Tuesday, 28 January 2025

ತಾಯಿ ಭುವನೇಶ್ವರಿಯ ಬೃಹತ್ ಪ್ರತಿಮೆಯ ಸುತ್ತ ಮುತ್ತ


ಮೊದಲೇ ಆಂಟಿಸಿಪೇಟರಿ ಬೇಲ್ ಅಥವಾ ನಿರೀಕ್ಷಣಾ ಜಾಮೀನು ತೆಗೆದುಕೊಳ್ಳುತ್ತೇನೆ - ನಾನು ಖಂಡಿತಾ ಕನ್ನಡ ವಿರೋಧಿಯಾಗಲೀ ದ್ವೇಷಿಯಾಗಲೀ ಅಲ್ಲ, ನಾನು ಬಾಲವಾಡಿಯಿಂದ ಡಿ.ಲಿಟ್ವರೆಗೆ ಓದಿದ್ದೆಲ್ಲ ಕನ್ನಡದಲ್ಲಿ, ನನ್ನ ಊಟ ತಿಂಡಿ ಕುಡಿಯುವ ನೀರು ಟೀ ಕಾಫಿ ಎಲ್ಲವೂ ಕನ್ನಡ, ಕನ್ನಡ. ಒಂದು ದೃಷ್ಟಿಯಲ್ಲಿ ನಾನೇ ಕನ್ನಡ.

ಆದರೂ ನನ್ನ ಮುಂದೆ ಸದ್ಯ ಎದ್ದಿರುವ ದೊಡ್ಡ ಸಮಸ್ಯೆಯೊಂದನ್ನು ಇಲ್ಲಿ ಕಾರಿಕೊಳ್ಳುತ್ತಿದ್ದೇನೆ. ನಿರೀಕ್ಷಣಾ ಜಾಮೀನು ಏಕೆಂದರೆ, ನನು ಕಾರಿಕೊಂಡ ವಿಷಯ ಓದಿ ನಾನು ಖನಡ ವಿರೋಧಿ ಎಂದು ನೀವು ಅಂದುಕೊಳ್ಳಬಾರದು ಎಂದು. ಅಂಥದ್ದೇನನ್ನೂ ನಾನು ಇಲ್ಲಿ ಹೇಳುವುದಿಲ್ಲ, ನಾನು ಹೇಳುವುದೆಲ್ಲ ಸತ್ಯ, ಸತ್ಯವನ್ನು ಬಿಟ್ಟು ನಾನು ಕನ್ನಡದಾಣೆಗೂ ಬೇರೇನೂ ಹೇಳುವುದಿಲ್ಲ. ವಿಷಯ ಏನೆಂದರೆ ಇಂದು ಕನ್ನಡಿಗರ ಹೆಮ್ಮೆ ಎಂದು ಹೇಳಲಾದ ತಾಯಿ ಭುವನೇಶ್ವರಿಯ ಬೃಹತ್ ಪ್ರತಿಮೆಯ ಅನಾವರಣ ಇಂದು ವಿಧಾನ ಸೌಧದ ಆವರಣದಲ್ಲಿ ನಡೆಯಲಿದೆ.

ಮೊದಲು ಈ ಪ್ರತಿಮೆಯ ಅಂಕಿ ಅಂಶ ನೋಡುವಾ. ಇದು ದಶಕಗಳ ಬೇಡಿಕೆ. ವಿಧಾನ ಸೌಧದ ಸುತ್ತ ಈಗಾಗಲೇ ಕೆಂಪೇಗೌಡ, ಬಸವಣ್ಣ, ನೆಹರು, ಅಂಬೇಡ್ಕರ್, ಮಹಾತ್ಮ ಗಾಂಧಿ,ಜಗಜೀವನ್ ರಾಮ್,ವಾಲ್ಮೀಕಿ ಮಹರ್ಷಿ,ಮೊದಲಾದವರ ಪ್ರತಿಮೆಗಳಿವೆ. ವಿಧಾನ ಸೌಧದ ನಿರ್ಮಾತೃ ಸ್ವತಃ ಹನುಂತಯ್ಯ, ಗಾಂಧಿ, ಪಟೇಲರ ಪ್ರತಿಮೆ ಸ್ಥಾಪಿಸಲು ಬಯಸಿದ್ದರಂತೆ. ತಮಾಷೆ ಅಂದರೆ ಹನುಮಂತಯ್ಯನವರ ಪ್ರತಿಮೆ ಅಲ್ಲಿಲ್ಲ, ವಿಷಯ ಇದಲ್ಲ. ಭುವನೇಶ್ವರಿ ಪ್ರತಿಮೆಗೆ ೨೪. ೨೧ ಕೋಟಿ ರೂ ವೆಚ್ಚವಾಗಿದೆಯಂತೆ. ಅನೇಕ ಟನ್ ಕಂಚು ಬಳಸಿ ಇದನ್ನು ತಯಾರಿಸಲಾಗಿದೆ. ಜೈ ಭುವನೇಶ್ವರಿ. ಇವಳನ್ನು ನಾವು ನೀವೆಲ್ಲ ಕನ್ನಡದ ತಾಯಿ ಎಂದು ಪೂಜಿಸುತ್ತೇವೆ. ಕೆಲವರು ಮೈಸೂರಿನ ಚಾಮುಂಡಿ ಕರ್ನಾಟಕದ ತಾಯಿ ಅನ್ನುತ್ತಾರೆ. ಇರಲಿ. ಎಲ್ಲ ಒಂದೇ. ವಿಷಯ ಇದೂ ಅಲ್ಲ. ಹೀಗೆ ಪ್ರತಿಮೆ ಸ್ಥಾಪಿಸುವ ಪರಿಪಾಠ ನಮ್ಮದಲ್ಲ, ಇದನ್ನು ತಮಿಳುನಾಡಿನಿಂದ ಎರವಲು ತರಲಾಗಿದೆ. ಅಲ್ಲಿ ಕಂಡಕಂಡಲ್ಲಿ ಪ್ರತಿಮೆಗಳಿವೆ. ನಾವೇನು ಕಮ್ಮಿ? ಈ ವಿಷಯದಲ್ಲಿ  ಅವರು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ. ನಾವು ಸಾಧಕರ ಮರಣದ ಅನಂತರ ಅವರ ಪುಣ್ಯಸ್ಮರಣೆಗೆ ಪ್ತರಿಮೆ ಸ್ಥಾಪಿಸಿದರೆ ಅವರು ಜೀವಿಸಿದ್ದಾಗಲೇ ಪ್ರತಿಮೆ ಸ್ಥಾಪಿಸುತ್ತಾರೆ. ಅಲ್ಲಿನ ಮಾಜಿ  ಸಿಎಂ ಕರುಣಾನಿಧಿ ತಮ್ಮ ಪ್ರತಿಮೆಯನ್ನು ತಾವೇ ಸ್ಥಾಪಿಸಿಕೊಂಡು ಸಂಭ್ರಮಿಸಿದ್ದರು. ನಮ್ಮಲ್ಲೂ ಒಮ್ಮೆ ಹೀಗೆ ಆಗಿದೆ. ಮೈಸೂರು ವಿಶ್ವವಿದ್ಯಾನಿಲಯದ ಮೂಲ ಕತೃವಾದ ಮಹಾಕವಿ ಕುವೆಂಪು ಅವರ ಹೆಸರಲ್ಲಿ ಅಲ್ಲಿ ಕನ್ನಡ ಸ್ನಾತಕೋತ್ತರ ಕೇಂದ್ರವಿದೆ. ಅದರಲ್ಲಿ ಕುವೆಂಪು ಅವರ ಪ್ರತಿಮೆಯೊಂದಿದ್ದು ಅದನ್ನು ಸ್ವತಃ ಕುವೆಂಪು ಅವರೇ ಅನಾವರಣ ಮಾಡಿದ್ದರೆನ್ನಲಾಗಿದೆ. ಸರಿ, ವಿಷಯ ಇದೂ ಅಲ್ಲ, ಏನಪಾ ಅಂದ್ರೆ  ಹೀಗೆ ಪ್ರತಿಮೆ ಸ್ಥಾಪಿಸುವ ಕಲ್ಪನೆ ಆಧುನಿಕ ಸಮಾಜದಲ್ಲಿ ಬಲವಾದುದು ಯೂರೋಪಿನವರ ನಾಸ್ಟಾಲ್ಜಿಯ ಅಥವಾ ಹಳೆಯದರ ಹಳಹಳಿಕೆಯ ಫಲವಾಗಿ. ಅವರು ಇದನ್ನು ವಸ್ತು ಸಂಗ್ರಹಾಲಯಗಳಲ್ಲಿ ಶುರು ಮಾಡಿದ್ದರು, ನಾವು ಹೊರಗೆ ಎಳೆದಿದ್ದೇವೆ. ಅಷ್ಟೇ. ವಿಷಯ ಇದೂ ಅಲ್ಲ, ಮತ್ತೆ?

ಏನಪಾ ಅಂದ್ರೆ ಈ ತಾಯಿ ಭುವನೇಶ್ವರಿಯ ಇಂಥ ಬೃಹತ್ ಪ್ರತಿಮೆಯನ್ನು ಕರ್ನಾಟಕದ ಶಕ್ತಿ ಕೇಂದ್ರದಲ್ಲಿ ಹಿಂಗೆ ಕೂರಿಸಿದ್ದರಲ್ಲಿ ಅರ್ಥವಿದೆಯಾ ಅಂತ? ಎಲ್ಲ ಬಗೆಯ ನಂಬಿಕೆ ಆಚರಣೆಯನ್ನು ಪ್ರಶ್ನಿಸುವ ವೈಚಾರಿಕ ದೃಷ್ಟಿಯಲ್ಲೇ ಇದನ್ನು ನೋಡುವಾ. ಇದಕ್ಕೆ ಸುಮಾರು ೨೧ ಕೋಟಿ ರೂಗಳನ್ನು ಸುರಿಯುವ ಅಗತ್ಯ ಇತ್ತಾ?ಆಚೆಗೆ ಇಟ್ಟು ಶುದ್ಧ  ಆ ಹಣ ಕರ್ನಾಟಕದ ಬೇರೆ ಅಭಿವೃದ್ಧಿ ಕೆಲಸಕ್ಕೆ ಬಳಕೆ ಆಗುತ್ತಿರಲಿಲ್ಲವಾ? ಏ, ಅವೆಲ್ಲ ಆಗುತ್ತವೆ, ಕನ್ನಡದ ಭಾವನೆ ಕಾಪಾಡುವುದು ಮುಖ್ಯ. ಸರಿ, ಇದನ್ನು ನಮ್ಮ ಭಾವನೆಯನ್ನು ಬುದ್ಧಿಯ ತರ್ಕದಲ್ಲಿ ಎಲ್ಲವನ್ನೂ ನೋಡುವ ಯೂರೋಪಿನ ವ್ಯಕ್ತಿಗೆ ಕೇಳಿದರೆ 'ದಿಸ್ ಈಸ್ ಶಿಯರ್ ವೇಸ್ಟ್ ಆಫ್ ಪ್ರೀಶಿಯಸ್ ಮನಿ' ಎಂದು ಹೇಳುವುದಿಲ್ಲವೇ? ಅಷಟೊಂದು ಪ್ರಮಾಣದ ಕಂಚು? ಬರೀ ಪ್ರತಿಮೆ ನಿಲ್ಲಿಸಲು? ಅಷ್ಟು ಖರ್ಚು ಮಾಡಿ ಏನು ಮಾಡ್ತೀರಾ? ಅದು ಎಷ್ಟು ಅಮೂಲ್ಯವಾದ ನೈಸರ್ಗಿಕ ಸಂಪತ್ತು ಗೊತ್ತಾ ಎಂದೆಲ್ಲ ಕೇಳುತ್ತ ಹೋಗಬಹುದು. ಬಿಡಿ. ನಮ್ಮಲ್ಲಿ ಪ್ರಶ್ನೆ ಮಾಡದಿರುವ ವಿಷಯವಿಲ್ಲ, ಯಾವುದನ್ನೂ ಪ್ರಶ್ನಿಸಬಾರದು ಎಂದಿಲ್ಲ, ಬೇಕಾದ್ದು ಪ್ರಶ್ನಿಸಬಹುದು. ಅಷ್ಟಕ್ಕೂ ಅದೇ ತಾನೆ ಅರಿವಿನ ಮೂಲ? ಸರಿ. ಅಲ್ರೀ ಕರ್ನಾಟಕದ ತಾಯಿ ನಾಡದೇವಿ ಯ ಪ್ರತಿಮೆಯನ್ನು ಅಲ್ಲಿ ಇಷ್ಟು ವರ್ಷ ಕೂರಿಸದಿರುವುದೇ ದೊಡ್ಡ ತಪ್ಪು. ಹಾಗಿರುವಾಗ ಸದ್ಯ ಇಂದಿನ ನಾಡಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮನಸ್ಸು ಮಾಡಿ ಸ್ಥಾಪಿಸಿದ್ದಾರೆಂದು ಸಂಭ್ರಮಿಸಬೇಕಲ್ಲವೇ? ಹೌದು. ಒಂದು ದೃಷ್ಟಿಯಲ್ಲಿ ನಿಜ. ಪ್ರಶ್ನೆ ಏನೆಂದರೆ ಅಲ್ಲಿ ವಿಧಾನ ಸೌಧದ ಆವರಣದಲ್ಲಿ ಈಗಾಗಲೇ ಸ್ಥಾಪಿಸಲಾದ ಪ್ರತಿಮೆಗಳು ಅಸಂಖ್ಯ, ಹಾಗಂತ ಯಾವ ಪ್ರತಿಮೆಯ ವ್ಯಕ್ತಿಯೂ ಕಮ್ಮಿ ಅಲ್ಲ ಅನ್ನುವುದು ಬೇರೆ ವಿಷಯ. ಹಾಗೆ ನೋಡಿದರೆ ಅಲ್ಲಿ ಇನ್ನೂ ಸ್ಥಾಪಿಸಬೇಕಾದ ಅಸಂಖ್ಯ ವ್ಯಕ್ತಿಗಳು ಬಾಕಿ ಇದ್ದಾರೆ. ಅಲ್ಲಿ ಇನ್ನೂ ನಮ್ಮ ಪ್ರಮುಖ ಸಿನಿಮಾ ತಾರೆಗಳ ಪ್ರತಿಮೆ ಬಂದಿಲ್ಲ, ಅಸಂಖ್ಯ ಸಾಮಾಜಿಕ ಮುಖಂಡರ ಪ್ರತಿಮೆಗಳು ಬಂದಿಲ್ಲ, ಇತ್ಯಾದಿ. ಅಷ್ಟಕ್ಕೂ ವಿಧಾನನ ಸೌಧ ಇರುವುದು ಒಂದು ವಿಶುವಲ್ ಗ್ಯಾಲರಿ ಮಾಡುವುದಕ್ಕಾ? ಅವೆಲ್ಲ ಗೊತ್ತಿಲ್ಲ. ಅಲ್ಲಿ ಪ್ರತಿಮೆಗಳು ಇರುವುದು ಒಂದು ಪ್ರತಿಷ್ಠೆಯ ಸಂಕೇತ. ರಾಜ್ಯದಲ್ಲಿ ಬೇರೆ ಕಡೆ ಜಾಗ ಇಲ್ವಾ? ಕರ್ನಾಟಕ ರತ್ನ, ಭಾರತ ರತ್ನರ ಪ್ರತಿಮೆಗಳು ಬೇಡ್ವಾ?

ಹೌದು. ಹೀಗೆ ನಾಡು ನುಡಿಯ ಹೆಸರಲ್ಲಿ ಪ್ರತ್ಯೇಕತೆ ಮೆರೆಯುವುದನ್ನು ಅದನ್ನು ವೈಭವೀಕರಿಸುವುದನ್ನು ನಮಗೆ ಕಲಿಸಿದವರು ಯೋರೋಪ್ ಜನ ಎಂಬುದನ್ನು ಎಷ್ಟು ಸರಿ ಬೇಕಾದರೂ ಕೂಗಿ ಹೇಳಬಹುದು. ಅವರು ತಮ್ಮ ರಿಲಿಜನ್ ಪ್ರಸಾರ ಮಡುವ ಉದ್ದೇಶದಿಂದ ಹಾಗೂ ಅವರ ಪ್ರಕಾರ ನರಕದಲ್ಲಿರುವ ನಮ್ಮನ್ನೆಲ್ಲ ಉದ್ಧರಿಸಲು ಇಲ್ಲಿಗೆ ಬಂದರು. ಬರುವಾಗ ತಮ್ಮ ಸಾಮಾಜಿಕ ಇತ್ಯಾದಿ ಗ್ರಹಿಕೆಗಳನ್ನೂ ಮೂಟೆಕಟ್ಟಿ ತಂದು ಇಲ್ಲಿ ಸುರಿದರು. ಅವುಗಳಲ್ಲೊಂದು ಸೋ ಕಾಲ್ಡ್ ರಾಷ್ಟ್ರೀಯತೆಯ, ನಾಡು, ನುಡಿಯ ಪ್ರತ್ಯೇಕತೆ ಹಗೂ ಅದರ ಅನನ್ಯತೆ. ಅವರು ತಮ್ಮ ಸಮಾಜದಲ್ಲಿದ್ದ ಅನ್ಯರ ಆಕ್ರಮಣ ತಡೆಯಲು ಬಳಸಿದ ತಮ್ಮ ನಾಡಿನ ವ್ಯಾಪ್ತಿ ಮತ್ತು ತಮ್ಮ ಭಾಷೆಯ ನಿಷ್ಠೆಯ ನೆಪದಲ್ಲಿ ತಮ್ಮ ತಮ್ಮ ಗಡಿಗಳನ್ನು ಅದೇ ನೆಲೆಯಲ್ಲಿ ಗುರುತಿಸಿಕೊಂಡರು. ಅದನ್ನು ಇಲ್ಲಿಗೂ ಅನ್ವಯಿಸಿ ಭಾಷಾವಾರು ರಾಜ್ಯಗಳಾಗಲು ನಮ್ಮನ್ನು ಉತ್ತೇಜಿಸಿದರು. ದೊಡ್ಡ  ರಾಷ್ಟ್ರದ ಕಲ್ಪನೆಯೊಳಗೆ ಕಿರು ನಾಡಿನ ಕಲ್ಪನೆ ಚಿಗುರುವಂತೆ ಮಾಡಿ, ಅದು ಅನೇಕ ಭಗವಾಗುವಂತೆ ಮಾಡಿದರು, ಹೀಗೆ ಮಾಡುವುದು ಆಡಳಿತದ ಮೇಲೆ ತಮ್ಮ ಹಿಡಿತ ಸಾಧಿಸಿಕೊಂಡಿರಲು ಅಗತ್ಯವೂ ಅನಿವಾರ್ಯವೂ ಆಗಿತ್ತು, ಜಾತಿ ಪಂಗಡ, ಭಾಷೆ, ಗಡಿ ಹೀಗೆ ಯಾವುದೇ ವಿಧದಲ್ಲಿ ನಮ್ಮ ಸಮಾಜ ಛಿದ್ರವಾಗಿರುವುದು ಅವರಿಗೆ ಬೇಕಿತ್ತು. ಹೀಗಾದಾಗ ನಾವು ಪರಸ್ಪರ ಕಚ್ಚಾಡಿಕೊಂಡಿದ್ದರೆ ಅವರು ಆಳ್ವಿಕೆ ನಡೆಸುವುದು ಸುಲಭವಾಗುತ್ತಿತ್ತು. ಆದ್ದರಿಂದ ಅವರು ನಮ್ಮ ಸಮಾಜದಲ್ಲಿ ಇಂಥ ಭವನೆ ಬಲವಾಗಿ ಬೇರೂರುವಂತೆ ಮಾಡುವಲ್ಲಿ ಯಶಸ್ವಿ ಆದರು ಮಾತ್ರವಲ್ಲ, ಆ ಯಶಸ್ಸು ಅವರು ಇಲ್ಲಿಂದ ಕಾಲು ಕಿತ್ತು ಇಷ್ಟು ವರ್ಷಗಳಾದ ಮೇಲೂ ಬೆಳೆಯುತ್ತಲೇ ಇರುವಂತೆ ಮಾಡುವಲ್ಲಿ ಯಶಸ್ವು ಕಂಡರು. ಇದನ್ನು ಜಾರಿ ಮಡುವುದು ಹೇಗೆ ಎಂಬ ಚರ್ಚೆ ಅವರಿಗೆ ಸಂಬಂಧಿಸಿದ ಅನೇಕ ಸಾಹಿತ್ಯಗಳಲ್ಲಿ ಕಾಣಿಸುತ್ತದೆ. ಅವು ನಮಗೆಲ್ಲ ಪರಿಚಿತ. ನಮ್ಮ ಅನನ್ಯತೆಯ ಪ್ರಶ್ನೆ ಎಲ್ಲಿಯವರೆಗೆ ಹೋಗಿದೆ ಅಂದರೆ ನಮ್ಮ ದೇಶಕ್ಕೆ ವಿಶಿಷ್ಟವಾದ ಧ್ವಜ, ಪ್ರಾಣಿ, ಪಕ್ಷಿ ಸಂಕೇತಗಳು ಇರುವಂತೆ ಅದೇ ಕಲ್ಪನೆಯನ್ನು ಅನುಸರಿಸಿದ ರಾಜ್ಯ ಕಲ್ಪನೆಗಳು ಕೂಡ ತಮ್ಮ ತಮ್ಮ ರಾಜ್ಯಗಳಿಗೂ ಇದನ್ನೇ ಅನ್ವಯಿಸಿಕೊಂಡಿವೆ, ಇದೇ ರೀತಿ ಈ ಕನ್ನಡ ತಾಯಿ ಕೂಡ. ನಮ್ಮ ದೇಶಕ್ಕೆ ಭಾರತಾಂಬೆ ತಾಯಿ ಅನ್ನುವಂತೆ ಕರ್ನಾಟಕಕ್ಕೆ ಭುವನೇಶ್ವರಿ ಆಗಿದ್ದಾಳೆ. ಇದು ಕರ್ನಾಟಕಕ್ಕೆ ಮಾತ್ರ ಸೀಮಿತವಲ್ಲ, ತಮಿಳುನಾಡಲ್ಲಿ ಮುರುಗನ್ ತಮ್ಮ ನಾಡ ದೇವತೆ ಎಂದು ಅವರು ಹೇಳಿಕೊಂಡರೆ ಕೇರಳಕ್ಕೆ ಅನಂತ ಪದ್ಮನಾಭಸ್ವಾಮಿ, ಆಂಧ್ರಕ್ಕೆ ನರಸಿಂಹನಾದರೆ ತೆಲಂಗಾಣಕ್ಕೆ ಮುತ್ಯಾಲಮ್ಮ, ಒರಿಸ್ಸಾಕ್ಕೆ ಜಗನ್ನಾಥ, ದೆಹಲಿಗೆ ಯೋಗಮಾಯಾ ಇತ್ಯಾದಿ.

ಹೀಗೆ ಇದೇ ಮಾದರಿಯನ್ನು ಪ್ರಾಣಿ ಪಕ್ಷಿಗಳಿಗೂ ಅನ್ವಯಿಸಿಕೊಳ್ಳಲಾಗಿದ್ದು ಇವುಗಳ ಮೂಲಕ ಪ್ರತೀ ರಾಜ್ಯಗಳು ತಮ್ಮ ಪ್ರತ್ಯೇಕತೆಯನ್ನು ಪ್ರತಿಪಾದಿಸಿಕೊಳ್ಳುತ್ತವೆ. ತಮಾಷೆ ಅಂದರೆ ಇಂಥ ಭಾವನೆ ನಮ್ಮ ದೇಶದ ಇತರರಿಂದ ನಾವೇ ಬೇರೆ ಎಂಬ ಭಾವನೆಯನ್ನು ಬಲಮಾಡುತ್ತ ಹೋಗುತ್ತದೆ, ಈ ಪಟ್ಟಿಯಲ್ಲಿ ಇನ್ನೂ ಯಾವುದೇ ರಾಜ್ಯ ಇದು ತಮ್ಮ ರಾಜ್ಯದ ಆಹಾರ ಸಂಕೇತ ಎಂದು ಸಾಧಿಸಿಲ್ಲವಾದ್ದರಿಂದ ನಮ್ಮ ರಾಜ್ಯದಲ್ಲೂ ಆ ವಿಷಯದ ಪ್ರಸ್ತಾಪ ಆಗಿಲ್ಲ, ನನ್ನ ಪ್ರಕಾರ ರಾಗಿ ಮುದ್ದೆ ನಮ್ಮ ರಾಜ್ಯದ ಆಹಾರ ಚಿಹ್ನೆ ಆಗಬೇಕು, ಎಲ್ಲ ವಿಷಯಗಳಿಗೂ ಆದಂತೆ ಇದಕ್ಕೂ ವಿರೋಧ ಬರುತ್ತದೆ ಆದರೂ ಚರ್ಚೆ ಆಗಲಿ, ನಮ್ಮ ಹಕ್ಕಿನ ಆಹಾರ ಸಂಕೇತ ನಮ್ಮ ರಾಜ್ಯಕ್ಕೆ ಇನ್ನೂ ನೇಮಕ ಅಗಿಲ್ಲ ಎಂಬುದು ನಮ್ಮ ಫುಲ್ ಟೈಂ ಹೋರಾಟಾರರ ಗಮನದಲ್ಲಿರಲಿ, ಯಾವಾಗಲಾದರೂ ಫ್ರೀ ಇದ್ದಾಗ ಹೋರಾಡಲು ಒಂದು ವಿಷಯ ಸಿಗುತ್ತದೆ ಎಂದು ಪ್ರಸ್ತಾಪಿಸಿದೆ ಅಷ್ಟೆ. ಇವೆಲ್ಲದರ ಮಧ್ಯೆ ನಾವು ನಮ್ಮ ದೇಶ, ನಾವೆಲ್ಲ ಒಂದು ಎಂದು ಉರು ಹೊಡೆಯುತ್ತೇವೆ. ಇದೇ ವಿರೋಧಾಭಾಸ. ಆಯಿತು, ಇದನ್ನೇ ಅನುಸರಿಸಿ ನನ್ನ ಪ್ರಕಾರ ಪ್ರತಿ ಜಿಲ್ಲೆ, ತಾಲ್ಲೂಕುಗಳೂ ಹೋಬಳಿ ಮಟ್ಟದವರೆಗೆ ತಮ್ಮದೇ ಧ್ವಜ, ನಾಡದೇವತೆ, ಆಹಾರ ಇತ್ಯಾದಿಗಳನ್ನು ಹೊಂದುವಂತಾದರೆ ಅನನ್ಯತೆ ಸಿಕ್ಕಾಪಟ್ಟೆ ಮೂಲಕ್ಕೆ ಹೋಗುವಂತಾಗುತ್ತದೆ. ಅಲ್ವ? 

      



Sunday, 26 January 2025

ಕೆ ಎಸ್ ನ. ೧೧೧- ಇಂದು ಅವರಿದ್ದಿದ್ದರೆ


"ಇಂದು ಅವರಿದ್ದಿದ್ದರೆ!!!" - ಈ ಮಾತು ನಮ್ಮನ್ನು ಅಗಲಿದ ಯಾರನ್ನಾದರೂ ಕುರಿತು ಚಿಂತಿಸಬಹುದಾದ ಮಾತು. ಆದರೆ ಪ್ರೀತಿಯ ಕವಿ ಕೆ ಎಸ್ ನ ಅವರ ವಿಷಯದಲ್ಲಿ ನಾನು ಈ ಮಾತು ಹೇಳಲು ಕಾರಣವಿದೆ.

ಅದು ೧೯೯೦ ರ ದಶಕ. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದೆ. ನನ್ನ ಹಿರಿಯ ಮಿತ್ರರಾದ, ಇಂದು ಕುವೆಂಪು ವಿವಿಯಲ್ಲಿ ಪ್ರಾಧ್ಯಾಪಕರಾದ ಡಾ, ಪ್ರಶಾಂತ್ ನಾಯಕ್ ಅವರು ಕೆಎಸ್ ನ ಅವರ ಕಾವ್ಯ ಕುರಿತು ಸಂಶೋಧನೆ ಮಾಡುತ್ತಿದ್ದರು. ನಾವು ಯಾವಾಗ ಎಂದರೆ ಆಗ ಕಂಡ ಕಂಡ ಕವಿ ಸಾಹಿತಿಗಳ ಮನೆಗೆ ಲಗ್ಗೆ ಇಡುತ್ತಿದ್ದೆವು. ಹೇಳಿ ಕೇಳಿ ಮೈಸೂರು ಸಾಹಿತಿಗಳ ತವರೂರು. ಅದು ಈ ಬುದ್ಧಿಯನ್ನು ಕಲಿಸಿತ್ತು. ಒಮ್ಮೆ ಮಾತನಾಡುವಾಗ ಮಿತ್ರ ಪ್ರಶಾಂತ್, ಕೆ ಎಸ್ ನ ಅವರ ಸಂದರ್ಶನ ಮಾಡಲು ಅವರ ಮನೆಗೆ ಹೋಗಬೇಕಿದೆ ನನ್ನ ನೆರವಿಗೆ ಬರ್ತಿಯಾ ಎಂದು ಕೇಳಿದ. ಸ್ವರ್ಗ ಸಿಕ್ಕ ಅನುಭವ. ನಡಿ ಎಂದೆ. ನಮ್ಮ ಜೊತೆ ಇಂದು ಕೆ ಆರ್ ನಗರದಲ್ಲಿ ಪ್ರಾಧ್ಯಾಪಕರಾದ ಮಿತ್ರ ಎಚ್ ಎನ್ ಮಂಜುರಾಜ್ ಸೇರಿಕೊಂಡರು. ಸಂದರ್ಶನಕ್ಕೆ ಅಗತ್ಯವಾದ ಕ್ಯಾಮೆರಾ, ಟೇಪ್ ರೆಕಾರ್ಡರ್ ಇತ್ಯಾದಿ ಸಿದ್ಧ ಮಾಡಿಕೊಂಡು ನಿಗದಿತ ದಿನ ಬೆಂಗಳೂರಿನ ಕತ್ರಿಗುಪ್ಪೆಯಲ್ಲಿದ್ದ ಕೆ ಎಸ್ ನ ಅವರ ಮನೆಗೆ ಯಾತ್ರೆ ಹೊರೆಟೆವು. ಅದೇನು ಸಂಭ್ರಮ ಅಂತೀರಿ? ಅವರನ್ನು ದೂರದಿಂದ ಸಾಕಷ್ಟು ಬಾರಿ ಕಂಡಿದ್ದ ನಮಗೆ ಕನಿಷ್ಠ ಹತ್ತಿರದಿಂದ ಖಾಸಗಿಯಾಗಿ ಅವರನ್ನು ಅವರ ಮನೆಯಲ್ಲೇ ಕಾಣುವ ಸೌಭಾಗ್ಯ ನೆನೆದು ಹತ್ತಾರು ಕನಸುಗಳು ದಾರಿ ಉದ್ದಕ್ಕೆ. ಅಂದು ಮೆಜೆಸ್ಟಕ್ ನಿಂದ ಬಸ್ ಹಿಡಿದು ನೇತಾಡಿಕೊಂಡು ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಬಳಿ ಇಳಿದು ಅವರ ಮನೆ ಹುಡುಕಿಕೊಂಡು ಹೋದ ಇಂಚಿಂಚೂ ನೆನಪಿದೆ ಮಾತ್ರವಲ್ಲ, ಕಣ್ಣಿಗೆ ಕಟ್ಟಿದಂತಿದೆ. ಅದು ಮಟ ಮಟ ಮಧ್ಯಾಹ್ನದ ಹೊತ್ತು, ಹೊಟ್ಟೆ ಚುರ್ ಅನ್ನುತ್ತಿತ್ತು. ಮಂಜುರಾಜ್ ತಾಳಿ ಏನಾದ್ರೂ ತಿನ್ನೋಣ ಎಂದು ಹತ್ತಿರದ ಹೊಟೇಲ್ ಒಂದಕ್ಕೆ ಎಳೆದರು. ಇಡ್ಲಿ ದೋಸೆ, ಕಾಫಿ ಹೊಡೆದು ಹೊಟ್ಟೆ ಸ್ವಲ್ಪ ತಂಪಾದ ಮೇಲೆ ಮುಂದಡಿ ಇಟ್ಟೆವು. ಅವರ ಮನೆ ತಲುಪುವುದು ಕಷ್ಟವಾಗಲಿಲ್ಲ, ಅವರಿಗೆ ಆಗಲೇ ಕರೆ ಮಾಡಿ ಬರುತ್ತಿರುವುದಾಗಿ ಹೇಳಿದ್ದೆವು. ವಯಸ್ಸಾದ ಅವರು ಕುರ್ಚಿಯೊಂದರ ಮೇಲೆ ಎಲೆ ಅಡಕೆ ಅಗೆಯುತ್ತ, ಮೂಗು ತುಂಬ ನಾಸಿಪುಡಿ ಏರಿಸಿಕೊಂಡು ನಗುಮುಖದಿಂದ ಕುಳಿತಿದ್ದರು. ಕಂಡ ಕೂಡಲೇ ದೇವರನ್ನು ಕಂಡಂತೆ ಉದ್ದ ಅಡ್ಡ ಬಿದ್ದೆವು ಅವರು ಏಳಿಪ್ಪಾ ಅಂದರು. ಕುಳಿತುಕೊಳ್ಳಲು ಹೇಳಿದರು ಅವರ ಬಳಿ ಕುಳಿತೆವು. ಪ್ರಶಾಂತ್ ತಮ್ಮ ಅಧ್ಯಯನದ ಉದ್ದೇಶ ವಿಧಿ ವಿಧಾನ ವಿವರಿಸುತ್ತಿದ್ದರು. ತಾಳಿ ಅಂದವರೇ ತಮ್ಮ ಬಾಳ ಸಂಗಾತಿ ವೆಂಕಮ್ಮನವರನ್ನು ಪ್ರೀತಿಯಿಂದ ಯಾವುದೋ ಹೆದರಲ್ಲಿ ಕೂಗಿದರು. ಅವರು ಬಂದರು. ತರ್ತೀಯಾ ಅಂದರು. ಅವರು ಅಡುಗೆ ಮನೆಗೆ ಹೋದವರೇ ನಾಲ್ಕು ಬಟ್ಟಲು ತುಂಬ ಚಕ್ಕುಲಿ, ಕೋಡುಬಳೆ, ಮೈಸೂರು ಪಾಕು ಇತ್ಯಾದಿಗಳನ್ನು ಒಪ್ಪವಾಗಿ ಎಲ್ಲದರಲ್ಲೂ ಸಮನಾಗಿಟ್ಟುಕೊಂಡು ಬಂದರು. ಅನಂತರ ಬಿಸಿ ಬಿಸಿ ಕಾಫಿ ಬಂತು. ಎಲ್ಲವನ್ನೂ ಕಂಡು ತಿನ್ನುವ ಬಯಕೆ ಆದರೂ ಆಗಲೇ ಸ್ವಲ್ಪ ಹೊಟ್ಟೆ ತುಂಬಿಸಿಕೊಂಡಿದ್ದ ನಮಗೆ ಪರಸ್ಪರ ಮುಖ ನೋಡುವುದು ಬಿಟ್ಟರೆ ಬೇರೆ ಮಾರ್ಗ ಕಾಣಲಿಲ್ಲ, ಅಷ್ಟರಲ್ಲಿ ಪ್ರಶಾಂತ್ ಅಮ್ಮಾ ತಾಳಿ ನಮಗೆ ಒಂದೇ ತಟ್ಟೆ ಸಾಕು ಅಂದವರೇ ಉಪಾಯವಾಗಿ ಎರಡನ್ನು ಹಿಂದೆ ಕಳಿಸಿದರು. ಸದ್ಯ ಅಂದುಕೊಂಡೆ. ಅನಂತರ ಅವರ ಮನೆಗೆ ಅನೇಕ ಬಾರಿ ಹೋಗಿದ್ದಿದೆ, ಯಾವಾಗಲೇ ಹೋಗಿ ಅಲ್ಲಿ ಮೊದಲು ಇಂಥ ಕಿರು ಆತಿಥ್ಯ ಇದ್ದೇ ಇರುತ್ತಿತ್ತು. ಅನಂತರ ಮಾತುಕತೆ. ತಾಯಿ ವೆಂಕಮ್ಮನವರಂತೂ ಅನ್ನಪೂರ್ಣೆ. ಇಷ್ಟೆಲ್ಲ ಆದಮೇಲೆ ಹೇಳಿ ಅಂದರು. ನಾವು ಮಾತಾಡಲು ಶುರು ಮಾಡಿದೆವು ಪ್ರಶಾಂತ್ ಒಂದೊಂದೇ ಪ್ರಶ್ನೆಗಳನ್ನು ತಮ್ಮ ಅಧ್ಯಯನಕ್ಕೆ ಬೇಕಾಗುವಂತೆ ಕೇಳುತ್ತಾ ಹೋದರು ಅವರು ಸಮಾಧಾನದಿಂದ ಉತ್ತರಿಸುತ್ತಾ ಹೋದರು, ನಡು ನಡುವೆ ಅವರ ನಸ್ಯ, ಏನೇನೋ ಹರಟೆ, ಮತ್ತೆ ಅಮ್ಮ ಬಾಳೆ ಹಣ್ಣು ತಂದರು. ಒಟ್ಟಿನಲ್ಲಿ ಅದೊಂದು ಸಮಾರಾಧನೆ. ನಮ್ಮನ್ನೆಲ್ಲ ಆತ್ಮೀಯವಾಗಿ ನಾವೆಲ್ಲ ಯಾವ ಮೂಲದವರು ಏನೇನು ಮಾಡುತ್ತಿದ್ದೇವೆಂದು ವಿಚಾರಿಸಿ ಆಯ್ತಪ್ಪಾ ಚೆನ್ನಾಗಿ ಓದಿ ಎಂದು ಹಾರೈಸಿದರು. ಅವರೊಂದಿಗೆ ಒಂದಿಷ್ಟು ಫೋಟೋ ತೆಗೆಯಿಸಿಕೊಂಡೆವು. ಅದಿನ್ನೂ ಹಸಿ ನೆನಪು. ಅವರ ಮುಗ್ಧ ಮುಖ ಮತ್ತು ನಗು ಫೋಟೋದಲ್ಲಿ ಇನ್ನೂ ಹಾಗೆಯೇ ಇದೆ. ಕಾವ್ಯದ ಬಗ್ಗೆ ಸಂಭ್ರಮದಿಂದ ಮಾತಾಡಿದರು, ಅಲ್ರಪ್ಪಾ ಅದೇನು ನವ್ಯ ಅಂತಲ್ಲಾ, ಅದರ ಆರಂಭ ಅಡಿಗರು, ಗೋಕಾಕರಿಂದ ಆಯಿತು ಅವರೇ ಮೊದಲು ಬರೆದವರು ಅಂತ ಹೇಳ್ತೀರಲ್ಲಾ, ಯಾಕೆ ನನ್ನ ಗಡಿಯಾರದಂಗಡಿ ಮುಂದೆ ಪದ್ಯ ಓದಿಲ್ಲವಾ? ಅದನ್ನು ಬಹಳ ಹಿಂದೆಯೇ ಬರೆದಿದ್ದೇನೆ ಅಂದರು. ನಾವು ತಲೆ ಆಡಿಸಿದೆವು.    

ವಿಷಯ ಏನೆಂದರೆ ನನಗೆ ಈಚೆಗೆ ಬಹಳ ಕಾಡುವ ಸಂಗತಿ ಎಂದರೆ ಕನ್ನಡ ಕಾವ್ಯ ರಚನೆ ಇಂದು ಹಿಡಿದಿರುವ ದಾರಿಕಂಡಾಗಲೆಲ್ಲ ಇಂದು ಕೆ ಎಸ್ ನ ಇದ್ದಿದ್ದರೆ, ಅಡಿಗರು ಇದ್ದಿದ್ದರೆ, ಕುವೆಂಪು ಇದ್ದಿದ್ದರೆ ಅವರ ಪ್ರತಿಕ್ರಿಯೆ ಹೇಗೆ ಇರುತ್ತಿತ್ತು ಎಂಬ ಕಡೆ ಹೊರಳುತ್ತದೆ. ಈಗ ಕೆ ಎಸ್ ನ ಅವರ ಸಂದರ್ಭ. ಅವರ ಪ್ರೇಮ ಕಾವ್ಯ ಮೊದಲಾದ ವಸ್ತುಗಳ ರಚನೆಯನ್ನು ಇಂದಿನ ಯಾವ ಕವಿಗಳ ರಚನೆಗಳ ಜೊತೆಗೂ ಇಡಲಾಗದು. ಅವರ ರಚನೆಯಲ್ಲಿರುತ್ತಿದ್ದ ತಾಳ ಮೇಳ, ಲಯ, ಗೇಯತೆ ಗಳೆಲ್ಲ ಅವರೊಂದಿಗೇ ಹೋಗಿಬಿಟ್ಟಿವೆ. ಇಂದಿನ ಕಾವ್ಯ ಅದೇನು ಕಾವ್ಯವೋ ಅದ್ಯಾಕೆ ಹೀಗೆ ಬರೆಯುತ್ತಾರೋ ಅದನ್ನೇಕೆ ಪದ್ಯ ಅನ್ನಬೇಕು ಎಂದೇ ತಿಳಿಯುವುದಿಲ್ಲ, ನವ್ಯರ ವಾದದಂತೆ ಕಾವ್ಯ ಎಲ್ಲವನ್ನೂ ಬಿಚ್ಚಿಡಬಾರದು, ತಲೆ ತಿನ್ನಬೇಕು, ಅಷ್ಟಷ್ಟೇ ಬಿಟ್ಟುಕೊಡಬೇಕು. ಹಾಡುವುದಿರಲಿ, ಓದುವುದಕ್ಕೂ ಓದುಗ ಫಜೀತಿ ಪಡಬೇಕು, ಆಗ ಅದು ಕಾವ್ಯವಾಗುತ್ತದೆ, ಹಾಗಾಗಿ ಆಧುನಿಕ ಕಾವ್ಯದಲ್ಲಿ ಇಡಿಯಾದ ಪದಗಳನ್ನು ಎಲ್ಲೆಲ್ಲೋ ಒಡೆದು ತೋರಿಸಿ ಬೇಕಿದ್ದರೆ ಅರ್ಥ ಹುಡುಕಿಕೊಳ್ಳಿ ಅನ್ನಲಾಗುತ್ತದೆ. ಇಲ್ಲಿ ಇಂದಿನ ಹೊಸ ಕವಿಗಳ ಕಾವ್ಯಗಳ ಕೆಲವು ಸಾಲುಗಳನ್ನು ಸುಮ್ಮನೇ ಸ್ಯಾಂಪಲ್ಲಿಗೆ ಕೊಟ್ಟಿದ್ದೇನೆ:

"ಹಲವು ವಸಂತಗಳ ಕಂಡ ಜೀವ, ಬೆತ್ತಲು ದೇಹ, ಆಕಾಶ ನೋಡುತ್ತಾ ನಿಂತಿದೆ, ಗೆದ್ದಲು ಹುಳಕ್ಕಂತೂ ಜನ್ಮಾಂತರದ ಹಸಿವು."

"ನೀನಿ ದುಂಬಿಯಾದರೆ ನಾನು ಹೂ ಆಗುವೆ, ನೀನು ದುಂಬಿಯಾದರೆ ನಾ ಹೂ ಆಗುವೆ, ಆದರೂ ನೀನೇಕೆ ಹೋವಿಂದಾ ಹೂವಿಗೆ ಹಾರಿ ಹೋಗುವೆ."

"ಹುಡುಗಿಯರೇ ಹಾಗೆ ತುಂಬಾ prompt ಆಗೇ ಇರ್ತಾರೆ.. ಹುಡುಗಿಯರೇ ಹಾಗೆ  ತುಂಬಾ prompt ಆಗೇ ಇರ್ತಾರೆ. ಪರ್ಸ್ ಕಾಲಿ ಆಗುವತನಕ."

"ಜೊತೆ ಜೊತೆಯಾಗಿಯೇ ಇರ್ತಾರೆ. ಅವಳನ್ನೇ ನೋಡ್ತೀನಿ ಅಂತ  complaint ಕೊಡ್ತಾರೆ. ಅವಳನ್ನೇ ನೋಡ್ತೀನಂತ  complaint  ಕೊಡ್ತಾಳೆ, ಹಾಗಾದರೆ ನಾ ಹೇಳಿದಾಗಲೆಲ್ಲ ನನ್ನ ನೋಡೇ ಇರ್ತಾಳೆ."

"ನೆನೆದು ನೆನೆದು ನೀರಿನಲ್ಲಿ  ಯಾವ ಕಲ್ಲೂ ಮೆತ್ತಗಾಗಲಿಲ್ಲ, ನೆನೆದು ನೆನೆದು ನೀರಿನಲ್ಲಿ  ಯಾವ ಕಲ್ಲೂ ಮೆತ್ತಗಾಗಲಿಲ್ಲ, ಒಂದೇ ಒಂದು ಬಾರಿ ನಿನ್ನ ನೆನೆದು ನಾನೆಷ್ಟು ಮೆತ್ತಗಾದೆನಲ್ಲ, ನಾನೇಕೆ ಕಲ್ಲಾಗಲಿಲ್ಲಾ"

ಇಂಥ ಕಾವ್ಯಗಳನ್ನು ಓದಿದಾಗ ಇವೆಲ್ಲ ಯಾವ ದೃಷ್ಟಿಯಿಂದ ಕಾವ್ಯ? ಯಾವ ಸೀಮೆ ಪದ್ಯ? ಇವನ್ನೆಲ್ಲ ಪದ್ಯ ರೂಪದಲ್ಲೇ ಹೇಳಬೇಕೇ? ಇಂಥ ಭಾವನೆಗಳನ್ನು ವ್ಯಕ್ತ ಮಾಡಲು ಪ್ರಬಂಧ, ಗದ್ಯದಂಥ ಪ್ರಕಾರಗಳಿವೆಯಲ್ಲ ಎಂದು ಅನಿಸದೇ ಇರದು. ಆದರೆ ಇವೆಲ್ಲ ಪದ್ಯಗಳೇ. ಕಾವ್ಯ ಹೀಗೆಯೇ ಇರತಕ್ಕದ್ದು ಎಂಬ ನಿಯಮವಿಲ್ಲ, ಅದರಲ್ಲೂ ಇವೆಲ್ಲ ಒಂದೊಂದು ಪ್ರಯೋಗಗಳು ಅನ್ನಿ. ಅವುಗಳಲ್ಲಿ ಒಂದಿಷ್ಟು ಭಾವಗಳಿವೆ, ಏನೇನೋ ಚಿತ್ರಗಳಿವೆ, ಕಲ್ಪನೆಗಳಿವೆ, ಹಾಗಾಗಿ. ಆಯಿತು ನಮ್ಮಂಥ ಕಳೆಯ ಕಾವ್ಯಗಳ ಪ್ರಭಾವಕ್ಕೊಳಗಾಗಿ ಕಾವ್ಯವೆಂದರೆ ಅದು ನಮ್ಮ ಮನದಲ್ಲಿ ಗುನುಗುವಂತಿರಬೇಕು, ಒಂದು ಹಾಡಿನ ಲಯಕ್ಕೆ ಸಿಗಬೇಕು, ಇತ್ಯಾದಿ ಕಲ್ಪನೆಗಳಿರುತ್ತವೆ, ಮೊದಲ ಉದಾಹರಣೆ ವ್ಯಕ್ತಿಯ ಸ್ವಂತಿಕೆಯ ಸಂಕೇತ ಚಿತ್ರಿಸುವುದಾದರೆ ಎರಡನೆಯ ಉದಾಹರಣೆ ಒಂದು ಬಗೆಯ ಪ್ರೀತಿಯ ಅಭಿವ್ಯಕ್ತಿ. ಇಂಥ ಪ್ರೇಮ ಕಾವ್ಯಗಳು ಇಂದಿನವು. ಇಂಥ ಪ್ರೇಮ ಕಾವ್ಯಗಳನ್ನು ಓದಿ ಕೆ ಎಸ್ ನ ಮೊದಲಾದ ಹಿರಿಯ ಕವಿಗಳು ಏನು ಅನ್ನುತ್ತಿದ್ದರು ಎಂದಷ್ಟೇ ನನ್ನ ಕುತೂಹಲ. ಇದು ಇಂದಿನ ಕಾವ್ಯ ರಚನೆಯ ದಾಟಿ. ಕನ್ನಡ ಕಾವ್ಯಗಳೆಂದು ಇಂದು ಕರೆಯುವ ಭೀಕರ ಸ್ವರೂಪದ ಪದ್ಯಗಳಿಗೆ ಕೊರತೆ ಇಲ್ಲ. 

ಆದರೆ ನಾವು ಬಯಸುವಂಥ ಗೇಯಗುಣದ ಪದ್ಯಗಳು ಇಲ್ಲವೆಂದಲ್ಲ, ಅವುಗಳನ್ನು ನಾವು ಭಾವ ಗೀತೆಗಳು ಎಂಬ ಉಪ ಪ್ರಕಾರದಲ್ಲಿಟ್ಟು ನೋಡುತ್ತೇವೆ, ಅವುಗಳಿಗೆ ಪ್ರತ್ಯೇಕ ಜಾಗ ಕೊಟ್ಟಿದ್ದೇವೆ. ಕಾವ್ಯದಲ್ಲಿ ಸಮಾನತೆ ಪ್ರತಿಪಾದಿಸಿದರೂ ಕಾವ್ಯವನ್ನೇ ಬೇರೆ ಬೇರೆ ಮಾಡಿದ್ದೇವೆ. ಅದಿರಲಿ. ಇಂಥ ಪದ್ಯಗಳನ್ನು ಕಷ್ಟಪಟ್ಟು ಓದಿದರೂ ಅವು ತಮ್ಮೊಳಗೆ ನಮ್ಮನ್ನು ಬಿಟ್ಟುಕೊಳ್ಳುವುದು ಕಷ್ಟ. ಇಂಥವೇ ಇಂದಿನ ಬಹುಪಾಲು ಕಾವ್ಯಗಳು. ಇವುಗಳ ಮೇಲೆ ಪೂರ್ವ ಸೂರಿಗಳ ಕಾವ್ಯಾಧ್ಯಯನಕ್ಕಿಂತ ಆಧುನಿಕ ಜನಪ್ರಿಯ ಸಿನಿಮಾ ಮತ್ತಿತರ ಮಾಧ್ಯಮಗಳ ಪ್ರಭಾವ ಹೆಚ್ಚಾಗಿರುತ್ತದೆ. ಇಂಥ ಕಾಲದಲ್ಲಿ ಕೆ ಎಸ್ ನ ಅವರಂಥವರ ಕೊರತೆ ತುಂಬ ಕಾಡುತ್ತದೆ, ಈಗ ಅವರಿದ್ದರೆ ಅವರು ಕಾವ್ಯ ರಚನೆ ಮಾಡುತ್ತಿದ್ದರೇ ಮಾಡಿದರೂ ಅವರ ಕಾವ್ಯದ ಹರಿವು ಹೇಗೆ ಇರುತ್ತಿತ್ತು? ಜಯಂತ್ ಕಾಯ್ಕಿಣಿ ಅವರ ಕಾವ್ಯದ ಸ್ವರೂಪದಂತೆ ಇನ್ನೂ ಗಟ್ಟಿಯಾಗಿ ಇರುತ್ತಿತ್ತಾ ಎಂದೆಲ್ಲ ಅನಿಸುತ್ತದೆ. ಇದನ್ನು ಕಾಣುವ ಭಾಗ್ಯ ನಮಗಿಲ್ಲ ಎಂದು ಸುಮ್ಮನಾಗಬೇಕು.  ಆದರೆ ಹೊಸ ಗನ್ನಡದಲ್ಲಿ ಇಂದು ಸುಂದರ ಭಾವಗೀತೆ ಬರೆಯುವ ಕವಿಗಳಿಗೆ, ಅಂಥ ಕಾವ್ಯಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ, ಉದಾಹರಣೆಗೆ ಹಿರಿಯರಾದ ಎಚ್ ಎಸ್ ವೆಂಕಟೇಶ ಮೂರ್ತಿ, ಸುಬ್ರಾಯ ಚೊಕ್ಕಾಡಿ, ಅಂತೆಯೇ ಯುವ ಕವಿಗಳಾದ ಸಂತೋಷ್ ಚೊಕ್ಕಾಡಿ, ವಾಸುದೇವ ನಾಡಿಗ್ ಮೊದಲಾದವರು ಸಂಭ್ರಮಿಸುವ ತುಂಬ ಕವಿತೆಗಳನ್ನು ಕೊಟ್ಟಿದ್ದಾರೆ. ಹಾಗೆ ನೋಡಿದರೆ ಇಂದಿನ ಕನ್ನಡ ಕಾವ್ಯ ವೈವಿಧ್ಯದಿಂದ ಸಮೃದ್ಧವಾಗಿದೆ. ಇದಕ್ಕೆ ಹಿರಿಯ ಕವಿಗಳ ಉತ್ತಜನ ಸಾಕಷ್ಟಿದೆ.

ಅಂದ ಹಾಗೆ ಕೆ ಎಸ್ ನ ಅವರು ಕೇವಲ ಕವಿ ಮಾತ್ರ ಆಗಿರಲಿಲ್ಲ, ಅವರು ವಿಮರ್ಶೆ ಬರೆದಿದ್ದಾರೆ, ಪ್ರಬಂಧ ಕೂಡ ರಚಿಸಿದ್ದಾರೆ. ಮಾರಿಯಕಲ್ಲು, ದಮಯಂತಿ, ಉಪವನ ಮೊದಲಾದ ಗದ್ಯಗಳು ಸೊಗಸಾಗಿವೆ. ಆದರೆ ಅವರ ಪ್ರಧಾನ ಕೃಷಿ ಕಾವ್ಯ, ಅದರಲ್ಲೂ ಭಾವಗೀತೆ. ಅವರು ಕಾವ್ಯದಲ್ಲಿ ತಮ್ಮನ್ನು ತಾವು ಹೇಗೆ ಒಗ್ಗಿಸಿಕೊಳ್ಳುತ್ತಿದ್ದರೆಂದು ಅವರ ಮೊದಲ ಜನಪ್ರಿಯ ಸಂಕಲನ ಮೈಸೂರು ಮಲ್ಲಿಗೆ ಹಾಗೂ ಕೆಲವು ಕಾಲಾನಂತರ ಬಂದ ಶಿಲಾಲತೆ ಸಂಕಲನಗಳನ್ನು ನೋಡಿದರೆ ತಿಳಿಯುತ್ತದೆ. ಹಾಗಾಗಿ ಅವರು ಇಂದಿನ ಸಂದರ್ಭದಲ್ಲಿ ನಮ್ಮಂದಿಗೆ ಇದ್ದಿದ್ದರೆ ಹೊಸದನ್ನು ಅಳವಡಿಸಿಕೊಳ್ಳುತ್ತಿದ್ದರು ಮಾತ್ರವಲ್ಲ, ಹೊಸ ದಿಕ್ಕನ್ನೂ ಕಾಣಿಸುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಅವರಿಗೆ ನಿರಂತರ ನಮನ.

ಅವರು ಮೈ ಸೂರಿನಲ್ಲಿ ೧೯೯೦ರಲ್ಲಿ ನಡೆದ ೬೦ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದಾಗ ಮಿತ್ರ ವಾಸುದೇವ ನಾಡಿಗ್ ಮತ್ತು ನಾವು ಅರಮನೆ ಆವರಣದ ಆ ಜಾಗ ಬಿಟ್ಟು ಮೂರು ದಿನ ಕದಲಲಿಲ್ಲ. ಅವರೆಂದರೆ ಅಂಥ ಅಭಿಮಾನ ಇತ್ತು, ಈಗಲೂ ಇದೆ. ಅವರು ಅಜರಾಮರ.

Friday, 24 January 2025

ಕೇಂದ್ರ ಮುಂಗಡಪತ್ರ ನಿರೀಕ್ಷೆಗಳು -೨೦೨೫


ಇನ್ನೇನು ನಮ್ಮ ದೇಶದ  ಕೇಂದ್ರ ಮುಂಗಡ ಪತ್ರ ಇದೇ ಫೆಬ್ರವರಿ ಒಂದರಂದು ಮಂಡನೆ ಅಗಲಿದೆ. ಈ ಹಿನ್ನೆಲೆಯಲ್ಲಿ ಇದರ ಮೇಲೆ ದೇಶದ ಎಲ್ಲರ ನಿರೀಕ್ಷೆ ಇದೆ. ಇಂಥ ನಿರೀಕ್ಷೆಗಳನ್ನು ಕುರಿತು ಗಮನಹರಿಸಬಹುದು. ಸದ್ಯ ನಮ್ಮ ದೇಶದಲ್ಲಿ ತೆರಿಗೆ ಇಲ್ಲದ ವಿಷಯಗಳೆಂದರೆ ಉಸಿರಾಡುವ ಗಾಳಿ ಮತ್ತು ನಿಮ್ಮ ನಿಮ್ಮ ದೇಹದ ತೂಕಗಳು ಮಾತ್ರ ಅನ್ನುವ ಪರಿಸ್ಥಿತಿ ಇದೆ. ಈ ಮಟ್ಟಿಗೆ ಕಾಲಾನುಕಾಲದಲ್ಲಿ ಎಲ್ಲ ವಿಷಯಗಳ ಮೇಲೂ ತೆರಿಗೆ ವಿಧಿಸುತ್ತ ಈ ಮಟ್ಟಿಗೆ ಬಂದು ನಿಂತಿದ್ದೇವೆ. ಒಂದು ದೃಷ್ಟಿಯಲ್ಲಿ ಇದು ಅತಿರೇಕದ ಹೇಳಿಕೆ ಅನಿಸಿದರೂ ಕೇಂದ್ರ ಬಿಟ್ಟರೂ ರಾಜ್ಯ ಸರ್ಕಾರಗಳು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಎಲ್ಲ ಬಗೆಯ ವಿಷಯಗಳ ಕಡೆ ಗಮನ ಹರಿಸಿ ತೆರಿಗೆ ವಿಧಿಸುತ್ತವೆ. ಆದರೆ ಎರಡೂ ಮುಂಗಡಪತ್ರಗಳು ಕಣ್ಣುಹಾಯಿಸದ ತೆರಿಗೆ ರಹಿತ ಕ್ಷೇತ್ರವೆಂದರೆ ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಗೃಹೋದ್ಯಮಗಳು. ಇದರಲ್ಲಿ ಕೃಷಿ ಉತ್ಪಾದನೆ, ಹಣ್ಣು ತರಕಾರಿಗಳ ಬೆಳೆ ಮತ್ತು ಅವುಗಳ ಮಾರಾಟ, ಕೃಷಿ ಭೂಮಿಯ ಬಾಡಿಗೆ, ಕೃಷಿ ಉದ್ದೇಶದ ಭೂಮಿ ಅಥವಾ ಕಟ್ಟಡದಿಂದ ಬರುವ ಆದಾಯ, ಕೃಷಿ ಭೂಮಿಯ ಕ್ರಯ ವಿಕ್ರಯದಿಂದ ಬರುವ ಆದಾಯಗಳು ಸೇರಿವೆ, ಆದರೆ ಒಟ್ಟೂ ಕೃಷಿ ಆದಾಯ ಐದು ಸಾವಿರಕ್ಕಿಂತ ಕಡಿಮೆ ಇದ್ದರೆ ಅದಕ್ಕೆ ಯಾವುದೇ ಬಗೆಯ ತೆರಿಗೆ ಅನ್ವಯ ಆಗುವುದಿಲ್ಲ,ಇದಕ್ಕಿಂತ ಕೃಷಿ ಆದಾಯ ಹೆಚ್ಚಾದರೆ ಅದು ಪರಿಶೀಲನೆಗೆ ಅರ್ಹವಾಗಿದೆ. ಜೊತೆಗೆ ೧೯೬೧ರ ಆದಾಯ ತೆರಿಗೆ ನಿಯಮದಂತೆ ವ್ಯಕ್ತಿಗೆ ಅತನ ಮದುವೆಯಂಥ ಶುಭ ಸಮಾರಂಭದಲ್ಲಿ ಆತನ ನೆಂಟರು ಕೊಟ್ಟ ಉಡುಗೊರೆ ಕೂಡ ತೆರಿಗೆಯಿಂದ ವಿನಾಯ್ತಿ ಪಡೆದಿದೆ. ಅಂತೆಯೇ ಪಿತ್ರಾರ್ಜಿತ ಆಸ್ತಿಯ ಆದಾಯ, ಶೈಕ್ಷಣಿಕ, ವೈದ್ಯಕೀಯ ಸಂಸ್ಥೆಗಳ ಉಡುಗೊರೆ, ಪ್ರಾಚೀನ ವಸ್ತುಗಳು, ಚಿತ್ರಗಾರಿಕೆ, ಕಲಾವಸ್ತುಗಳುಮೊದಲಾದವುಗಳ ಆದಾಯಗಳನ್ನು ಆದಾಯತೆರಿಗೆಯಿಂದ ಹೊರಗೆ ಇಡಲಾಗಿದೆ. ವಿಧಿ ೫೬ರ ಅಡಿಯಲ್ಲಿ ಆರ್ಥಿಕ ವರ್ಷದಲ್ಲಿ ಅಬ್ವಯಿಸುವ ೫೦ ಸಾವಿರ ರೂವರೆಗಿನ ಉಡುಗೊರೆಗಳ ಪಟ್ಟಿಯನ್ನು ಕೊಡಲಾಗಿ ಹಣ ಮಾತ್ರವಲ್ಲದೇ ಚರ ಮತ್ತು ಸ್ಥಿರ ಆಸ್ತಿಗಳ ಪಟ್ಟಿ ಕೊಡಲಾಗಿದೆ.ಅಂತೆಯೇ ಇದರಲ್ಲಿ  ವಿದ್ಯಾರ್ಥಿವೇತನ, ಪ್ರಶಸ್ತಿಯ ಹಣಗಳು ಸೇರಿವೆ. ನಮ್ಮ ದೇಶದಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳು ಶಿಕ್ಷಣಕ್ಕಾಗಿ ವ್ಯಯಿಸುವ ಹಣಕ್ಕೆ ಆದಯ ತೆರಿಗೆ ವಿನಾಯ್ತಿ ಕೊಡಲಾಗಿದೆ. ಅಂತೆಯೇ ೧೦ (೧೭ಎ) ವಿಧಿಯಂತೆ ವಿದ್ಯಾರ್ಥಿ ಪಡೆಯುವ ಬಹುಮಾನ ತೆರಿಗೆವಿನಾಯ್ತಿ ಪಡೆಯುತ್ತದೆ.

ಗಮನಿಸಬೇಕಾದ ಸಂಗತಿ ಇನ್ನೊಂದಿದೆ. ಕೃಷಿ ಮೂಲದ ಆದಾಯಕ್ಕೆ ತೆರಿಗೆ ಇಲ್ಲ ಎಂಬುದನ್ನು ಅದು ಆಹಾರ ಬೆಳೆಗೆ ಮಾತ್ರ ಅನ್ವಯ ಎಂಬ ನಿಯಮ ತರಬೇಕು. ಏಕೆಂದರೆ ದೇಶದಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣಕ್ಕೆ ಅನುಗುಣವಾಗಿ ಕೃಷಿ ಯೋಗ್ಯ ಭೂಮಿ ಏರುವುದಿಲ್ಲ, ಹೋಗಲಿ ಅದು ಗಮಬಾರ್ಹವಾಗಿ ಕುಸಿಯುತ್ತಿದೆ. ಒಂದೋ ಅದು ವಾಣಿಜ್ಯ ಬೆಳೆ ಭೂಮಿಯಾಗಿ ಪರಿವರ್ತನೆ ಆಗುತ್ತಿದೆ ಅಥವಾ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಹೋಗುತ್ತಿದೆ. ಇದನ್ನು ತಡೆದು ಆಹಾರ ಬೆಳೆಗಳ ಉತ್ಪನ್ನಕ್ಕೆ ಉತ್ತೇಜನ ಕೊಡಲು ಆಹಾರ ಬೆಳೆ ಇಲ್ಲದಿದ್ದಲ್ಲಿ ಅಂಥ ಆದಾಯಕ್ಕೆ ವೈಜ್ಞಾನಿಕ ಆಧಾರದಲ್ಲಿ ತೆರಿಗೆ ವಿಧಿಸಬೇಕು. ಜೊತೆಗೆ ಸ್ಥಳೀಯ ಅಥವಾ ಪ್ರಾದೇಶಿಕ ಬೆಳೆಗಳಿಗೆ ಉತ್ತೇಜನ ಕೊಡುವಂತಾಗಬೇಕು, ಉದಾಹರಣೆಗೆ ಕರ್ನಾಟಕದ ಕೆಲವೇ ಭಾಗಗಳಲ್ಲಿ ಬೆಳೆಯಲಾಗುತ್ತಿರುವ ಸಿರಿಧಾನ್ಯಗಳಿಗೆ ವಿಶೇಷ ಪ್ರೋತ್ಸಾಹ ಕೊಡಬೇಕು. ೨೦೨೪- ೨೫ರ ಕೃಷಿ ವರ್ಷದ ಸಾಲಿನಲ್ಲಿ ಗೋದಿ ಮತ್ತು ಅಕ್ಕಿಗಳ ಉತ್ಪಾದನೆ ಮಾತ್ರ ೩೩೨.೨೨ ಮಿಲಿಯನ್ ಟನ್ ಉತ್ಪಾದನೆ ಆಗಿ ದಾಖಲೆ ಸ್ಥಾಪಿಸಿದೆ. ಆದರೆ ಉಳಿದ ಬೆಳೆಗಳ ಉತ್ಪಾದನೆ ತೆವಳುತ್ತಿದೆ, ಇದನ್ನು ಮೊದಲು ತಪ್ಪಿಸುವ ಕೆಲಸ ಈಗಿಂದಲೇ ನಡೆಯಬೇಕು. ಜೊತೆಗೆ ವಿದ್ಯಾವಂತ ನಿರುದ್ಯೋಗಿಗಳು ಕೃಷಿ ಕ್ಷೇತ್ರಕ್ಕೆ ಬರುವಂತೆ ಉತ್ತೇಜನ ಕೊಡಬೇಕು ಇದಕ್ಕಾಗಿ ನಿರ್ದಿಷ್ಟ ಯೋಜನೆ ರೂಪಿಸಬೇಕು, ಇದರಿಂದ ಯುವಕರಿಗೆ ಹೊಸ ಹುರುಪು ಬರುವುದಲ್ಲದೇ ಕೃಷಿಗೂ ಹೊಸ ಬಲ ಬರುತ್ತದೆ ಇಂಥ ಯೋಜನೆ ರಾಜ್ಯ ಮುಂಗಡಗಳಲ್ಲೂ ಆಗಬೇಕು. ಖಾಲಿ ಕುಳಿತ ನಿರುದ್ಯೋಗಿಗಳಿಗೆ ಹಣ ಕೊಟ್ಟು ಉತ್ತೇಜಿಸುವ ಬದಲು ಕೃಷಿಗೆ ಬರುವ ಯುವಕರಿಗೆ ಮಾಸಿಕ ಇಷ್ಟೆಂದು ಪ್ರೋತ್ಸಾಹಧನ ಕೊಡಬೇಕು, ಅವರ ಉತ್ಪಾದನೆಗೆ ಸ್ಪರ್ಧಾತ್ಮಕತೆ ಬರುವಂತೆ ಮಾಡಬೇಕು. ಇಂಥ ಕೆಲಸ ಇಷ್ಟು ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಡೆದಿಲ್ಲ. ಇದರಿಂದ ಮುಂಗಡ ಪತ್ರಕ್ಕೆ ಹೊಸ ಸ್ವರೂಪ ಬರುತ್ತದೆಯಲ್ಲದೇ ದೇಶದ ಭದ್ರ ಬುನಾದಿಗೂ ಮುನ್ನುಡಿ ಆಗುತ್ತದೆ. ಏಶದ ಭವಿಷ್ಯ ಬದಲಿಸಲು ಇಂಥ ಪ್ರಯೋಗಗಳು ನಡೆಯುವ ಅಗತ್ಯವಿದೆ.   

ಉಳಿದಂತೆ ವ್ಯಕ್ತಿಯವಾರ್ಷಿಕ ಆದಾಯಕ್ಕೆ ೧೫ ಲಕ್ಷದ ವರೆಗೆ ತೆರಿಗೆ ವಿನಾಯ್ತಿಯ ನಿರೀಕ್ಷೆ ಮಾಡಲಾಗಿದೆ.ಇದರಿಂದ ವ್ಯಕ್ತಿಯ ಖರೀದಿ ಶಕ್ತಿ ಹೆಚ್ಚಿ ಆರ್ಥಿಕ ಬೆಳವಣಿಗೆಗೆ ಪೂರಕವಾಗುತ್ತದೆ. ಗಮನಾರ್ಹವಾಗಿ ಗಮನಿಸಬೇಕಾಗಿರುವ ಸಂಗತಿ ಎಂದರೆ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯಬೇಕುಮ ಆ ವ್ಯವಹಾರದಲ್ಲಿ ಪ್ರತಿಯೊಂದು ಪೈಸೆಯೂ ಶುದ್ಧವಾಗಿರುವಂಥ ವ್ಯವಸ್ಥೆ ಬರಬೇಕು. ಕೃಷಿ ವ್ಯವಸ್ಥೆಯ ಬಲಪಡಿಸುವಿಕೆಯ ಜೊತೆಗೆ ಅದರ ಜೊತೆಗೇ ಇರುವ ಪಶುಸಾಕಣೆಯ ಉತ್ತೇಜನಕ್ಕೂ ಕ್ರಮ ಕೈಗೊಳ್ಳಬೇಕು. ಇವುಗಳ ಜೊತೆಗೆ ಪ್ರವಾಸೋದ್ಯಮಕ್ಕೆ ಅದರಲ್ಲೂ ಸ್ಥಳೀಯ, ಗ್ರಾಮೀಣ ಪ್ರದೇಶಗಳ ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಡುವ ಯತ್ನ ನಡೆಯುವ ನಿರೀಕ್ಷೆ ಇದೆ. ಇದು ಸೂಕ್ತವಾದರೂ ಸ್ಥಳೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರಕ್ಕೆ ಧಕ್ಕೆ ಬಾರದಂತೆ ತಡೆಯುವನಿಯಮಗಳ ರೂಪಿಸಬೇಕಾದ ಅಗತ್ಯವಿದೆ, ಸಾಮಾಜಿಕ ದೃಷ್ಟಿಯಿಂದ ಸಾಮಾಜಿಕ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ಕೊಡಬೇಕು, ಸ್ಥಳೀಯ ಅಥವಾ ಪಾರಂಪರಿಕ ವೈದ್ಯ ಪದ್ಧತಿಗೆ ಉತ್ತೇಜನ ಸಿಗುವಂತಾಗಬೇಕು. ವಿಶೇಷವಾಗಿ ಈ ಬಾರಿಯ ಮುಂಗಡಪತ್ರ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಬೇಕಿದೆ.ಕಳೆದ ಸಾಲಿನಲ್ಲಿ ಕೈಗೊಂಡಂತೆ ತೆರಿಗೆ ಸಲ್ಲಿಎಯ ವ್ಯವಸ್ಥೆ ಸರಳಗೊಳಿಸುವ ಪ್ರಯತ್ನ ಮುಂದುವರೆಯಬೇಕಿದೆ, ಇದರಿಂದ ತೆರಿಗೆ ಕಟ್ಟುವವರ ಪ್ರಮಾಣ ಕೂಡ ಏರುತ್ತದೆ. ನಮ್ಮ ದೇಸದ ಜನಸಂಖ್ಯೆಯ ಶೇ. ೨೫ ಜನರದರೂ ತೆರಿಗೆ ಕಟ್ಟುವಂತಾದರೆ ದೇಶದ ಅಭವೃದ್ಧಿ ಸಾಧನೆ ಆದಂತೆಯೇ. ಇಂಥ ಗುರಿ ಸಾಧಿಸುವತ್ತ ಮುಂಗಡಪತ್ರ ಬರಲಿ ಎಂಬುದಷ್ಟೇ ಎಲ್ಲರ ನಿರೀಕ್ಷೆ.

Monday, 20 January 2025

ಪ್ರತ್ಯೇಕ ಜಿಲ್ಲೆ ಬೇಡಿಕೆ ಸಾಧುವೇ?


ಈಚೆಗೆ ಸಮಾಜದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಅದೆಂದರೆ ಅನನ್ಯತೆಯ ಹೆಸರಲ್ಲಿ ಪ್ರತ್ಯೇಕ ರಾಜ್ಯ, ಜಿಲ್ಲೆ ತಾಲ್ಲೂಕುಗಳ ಬೇಡಿಕೆ ಇಡುವುದು, ನ್ಯಾಯವಿದ್ದರೆ ಇದರಲ್ಲಿ ತಪ್ಪಿಲ್ಲ. ಈಗ ಉತ್ತರ ಕನ್ನಡ ಜಿಲ್ಲೆ ಎರಡಾಗಬೇಕೆಂಬ ಕೂಗು ಜೋರಾಗುತ್ತಿದೆ. ಇದಕ್ಕೆ ಅಭಿವೃದ್ಧಿಯ ಕಾರಣಗಳನ್ನು ಹಾಗೂ ದೂರದ ತಾಲ್ಲೂಕಿನ ಜನಕ್ಕೆ ಆಡಳಿತಾತ್ಮಕ ಸಮಸ್ಯೆ ಆಗುತ್ತದೆ ಎಂಬ ಪ್ರಮುಖ ಕಾರಣಗಳನ್ನು ಕೊಡಲಾಗುತ್ತಿದೆ. ಹೌದೆ?

ಇವೆಲ್ಲ ಪರಿಹಾರವಾಗಲು ಪ್ರತ್ಯೇಕ ಜಿಲ್ಲೆ ರಚನೆಯೊಂದೇಪರಿಹಾರವೇ? ಅಷ್ಟಕ್ಕೂ ಜಿಲ್ಲಾ ರಚನೆಯಿಂದ ತೊಂದರೆಗಳು ಏನೂ ಇಲ್ಲವೇ? ಹಾಗೆ ನೋಡಿದರೆ ಜಿಲ್ಲೆಯೊಂದರ ರಚನೆಯಿಂದ ಲಾಭ ನಷ್ಟ ಎರಡೂ ಇದೆ. ಇದನ್ನು ಪ್ರತ್ಯೇಕ ಜಿಲ್ಲಾ ರಚನೆಯ ಬೇಡಿಕೆಯವರು ಗಮನಿಸುತ್ತಿಲ್ಲ. ಉತ್ತರ ಕನ್ನಡದಲ್ಲಿ ದೂರವಿರುವ ತಾಲ್ಲೂಕಿನ ಜನಕ್ಕೆ ಆಡಳಿತಾತ್ಮಕ ತೊಂದರೆ ಆಗುತ್ತದೆ ಎಂಬ ಕಾರಣ ನೋಡುವುದಾದರೆ ಇಲ್ಲಿ ದೂರವಿರುವ ತಾಲ್ಲೂಕುಗಳೆಂದರೆ ಮುಂಡಗೋಡು, ಹಳಿಯಾಳ ಮತ್ತು ಸುಪಾ ತಾಲ್ಲೂಕುಗಳು ಹಾಗೆ ನೋಡಿದರೆ ರಾಜ್ಯದಲ್ಲಿ ಜಿಲ್ಲಾ ಕೇಂದ್ರಗಳಿಂದ ಇವುಗಳಿಗಿಂತ ದೂರವಿರುವ ಇತರೆ ಜಿಲ್ಲೆಗಳ ತಾಲ್ಲೂಕುಗಳಿವೆ ಉದಾಹರಣೆಗೆ ತುಮಕೂರಿನ ಪಾವಗಡ, ತಿಪಟೂರು, ಚಿತ್ರದುರ್ಗದ ಚಳ್ಳಕೆರೆ, ಬಾಗಲಕೋಟೆಯ ಬಹುತೇಕ ತಾಲ್ಲೂಕುಗಳು ಇದರಲ್ಲಿ ಸೇರಿವೆ. ಒಂದು ಜಿಲ್ಲೆಯ ರಚನೆಗೆ ನಿರ್ದಿಷ್ಟ ಮಾನದಂಡಗಳಿವೆ ಇದರಲ್ಲಿ ದೂರ ಸೇರಿಲ್ಲ, ಇದರಲ್ಲಿ ಮುಖ್ಯವಾಗುವುದು ಜನಸಂಖ್ಯೆ, ಭೂವ್ಯಾಪ್ತಿ, ಆದಾಯ ಹಾಗೂ ಮತ್ತಿತರ ಸಂಗತಿಗಳು ಬರುತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಹೆಚ್ಚು ಶ್ರೀಮಂತ ತಾಲ್ಲೂಕುಗಳೆಂದರೆ ಶಿರಸಿ ಮತ್ತು ಕಾರವಾರಗಳು. ಇವೆರಡನ್ನೇ ಕೇಂದ್ರವಾಗಿಸಿ ಜಿಲ್ಲೆಗಳಾಗಬೇಕೆಂಬ ಕೂಗಿದೆ. ಒಂದರ್ಥದಲ್ಲಿ ಇದು ಹಳೆಯ ಕೂಗು. ಆದರೆ ದಕ್ಷಿಣಕನ್ನಡ ಜಿಲ್ಲೆ ಒಡೆದ ಮೇಲೆ ಈ ದನಿಗೆ ಮತ್ತಷ್ಟು ಬಲ ಬಂದಿದೆ. ಇದಕ್ಕೆ ಕಾರಣ ಅದನ್ನು ಮಾಡಿದರು, ನಮ್ಮ ಜಿಲ್ಲೆ ಒಡೆಯಲಿಲ್ಲ ಎಂಬುದೇ ಪ್ರಮುಖ ಕಾರಣ. ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆದಾಯ ಸದ್ಯ ಪ್ರವಾಸೋದ್ಯಮ ಮತ್ತು ತೋಟಗಾರಿಕೆಯ ಬೆಳೆಗಳು. ಇವು ಬರುತ್ತಿರುವುದೇ ಎರಡು ಪ್ರಮುಖ ತಾಲ್ಲೂಕುಗಳಿಂದ. ಈಗ ಇವನ್ನೇ ಒಡೆದರೆ ಉಳಿದ ತಾಲ್ಲೂಕುಗಳು ಅಂಥ ಅದಾಯವನ್ನು ತರಬಲ್ಲವೇ?

ಆಯಿತು, ಒತ್ತಡಕ್ಕೆ ರಾಜ್ಯ ಸರ್ಕಾರ ಮಣಿದು ಎರಡು ಜಿಲ್ಲೆಗೆ ಒಪಪಿಗೆ ಕೊಟ್ಟಿತು ಎಂದೇ ಭಾವಿಸೋಣ. ಆಗ ಹೊ ತಾಲ್ಲೂಕುಗಳು ಯಾವವಾಗಬೇಕು ಎಂಬ ಪ್ರಶ್ನೆ ಮುಂದಾಗಿ ಪಂಚಾಯ್ತಿ ಮಟ್ಟದ, ಹೋಬಳಿ ಮಟ್ಟದ ರಾಜಕೀಯ ಈ ಬಗ್ಗೆ ಶುರುವಾಗುತ್ತದೆ, ಹಿಂದೆ ಐವತ್ತರ ದಶಕದಲ್ಲಿ ನಮ್ಮ ದೇಶದಲ್ಲಾದ ಭಾಷಾವಾರು ಪ್ರಾಂತ್ಯಗಳ ವಿಭಜನೆಯಂತೆಯೇ ಇದು ಎಂದೂ ಮುಗಿಯದ ಸಮಸ್ಯೆ ಅಗುತ್ತದೆ. ಇದಕ್ಕಾಗಿ ನಾನು ಆಗಾಗ ತಮಾಷೆಗೆ ಹೇಳುವುದಿದೆ - ದೇಶದಲ್ಲಿ ಇರುವ ರಾಜ್ಯಗಳೆಲ್ಲ ದೇಶಗಳಾಗಬೇಕು, ಜಿಲ್ಲೆಗಳೆಲ್ಲ ರಾಜ್ಯಗಳಾಗಬೇಕು, ತಾಲ್ಲೂಕುಗಳೆಲ್ಲ ಜಿಲ್ಲೆಗಳಗಬೇಕು, ಹೋಬಳಿಗಳೆಲ್ಲ ತಾಲ್ಲೂಕುಗಳಾಗಬೇಕು, ಅದು ಅಭಿವೃದ್ಧಿ ಅಂದ್ರೆ ಅಂತ. ಇನ್ನೇನು ಹೇಳುವುದು? ಒಡೆಯುವುದು ಅಭಿವೃದ್ಧಿ ಆಗುವುದಾದರೆ ನಮ್ಮ ದೇಶದಲ್ಲಿ ಹಿಸೆಗಾಗಿ ಒಡೆದ ಮನೆಗಳೆಲ್ಲ ಅಭಿವೃದ್ಧಿ ಕಂಡು ದೇಶ ಸಮೃದ್ಧಿ ಕಂಡಿರುತ್ತಿತ್ತು. ಏನಂತೀರಿ? ಇಂಥ ಅಭಿವೃದ್ಧಿಯ ಕಲ್ಪನೆಯೇ ತಪ್ಪು. ಪ್ರತ್ಯೇಕ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ ಪ್ರತ್ಯೇಕ ಅನುದಾನ ಕೊಡುವುದಿಲ್ಲ, ಬಜೆಟ್ ಸಂದರ್ಭದಲ್ಲಿ ಪ್ರಾಶಸ್ತ್ಯ ಕೊಡುವ ಮಾಬದಂಡ ಬೇರೆಯೇ ಇರುತ್ತದೆ, ಅದಕ್ಕಾಗಿ ಸಂಘಟಿತ ಯತ್ನ ಮಾಡಬೇಕೇ ವಿನ ಜಿಲ್ಲೆ ಬೇಡುವುದಲ್ಲ, ಹಾಗೆಂದು ವಿಭಜನೆ ಆದ ಮಾತ್ರಕ್ಕೆ ಆದಾಯ ಮೂಲ ಕುಗ್ಗುವುದಿಲ್ಲ, ಆದರೆ ಹೊರೆ ಜಾಸ್ತಿ ಆಗುತ್ತದೆ. ಒಂದು ದೃಷ್ಟಿಯಲ್ಲಿ ಪ್ರತ್ಯೇಕ ಜಿಲ್ಲೆಯ ರಚನೆಯಿಂದ ಆಡಳಿತ ಹಾಗೂ ಸರ್ಕಾರಕ್ಕೆ ಹೊರೆ ಹೆಚ್ಚುತ್ತದೆ, ನೋಡುವುದಾದರೆ ಜಿಲ್ಲೆ ಆಡಳಿತಕ್ಕೆ ಬೇಕಾದ ಅಧಿಕಾರಿ ವರ್ಗಗಳು ಹಾಗೂ ಅವರಿಗೆ ಒದಗಿಸಬೇಕಾದ  ಸಂಬಳ ದ ಜೊತೆ ಕೊಡಬೇಕಾದ ಸೌಲಭ್ಯ, ಸವಲತ್ತುಗಳ ವೆಚ್ಚ, ಆ ಪ್ರಮಾಣದ ಐ ಎ ಎಸ್ ಐಪಿ ಎಸ್ ಅಧಿಕಾರಿ ವರ್ಗ ಪೂರಕ ಸಿಬ್ಬಂದಿಗಳು, ಜಿಲ್ಲೆಗೆ ಒದಗಿಸಬೇಕಾದ ಕನಿಷ್ಠ ಸವಲತ್ತುಗಳು ಇತ್ಯಾದಿಗಳನ್ನು ಲೆಕ್ಕ ಹಾಕಿ ನೋಡಿದರೆ ಜನಕ್ಕೆ ಇವುಗಳಿಂದಾಗುವ ಹೊರೆಯೇ ಹೆಚ್ಚು. ಅಲ್ಲದೇ ಇದೇ ರೀತಿ ಅಭಿವೃದ್ಧಿಯ ಹೆಸರಲ್ಲಿ ಈಗಾಗಲೇ ಪ್ರತ್ಯೇಕವಾದ ಉಡುಪಿ, ರಾಮನಗರ ಮೊದಲಾದ ಜಿಲ್ಲೆಗಳು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ ಎಂಬುದನ್ನು ಗಮನಿಸಬೇಕು, ಅಭಿವೃದ್ಧಿಗೂ ಪ್ರತ್ಯೇಕ ಜಿಲ್ಲೆಗೂ ಸಂಬಂಧವಿಲ್ಲ. ನಿಜವಾಗಿ ಬೇಕಿರುವುದು ಆಡಳಿತ ನಡೆಸಯವ ರಾಜಕಾರಣಿಗಳಿಗೂ ಸರ್ಕಾರದ ನೌಕರರಿಗೂ ಕೆಲಸದಲ್ಲಿ ಸೂಕ್ತ ತಾಳ ಮೇಳ ಇರಬೇಕಾದುದು ಅಗತ್ಯ. ಭ್ರಷ್ಟಾಚಾರ ರಹಿತ ಆಡಳಿತ ಇದ್ದರೆ ಅಭಿವೃದ್ಧಿ ತಾನಾಗಿ ಆಗುತ್ತದೆ. ಮೈಸೂರು ಅರಸರ ಕಾಲವನ್ನು ನೋಡಿ, ಅಷ್ಟು ಹಿಂದೆಯೇ ಯಾವ ವಿಶೇಷ ಸೌಲಭ್ಯಗಳು ಇಲ್ಲದಿರುವಾಗ  ಜನ ಸೇವೆಯ ಪ್ರೀತಿ ಮತ್ತು ಸೇವಾ ಮನೋಭಾವದಿಂದ ಇಡೀ ಕರ್ನಾಟಕ ಪ್ರಾಂತ್ಯವನ್ನು ಹೇಗೆ ನಡೆಸಿದ್ದರು ನೋಡಿ, ಆಗಿನ ಸಂದರ್ಭವನ್ನು ಊಹಿಸಿ. ಹಾಗಾದರೆ ಅಭಿವೃದ್ಧಿಯ ಮಾನದಂಡ ಒಡೆಯುವುದಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಿಜಾಗಿ ಪ್ರತ್ಯೇಕ ಜಿಲ್ಲೆ, ತಾಲ್ಲೂಕು ಅಥವಾ ರಾಜ್ಯಗಳ ಬೇಡಿಕೆಯ ಹಿಂದೆ ಸ್ವ ಹಿತಾಸಕ್ತಿ, ರಾಜಕೀಯ ಮೇಲಾಟಗಳು ವಿಶೇಷವಾಗಿ ಕೆಲಸ ಮಾಡುತ್ತವೆಯೇ ವಿನಾ ಉಳಿದವೆಲ್ಲ ಗೌಣ. ಇಂಥ ಹಿತಾಸಕ್ತಿ ಇರುವವರು ಜನರ ಕಷ್ಟವನ್ನು ವೃಥಾ ಮುಂದೆ ಮಾಡಿ ತಮ್ಮದೇನೂ ಇಲ್ಲ ಎಂಬಂತೆ ವರ್ತಿಸುತ್ತಾರೆ. ಆದರೆ ನಿಜವಾದ ಕಾರಣ ಮುಖಂಡತ್ವವೇ ಆಗಿರುತ್ತದೆ.

ಈಗ ಉತ್ತರ ಕನ್ನಡ ಒಡೆಯುವ ನೆಪದಲ್ಲಿ ಸೋಕಾಲ್ಡ್ ಮುಖಂಡರು ಜನರ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಬಗ್ಗೆ ಜನವರಿ ೨೧ ಮಂಗಳವಾರದಂದು ಯಲ್ಲಾಪುರದಲ್ಲಿ ಸಭೆ ಕರೆದಿದ್ದಾರೆ, ಇಲ್ಲಿ ಮಾತನಾಡುವ ಎಲ್ಲರೂ ಪ್ರತ್ಯೇಕ ಜಿಲ್ಲೆ ಅಗಬೇಕೆನ್ನುವ ಹಂಬಲದವರೇ, ಆದರೆ ಅವರು ಕೊಡುವ ಕಾರಣಗಳು ಬೇರೆಯಾಗಿರುತ್ತವೆ ಅಷ್ಟೇ. ಅದಿರಲಿ, ನೆನಪಿಡಬೇಕಾದ ವಿಷಯವೆಂದರೆ ಪ್ರತ್ಯೇಕ ರಾಜ್ಯ, ಜಿಲ್ಲೆ ಅಥವಾ ತಾಲ್ಲೂಕುಗಳ ರಚನೆ ಆದ ಮಾತ್ರಕ್ಕೆ ಅಭಿವೃದ್ಧಿ ಆಗಿಬಿಡುವುದಿಲ್ಲ, ಅದಕ್ಕೆ ಅಗತ್ಯವಾಗಿ ಒದಗಿಸಬೇಕಾದ ಸೌಲಭ್ಯಕ್ಕೆ ತಾಂತ್ರಿಕ ಸಂಗತಿಗಳಿಗೆ ಮತ್ತಷ್ಟು ವೆಚ್ಚವಾಗುತ್ತದೆ. ಅಷ್ಟಕ್ಕೂ ಪ್ರತ್ಯೇಕ ಜಿಲ್ಲೆ ಮಾಡುವುದರಿಂದ ಒಂದಿಷ್ಟು ಜನ ವಿಜಯೋತ್ಸವ ಆಚರಿಸಬಹುದೇ ವಿನಾ ಇನ್ನೇನೂ ಇಲ್ಲ, ಈ ಗಾಗಲೇ ನಮ್ಮ ರಾಜ್ಯದಲ್ಲಿ ೩೨ ಜಿಲ್ಲೆಗಳಿದ್ದು, ಇನ್ನೂ ಹತ್ತಾರು ಜಿಲ್ಲೆಗಳ ಬೇಡಿಕೆ ಅನೇಕ ಕಡೆಗಳಲ್ಲಿದೆ. ಉತ್ತರ ಕರ್ನಾಟಕದಲ್ಲಿ ಇದರ ಬೇಡಿಕೆ ಅಭಿವೃದ್ಧಿಯ ಕಾರಣಕ್ಕೆ ಹೆಚ್ಚು. ಅಷ್ಟಕ್ಕೂ ಪ್ರತ್ಯೇಕ ಜಿಲ್ಲೆಯಾದ್ದರಿಂದ ಆದ ಉಪಯೋಗವೇನು ಅದರಿಂದಲೇ ಉದ್ಧಾರವಾದ ಊರು ಯಾವುದೆಂದು ಯಾರೂ ಹೇಳಲಾರರು. ಆಡಳಿತಾತ್ಮಕವಾಗಿ ಒಂದೇ ಕಡೆ ಬೀಳುತ್ತಿದ್ದ ಹೊರೆ ಸ್ವಲ್ಪ ಹಂಚಿಹೋಗುತ್ತದೆ ಅನ್ನುವುದು ಮಾತ್ರ ಇಲ್ಲಿ ನಿಜ. ಈ ಸಮಸ್ಯೆಯ ಪರಿಹಾರಕ್ಕೆ  ಸಿಬ್ಬಂದಿ ಸಂಖ್ಯೆ ಹೆಚ್ಚಳದಂಥ ಅನ್ಯ ಮಾರ್ಗಗಳಿವೆ, ಜಿಲ್ಲಾ ರಚನೆಯೊಂದೇ ಪರಿಹಾರವಲ್ಲ, ಒಟ್ಟಿನಲ್ಲಿ ಎಲ್ಲಾದರೂ ಒಂದು ಕಡೆ ಇಂಥ ಪ್ರತ್ಯೇಕತೆಯ ಲಾಭ ನಷ್ಟಗಳ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ, ಅದು ಉತ್ತರ ಕನ್ನಡ ಜಿಲ್ಲೆಯ ವಿಭಜನೆಯ ಕಾರಣಕ್ಕೆ ಆಗುವಂತಾಗಲಿ. 

  


Friday, 17 January 2025

ನೇಮಕಾತಿ ಕುರಿತ ಯುಜಿಸಿಯ ಹೊಸ ನಿಯಮ - ಒಂದು ವೀಕ್ಷಣೆ


ವಿಶ್ವವಿದ್ಯಾನಿಲಯದ ಅಧ್ಯಾಪಕರು ಮತ್ತು ಶೈಕ್ಷಣಿಕ ಸಿಬ್ಬಂದಿಯ ನೇಮಕಾತಿ ನಿಯಮ ಪರಿಷ್ಕೃತ ನಿಯಮ ಇದೀಗ ಹೊಬಿದ್ದಿದ್ದು ದೇಶಾದ್ಯಂತ ಬಗೆಬಗೆಯ ಚರ್ಚೆಗೆ ಒಳಗಾಗುತ್ತಿದ್ದು ಅವುಗಳಲ್ಲಿ ವಿವಿ ಅಧ್ಯಾಪಕರಾಗಲು ಆಯಾ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಬೇಕಿಲ್ಲ ಹಾಗೂ ಎನ್ ಇ ಟಿ ಅರ್ಹತಾ ಪರೀಕ್ಷೆ ಪಾಸು ಮಾಡಬೇಕಿಲ್ಲ, ನಿರ್ದಿಷ್ಟ ವಿಷಯಗಳಲ್ಲಿ ಗುಣಮಟ್ಟದ ನಿಯತಕಾಲಿಕಗಳಲ್ಲಿ ಪ್ರಕಟಣೆಯ ಅಗತ್ಯವಿಲ್ಲ ಎಂಬಂಥ ಅಂಶಗಳು ಹೆಚ್ಚು ಚರ್ಚೆಗೆ ಒಳಗಾಗುತ್ತಿವೆ, ಇವನ್ನು ಮುಂದಿಟ್ಟುಕೊಂಡು ಹಾಗಾದರೆ ಯಾರು ಹೇಗೆ ಬೇಕಾದರೂ ವಿವಿ ಶಿಕ್ಷಕರಾಗಬಹುದು ಅನ್ನುವಂಥ ತೇಲು ಹೇಳಿಕೆಗಳು ಕೇಳಿಸುತ್ತಿವೆ. ಆದರೆ ಇದು ಅಷ್ಟು ಸುಲಭವಿಲ್ಲ. ಏಕೆಂದರೆ ಅರ್ಹತಾ ಪರೀಕ್ಷೆಯ ಬದಲಾಗಿ ಬೇರೆ ಷರತ್ತುಗಳನ್ನು ಹೇಳುತ್ತದೆ, ಪದವಿ ಇರಲಿ ಬಿಡಲಿ ಪಾಠ ಮಾಡುವ  ಅರ್ಹತೆ ಮತ್ತು ಆಸಕ್ತ, ಜೊತೆಗೆ ಆಯಾ ಕ್ಷೇತ್ರಗಳಲ್ಲಿನ ಸಾಧನೆಗಳ ಪುರಾವೆ ಇದಕ್ಕೆ ಅಗತ್ಯ. ಇದು ಯಾರು ಬೇಕಾದರೂ ಹೇಗೆ ಬೇಕಾದರೂ ಅನ್ನುವಂತೆ ಅಲ್ಲ, ನಿಯಮಗಳ ಬದಲಾವಣೆ ಮತ್ತು ಸ್ವಲ್ಪ ವಿಸ್ತರಣೆ ಅಷ್ಟೆ. ಹಾಗಂತ ಸದ್ಯ ಚಾಲ್ತಿಯಲ್ಲಿರುವ ವಿವಿ ಅಧ್ಯಾಪಕರ, ಕುಲಪತಿಗಳ ನೇಮಕಾತಿ ಚೆನ್ನಾಗಿತ್ತು ಎಂದಲ್ಲ, ಇದರಲ್ಲೂ ಸಾಕಷ್ಟು ಲೋಪಗಳಿದ್ದವು, ನಾನೇ ನನ್ನ ಸೀಮಿತ ಹದಿನೈದು ವರ್ಷಗಳ ವಿವಿ ಮತ್ತು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಕಂಡು ಅನುಭವಿಸಿ ಹತ್ತಿರದಿಂದ ಕಂಡ ಅನುಭವದಲ್ಲಿ ಹೇಳುವುದಾದರೆ ಈಗಿನ ನಿಯಮಗಳ ಆಧಾರದಲ್ಲೇ ಎಂತೆಂಥವರೋ ಅಧ್ಯಾಪಕರಾಗಿ, ಕುಲಪತಿಗಳಾಗಿ ಬಂದಿದ್ದಾರೆ. ಇವರ ನೇಮಕಾತಿಯಲ್ಲಿ ಎಲ್ಲಿಯೂ ನಿಯಮಗಳ ಉಲ್ಲಂಘನೆ ಆಗಿಲ್ಲ, ಆದರೆ ಸೂಕ್ತ ವ್ಯಕ್ತಿಗಳ ನೇಮಕಾತಿ ಆಯ್ತಾ ಎಂಬ ಪ್ರಶ್ನೆಗೆ ಉತ್ತರ ನಿರಾಶಾದಾಯಕ. ಉದಾಹರಣೆಗೆ ನೆನಪಿರುವ ಒಂದು ನಿದರ್ಶನ ಹೇಳುತ್ತೇನೆ. ಹೀಗೆಯೇ ಒ£ಬ್ಬರು ಒಂದು ವಿಷಯದಲ್ಲಿ ಸ್ನಾತಕೋತ್ತರ  ಮತ್ತು ಅದು ಹೇಗೋ ಪಿಎಚ್ ಡಿ ಪದವಿ ಪಡೆದು ಹೇಗಾದರೂ ಮಾಡಿ ಒಂದು ಸರ್ಕಾರಿ ಉದ್ಯೋಗ ಪಡೆಯಲು ಬಯಸಿ ಕೆ ಎಸ್ ಆರ್ ಟಿಸಿ, ಲಿಡ್ ಕರ್, ರೇಷ್ಮೆ ಇಲಾಖೆ ಹೀಗೆ ಸಿಕ್ಕ ಕಡೆ ಅರ್ಜಿ ಸಲ್ಲಿಸಿ ಎಲ್ಲೂ ಕೆಲಸ ಸಿಗದೇ ಒಂದು ವಿವಿಯಲ್ಲಿ ಅಧ್ಯಾಪಕ ಹುದ್ದೆಗೆ ನಿಯಮಾನುಸಾರ ಆಯ್ಕೆ ಆಗಿ ಸದ್ಯ ಹಿರಿಯ ಪ್ರಾಧ್ಯಾಪಕರಾಗಿ ಹಾಯಾಗಿದ್ದಾರೆ, ಭೇಟಿ ಆದಾಗ ಈಗ ಆರಾಂ ಆಗಿದ್ದೇನಣ್ಣಾ ಅನ್ನುತ್ತಿದ್ದಾರೆ. ಆದರೆ ಅವರ ಪಾಠ ಕೇಳಬೇಕಾದ ವಿದ್ಯಾರ್ಥಿಗಳು ಮಾತ್ರ ಇವರು ಅದು ಹೇಗೆ ಇಲ್ಲಿ ಮೇಷ್ಟಾçದರೆಂದು ಇದು ನಮ್ಮ ಕರ್ಮ ಎಂದು ಹೇಳುತ್ತಿದ್ದಾರೆ. ಇಂಥ ಸಾವಿರಾರು ನಿದರ್ಶನಗಳು ಉನ್ನತ ಶಿಕ್ಷಣದಲ್ಲಿ ಈಗ ಸಿಗುತ್ತವೆ, ಆದರೆ ಇಲ್ಲಿ ಎಲ್ಲೂ ನಿಯಮ ಉಲ್ಲಂಘನೆ ಆಗಿಲ್ಲ. ಇಂಥ ಹುದ್ದೆ ತುಂಬುವ ನಿಯಮಗಳಿಂದ ಆಗುವ ಪ್ರಯೋಜನ ಏನು? ಇನ್ನು ಪ್ರಕಟಣೆಯ ವಿಷಯ, ಸದ್ಯ ಇರುವ ನಿಯಮ ಬಡ್ತಿ ಪಡೆಯಲು ಆಯಾ ವಿಷಯಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆಯ ನಿಯತಕಾಲಿಕಗಳಲ್ಲಿ ಪ್ರಕಟಣೆ ಆಗಬೇಕೆಂಬ ನಿಯಮಕ್ಕೆ ಅಡ್ಡಿ ಆಗದಂತೆ ಇಂಗ್ಲಿಷ್ ನಲ್ಲಿ ಯಾರಿಂದಲೋ ಬರೆಸಿ ತಮ್ಮ ಹೆಸರು ಹಾಕಿಕೊಂಡು ಹುದ್ದೆಯಲ್ಲಿ ಮೇಲೇರಿದವರಿಗೆ ಕೊರತೆ ಇಲ್ಲ, ಇಂಥ ಲೋಪಗಳನ್ನು ಸರಿಪಡಿಸುವುದು ಸದ್ಯದ ನಿಯಮದ ಉದ್ದೇಶ ಅನ್ನಬಹುದು, ಆದರೆ ಬರೀ ನಿಯಮಗಳ ಭಾರದಿಂದ ವ್ಯವಸ್ಥೆ ಸರಿ ಹೋಗುವುದಿಲ್ಲ, ನಾಲ್ಕಾರು ದಶಕಗಳ ಹಿಂದೆ ಅಧ್ಯಯನ, ಅಧ್ಯಾಪನಗಳಲ್ಲಿ ನೈಜ ಆಸಕ್ತಿ ಇದ್ದವರು ಮಾತ್ರ ವಿವಿಗಳಲ್ಲಿ ಶಿಕ್ಷಕರಾಗಿ ಸೇರುತ್ತಿದ್ದರು. ಕೆಲವು ವರ್ಷಗಳ ಹಿಂದೆ ಕನ್ನಡ ವಿಷಯದಲ್ಲಿ ಖ್ಯಾತ ವಿದ್ವಾಂಸರು ಹಾಗೂ ಅತ್ಯುತ್ತಮ ಅಧ್ಯಾಪಕರೊಬ್ಬರು ಈ ಯುಜಿಸಿ ಎನ್ ಇ ಟಿ ಪರೀಕ್ಷೆಗಳ ಮಾದರಿಯನ್ನೂ ಪ್ರಶ್ನೆಗಳನ್ನೂ ನೋಡಿ ಇಂಥವಿದ್ದರೆ ನಾವೆಲ್ಲ ಇಲ್ಲಿ ಮೇಷ್ಟ್ರುಗಳಾಗುತ್ತಿರಲಿಲ್ಲ, ಮಾತ್ರವಲ್ಲ, ಈಗ ಇವನ್ನು ಪಾಸು ಮಾಡಿದ್ರೆ ಮಾತ್ರ ಇಲ್ಲಿ ಉಳಿಯುತ್ತೀರಿ ಅಂದರೂ ನಮ್ಮಿಂದ ಇದನ್ನೆಲ್ಲ ಪಾಸು ಮಾಡಲು ಆಗದಪ್ಪಾ ಅಂದಿದ್ದರು. ಅಚ್ಚರಿ ಆಗಿತ್ತು. ಆದರೆ ಇಂಥ ಪರೀಕ್ಷೆಗಳನ್ನು ಪಾಸು ಮಾಡಿದ್ದಾರೆಂದು ಪ್ರಮಾಣ ಪತ್ರ ಹೊಂದಿಯೂ ಪಾಠ ಮಾಡಲು ಅಯೋಗ್ಯರೆಂದು ವಿದ್ಯಾರ್ಥಿಗಳೇ ಘೋಷಿಸಿದ ಸಾಕಷ್ಟು ನಿದರ್ಶನಗಳಿವೆ, ಇದಕ್ಕೆ ಉತ್ತರ ಕಂಡುಕೊಳ್ಳಲು ಶಿಕ್ಷಕರ ಆಯ್ಕೆ ಮಾಡುವಾಗ ಸಂಸ್ಥೆಗಳು ಅಭ್ಯರ್ಥಿಗಳಿಂದ ಬೋಧನೆಯ ಪ್ರಾತ್ಯಕ್ಷಿಕೆ  ಪಡೆದು ವಿದ್ಯಾರ್ಥಿಗಳಿಂದ ಹಾಗೂ ಹಿರಿಯ ಶಿಕ್ಷಕರಿಂದ ಅದರ ಹಿಮ್ಮಾಹಿತಿ ಪಡೆದು ನೇಮಕ ಮಾಡಿಕೊಳ್ಳುವ ಪದ್ಧತಿಯೂ ಇದೆ. ಹೊಸ ನಿಯಮಾವಳಿ ಇದನ್ನು ಒಂದು ರೀತಿ ಕಡ್ಡಾಯಗೊಳಿಸುತ್ತದೆ. 

ಇನ್ನು ಈಗಲೂ ಹಣ ಇರುವವರು ಒಳ ದಾರಿಯಲ್ಲಿ ಕುಲಪತಿಗಳಾಗಿ ಶಿಕ್ಷಕರಾಗಿ ಬರುತ್ತಿದ್ದಾರೆಂಬುದು ಸುಳ್ಳಲ್ಲ. ಆದರೆ ಸದ್ಯದ ನಿಯಮಾನುಸಾರ ಎಲ್ಲ ಪ್ರಾಥಮಿಕ ಅಗತ್ಯಗಳನ್ನೂ ಪೂರೈಸಿರುತ್ತಾರೆ, ಹಾಗೆ ನೋಡಿದರೆ ಒಂದು ಹುದ್ದೆಗೆ ಹೀಗೆ ಅಗತ್ಯ ನಿಯಮ ಪೂರೈಸಿದ ನೂರಾರು ಅಭ್ಯರ್ಥಿಗಳು ಇರುತ್ತಾರೆ. ಇಂಥ ಕಡೆ ಭ್ರಷ್ಟಾಚಾರ ಸಹಜವಾಗಿ ಜಾಗ ಪಡೆಯುತ್ತದೆ. ಇಲ್ಲಿ ಭ್ರಷ್ಟಾಚಾರ ಅಂದ್ರೆ ಬರೀ ಹಣವಲ್ಲ, ವಶೀಲಿ, ಪ್ರಭಾವ ಬೀರುವುದು ಇತ್ಯಾದಿ ಏನಾದರೂ ಆಗಬಹುದು.ಇಂಥವನ್ನು ನಿಯಮಗಳಿಂದ ಸರಿಪಡಿಸಲು ಆಗದು. ಹಾಗೆ ನೋಡಿದರೆ ನಿಯಮಗಳು ಹೆಚ್ಚಾದಷ್ಟೂ ಒಳದಾರಿಗಳು ಹೆಚ್ಚಾಗುತ್ತವೆ ಬಿಟ್ಟರೆ ಶುದ್ಧತೆ ಬರುವುದಿಲ್ಲ.ಇವನ್ನೆಲ್ಲ ಸರಿ ಪಡಿಸುವ ನಿಯಮಗಳು ಯಾವಾಗಲಾದರೂ ರೂಪುಗೊಳ್ಳಲು ಸಾಧ್ಯವೇ? ಇಂಥ ನಿಯಮ ಬದಲಾವಣರಗಳು ಆಗಾಗ ಆಗುತ್ತಲೇ ಇರುತ್ತವೆ. ಇದು ಅಂತಿಮವೇನೂ ಅಲ್ಲ, ಕಾಲ ಕಾಲಕ್ಕೆ ನಿಯಮಗಳು ಬದಲಾಗುತ್ತಲೇ ಇರುತ್ತವೆ. ಹಾಗೆ ನೋಡಿದರೆ ಈಗಿನ ಬದಲಾದ ನಿಯಮ ವಿಷಯ ಪರಿಣತೆಯನ್ನು ಅಪೇಕ್ಷಿಸುತ್ತದೆ, ಇದೊಂದು ಗುಣಾತ್ಮಕ ಅಂಶ. ಇಂದಿನ ನಮ್ಮ ಸಮಾಜದಲ್ಲಿ ಕಲಿತ ಪದವಿಗೂ ಮಾಡುತ್ತಿರುವ ಉದ್ಯೋಗದಲ್ಲೂ ಸಂಬಂಧವಿಲ್ಲದೇ ಅಲ್ಲಿ ಸಾಕಷ್ಟು ಯಶಸ್ಸು ಕಂಡ ಸಾಕಷ್ಟು ನಿದರ್ಶನಗಳಿವೆ. ಶಿಕ್ಷಕರಾಗಲು ಯೋಗ್ಯರಾದವರು ಎಲ್ಲೋ ಅಂಗಡಿ ಇಟ್ಟುಕೊಂಡವರು, ಸಿಕ್ಷಕರಾದವರು ಯಾವುದಕ್ಕೂ ಲಾಯಕ್ಕಿಲ್ಲದವರು ಬೇಕಾದಷ್ಟಿದ್ದಾರೆ. ಈಗಾಗಲೇ ಶಿಕ್ಷಕರೆಂದು ನೇಮಕರಾದವರು ಆದರೆ ಅದಕ್ಕೆ ಯೋಗ್ಯರಲ್ಲದವರನ್ನು ಪತ್ತೆ ಮಾಡುವುದು ಕಷ್ಟವಲ್ಲ, ಅಂಥವರನ್ನು ಜರಡಿ ಹಿಡಿಯಲು ಶಿಕ್ಷಕರಿಗೆ ಒಂದೆರಡು ತಿಂಗಳು ವೇತನ ತಡೆ ಹಿಡಿಯಬೇಕು ಅಥವಾ ಅರ್ಧ ಕೊಡಬೇಕು, ಜೊತೆಗೆ ಆ ಸಂರ್ದದಲ್ಲಿ ಜೀವನೋಪಾಯಕ್ಕೆ ಆಯ್ಕೆ ಮಾಡಿಕೊಂಡ ಮಾರ್ಗವನ್ನು ಅವರು ಘೋಷಿಸಬೇಕು. ಹೀಗದರೆ ಅರ್ಧಕ್ಕರ್ಧ ಜನ ಆತ್ಮ ಹತ್ಯೆ ಮಾಡಿಕೊಳ್ಳುತ್ತಾರೆ, ಇದು ಹೊಸ ಹೊಸ ನಿಯಮ ಪ್ರತಿಪಾದಿಸುವ ಅಂತರ್ ಶಿಸ್ತೀಯ ವಿಷಯಗಳ ಪ್ರೋತ್ಸಾಹಕ್ಕೂ ಪೂರಕ ಅನಿಸುತ್ತದೆ. ಸದಯ ಇರುವ ಅಥವಾ ಬದಲಾವಣೆ ಮಾಡಲಾದ ನಿಯಮಗಳಲ್ಲೂ ನ್ಯೂನಗಳಿವೆ. ಹೊಸದಾಗಿ ಕುಲಪತಿಗಳಾಗುವ ವ್ಯಕ್ತಿಗೆ ಆಯಾ ವಿವಿಗಳ ಅಭಿವೃದ್ಧಿಗೆ ಹಾಕಿಕೊಂಡ ನಕ್ಷೆಯನ್ನು ಜನರ ಮುಂದೆ ಇಡುವ ಹಾಗೂ ಹುದ್ದೆಯಿಂದ ಹೊರ ಹೋಗುವಾಗ ಅವನ್ನು ತುಲನೆ ಮಾಡುವ ಕೆಲಸ ಸಾರ್ವಜನಿಕವಾಗಿ ಆಗಬೇಕಿದೆ (ಪಬ್ಲಿಕ್ ಆಡಿಟ್). ಏಕೆಂದರೆ ಬಹುತೇಕ ಕುಲಪತಿಗಳು ವಿವಿಗಳಿಗೆ ಬಂದಿದ್ದು ಹೇಗೆ ಹೋಗುವಾಗ ಅಲ್ಲಿ ಮಾಡಿದ್ದೇನು ಎಂಬುದೇ ಸಮಾಜಕ್ಕೆ ತಿಳಿಯುವುದಿಲ್ಲ,ಇಂಥ ಹೊಣೆಗಾರಿಕೆ ಹೊಸ ನಿಯಮದಲ್ಲೂ ಇಲ್ಲ, ಒಂದೆಂದರೆ ಅದರ ವ್ಯಾಪ್ತಿಯನ್ನು ಹಿಗ್ಗಿಸಲಾಗಿದೆ. ಇಂಥ ಎಷ್ಟೇ ನಿಯಮ ತಂದರೂ ಉನ್ನತ ಶಿಕ್ಷಣ ಸದ್ಯವೇ ಸುಧಾರಿಸಿಬಿಡುತ್ತದೆ ಎಂಬ ಆಸೆ ಇಲ್ಲ.ಇನ್ನೊಂದು ಗುಣಾತ್ಮಕ ಅಂಶ ಹೊಸ ನಿಯಮದ್ದೆಂದರೆ ಪ್ರಾದೇಶಿಕ ಭಾಷೆಗಳಿಗೆ ಕೊಟ್ಟ ಆದ್ಯತೆ. ಇದು ಅಗತ್ಯ ಹಾಗೂ ಅಪೇಕ್ಷಣೀಯ. ಸ್ಥಳೀಯ ಮಟ್ಟದಲ್ಲಿ ವಿಶ್ವವಿದ್ಯಾನಿಲಯಗಳು ಹೆಚ್ಚುತ್ತಿರುವ ಇಂದಿನ ಸಂದರ್ಭದಲ್ಲಿ ಹಾಗೂ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಕೊಡುತ್ತಿರುವ ಹೊತ್ತಿನಲ್ಲಿ ಇದು ಬೇಕು. ಆದರೆ ಈ ಭಷೆಗಳಲ್ಲಿ ಪ್ರಕಟವಾಗುವ ಬರೆಹ ಅಥವಾ ಸಂಶೋಧನ ಪ್ರಬಂಧಗಳನ್ನು ಇಂಗ್ಲಿಷ್ ಪ್ರಕಟಣೆಗಳ ಜೊತೆ ತುಲನೆ ಮಾಡಿ ಯೋಗ್ಯತೆ ನಿರ್ಧರಿಸುವ ಪ್ರವೃತ್ತಿ ಬದಲಾಗಿ ಇವುಗಳ ಮಾನದಂಡವನ್ನು ¸ಅಳೆಯಲು ಅವುಗಳ ಪರಿಣಾಮ ಸಾರ್ವಜನಿಕವಾಗಿ ಹೇಗಿದೆ ಎಂದು ತಿಳಿಯುವ ಪ್ರತ್ಯೇಕ ಗುಣಮಟ್ಟ  ರೂಪಿಸಬೇಕು.  ಇಂಥ ಕಡೆ ಪ್ರಾದೇಶಿಕ ಭಾಷೆಗಳನ್ನು ಮತ್ತೆ ಇಂಗ್ಲಿಷ್ನಲ್ಲಿ ಅಳೆದರೆ ಮತ್ತೆ ಇಂಗ್ಲಿಷ್ಗೆ ಮಾನ್ಯತೆ ಹೆಚ್ಚುತ್ತದೆ. ಇದು ಬೇಕಿಲ್ಲ. ಮಾನದಂಡ ಬದಲಿಸುವುದು ಕಷ್ಟವಲ್ಲ. ಇದನ್ನು ನೀತಿ ನಿರೂಪಕರು ಗಮನಿಸಬೇಕಿದೆ.

Saturday, 11 January 2025

ಇಂಗ್ಲಿಷ್ ನಲ್ಲಿ ಕನ್ನಡ ಸಾಹಿತ್ಯ ಚರಿತ್ರೆ


ಇದೀಗ ಮಾರುಕಟ್ಟೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಇಂಗ್ಲಿಷ್ ನಲ್ಲಿ ಹೇಳುವ ಹೊಸ ಪುಸ್ತಕವೊಂದು ಬಂದಿದೆ. ಇದನ್ನು ಕನ್ನಡ ಪ್ರೇಮಿಗಳಾದ ಇಂಗ್ಲಿಷ್ ಪ್ರಾಧ್ಯಾಪಕರಾದ ಪ್ರೊ. ಸಿ ಪಿ ರವಿಚಂದ್ರ ಹಾಗೂ ಪ್ರೊ. ಎಂಜಿ ಹೆಗಡೆಯವರು ಸಂಪಾದಿಸಿದ್ದಾರೆ, ಕೆಲವನ್ನು ಇವರೇ ಬರೆದಿದ್ದಾರೆ. ಹಾಗೆ ನೋಡಿದರೆ ಈ ಕೃತಿ ೨೦೨೧ರಲ್ಲಿ ಸಾಹಿತ್ಯ ಅಕಾಡೆಮಿಯಿಂದ ಪ್ರಕಟವಾಗಿದೆ.

ಇದು ಹನ್ನೊಂದನೆಯ ಶತಮಾನದಿಂದ ೧೯ನೆಯ ಶತಮಾನದವರೆಗಿನ ಕನ್ನಡ ಸಾಹಿತ್ಯವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ, ವಿಮರ್ಶಿಸುತ್ತದೆ. ೧೮ನೆಯ ಶತಮಾನದ ಕಿಟ್ಟೆಲ್ ಕಾಲದಿಂದ ಇಂದಿನವರೆಗೂ ಕನ್ನಡ ಸಾಹಿತ್ಯದ ಬಗ್ಗೆ ಇಂಗಿಷ್ ನಲ್ಲಿ ಪರಿಚಯಿಸುವ ಯತ್ನವನ್ನು ಹಲವರು ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಕೃತಿ ಹಲವಾರು ದೃಷ್ಟಿಯಿಂದ ಮುಖ್ಯವಾಗಿದೆ. ಮೊದಲನೆಯದಾಗಿ ಕನ್ನಡದ ಬಗ್ಗೆ ಹಾಗೂ ಕನ್ನಡ ಸಾಹಿತ್ಯದ ಬಗ್ಗೆ ಕನ್ನಡದಲ್ಲೇ ಅವಗಣನೆ ಕಾಣುತ್ತಿರುವ ಈ ಸಂದರ್ಭದಲ್ಲಿ ಈ ಕೃತಿ ಇಂಗ್ಲಿಷ್ ನಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಹುಟ್ಟಿಸಲು ಯತ್ನಿಸಿದೆ, ಜೊತೆಗೆ ಈ ಇಬ್ಬರು ಸಮರ್ಥ ಅನುವಾದಕರು ಕನ್ನಡದ ಪ್ರಮುಖ ಕೃತಿಗಳ ಆಯ್ದ ಭಾಗಗಳನ್ನು ಇಂಗ್ಲಿಷ್ ನಲ್ಲಿ ಕೊಡುವ ಸಾಹಸ ಮಾಡಿ ಯಶಸ್ಸು ಕಂಡಿದ್ದಾರೆ. ಉದಾಹರಣೆಗೆ ಕುಮಾರವ್ಯಾಸನನ್ನು ಕನ್ನಡದಲ್ಲಿ ಪರಿಚಯಿಸುವುದೇ ಕಠಿಣ, ಅಂಥದ್ದರಲ್ಲಿ ಈ ಕೃತಿಯಲ್ಲಿ ಅವನನ್ನು ಹಾಗೂ ಕುಮಾರವ್ಯಾಸ ಭಾರತದ ಪ್ರಮುಖ ಭಾಗಗಳನ್ನು ಇಂಗ್ಲಿಷ್ ನಲ್ಲಿ ಸಮರ್ಥವಾಗಿ ಕೊಟ್ಟಿದ್ದಾರೆ. ಕುಮಾರವ್ಯಾಸನನ್ನು ನಾನಂತೂ ಇದುವರೆಗೆ ಅದರ ಛಂದಸ್ಸು ಕೆಡದಂತೆ ಇಂಗ್ಲಿಷ್ ನಲ್ಲಿ ಕೊಡುವ ಸಾಹಸ ಮಾಡಿದವರನ್ನು ಕಂಡಿಲ್ಲ.

ಪ್ರಸ್ತುತ ಕೃತಿಯಲ್ಲಿ "ಕನ್ನಡ ಈಸ್ ಆಸ್ ಓಲ್ಡ್ ಆಸ್ ತಮಿಳ್" ಎಂಬ ಹೇಳಿಕೆ ಕೊಡಲಾಗಿದೆ. ಆದರೆ ತಮಿಳು ಕನ್ನಡದಷ್ಟು ಪ್ರಾಚೀನವಲ್ಲ, ಏಕೆಂದರೆ ಅಂಥ ದಾಖಲೆ ತಮಿಳರಿಗೆ ಸಿಗುವುದು ಎಂಟನೆಯ ಶತಮಾನದ ಅನಂತರ, ಈ ಬಗ್ಗೆ ಕಮ್ಮಡ ವಿದ್ವಾಂಸರಾದ ಬಿಜಿಎಲ್ ಸ್ವಾಮಿಯವರು ತಮ್ಮ ತಮಿಳು ತಲೆಗಳ ನಡುವೆ ಎಂಬ ಕೃತಿಯಲ್ಲಿ ಸಾಧಾರ ತೋರಿಸುತ್ತಾರಲ್ಲದೇ ತಮಿಳು ವಿದ್ವಾಂಸರಲ್ಲೇ ಈ ಬಗ್ಗೆ ಒಮ್ಮತವಿಲ್ಲ. ಅಲ್ಲದೇ ಕನ್ನಡದ ಪ್ರಾಚೀನತೆ ಹಲ್ಮಿಡಿ ಶಾಸನ ದೊರೆತಾಗ ಕ್ರಿ. ಶ. ೪೫೦ ಇದ್ದುದು ಈಗ ತಾಳಗುಂದ ಶಾಸನ ದೊರೆತ ಮೇಲೆ ಇದು ಇನ್ನೂ ಮೂರು ಶತಮಾನಗಳಷ್ಟು ಹಿಂದೆ ಹೋಗಿದೆ. ಅದಿರಲಿ, ಈ ಪ್ರಾಚೀನತೆಯ ಗದ್ದಲ ಇಟ್ಟುಕೊಂಡು ಸಾಧಿಸುವುದು ಏನೂ ಇಲ್ಲ,ಆದರೆ ದ್ರಾವಿಡಭಾಷೆಗಳ ಪ್ರಸ್ತಾಪ ಬಂದಾಗಲೆಲ್ಲ ತಮಿಳು ಭಾಷೆಯನ್ನು ಮತ್ತು ಅವರ ವಾದವನ್ನು ಮುಂದಿಟ್ಟುಕೊಂಡೇ ಮಾತನಾಡಲಾಗುತ್ತದೆ, ಈ ಕೃತಿಯಲ್ಲೂ ಈ ಪ್ರವೃತ್ತಿ ಮುಂದುವರೆದಿದೆ. ಆದರೆ ಈ ಕೃತಿ ಪ್ರಕಟವಾಗುವ ವೇಳೆಗೆ ತಾಳಗುಂದ ಶಾಸನದ ಪ್ರಾಚೀನತೆ ಅಧಿಕೃತವಾಗಿ ಘೋಷಣೆ ಆಗಿರಲಿಲ್ಲ. ಹೀಗಾಗಿ ಮರು ಮುದ್ರಣದ ವೇಳೆಗೆ ಈ ಸಂಗತಿಯನ್ನು ಇಲ್ಲಿ ಗಮನಿಸಲಾಗುತ್ತದೆ ಎಂದು ಆಶಿಸಬಹುದು. ಪ್ರಸ್ತುತ ಕೃತಿ ಜನ್ನೊಂದನೆಯ ಶತಮಾನದಿಂದ ಹತ್ತೊಂಬತ್ತನೆಯ ಶತಮಾನದವರೆಗಿನ ಕನ್ನಡ ಸಾಹಿತ್ಯ ಚರಿತ್ರೆಯನ್ನು ಪರಿಶೀಲಿಸುತ್ತದೆ. ಇದು ನಿಜವಾಗಿ ಈ ಇಬ್ಬರು ಹಿರಿಯ ಪ್ರಾಧ್ಯಾಪಕರ ಬೃಹತ್ ಯೋಜನೆಯ ಭಾಗವಾಗಿದ್ದು, ಮೂರು ಸಂಪುಟಗಳಲ್ಲಿ ಇದು ಹೊರಬರಲಿದೆ, ಆರಂಭದಿಂದ ಹನ್ನೊಂದನೆಯ ಶತಮಾನದವರೆಗೆ ಮೊದಲ ಸಂಪುಟ ಬರಬೇಕಿದ್ದು, ಅದಿನ್ನೂ ಪೂರ್ಣವಾಗಿಲ್ಲ, ಇನ್ನೇನು ಅದು ಕೂಡ  ಓದುಗರ ಕಥ ಸೇರಲಿದೆ. ಇರಲಿ. ಆದರೆ ಇಂಥ  ಹರ ಸಾಹಸಕ್ಕೆ ಅಥವಾ ಹರ್ಕ್ಯಲಿಯನ್ ಟಾಸ್ಕ್ ಗೆ ಇವರಿಬ್ಬರು ತೊಡಗಿರುವುದು ಅಸಾಧಾರಣ, ಏಕೆಂದರೆ ಒಂದು ಸಾಂಸ್ಥಿಕ ನೆಲೆಯಲ್ಲಿ ಆಗಬೇಕಿರುವ ಈ ಕೆಲಸಕ್ಕೆ ಇಬ್ಬರೇ ಮುಂದಾಗಿದ್ದಾರೆ, ಈ ಮೊದಲು ಕೂಡ ನರಸಿಂಹಾಚಾರ್, ಕಿಟ್ಟೆಲ್, ಮೊದಲಾದವರು ಇಂಥ ಕೆಲಸವನ್ನು ಇಂಗ್ಲಿಷ್ ನಲ್ಲಿ ಮಾಡಿದ್ದರೂ ಆ ಕಾಲಕ್ಕೆ ಇದ್ದ ಚರ್ಚೆಗಳ ವ್ಯಾಪ್ತಿ ಸೀಮಿತ. ಈಗ ಒಬ್ಬ ಕವಿ ಮತ್ತು ಕೃತಿಯಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ, ಪಂಪನ ಕೇವಲ ಒಂದು ಪದ್ಯವನ್ನೇ ಕುರಿತು ಇನ್ನಿಲ್ಲದಷ್ಟು ಚರ್ಚೆ ಆಗಿದೆ, ಉದಾಹರಣೆಗೆ ಭಾನುಮತಿ ಪಗಡೆ ಆಡುವ ಸಂದರ್ಭ ಕುರಿತ 'ನೆತ್ತಮನಾಡಿ ಭಾನುಮತಿ ಸೋಲ್ತೊಡೆ' ಎಂಬ ಪದ್ಯದ ಮೇಲೆ ಒಂದೆರಡು ಕೃತಿಗಳಾಗುವಷ್ಟು ಚರ್ಚೆ ಆಗಿದೆ. ಇಂಥ ಗಂಭೀರ ಚರ್ಚೆಗಳನ್ನು ಇಂಥ ಕಡೆ ತರಲೇಬೇಕಾಗುತ್ತದೆ, ಇಂಥ ಸವಾಲು ಈ ಸಂಪದಕರ ಮೇಲಿದೆ. ಇದನ್ನು ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ವಿಷಯ ಏನೆಂದರೆ ಇಂಥ ಚರ್ಚೆಗಳು ವಚನಗಳ ಮೇಲೆ ಸಾಕಷ್ಟಾಗಿವೆ, ಜೊತೆಗೆ ಕನ್ನಡದಲ್ಲಿ ಈಚೆಗೆ ಎಸ್. ಪಿ. ಪದ್ಮ ಪ್ರಸಾದ್ ಅವರು ಕನ್ನಡ ಜೈನ ಸಾಹಿತ್ಯ ಚರಿತ್ರೆಯಂಥ ಬೃಹತ್ ಸಂಪುಟಗಳನ್ನು ಹೊರತಂದು ಈ ಬಗೆಯ ಕೃತಿ ರಚಿಸುವವರ ಭಾರವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಹೀಗಿರುವಾಗ ಮೊದಲಿನಂತೆ ಸುಮ್ಮನೇ ಸಾಹಿತ್ಯ ಚರಿತ್ರೆಯನ್ನು ದಾಖಲಿಸಲಾಗುವುದಿಲ್ಲ, ಅಷ್ಟಕ್ಕೂ ಇವರು ಈ ಯೋಜನೆಯಲ್ಲಿ ಸಾಹಿತ್ಯ ಚರಿತ್ರೆ ಅನ್ನುತ್ತಾ ಸುಮ್ಮನೇ ಕವಿ ಕೃತಿಗಳ ಕಾಲ ಕೃತಿಗಳನ್ನು ದಾಖಲಿಸುವುದಕ್ಕೆ ಮಾತ್ರ ಸೀಮಿತಮಾಡಿಕೊಂಡಿಲ್ಲ, ಅಗತ್ಯವಿರುವಕಡೆ ಸೂಕ್ತ ವಿಶ್ಲೇಷಣೆ ಮಾಡುತ್ತಾರೆ ಇದು ಅತ್ಯುಪಯುಕ್ತವಾಗಿದೆ. ಈ ಕಾರಣದಿಂದ ಇದುವರೆಗೆ ಕನ್ನಡದ ವಿಷಯ ವಿಶೇಷ ಇಂಗ್ಲಿಷ್ ಮೂಲಕ ಪ್ರಪಂಚವನ್ನು ತಲುಪಬೇಕು ಎಂಬ ಕೊರತೆಯನ್ನು ಇದು ನಿವಾರಿಸುವ ಯತ್ನ ಮಾಡಿದೆ. ಇದನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ೨೦೨೨೧ರಲ್ಲಿ ಪ್ರಕಟಿಸಿದೆ. ಉತ್ತಮ ಪ್ರತಿಕ್ರಿಯೆಗಳು ಓದುಗವಲಯದಿಂದ ಬರುತ್ತಿದೆ ಎಂಬುದಕ್ಕೆ ಕೆಲವು ಅನ್ ಲೈನ್ ಪುಸ್ತಕ ಮಾರಾಟ ಮಳಿಗೆಗಳಲ್ಲಿ ಈ ಪುಸ್ತಕ ಪ್ರತಿಗಳು ಖಾಲಿಯಾಗಿವೆ ಎಂಬುದೇ ತಿಳಿಸುತ್ತದೆ. ಒಳ್ಳೆಯದು. ಈ ಬಗೆಯ ಕೃತಿಗಳಿಗೆ ಓದುಗ ವಲಯ ಹೀಗೆಯೇ ಪ್ರತಿಕ್ರಿಯಿಸಬೇಕು. ಈ ಸಂಪುಟವನ್ನು ಗಮನಿಸಿದ ಮೇಲೆ ಇನ್ನುಳಿದ ಎರಡು ಸಂಪುಟಗಳು ಯಾವಾಗ ಹೊರಬರುತ್ತವೆ ಎಂದು ಕಾಯುವಂತಾಗಿದೆ, ಜೊತೆಗೆ ಒಂದು ಕ್ರಮದಲ್ಲಿ ಮೊದಲಿನಿಂದ ಮೂರೂ ಸಂಪುಟಗಳನ್ನು ತಿರುವಿ ಹಾಕಬೇಕು ಅನಿಸುತ್ತದೆ, ಇಂಥ ಕೃತಿಗಳನ್ನು ಗಮನಿಸಿದ ಮೇಲೆ ಎಲ್ಲವನ್ನೂ ಒಟ್ಟಿಗೇ ಓದಿ ಮತ್ತೊಮ್ಮೆ ಇಲ್ಲಿ ಬರೆಯುವ ಅವಕಾಶ ಮತ್ತೊಮ್ಮೆ ಒದಗಿ ಬರುತ್ತದೆ ಎಂಬುದೇ ಒಂದು ಖುಷಿ. ಈ ಕೃತಿಯನ್ನು ಸಂಪಾದಿಸಲು ಈ ಸಂಪಾದಕರು ಅನ್ನ ಬರೆಹಗಾರರಿಂದ ಲೇಖನಗಳನ್ನು ಸ್ವೀಕರಿಸಿಲ್ಲ. ಒಂದು ರೀತಿಯಲ್ಲಿ ವಿಶ್ವಕೋಶದಂಥ ಈ ಕೃತಿಯನ್ನು ಒಬ್ಬರೋ ಇಬ್ಬರೋ ಸಂಪಾದಿಸಿ ಪ್ರಕಟಿಸುವುದು ಸುಲಭವಲ್ಲ. ಬೇರೆಯವರ ಕತೆ ಹಾಗಿರಲಿ ಸ್ವತಃ ಮೆಚ್ಚುವಂತೆ ಕೂಡ ಹೊರತರುವುದು ಕಷ್ಟದ ಮಾತು. ಅಂಥದ್ದರಲ್ಲಿ ಈ ಇಬ್ಬರು ಸಾಹಸಿಗರು ಓದುಗರ ಮನಮುಟ್ಟುವಂತೆ ಇಲ್ಲಿ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಇವರಿಗೆ ನಾವೆಲ್ಲ ಮೆಚ್ಚಯಗೆ ತೋರಿಸಬೇಕು, ಮಾತಲ್ಲಿ ಅಲ್ಲ, ಕೃತಿಯನ್ನು ಕೊಂಡು ಓದುವ ಮೂಲಕ. ಇದು ಆನ್ ಲೈನ್ ನಲ್ಲೂ ಲಭ್ಯವಿರುವುದು ದೂರದ ಓದುಗರಿಗೆ ಅನುಕೂಲವಾಗಿದೆ. ಕನ್ನಡ ಪುಸ್ತಕಗಳು ಆಧುನಿಕ ಮಾರಾಟಜಾಲದಲ್ಲಿ ದೊರೆಯಬೇಕು.  ಆಗ ಮಾತ್ರ ಕನ್ನಡ ಹೆಚ್ಚು ಹರಡಲು ಸಾಧ್ಯ, ನಮ್ಮ ದೇಶದ ಹೊರತಾಗಿ ಪ್ರಪಂಚದ ಬೇರೆ ಭಾಗಗಳಲ್ಲಿರುವ ಕನ್ನಡ ಪ್ರಿಯರಿಗೆ ಹೊಸ ಪುಸ್ತಕಗಳು ಸುಲಭವಾಗಿ ದೊರೆಯುವಂತಾಗಬೇಕು, ಈಗೀಗ ಇದು ಸಾಧ್ಯವಾಗುತ್ತಿದೆ. ಇದು ಗುಣಾತ್ಮಕ ಬೆಳವಣಿಗೆ. ಹತ್ತೊಂಬತ್ತನೆಯ ಶತಮಾನದ ಮೂಲಕ ಇಡೀ ಕನ್ನಡಸಾಹಿತ್ಯವನ್ನು ಪರಿಶೀಲಿಸುವ ಯತ್ನ ಇಲ್ಲಿ ನಡೆದಿರುವುದೇ ಇಲ್ಲಿನ ವಿಶೇಷ. ಏಕೆಂದರೆ ಹತ್ತೊಂಬತ್ತನೆಯ ಶತಮಾನದಲ್ಲಿ ವಸಾಹತುಗಳಿಂದ ನಡೆದ ಬದಲಾವಣೆ ನಮ್ಮ ಚಿಂತನೆ ಮತ್ತು ಸಾಹಿತ್ಯದಲ್ಲಿ ಮಾಡಿದ ಬದಲಾವಣೆ ಅನೂಹ್ಯವಾದುದು. ಇದರ ಒಂದು ಪಕ್ಷಿನೋಟ ಇಲ್ಲಿದೆ. ಸಾಹಿತ್ಯದ ಆಸಕ್ತರು ಇದನ್ನು ಅಗತ್ಯವಾಗಿ ಗಮನಿಸಬೇಕಾದ ಅಗತ್ಯವಿದೆ.

ಆದಷ್ಟು ಬೇಗ ಉಳಿದ ಎರಡು ಸಂಪುಟಗಳು ಹೊರಬಂದು ಈ ಚರಿತ್ರೆಯ ಸಂಪುಟ ಸಾರ್ಥಕವಾಗಿ ಪೂರ್ಣಗೊಳ್ಳಲಿ ಎಂದಷ್ಟೇ ನಾವು ಹಾರೈಸಲು ಸಾಧ್ಯ. 


ಪುಸ್ತಕ ವಿವರ:

ಕನ್ನಡ ಲಿಟರೇಚರ್ -  ಫ್ರಂ ದಿ ಎಲೆವನ್ತ್ ಸೆಂಚುರಿ ತ್ರೂ ದಿ ನೈನ್ಟೀನ್ತ್ ಸೆಂಚುರಿ. ಮೊದಲ ಮುದ್ರಣ, 

೫೪೮ ರೂ. ಪುಟಗಳು-೪೫೦, ಪೇಪರ್ ಬ್ಯಾಕ್ ಮುದ್ರಣ. ೨೦೨೧,  ಸಾಹಿತ್ಯ ಅಕಾಡೆಮಿ, ನವದೆಹಲಿ.



  



Wednesday, 1 January 2025

ಜೈನ ಸಾಹಿತ್ಯ ಚರಿತ್ರೆಯ ಅಂತಿಮ ಸಂಪುಟ


ಕನ್ನಡ ಜೈನ ಸಾಹಿತ್ಯ ಚರಿತ್ರೆಯ ಸಂಪುಟಗಳನ್ನು ಹೊರತರುವ ಹುಚ್ಚು ಸಾಹಸಕ್ಕೆ ವಿದ್ವಾಂಸ ಮಿತ್ರರಾದ ಡಾ. ಪದ್ಮ ಪ್ರಸಾದ್ ಅವರು ಕೈಗೊಂಡಿದ್ದಾರೆಂಬುದು ನಿಮಗೆಲ್ಲ ಹಿಂದೆ ತಿಳಿಸಿದ್ದೆ. ಈಗ ಅವರ ಸಾಹಸ ಮುಕ್ತಾಯ ಕಂಡಿದೆ. ಒಟ್ಟೂ ಸುಮಾರು ಮೂರೂವರೆ ಸಾವಿರ ಪುಟಗಳ ವ್ಯಾಪ್ತಿಯಲ್ಲಿ ಕ್ರಿ.ಪೂ ೬ನೆಯ ಶತಮಾನದಿಂದ ೨೧ನೆಯ ಶತಮಾನದವರೆಗೆ ಅಂದರೆ ಕ್ರಿ.ಪೂ ೬- ಕ್ರಿ.ಶ. ೧೯೫೩ರವರೆಗಿನ ಕನ್ನಡ ಸಾಹಿತ್ಯದಲ್ಲಿ ಕಾಣಿಸುವ ಜೈನ ಕವಿ ಸಾಹಿತಿಗಳ ಕೃತಿ ಮತ್ತು ಕೃತಿಕಾರರ ಪರಿಚಯ ಮಾಡಿಸುವ ಅಸಾಧಾರಣ ಕೆಲಸವನ್ನು ಅವರು ಇದೀಗ ಆರನೆಯ ಸಂಪುಟದ ಮೂಲಕ ಮುಗಿಸಿಕೊಟ್ಟಿದ್ದಾರೆ. ಈ ಎಲ್ಲ ಸಂಪುಟಗಳಲ್ಲಿ ಒಟ್ಟೂ ೩೫೦ರಷ್ಟು ಬೇರೆ ಬೇರೆ ಲೇಖಕರು ಸುಮಾರು ೪೦೦ ಲೇಖನ ಬರಿದಿದ್ದಾರೆ. ಸ್ವತಃ ಸಂಪಾದಕರಾದ ಪದ್ಮ ಪ್ರಸಾದರು ಸುಮಾರು ೧೫೦ ಲೇಖನಗಳನ್ನು ಹಾಗೂ ಅಗತ್ಯ ಪೂರಕ ಮಾಹಿತಿಗಳ ಅನುಬಂಧಗಳನ್ನು ಬಹುತೇಕ ಎಲ್ಲ ಲೇಖನಗಳಿಗೆ ಪೂರಕ ಮಾಹಿತಿಗಳನ್ನು ತುಂಬಿ ಜೀವವಿದ್ದ ಸಂಶೋಧನ ಲೇಖನಗಳಿಗೆ ಜೀವಕಳೆ ತುಂಬಿ ಸಂಪಾದನೆ ಅಂದರೆ ಅವರಿವರಿಂದ ಒಂದಷ್ಟು ಲೇಖನ ಬರೆಯಿಸಿ ಅವನ್ನು ಜೋಡಿಸಿ ಪ್ರಕಟಿಸಿ ಪುಸ್ತಕ ಮಾಡಿಕೊಡುವುದಲ್ಲ, ಎಲ್ಲ ಲೇಖನಗಳಲ್ಲೂ ಸಮಗ್ರತೆ ಹಾಗೂ ಏಕರೂಪತೆ ಬರುವಂತೆ ಒಟ್ಟಂದದಲ್ಲಿ ಲೇಖನಗಳು ಇರುವಂತೆ ಮಾಡುವ ದೊಡ್ಡ ಜವಾಬ್ದಾರಿ ಸಪಾದಕರದು ಎಂಬುದನ್ನು ಮಾಡಿ ತೋರಿಸಿ ಪುಸ್ತಕ ಸಂಪಾದನೆಯಲ್ಲೂ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಸದ್ಯ ನನ್ನ ಮುಂದೆ ಸದರಿ ಕನ್ನಡ ಜೈನ ಸಾಹಿತ್ಯ ಚರಿತ್ರೆಯ ಆರನೆಯ ಮತ್ತು ಕೊನೆಯ ಸಂಪುಟ ಸವಾಲೆಸೆದು ಕುಳಿತಿದೆ. ಸವಾಲು ಓದುವುದಕ್ಕೆ ಅಲ್ಲ, ಬದಲಾಗಿ, ಹೆಂಗೆ ನಾವೆಲ್ಲ  (ನನ್ನ ಹಿಂದಿನ ಐವರು ಮತ್ತು ನಾನು) ಎಂದು ಕೇಳುತ್ತಿದೆ. ಇದಕ್ಕೆ ಉತ್ತರಿಸುವುದೇ ದೊಡ್ಡ ಸವಾಲಾಗಿದೆ. ಹೌದು. ಈ ಕೆಲಸವೇ ಸವಾಲಿನದು. ಇದನ್ನು ಸಮರ್ಥವಾಗಿ ಪದ್ಮಪ್ರಸಾದರು ನೆರವೇರಿಸಿಕೊಟ್ಟಿದ್ದಾರೆ. ಈ ಹಿಂದಿನ ಸಂಪುಟವೊಂದಕ್ಕೆ ಪರಿಚಯ ಬರೆಯುವಾಗ ಹೇಳಿದಂತೆಈ ಕೆಲಸ ಒಂದು ಸಂಸ್ಥೆಯೋ ಅಕಾಡೆಮಿಯೋ ಅಥವಾ ವಿಶ್ವವಿದ್ಯಾನಿಲಯವೋ ಮಾಡಬೇಕಿತ್ತು. ಆದರೆ ಇವರು ಏಕ ವ್ಯಕ್ತಿ ಕೂಡ ಪೂರಕ ಗುಣಾತ್ಮಕ ಸಹಕಾರ ದೊರೆತರೆ ಇಂಥ ಕೆಲಸ ಮಾಡಲು ಸಾಧ್ಯವಿದೆ ಎಂಬುದನ್ನು ಸಧಿಸಿ ಸಾಬೀತು ಮಾಡಿದ್ದಾರೆ. ಇವರಿಗೆ ಕನ್ನಡ ಸಾಹಿತ್ಯ ವಲಯದ ಸಾಹಿತ್ಯ ಪ್ರಿಯರು ಹಾಗೂ ಸಂಶೋಧಕರು ಜೊತೆಗೆ ಲೇಖಕರು ಸೂಕ್ತ ಸಹಕಾರ ಕೊಟ್ಟಿದ್ದಾರೆ. ಹಂಪನಾ ಮತ್ತು ಕಮಲಾ ಹಂಪನ ಅವರಂಥ ಹಿರಿಯರು ಮುಕ್ತ ನೆರವು ಕೊಟ್ಟಿದ್ದಾರೆ ಹಿರಿಯರ ಜೊತೆಗೆ ಯುವಕರೂ ಸೇರಿದಂತೆ ಮೂರು ತಲೆಮಾರಿನ ಲೇಖಕರು ಕೈಜೋಡಿಸಿದ್ದಾರೆ. ಒಳ್ಳೆಯ ಕೆಲಸಕ್ಕೆ ಜನರ ಮುಕ್ತ ಸಹಕಾರ ಸಿಕ್ಕೇ ಸಿಗುತ್ತದೆ ಎಂಬುದನ್ನು ಈ ಕೆಲಸ ಮತ್ತೆ ಸಿದ್ಧ ಮಾಡಿದೆ. ಈ ಎಲ್ಲ ಸಂಪುಟಗಳಲ್ಲಿ ಒಟ್ಟೂ ೩೫೦ಕ್ಕೂ ಹೆಚ್ಚು ಲೇಖಕರು ೪೦೦ಕ್ಕೂ ಹೆಚ್ಚು ಲೇಖನ ಬರೆದುಕೊಟ್ಟಿದ್ದಾರೆ. ಲೇಖನ ಅಂದರೆ ಇಲ್ಲಿರುವ ಬರೆಹ ಬರೀ ಲೇಖನವಲ್ಲ, ಬದಲಾಗಿ ಸಂಶೋಧನ ಪ್ರಬಂಧಗಳು. ಇವನ್ನೆಲ್ಲ ಜೋಡಿಸಿ ಪರಸ್ಪರ  ತಾಳ ಮೇಳ ಇರುವಂತೆ ಸಂಪಾದಕರು ಶ್ರಮಪಟ್ಟು ಕೂಡಿಸಿದ್ದಾರೆ. ಇದು ಸಣ್ಣ ಕೆಲಸವಲ್ಲ. ಏಕೆಂದರೆ ಒಬ್ಬೊಬ್ಬ ಬರಹಗಾರರ ಶೈಲಿ ಒಂದೊಂದು ರೀತಿ ಇರುತ್ತದೆ. ಅಂಥದ್ರಲ್ಲಿ ಮುನ್ನೂರಕ್ಕೂ ಹೆಚ್ಚು ಲೇಖಕರ ಬರಹದಲ್ಲಿ ಏಕ ಸೂತ್ರತೆ ತರುವುದು ಸರಳವೂ ಅಲ್ಲ, ಸುಲಭವೂ ಅಲ್ಲ, ಆದರೆ ಇವರು ಇಲ್ಲಿ ಅಸಾಧ್ಯವನ್ನು ಸಾಧಿಸಿದ್ದಾರೆ. ಅದಕ್ಕಾಗಿ ಮೊದಲು ಅವರನ್ನು ಅಭಿನಂದಿಸಿ ಮುಂದೆ ಕೃತಿಯ ಕಡೆಗೆ ಹೊರಳೋಣ.

ಸದರಿ ಕೃತಿ ಈ ಸರಣಿಯ ಆರನೆಯ ಮತ್ತು ಕೊನೆಯ ಸಂಪುಟವನ್ನಾಗಿ ಮಾಡಿದ್ದಾರೆ. ಯಾಕೆ ಮಾಡಿದ್ದಾರೆಂದರೆ ಅವರ ಬಳಿ ಇನ್ನೂ ಒಂದೆರಡು ಸಂಪುಟ ಮಾಡುವಷ್ಟು ಸಾಮಗ್ರಿ ಇದೆ. ವಿಟಮಿನ್ 'ಎಂ' ಕೊರತೆಯಿಂದ ತೃಪ್ತಿಯಾಗುವಷ್ಟು ಆಯಿತಲ್ಲ, ಇಷ್ಟು ಸಾಕಾಗಬಹುದೆಂದು ನಿಲ್ಲಿಸಿದ್ದಾರಷ್ಟೆ. ತಮಾಷೆ ಅಂದರೆ ಈ ಎಲ್ಲ ಸಂಪುಟಗಳ ಅನುಬಂಧ ಹಾಗೂ ಪರಾಮರ್ಶನ ಮತ್ತು ಅಡಿಟಿಪ್ಪಣಿಗಳನ್ನು ಮಾತ್ರ ಸೇರಿಸಿದರೂ ಅದೇ ಒಂದು ಪುಸ್ತಕವಾಗುತ್ತದೆ. ಸುಮ್ಮನೇ ಈ ಎಲ್ಲ ಸಂಪುಟಗಳ ಮೇಲೆ ಕಣ್ಣಾಡಿಸಿದರೆ ಸಿಗುವ ಹೈಲೈಟ್ ಏನೆಂದರೆ, ಇಲ್ಲಿ ಕನ್ನಡದ ಮೊದಲ ಜೈನ ಶಾಸನ ಕವಿಗಳ ೬ನೆಯ ಶತಮಾನದಿಂದ ಹಿಡಿದು ೨೦೨೦ರವರೆಗಿನ ೪೦೮ ಜೈನ ಲೇಖಕರ ಕೃತಿಗಳ ಪರಿಚಯ ಎಲ್ಲಿಯೂ ಯಾರಿಗೂ ಅಪಚಾರವಾಗದಂತೆ, ವಸ್ತು ನಿಷ್ಠತೆಗೆ ಭಂಗ ಬರದಂತೆ ಎಚ್ಚರ. ಒಟ್ಟೂ ಸಂಪುಟಗಳು ಆರು.ಒಟ್ಟೂ ಲೇಖನ ಬರೆದುಕೊಟ್ಟವರ ಸಂಖ್ಯೆ ಇನ್ನೂರ ಐವತ್ತಕ್ಕೂ ಹೆಚ್ಚು. ಒಟ್ಟೂ ಲೇಖನಗಳ ಸಂಖ್ಯೆ ೪೫೦. ಸ್ವತಃ ಸಂಪಾದಕರೇ ಬರೆದ ಲೇಖನಗಳ ೧೫೦ ಲೇಖನಗಳು ಮತ್ತು ಅನುಬಂಧಗಳು. ಜೊತೆಗೆ ಪೂರಕ ಮಾಹಿತಿಗಳು. ಇಲ್ಲಿರುವ ಯಾವುದೇ ಲೇಖನ ಕೇವಲ ಲೇಖನವಲ್ಲ, ಇವೆಲ್ಲ ಗಂಭೀರ ಸಂಶೋಧನ ಬರೆಹಗಳು. ೨೦ನೆಯ ಶತಮಾನದಿಂದ ಮುಂದಿನ ಜೈನ ಲೇಖಕರ ಬಗ್ಗೆ ಇದೇ ಮೊದಲ ಬಾರಿಗೆ ಒಂದೆಡೆ ಸಮಗ್ರ ಮಾಹಿತಿ ಒಂದೆಡೆ ದೊರೆಯುತ್ತಿದೆ ಹಾಗೂ ಅವರ ಬರೆಹದ ಕುರಿತು ಗಂಭೀರ ವಿಮರ್ಶೆ ದೊರೆಯುತ್ತಿದೆ. ಇದು ೨೦೨೫. ಆದರೆ ಈ ಸಂಪುಟಗಳಲ್ಲಿ ೨೦೨೦ರವರೆಗಿನ ಲೇಖಕರ ಮಾಹಿತಿ ಇದೆ. ಅಷ್ಟರ ಮಟ್ಟಿಗೆ ಇದು ಅಪ್ ಡೇಟ್ ಆಗಿದೆ.  ತಮಾಷೆ ಅಂದರೆ ೧೯೨೦ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪ್ರೊ. ಹಾ ಮಾನಾಯಕರು ಕನ್ನಡ ಗ್ರಂಥ ಸೂಚಿಯನ್ನು ಮೊದಲ ಬಾರಿಗೆ ಹೊರತರುವಾಗ ಎದುರಿಸಿದ್ದ ಕಷ್ಟಗಳನ್ನು ಒಂದೆಡೆ ದಾಖಲಿಸಿದ್ದಾರೆ. ಈ ಸಂಪುಟಗಳನ್ನು ಗಮನಿಸುವಾಗ ಹಾಮಾನಾ ಅವರ ಕಷ್ಟದ ಹತ್ತುಪಟ್ಟು ಕಷ್ಟ ಮತ್ತು ಸಂಕಟ ಸದರಿ ಸಂಪಾದಕರಿಗೆ ಆಗಿರಬೇಕೆಂಬ ಭಾವನೆ ಮೂಡಿತು. ಏಕೆಂದರೆ ಹಾಮಾನಾ ಅವರ ಆ ಕಾಲದಲ್ಲಿ ಗಂಭೀರವಾಗಿ ಕನ್ನಡಕ್ಕೆ ಕೆಲಸ ಮಾಡುವ ಯುವ ಪಡೆ ಸಿದ್ಧವಾಗಿ ಅವರ ಬಳಿ ನಿಂತಿತ್ತು. ಆದರೆ ಈಗಿನ ಕನ್ನಡದ ಪರಿಸ್ಥಿತಿ ಅಯೋಮಯ. ಕನ್ನಡ ಓದಿದರೆ ಅದೇ ಅದ್ಭುತ . ಇನ್ನು ಬರೆದರೆ ಅದರಲ್ಲೂ ಸಂಶೋಧನಾತ್ಮಕ ಬರವಣಿಗೆ ಆ ದೇವರಿಗೇ ಪ್ರೀತಿ. ಇಂಥ ಸ್ಥಿತಿಯಲ್ಲಿ ಇವರು ಹಠ ಸಾಧಿಸಿರುವುದು ಹುಡುಗಾಟವಲ್ಲ, ಇವರ ಈ ಕೆಲಸಕ್ಕೆ ಕನ್ನಡ ನಾಡು ಇದಕ್ಕೇ ವಿಶಿಷ್ಟವಾದ ಗೌರವವನ್ನು ಸಲ್ಲಿಸಬೇಕಿದೆ. ಅದು ಹೇಗೆ ಯಾವ ರೀತಿ ನನಗೆ ತಿಳಿದಿಲ್ಲ, ಇಂಥ ಗೌರವ ಇವರಿಗೆ ಮಾತ್ರ ದೊರೆತು ಅಲ್ಲಿಗೇ ನಿಲ್ಲಬೇಕು ಅಥವಾ ಮತ್ತೆ ಮುಂದೊಂದು ದಿನ ಇಂಥ ಇನ್ನೊಂದು ಕೆಲಸ ಆದಾಗ ನೋಡುವ ಅನ್ನುವಂತಿರಬೇಕು. ಇಷ್ಟು ದೀರ್ಘ ಅವಧಿಯ ಜೈನ ಲೇಖಕರ ಕೃತಿ ಪರಿಚಯ, ಮೌಲ್ಯಮಾಪನ ಜೊತೆಗೆ ಅಲಭ್ಯ ಮಾಹಿತಿಗಳ ಸಂಗ್ರಹ ಕೆಲವು ವಿಷಯಗಳ ಇತ್ಯರ್ಥ ಇವೆಲ್ಲ ಕೃತಿಗೆ ಭೂಷಣಪ್ರಾಯವಾಗಿವೆ.

ಇದರ ಮೊದಲ ಸಂಪುಟ ಶಾಸನ ಮತ್ತು ಸಾಹಿತ್ಯಕ್ಕೆ ಮೀಸಲಾಗಿದ್ದು ಬರು ಬರುತ್ತ ಕೊನೆಯ ಸಂಪುಟದ ವೇಳೆಗೆ ಸಿನಿಮಾ ಮಾಧ್ಯಮ ಕ್ಷೇತ್ರಗಳಲ್ಲಿ ಕೂಡ ಸಾಧನೆ ಮಾಡಿದ, ಮಾಡುತ್ತಿರುವ ವ್ಯಕ್ತಿಗಳಿಗೂ ಅವಕಾಶ ಕೊಡಲಾಗಿದ್ದು ಒಂದು ಬಗೆಯಲ್ಲಿ ಸಣ್ಣ ಪ್ರಮಾಣದ ಸಮಕಾಲೀನ ಜೈನ ವಿಶ್ವಕೋಶದ ಸ್ವರೂಪಕ್ಕೆ ತಿರುಗಿದೆ. ಒಳ್ಳೆಯದು. ಸದ್ಯ ಕರ್ನಾಟಕವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಸದರಿ ಸಂಪಾದಕರು ಕೆಲಸ ಮಾಡಿದ್ದಾರೆ. ಇದನ್ನು ಮತ್ತಷ್ಟು ವಿಸ್ತರಿಸಿ ದೇಶ ಮಟ್ಟಕ್ಕೂ ಬೆಳೆಸುವ ಸಾಧ್ಯತೆ ಇದೆ. ಇದಕ್ಕೆ ಸಾಂಸ್ಥಿಕ ಯತ್ನವೇ ಅಗತ್ಯವಾಗುತ್ತದೆ, ಈ ದೃಷ್ಟಿಯಿಂದಲೂ ಈ ಕೃತಿ ಮಾದರಿ ಹಾಕಿದೆಯೆನ್ನಬಹುದು.  ಪ್ರಸ್ತುತ ಆರನೆಯ ಸಂಪುಟದಲ್ಲಿ ೧೦೫ ಲೇಖನಗಳಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಸಣ್ಣ ಪ್ರಯತ್ನ ಮಾಡಿದವರನ್ನೂ ಲಕ್ಷ್ಯದಲ್ಲಿ ಇಟ್ಟುಕೊಳ್ಳಲಾಗಿದೆ, ಉದಾಹರಣೆಗೆ ಸುಜಾತಾ ಹಡಗಲಿ ಎಂಬವರು ಕೇವಲ ಎರಡು ಕೃತಿ ರಚಿಸಿದ್ದು ಇವರಿಗೂ ಸ್ಥಾನ ಕೊಡಲಾಗಿದೆ. ಈ ದೃಷ್ಟಿಯಿಂದ ಇದು ನಿಪ್ಷಕ್ಷಪಾತವಾಗಿ ಲೇಖಕರನ್ನು ಕಂಡಿದೆ. ಲೇಖಕರು ಆಗಿರುವುದು ಮುಖ್ಯ, ಅವರ ರಚನೆಯ ಸಂಖ್ಯೆ ಅಲ್ಲ, ಹಾಗೆಯೇ ಕೃತಿಗಳ ಮೌಲ್ಯ ಮಾಪನ ಮಾಡಲಾಗಿದೆ.  ಇದನ್ನು ಗಮನಿಸುವಾಗ, ನಮ್ಮ ದೇಶದ ವೈವಿಧ್ಯ ಹಾಗೂ ವೈಶಿಷ್ಟ್ಯ ಕಣ್ಣೆದುರು ಬರುತ್ತದೆ. ಯಾವುದೋ ಮೂಲೆಯಲ್ಲಿ ಕುಳಿತು ತಮ್ಮ ಪಾಡಿಗೆ ತಾವು ರಚನಾತ್ಮಕ ಕೆಲಸ ಮಾಡುತ್ತಿರುವ ಜನರನ್ನು ಹೀಗೆ ಗುರುತಿಸುವುದೇ ಮೊದಲನೆಯ ದೊಡ್ಡ ಕೆಲಸ. ಅದು ಇಲ್ಲಿ ಸಾಧ್ಯವಾಗಿದೆ. ನಮ್ಮ ದೇಶದಲ್ಲಿ ಜನಸಂಖ್ಯೆಯ ದೃಷ್ಟಿಯಿಂದ ಅಲ್ಪ ಸಂಖ್ಯಾತರಾಗಿದ್ದು ದೇಶದ ಯಾವುದೇ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದವರ ಪಟ್ಟಿಯನ್ನು ತೆಗೆದರೆ ಅದರಲ್ಲಿ ಒಬ್ಬರಾದರೂ ಜೈನ ಸಾಧಕರು ಸಿಗುತ್ತಾರೆ. ಈ ರೀತಿ ರಚನಾತ್ಮಕ ಕಾರ್ಯದಲ್ಲಿ ಅವರು ದೇಶಕ್ಕಾಗಿ, ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ. ಸದಯ ಈ ಸಂಪುಟಗಳು ಸಾಹಿತ್ಯಕ್ಕ ಆದ್ಯತೆ ಕೊಟ್ಟಿದ್ದರಿಂದ ಅದೇ ಇದರ ಚೌಕಟ್ಟಾಗಿದೆ. ಇದು ಅಗತ್ಯ. ಆದರೆ ಇದಕ್ಕೂ ಒಬ್ಬ ವ್ಯಕ್ತಿ ಪಡಬೇಕಾದ ಶ್ರಮ ಅನೂಹ್ಯ. ಪದ್ಮ ಪ್ರಸಾದರಂಥ ಶ್ರದ್ಧಾವಂತರಿಗೂ ಹಠವಾದಿಗೂ ಇದು ಸಾಧ್ಯವಷ್ಟೆ. ಏನೇ ಆಗಲಿ ಇಂಥದ್ದೊಂದು ಕೆಲಸದ ಮೂಲಕ ಇಡೀ ದೇಶದಲ್ಲಿ ಸೃಜನಶೀಲ ಕೆಲಸಕ್ಕೆ  ಒಂದು ಮಾದರಿ  ಹಾಕಿಕೊಟ್ಟಿದ್ದಾರೆ. ಇಂಥ ಕೆಲಸ ದೇಶದಲ್ಲಿ ಈ ಪ್ರಮಾಣದಲ್ಲಿ ಆಗಿರುವುದು ಇದೇ ಮೊದಲು, ಬೇರೆ ಯಾವ ಭಾಷೆಯಲ್ಲೂ ಇಂಥ ಕೆಲಸವಾಗಿರುವಂತೆ ಕಾಣಿಸದ ಕಾರಣಕ್ಕೆ ಇದು ಮಾದರಿ. ಮುಂದೆ ಅನ್ಯರೂ ಇದನ್ನು ಅನುಸರಿಸಬಹುದು. ಸಂತೋಷ. ಈ ನಿಟ್ಟಿನಲ್ಲಿ ಇದು ದೇಶಕ್ಕೆ ಕನ್ನಡದ ಕೊಡುಗೆಯಾಗಲಿ. ಒಟ್ಟಿನಲ್ಲಿ ಸಮುದಾಯವೊಂದು ಸೃಜನಶೀಲವಾಗಿ ತೊಡಗಿಸಿಕೊಂಡರೆ ದೇಶಕ್ಕೂ ಸಮಾಜಕ್ಕೂ ಎಂಥ ಉಪಯುಕ್ತ ಕೊಡುಗೆ ಕೊಡಬಹುದು ಎಂಬುದು ಕೇವಲ ಸಾಹಿತ್ಯವೊಂದರ ಮೂಲಕ ಇಲ್ಲಿ ತೆರೆದುಕೊಂಡಿದೆ. ಇಂಥದ್ದೊಂದು ಕೆಲಸದ ಮೂಲಕ ಸಣ್ಣಗಾತ್ರದ ಸಮುದಾಯ ಸಮಾಜಕ್ಕೆ ಕೊಡಮಾಡಿದ ಕೊಡುಗೆಯನ್ನು ಕಣ್ಣೆದುರು ಇಟ್ಟ ಪದ್ಮ ಪ್ರಸಾದರನ್ನು ನಾವೆಲ್ಲ ಮುಕ್ತ ಮನಸ್ಸಿನಿಂದ ಅಭಿನಂದಿಸಬೇಕಿದೆ. ಮಾತಿನಲ್ಲಿ ಅಲ್ಲ, ಪ್ರಸ್ತುತ ಸಂಪುಟಗಳನ್ನು ಓದಿ ವಿಮರ್ಶಿಸುವ, ಇತರರಿಗೆ ಅದರ ಮಹತ್ವ ತಿಳಿಸುವ ಮೂಲಕ. ಅಂಥ ಕೆಲಸ ಎಲ್ಲ ಕಡೆ ನಡೆಯಲಿ ಎಂದಷ್ಟೇ ಬಯಸಬಹುದು.


ಪ್ರತಿಗಳಿಗೆ ಸಂಪರ್ಕ ಹಾಗೂ ಕೃತಿ ವಿವರ- ಕನ್ನಡ ಜೈನ ಸಾಹಿತ್ಯ ಚರಿತ್ರೆ, ಸಂಪುಟ -೬,

ಬೆಲೆ- ರೂ.೭೫೦ ಪುಟಗಳು- ೭೩೬

ಸಂಪಾದಕರು ಮತ್ತು ಪ್ರಕಾಶಕರು- ಎಸ್ ಪಿ ಪದ್ಮ ಪ್ರಸಾದ್, ಗೋಕುಲ ಬಡಾವಣೆ, ತುಮಕೂರು, ಮೊಬೈಲ್-೯೪೪೮೭೬೮ ೫೬೭