ಕನ್ನಡದ ಯುವ ಪೀಳಿಗೆಯ ವಿದ್ವಾಂಸ, ಗಮಕಿ, ಅನುವಾದಕ, ಅಧ್ಯಾಪಕ, ಆಡಳಿತಗಾರ ಹೀಗೆ ಬಹು ಆಯಾಮವುಳ್ಳ ಅಜಕ್ಕಳ ಗಿರೀಶ್ ಭಟ್ ಅವರು ಈಚೆಗೆ ಕನ್ನಡ ಸಾಹಿತ್ಯ ಸಮಾಜ, ಮಾನವಿಕ ಕ್ಷೇತ್ರದ ಹತ್ತು ಹಲವು ತತ್ತ್ವಂ ಶೋಧ ಕುರಿತ ಕೃತಿಯೊಂದನ್ನು ಹೊರತಂದಿದ್ದಾರೆ. ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಎರಡು ವರ್ಗದ ಗುಂಪುಗಳಿವೆ. ಒಂದು ವರ್ಗ ನಮ್ಮ ದೇಶದಲ್ಲಿ ಎಲ್ಲವೂ ಇದೆ, ಇತ್ತು ಅಂದ್ರೆ ಇನ್ನೊಂದು ವರ್ಗ ಇಲ್ಲಿ ಏನೇನೂ ಇಲ್ಲ ಅನ್ನುತ್ತದೆ. ಇವೆರಡೂ ಸರಿಯಲ್ಲ. ಜೀವಂತ ಸಮಾಜ ಯಾವಾಗಲೂ ಕೊಡುಕೊಳ್ಳುವಿಕೆಯಲ್ಲಿ ತೊಡಗಿರುತ್ತದೆ, ಬದಲಾಗುತ್ತಿರುತ್ತದೆ. ಸಾಹಿತ್ಯ ಸಂಶೋಧನೆಯ ವಿಷಯದಲ್ಲೂ ಅಷ್ಟೇ. ನಮ್ಮಲ್ಲಿರುವ ಪರಿಕಲ್ಪನೆಯ ಜೊತೆಗೆ ಬಾಹ್ಯಕಲ್ಪನೆಗಳೂ ಬಂದು ಸೇರುತ್ತವೆ. ಆಧುನಿಕ ಕನ್ನಡದಲ್ಲಿ ಸಾಹಿತ್ಯ ಮಾನವಿಕ ಅಧ್ಯಯನಗಳ ಪರಿಕಲ್ಪನೆಗಳೆಲ್ಲ ಎಲ್ಲಿಂದಲೋ ಎರವಲು ಬಂದವು, ಇದರ ಜೊತೆಗೆ ನಮ್ಮ ಕಲ್ಪನೆಗಳೆಲ್ಲ ಮೂಲೆಗುಂಪು ಕೂಡ ಆಗಿವೆ. ಇಂಥ ವಿಷಯ ಕುರಿತು ಅಜಕ್ಕಳ ಅವರು ಮನ ಮುಟ್ಟುವಂತೆ ಈ ಕೃತಿಯಲ್ಲಿ ವಿವರಿಸುತ್ತಾರೆ.
ಈ ಕೃತಿಯನ್ನು ಓದುತ್ತಾ ನನಗೂ ಈ ವಿಷಯದಲ್ಲಾದ ಘಟನೆ ನೆನಪಾಯ್ತು. ಅಲ್ಲಿಂದಲೇ ಇದರ ಪರಿಚಯ ಶುರು ಮಾಡುವಾ. ಅದು ೧೯೯೦ರ ದಶಕ. ನಾನು ಮೈಸೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದ ಸಮಯ. ಸಮ್ಮೇಳನ ಒಂದಕ್ಕೆ ಖ್ಯಾತ ವಿಮರ್ಶಕ ಡಿ ಆರ್ ನಾಗರಾಜ್ ಉಪನ್ಯಾಸ ಕೊಡಲು ಬಂದಿದ್ದರು. ಅಧ್ಯಕ್ಷತೆ ನಮ್ಮ ಗುರುಗಳಾದ ಜಿ ಎಚ್ ನಾಯಕರು. ಮಾತನಾಡುತ್ತಾ ಡಿ ಆರ್ ಅವರು ಈಚೆಗೆ ಸಾಹಿತ್ಯದಲ್ಲಿ ಅಸಾಮಾಜಿಕ ಭವ್ಯತೆ ಕಾಣಿಸುತ್ತಿದೆ ಅಂದರು.ನಮಗೇನೂ ಅರ್ಥವಾಗಲಿಲ್ಲ. ನಾಯಕ್ ಅವರನ್ನು ಕೇಳಿದ್ರೆ ಗೊತ್ತಿಲ್ಲ, ಅವರನ್ನೇ ಕೇಳಿ ಅಂದರು. ಅವರನ್ನು ಕೇಳಿದ್ರೆ ಅದು ಇಂಗ್ಲಿಷಿನ ಅನ್ ಸೋಷಿಯಾಲಜಿಕಲ್ ಗ್ಲೋರಿ ಅಂದರು ಮತ್ತಷ್ಟು ಕ್ಲಿಷ್ಟ ಎನಿಸಿತು. ಹೀಗೆ ನವ್ಯ ಕಾಲದ ಕನ್ನಡ ಸಾಹಿತಿಗಳಿಂದ ಕನ್ನಡಕ್ಕೆ ಹೊಸದನ್ನು ಪರಿಚಯಿಸುವ ಭರದಲ್ಲಿ ನಮಗೆ ಅಪರಿಚಿತವಾದ ಪರಿಕಲ್ಪನೆಗಳನ್ನು ಒಂದಿಷ್ಟು ಅನುವಾದ ಮಾಡಿ ತಂದು ತುರುಕುವ ಯತ್ನ ಕಾಣಿಸತೊಡಗಿತು. ಇವೆಲ್ಲ ಅಲ್ಲಿಗೇ ಮುಗಿಯದೇ ಇಂದಿಗೂ ಮುಂದುವರೆದಿವೆ. ಯಾರಿಗೂ ಸುಲಭಕ್ಕೆ ಅರ್ಥವಾಗದ ಪದಪುಂಜ ಬಳಸಿದರೆ ಅದುಚಿಂತನೆ,ಸಾಹಿತ್ಯದ ಲಕ್ಷಣ ಎಂಬ ಮನೋಧರ್ಮ ಹುಟ್ಟಿಕೊಂಡಿತು. ಹೀಗಾಗಿ ನವ್ಯರು ತಮ್ಮ ಸಾಹಿತ್ಯ ಅಥವಾ ಕಾವ್ಯವನ್ನು ಅಸಂಗತ ರೀತಿಯಲ್ಲಿ ಬರೆದು ತೋರಿಸುವ ಪೈಪೋಟಿಗೆ ಬಿದ್ದು ಸರಳವಾಗಿ ಬರೆಯುತ್ತಿದ್ದ ಕೆ ಎಸ್ ನರಸಿಂಹ ಸ್ವಾಮಿ, ಡಿವಿಜಿ ಮೊದಲಾದವರ ಗೇಲಿ ಶುರು ಮಾಡಿದರು. ಅಡಿಗರಂಥವರು ಎಷ್ಟು ಸಾಧ್ಯವೋ ಅಷ್ಟು ಗುಪ್ತ ಅರ್ಥ ಇರುವಂತೆ ಕಾವ್ಯ ಬರೆದರು. ನವೋದಯದ ಕುವೆಂಪು. ಬೇಂದ್ರೆ ಅವರಂಥ ಮನಮುಟ್ಟುವ ಕವಿಗಳ ಬದಲು ತಲೆ ತಿನ್ನುವ ಪ್ಪçಯೋಗ, ಶೈಲಿಯ ಕವಿತೆಗಳ ಪ್ರವಾಹ ಬರಲಾರಂಭಿಸಿತು. ಜೊತೆಗೆ ಗದ್ಯ ಕೂಡ ಅದೇ ದಾರಿ ಹಿಡಿದು ವಿಮರ್ಶೆ ವಿಶೇಷವಾಗಿ ಇದರಲ್ಲಿ ಮುಂದುವರೆಯಿತು. ಇದರಿಂದ ವಿಮರ್ಶೆಯಲ್ಲಿ 'ಎಲ್ಲೋ ಒಂದು ಕಡೆ' ಎಂಬಂಥ ಎಲ್ಲೆಂದರಲ್ಲಿ ನುಸುಳಲು ಶುರುವಾದವು. 'ಈ ಕೃತಿಗೆ ಹಲವಾರು ಆಯಾಮಗಳಿದ್ದರೂ ಇದರ ಕೇಂದ್ರ ಒಂದೇ ಆಗಿದೆ' ಎಂಬಂಥ ವಾಕ್ಯಗಳು ನವ್ಯ ವಿಮರ್ಶೆಯಲ್ಲಿ ಸಹಜವಾದವು. ಕುವೆಂಪು ಅವರ ಅದ್ಭುತ ವಿಮರ್ಶೆಗಳಲ್ಲಿ ಇಂಥ ಒಂದು ಸಾಲು ಕೂಡ ಇಲ್ಲ. ಹೀಗಾಗಿ ಸಾಹಿತ್ಯ ಮತ್ತು ಮಾನವಿಕಗಳಲ್ಲಿ ಪಾಶ್ಚಾತ್ಯ ಪರಿಕಲ್ಪನೆಗಳು ಒಂದೇ ಸಮನೆ ನುಸುಳಲು ಶುರುವಾದವು. ಅಲ್ಲಿನ ಎಲ್ಲ ಬಗೆಯ ಚಿಂತನೆಗಳನ್ನೂಎರವಲು ತರಲಾಯಿತಲ್ಲದೇ ಉನ್ನತ ಶಿಕ್ಷಣದಲ್ಲಿ ಅವನ್ನೇ ಕಲಿಸಲಾಯಿತು. ಆದರೆ ಇದರ ಅಪಾಯವನ್ನು ಕುವೆಂಪು ಅವರು ೧೯೩೦ರ ದಶಕದಲ್ಲೇ ಗುರುತಿಸಿದ್ದರು. ಭಾರತೀಯ ಕಾವ್ಯ ಮೀಮಾಂಸೆ ಕೃತಿಗೆ ಅವರು ಬರೆದ ಮುನ್ನುಡಿಯಲ್ಲಿ ಅವರ ಇಂಥ ಕಾಳಜಿ ಸ್ಪಷ್ಟವಾಗಿದೆ. ಅದಿರಲಿ. ಆದರೆ ಇಂದಿಗೂ ನಾವು ಮಾತ್ರ ಇಂಥ ಮನೋ ದಾಸ್ಯದಿಂದ ಹೊರಬಂದಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದಿದೆ ಅನ್ನುವ ನಾವು ಬೌದ್ಧಿಕ ದಾಸ್ಯದಿಂದ ಹೊರಬರಲು ಸಿದ್ಧರಿಲ್ಲ. ನಮಗಿನ್ನೂ ಪಾಶ್ಚಾತ್ಯ ಅಧ್ಯಯನ ವಿಧಾನಗಳೇ ಸರ್ವಶ್ರೇಷ್ಠ. ಇದಕ್ಕೆ ಸಂಬಂಧಿಸಿದಂತೆ ಅಜಕ್ಕಳರು ಈಗಾಗಲೇ ಸಂಶೋಧಕ ರಾಜಮಾರ್ಗ, ತತ್ತ್ವ ಶೋಧ ಕೃತಿಗಳನ್ನು ಹೊರತಂದಿದ್ದಾರೆ, ಇದು ಅವುಗಳಿಗೆ ಪೂರಕವಾಗಿದೆ.
ಪಾಶ್ಚಾತ್ಯಪ್ರಭಾವಕ್ಕೆ ನಾವು ಎಷ್ಟು ಒಳಗಾಗಿದ್ದೇವೆ ಅಂದರೆ ಸಾಂಸ್ಕೃತಿಕ, ಸಾಮಾಜಿಕ ವಿವರಗಳಲ್ಲಿ ಸಾಮಾನ್ಯ ಅನಿಸುವ ದೇವರು, ಜಾತ್ಯತೀತತೆ, ಧರ್ಮ, ಮುಂತಾದ ಪದಗಳನ್ನು ನಾವು ಮೂಲ ಪರಿಕಲ್ಪನೆಗಳ ಅರಿವಿಲ್ಲದೇ ಬಳಸುತ್ತೇವೆ. ಆದರೆ ಪಾಶ್ಚಾತ್ಯರು ಬಳಸುವ ರೀತಿಯಲ್ಲಿ ಈ ಪದಗಳನ್ನು ನಾವು ಬಳಸಲಾಗದು ಎಂಬುದನ್ನು ಸಾಂಸ್ಕೃತಿಕ ಅಧ್ಯಯನಕಾರ, ಸಂಶೋಧಕರಾದ ಪ್ರೊ. ಎಸ್ ಎನ್ ಬಾಲಗಂಗಾಧರ ಅವರ ಶೋಧನೆಯ ಆಧಾರದಲ್ಲಿ ಮತ್ತೊಮ್ಮೆ ಸರಳವಾಗಿ ತಿಳಿಸುತ್ತಾರೆ. ನಮ್ಮ ಸಾಹಿತ್ಯ, ಸಮಾಜ ಹಾಗೂ ಸಾಂಸ್ಕೃತಿಕ ವಲಯ ಎಷ್ಟು ಹದಗೆಟ್ಟಿದೆ ಅಂದರೆ ಐರೋಪ್ಯ ವಾದಕೆ.್ಕಪ್ರತಿಯಾಗಿ ಎಷ್ಟೇ ಗಂಭೀರ ಸಂಶೋಧನೆಗಳು ಹೊಸದಾಗಿ ಬಂದರೂ ಅದನ್ನು ಕಣ್ಣೆತ್ತಿ ನೋಡುವ ಸೌಜನ್ಯವೂ ನಮ್ಮಲ್ಲಿ ಉಳಿದಿಲ್ಲ. ಉದಾಹರಣೆಗೆ ಪ್ರೊ. ಎಸ್ ಎನ್ ಬಾಲಗಂಗಾಧರ್ ಅವರು ದಶಕಗಳ ಹಿಂದೆಯೇ ನಮ್ಮ ಹಾಗೂ ಯೂರೋಪ್ ದೇಶಗಳ ಸಾಂಸ್ಕೃತಿಕ, ಸಾಮಾಜಿಕ ಗ್ರಹಿಕೆಗಳ ಅಂತರ ಹಾಗೂ ಪಾಶ್ಚಾತ್ಯರ ವಿಚಾರ ಅನುಸರಣೆಯಿಂದ ನಮಗೆ ಆಗುವ ಅಡ್ಡಿಗಳನ್ನು ಕುರಿತು ಢಾಳಾಗಿ ಹೇಳಿದ್ದರೂ ಅವರ ಸಂಶೋಧನೆಗಳನ್ನು ಸಾಕಷ್ಟು ದೂರ ಇಡಲಾಗುತ್ತಿದೆ. ಯಾವುದೇ ಅಧ್ಯಯನವನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ಸೂಕ್ಷö್ಮ ವಿಮರ್ಶೆಗೆ ಒಡ್ಡಬೇಕೆಂಬ ಮೂಲ ತಿಳಿವಳಿಕೆಯನ್ನೇ ಮರೆತು ನಾವು ಪಾಶ್ಚಾತ್ಯರ ಅಂಧಾನುಕರಣೆ ಮಾಡುತ್ತ ನಮ್ಮ ಸಮಾಜಕ್ಕೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ. ಇಂಥ ಸಂಗತಿಗಳನ್ನು ಈ ಕೃತಿಯ ೧೪ ಭಿನ್ನ ಭಿನ್ನ ಲೇಖನಗಳಲ್ಲಿ ಅಜಕ್ಕಳರು ಮಾಡಿಕೊಡುತ್ತಾರೆ. ಇಲ್ಲಿನ ಲೇಖನಗಳಲ್ಲಿ ಅವರು ಸದ್ಯ ಚಾಲ್ತಿಯಲ್ಲಿರುವ ಪದಗಳನ್ನು ಪರಿಶೀಲಿಸಿ ಗೊಂದಲ ಏಕೆ ಆಗುತ್ತಿದೆ ಎಂದು ತೋರಿಸಿಕೊಡುತ್ತಾರೆ. ಇದು ಈ ಕೃತಿಯ ವಿಶೇಷತೆ.
ಇಲ್ಲಿನ ಎಲ್ಲ ಲೇಖನಗಳೂ ಪ್ರಾಥಮಿಕ ಶಿಕ್ಷಣ ಹಾಗೂ ಭಾಷಾ ಪಠ್ಯಪುಸ್ತಕಗಳ ಉದ್ದೇಶ ಕುರಿತ ಲೇಖನಗಳು ಉಲ್ಲೇಖನಾರ್ಹವಾಗಿವೆ. ಈ ಎಲ್ಲ ವಿಷಯಗಳಲ್ಲಿ ನಮ್ಮ ಬೌದ್ಧಿಕ ವಲಯದಲ್ಲಿ ಏನೆಲ್ಲ ಆಗಿದೆ, ಆಗಬೇಕಾದುದು ಏನು ಎಂಬುದು ಇಲ್ಲಿನ ಎಲ್ಲ ಲೇಖನಗಳ ಮೂಲ ಸ್ರೋತ. ಅವರ ವಿಚಾರ ಸರಣಿಯ ತಾರ್ಕಿಕತೆ ಪ್ರಶ್ನಾತೀತ. ಉದಾಹರಣೆಗೆ ಮಾತೃಭಾಷೆಯಲ್ಲಿ ಕೃತಿ ರಚಿಸುವುದು ಅಥವಾ ಆಡುನುಡಿಯಲ್ಲಿ ಸಾಹಿತ್ಯ ರಚಿಸುವ ವಿಷಯಕ್ಕೆ ಸಂಬಂಧಿಸಿದಂತೆ ಡಿ ಎನ್ ಶಂಕರ ಭಟ್ಟರ ವಾದ ಸರಿ ಎನಿಸಿದರೂ ಅದರ ಸಾಹಿತ್ಯಕ ಬಾಳಿಕೆ ಮತ್ತು ಸಮಸ್ಯೆ ಕುರಿತು ಕನ್ನಡದಲ್ಲಿ ಹಲವು ಒಳ ಕನ್ನಡಗಳಿವೆ. ಹೀಗಿರುವಾಗ ಆಯಾ ಭಾಷೆ ಮಾತಾಡುವವರ ಪರ ತಾವು ಮುಂಚೂಣಿ ಸ್ಥಾನ ಪಡೆಯುವ ರಾಜಕೀಯ ಹುನ್ನಾರ ಮಾತ್ರ ಇದರಿಂದ ಸಿದ್ಧವಾಗುತ್ತದೆಯೇ ವಿನಾ ಉಳಿದ ಕನ್ನಡ ಭಾಷಾ ಪ್ರಯೋಗದವರಿಗೆ ಅದು ದಕ್ಕದೇ ಅನ್ಯಾಯವಾಗುತ್ತದೆ. ಹಾಗಾಗಿ ಆಡು ನುಡಿ ಮತ್ತು ಸಾಹಿತ್ಯಕ ಭಾಷೆಗಳ ಮಧ್ಯೆ ಆರೋಗ್ಯಕರ ಅಂತರ ಅನಿವಾರ್ಯ ಎಂಬುದನ್ನು ಸತಾರ್ಕಿಕ ವಿವರಿಸುತ್ತಾರೆ. ಹೀಗೆ ಇಂಥ ಎಲ್ಲ ವಿಷಯಗಳಲ್ಲೂ ಜನಪ್ರಿಯವಲ್ಲದ ಅಥವಾ ಅದಕ್ಕೆ ವಿರುದ್ಧವಾದ ಚಿಂತನೆಗೆ ಅಜಕ್ಕಳ ಅವರು ಇಲ್ಲಿ ಕೈ ಹಾಕಿದ್ದಾರೆ. ಈ ದೃಷ್ಟಿಯಲ್ಲಿ ಚಿಂತನೆಗೆ ಇದು ಹೊಸ ದಾರಿಯನ್ನು ಕಾಣಿಸುತ್ತದೆ. ಆದರೆ ಊರಿಗೆ ಒಂದು ದಾರಿಯಾದರೆ ಪೋರನಿಗೆ ಮತ್ತೊಂದು ಎಂಬ ಗಾದೆಯಂತಲ್ಲದೇ ಸಾಹಿತ್ಯಕ್ಕೆ ಅಗತ್ಯವೂ ಅನಿವಾರ್ಯವೂ ಆದ ಮಾರ್ಗವನ್ನು ಶೋಧಿಸುತ್ತಾರೆ. ಈ ಕಾರಣಕ್ಕೆ ಸಾಹಿತ್ಯ, ಸಮಾಜ ಹಾಗೂ ಸಂಸ್ಕೃತಿಗಳ ಆಸಕ್ತರು ಈ ಕೃತಿಯನ್ನು ಅಗತ್ಯ ಗಮನಿಸಬೇಕಿದೆ.

No comments:
Post a Comment