ಆಯಿತು, ಇಷ್ಟಕ್ಕೂ ಹೀಗೆ ಸಂಗ್ರಹಿಸಿದ ಹಣದಿಂದ ಮಾಡುವುದಾದರೂ ಏನು? ಕೆಲವು ಕನ್ನಡ ಮೇಷ್ಟ್ರುಗಳನ್ನು ಕರೆಸಿ ಕನ್ನಡದ ಬಗ್ಗೆ ಭಾಷಣ ಮಾಡಿಸುವುದು, ಹೆಚ್ಚೆಂದರೆ ಆರ್ಕೆ ಸ್ಟ್ರಾ ಏರ್ಪಡಿಸುವುದು, ಹಾರ ತುರಾಯಿಗಳನ್ನು ಪರಸ್ಪರ ಬದಲಾಯಿಸಿಕೊಳ್ಳುವುದು, ಹೊಗಳುವುದು, ಒಂದಿಷ್ಟು ಪಾರ್ಟಿ ಮಾಡಿ ಸಿಕ್ಕ ಹಣವನ್ನು ಕನ್ನಡದ ಹೆಸರಲ್ಲಿ ಖಾಲಿ ಮಾಡುವುದು. ಈಗೀಗ ಕೆಲವು ಕಡೆ ಹಾಸ್ಯ ಕಲಾವಿದರನ್ನು ಕರೆಸಿ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ, ಆರ್ಕೆಸ್ಟ್ರಾದಲ್ಲಿ ಒಂದಿಷ್ಟು ಸಿನಿಮಾ ಹಾಡು, ಕುಣಿತ ಮಾಡಿಸಲಾಗುತ್ತದೆ. ಆದರೆ ಇಂಥ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಭಾವನಾತ್ಮಕ ಭಾಷಣಗಳಿರುತ್ತವೆ, ಕನ್ನಡದ ಬಗ್ಗೆ ಅದರ ಪ್ರಾಚೀನತೆ, ಗತ ವೈಭವಗಳ ಬಗ್ಗೆ ಹೊಗಳಿಕೆಗಳೇ ಇರುತ್ತವೆ, ಎಲ್ಲಿಯೂ ಸದ್ಯದ ಪ್ರಾಯೋಗಿಕ ಕೆಲಸಗಳ ಬಗ್ಗೆ, ಜರೂರಾಗಿ ಆಗಬೇಕಾದ ಕನ್ನಡದ ಕೆಲಸಗಳ ಬಗ್ಗೆ ಕಟುವಾದ ವಿಮರ್ಶೆ ಇರುವುದಿಲ್ಲ. ಇಂಥ ಕಾರ್ಯಗಳಿಂದ ಕನ್ನಡಕ್ಕೆ ಏನಾದರೂ ಪ್ರಯೋಜನವಿದೆಯಾ? ಹಾಗೆ ನೋಡಿದರೆ ಕರ್ನಾಟಕದಲ್ಲಿ ನಾಡಿನ ನೆಲ, ಜಲ ಮತ್ತು ಭಾಷೆ ರಕ್ಷಿಸಲೆಂದೇ ಸಾವಿರಕ್ಕೂ ಮಿಕ್ಕಿದ ಸಂಘ ಸಂಸ್ಥೆಗಳಿವೆ, ಇವೆಲ್ಲವೂ ರಾಜ್ಯೋತ್ಸದ ಹೆಸರಲ್ಲಿ ಮಾಡುವುದು ಇದೇ ಕೆಲಸ.
ಬದಲಾಗಿ ಇವು ಗುಣಾತ್ಮಕವಾಗಿ ನಾಡು ನುಡಿಯ ರಕ್ಷಣೆಗೆ ಮಾಡಬೇಕಾದುದೇನು? ಸದ್ಯ ನಮ್ಮ ನಾಡಿನ ಜಲ ಮತ್ತು ಪರಿಸರ ಅಪಾಯದಲ್ಲಿವೆ, ಇವುಗಳ ರಕ್ಷಣೆ ಮೊದಲು ಆಗಬೇಕಿದೆ. ಪ್ರತೀ ಊರಲ್ಲಿರುವ ಸಂಘಗಳು ತಮ್ಮ ಸ್ಥಳದಲ್ಲಿರಬಹುದಾದ ಕೆರೆ ಕಟ್ಟೆಗಳನ್ನು ಪತ್ತೆ ಹಚ್ಚಿ ಮುಂದಿನ ರಾಜ್ಯೋತ್ಸವದ ವೇಳೆಗೆ ಶುದ್ಧವಾದ ಅವನ್ನು ನಾಡಿಗೆ ಅರ್ಪಿಸುವ ಕೆಲಸವಾಗಬೇಕು, ಇದರಿಂದ ಜಲವೂ ಪರಿಸರವೂ ರಕ್ಷಣೆಯಾಗುತ್ತದೆ, ಇಂಥಕೆಲಸ ಮಾಡುವುದಾದರೆ ಸಾರ್ವಜನಿಕರು ಮುಂದೆ ಬಂದು ದಾನ ಮಾಡುತ್ತಾರೆ, ಉದಾಹರಣೆಗೆ ಬೆಂಗಳೂರಲ್ಲಿ ನಾಲ್ಕಾರು ದಶಕಗಳ ಹಿಂದಿನವೆರೆಗೂ ವೃಷಭಾವತಿ, ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ಎಂಬ ನದಿಗಳು ಜೀವಂತವಾಗಿದ್ದವು, ಇವುಗಳಿಂದ ಸುವರ್ಣಾವತಿಯಂಥ ಮೂರ್ನಾಲ್ಕು ಉಪ ನದಿಗಳೂ ಸಾವಿರಾರು ಕೆರೆಗಳೂ ಸಮೃದ್ಧವಾಗಿದ್ದವು. ಇದರಿಂದ ಬೆಂಗಳೂರಿನ ಪರಿಸರ ಅತ್ಯಂತ ಶುದ್ಧವಾಗಿತ್ತೆಂದು ತಿಳಿದುಬರುತ್ತದೆ. ನಾಗರಿಕತೆ ಬೆಳೆದಂತೆ ಇವೆಲ್ಲ ನಾಪತ್ತೆ ಆದವು ಈಗ ಬೆಂಗಳೂರಿನಲ್ಲಿ ಒಂದಾದರೂ ಜೀವಂತ ನದಿ ಇತ್ತೆಂದು ನಂಬುವುದೇ ಕಷ್ಟ. ಆದರೆ ಸರ್ಕಾರ ಮನಸ್ಸು ಮಾಡಿದರೆ ಇವುಗಳನ್ನು ಇಥವಾ ಒಂದನ್ನಾದರೂ ಮತ್ತೆ ಸಜೀವಗೊಳಿಸಲು ಸಾಧ್ಯವಿದೆ. ಇಂಥ ಕೆಲಸವನ್ನು ಕನ್ನಡ ಪರ ಸಂಘಗಳು ಕೈಗೆತ್ತಿಕೊಂಡು ಅದರಲ್ಲಿ ಸಫಲವಾದರೆ ಅದಕ್ಕಿಂತ ಶ್ರೇಷ್ಠ ಕನ್ನಡದ ಕೆಲಸ ಬೇರೆ ಇರಲಾರದು.
ಇಂಥದೊಂದು ಕೆಲಸ ಮಾಡಬೇಕೆಂದು ಮೊದಲು ಆಯಾ ಸಂಘ ಸಂಸ್ಥೆಗೆ ಅನ್ನಿಸಬೇಕು, ಸಂಘ ಸಂಸ್ಥೆಗಳು ಮುಂದಾದರೆ ಇದು ಕಷ್ಟದ ಕೆಲಸವಲ್ಲ, ಇಂಥ ಕೆಲಸವೊಂದು ಈಗಾಗಲೇ ಮುಂಬೈನಲ್ಲಿ ಸಾಧ್ಯವಾಗಿದೆ, ನಮ್ಮ ವೃಷಭಾವತಿಯಂತೆ ಅಲ್ಲಿನ ಕಾಮಾ ಎಂಬ ನದಿಯನ್ನು ಸಾಯಿಸಲಾಗಿತ್ತು, ಅದರಿಂದ ಮಂಬೈ ಮಹಾನಗರ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಕೆಲವು ಸಂಘಗಳು ಈ ನದಿಯನ್ನು ಈಗ ಪುನರುಜ್ಜೀವನಗೊಳಿಸಿ ಅಲ್ಲಿನ ಪರಿಸರವನ್ನು ಜೀವ ಸಂಕುಲವನ್ನು ಮತ್ತೆ ಬೆಳೆಸುತ್ತಿದ್ದಾರೆ, ಇದನ್ನು ಮಾದರಿಯಾಗಿಟ್ಟುಕೊಂಡು ನಾವೂ ಇಂಥ ಕೆಲಸಕ್ಕೆ ಮುಂದಾಗಬಹುದು. ನಮ್ಮ ಯಾವುದಾದರೂ ಸಂಸ್ಥೆ ಇಂಥ ಒಂದು ಕೆಲಸಕ್ಕೆ ಮುಂದಾಗಲಿ ಇದು ರಾಜ್ಯೋತ್ಸವದ ನಿಜವಾದ ಆಚರಣೆ, ಹೀಗೆ ಪ್ರತೀ ರಾಜ್ಯೋತ್ಸವ ಆಚರಿಸಿದರೆ ಅದು ಸಾರ್ಥಕ. ಇಷ್ಟು ವರ್ಷ ಆಚರಿಸಲಾದ ರಾಜ್ಯೋತ್ಸವ ಆಚರಣೆಗಳಲ್ಲಿ ಯಾವುದಾದರೂ ಒಂದು ವರ್ಷದ ಆಚರಣೆ ಹೀಗೆ ನೆನಪಿಡುವ ಆಚರಣೆ ನಡೆದಿದೆಯಾ? ರಾಜ್ಯೋತ್ಸವ ಪ್ರಶಸ್ತಿ ಪಡೆದ ಯಾರಾದರೂ ಅದನ್ನು ನೆನಪಿರುವ ರಾಜ್ಯೋತ್ಸವ ಅನ್ನಬಹುದಷ್ಟೇ. ಆದರೆ ಇಂಥ ಆಚರಣೆ ನಾಡಿಗೆ ಏನನ್ನು ಕೊಡುತ್ತದೆ? ಮೊದಲು ರಾಜ್ಯಮಟ್ಟಕ್ಕಿದ್ದ ರಾಜ್ಯೋತ್ಸವ ಪ್ರಶಸ್ತಿಗಳು ಈಗ ಜಿಲ್ಲಾ ಮಟ್ಟಕ್ಕೂ ಬಂದು ರಾಜ್ಯೋತ್ಸವ ಪ್ರಶಸ್ತಿ ಎಂಬ ಹೆಗ್ಗಳಿಕೆ ಪಡೆದಿವೆ ಈ ಪ್ರಶಸ್ತಿ ಇನ್ನು ಮೇಲೆ ತಾಲ್ಲೂಕು, ಹೋಬಳಿ ಮಟ್ಟಕ್ಕೂ ಬರಬಹುದು.

No comments:
Post a Comment