Tuesday, 29 July 2025

ನಮ್ಮ ಹೆಮ್ಮೆಯ ಗುರುಗಳು


ನನ್ನ ಗುರುಗಳಾದ ಪ್ರೊಫೆಸರ್ ಟಿ ವಿ ವೆಂಕಟಾಚಲ ಶಾಸ್ತ್ರಿ ಅವರಿಗೆ ಈಗ ೯೨ ರ ಯೌವ್ವನ, ಯಾಕೆ ಯೌವ್ವನ ಅಂದರೆ ಅವರ ಛಂದಸ್ಸು, ವ್ಯಾಕರಣ ಮೊದಲಾದ ಶಶಾಸ್ತçಗಳ ಸಂಶೋಧನಾ ಕೆಲಸದ ಕುತೂಹಲಕ್ಕೆ, ಅದಕ್ಕೆಂದೂ ವಯಸ್ಸಾಗಲು ಅವರು ಬಿಡುವುದಿಲ್ಲ, ನಮ್ಮ ವಿಶ್ವವಿದ್ಯಾನಿಲಯದ ಕುಮಾರವ್ಯಾಸ ಪೀಠದಮಹತ್ವಾಕಾಂಕ್ಷಿ ಯೋಜನೆಯಾದ ಕುಮಾರವ್ಯಾಸ ಭಾರತದ ಸಮಗ್ರ ಪರಿಷ್ಕರಣಾ ಯೋಜನೆಯ ಮುಖ್ಯಸ್ಥರಾಗಿದ್ದ ಅವರ ವಯಸ್ಸು  ಲೆಕ್ಕಕ್ಕಿಲ್ಲದ ಉತ್ಸಾಹ ಕಂಡು ನಮಗೆ ಬಹಳಷ್ಟು ಸಲ ಛೆ ಇವರೇ ಇಷ್ಟು ಉತ್ಸಾಹ ತೋರಿಸುವಾಗ ನಮಗೇನಾಗಿದೆ ಎಂಬಂತೆ ಕೆಲಸಕ್ಕೆ ತೊಡಗುತ್ತಿದ್ದೆವು, ಎಲ್ಲರಿಗೂ ಅವರು ಒಂದೊಂದು ನಿರ್ದಿಷ್ಟ ಕೆಲಸ ವಹಿಸುತ್ತಿದ್ದರು, ಮುಂದಿನ ಸಭೆಯಲ್ಲಿ ಮರೆಯದೇ ಅದರ ಬಗ್ಗೆ ವಿಚಾರಿಸಿ ಎಲ್ಲೆಲ್ಲಿ ಏನೇನು ಮಾಡಬೇಕೆಂದು ತಿಳಿಸುತ್ತಿದ್ದರು, ಇದು ನಮಗೇಕೆ ಹೊಳೆಯಲಿಲ್ಲ ಎಂದು ಅನೇಕ ಬಾರಿ ಅನಿಸುತ್ತಿತ್ತು.ಮುಂದಿನ ಬಾರಿ ಇದಕ್ಕೆ ಅವಕಾಶ ಕೊಡದಂತೆ ಅವರಿಂದ ಶಬ್ಬಾಸ್ ಗಿರಿ ಪಡೆಯಬೇಕೆಂಬ ಆಸೆ ಪ್ರತೀ ಬಾರಿ ಇರುತ್ತಿತ್ತು ಆದರೆ ಎರಡು ವರ್ಷದಲ್ಲಿ ಇದು ಒಮ್ಮೆಯೂ ನೆರವೇರಲಿಲ್ಲ, ಆದರೆ ಎಲ್ಲ ಕೆಲಸ ಮುಗಿದಾಗ ಅವರೇ ಖುದ್ದಾಗಿ ಪುಸ್ತಕ ಸೊಗಸಾಗಿ ಬಂದಿದೆಯಪ್ಪಾ, ನಿಮ್ಮೆಲ್ಲರ ಸಹಕಾರ ಇಲ್ಲದಿದ್ದರೆ ಇದು ಆಗುತ್ತಿರಲಿಲ್ಲ, ನಾನು ಕೇವಲ ಹೆಸರಿಗೆ ಸಮಿತಿ ಅಧ್ಯಕ್ಷ ಅಷ್ಟೇ ಎಂದು ಉದಾರ ಮನಸ್ಸು ವ್ಯಕ್ತಪಡಿಸಿದ್ದರು. ಇದು ಅವರ ದೊಡ್ಡ ಗುಣ. ಅವರೊಬ್ಬ ತುಂಬಿದ ಕೊಡ, ಚಿನ್ನದ ಕೊಡ. ಎಂದೂ ತುಳುಕದು, ಸದ್ದು ಮಾಡದು, ಅದರ ಸದ್ದು ಬೇಕೆಂದರೆ  ಯಾರಾದರೂ ತಟ್ಟಬೇಕು, ಇವರೂ ಅಷ್ಟೇ. ನಯ ವಿನಯ, ಸೌಜನ್ಯಗಳ ಸಾಕಾರ ಮೂರ್ತಿ ಅವರು, ಒಬ್ಬ ಪಂಡಿತ ಹೇಗಿರುತ್ತಾನೆ ಎಂದು ಅಲ್ಲಿ ಇಲ್ಲಿ ಎಷ್ಟು ಓದಿದರೂ ಪ್ರಯೋಜನವಿಲ್ಲ, ಬದಲಾಗಿ ಒಮ್ಮೆ ಶಾಸ್ತ್ರಿಗಳನ್ನು ನೋಡಿದರೆ ಸಾಕು. ನನ್ನ ಭಾಗ್ಯ ಏನೆಂದರೆ ಸ್ನಾತಕೋತ್ತರ ಅಧ್ಯಯನದಲ್ಲಿಅವರ ನೇರ ಶಿಷ್ಯನಾಗುವ ಅವಕಾಶ ದೊರೆತಿದ್ದು. ನನ್ನ ಪಿಎಚ್ ಡಿ ಸಂಶೋಧನೆಯಲ್ಲಂತೂ ಅವರು ನೇರ ಮಾರ್ಗದರ್ಶಕರಲ್ಲದಿದ್ದರೂ ಹೆಜ್ಜೆ ಹೆಜ್ಜೆಗೂ ಮಾರ್ಗ ತೋರಿಸಿದ್ದರು, ಅನಂತರ ಅವರು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರೂ ಆಗಿದ್ದರು, ಆಗಲೂ ನಾನು ಅವರ ಅಡಿಯಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುವ ಅವಕಾಶ ಕೆಲವು ಕಾಲ ಲಭಿಸಿತ್ತು, ಅನಂತರ ನನ್ನ ಮದುವೆ ಹಿರಿಯರ ಅನುಗ್ರಹದಂತೆ ಆದಾಗ ನಮ್ಮಿಬ್ಬರನ್ನೂ ತಮ್ಮ ಮನೆಗೆ ಬರಹೇಳಿದರು, ಹಣ್ಣು ಶಾಲುಗಳನ್ನು ಗೌರವದಿಂದ ತೆಗೆದುಕೊಂಡು ಹೋದೆವು, ಅಯ್ಯ ಇದನ್ನೆಲ್ಲ ಯಾಕ್ರಪ್ಪಾ ತಂದ್ರಿ? ಇದಕ್ಕೆ ಇಂದು ಕೆಲಸವಿಲ್ಲ ಇಬ್ಬರೂ ಇಲ್ಲಿ ಕುಳಿತುಕೊಳ್ಳಿ ಅನ್ನುತ್ತಾ ಸಿದ್ಧವಾಗಿದ್ದ ಜಾಗ ತೋರಿಸಿದರು, ಕುಳಿತೆವು, ನಮಗೆ ಆರತಿ ಬೆಳಗಿ ದೇವರ ಪ್ರಸಾದ ಕೊಟ್ಟು ಗುರು ದಂಪತಿಗಳು ಆಶೀರ್ವದಿಸಿದರು, ಮೃಷ್ಟಾನ್ನ ಊಟ ಹಾಕಿದರು. ಅನಂತರ ಅವರು ನಿರಾಕರಿಸಿದರೂ ಒತ್ತಾಯ ಮಾಡಿ ಗುರು ದಂಪತಿಗಳನ್ನು ಗೌರವಿಸಿ ಆಶೀರ್ವಾದ ಪಡೆದೆವು, ಧನ್ಯರಾದೆವು, ನೋಡ್ರಪ್ಪಾ ನೀವು ನೂರ್ಕಾಲ ಆನಂದದಿAದ ಸುಖವಾಗಿರಿ ಎಂದು ಹರಸಿದರು, ನನ್ನ ಸಂಗಾತಿ ಅವರ ದೊಡ್ಡ ಅಭಿಮಾನಿ. ಅವರನ್ನು ಇಷ್ಟು ಹತ್ತಿರದಿಂದ ಕಂಡು ಆಶೀರ್ವಾದ ಪಡೆದಿದ್ದು ಅವಳಲ್ಲಿ ಹೆಚ್ಚು ಧನ್ಯತೆಯನ್ನುಂಟು ಮಾಡಿತ್ತು, ಅನಂತರ ಕೆಲವು ಬಾರಿ ಗುರುಗಳನ್ನು ಇಬ್ಬರೂ ಭೇಟಿ ಮಾಡಿದ್ದೆವು, ಅದರಿಂದ ಏನೋ ಸಾಧಿಸಿದ ಸಂತೋಷ ಸಿಗುತ್ತಿತ್ತು. 

ನಮ್ಮ ಗುರುಗಳ ಬಹುತೇಕ ಎಲ್ಲ ಕೃತಿಗಳನ್ನೂ ಸಂಗ್ರಹಿಸಿಕೊಂಡಿದ್ದೇನೆ. ಅವುಗಳಲ್ಲಿ ಶಾಸ್ತ್ರಿಯ ಸಂಪುಟಗಳು ಹಾಗೂ ಛಂದಸ್ಸರೂಪ ನನ್ನ ಫೇವರಿಟ್. ಅವನ್ನು ಅದೆಷ್ಟು ಬಾರಿ ತಿರುವಿಹಾಕಿದ್ದೇನೋ ತಿಳಿದಿಲ್ಲ, ಅವರ ಭಾಷಾ ಬಳಕೆಯ ವೈಖರಿಯೇ ವಿಶಿಷ್ಟ. ನನಗಿಷ್ಟ. ಭಾಷಾ ಪ್ರಯೋಗದ ಬಗ್ಗೆ ಅವರಿಗೆಷ್ಟು ಎಚ್ಚರ ಹಾಗೂ ಕಾಳಜಿ ಎಂದರೆ ಯಾರದೇ ಬರೆಹ ಓದುವಾಗಲೂ ಅವರೊಂದು ಪೆನ್ಸಿಲ್ ಪಕ್ಕದಲ್ಲಿಟ್ಟುಕೊಂಡು ಓದುತ್ತಾ ಅದರಲ್ಲಿನ ಪದಪ್ರಯೋಗಗಳನ್ನು ಪುಟಸಂಖ್ಯೆ ಸಮೇತ ಗುರುತು ಮಾಡಿಕೊಂಡು ಅನಂತರ ಸಂಬಂಧಿಸಿದವರಿಗೆ ಕೊಟ್ಟು ಒಂದೊಂದು ಶಬ್ದದ ಶಬ್ದದ ಬಗ್ಗೆಯೂ ಎಳೆ ಎಳೆಯಾಗಿವಿವರಿಸುತ್ತಿದ್ದರು, ಸರಿ ರೂಪ ಯಾವುದು, ತಪ್ಪು ಪ್ರಯೋಗ ಯಾಕೆ ಎಂಬುದರಿಂದ ಹಿಡಿದು ಅವರ ಗಮನ ಸೆಳೆದ ಪದ ಯಾವುದಾದರೂ ಇದ್ದರೆ ಅದರ ಬಗ್ಗೆ ಏನೂ ಗೊತ್ತೇ ರ‍್ವರಂತೆ ಕುತೂಹಲದಿಂದ ಕೇಳುತ್ತಿದ್ದರು, ಇದು ನನ್ನ ಸಂಶೋಧನೆಯ ವಿಷಯದಲ್ಲಿ ನನ್ನ ಗಮನಕ್ಕೆ ಬಂದಿತು. ನನ್ನ ಸಂಶೋಧನೆಯಲ್ಲಿ ಸ್ಥಳೀಯ ಭಾಷಾ ಪ್ರಯೋಗದ ದೊಡ್ಡ ಪಟ್ಟಿಯೇ ಇತ್ತು, ನಾನು ವಿಶೇಷವಾಗಿ ಉತ್ತರ ಕನ್ನಡ ಜಿಲ್ಲೆಯ ಜನಸಮುದಾಯಗಳ ಆಡು ಭಾಷೆಯನ್ನು ಹೆಚ್ಚಾಗಿ ಬಳಸಿದ್ದೆ, ಅದರಲ್ಲಿ ಅಬ್ಬಿ, ಕಿಚ್ಚು, ಹಳತ ಮೊದಲಾದ ಪದಗಳಿದ್ದವು ಇವುಗಳ ಅರ್ಥವನ್ನು ಕೇಳಿ ಇಂಥ ಪದಗಳನ್ನು ಮತ್ತಷ್ಟು ಪ್ರತ್ಯೇಕವಾಗಿ ಸಂಗ್ರಹಿಸಲು ಸೂಚಿಸಿದರು, ತಲೆ ಅಲ್ಲಾಡಿಸಿದೆ, ಅದಿನ್ನೂ ಕೈಗೂಡಿಲ್ಲ. ಅದು ನನ್ನ ಮುಂದಿನ ಯೋಜನೆ, ಯಾವಾಗ ಕೈಗೂಡುತ್ತದೋ ನೋಡಬೇಕಿದೆ. ಗುರುಗಳ ಮಾತು ಸದಾ ಸ್ಮರಣೆಯಲ್ಲಿದೆ.

ನಮ್ಮ ಪಾಲಿಗೆ ನಮ್ಮ ಗುರುಗಳೆಂದರೆ ಓಡಾಡುವ ವ್ಯಾಕರಣ, ಛಂದಸು, ಕಾವ್ಯ ಮೀಮಾಂಸೆಯ ಉಗ್ರಾಣ. ಕುಮಾರವ್ಯಾಸ ಭಾರತದ ಪರಿಷ್ಕರಣೆಯ ಕಾರ್ಯದಲ್ಲಿ ಇದು ದುಪ್ಪಟ್ಟು ಅಭಿಮಾನಕ್ಕೆ ಕಾರಣವಾಯ್ತು. ನಾವೆಲ್ಲ ನಮ್ಮ ನಮ್ಮ ಕೆಲಸದ ವಿವರವನ್ನು ಸಭೆಯ ಮುಂದಿಟ್ಟು ಗುರುಗಳು ಏನು ಹೇಳುತ್ತಾರೆಂದು ಕಾಯುತ್ತಾ ಕೂರುತ್ತಿದ್ದೆವು. ಅವರು ಹೇಳಿದ್ದೇ ವೇದವಾಕ್ಯ. ಅವರು ಹೇಳಿ ಶರಾ ಹಾಕಿದ್ರೆ ಮತ್ತೆ ಮುಂದೆ ಅದರ ಬಗ್ಗೆ ಮಾತಿಲ್ಲ, ಏಕೆಂದರೆ ಅವರು ಹೇಳುವ ಮಾತು ಕೇವಲ ಅಭಿಪ್ರಾಯವಾಗುವುದಿಲ್ಲ, ಅದು ತೀರ್ಪು ಆಗಿರುತ್ತದೆ, ಒಂದು ಬಾರಿ ಅವರು ಇದು ಹೀಗಲ್ಲ ಅಂದರೆ ಅದನ್ನು ಇಲ್ಲವೆಂದು ಸಾಬೀತು ಮಾಡಲು ಸಾಧ್ಯವೇ ಇಲ್ಲ. ಕನ್ನಡ ಶಾಸ್ತç ವಿಷಯಗಳಲ್ಲಿ ಯಾವುದೇ ಗ್ರಂಥ. ತಾಳೆಗರಿ ಕಳೆದು ಹೋಗಲಿ. ನಮಗೆ ಶಾಸ್ತ್ರಿಗಳಿದ್ದಾರೆಂಬ ಧೈರ್ಯವಿದೆ. ಹಗೆ ಅವರ ಪಾಂಡಿತ್ಯ, ಇಂದಿನ ದಿನಗಳಲ್ಲಿ ಇಂಥ ವಿದ್ವಾಂಸರನ್ನು ಎಲ್ಲಿ ಎಷ್ಟು ದುರ್ಬೀನು ಹಾಕಿ ಹುಡುಕಿದರೂ ಸಿಗುವುದಿಲ್ಲ, ಈ ದೃಷ್ಟಿಯಿಂದ ಅವರು ಕನ್ನಡದ ಪಾಲಿಗೆ ಅನರ್ಘ್ಯ ರತ್ನ. ಅವರನ್ನು ನಾವು ಸದಾ ಕಾಯ್ದುಕೊಳ್ಳಬೇಕಿದೆ, ಈಚೆಗೆ ನಮ್ಮ ಮಾತೃಸ್ವರೂಪರಾದ  ಗುರುಪತ್ನಿಅವರ ಅರ್ಧಾಂಗಿ ಅಗಲಿದ್ದಾರೆ, ಇದರಿಂದ ಗುರುಗಳು ಸ್ವಲ್ಪ ಕುಸಿದಿದ್ದಾರೆ, ಆದರೆ ಅವರ ಓದು ಅವರನ್ನು ಸ್ಥಿರವಾಗಿಟ್ಟಿದೆ.

ನಮ್ಮ ಗುರುಗಳಂಥವರು ಯಾವುದೇ ಕ್ಷೇತ್ರದಲ್ಲಿದ್ದರೂ ಅದು ಆಕ್ಷೇತ್ರದ ಭಾಗ್ಯ. ಅದು ಕನ್ನಡಕ್ಕೊದಗಿದೆ. ಅವರ ಸ್ವಾರಸ್ಯಕರ ಭಾಷಾ ಪ್ರಯೋಗ ತಿಳಿಯಲು ಬಯಸುವವರು ಅವರ ಶಬ್ದಮಣಿ ದರ್ಪಣ ವಿವರ ಕೃತಿ ಓದಬೇಕು. ತಮಾಷೆಯ ಸಂಗತಿ ಎಂದರೆ ಗಂಭೀರ ಶಾಸ್ತ್ರ, ಸಂಶೋಧನೆಗೆ ಹುಟ್ಟಿದ್ದಾರೆಂಬಂತಿರುವ ಇವರು ಶುರುವಾತಿನಲ್ಲಿ ಬರೆದುದು ಲಘು ಸ್ವರೂಪದ ಕಾದಂಬರಿ ಮತ್ತು ಕವಿತೆಗಳನ್ನು, ಅವರು ಪದವಿ ಪಡೆದ ಅನಂತರ ಅವರಿಗೆ ಹೇಳಿಮಾಡಿಸಿದ ಅಧ್ಯಾಪಕ ವೃತ್ತಿಯನ್ನು ಕನಕಪುರದಲ್ಲಿ ಆರಂಭಿಸಿದರು ಅನಂತರ ಹೈದ್ರಾಬಾದು,  ಬೆಂಗಳೂರು, ಮೈಸೂರಲ್ಲಿ,ಅದೇ ವೃತ್ತಿಯನ್ನು ಕಾಯಂ ಆಗಿ ಮುಂದುವರೆಸಿ ಆ ವೃತ್ತಿಗೆ ಗೌರವ ಘನತೆಯನ್ನು ತಂದುಕೊಟ್ಟರು, ಅವರ ಶಿಷ್ಯ ಪರಂಪರೆಗೆ ಸೇರಿದ ನಮಗೆಲ್ಲ ನಮ್ಮ ಗುರುಗಳ ವೃತ್ತಿ ಇದು ಎಂಬ ಹೆಮ್ಮೆ ಒಂದು ಕಡೆ ಇದ್ದರೆ ಹೆಂಗಪ್ಪಾ ಇದನ್ನು ನಿಭಾಯಿಸುವುದು, ಬಹಳ ಜವಾಬ್ದಾರಿಯ ಕೆಲಸ, ನಮ್ಮ ಗುರುಗಳು ನಿರ್ವಹಿಸಿದ ವೃತ್ತಿ ಎಂಬ ಅಳುಜು ಇನ್ನೊಂದೆಡೆ ಅನೇಕ ಬಾರಿ ಏಕಕಾಲಕ್ಕೆ ಮೇಳೈಸುವುದಿದೆ. ಅಂಥ ಜವಾಬ್ದಾರಿಯನ್ನು ಅವರು ನಮಗೆ ವಹಿಸಿದ್ದಾರೆಂದು ಪ್ರತೀ ತರಗತಿಗೆ ಹೋಗುವಾಗ ಅವರ ಹೆಸರಿನ ಧೈರ್ಯ ಮತ್ತು ಅದಕ್ಕೆ ಮತ್ತಷ್ಟು ಗೌರವ ತರಬೇಕೆಂಬ ಎಚ್ಚರ ನನ್ನನ್ನು ಆವರಿಸುತ್ತದೆ. ಇದು ಅವರ ಆಶೀರ್ವಾದ ಎಂದೇ ಭಾವಿಸುತ್ತೇನೆ. 

ಅವರ ವಿದ್ಯಾ ಗುರುಗಳಾದ ಡಿಎಲ್ ನರಸಿಂಹಾಚಾರ್ ಅವರ ಸ್ಥಾನವನ್ನು ನಮ್ಮ ಗುರುಗಳು ತುಂಬಿದ್ದಾರೆ, ಆದರೆ  ಯಾವಾಗಲಾದರೂ ನಮ್ಮ ಗುರುಗಳ ಜಾಗ ಖಾಲಿ ಆದರೆ ಅದು ಯಾವಾಗಲೂ ಖಾಲಿಯೇ ಉಳಿಯುತ್ತದೆ, ಇದು ಈಗ ಹೇಳುವ ಮಾತಲ್ಲ ಅನ್ನುವುದು ಬೇರೆ ವಿಷಯ. ನಮ್ಮ ಗುರುಗಳ ಹಾಸ್ಯ ಬಹಳ ಗಂಭೀರ, ಅದು ತಕ್ಷಣ ಅರ್ಥವಾಗುವುದಿಲ್ಲ, ನಮ್ಮಂಥ ಟ್ಯೂಬ್ ಲೈಟ್ ಗಳಿಗೆ ಸ್ವಿಚ್ ಹಾಕಿ ಸ್ವಲ್ಪ ಕಾಲ ಕಾಯಬೇಕಾಗುತ್ತದೆ, ಅವರ ಒಡನಾಟ ಮತ್ತೆ ಮತ್ತೆ ಆದಾಗ ಮಾತ್ರ ಅವರ ಹಾಸ್ಯದ ಗುಣ ತಿಳಿಯುತ್ತದೆ. ಗಂಭೀರ ಸ್ವಭಾವದವರಿಗೆ ಹಾಸ್ಯ ಆಗಿಬರುವುದಿಲ್ಲ ಅನ್ನುವುದಕ್ಕೆ ಶಾಸ್ತ್ರಿಗಳು ಅಪವಾದ. ಅವರ ಹಾಸ್ಯ ಕೂಡ ಶಾಸ್ತ್ರಿಯ. ಕುಮಾರವ್ಯಾಸ ಗ್ರಂಥ ಪರಿಷ್ಕರಣೆ ಸಂದರ್ಭದಲ್ಲಿ ಭೀಮನ ಊಟದ ವಿವರ ಬಂದಾಗಲೊಮ್ಮೆ ಅಲ್ರಪ್ಪಾ ಸದ್ಯ ಈ ಭೀಮನಂಥವರು ಈಗ ಇರಲಿಕ್ಕಿಲ್ಲ, ಎಲ್ಲರಿಗೂ ಆರೋಗ್ಯದ ಚಿಂತೆಯಿಂದ ಊಟದ ಹವ್ಯಾಸವೇ ತಪ್ಪಿಹೋಗಿದೆ, ಅಕದ್ಮಾತ್ ಇದ್ದು ಆತ ನಮ್ಮ ಮನೆಯ ಯಾವುದಾದರೂ ಸಮಾರಂಭಕ್ಕೆ ಬಂದು ಊಟಕ್ಕೆ ಕುಳಿತಿದ್ದರೆ ಮನೆ ಜನ ಏನು ಮಾಡುವುದು? ಅತಿಥಿಯೊಬ್ಬನಿಗೇ ಸಾಲದಷ್ಟು ಅಡುಗೆ ಮಾಡಿದ್ದಾರೆಮ ಇನ್ನು ನಮಗೆಲ್ಲ ಊಟ ಎಲ್ಲಿದೆ ಅನ್ನುತ್ತಾ ಬಂದ ಜನ ಶಪಿಸಿ ಹೋಗುತ್ತಿದ್ದರು ಅಂದಿದ್ದರು. ಅವರಿಗೆ ರಾಜ್ಯೋತ್ಸವ ಪಂಪ ಪ್ರಶಸ್ತಿಯೂ ಸೇರಿದಂತೆ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ ಕೂಡ ಸಾರ್ಥಕವಾಗಿ ಸಂದಿದೆ, ಆ ಗೌರವಗಳ ಘನತೆ ಹೆಚ್ಚಿದೆ, ನಮ್ಮ ಗುರುಗಳು ಶತಾಯುಷಿಗಳಾಗಿ ಇನ್ನೂ ನೂರ್ಕಾಲ ಇದ್ದು ನಮ್ಮನ್ನೆಲ್ಲ ಮುನ್ನಡೆಸಲಿ ಎಂದು ಆಶಿಸೋಣ. ಸಾಮಾನ್ಯವಾಗಿ ಗುರುವನ್ನು ಮೀರಿಸುವ ಶಿಷ್ಯನಾಗಬೇಕೆಂದು ಹೇಳುತ್ತಾರೆ, ಶಾಸ್ತ್ರಿಗಳ ವಿಷಯದಲ್ಲಿ ಇದು ಕೇವಲ ಆಶಯವಾಗಬಲ್ಲದು. ಅದಿರಲಿ, ನಮಗೆಲ್ಲ ಇದ್ದ ಕನಿಷ್ಠ ಆಸೆ ಏನೆಂದರೆ ಒಮ್ಮೆಯಾದರೂ ಗುರುಗಳು ಈತ ನನ್ನ ಶಿಷ್ಯ ಎಂದು ಒಬ್ಬರ ನುಂದೆಯಾದರೂ ಹೇಳಲಿ ಎಂಬುದಾಗಿತ್ತು, ಅಷ್ಟಾದರೆ ನಮ್ಮ ಜನ್ಮ ಸಾರ್ಥಕ . ಈ ಆಸೆ ಇನ್ನೂ ಹಾಗೆಯೇ ಇದೆ. ನನಗೆ ತಿಳಿದಂತೆ ನನ್ನ ಇನ್ನೊಬ್ಬ ಗುರುಗಳಾದ ತಾರಾನಾಥ್ ಮಾತ್ರ ಇಂಥ ಭಾಗ್ಯ ಪಡೆದಿದ್ದಾರೆ.

No comments:

Post a Comment