು ಇವೆಲ್ಲ ಅತ್ಯಂತ ಮುಖ್ಯವಾದವು. ಆದರೆ ಮಾರಯ್ಯ ಎಲ್ಲಕ್ಕಿಂತ ಕಾಯಕವೇ ಶ್ರೇಷ್ಠ ಎಂಬ ನಿಲುವಿಗೆ ಬರುತ್ತಾನೆ. ಅವನ ವಚನದಲ್ಲಿ ಈ ಮಾತು ಸ್ಪಷ್ಟವಾಗಿದೆ.

ಬಸವಣ್ಣನವರು ಬರುವ ವೇಳೆಗೆ ವೀರಶೈವರು ಮಠ ಮಾನ್ಯಗಳ ಹೆಸರಲ್ಲಿ ಶುದ್ಧ ಸೋಮಾರಿಗಳಾಗಿ ಕೇವಲ ಉಪದೇಶ ಮಾಡಿಕೊಂಡಿದ್ದರೆಂದೂ ಅವರಿಗೆ ತಿಳಿ ಹೇಳಿ ನೀವು ಕಾಯಕದಲ್ಲಿ ತೊಡಗಬೇಕೆಂದು ಎಚ್ಚರಿಸಿದವರು ಬಸವಣ್ಣವವರೆಂದು ಹೇಳಲಾಗುತ್ತದೆ.ಹೀಗಾಗಿ ಕಾಯಕವೇ ಕೈಲಾಸ ಎಂಬುದು ಅವರ ಹೆಸರಿಗೆ ಅಂಟಿದೆ ಅನ್ನಲಾಗುತ್ತದೆ. ಆದರೆ ಬಸವಣಣವನವರ ವಚನ ಹೀಗಿದೆ- ‘ಶರಣ ನಿದ್ರೆ ಗೈದೆಡೆ ಜನ ಕಾಣಿರೋ, ಶರಣ ನಡೆದುದೇ ಪಾವನ ಕಾಣಿರೋ, ಶರಣ ನುಡಿದುದೇ ಶಿವತತ್ವ ಕಾಣಿರೋ, ಕೂಡಲ ಸಂಗಮ ಶರಣರ ಕಾಯವೇ ಕೈಲಾಸ ಕಾಣಿರೋ' (ಸಮಗ್ರ ವಚನ ಸಂಪುಟ 1, ವಚನ ಸಂಖ್ಯೆ 873).

ವಚನ ಚಳವಳಿಯ ಕುರಿತಾಗಿ ಸಾಕಷ್ಟು ಗೊಂದಲಗಳು ಇಂದಿಗೂ ಉಳಿದಿವೆ. ಅವುಗಳಲ್ಲಿ ಒಂದು- ಕೂಡಲಸಂಗಮದಲ್ಲಿ ಕ್ರಾಂತಿಯಾದಾಗ ವಚನಗಳ ಕಟ್ಟನ್ನು ಹೊತ್ತು ಹುಬ್ಬಳ್ಳಿಯ ಮೂರು ಸಾವಿರ ಮಠಕ್ಕೂ ಉಳವಿಗೂ ಸಾಗಿಸಲಾಯಿತು ಎಂಬ ಮಾತು. ಅವು ಏನಾದವೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇನ್ನೊಂದು- ವಚನ ಸಂಪಾದನೆಯನ್ನು ಫಗು ಹಳಕಟ್ಟಿಯವರಾದಿಯಾಗಿ ಕಲ್ಬುರ್ಗಿಯವರವರೆಗೆ ಅನೇಕರು ಮಾಡಿದ್ದಾರೆ. ಆದರೆ ಒಬ್ಬರ ಸಂಗ್ರಹದಲ್ಲಿರುವ ವಚನ ಮತ್ತೊಬ್ಬರ ಸಂಗ್ರಹದಲ್ಲಿ ಒಮ್ಮೊಮ್ಮೆ ಇರುವುದಿಲ್ಲ, ಅಲ್ಲದೇ ಅಂಕಿತಗಳನ್ನು ತೆಗೆದು ಓದಿದರೆ ಯಾವ ವಚನ ಯಾರದು ಎಂದು ಹೇಳುವುದು ಕೂಡ ಕಷ್ಟ. ಕೆಲವೊಮ್ಮೆ ಅವರಿವರ ವಚನಗಳು ಕಲಸು ಮೇಲೋಗರವಾಗುವುದೂ ಇದೆ. ಸದ್ಯದ ವಚನ ಅಂಥದ್ದು, ಇದೊಂದು ಜನಪ್ರಿಯ ಸುಳ್ಳು. ಇದೇ ರೀತಿ ವೀರಶೈವ ಚಳವಳಿ ಬಸವಣ್ಣನವರಿಂದ ಶುರುವಾಯಿತು ಎಂದು ತಿಳಿದಿರುವುದು, ವೇದ ಉಪನಿಷತ್ತುಗಳನ್ನು ವಚನಕಾರರು ನಿರಾಕರಿಸಿದರು ಎಂಬುದು ಕೂಡ ಪೂರ್ತಿ ಸರಿಯಲ್ಲ. ಉಪನಿಷತ್ತುಗಳ ಅನೇಕ ಮಾತುಗಳನ್ನು ವಚನಕಾರರು ಬಳಸಿಕೊಂಡಿದ್ದಾರೆ, ದೇಹೋ ದೇವಾಲಯಪ್ರೋಕ್ತೋ ಎಂಬ ಸಾಲು ವಚನಗಳಲ್ಲಿ ‘ದೇಹವೇ ದೇಗುಲ’ ಎಂದು ಕಾಣಿಸಿಕೊಳ್ಳುತ್ತದೆ. ಇಂಥ ಸಾಕಷ್ಟು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿಯೇ ಬಸವಣ್ಣನವರು ಕಾಯವೇ ಕಇಲಾಸ ಅಂದಿದ್ದಾರೆ. 

ಕೆಲವರ ಪ್ರಕಾರ ಕಾಯಕಕ್ಕೆ ಹೆಚ್ಚು ಮಹತ್ವ ಕೊಟ್ಟು ಅದನ್ನು ಮುನ್ನೆಲೆಗೆ ತಂದವರು ಬಸವಣ್ಣನವರಾದ ಕಾರಣ ಅವರ ಹೆಸರಿಗೆ ಈ ಸಾಲು ಸೇರಿದೆ ಅನ್ನುವುದಾಗಿದೆ, ಬಸವಣ್ಣನವರು ಬರುವ ವೇಳೆಗೆ ವೀರಶೈವರು ಮಠ ಮಾನ್ಯಗಳ ಹೆಸರಲ್ಲಿ ಶುದ್ಧ ಸೋಮಾರಿಗಳಾಗಿ ಕೇವಲ ಉಪದೇಶ ಮಾಡಿಕೊಂಡಿದ್ದರೆಂದೂ ಅವರಿಗೆ ತಿಳಿ ಹೇಳಿ ನೀವು ಕಾಯಕದಲ್ಲಿ ತೊಡಗಬೇಕೆಂದು ಎಚ್ಚರಿಸಿದವರು ಬಸವಣ್ಣವವರೆಂದು ಹೇಳಲಾಗುತ್ತದೆ. ಹೀಗಾಗಿ ಕಾಯಕವೇ ಕೈಲಾಸ ಎಂಬುದು ಅವರ ಹೆಸರಿಗೆ ಅಂಟಿದೆ ಅನ್ನಲಾಗುತ್ತದೆ. ಇರಬಹುದು. ಆದರೆ ಕಾಯಕವೇ  ಕೈಲಾಸ ಎಂಬುದು ಆಯ್ದಕ್ಕಿ ಮಾರಯ್ಯನ ಮಾತು ಎಂಬುದು ಸಿದ್ಧವಾಗಿದೆ, ಪ್ರಚಾರಕ್ಕೆ ಬಂದಿಲ್ಲ. ನಮ್ಮ ಅಜ್ಞಾನ ಇದಕ್ಕೆ ಕಾರಣ. ಇನ್ನಾದರೂ ಇಂಥ ತಪ್ಪುಗಳು ಪ್ರಚಾರವಾಗದಂತೆ ನಾವು ಎಚ್ಚರವಹಿಸಬೇಕಿದೆ. ಹಿಂದಿನವರ ಮಾತನ್ನು ಉಲ್ಲೇಖಿಸುವಾಗ ತುಸು ಎಚ್ಚರವಹಿಸುವುದು ಅಗತ್ಯ. ಅದು ನಮ್ಮ ಸಾಮಾಜಿಕ ಜವಾಬ್ದಾರಿ.


Thursday, 2 February 2023

ಆಶಾದಾಯಕ ಬಜೆಟ್


ಫೆಬ್ರವರಿ ಒಂದರಂದು ಮಂಡನೆಯಾದ ಮೋದಿ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಎಲ್ಲರನ್ನೂ ಸಂತೈಸಿದೆ. ಮುಖ್ಯವಾಗಿ ಎಲ್ಲ ಟೀಕಾಕಾರರ ಬಾಯಿ ಮುಚ್ಚಿಸಿದೆ.ಒಟ್ಟು 45ಲಕ್ಷ ಕೋಟಿ ರೂಗಳ ಈ ಬಜೆಟ್ನಲ್ಲಿ ನಿರೀಕ್ಷೆಯಂತೆ ತೆರಿಗೆ ಪಾವತಿಯ ಹಳೆಯ ನೀತಿಯಲ್ಲಿ ಸ್ವಲ್ಪ ಬದಲಾವಣೆ ತರಲಾಗಿದೆ. ಹೊಸ ನೀತಿಯಲ್ಲಿ ಐದು ಸ್ಲಾಬ್‍ಳನ್ನು ಕೊಡಲಾಗಿದೆ. ಹೊಸ ತೆರಿಗೆ ನೀತಿ ಕಳೆದ ವರ್ಷ ಜಾರಿಯಾಗಿದ್ದರೂ ಅದು ಪಾವತಿದಾರ ಸ್ನೇಹಿಯಾಗಿರಲಿಲ್ಲ. ಹೀಗಾಗಿ ಇದನ್ನು ಕೇವಲ ಶೇ.12 ಜನ ಮಾತ್ರ ಸ್ವೀಕರಿಸಿದ್ದರು. ಹೀಗಾಗಿ ಅದರಲ್ಲಿ ಬದಲಾವಣೆ ಮಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಒಪ್ಪುತ್ತಾರೆಂಬುದನ್ನು ನೋಡಬೇಕಿದೆ. ಸಂತೋಷದ ಸಂಗತಿ ಅಂದರೆ ಈ ಬಾರಿವಿತ್ತೀಯ ಕೊರತೆಯನ್ನು ಇಳಿಸಲಾಗಿದೆ. ಮುಂದೆ ಈ ಕೊರತೆಯನ್ನು ಸಂಪೂರ್ಣ ನಿಲ್ಲಿಸುವುದರತ್ತ ಇದು ಇನ್ನೊಂದು ಹೆಜ್ಜೆ. ಯಾವುದೇ ಜನಪ್ರಿಯ ಯೋಜನೆ ಇಲ್ಲದ ವಿತ್ತೀಯ ಶಿಸ್ತನ್ನು ಕಾಯ್ದುಕೊಂಡ ಹಾಗೂ ಕೇಂದ್ರ ಅನುದಾನದಲ್ಲಿ ರಾಜ್ಯಗಳು ಜನಪ್ರಿಯ ರಾಜಕೀಯ ಯೋಜನೆ ಘೋಷಿಸುವುದಕ್ಕೂ ಕಡಿವಾಣ ಹಾಕಿದೆ. ಕುಟುಂಬ ಕಲ್ಯಾಣ ಇಲಾಖೆಯ ಅನುದಾನ ಕಡಿತ ಇದಕ್ಕೆ ನಿದರ್ಶನ. 

ತೆರಿಗೆಯ ಮಿತಿಯನ್ನು ಏಳು ಲಕ್ಷಕ್ಕೆ ಏರಿಸಿದ್ದು ಖರೀದಿ ಶಕ್ತಿ ಹೆಚ್ಚಿಸಲು, ಎಲ್ಲರ ಆದಾಯ ಹೆಚ್ಚಿಸಲು ಅನುವುಮಾಡಿಕೊಡಲಿದೆ. 

ವಿಶ್ವಕರ್ಮ ಯೋಜನೆಯಡಿ 4 ಲಕ್ಷ ಜನರಿಗೆ ಕೌಶಲ ತರಬೇತಿ ನೀಡುವುದು, ದೇಶದ ಅನೇಕ ಕಡೆ ದೇಶೀ ಯೂನಿಟ್ಗಳನ್ನು ಸ್ಥಾಪಿಸಿ ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವುದು ಉತ್ತಮ ಪ್ರಯತ್ನವಾಗಿದೆ.ಮುಖ್ಯವಾಗಿ ಗ್ರಾಮೀಣಾಭಿವೃದ್ಧಿಗೆ ಒತ್ತು ಕೊಟ್ಟಿರುವುದು ಜೊತೆಗೆ ಕೃಷಿ ಸಹಕಾರಿ ಸಂಘಗಳ ಸದಸ್ಯರಿಗರ 2 ಲಕ್ಷ ನಗದು ಕೊಡುವುದು ಕೃಷಿ ವಲಯದ ಸಾಲಕ್ಕೆ ಉತ್ತೇಜನ ಕೊಟ್ಟಿರುವುದು ಸ್ತುತ್ಯರ್ಹ. ಸಿರಿಧಾನ್ಯಗಳಿಗೆ ನೀಡಿರುವ ಉತ್ತೇಜನ, ಆಹಾರ ಧಾನ್ಯಗಳಿಗೆ ಕೊಟ್ಟ ಪ್ರೋತ್ಸಾಹಗಳು ಕೂಡ ಬಜೆಟ್ಟಿನ ಗುಣಾತ್ಮಕ ಅಂಶಗಳು. ದೇಖೋ ಅಪ್ನಾ ದೇಶ್ ದೇಶ ದರ್ಶನಗಳ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ಕೊಟ್ಟಿರುವುದು ಒಂದೆಡೆ ಸ್ಥಳೀಯ ಉದ್ಯೋಗ ಹೆಚ್ಚಳ ಮಾಡಿದರೂ ಪರಿಸರಾತ್ಮಕ ಅಪಾಯಗಳ ಬಗ್ಗೆ ಯೋಚಿಸಬೇಕಿದೆ. ಸಣ್ಣ ಕೈಗಾರಿಕೆಗೆ ಕೊಟ್ಟಿರುವ ಉತ್ತೇಜನ ಸ್ಪರ್ಧಾತ್ಮಕತೆಗೆ ಕಾರಣವಾಗುವುದಲ್ಲದೇ ಗುಣಮಟ್ಟ ಹೆಚ್ಚಳಕ್ಕೂ ದಾರಿ ಮಾಡಿಕೊಡುತ್ತದೆ. 

ಈ ಬಾರಿಯ ಬಜೆಟ್ ಎಂದಿನಂತೆ ಟೀಕಾಕಾರರ ಹಾಗೂ ಪ್ರತಿಪಕ್ಷಗಳ ಟೀಕೆಯನ್ನು ಎದುರಿಸದಿರುವುದು ಒಂದು ಹೆಗ್ಗಳಿಕೆಯಾದರೂ ಇದರಲ್ಲಿರುವ ಮಿತಿ ಅರ್ಥವಾಗಲು ಆರು ತಿಂಗಳಾದರೂ ಬೇಕಾಗುತ್ತದೆ.

ಬಜೆಟ್ಗೆ ಸಂಬಂಧಸಿದ ಇನ್ನೊಂದು ವಿಷಯವೆಂದರೆ ಸಾಮಾಜಿಕ ಜಾಲ ತಾಣಗಳಲ್ಲಿ ಕೂಡ ಹೆಚ್ಚು ಚರ್ಚೆ ಆಗದಿರುವುದು, ಅಲ್ಲಿ ಹೆಚ್ಚು ನಡೆದ ಚರ್ಚೆ ಬಜೆಟ್ಟಿಗಿಂತಲೂ ನಿರ್ಮಲಾ ಅವರು ತೊಟ್ಟ ಸೀರೆ ಎಲ್ಲಿಯದು ಕರ್ನಾಟಕದ ಇಳಕಲ್ಲಿನದಾ ಮೈಸುರು, ಧರವಾಡದ್ದಾ ಕಂಚೀಪುರದ್ದಾ ಒತ್ಯಾದಿ ಲಘು ಹರಟೆ ರೀತಿಯದ್ದೇ ವಿನಾ ಗಂಭೀರ ಸ್ವರೂಪದ್ದಲ್ಲ. ಎಡ ಪಕ್ಷದವರು ಕೂಡ ಟೀಕೆ ಮಡದಿರುವುದನ್ನು ಗಮನಿಸಿದ ನೆಟ್ಟಿಗರು  ನಿರ್ಮಲಾ ಅವರು ತೊಟ್ಟ ಸೀರೆ ಕೆಂಪು ಬಣ್ಣದ್ದಾದ್ದರಿಂದ ಅವರು ಸುಮ್ಮನಿದ್ದಾರೆ ಅಕಸ್ಮಾತ್ ಅದು ಕೇಸರಿ ಬಣ್ಣದ್ದಾಗಿದ್ದರೆ ಹಣಕಾಸು ಸಚಿವರು ಬಜೆಟ್ ಮಂಡನೆಯಂಥ ಸಂದರ್ಭವನ್ನು ಪಕ್ಷ ಸಂಕೇತವಾಗಿ ಬಳಸಿಕೊಂಡು ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆಂದು ತೆಗಳುತ್ತಿದ್ದರೆಂದು ಈಗ ಟೀಕಿಸಲು ಅವರಿಗೆ ಏನೂ ಉಳಿದಿಲ್ಲ ಎಂದು ಕಾಲೆಳೆದಿದ್ದಾರೆ. 

ದೇಶಾದ್ಯಂತ ಮೂಲಸೌಕರ್ಯಕ್ಕೆ ಒತ್ತು ಕೊಡುವಂತೆ ರಸ್ತೆ ಸಾರಿಗೆ ಸಂಪರ್ಕ ಉತ್ತಮಪಡಿಸುವ ಸೌಲಭ್ಯ  ಹೆಚ್ಚಿಸುವುದು ದೂರದೃಷ್ಟಿಯನ್ನು ಉಳ್ಳದ್ದಾಗಿದೆ.ರಿಯಲ್ ಎಸ್ಟೇಟ್ ವಲಯದ ಉತ್ತೇಜನ ಉದ್ಯೋಗ ಸೃಸ್ಟಿಗೆ ಸಹಕಾರಿಯಾದರೂ ಇದರ ಅಪಾಯದ ಮಗ್ಗುಲನ್ನು ತಳ್ಳಿಹಾಕುವಂತಿಲ್ಲ. ಈ ಎಲ್ಲ ಅಂಶಗಳ ಬಗ್ಗೆ ಇನ್ನು ಮೇಲೆ ಗಂಭೀರ ಚಚರ್ರ ಆಗಬೇಕಿದೆ. ಒಟ್ಟಿನಲ್ಲಿ ಮೇಲ್ನೋಟಕ್ಕೆ ಎಲ್ಲರೂ ಒಪ್ಪಬಹುದಾದ ಬಜೆಟ್ ಅನಿಸಿದರೂ ಇದರಿಂದ ನೇರವಾಗಿ ಹಳ್ಳಿಗಳು ಮತ್ತು ಪರಿಸರದ ಮೇಲಾಗುವ ದೂರಗಾಮಿ ಪರಿಣಾಮವನ್ನು ಯಾರೂ ಯೋಚಿಸುತ್ತಿರುವಂತೆ ಕಾಣುತ್ತಿಲ್ಲ. ಇದು ನಡೆಯಬೇಕಿದೆ.