ಇದುವರೆಗೆ ಕನ್ನಡದಲ್ಲಿ ನಡೆಯುತ್ತಾ ಬಂದಿರುವ ಪಿಎಚ್.ಡಿ ಸಂಶೋಧನೆಗಳು ಪಾಶ್ಚಾತ್ಯ ಚಿಂತನೆಗಳಿಂದ, ಅನುಸರಣೆಯಿಂದ ತುಂಬಿಹೋಗಿವೆ. ಅದನ್ನು ಬಿಟ್ಟರೆ ಅನ್ಯಮಾರ್ಗವೇ ಇಲ್ಲ ಎಂಬ ಪರಿಸ್ಥಿತಿ ಉಂಟಾಗಿದೆ. ಇದು ಎಷ್ಟರಮಟ್ಟಿಗೆ ಎಂದರೆ ಇದಕ್ಕೆ ಪರ್ಯಾಯವಾಗಿ ಬೇರೆ ಸಾಧ್ಯತೆಯನ್ನು ಯೋಚನೆ ಮಾಡಲು ಕೂಡ ಸಾಧ್ಯವಿಲ್ಲ
ಹಾಗೂ ಆ ರೀತಿ ಮಾಡಿದರೆ ನಮ್ಮ ವಿಶ್ವವಿದ್ಯಾನಿಲಯಗಳು ತಥಾಕಥಿತ ಸಂಶೋಧನೆ ಪ್ರಬಾವಗಳಿಂದ ಹೊಸಬಗೆಯ ಸಂಶೋಧನೆಯನ್ನು ಮಾಡಿದರೆ ಅದನ್ನು ಸಂಶೋಧನೆ ಎಂದು ಪರಿಗಣಿಸುತ್ತಾರೋ ಇಲ್ಲವೋ ಎಂಬ ಅನುಮಾನ ಕೂಡ ಕಾಣಿಸುತ್ತದೆ. ಏಕೆಂದರೆ ಆಧುನಿಕ ಪಿಎಚ್.ಡಿ ಸಂಶೋಧನೆಗಳಲ್ಲಿ ಬರವಣಿಗೆ ಹೇಗಿರಬೇಕು, ಪೀಠಿಕೆಯಿಂದ ಹಿಡಿದು ಉಪಸಂಹಾರದವರಗೆ ಅಧ್ಯಾಯಗಳು ಹೇಗಿರಬೇಕು ಅವುಗಳಲ್ಲಿ ಏನೆಲ್ಲಾ ಇರಬೇಕು ಎಂಬುದನ್ನು ಸಿದ್ಧಮಾಡಿ ಇಡಲಾಗಿದೆ. ಆದ್ದರಿಂದ ಇದಕ್ಕೆ ಭಿನ್ನವಾದ ಸಂಶೋಧನೆಗಳನ್ನು ಮಾನ್ಯ ಮಾಡುವುದೇ ಅನುಮಾನ ಎಂಬ ಪರಿಸ್ಥಿತಿ ಇದೆ. ಇಂಥ ಸಂದರ್ಭದಲ್ಲಿ ದೇಶೀಯ ಅಧ್ಯಯನ ವಿಧಾನವನ್ನು ತೋರಿಸುವ ಪ್ರಯತ್ನ ಅಜಕ್ಕಳ ಅವರ ಈ ಕೃತಿಯಲ್ಲಿ ಇದೆ. ವಿಜ್ಞಾನ ಅಥವಾ ತಂತ್ರಜ್ಞಾನ ಸಂಶೋಧನೆಗಳು ಪ್ರಪಂಚಾದ್ಯಂತ ಒಂದೇ ಆದರೆ ಅಚ್ಚರಿ ಇಲ್ಲ. ಆದರೆ ಮಾನವಿಕಗಳ ವಿಷಯ ಹಾಗಲ್ಲ. ಅದು ವೈವಿಧ್ಯದಿಂದ ಕೂಡಿರುತ್ತದೆ. ಇದಕ್ಕೆ ಒಂದೇ ಮಾನದಂಡವನ್ನು ಎಲ್ಲ ರೀತಿಯ ಮಾನವಿಕ ಅಧ್ಯಯನಗಳಿಗೆ ಆರೋಪಿಸಲು ಸಾಧ್ಯವಿಲ್ಲ. ಸಾಂಸ್ಕೃತಿಕ ಅನನ್ಯತೆ ಇರುವುದು ಇದಕ್ಕೆ ಕಾರಣ. ಆದರೆ ಇಂದಿನ ಸಾಮಾಜಿಕ, ಮಾನವಿಕ ಹಾಗೂ ಸಾಹಿತ್ಯಕ ಅಧ್ಯಯನಗಳು ಏಕರೂಪದವಾಗಿವೆ. ಇದಕ್ಕೆ ನಾವು ರೋಢಿಸಿಕೊಂಡ ಪಾಶ್ಚಾತ್ಯ ದೇಶಗಳ ಸಿದ್ಧಾಂತ/ಮತಗಳ ಪ್ರಭಾವ ಅಥವಾ ಅನುಕರಣೆ ಕಾರಣ ಎಂದು ಸಾಧಾರ ವಿವರಿಸುತ್ತಾರೆ. ವೈಜ್ಞಾನಿಕ ಮನೋಭಾವ, ವೈಜ್ಞಾನಿಕ ದೃಷ್ಟಿಕೋನ. ವಿಧಾನ ಎನ್ನುತ್ತಾ ನಾವು ನಮ್ಮ ಅಥವಾ ಮಾನವಿಕಗಳ ಪ್ರತ್ಯೇಕತೆಯನ್ನು ಮರೆಯಲಾಗದು ಎಂಬುದನ್ನು ವಿವರಿಸುತ್ತಾರೆ. ಗುರುತ್ವಾಕರ್ಷಣ ತತ್ತ್ವ ಅಮೆರಿಕದಲ್ಲೂ ಭಾರತದಲ್ಲೂ ಒಂದೇ ಆಗುವಂತೆ ಸಾಂಸ್ಕೃತಿಕ ಸಂಗತಿಗಳು ಇರಲು ಸಾಧ್ಯವಿಲ್ಲ.ಈ ಸಂಗತಿ ಕೃತಿ ಓದುತ್ತಾ ಅರಿವಾಗುತ್ತದೆ.ಪ್ರಸ್ತುತಕೃತಿಯಲ್ಲಿ ಒಟ್ಟು ೨೨ ಲೇಖನಗಳಿದ್ದು ಇವನ್ನು ಒಟ್ಟಿಗೇ ಅಥವಾ ಬಿಡಿಯಾಗಿ ಓದಬಹುದು. ಇವು ಬಿಡಿಯಾಗಿದ್ದಂತೆ ಕಂಡರೂ ಇವೆಲ್ಲ ಪರಸ್ಪರ ಆಂತರಿಕ ಸಂಬಂಧ ಹೊಂದಿರುವಂತೆ ನೋಡಿಕೊಳ್ಳಲಾಗಿದೆ. ಅಲ್ಲದೇ ಇವುಗಳಿಗೆ ಅಧ್ಯಾಯಗಳು ಎಂದು ಕರೆದಿಲ್ಲ. ಸಂಶೋಧನೆ ಹೊಸಬಗೆಯಲ್ಲಿರಬೇಕೆಂದು ಪ್ರತಿಪಾದಿಸುವ ಈ ಕೃತಿ ಕೂಡ ಹೊಸದರಂತೆ ಕಾಣುತ್ತದೆ. ಮುಖ್ಯವಾಗಿ ನಮ್ಮದೇ ಆದ ಸಂಶೋಧನಾ ವಿಧಾನವನ್ನು ಕಟ್ಟುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿ ಕಾಣುತ್ತದೆ. ಈಗಾಗಲೇ ಹೇಳಿದಂತೆ ಇದುವರೆಗೆ ಬಂದ ಎಲ್ಲ ಕೃತಿಗಳೂ ಪಾಶ್ಚಾತ್ಯ ಸಂಶೋಧನಾ ವಿಧಾನವನ್ನು ಬೇರೆ ಬೇರೆ ರೀತಿಯಲ್ಲಿ ಹೇಳುತ್ತವೆ. ಆದರೆ ಈ ಕೃತಿ ದೇಸೀ ಮಾದರಿಯನ್ನು ಹುಡುಕುವ ಯತ್ನ ಮಾಡುತ್ತಾ ಪ್ರಾಚೀನ ಭಾರತದ ಗಂಭೀರ ಅಧ್ಯಯನ ರೀತಿಯನ್ನು ಹಾಗೂ ಜ್ಞಾನ ಕಂಡುಕೊಳ್ಳುತ್ತಿದ್ದ ರೀತಿಯನ್ನು ಎಳೆ ಎಳೆಯಾಗಿ ಹೇಳುತ್ತದೆ. ಭಾರತೀಯ ಜ್ಞಾನ ಮೀಮಾಂಸೆಯ ಪರಿಚಯ ಮಾಡಿಕೊಡುತ್ತಾ ಇಲ್ಲಿನ ಅನುಮಾನ, ಉಪಮಾನ ಅರ್ಥಾಪತ್ತಿ, ಶಬ್ದ, ಅನುಪಲಬ್ದಿಇತ್ಯಾದಿ ಪರಿಕಲ್ಪನೆಗಳ ಪರಿಚಯ ಕೊಡುತ್ತಾರೆ. ಇವೆಲ್ಲ ನಮ್ಮ ಆಧುನಿಕ ಸಂಶೋಧನೆಯಲ್ಲಿ ಸೇರಿದ್ದರೂ ಅವಕ್ಕಿರುವ ಮಹತ್ವ ಈಗ ಹೇಳಿಕೊಳ್ಳುವಂಥದ್ದಲ್ಲ. ನಮ್ಮ ಆಧುನಿಕ ಸಂಶೋನೆಗಳು ಈ ಬಗೆಯಲ್ಲಿ ಮುಂದುವರೆದರೆ ನಮ್ಮದೇ ಆದ ಸಂಶೋಧನಾ ಕ್ರಮವನ್ನು ಕಂಡುಕೊಳ್ಳಲು ಸಾಧ್ಯ ಎಂಬುದು ಅರಿವಾಗುತ್ತದೆ. ನಮ್ಮ ಸಂಶೋಧಕರು ಸಂಶೋಧನೆಗೆ ತೊಡಗುವ ಮುನ್ನ ಅವರಿಗೆ ಕೊಡಲಾಗುವ ತರಬೇತಿಯಲ್ಲಿ ಇಂಥ ವಿಷಯಗಳ ಪರಿಚಯ ಮಾಡಿಕೊಡಬೇಕಾದುದು ಅಗತ್ಯ. ಆದರೆ ನಾವು ಮತ್ತೆ ಪಾಶ್ಚಾತ್ಯ ಕ್ರಮಗಳನ್ನೇ ತಿಳಿಸಿ ಮಕ್ಕಳ ತಲೆಗೆ ತುರುಕುವ ಯತ್ನ ಮಾಡುತ್ತೇವೆ. ಈ ಕಾರಣಕ್ಕೆ ಇದು ಉಳಿದೆಲ್ಲ ಸಂಶೋಧನಾ ಮಾರ್ಗಗಳ ಅನ್ವೇಷಣೆ.ಅವಲೋಕನೆ, ಸಂಶೋಧನಾ ಮೀಮಾಂಸೆಗಳಿಗಿAತ ಖಂಡಿತ ಭಿನ್ನವಾಗಿದೆ, ಹೊಸ ರಾಜಮಾರ್ಗವನ್ನು ತೆರೆದಿದೆ. ಈ ಕೃತಿಯಲ್ಲಿ ಅಧ್ಯಾಯಗಳಿಲ್ಲದೆ ಹೊಸ ರೀತಿಯಲ್ಲಿ ವಿಷಯ ಪ್ರತಿಪಾದನೆ ಮಾಡಿರುವುದು ಗಮನಾರ್ಹವಾಗಿದೆ. ಪ್ರತಿಪಾದಿಸಲಾದ ವಿಷಯಗಳಿಗೆ ಒಳನೋಟಗಳೆಂದು ಕರೆಯಲಾಗಿದೆ. ಹೌದು. ಇದು ಒಳನೋಟವೇ. ಇದನ್ನು ಪ್ರಕಟಿಸಿದ ಬೆಂಗಳೂರಿನ ಅಯೋಧ್ಯಾ ಪ್ರಕಾಶನಕ್ಕೆ ಅಭಿನಂದನೆಯನ್ನು ಸಲ್ಲಿಸಬೇಕಿದೆ. ಈ ಕೃತಿಯನ್ನು ಓದುತ್ತಾ ಹೋದಂತೆ ಅಧುನಿಕ ಸಂಶೋಧನಾ ವಿಧಾನದ ಬಗ್ಗೆ ಅನೇಕ ಪ್ರಶ್ನೆಗಳು ಹುಟ್ಟತ್ತವೆ. ಯಾವುದೇ ಸಂಶೋಧನೆ ಅಂತಿಮವಾಗಿ ಕೊಡಬೇಕಾದುದು ಜ್ಞಾನವನ್ನು. ಆದರೆ ಇಂದಿನ ಬಹುತೇಕ ಸಂಶೋಧನೆಗಳು ಹತ್ತಾರು ಬೇರೆ ಬೇರೆ ಕೃತಿಗಳಲ್ಲಿ ಹೇಳಿದ ವಿವರವನ್ನು ಒಂದೆಡೆ ಸಂಕಲಿಸಿ ಕೊಡುತ್ತಿವೆ. ಸಂಶೋಧನೆ ಎಂಬುದು ಆಸಕ್ತಿ ಅಥವಾ ಖುಷಿಯ ಸಂಗತಿ ಆಗುವುದಕ್ಕಿಂತ ಪದವಿಯಾದಾಗಿನಿಂದ ಇಂಥ ಪರಿಸ್ಥಿತಿ ಒದಗಿದೆ ಎಂದು ಹೇಳಬಹುದು.
ನಮ್ಮ ಸಂಶೋಧನೆಗೆ ಅದರಲ್ಲೂ ಸಮಾಜ ಸಂಸ್ಕೃತಿ ಕುರಿತ ಮಾನವಿಕ ವಿಷಯಗಳ ಸಂಶೋಧನೆಗೆ ಪಾಶ್ಚಾತ್ಯ ದೃಷ್ಟಿಕೋನ ಅಳವಡಿಸುವುದು ಎಷ್ಟರಮಟ್ಟಿಗೆ ಸರಿ ಎಂಬುದು ಒಂದು ಪ್ರಶ್ನೆಯಾದರೆ ಇಂಥ ಮಾದರಿಯನ್ನು ಅನುಸರಿಸದ ಶಂಬಾಜೋಶಿ ಅವರಂಥ ಸಂಶೋಧಕರ ಬರಹಗಳನ್ನು ನಾವು ಪರಿಗಣಿಸುವುದು ಹೇಗೆ? ಎಂಬುದು ಇನ್ನೂಂದು ಪ್ರಶ್ನೆ. ನಮ್ಮ ಮಾನವಿಕ ಸಂಶೋಧನೆಗಳಿಗೆ ನಮ್ಮದೇ ಆದ ಸಂಶೋಧನಾ ಕ್ರಮವನ್ನು ಕಂಡುಕೊಳ್ಳುವುದು ಸಾಧ್ಯವಿಲ್ಲವೇ, ಪಾಶ್ಚಾತ್ಯ ಔದ್ಧಿಕ ದಾಸ್ಯದಿಂದ ಹೊರಬರಲು ಸಾಧ್ಯವಿಲ್ಲವೇ ಎಂಬುದು ಮತ್ತೊಂದು ಪ್ರಶ್ನೆ ಇಂಥ ಹತ್ತಾರು ಪ್ರಶ್ನೆಗಳನ್ನು ಹುಟ್ಟಿಸುತ್ತಲೇ ಓದಿಸಿಕೊಳ್ಳುತ್ತಾ ಓದುಗರು ಚಿಂತಿಸುವAತೆ ಮಾಡುವುದು ಈ ಕೃತಿಯ ಹೆಗ್ಗಳಿಕೆಯಾಗಿದೆ. ಈ ಎಲ್ಲ ದೃಷ್ಟಿಗಳಿಂದ ಪ್ರಸ್ತುತ ಕೃತಿ ನಮ್ಮ ಸಂಶೋಧಕರು ಯಾವುದೇ ಸಂಶೋಧನೆಗೆ ತೊಡಗುವ ಮುನ್ನ ಅಗತ್ಯವಾಗಿ ಗಮನಿಸಬೇಕಾದ ಆದ್ಯ ಕೃತಿಯಾಗಿದೆ.
ಪುಸ್ತಕ ವಿವರ :
ಹೆಸರು : ಸಂಶೋಧನಾ ರಾಜಮಾರ್ಗ
ಲೇಖಕರು: ಡಾ. ಅಜಕ್ಕಳ ಗಿರೀಶ್ ಭಟ್
ಪ್ರಕಾಶಕರು : ಅಯೋಧ್ಯಾ ಪ್ರಕಾಶ
ಪುಟ : ೧೮೮,ಬೆಲೆ : ೨೩೦

No comments:
Post a Comment