ಸಾಧಕಗಳು-
ಹೀಗೆ ಕೃಷಿಯನ್ನು ಕೈಗಾರಿಕೆಯ ಸ್ಥಾನಕ್ಕೆ ತರುವುದರಿಂದ ರೈತರಲ್ಲಿ ಹಾಗೂ ಬೆಳೆಯಲ್ಲಿ ಆಂತರಿಕ ಪೈಪೋಟಿ ಬೆಳೆದು ಅಭಿವೇದ್ಧಿಗೆ ಪೂರಕವಾಗುತ್ತದೆ. ತನ್ನ ಜಮೀನು ಇರುವ ಪ್ರದೇಶದ ಹವಾಗುಣ ಹಾಗೂ ಮಣ್ಣಿನ ಗುಣಕ್ಕೆ ಸರಿಹೊಂದುವ ಬೆಳೆಯನ್ನು ರೈತ ಬೆಳೆಯಲು ಅನುವು ಮಾಡಿಕೊಟ್ಟಂತಾಗುತ್ತದೆ. ಇಲ್ಲಿ ಕೃಷಿಗೆ ಉದ್ಯಮದ ಸ್ಥಾನ ಕೊಟ್ಟಾಕ್ಷಣಕ್ಕೆ ಕೃಷಿಗೆ ಸಂಪೂರ್ಣ ಉದ್ಯಮದ ಸ್ಥಾನ ಬರುವುದಿಲ್ಲ, ಇಲ್ಲಿ ಸಮಗ್ರ ಕೃಷಿ ನೀತಿಗೆ ಅನುಗುಣವಾಗಿ ಬೆಳೆ, ಮಣ್ಣು ಪರೀಕ್ಷೆ, ಬೆಳೆಗೆ ಮಾರುಕಟ್ಟೆ ವ್ಯವಸ್ಥೆಇತ್ಯಾದಿಗಳ ಅನುಕೂಲ ಕೈಗಾರಿಕೆಯಂತೆ ಇರುತ್ತದೆ ಅಷ್ಟೆ. ಅಂದರೆ ರೈತ ಬೆಳೆ ಬೆಳೆಯುವ ಮುಂಚೆ ಯಾರಿಗೆ, ಎಷ್ಟು ಪ್ರಮಾಣ, ಮಾರಾಟ ಎಲ್ಲಿ ಇತ್ಯಾದಿ ಅಂಶಗಳನ್ನು ತಿಳಿದು ಕೃಷಿಗೆ ಮುಂದಾಗುತ್ತಾನೆ. ಇದಕ್ಕಾಗಿ ಅವನಿಗೆ ಅಗತ್ಯ ನೆರವನ್ನು ಸರ್ಕಾರ ಒದಗಿಸುತ್ತದೆ. ಆದ್ದರಿಂದ ರೈತ ತನ್ನ ಜಮೀನು, ನನ್ನ ಇಞ್ಟ ಎಂಬಂತೆ ತೋಚಿದ ಬೆಳೆಗೆ ಕೈಹಾಕಿ ಸಾಲಸೋಲ ಮಾಡಿಕೊಳ್ಳುವ ಪ್ರಮೇಯ ಇರುವುದಿಲ್ಲ, ಸದ್ಯ ಬೆಳೆಗೆ ಮುಂಚೆ ಬೆಲೆ ಖಾತ್ರಿ ಕಬ್ಬಿನ ಬೆಳೆಗೆ ಇದೆ. ಆದ್ರೆ ಆ ರೈತರು ಮಾಡಿಕೊಳ್ಳುತ್ತಿರುವ ಆತ್ಮ ಹತ್ಯೆಗೆ ಇರಬಹುದಾದ ಅನ್ಯ ಕಾರಣಗಳ ಪತ್ತೆ ಆಗಬೇಕಿದೆ. ಬರೀ ಕಬ್ಬಿನ ಬೆಳೆಯೇ ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ ಎಂದು ಹೇಳುವಂತಿಲ್ಲ, ಏಕೆಂದರೆ ಅದರ ವಾಣಿಜ್ಯ ವಹಿವಾಟು ಹಾಗಿದೆ. ರೈತರು ಎಡವುತ್ತಿರುವುದು ಎಲ್ಲಿ ಎಂದು ತಿಳಿಯಬೇಕಿದೆ. ಅದಿರಲಿ.
ಕೃಷಿಯನ್ನು ಉದ್ಯಮ ಎಂದು ಪರಿಗಣಿಸಿವುದರಿಂದ ವಾಣಿಜ್ಯ ಬೆಳೆಗಳಿಗೆ ಲಾಭ ವಿಶೇಷವಾಗಿ ದೊರೆಯುತ್ತದೆ ಜೊತೆಗೆ ಸದ್ಯ ಮೂಲೆಗುಂಪಾದ ಸಿರಿ ಧಾನ್ಯದ ಜೊತೆಗೆ ಹುಚ್ಚೆಳ್ಳಿನಂಥ ಬೆಳೆಗಳು ಮತ್ತೆ ಚೇತರಿಸಿಕೊಳ್ಳುವ ಆಸೆ ಇದೆ. ಮೂಲೆಗುಂಪಾದ ಬೆಳೆಗಳನ್ನು ರೈತರೇ ಪತ್ತೆ ಹಚ್ಚಿ ಅದನ್ನು ಬೆಳೆಯಲು ಮುಂದಾಗಲಿದ್ದಾರೆ. ಇದರಿಂದ ದೇಸೀ ತಳಿಗಳು ಉಳಿದು ಬೆಳೆಯಲು ಸಾಧ್ಯವಾಗುತ್ತದೆ. ನಾವುಪರಿಗಣಿಸಲಿ, ಬಿಡಲಿ, ಬಹುತೇಕ ಬೆಳೆಗಳು ಈಗಾಗಲೇ ಉದ್ಯಮದ ಸ್ಥಾನ ಪಡೆದುಬಿಟ್ಟಿವೆ. ಉದಾಹರಣೆಗೆ ಹಣ್ಣು ತರಕಾರಿಗಳು ಹಾಗೂ ಹೂವುಗಳ ಮಾರುಕಟ್ಟೆ. ಇವುಗಳ ಜೊತೆಗೆ ಅಡಕೆ, ಕಾಳುಮೆಣಸು ಮೊದಲಾದವು ಸೇರಿವೆ. ಪ್ರಶ್ನೆ ಏನೆಂದರೆ, ಅನೇಕ ತಲೆಮಾರುಗಳಿಂದ ಸಾಂಪ್ರದಾಯಿಕವಾಗಿ ಆಹಾರ ಬೆಳೆ ತೆಗೆಯುತ್ತಿದ್ದ ರೈತರು ಹಣದ ಆಸೆಗೆ ತಮ್ಮ ಜಮೀನಿನ ಗುಣಕ್ಕೆ ಒಗ್ಗದ ವಾಣಿಜ್ಯ ಬೆಳೆಗಳನ್ನು ಎಲ್ಲಿಂದಲೋ ತಂದು ಬೆಳೆದು ಕೈ ಸುಟ್ಟುಕೊಳ್ಳುವ ಸ್ಥಿತಿಯನ್ನು ಇದು ನಿವಾರಿಸುವುದಾ ಎಂಬುದು. ಒಂದು ಅರ್ಥದಲ್ಲಿ ಹೌದು. ಇಷ್ಟಾದರೆ ಇದು ಸಾರ್ಥಕ.
ಆದರೆ ಕೃಷಿಗೆ ಉದ್ಯಮದ ಸ್ಥಾನಕೊಡುವುದರಿಂದ ಅನೇಕ ಬೆಳೆಗಳು ಈಗಿರುವುದಕ್ಕಿಂತ ಹೆಚ್ಚಿನ ಮೌಲ್ಯ ಪಡೆಯುತ್ತವೆ. ಮೌಲ್ಯ ವರ್ಧಿತ ವ್ಯಾಪಾರ ವಹಿವಾಟನ್ನು ಇದರಿಂದ ನಿರೀಕ್ಷಿಸಬಹುದು. ಉದಾಹರಣೆಗೆ ಬಾಳೆ ಮತ್ತು ಹಲಸು ಬೆಳೆಗಳನ್ನು ಗಮನಿಸಬಹುದು. ಬಾಳೆ ಸಾರ್ವಕಾಲಿಕ ಬೆಳೆಯಾದರೆ ಹಲಸು ನಿರ್ದಿಷ್ಟ ಋತುಮಾನದ್ದು. ಇದನ್ನು ಕೂಡ ವರ್ಷವಿಡೀ ದೊರೆಯುವಂತೆ ಮಾಡುವ ತಂತ್ರಜ್ಞಾನ ಅಭಿವೃದ್ಧಿಯಾಗಿ ಹಲಸು ಕೂಡ ಸದಾಕಾಲ ದೊರೆಯುವಂತಾಗಿದೆ. ಅದರ ಅಡ್ಡ ಪರಿಣಾಮ ನಮ್ಮ ಆರೋಗ್ಯದ ಮೇಲೆ ಏನು ಎಂಬುದು ಅನಂತರದ ಪ್ರಶ್ನೆ. ಆದರೆ ಹಲಸಿನ ಬೆಳೆಯ ಎಲ್ಲ ಪದಾರ್ಥಗಳು ಆಹಾರ ಯೋಗ್ಯವಾದರೂ ಸದ್ಯ ಬಳಕೆಯಾಗುತ್ತಿರುವುದು ಅದರ ತೊಳೆ, ಹಣ್ಣು ಮಾತ್ರ. ಹಲಸಿನ ಹಣ್ಣನ್ನು ನೇರವಾಗಿ ತಿನ್ನುವುದಲ್ಲದೇ ಅದರ ಕಾಯಿಯಿಂದ ಚಿಪ್ಸ್, ಹಪ್ಪಳ ಇತ್ಯಾದಿಗಳನ್ನು ಮಾತ್ರವಲ್ಲದೇ ಸದಾ ಕಾಲ ಹಸಿದವರ ಹೊಟ್ಟೆ ತುಂಬಬಲ್ಲ ಪೌಡರ್ ಇತ್ಯಾದಿಗಳನ್ನು ತಯಾರಿಸಬಹುದು. ಆದರೆ ಇಂಥ ಯತ್ನ ಸದ್ಯ ನಡೆಯುತ್ತಿಲ್ಲ. ಹೀಗಾದರೆ ಹಲಸಿನ ಮೌಲ್ಯ ವರ್ಧನೆಯಾಗಿ ರೈತರಿಗೆ ಅಪಾರ ಲಾಭವಾಗುತ್ತದೆ. ಸದ್ಯ ಮಲೆನಾಡು, ಕರಾವಳಿ ಭಾಗದಲ್ಲಿ ಸೀಸನ್ ಸಂದರ್ಭದಲ್ಲಿ ಹಲಸಿನ ಹಣ್ಣು ಮತ್ತು ಕಾಯಿ ಎಲ್ಲೆಂದರಲ್ಲಿ ಹಾಳುಬಿದ್ದಿರುತ್ತದೆ. ಪ್ರಾಣಿಪಕ್ಷಿಗಳು ತಿಂದರೆ ಅದೇ ಪುಣ್ಯ. ಹೀಗಾಗುವ ಬದಲು ಹಲಸಿಗೆ ಸೂಕ್ತ ಮೌಲ್ಯವರ್ಧನೆ ಮಾಡಿದರೆ ಹಾಳಾಗುವುದು ತಪ್ಪುತ್ತದೆ. ಲಾಭ ರೈತನಿಗೆ ಒದಗುತ್ತದೆ. ಹಲಸನ್ನು ಹಾಳಾಗದಂತೆ ಸಂಗ್ರಹಿಸುವ ಶೇಖರಿಸುವ ಕೆಲಸ ಮೊದಲು ಸರಿಯಾಗಿ ಆಗಬೇಕಿದೆ. ಹಲಸಿನಂತೆ ಬಾಳೆಗೆ ಕೂಡ ಔಷಧೀಯ ಗುಣ ಕೂಡ ಸಾಕಷ್ಟಿದೆ. ಇದೆಲ್ಲ ಜಗತ್ತಿಗೆ ಒದಗಿದರೆ ಲಾಭದ ಜೊತೆಗೆ ಬೆಳೆ ಹಾಳಾಗುವುದು ತಪ್ಪುತ್ತದೆ. ಇದು ಸಾಧ್ಯವಾಗಬೇಕಾದರೆ ಕೃಷಿಗೆ ಉದ್ಯಮದ ಸ್ಥಾನ ದೊರೆಯಬೇಕು.
ಇಷ್ಟಾಗಿ ಕೃಷಿಯನ್ನು ಉದ್ಯಮ ಮಾಡಿದರೆ ನಾಳೆ ಚಿಂತಿಸುವ ವಿಷಯ ಏನಿದೆ? ಸಧ್ಯ ರೈತರಿಗೆ ಮುಕ್ತವಾಗಿರುವ ವಿದ್ಯುತ್, ನೀರು, ಆದಾಯ ತೆರಿಗೆ ಇತ್ಯಾದಿಗಳಿಗೆ ತೆರೆ ಬೀಳುತ್ತದೆ. ರೈತರ ಉತ್ಪನ್ನ ಹಾಗೂ ಆದಾಯದ ಆಧಾರದಲ್ಲಿ ಆತ ತೆರಿಗೆ ಕಟ್ಟುವ ಸ್ಥಿತಿ ಬರುತ್ತದೆ. ಇದು ಒಳ್ಳೆಯದು. ಇದರಿಂದ ರೈತರಿಗೆ ಹಕ್ಕಿನ ಅಧಿಕಾರ ಬರುತ್ತದೆ. ಯಾವುದೇ ಸರ್ಕಾರ ಅಥವಾ ಪಕ್ಷ ರೈತರಿಗೆ ಆಮಿಷ ತೋರಿಸುವ ಸಂದರ್ಭ ಬರುವುದಿಲ್ಲ. ತೆರಿಗೆ ಕಟ್ಟುವ ರೈತರು ಗಟ್ಟಿ ದನಿಯಲ್ಲಿ ತಮಗೆ ಇಂಥ ಸವಲತ್ತು ಬೇಕೆಂದು ಸರ್ಕಾರಕ್ಕೆ ಅಧಿಕಾರದಿಂದ ಕೇಳಬಹುದು. ಅಲ್ಲದೇ ಯಾವುದೋ ಕಳ್ಳ ಮಾರ್ಗದ ಹಣವನ್ನು ತುಂಡು ಜಮೀನು ದಾಖಲೆ ತೋರಿಸಿ ತೆರಿಗೆ ತಪ್ಪಿಸಿಕೊಳ್ಳುವ ಮಾರ್ಗವೂ ಮುಚ್ಚುತ್ತದೆ. ಒಂದೆರಡು ಎಕರೆ ಜಮೀನು ಇರುವ ಪುಢಾರಿ ಕೋಟ್ಯಂತರ ಹಣದ ಮೂಲ ತನ್ನ ಕೃಷಿಯದು ಎಂದು ಈಗ ಅನೇಕರು ಹೇಳಿ ತೆರಿಗೆ ತಪ್ಪಿಸಿಕೊಳ್ಳುತ್ತ ಸಮಾಜಕ್ಕೆ ಮೋಸ ಮಾಡುತ್ತಿದ್ದಾರೆ. ಕೃಷಿ ಆದಾಯಕ್ಕೆ ನಿಜವಾದ ತೆರಿಗೆ ಬಿದ್ದರೆ ಕಳ್ಳ ಸಂಪತ್ತಿನ ಮೂಲ ಹೊರಬರುತ್ತದೆ. ಮುಖ್ಯವಾಗಿ ಸದ್ಯ ತೊಡಗಿಸಿಕೊಂಡ ಮನುಷ್ಯ ಸಂಪನ್ಮೂಲ ಕಡಿಮೆಯಾಗಿ ಯಂತ್ರಗಳು ಹೆಚ್ಚಾಗಿ ಕಾಣಿಸಬಹುದು. ಆದರೆ ಗ್ರಾಮೀಣ ಯುವ ಶಕ್ತಿ ಗ್ರಾಮೋದ್ಯೋಗದತ್ತ ಹೊರಳುವ ಸಾಧ್ಯತೆ ಹಾಗೂ ಆಮೂಲಕ ಹಳ್ಳಿ ಜನಕ್ಕೆ ಇರುವಲ್ಲೇ ನಗರದ ಕೈಗಾರಿಕಾ ಕೆಲಸಕ್ಕೆ ತೊಡಗಿ ಚೇರಿ ಕೆಲಸಕ್ಕೆ ತೊಡಗಿ ಗ್ರಾಮೀಣ ಪ್ರತಿಭೆಗಳು ತಮ್ಮ ಮೂಲದಲ್ಲೇ ನೆಲೆ ಕಾಣುವಂತಾಗಿ ಅಂಥವರ ವಲಸೆ ತಪ್ಪಿನಗರದ ಒತ್ತಡ ಇಳಿಯುತ್ತದೆ. ಇಂಥ ಇನ್ನೂ ಅನೇಕ ಗುಣಾತ್ಮಕ ಅಂಶಗಳು ಇದರಲ್ಲಿ ಸೇರಿವೆ. ಇಂಥ ಅನೇಕ ಉತ್ತಮ ಮಾರ್ಗಗಳು ಕೃಷಿಯನ್ನು ಉದ್ಯಮದ ಸ್ಥಾನ ಕೊಡುವುದರಿಂದ ಸಾಧ್ಯವಾಗುತ್ತದೆ.
ಹೀಗಾಗಿ ನನ್ನ ದೃಷ್ಟಿಯಲ್ಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದೆ. ಆದರೂ ಈ ಬಗ್ಗೆ ಇನ್ನಷ್ಟು ಸಾರ್ವಜನಿಕ ಚರ್ಚೆ ಆಗುವ ಅಗತ್ಯವಿದೆ.
ಕೃಷಿಗೆ ಕೈಗಾರಿಕೆಯ ಸ್ಥಾನ ಕೊಡುವುದರಿಂದ ಸ್ಥಳೀಯ ಸ್ವಸಹಾಯ ಸಂಘಗಳು, ಕೃಷಿ ಅಧಿಕಾರಿಗಳು ಕ್ರಿಯಾಶೀಲರಾಗುತ್ತಾರೆ, ವಿಶೇಷವಾಗಿ ರೈತರು ಜಾಗೃತರಾಗುತ್ತಾರೆ. ಹವಾಮಾನ, ಮಳೆ, ಗಾಳಿಗಳ ಬಗ್ಗೆ ಹೆಚ್ಚು ತಿಳಿಯುತ್ತಾರೆ. ಇದರಿಂದ ಫಸಲು ನಾಶ ಕಡಿಮೆಯಾಗಿ ರೈತನ ನಷ್ಟ ಕಡಿಮೆಯಾಗಿ ಸೂಕ್ತ ಮಾರುಕಟ್ಟೆ ದೊರೆಯುತ್ತದೆ. ಟೊಮೆಟೋ ಬೆಳೆಯನ್ನು ನೋಡಿ. ಬೇಡಿಕೆ ಇದ್ದಾಗ ಎಲ್ಲ ರೈತರೂ ಅದನ್ನು ಬೆಳೆದು ಉತ್ಪಾದನೆ ಅತಿಯಾಗಿ ಬೆಲೆ ಇಲ್ಲದೇ ಎಲ್ಲರೂ ನಷ್ಟ ಅನುಭವಿಸಿ ಸಾಯುವಂತಾಗುತ್ತದೆ. ಹಿಂದೊಮ್ಮೆ ವೆನಿಲ್ಲಾ ಎಂಬ ಬೆಳೆ ಮಲೆನಾಡು, ಕರಾವಳಿ ಭಾಗಕ್ಕೆ ಲಗ್ಗೆ ಇಟ್ಟು ಎಲ್ಲರೂ ಅಡಕೆ ತೋಟದಲ್ಲಿ ಅದನ್ನು ಬೆಳೆದು ಕೈ ಅನಂತರ ಏನಿಲ್ಲ ಎಂದು ಕೈ ಸುಟ್ಟುಕೊಂಡು ಚೆಲ್ಲಿದರು. ಇದೇ ರೀತಿ ಬಯಲು ಸೀಮೆಯಲ್ಲಿ ಅಡಕೆ ಕೃಷಿ ಮಾಡುವುದು ಕೂಡ. ಕೃಷಿ ಉದ್ಯಮದ ಸ್ಥಾನ ಪಡೆದರೆ ಇಂಥ ಸ್ಥಿತಿ ತಪ್ಪುವ ಸಾಧ್ಯತೆ ಇದೆ. ನಿಜವಾಗಿ ರೈತರಿಗೆ ಮೊದಲು ಬೇಕಾದುದು ಇದೇ. ರಾಸಾಯನಿಕ ಗೊಬ್ಬರ ಹಾಕಿ ನೆಲ ಪರಿಸರ ಹಾಳು ಮಾಡುವ ದುರಾಸೆಯ ದಂಧೆ ಅಲ್ಲ.

No comments:
Post a Comment