Saturday, 28 October 2023

ಕಣ್ಣು ತೆರೆಯಿಸಿದ ಅರ್ಥರ್ ಆಶ್ ಕೃತಿ


ನಾವೆಲ್ಲ ಹೀಗೆಯೇ ಕಣ್ರೀ. ಸುಖವಿದ್ದಾಗ ಇವೆಲ್ಲ ನನಗೇಕೆ ದೇವರೇ ಎಂದು ಕೇಳುವುದಿಲ್ಲ. ಆದರೆ ಸ್ವಲ್ಪ ಕಷ್ಟ ಬಂದಕೂಡಲೇ ನಮ್ಮ ನಮ್ಮ ಕಲ್ಪನೆಯ ದೇವರನ್ನು ತೆಗಳಲು ಶುರುಮಾಡುತ್ತೇವೆ. ಬೇರೆಯವರ ಕತೆ ಬೇಕಿಲ್ಲ. ನನ್ನ ಪ್ರಸಂಗವನ್ನೇ ಹೇಳುತ್ತೇನೆ. ಉನ್ನತ ವ್ಯಾಸಂಗ ಮಾಡುವಾಗ ಕಷ್ಟವೋ ನಷ್ಟವೋ ಓದಿ ಮೊದಲ ರ‍್ಯಾಂಕ್ ಬಂದೆ. ಚಿನ್ನದ ಪದಕ ಸಿಕ್ಕಿಸಿಕೊಂಡು ಸಂಭ್ರಮಿಸಿದೆ. ಆ ಸಂದರ್ಭದಲ್ಲಿ ಯಾರೋ ಊಟ ಹಾಕಿ ಓದಲು ನೆರವಾದರು. ಸಂಶೋಧನೆ, ಪ್ರಾಜೆಕ್ಟ್ ಗಳನ್ನು ಮಾಡಿ ಸೈ ಅನಿಸಿಕೊಂಡೆ. ಆಗ ಇವೆಲ್ಲ ನನ್ನ ಶ್ರಮದ ಫಲ ಎಂದು ಬೀಗಿದೆ. ಅಂದು ದೇವರೇ ಇವೆಲ್ಲ ನನಗೇ ಏಕೆ ಎಂದು  ಕೇಳಿಕೊಳ್ಳಲಿಲ್ಲ. ಅನಂತರ ಬಯಸಿದ ಒಳ್ಳೆಯ ವೃತ್ತಿ ಸಿಕ್ಕಿತು. ಒಳ್ಳೆಯ ಹೆಂಡತಿ ಸಿಕ್ಕಿದಳು. ಉತ್ತಮ ಆರೋಗ್ಯ ಇತ್ತು. ಸಂತೋಷವಾಗಿದ್ದೆ. ಬೇಕಾದ್ದು ಉಂಡು-ತಿಂದು ಖುಷಿಯಾಗಿದ್ದೆ. ಆಗ ಯಾವ ಕ್ಷಣದಲ್ಲೂ ದೇವರೇ ಇದೆಲ್ಲ ನನಗೇ ಏಕೆ ಎಂದು ಕೇಳಲಿಲ್ಲ. ಕಾಲ ಒಂದೇ ರೀತಿ ಇರುವುದಿಲ್ಲ. ಜೀವನ ಸರಳರೇಖೆಯೂ ಅಲ್ಲ. ಹೊಳೆಯುವ ಕನ್ನಡಿ ಮೇಲೆ ಗೀರು ಗೀಚು ಬಿದ್ದಂತೆ ಅದು ಇರಬಹುದು. ಮುಂದೆ ಒಂದು ದಿನ ಇಂಥ ದಿನ ಬರಬಹುದು ಎಂಬ ಕಲ್ಪನೆಯನ್ನೂ ಮಾಡಿಕೊಳ್ಳಲುಪುರುಸೊತ್ತು ಇಲ್ಲದಷ್ಟು ಸಂಭ್ರಮದ ದಿನಗಳು ಅವು. ಆದರೆ ಸಂಭ್ರಮದಲ್ಲಿ ನಾವು ಯಾರೂ ದೇವರನ್ನು ನೆನೆಯುವುದಿಲ್ಲ, ಕಷ್ಟದಲ್ಲಿ ಮಾತ್ರ ದೇವರ ನೆನಪಾಗುತ್ತದೆ. ಹೀಗಾಗಿಯೇ ಜನಪದರು ಸಂಕಟಬಂದಾಗ ವೆಂಕಟರಮಣ ಎಂದು ಹೇಳಿರುವುದು. ನಮ್ಮ ಪ್ರದಾಯದಲ್ಲೂ ದೇವರ ಕಲ್ಪನೆ ಭಿನ್ನ ಭಿನ್ನವಾಗಿದೆ. ಅದು ಸಂತೋಷದ ವಿಷಯ ಮಾತ್ರ. ಹುಟ್ಟಿದ ಮೇಲೆ ಸುಖ ನಮ್ಮ ಹಕ್ಕು ಎಂದು ಭಾವಿಸುತ್ತೇವೆ. ಆದರೆ ಜೀವನ ಒಂದು ಪ್ಯಾಕೇಜು. ಅದರಲ್ಲಿ ಕಷ್ಟ ನಷ್ಟಗಳೂ ಇರುತ್ತವೆ. ಒಂದು ಮಾತ್ರ ಸಾಕು ಎಂದು ಹೇಳುವಂತಿಲ್ಲ. ನಮ್ಮ ಸಂಪ್ರದಾಯದಲ್ಲಿ  ಜೀವನದಲ್ಲಿ ಏನು ಬರುತ್ತದೋ ಅದನ್ನು ಸಂತೋಷದಿಂದ ಸ್ವೀಕರಿಸಬೇಕು ಅನ್ನಲಾಗುತ್ತದೆ. ನಮ್ಮ ಕರ್ಮದಂತೆ ಇವೆಲ್ಲ ಜೀವನದಲ್ಲಿ ನಡೆಯುತ್ತದೆ ಅನ್ನಲಾಗುತ್ತದೆ. ಅದನ್ನೇ ವಿಸ್ತರಿಸುವ ಆಶ್ ವಿಶಿಷ್ಟ ರೀತಿಯಲ್ಲಿ ಅದನ್ನು ನಮ್ಮ ಮುಂದಿಡುತ್ತಾನೆ. ಆತ ಅರ್ಥರ್ ಆಶ್.  ಅವನ  ಪ್ರಕಾರ ಎಂದೂ ದೇವರನ್ನು ಯಾಕಪ್ಪಾ ಹೀಗೆ ಎಂದು ಅದರಲ್ಲೂ ನನಗೇ ಹೀಗೆ ಎಂದು ಕೇಳಬಾರದು. ಅರ್ಥರ್ ಆಶ್ (೧೯೪೩-೧೯೯೩) ಅಮೆರಿಕದ ಒಬ್ಬ ಅಸಾಧಾರಣ ಟೆನಿಸ್ ಆಟಗಾರನಾಗಿದ್ದವನು. ಆತ  ೧೯೬೦ರ ದಶಕದಲ್ಲಿ ನಡೆದ ಅಪಘಾತವೊಂದರಲ್ಲಿ  ರಕ್ತಪಡೆಯಬೇಕಾಗಿಬಂತು. ಅವನ ಅಭಿಮಾನಿಗಳು ಮುಗಿಬಿದ್ದು ರಕ್ತಕೊಟ್ಟರು. ಅವನ ಜೀವ ಉಳಿಯಿತು. ಆದರೆ ಅಂದು ಸೂಕ್ತ ರಕ್ತ ಪರೀಕ್ಷೆ ಇರದ ಕಾರಣ ಸೋಂಕಿತ ರಕ್ತ ಅವನ ದೇಹ ಸೇರಿ ಅವನಿಗೆ ಏಡ್ಸ ಹತ್ತಿಕೊಂಡಿತು. ಆತ ನರಳಿದ. ಯಾರೋ ಅವನಿಗೆ ಒಮ್ಮೆ ‘ದೇವರು ನಿಮಗೆ ಎಂಥ ಕಷ್ಟಕೊಟ್ಟನಲ್ಲ’ ಅಂದರಂತೆ. ಆಶ್ ಹೇಳುತ್ತಾನೆ- “೫೦ ದಶಲಕ್ಷ ಮಕ್ಕಳು ಟೆನಿಸ್ ಆಡುತ್ತಾರೆ. ಐದು ದಶಲಕ್ಷ ಜನ ವೃತ್ತಿಪರ ಟೆನಿಸ್ ಆಡುತ್ತಾರೆ. ೫೦ ಸಾವಿರ ಜನ ವಿಂಬಲ್ಡನ್ ಗೆ ಬರುತ್ತಾರೆ.ನಾಲ್ವರು ಸೆಮಿಫೈನಲ್ ಗೆ ಬರುತ್ತಾರೆ ೫ ಸಾವಿರ ಜನ ಗ್ರಾನ್ ಸ್ಲಾ ತಲುಪುತ್ತಾರೆ.ನಾನು ಗೆದ್ದು  ಕಪ್ ಹಿಡಿದು  ಸಂಭ್ರಮಿಸುವಾಗ  ಇಷ್ಟೆಲ್ಲ ಜನರ ನಡುವೆ ನಾನೇ ಏಕೆ ದೇವರೇ ಎಂದು ಕೇಳಲಿಲ್ಲ ನಾನು. ಈಗ ನೋವಿನಲ್ಲಿದ್ದೇನೆ. ಈಗ ನಾನು ಇದು ನನಗೇಕೆ ಎಂದು ಹೇಗೆ ಕೇಳಲಿ”

ಇದು ಅತ್ಯಂತ ಸರಳವೂ ಉದ್ಭೋಧಕವೂ ಆದ ತತ್ವ. ನಾವು ಸಂತಸದಲ್ಲಿದ್ದಾಗ ಎಂದಾದರೂ ಇದು ನನಗೆ ಏಕೆ ಅನ್ನುತ್ತೀವಾ? ನೋವಾದಾಗ ಹಾಗೆ ಕೇಳುವುದೇಕೆ? ಎರಡನ್ನೂ ಸಮನಾಗಿ ಕಾಣಿ ಅನ್ನುವುದು ಇಲ್ಲಿನ ಸೂಕ್ಷö್ಮ.ಈ ಮಾತನ್ನು ಅಳವಡಿಸಿಕೊಂಡರೆ ನೀವು ಅಸಾಮಾನ್ಯರಾಗುತ್ತೀರಿ. ಮಾಡಿನೋಡಿ. ಇದು ಅತ್ಯಂತ ಸುಲಭದ ಮಾರ್ಗ.ಇಂಥ ಪ್ರಾಯೋಗಿಕ ತತ್ವಶಾಸ್ತç ನಮಗೆ ಅಗತ್ಯವಿದೆ.

Sunday, 22 October 2023

ಇಸ್ರೇಲ್ ಹಮಾಸ್ ಯುದ್ಧ- ಬಗೆದಷ್ಟೂ ಸಂಕೀರ್ಣತೆಯ ಒಳ ಸುಳಿ



ಅಕ್ಟೋಬರ್ ೬ ರಂದು ಸ್ವತಃ ಇಸ್ರೇಲಿಗೆ ಗಾಬರಿ ಆಗುವಂತೆ ಹಮಾಸ್ ಉಗ್ರರು ಅವರ ಮೇಲೆ ದಾಳಿ ಮಾಡಿದ್ದರು. ಇಸ್ರೇಲಿಗೆ ಯುದ್ಧ ಅಥವಾ ದಾಳಿ ಹೊಸದಲ್ಲ. ಆದರೆ ಈ ಬಾರಿ ನಡೆದ ದಾಳಿ ಮಾತ್ರ  ಯಾರಿಗೂ ಅರ್ಥವಾಗದಂತೆಯೂ ಎಲ್ಲರೂ ಬೆಚ್ಚಿ ಬೀಳುವಂತೆಯೂ ಮಾಡಿದೆ. ಹಮಾಸ್ ಉಗ್ರರ ದಾಳಿಯ ಮುನ್ಸೂಚನೆ ಇಸ್ರೇಲಿನಂಥ ಮುಂದುವರೆದ ಆಧುನಿಕ ತಂತ್ರಜ್ಞಾನವುಳ್ಳ, ಸಮರ ತಂತ್ರನಿಪುಣತೆಯ ದೇಶಕ್ಕೆ ಏಕೆ ತಿಳಿಯಲಿಲ್ಲ, ಅಲ್ಲಿನ ಗುಪ್ತಚರ ದಳ ಎಡವಿದ್ದೆಲ್ಲಿ ಎಂಬ ಗುಮಾನಿಯೂ ಎದ್ದಿದೆ. ಪವಿತ್ರ ಧಾರ್ಮಿಕ ಕೇಂದ್ರ ಜೆರುಸಲೇಂ ಜೊತೆಗೆ ಮಹತ್ವದ ಆರ್ಥಿಕ ಹಾಗೂ ಸಂಪದ್ಭರಿತ ಕೇಂದ್ರ ಗಾಜಾಪಟ್ಟಿಯ ವಶೀಕರಣ ಇನ್ನೊಂದು ಪ್ರಮುಖ ಕಾರಣ. ಜೊತೆಗೆ ಕಣ್ಣಿಗೆ ಕಾಣದ ಅಸಂಖ್ಯ ಭೌಗೋಳಿಕ ರಾಜಕೀಯಾತ್ಮಕ ಕಾರಣಗಳಿವೆ. ಅಮೆರಿಕದ ವಾಷಿಂಗ್ಟನ್ ನಷ್ಟು  ಸಣ್ಣ ಗಾಜಾ ಭೂಭಾಗದಲ್ಲಿ ಮೊದಲ ಮಹಾಯುದ್ಧದ ಕಾಲಕ್ಕೆ ಪ್ಯಾಲಸ್ತೀನಿಯರ ಸಂಖ್ಯೆ ೨ ಮಿಲಿಯನ್ ಆಗಿದ್ದರೆ ಯಹೂದಿಗಳ ಸಂಖ್ಯೆ ೨.೫ ಮಿಲಿಯನ್ ಗಳಷ್ಟಿತ್ತು. ಮೂಲತಃ ಇದು ಮುಸ್ಲಿಮರು ಹೆಚ್ಚಾಗಿರುವ ಜಾಗ. ಇದರ ಮೇಲೆ ಕಣ್ಣಿದೆ.  ಇದು ಇನ್ನೊಂದು ಕಾರಣ.  

ಹಾಗೆ ನೋಡಿದರೆ ಹಮಾಸ್ ಎಂಬ ಆಯುಧ ಹಿಡಿದ ರಾಜಕೀಯ ಸಮೂಹದ ಸುನ್ನಿ ವರ್ಗದ ಮುಸ್ಲಿಮರು  ಮೊದಲ ಮಹಾಯುದ್ಧದ ಕಾಲದಿಂದ ಇಸ್ರೇಲಿನ ಯಹೂದಿ ಜನರೊಂದಿಗೆ  ಸಂಘರ್ಷದಲ್ಲಿ ತೊಡಗಿದ್ದಾರೆ. ಆಟೋಮನ್ ತುರುಷ್ಕರ ರಾಜನೊಂದಿಗೆ ಶತಮಾನಗಳ ಹಿಂದೆ ನಡೆದ ಭೂಪ್ರದೇಶ ಕುರಿತ ವ್ಯಾಜ್ಯ ಇದಕ್ಕೆ ಮೂಲ ಕಾರಣ ಅನ್ನಬಹುದು. ಮೊದಲ ಮಹಾಯುದ್ಧದ ಕಾಲದಲ್ಲಿ ಇಂದಿನ ಇಸ್ರೇಲ್ ಸ್ಥಳ ಆಟೋಮನ್ನರಿಗೆ ಸೇರಿತ್ತು. ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೌದಿಯ ಅರಬ್ಬರು ಹಾಗೂ ಅಲ್ಪ ಸಂಖ್ಯೆಯಲ್ಲಿ ಯಹೂದಿಗಳು ಇದ್ದರು. ಆಟೋಮನ್ ರಾಜ ಯಹೂದಿಗಳಿಗೆ ಪ್ರತ್ಯೇಕ ಜಾಗ ಕೊಡಲು ನಿರಾಕರಿಸಿದ. ಆದರೆ ಯಹೂದಿಗಳು ಸ್ವತಂತ್ರವಾಗಿ ಇಂದಿನ ಪ್ಯಾಲಸ್ಟೀನ್ ಜಾಗವನ್ನು ಖರೀದಿ ಮಾಡುತ್ತ ಕೃಷಿ ಕೆಲಸಶುರು ಮಾಡಿಕೊಂಡರು. ಹೀಗೆ ಹಂತ ಹಂತವಾಗಿ ಬಹುದೊಡ್ಡ ಜಾಗವನ್ನು ತಮ್ಮದನ್ನಾಗಿ ಮಾಡಿಕೊಂಡ ಯಹೂದ್ಯರು ಆ ಜಾಗದ ಮೇಲೆ ಹಿಡಿತ ಸಾಧಿಸಿದರು. ಆದರೆ ಅದರ ಕೂಲಿ ಕೆಲಸಕ್ಕೆ ಅರಬ್ಬರೇ ಬೇಕಾಗಿತ್ತು. ಯಹೂದಿಗಳ ಆರ್ಥಿಕತೆ ಏರತೊಡಗಿತು. ಅರಬ್ಬರ ಕಣ್ಣು ಅದರ ಮೇಲೆ ಬೀಳತೊಡಗಿತು. ಸಂಘರ್ಷ ಶುರುವಾಯಿತು. ಜೊತೆಗೆ ಇಸ್ರೇಲ್ ವಶದಲ್ಲಿದ್ದ ಜೆರುಸಲೇಂ ತಮ್ಮ ಕ್ಷೇತ್ರವೆಂದುಮುಸ್ಲಿಮರು ವರಾತ ತೆಗೆದರು. ಇದರೊಂದಿಗೆ ಕ್ರಿಶ್ಚಿಯನ್ನರು ಕೂಡ ಅದು ತಮಗೂ ಪವಿತ್ರ ಧಾರ್ಮಿಕ ಕೇಂದ್ರವೆಂದು ಹಕ್ಕು ಸಾಧಿಸತೊಡಗಿತು. ಯಹೂದಿಗಳು ಶತಮಾನಗಳ ಹಿಂದಿನ ಅಬ್ರಹಾಂ, ಐಸೆಕ್ ಹಾಗೂ ಜೇಕಬ್ ಎಂಬ ಮೂಲ ಧಾರ್ಮಿಕ ವ್ಯಕ್ತಿಗಳ ಕಾರಣಕ್ಕೆ ಅದು ತಮ್ಮ ಆಸ್ತಿ ಎಂದು ವಾದಕ್ಕೆ ಶುರುಮಾಡಿದರು. ಹೀಗಾಗಿ ಇಸ್ರೇಲ್ ಜಗಳಕ್ಕೆ ಧಾರ್ಮಿಕ ಕಗ್ಗಂಟು ಸುತ್ತಿಕೊಂಡಿತು. ಅದು ಇಂದಿಗೂ ಬಿಗಿಯಾಗುತ್ತಲೇ ಇದೆ. ಸಾಲದ್ದಕ್ಕೆ ಈ ಮೂರೂ ಧರ್ಮಗಳು ‘ಆಯ್ತು ಬಿಡಿ’ ಅನ್ನುವ ಮನೋಧರ್ಮ ಇರುವವರಲ್ಲ. ಧರ್ಮಕ್ಕಾಗಿ ಪ್ರಾಣಬಿಡುವವರು ಹಾಗೂ ತೆಗೆಯುವವರು. ಇಂಥ ಸಂಕೀರ್ಣ ಪರಿಸ್ಥಿತಿ ಇಸ್ರೇಲಿಗೆ ಅಂಟಿದೆ. ಜೊತೆಗೆ ಯಾವುದೇ ಯುದ್ಧದ ಹಿಂದೆ ಅಡಗುವ ಆರ್ಥಿಕ ಕಾರಣಗಳೂ ಇವೆ.ಇದರ ಹಿಂದೆ ಮುಖ್ಯವಾಗಿರುವುದು ಅಮೆರಿಕದ ಆರ್ಥಿಕ ಹಿತಾಸಕ್ತಿ.ಮುಖ್ಯವಾಗಿ ಯುದ್ಧ ಆರ್ಥಿಕತೆ. 

ಇಸ್ರೇಲ್ ಸುತ್ತ ಆರು ದೇಶಗಳಿವೆ. ಪ್ಯಲೆಸ್ಟೀನ್ ನಲ್ಲಿ ಹಮಾಸ್‌ನ ಚುನಾಯಿತ ಸರ್ಕಾರವಿದೆ. ಇಸ್ರೇಲ್ ನಲ್ಲಿ ಇರುವುದು ಎರಡು ಪಕ್ಷಗಳ ಸರ್ಕಾರವಲ್ಲ. ಅಲ್ಲಿ ಬಹುಪಕ್ಷೀಯ ಆಡಳಿತವಿದೆ. ಸದ್ಯ ಇರುವ ನೇತಾನ್ಯಹು ವಿರುದ್ಧ ಭ್ರಷ್ಟಾಚಾರದ ಆರೋಪವಿದೆ.ಜನರ ವಿರೋಧ ತಪ್ಪಿಸಿಕೊಂಡು ಛಿದ್ರವಾದ ಯಹೂದಿ ಜನತೆಯನ್ನು ಈ ಸಮರದ ನೆಪದಲ್ಲಿ ಒಗ್ಗೂಡಿಸುವ ತಂತ್ರವನ್ನು ನೆತಾನ್ಯಹು ಮಾಡುತ್ತಿದ್ದಾರೆಂಬ ಆರೋಪವಿದೆ. ಇವರ ಕುvಲಂತ್ರದಿAದಲೇ ಇಸ್ರೇಲ್ಬೇಹುಗಾರಿಕೆ ಸೋತಿದೆ ಎಂದೂ ಹೇಳಲಾಗುತ್ತಿದೆ.

ಈಗ ಇಸ್ರೇಲ್ ಉಗರರನ್ನು ಎದುರುಹಾಕಿಕೊಂಡು ಬಹಳ ಸಮಸ್ಯೆಗಳನ್ನು ಎದುರುಹಾಕಿಕೊಳ್ಳುತ್ತಿದೆ ಎಂದು ವಾದಿಸಲಾಗುತ್ತಿದೆ.  ಈ ಹಿಂದೆ ಲಷ್ಕರ್ ಉಗರರನ್ನು ಎದುರುಹಾಕಿಕೊಂಡ ಅಮೆರಿಕ ತನ್ನ ಮೇಲೆ ೯/೧೧ರ ದಾಳಿ ಮಾಡಿಸಿಕೊಂಡಿತು. ಆದರೆ ಗಾತ್ರ, ಆರ್ಥಿಕತೆಗಳಲ್ಲಿ ಬೃಹತ್ತಾದ ದೇಶ ಅಮೆರಿಕ  ಬೇಗನೇ ಚೇತರಿಸಿಕೊಂಡಿತು. ಹಮಾಸ್ ಉಗ್ರರು ಇಸ್ರೇಲ್ ಮೇಲೆ ಇಂಥ ದಾಳಿಯನ್ನು ಎಸಗಿದರೆ ಅದು ಇಸ್ರೇಲಿಗೆ ಭಾರೀ ನಷ್ಟವಾಗಲಿದೆ. ಇಂಥ ದಾಳಿಯನ್ನು ಅಲ್ಲಗಳೆಯಲಾಗದು ಅನ್ನಲಾಗುತ್ತಿದೆ. ಭೌಗೋಳಿಕವಾಗಿ ಬಹಳ ಸಣ್ಣದಾಗಿರುವ, ಹೇಳಿಕೊಳ್ಳುವ ಆರ್ಥಿಕ ವ್ಯವಸ್ಥೆಯೂ ಅಲ್ಲದ ಇಸ್ರೇಲ್ ಉಗ್ರ ದಾಳಿಯಾದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆ ಅನುಮಾನಾಸ್ಪದ ಅನ್ನಲಾಗುತ್ತಿದೆ.ಈ ನಡುವೆ ಇಸ್ರೇಲ್ ಮತ್ತು ಹಮಾಸ್ ಗಳಿಗೆ ಪ್ರಪಂಚದ ವಿವಿಧ ದೇಶಗಳು ತಮ್ಮ ಹಿತಾಸಕ್ತಿಗೆ ಅನುಗುಣವಾಗಿ ಬೆಂಬಲ ಕೊಡುತ್ತಿವೆ. ಒಂದೆಡೆ ಇಂದಿನ ಜಗತ್ತಿನ ತಲೆಕೆಟ್ಟ ದೊರೆ ಅನಿಸಿಕೊಂಡ ಉತ್ತರ ಕೊರಿಯದ ಕಿಮ್ ಕೂಡ ಈ ಯುದ್ಧದಲ್ಲಿ ಸೇರಿಕೊಳ್ಳುತ್ತಿದ್ದಾನೆ. ಹಮಾಸ್ ಉಗ್ರರ ಬಳಿ ಸಾವಿರಕ್ಕೂ ಹೆಚ್ಚು ಕ್ಷಿಪಣಿಗಳ ಸಂಗ್ರಹವಿದೆ. ಜಪತೆಗೆ ಕ್ಷಿಪಣಿಗಳನ್ನು ಪಟಾಕಿಯಂತೆ ತಿಳಿದಿರುವ ಕಿಮ್ ನಂಥ ದೊರೆ ಯುದ್ಧಕ್ಕೆ ಇಳಿದರೆ ಮೂರನೆಯ ಮಹಾಯುದ್ಧಕ್ಕೆ ಪ್ರಪಂಚ ಸಾಕ್ಷಿಯಾಗುವ ಭೀತಿಯಿದೆ. ಹೀಗಾದರೆ ಮುಂದೆ ನಾಲ್ಕನೆಯ ಮಹಾಯುದ್ಧ ನಡೆಯುವ ಸಂಭವ ಎಂದೂ ಇರುವುದಿಲ್ಲ ಎಂಬ ಭೀತಿ ಎಲ್ಲೆಡೆ ಕಾಡುತ್ತಿದೆ. ಇದರೊಂದಿಗೆ ಪ್ರಪಂಚದೆಲ್ಲೆಡೆ ಭೂಕಂಪ, ಕಾಡ್ಗಿಚ್ಚು ಹಾಗೂ ಪ್ರವಾಹದಂಥ ನೈಸರ್ಗಿಕ ಪ್ರಕೋಪಗಳುನಡೆಯುತ್ತಿದ್ದು ಮಾನವ ಮಾತ್ರವಲ್ಲದೇ ಇಡೀ ಜೀವ ಸಂಕುಲ ಅಪಾಯ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ಇಂಥದ್ದೊಂದು ಸಮರ ಶುರುವಾಗಿರುವುದು ನಿಜಕ್ಕೂ  ಆತಂಕಕಾರಿಯಾಗಿದೆ.ಈ ಯುದ್ಧ ಆ ದೇಶಗಳ ನಡುವೆ ನಡೆಯುತ್ತಿದೆ ನಮಗ್ಯಾಕೆ ಎಂದು ಇಂದು ಯಾರೂ ಅಸಡ್ಡೆ ತೋರಿಸುವಂತಿಲ್ಲ. ಯುದ್ಧ ಎಲ್ಲೇ ನಡೆಯಲಿ, ಅದರ ಪರಿಣಾಮ ಎಲ್ಲ ಕಡೆಗೂ ಆಗುವಷ್ಟರಮಟ್ಟಿಗೆ ಪ್ರಪಂಚ ಪರಸ್ಪರ ಅವಲಂಬಿತವಾಗಿದೆ.

Sunday, 8 October 2023

ಮರೆತುಹೋದ ಆಹಾರಗಳು

 


ಕಾಲವೇ ಹಾಗೆ. ಎಲ್ಲವನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತ ಹೋಗುತ್ತದೆ. ಅದರ ಹೊಟ್ಟೆಯಲ್ಲಿ ಶಾಶ್ವತವಾಗಿ ಕೆಲವು ಆಹಾರಪದಾರ್ಥಗಳೂ ಸೇರಿವೆ. ಹಾಗೆಯೇ ಹೊಸ ಆಹಾರಗಳು ಹೊರಬಂದಿವೆ. ಆದರೆ ಒಂದು ಆಹಾರ ಪದಾರ್ಥ ರೂಪುಗೊಳ್ಳಲು ಅನೇಕಾನೇಕ ವರ್ಷಗಳು ಬೇಕಾಗುತ್ತವೆ. ಆದರೆ ಅದು ಮಾಯವಾಗಲು ಅತ್ಯಂತ ಕಡಿಮೆ ವರ್ಷಗಳು ಸಾಕು.

ಕನ್ನಡದಲ್ಲಿ ಆಹಾರ ತಯಾರಿಕೆ ಶತಮಾನಗಳ ಹಿಂದೆ ಒಂದು ಶಾಸ್ತ್ರವಾಗಿ ಬೆಳೆದಿತ್ತು. 14-15ನೆಯ ಶತಮಾನದ ಮಂಗರಸ ಎಂಬಾತ ಸೂಪಶಾಸ್ತ್ರ ಎಂಬ ಕೃತಿಯನ್ನು ರಚಿಸಿದ್ದಾನೆ. ಅದರಲ್ಲಿ ಇಂದಿನ ಇಡ್ಲಿ ತಯಾರಿಕೆಯ ವಿಷಯಗಳಿವೆ. ಆತ ಅದನ್ನು ಇಡ್ಡಲಿಗೆ ಎಂದು ಕರೆಯುತ್ತಾನೆ.ಹಾಗೆಯೇ ಅನೇಕಾನೇಕ ಆಹಾರಗಳ ತಯಾರಿಕೆಯ ವಿಧಾನವನ್ನು ಜೊತೆಗೆ ಅವುಗಳ ಗುಣವನ್ನು ಆತ ವಿವರಿಸುತ್ತಾನೆ. ಇವುಗಳಲ್ಲಿ ಅನೇಕ ಆಹಾರಗಳು ಇಂದು ಚಾಲ್ತಿಯಲ್ಲಿಲ್ಲ. ಅಷ್ಟು ಹಿಂದೆ ಹೋಗುವ ಅಗತ್ಯವಿಲ್ಲ. ಕೆಲವೇ ವರ್ಷಗಳ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಬಳಕೆಯಲ್ಲಿದ್ದ ಟಾಚನಿ ಬೇಸನ್ ಎಂಬ ಸಿಹಿತಿಂಡಿ, ಸಾಂಪ್ರದಾಯಿಕ ಕ್ರಮದ ಹೆಸರು ಹಿಟ್ಟಿನ ಉಂಡೆ,ಸಿಹಿ ದೋಸೆ ಪಾನಕ, ಕುಂಬಳಕಾಯಿ ಘಾರ್ಘಿ, ಬಟವಿ ಪಾಯಸ, ಹಿಟ್ಟಿನ ಹೋಳಿಗೆಇತ್ಯಾದಿ ಆಹಾರ ಪದಾರ್ಥಗಳು ಈಗ ನಾಪತ್ತೆಯಾಗಿವೆ. ಇದನ್ನು ಏಕೆ ಹೇಳಬೇಕಾಯ್ತು ಅಂದ್ರೆ ಇಂದಿನ ಆಧುನಿಕ ಜೀವನ ಕ್ರಮ ಕೆಲವೇ ಕೆಲವು ಆಹಾರವನ್ನು ಪ್ರಚುರಪಡಿಸಿ ಉಳಿಸುತ್ತವೆ, ಈಗ ನೋಡಿ ರಾಜ್ಯಾದ್ಯಂತ ಇಂದು ಎಲ್ಲೇ ಹೋಗಿ ಎಲ್ಲ ಕಡೆ ಎಲ್ಲರ ಮನೆಯಲ್ಲೂ ಅದೇ ದೋಸೆ, ಉಪ್ಪಿಟ್ಟು, ಅನ್ನ, ಸಾರು, ಚಿತ್ರಾನ್ನ, ಉಂಡೆ ಇತ್ಯಾದಿ. ಸಿಹಿ ತಿಂಡಿಗಳಂತೂ ಎಲ್ಲ ಕಡೆಯೂ ಒಂದೇ ರೀತಿ. ಕೆಲವು ವರ್ಷಗಳ ಹಿಂದೆ ಇಂಥ ಪರಿಸ್ಥಿತಿ ಇರಲಿಲ್ಲ ಅನ್ನುವ ತಿಳಿವಳಿಕೆ ನಮಗೆಲ್ಲ ಇದೆ. ಕರ್ನಾಟಕದಲ್ಲಿ ಎಷ್ಟು ಜನಸಮುದಾಯಗಳು ಪ್ರಾದೇಶಿಕ ವೈವಿಧ್ಯ ಇದೆಯೋ ಅಷ್ಟು ಆಹಾರ ವಿಧಗಳಿವೆ. ಅಷ್ಟೇ ಅಲ್ಲ, ಅವುಗಳಲ್ಲೂ ಶುಭ ಅಶುಭ ಸಂದರ್ಭಗಳಿಗೆ ತಕ್ಕಂತೆ ಆಹಾರ ಬದಲಾಗುತ್ತದೆ. ತಿಥಿಗೆ ಮಾಡುವ ಆಹಾರವನ್ನು ತಪ್ಪಿಯೂ ಮದುವೆ ಮನೆಯಲ್ಲಿ  ತಯಾರಿಸುವುದಿಲ್ಲ.ಇಂಥ ನಿಷೇಧ ಎಲ್ಲ ಜನಸಮುದಾಯಗಳಲ್ಲೂ ಇದೆ. ಯಾವ ಆಹಾರವನ್ನಾದರೂ ಯಾವಾಗಬೇಕಾದರೂ ರುಚಿಗಾಗಿ ತಿನ್ನುವುದು ಬೇರೆ. ಆದರೆ ಇಲ್ಲೇ ಆಹಾರ ಸಂಶ್ಕೃತಿ  ವಿಶೇಷ ಬರುವುದು. ಏಚೆಗೆ ನಮ್ಮೂರಲ್ಲಿ ಒಂದು ಕಾರ್ಯಕ್ರಮ ನಡೆಯಿತು. ವಿಶೇಷ ಅಡುಗೆ ಮಾಡಿಸಬೇಕೆಂಬ ವಿಚಾರ ಬಂದರೂ ಏನು ಮಾಡಿಸುವುದು ಯಾರು ಮಾಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಆದರೆ ಬಂಗಳೂರಿನಂಥ ಕಡೆ ಆಗಾಗ ತಮ್ಮ ಊರು ಬಿಟ್ಟು ಬಂದವರು ತಮ್ಮೂರ ಹಬ್ಬದ ನೆಪದಲ್ಲಿ ತಮ್ಮ ಊರಿನಸಾಂಪ್ರದಾಯಿಕ ಊಟೋಪಚಾರ ಸಿದ್ಧಗೊಳಿಸಿ ಅವುಗಳ ತಯಾರಿ ಕ್ರಮ ಅಷ್ಟಾದರೂ ಉಳಿಯುವಂತೆ ಮಾಡುತ್ತಿದ್ದಾರೆ. ಆದರೆ ಹಳ್ಳಿಯ ಕಡೆ ಬದಲಾದ ಜೀವನ ಹಾಗೂ ಅಡುಗೆ ಮಾಡುವುದು ಕೀಳು ವೃತ್ತಿ ಎಂಬ ಭಾವನೆ ಬೆಳೆಯುತ್ತಿದ್ದು ಅಡುಗೆ ಕೆಲಸ ಮಾತ್ರವಲ್ಲ, ಆಹಾರ ವಿಶೇಷಗಳೇ ನಾಪತ್ತೆಯಾಗುತ್ತಿವೆ. ಮೂವತ್ತು ನಲ್ವತ್ತು ದಾಟಿದ ಎಲ್ಲರಿಗೂ ಅವರ ಅಜ್ಜಿ ಮಾಡಿ ತಿನ್ನಿಸುತ್ತಿದ್ದ ತಿಂಡಿ ನೆನಪಾಗದೇ ಇರದು. ಆದರೆ ಅದೆಲ್ಲೂ ಈಗ ಸಿಗದು ಎಂಬ ಬೇಸರ ಕೂಡ ಇರುತ್ತದೆ. ನಮ್ಮ ನಿಮ್ಮ ಊರ ವಿಷಯವೇ ಹೀಗಾದರೆ ಇನ್ನು ದೇಶ ಮಟ್ಟದಲ್ಲಿ ಇಂಥ ನಾಶ ಎಷ್ಟಾಗಿರಬೇಡ. ಆದರೆ ಈಗ ಯೂಟ್ಯೂಬ ಬಂದು ಬಗೆಬಗೆಯ ಆಹಾರ ತಯಾರಿಯ ದಾಖಲೆ, ಕ್ರಮಗಳೆಲ್ಲ ಸುಲಭಕ್ಕೆ ಸಿಗುತ್ತದೆ. ಮಂಗರಸನ ಕಾಲಕ್ಕೆ ಇದ್ದುದು ಬರೆವಣಿಗೆ ಮಾತ್ರ ಅದನ್ನು ಆತ ಮಾಡಿದ್ದಾನೆ. ನಮ್ಮೂರಿನ ಒಬ್ಬ ಅಡುಗೆ ತಜ್ಞರನ್ನು ಆಧುನಿಕ ವಿದ್ಯೆ ಕಲಿತ ಅವರ ಮಗ ಎಲ್ಲಿಯೂ ಅವರ ಖುಷಿಗೂ ಮರ್ಯಾದೆಯ ಕಾರಣಕ್ಕೆ ಹೋಗಲು ಬಿಡ್ತಿಲ್ಲ. ಆತ ಎಂಥ ತಪ್ಪು ಮಾಡುತ್ತಿದ್ದೇನೆಂಬ ಅರಿವೇ ಇಲ್ಲದೇ ಹಠ ಸಾಧಿಸುತ್ತಿದ್ದಾನೆ. ಅವರೊಬ್ಬ ಉತ್ತಮ ಅಡುಗೆ ತಜ್ಞರು ಅವರ ಜ್ಞಾನ ಅವರೊಂದಿಗೇ ಹೋಗುವ ಸಾಧ್ಯತೆ ಢಾಳಾಗಿ ಕಾಣುತ್ತಿದೆ. ಏನು ಮಾಡುವುದು? ಕರಾವಳಿ .ಮಲೆನಾಡುಭಾಗದ ಹವ್ಯಕರಲ್ಲಿ ಕೆಲ ಕಾಲದ ಹಿಂದೆ ಪ್ರಚುರವಾಗಿದ್ದ ಕೆಲವು ತಂಬುಳಿ, ಪಾನಕಗಳ ರುಚಿ ಇರಲಿ, ತಯಾರಿಕಾ ವಿಧಾನವೇ ಮರೆತಿದೆ. ಇಂಥ ಪರಿಸ್ಥಿತಿ ಎಲ್ಲ ಸಮುದಾಯಗಳಲ್ಲೂ, ಪ್ರದೇಶದಲ್ಲೂ ಇದೆ. ಇದಕ್ಕೆ ಸಸ್ಯಾಹಾರ, ಮಾಂಸಾಹಾರ ಎಂಬ ಭೇದವಿಲ್ಲ, ಹೊಟೇಲುಗಳಲ್ಲಿ ಲಭ್ಯವಿರುವ ಆಹಾರವೇ ಮನೆಮನೆಗಳಲ್ಲೂ ತಯಾರಾಗುತ್ತದೆ.  ಇದರಿಂದ ಕೇವಲ ಆಹಾರ ಬಗೆ ಮಾತ್ರವಲ್ಲ, ಒಂದು ಸಾಂಸ್ಕøತಿಕ ಸಂಗತಿ ನಾಶವಾಗುತ್ತದೆ. ಇದರ ಅಪಾಯದ ಜಾಗೃತಿ ಜನತೆಯಲ್ಲಿ ಮೂಡುವುದು ಹೇಗೆ ಯಾವಾಗ ಯಾವ ರೀತಿ ಎಂಬ ಪ್ರಶ್ನೆ ಮಾತ್ರ ಸದ್ಯ ನಮ್ಮ ತಲೆ ತಿನ್ನುತ್ತದೆ. ನಾವು ಈ ಬಗ್ಗೆ ಯೋಚನೆ ಮಾಡದೇ ಸಸ್ಯಾಹಾರ ಮತ್ತು ಮಾಂಸಾಹಾರಗಳಲ್ಲಿ ಯಾವುದು ಶ್ರೇಷ್ಠ, ಯಾವುದು ನಿಕೃಷ್ಟ ಎಂಬ ಅರ್ಥಹೀನ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿರುತ್ತೇವೆ ಅಲ್ವಾ?

Thursday, 5 October 2023

ಸ್ವಾಗತಾರ್ಹ ಬೆಳವಣಿಗೆ


ಈಚೆಗೆ ಸಮಾಜದಲ್ಲಿ ನಡೆಯುತ್ತಿರುವ ಒಂದು ಬೆಳವಣಿಗೆ ಅತ್ಯಂತ ಸ್ವಾಗತಾರ್ಹವಾಗಿದೆ. ಕೆಲ ದಿನಗಳ ಹಿಂದೆ ಏನೋ ಬರೆಯುತ್ತಾ ಕುಳಿತಿದ್ದೆ ಸಂಗೀತ ಪ್ರೇಮಿ ನನ್ನ ಬೇಗಂ ಅದನ್ನು ಬದಿಗಿಟ್ಟು ನಾನು ಕಳಿಸಿದ ವಾಟ್ಸಪ್ ಲಿಂಕ್ ಕೇಳಿ ಅಂದಳು. ಬೇಗಂ ಆದೇಶ ಮೀರಲಾಗುತ್ತದಾ ಎಸ್ ಅಂತ ಲಿಂಕ್ ತೆಗೆದೆ ಅಷ್ಟೇ. ಅನಂತರ ಮೈ ಮರೆತೆ. ಅದು ಒಬ್ಬ ಮಗು ಹಾಡಿದ ದಾಸರ ಪದ ಅಬ್ಬಾ ಅದೆಂಥ ಮೋಡಿ ಮಾಡುವ ಉಚ್ಚರಣೆ, ಲಯ, ಏರಿಳಿತ ಹಾಗೂ ದನಿ? ಅತ್ಯಂತ ಪ್ರಬುದ್ಧ ಗಾಯಕರು ಮಾತ್ರ ಕಂಠದಿಂದ ಹೊರಡಿಸಬಹುದಾದ ಏರಿಳಿತ. ಸಂಪೂರ್ಣ ಫಿದಾ ಆಗಿಬಿಟ್ಟೆ. ಆ ಮಗುವಿನ ಹೆಸರು ಶಾಲ್ಮಲಾ ಶ್ರೀನಿವಾಸ್. ಹೆಚ್ಚೆಂದ್ರೆ ಹತ್ತು ವರ್ಷ ಇರಬೇಕು. ದಾಸ ವಚನಾಮೃತ ಎನ್ನುವ ಹೆಸರಲ್ಲಿ ಆ ಮಗು ಹಾಡಿದ ಯೂ ಟ್ಯೂಬ್ನಲ್ಲಿ ಲಭ್ಯ ಇರುವ ಎಲ್ಲ ಹಾಡುಗಳನ್ನೂ ಗಮನವಿಟ್ಟು ಆಲಿಸಿದೆ. ಮತ್ತಷ್ಟು ಇನ್ನಷ್ಟು ಅಭಿಮಾನ ಉಕ್ಕಿತು. ಎಂಥ ಮಗು! ಆಕೆಯ ಹೆತ್ತವರು, ಬಂಧುಗಳೆಲ್ಲ ಧನ್ಯರು. ಛೆ, ನಾನು ಈ ಅದೃಷ್ಟ ಪಡೆದಿಲ್ಲವಲ್ಲ ಅನಿಸಿಅಸೂಯೆ ಆಗಿ ಈ ಮೂಲಕ ನಾನು ಕೂಡ ಆ ಮಗುವಿನ ಬಂಧುವಾದೆ.ಭಕ್ತನಾದೆ. ನೀವು ಕೂಡ ಈ ಮಗುವಿನ ಹೆಸರನ್ನು ಯೂ ಟ್ಯೂಬಲ್ಲಿ ಹುಡುಕಿ ಕೇಳಿ ಧನ್ಯರಾಗಿ.ನಿಮ್ಮನ್ನು ನೀವು ಕ್ಷಣಕಾಲ ಮರೆಯುವಿರಿ. ಇದಕ್ಕೆ ನಾನು ಹೊಣೆಗಾರನಲ್ಲ. 

ಈ ಮೊದಲು ನಾನು ಫಿದಾ ಆದ ಮಗುವಿನ ದನಿ ಸೂರ್ಯ ಗಾಯತ್ರಿ ಎಂಬ ಕೂಸು. ಅರೆರೆ, ಲತಾ ಮಂಗೇಶ್ಕರ್ ಹೀಗೆ ಮತ್ತೆ ಕನ್ನಡದಲ್ಲಿ ಅವತರಿಸಿದ್ದಾರೆ ಅನಿಸಿತ್ತು, ಈಗ ಮತ್ತೆ ಇನ್ನೊಬ್ಬ ಲತಾ ಸಿಕ್ಕಿದ್ದಾರೆ. ನಾವು ಧನ್ಯರು. ಇದು ನಮ್ಮ ಸಂಪ್ರದಾಯ, ಪರಂಪರೆಯ ಮುಂದರಿಕೆ. ನಮ್ಮ ಮಣ್ಣಿನ ಕಸುವು.  ಇಂಥ ಮಕ್ಕಳು ಎಲ್ಲ ಕಡೆಯೂ ಇರುತ್ತಾರೆ. ಆದರೆ ಎಳವೆಯಲ್ಲಿ ಅವರ ಶಕ್ತಿಯನ್ನು ಗುರುತಿಸಿ ಅದನ್ನು ಪುರೆಯುವುದು ಪೋಷಕರ, ಹತ್ತಿರದ ಬಂಧುಗಳ ಹೊಣೆಗಾರಿಕೆ, ಒಂದು ರೀತಿಯಲ್ಲಿ ಅದು ಆಯಾ ಮಕ್ಕಳ ಅದೃಷ್ಟವೂ ಹೌದು. ಎಲ್ಲ ಕಡೆ ಎಲ್ಲ ಮಕ್ಕಳಿಗೂ ಅವರ ಪ್ರತಿಭೆ ಹೊರ ಬೀಳುವ ಪರಿಸ್ಥಿತಿ ಒದಗಿಬರುವುದಿಲ್ಲ. ನಮಗೂ ಹೀಗೆ ಆನಂದ ಅನುಭವಿಸುವ ಅವಕಾಶ ಸಿಗುವುದಿಲ್ಲ. ಯೋಗಾಯೋಗ ಅಂದ್ರೆ ಇದೇ. ಇಂಥ ಬೆಳವಣಿಗೆ ಪಾಶ್ಚಾತ್ಯರಲ್ಲಿ ಅಥವಾ ನಮ್ಮದೇ ಉತ್ತರ ಭಾಗದಲ್ಲಿ ಅಷ್ಟಾಗಿ ಕಾಣುವುದಿಲ್ಲ, ಇದ್ದರೂ ಮಕ್ಕಳಿಗೆ ತುಂಡುಡುಗೆ ತೊಡಿಸಿ ಕುಣಿಸಿ ಪ್ರದರ್ಶನಕ್ಕೆ ಇಡುತ್ತಾರೆ. ಒಮ್ಮೆನೋಡಿದ್ದೆ- ಹತ್ತನ್ನೂ ದಾಟದ ಹೆಣ್ಣುಮಗುವಿಗೆ ತುಂಡುಬಟ್ಟೆ ತೊಡಿಸಿ 'ಧಕ್ ಕರನೇ ಲಗಾ' ಎಂದು ಕುಣಿಸಿದ್ದರು. ಆ ವಯಸ್ಸು, ಹಾಡು ಆ ಮಗು ಒಂದಕ್ಕೂ ತಾಳ ಮೇಳವಿರಲಿಲ್ಲ.  ಆ ಮಗು ಎದೆಯುಬ್ಬಿಸಿ  ಸೊಂಟ ಬಳುಕಿಸುತ್ತಿತ್ತು.

ಮಕ್ಕಳನ್ನು ಹೀಗೆ ಸಿದ್ಧಗೊಳಿಸಿದರೆ ನಾಳೆಗಳು ಯಾವ ಹಾಗೂ ಎಂಥ ಸಮಾಜ, ಸೃಷ್ಟಿಸಬಲ್ಲುದು?  ಆದರೆ ಒಬ್ಬ ಸೂರ್ಯ ಗಾಯತ್ರಿ, ಶಾಲ್ಮಲೀಯರನ್ನು ಕಂಡಾಗ ಭರವಸೆ ಮೂಡುತ್ತದೆ. ಇನ್ನೊಂದು ವಿಷಯವಿದೆ. ಸಾಮಾನ್ಯವಾಗಿ ಹಿರಿಯರು, ಮಧ್ಯವಯಸ್ಕರು ಹಾಗೂ ಯುವಕರು ಹಾಡುವ mಟ್ರೆಂಡ್ ಬದಲಾಗಿದೆ. ಎಳೆಯ ಮಕ್ಕಳಿಂದ ಹಾಡಿಸಿ, ಕುಣಿಸುವ ಅವರಲ್ಲಿರುವ ಪ್ರತಿಭೆಗೆ ನೀರೆರೆಯುವ ಪ್ರಯತ್ನ ಸಮಾಜದಲ್ಲಿ ಕಾಣಿಸುತ್ತಿದೆ. ಕೆಲವೊಮ್ಮೆ ಇದು ಪೋಷಕರ ಸ್ವಾರ್ಥಕ್ಕೆ ಕಾರಣವಾಗಿ ಮಕ್ಕಳ ಭವಿಷ್ಯ ಬಲಿಯಾಗುವ ಬಲಿಯಾಗುವ ಸಾಧ್ಯತೆ ಹಾಗೂ ಅಪಾಯವೂ ಇದೆ ಈ ಬಗ್ಗೆ ಎಚ್ಚರ ಅಗತ್ಯ ಅನ್ನುತ್ತಾರೆ ವೈದ್ಯರು. ಇದು ನಿಜ ಕೂಡ. ಕೆಲವೊಮ್ಮೆ ಮಕ್ಕಳು ಹೆಚ್ಚು ಹೆಚ್ಚು ಅಂಕ ತೆಗೆದು ಶಲೆಯಲ್ಲಿ ಎಲ್ಲರಿಗಿಂತ ಮುಂದೆ ಬರಬೇಕೆಂದು ಬಯಸಿ ಅವರ ಮೇಲೆ ಸಲ್ಲದ ಒತ್ತಡ ಹೇರಿ ಹೆಚ್ಚು ಹಾಲು ಬರಲಿ ಎಂದು ಹಸುವಿನ ಕೆಚ್ಚಲನ್ನು ಹಿಂಡಿದರೆ ಬರುವುದು ಹಾಲಲ್ಲ, ರಕ್ತ ಎಂಬುದು ಪೋಷಕರಿಗೆ ಕೆಲವೊಮ್ಮೆ ಅರ್ಥವಾಗುವುದಿಲ್ಲ, ಆಗುವಷ್ಟರಲ್ಲಿ ಕಾಲ ಮಿಂಚಿರುತ್ತದೆ. ಸಹಜ ಪ್ರತಿಭೆ ಸಹಜವಾಗಿ ಬೆಳೆಯುವ ಪರಿಸರ ಒದಗಿಸಬೇಕು. ಬದಲಿಗೆ ಗಾಂಧಾರಿಯAತೆ ಹೊಟ್ಟೆ ಹಿಸುಕಿಕೊಳ್ಳುವ ಪ್ರಯತ್ನ ಆಗಬಾರದು. ಬಹುತೇಕ ಸಂದರ್ಭಗಳಲ್ಲಿ ಗಾಂಧಾರಿಯ ಪ್ರಕರಣವೇ ಬಡೆಯುತ್ತದೆ, ಸಂತೋಷ ಅಂದ್ರೆ ಈ ಮಕ್ಕಳ ಸಂದರ್ಭದಲ್ಲಿ ಹೀಗೆ ಆಗಿಲ್ಲ. ನಮ್ಮೆಲ್ಲರ ಪುಣ್ಯ. ಮಕ್ಕಳ ಪ್ರತಿಭೆ ಎಲ್ಲ ಕಡೆ ಹೀಗೆಯೇ ಉಕ್ಕುತ್ತಿರಲಿ. ಇವರ ಭವಿಷ್ಯ ಉಜ್ವಲವಾಗಲಿ ಎಂದಷ್ಟೇ ಹಾರೈಸಬಹುದು. ಒಳಿತಾಗಲಿ.