Saturday, 17 June 2023

1. ಸದಾ ಕಾಡುವ ಅಪ್ಪನ ನೆನಪು - ೧



ಅಪ್ಪ ತೀರಿಕೊಂಡು ಹತ್ತು ವರ್ಷಗಳಾದವು. ಆದರೆ ಹೋದಲ್ಲಿ ಬಂದಲ್ಲಿ ಆತ ನೆನಪಾಗದ ಕ್ಷಣವೇ ಇಲ್ಲ. ಆ ಮಟ್ಟಿಗೆ ಆತ ಆವರಿಸಿಕೊಂಡುಬಿಟ್ಟಿದ್ದಾನೆ. ಆತ ನನ್ನನ್ನು ಈ ಲೋಕಕ್ಕೆ ಕರೆದುತಂದಿದ್ದು ಮಾತ್ರವಲ್ಲ ಈ ಲೋಕದ ಸಕಲ ಚರಾಚರ ವಸ್ತಗಳನ್ನು ಮೊದಲಬಾರಿಗೆ ತೋರಿಸಿ ಪರಿಚಯಿಸಿದ್ದು ಅವುಗಳೊಂದಿಗೆ ನನ್ನನ್ನು ಜೋಡಿಸಿದ್ದು ಇದಕ್ಕೆ ಕಾರಣವೆನ್ನಬಹುದು. ಯಾವುದೇ ಹುಣ್ಣಿಮೆ ಅಮಾವಾಸ್ಯೆಯ ರಾತ್ರಿಗಳು ನನ್ನಪಾಲಿಗೆ ಅಪ್ಪನೊಂದಿಗೆ ಕಲಿಕೆಯ ತರಗತಿಗಳಾಗಿರುತ್ತಿದ್ದವು. ಕತ್ತಲು ಆವರಿಸುತ್ತಿದ್ದಂತೆ ಅಮಾವಾಸ್ಯೆಯ ರಾತ್ರಿ ಮನೆಹೊರಗೆ ಕಾಡಿನ ಬಾಯಿಗೆ ಕರೆದೊಯ್ಯುತ್ತಿದ್ದ. ಅಲ್ಲಿ ಯಾವುದೋ ಮರಕ್ಕೆ ಅಂಟಿಕೊಂಡು ತನ್ನ ಹೊಟ್ಟೆ ಒಡೆದು ಹೋಗುವಂತೆ ಜರ‍್ರ್ ಎಂದು ಕಿರುಚುತ್ತಿದ್ದ ಜೀರುಂಡೆಗಳನ್ನು ಟಾರ್ಚ್ ಬೆಳಕಲ್ಲಿ ತೋರಿಸಿ ಆ ಮರಕ್ಕೆ ಅಂಟಿಕೊಂಡು ಕಿರುಚುತ್ತಲೇ ಸತ್ತುಹೋಗಿದ್ದ ಜೀರುಂಡೆಗಳನ್ನು ತೋರಿಸಿ ಅವುಗಳನ್ನು ಮರದಿಂದ ಬಿಡಿಸಿ ಅವುಗಳ ರೆಕ್ಕೆಯ ಬಣ್ಣಗಳನ್ನು ಅಂದವನ್ನು ಹತ್ತಿರದಿಂದ ನೋಡುವಂತೆ ನಾಳೆ ಬಿಸಿಲಲ್ಲಿ ಮತ್ತೆ ನೋಡುವಂತೆ ಹೇಳುತ್ತಾ ಅವುಗಳ ಬಗ್ಗೆ ತನಗೆ ಗೊತ್ತಿರುವ ಎಲ್ಲ ಸಂಗತಿಯನ್ನು ಒಂದೊಂದಾಗಿ ಹೇಳುತ್ತಿದ್ದ ಅದು ಮಳೆಗಾಲದ ರಾತ್ರಿಯಾದರಂತೂ ನೊರಾರು ಬಗೆಯ ವಿಚಿತ್ರ ಕ್ರಿಮಿಕೀಟಗಳು ಕಾಣಿಸುತ್ತಿದ್ದವು ಹತ್ತಾರು ಬಗೆಯ ಕಪ್ಪೆಗಳು, ಮರಕಪ್ಟೆ, ಮಿಂಚು ಹುಳ ಮುಂತಾದವುಗಳ ದರ್ಶನಮಾಡಿಸಿ ಅವುಗಳ ಬಗ್ಗೆ ತಿಳಿದ ಮಾಹಿತಿಯನ್ನು ಹೇಳುತ್ತಿದ್ದ. ಹೀಗೆ ಪರಿಸರದ ಕತೆ ತಲೆಯೊಳಗೆ ಇಳಿಯತೊಡಗಿತು. ಹೇಳಿ ಕೇಳಿ ಅದು ಮಲೆನಾಡು, ಧೋ ಎಂದು ವಾರಗಟ್ಟಲೆ ಒಂದೇ ಸಮನೆ ಮೂರ್ನಾಲ್ಕು ತಿಂಗಳು ಸುರಿಯುವ ಮಳೆ. ಮರದ ತೊಗಟೆಗಳ ಮೇಲೆ ಮಳೆ ನೀರು ಇಳಿದು ಪಾಚಿಕಟ್ಟಿರುತ್ತಿತ್ತು. ಅದನ್ನು ತೋರಿಸುತ್ತಾ ‘ನೋಡು ಮಳೆ ಅಂದರೆ ಹಿಂಗೆ ಬರಬೇಕು’ ಅನ್ನುತ್ತಿದ್ದ ಸುತ್ತ-ಮುತ್ತಲೆಲ್ಲ ಸಣ್ಣ-ಪುಟ್ಟ ತೊರೆಗಳು, ಜಲಪಾತಗಳು ಗುಡ್ಡದಿಂದ ಸುರಿಯುತ್ತಿದ್ದವು ಮಣ್ಣು ಮೆತ್ತಿದ್ದ ಕಾಲುಗಳನ್ನು ಆ ತೊರೆಗಳಿಗೆ ಹಿಡಿದು ಕಾಲು ತೊಳೆಸುತ್ತಿದ್ದ. ಎಲ್ಲಾದಾರೂ ಕಾಲುಬೆರಳುಗಳ ಸಂದಿಯಲ್ಲಿ ಅಂಟಿಕೊಂಡು ರಕ್ತ ಹೀರುತ್ತಿದ್ದ ಉಂಬಳ(ಇಂಬಳ) ತೋರಿಸಿ ಅದನ್ನು ಕಿತ್ತು ಇದು ನೋಡು ಎಷ್ಟು ರಕ್ತವನ್ನು ಬೇಕಾದರೂ ಹೀರುತ್ತದೆ. ನೋಡಲು ಇಷ್ಟು ಚಿಕ್ಕದು. ಆದರೆ ರಕ್ತ ಹೀರಿದಷ್ಟೂ ದೊಡ್ಡದಾಗುತ್ತದೆ. ಇದರ ಮಜ ಗೊತ್ತಾ ಎನ್ನುತ್ತಾ ಅದರ ಹೊಟ್ಟೆಯನ್ನು ಅಮುಕಿ ಕುಡಿದ ರಕ್ತವೆನ್ನೆಲ್ಲಾ ಕಕ್ಕಿಸಿ ಜೊತೆಯಲ್ಲಿದ್ದ ಕತ್ತಿಯಿಂದ ಅದನ್ನು ಕತ್ತರಿಸುತ್ತಿದ್ದ. ಈಗ ನೋಡು ಎಂದು ಅದನ್ನು ನೋಡುವಂತೆ ಹೇಳುತ್ತಿದ್ದ. ಕತ್ತರಿಸಿದ ಎರಡೂ ಭಾಗಗಳು ಅತ್ತಿತ್ತ ಚಲಿಸುತ್ತಿದ್ದವು. ಇವು ಸಾಯುವುದಿಲ್ಲ. ಮಳೆಗಾಲ ಮುಗಿಯುತ್ತಿದ್ದಂತೆ ಒಣಗಿದ ಕಡ್ಡಿಯಂತೆ ತರಗೆಲೆಗಳ ಜೊತೆ ಬಿದ್ದಿರುತ್ತವೆ. ಒಂದು ಮಳೆ ಬಿತ್ತೋ ಮತ್ತೆ ಚಿಗಿತುಕೊಳ್ಳುತ್ತವೆ. ಮನುಷ್ಯ, ದನ ಹೀಗೆ ರಕ್ತವಿರುವ ಯಾವುದೇ ಪ್ರಾಣಿ ಅತ್ತಿತ್ತ ಓಡಾಡಿದರೆ ಅವುಗಳ ವಾಸನೆ ಹಿಡಿದು ಅಂಟಿಕೊಳ್ಳುತ್ತವೆ. ಮತ್ತೆ ಜೀವತಾಳುತ್ತವೆ. ಸುಟ್ಟಾಗಲೇ ಇವು ಸಾಯುವುದು ಎಂದು ಅವುಗಳ ವೃತ್ತಾಂತ ಹೇಳುತ್ತಿದ್ದ ಇವು ಅಂಟದಂತೆ ಮಾಡಿಕೊಳ್ಳಲು ಒಂದು ಉಪಾಯವಿದೆ ಎನ್ನುತ್ತಾ ತನ್ನ ಸಂಚಿ(ಎಲೆ-ಅಡಿಕೆ ಇಟ್ಟುಕೊಳ್ಳುವ ಸಣ್ಣ ಚೀಲ)ಯೋಳಗಿಂದ ತಂಬಾಕು ತೆಗೆದು ಅದನ್ನು ನೀರಿಗೆ ಹಾಕಿ ಕಾಲಿಗೆ ಉಜ್ಜಿಕೊಳ್ಳುತ್ತಿದ್ದ. ಇಷ್ಟಾದರೆ ಇವು ಕಚ್ಚುವುದಿಲ್ಲ ನೋಡು ಎನ್ನುತ್ತಿದ್ದ. ನಂತರ ಆಕಾಶದ ಕಡೆಗೆ ಕೈ ತೋರಿಸಿ ಅಲ್ಲಿ ನೋಡು ಅನ್ನತ್ತಾ ಅಲ್ಲಿ ಮೀನಿನ ಆಕಾರದಲ್ಲಿ ಇರುವ ನಕ್ಷತ್ರಗಳ ಗುಂಪು ಕಾಣುತ್ತಿದೆಯೆಲ್ಲಾ ಅದೇ ಮೀನರಾಶಿ ಎಂದು ಹೇಳಿ ಉಳಿದ ರಾಶಿಗಳ ಗುರುತನ್ನು ಪತ್ತೆಹಚ್ಚುವಂತೆ ಪರೀಕ್ಷೆಗೆ ಒಡ್ಡುತ್ತಿದ್ದ. ಸಪ್ತರ್ಷಿ ಮಂಡಲವನ್ನು ಮೊದಲು ತೋರಿಸಿದ್ದ. ಹೀಗೆ ತನಗೆ ಗೊತ್ತಿದ್ದ ಖಗೋಳಜ್ಞಾನವನ್ನು ನನಗೆ ತಲುಪಿಸಿದ್ದ. ಹಾಗೆಯೇ ಮುಸ್ಸಂಜೆಯ ವೇಳೆ ಆಕಾಶ ತೋರಿಸಿ ಆ ಕೆಂಪು ಬಣ್ಣದ ಮೋಡ ಪಶ್ಚಿಮದಿಂದ ಪೂರ್ವಕ್ಕೆ ಹೋಗುತ್ತಿದೆ. ಮಳೆ ನಿಲ್ಲುವ ಸೂಚನೆ ಎಂದು ಹೇಳುತ್ತಿದ್ದ. ಕೆಲ ದಿನಗಳ ಬಳಿಕ ನೆಲದೊಳಗಿನಿಂದ ನೆಲಹಾತೆ(ಈಚಲು ಹುಳ ಅಥವಾ ರೆಕ್ಕೆ ಹುಳ)ಗಳು ಎದ್ದು  ಹಾರುತ್ತಿದ್ದವು. ಅವುಗಳನ್ನು ತೋರಿಸಿ ಇದು ಮತ್ತೆ ಮಳೆಬರುವ ಸೂಚನೆ ಅನ್ನುತ್ತಿದ್ದ. ಬೇಸಗೆ ಕಾಲದ ಮಾವು ಮತ್ತು ಗೋಡಂಬಿ ಮರಗಳ ಹೂವು ತೋರಿಸುತ್ತಾ ಅವುಗಳ ಪ್ರಮಾಣದಂತೆ ಮುಂದೆ ಮಳೆಬರುತ್ತದೆ ನೋಡು ಎಂದು ಅದನ್ನು ಸೂಕ್ಷö್ಮವಾಗಿ ಗಮನಿಸಿ ತಿಳಿವಳಿಕೆ ಕೊಡುತ್ತಿದ್ದ. ಅಲ್ಲೆಲ್ಲೋ ಗಿಡದ ಮೇಲೆ ಸರಿದು ಹೋಗುತ್ತಿದ್ದ ಹಸಿರು ಹಾವನ್ನು ಹಿಡಿದು ಅದರ ಕಣ್ಣು, ಬಾಯಿಯ ಕೆಂಪು, ಮೈಬಣ್ಣ, ಅದರ ಮೇಲಿನ ಬಿಳಿ ಚುಕ್ಕೆ ಎಲ್ಲವನ್ನು ವಿವರಿಸುತ್ತಿದ್ದ. ಹಾಗೆಯೇ ಕೆರೆಹಾವು, ನಾಗರ, ಕಾಳಿಂಗ ಮೊದಲಾದವುಗಳ ಪರಿಚಯ ಮತ್ತು ಅವುಗಳಿಂದ ಮಾಡಿಕೊಳ್ಳಬೇಕಾದ ರಕ್ಷಣೆಯ ಪಾಠವನ್ನು ಹೇಳುತ್ತಿದ್ದ.

ಮಾವಿನಕಾಯಿ ಸುರಿಯುತ್ತಿದ್ದ ಕಾಲದಲ್ಲಿ ಮುಸ್ಸಂಜೆ ಕರೆದುಕೊಂಡು ಹೋಗಿ ಆ ಮರಕ್ಕೆ ಟಾರ್ಚ್ ಬಿಟ್ಟು ಕಾಯಿ ಕೆರೆಯುತ್ತಿದ್ದ ಪ್ರಾಣಿಯೊಂದನ್ನು ತೋರಿಸಿ ಇದು ಕಾಡುಬೆಕ್ಕು ಇದನ್ನು ಆರುಬೆಕ್ಕು ಎಂದು ಕರೆಯುತ್ತಾರೆ. ಈಗ ನೋಡು ಅನ್ನುತ್ತಾ ಒಂದು ಕಲ್ಲನ್ನು ಅದರತ್ತ ಎಸೆಯುತ್ತಿದ್ದ ಅದು ಹಕ್ಕಿಯಂತೆ ಹಾರಿ ಪಕ್ಕದ ಮರಕ್ಕೆ ಹೋಗಿ ಕೂರುತ್ತಿತ್ತು. ಒಂದು ಕಾಯನ್ನೂ ಇದು ಉಳಿಸುವುದಿಲ್ಲ ಹಾಳಾದುದು ಎಂದು ಗೊಣಗುತ್ತಿದ್ದ. ಸುಗ್ಗಿಯ ಕಾಲದಲ್ಲಿ ಬತ್ತದ ಕೊಯ್ಲು ನಡೆಯುತ್ತಿತ್ತು. ತೆನೆಯಿಂದ ಕಾಳುಗಳು ಅಲ್ಲಲ್ಲಿ ಚಲ್ಲುತ್ತಿದ್ದವು ಅವುಗಳನ್ನು ಹಕ್ಕಿಯ ಹಿಂಡು ಆಯ್ದುಕೊಳ್ಳಲು ಬರುತ್ತಿತ್ತು. ಅವುಗಳನ್ನು ಅಪ್ಪ ಎಂದೂ ಚದುರಿಸುತ್ತಿರಲಿಲ್ಲ. ನೋಡು ನಾವು ಬೆಳೆದ ಆಹಾರ ಧಾನ್ಯದ ಮೇಲೆ ಅವುಗಳಿಗೂ ಹಕ್ಕಿದೆ. ತಿಂದುಕೊಳ್ಳಲಿ ಬಿಡು ಎನ್ನುತ್ತಿದ್ದ. ಆದರೆ ಇಲಿಗಳು ಬರದಂತೆ ತಡೆಯುವುದು ಹೇಗೆಮದು ತೋರಿಸುತ್ತಿದ್ದ ಪಪ್ಪಾಯಿ ಕಾಯಿಯನ್ನು ತಂದು ಅದರ ಚೂರುಗಳನ್ನು ಇಲಿಯ ಬಿಲದ ಬಳಿ ಚೆಲ್ಲುತ್ತಿದ್ದ. ಇನ್ನು ಇಲಿ ಬರಲ್ಲ ಅನ್ನುತ್ತಿದ್ದ ಹಾಗೆಯೇ ಆಗುತ್ತಿತ್ತು. ಪಪ್ಪಾಯಿಗೂ ಇಲಿಗೂ ಆಗಿಬರಲ್ಲ ಅನ್ನುತ್ತಿದ್ದ. ಹೀಗೆ ಹತ್ತಾರು ಪರಿಸರ ಸ್ನೇಹಿ ರಕ್ಷಣಾ ತಂತ್ರಗಳು ಅವನಿಗೆ ತಿಳಿದಿದ್ದವು ಸಂದರ್ಭ ಬಂದಾಗಲೆಲ್ಲಾ ಅವುಗಳನ್ನು ಹೇಳುತ್ತಿದ್ದ ಆತ ಜೇನು ಬೇಟೆಯಲ್ಲಿ ನಿಸ್ಸೀಮನಾಗಿದ್ದ ಜೇನು ಹುಳಗಳನ್ನು ನೋಡಿ ಅವು ಹಾರುವ ದಿಕ್ಕನ್ನು ನೋಡುತ್ತಾ ಅವುಗಳ ಹುಟ್ಟು ಎಲ್ಲಿರಬಹುದೆಂದು ಲೆಕ್ಕಹಾಕುತ್ತಿದ್ದ ಆ ಸಂಜೆ ಅವುಗಳ ಹುಟ್ಟು ಹಿಂಡುತ್ತಿದ್ದ. ಅದೇ ರೀತಿ ಮಲೆನಾಡಿನಲ್ಲಿ ಕಾಣುವ ಮತ್ತೊಂದು ಜೇನು ವಿಧ ತುಡವಿ. ಇದು ಮರದ ಪೊಟರೆಗಳಲ್ಲಿ ಹುಟ್ಟು ಕಟ್ಟುತ್ತದೆ. ತುಂಬಾ ರುಚಿ ಅಪ್ಪ ಕಾಡಿಗೆ ಹೋದಾಗಲೆಲ್ಲಾ ಪೊಟರೆಗಳನ್ನು ಸುಮ್ಮನೆ ನೋಡುತ್ತಾ ನಿಲ್ಲತ್ತಿದ್ದ ಅಲ್ಲಿ ಹುಳಗಳ ಓಡಾಟ ಕಂಡರೆ ಆ ರಾತ್ರಿಯೇ ಅವುಗಳ ಹುಟ್ಟಿನ ಕತೆ ಮುಗಿಯಿತೆಂದು ಅರ್ಥ. ಅದೇ ರೀತಿ ಕಾಡಿನ ಅನೇಕ ಹಣ್ಣುಗಳ ಪರಿಚಯ ಮತ್ತು ರುಚಿಯನ್ನು ಹತ್ತಿಸಿದ್ದ ಬೇಸಿಗೆ ಬಂತೆಂದರೆ ಅಪ್ಪನ ಜೊತೆ ಕಾಡು ಸುತ್ತುವುದು ಮುರುಗಲ, ವಾಟೆ, ರಾಮ ಪತ್ರೆ, ಕಾಡು ಲವಂಗ ಮುಂತಾದ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆಗೆ ಹೋಗುವುದು ಒಂದು ಕ್ರಮವಾಗಿತ್ತು. ಆಗ ಬಾಯಾರಿಕೆಯಾದರೆ ಏನು ಮಾಡಬೇಕೆಂದು ತೋರಿಸುತ್ತಿದ್ದ. ದೊಡ್ಡದಾಗಿ ಮರತಬ್ಬಿಕೊಂಡು ಬೆಳೆದು ನಿಂತ ಬಳ್ಳಿಯನ್ನು ತೋರಿಸಿ ನೋಡು ಇದು ‘ಕುಕ್ಕರಸ’ ಬಳ್ಳಿ ಅನ್ನುತ್ತಾ ಕತ್ತಿಯಿಂದ ಬಳ್ಳಿಯನ್ನು ಒಂದಡಿಯಷ್ಟು ಕಡಿದು ಬಾಯಿಗೆ ಇಟ್ಟು ಹೀರುವಂತೆ ಹೇಳುತ್ತಿದ್ದ. ನೀರಿನ ರುಚಿ ಹೆಂಗಿದೆ ಅನ್ನುತ್ತಿದ್ದ. ಅದು ಎಳನೀರಿನಂತೆ ಇರುತ್ತಿತ್ತು. ಸುಮಾರು ಕಾಲು ಲೀಟರ್‌ನಷ್ಟು ನೀರು ಅದರಲ್ಲಿ ಜಿನುಗುತ್ತಿತ್ತು. ಇದನ್ನು ಮತ್ತೆ ನಾನು ನೆನಪಿಸಿಕೊಂಡಿದ್ದು ಬಿ.ಜಿ.ಎಲ್. ಸ್ವಾಮಿಯವರ ‘ಹಸಿರು ಹೊನ್ನು’ ಕೃತಿ ಓದುವಾಗ ಅಲ್ಲಿ ಅವರು ನೀಟಂ ಬಳ್ಳಿಯನ್ನು ಹುಡುಕುವ ಪ್ರಸ್ತಾಪ ಮಾಡುತ್ತಾರೆ ಅದು ನನಗಾಗಲೇ ಅಪ್ಪನಿಂದ ಪರಿಚಯವಾಗಿಬಿಟ್ಟಿತ್ತು. ಅದರ ನೀರಿನ ರುಚಿಯ ಮುಂದೆ ತುಂಗಾ ಪಾನ ಎಂಬ ಜನಪದರ ಮಾತು ಕೂಡ ಸಪ್ಪೆಯಾಗಿಬಿಟ್ಟಿತ್ತು. ಹೀಗೆ ಅಪ್ಪನಿಂದ ಪಡೆದ ನೆನಪು ಮತ್ತು ಅನುಭವಗಳ ಮೂಟೆ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಲೇ ಇರುತ್ತದೆ. ಇವೆಲ್ಲದರಿಂದ ಅಪ್ಪ ಸದಾ ಕಾಲ ನನ್ನ ಸುತ್ತಲೇ ಇದ್ದಾನೆಂಬ ಭಾವ ಕಾಡುತ್ತದೆ. ಕಂಡಲ್ಲಿ, ಹೋದಲ್ಲಿ, ಬಂದಲ್ಲಿ ಅಪ್ಪ ಜೊತೆಗಿರುತ್ತಾನೆ. ಅದು ಬಾಳೆಯ ಗಿಡವಿರಲಿ, ಹಾಡೆ ಬಳ್ಳಿ ಇರಲಿ, ತೆಂಗಿನ ಮರವಿರಲಿ. ಹರಿಯುವ ನೀರು ಇರಲಿ, ಜಾರುವ ಮಣ್ಣಿರಲಿ, ತೆರೆದ ಆಕಾಶವಿರಲಿ, ಎಲ್ಲೆಲ್ಲೂ ಅಪ್ಪನ ಅಸ್ತಿತ್ವ ಕಾಣುತ್ತದೆ. ಈ ಲಹರಿ ಹೀಗೆಯೇ ಬ್ಲಾಗಲ್ಲಿ ಆಗಾಗ ಹರಿಯುತ್ತದೆ. ಇದಕ್ಕೆ ಅಪ್ಪನ ದಿನ ಆಗಲೇಬೇಕೆಂಬ ನಿಯಮವಿಲ್ಲ.

Friday, 16 June 2023

2. ಸದಾ ಕಾಡುವ ಅಪ್ಪನ ನೆನಪು – ೨


ಜೇನು ಬೇಟೆಯಲ್ಲಿ ಅಪ್ಪ ನಿಸ್ಸೀಮನಾಗಿದ್ದ ಅಂದೆ. ಆದರೆ ಜೇನು ಕೀಳುವಾಗ ಸಾಮಾನ್ಯವಾಗಿ ಸೂಡಿ (ಅಂದರೆ ಒಂದು ಹಿಡಿಯಷ್ಟು ಒಣಗಿದ ಕಡ್ಡಿಗಳಿಗೆ ಬೆಂಕಿ ಹೊತ್ತಿಸಿಕೊಂಡ ಒಂದು ಬಗೆಯ ಪಂಜು) ಹಿಡಿದು ಜೇನಿನ ಹುಟ್ಟಿಗೆ ಸವರಿ ಜೇನುಗಳನ್ನು ಓಡಿಸಿ ಆನಂತರ ಜೇನು ಹುಟ್ಟು ಕೀಳಲಾಗುತ್ತದೆ. ಹೀಗೆ ಮಾಡುವಾಗ ಬೆಂಕಿ ತಗುಲಿದ ಜೇನು ಹುಳಗಳು ಸಾಯುತ್ತವೆ. ಉಳಿದವು ಹಾರಿಹೋಗುತ್ತವೆ. ಇದೊಂದು ಕ್ರಮ. ನಿಜವಾಗಿ ಜೇನು ಹುಳಗಳು ಬೆಂಕಿಯ ಹೊಗೆಗೆ ಹಾರಿಹೋಗುತ್ತವೆ. ಅವುಗಳಿಗೆ ಬೆಂಕಿ ತಗುಲಿಸಿ ಸಾಯಿಸಬೇಕಿಲ್ಲ. ಇದನ್ನು ತಿಳಿದ ಅಪ್ಪ ಸೂಡಿಯಲ್ಲಿ ಹಸಿ ಸೌದೆಗಳನ್ನು ಹೆಚ್ಚು ಸೇರಿಸುತ್ತಿದ್ದ. ಇದರಿಂದ ಹೆಚ್ಚು ಹೊಗೆ ಬರುತ್ತಿತ್ತು. ಹುಳಗಳು ಸಾಯುವುದು ಕಡಿಮೆಯಾಗುತ್ತಿತ್ತು. ಜೇನು ಹುಟ್ಟನ್ನು ಕೀಳುವಾಗ ಕೂಡ ಅ ಹುಟ್ಟಿನ ಕೆಳಗೆ ಸರಿಯಾಗಿ ಬರುವಂತೆ ಬಕೇಟನ್ನು ಹಗ್ಗಕ್ಕೆ ಕಟ್ಟಿ ಆ ಹುಟ್ಟಿನ ಕೆಳಗೆ ತೂಗಿಬಿಟ್ಟಿರುತ್ತಿದ್ದ. ಕತ್ತಿಯಿಂದ ಹುಟ್ಟನ್ನು ಕಿತ್ತು ಬಕೇಟಿನಲ್ಲಿ ಹಾಕುತ್ತಿದ್ದ ಇದರಿಂದ ಜೇನು ಹಾಳಾಗುವುದು ಕಡಿಮೆಯಾಗುತ್ತಿತ್ತು. ಇಷ್ಟಾದರೂ ಕೆಲವೊಮ್ಮೆ ಜೇನು ಹುಳಗಳು ಕಡಿಯುತ್ತಿದ್ದವು. ಇದನ್ನು ತಪ್ಪಿಸಿಕೊಳ್ಳಲು ಅವನ ಬಳಿ ಉಪಾಯವೊಂದಿತ್ತು. ಹರಳು ಎಲೆಯ ಆಕಾರದಂತಿರುವ ಕೆಸುವಿನ ಎಲೆಗಾತ್ರದ ಸಸ್ಯವೊಂದನ್ನು ತಂದು ಮನೆಯ ಹಿತ್ತಲಲ್ಲಿ ಬೆಳೆÀಸಿಕೊಂಡಿದ್ದ. ಇದು ದಟ್ಟ ಹಸಿರಿನ ಎಲೆಯ ಕೆಳಭಾಗ ಒರಟಾಗಿ ಇದ್ದುದಾಗಿತ್ತು. ಒಂದು ರೀತಿಯಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಸ್ಯಾಂಡ್ ಪೇಪರ್‌ನಂತೆ ಇದು ಇರುತ್ತಿತ್ತು. ಅದನ್ನು ಉಜ್ಜಿದರೆ ಸ್ಯಾಂಡ್ ಪೇಪರ್‌ನಂತೆಯೇ ಕೆಲಸಮಾಡುತ್ತಿತ್ತು ಇದನ್ನು ಉಪ್ಪಿನ ಎಲೆ ಎಂದು ಕರೆಯುತ್ತಿದ್ದ. ಇದರ ರಸವನ್ನು ಜೇನು ಕೀಳುವ ಮುನ್ನ ಹಿಂಡಿ ಮೈಕೈಗಳಿಗೆ, ಮುಖಕ್ಕೆ ಸವರಿಕೊಳ್ಳುತ್ತಿದ್ದ. ನನಗೂ ಒಂದಿಷ್ಟು ಲೇಪಿಸುತ್ತಿದ್ದ. ಜೇನು ಕೀಳುವಾಗ ಮರದ ಕೆಳಗೆ ನಾನು ನಿಂತಿರುತ್ತಿದ್ದೆ. ಕೆಲವೊಮ್ಮೆ ಜೇನು ನನಗೂ ಕಡಿಯುತ್ತಿದ್ದವು. ಹೀಗಾಗಬಾರದೆಂದು ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದ್ದ ಈ ಸಸ್ಯ ಈಗ ತುಂಬಾ ಅಪರೂಪವಾಗಿಬಿಟ್ಟಿದೆ. ಹೀಗೆ ಅಪ್ಪನ ಯಾವುದೇ ಕೆಲಸದಲ್ಲಿ ಪರಿಸರ ಸ್ನೇಹಿ ಕ್ರಮ ಮುಂದಾಗಿರುತ್ತಿತ್ತು. ಒಮ್ಮೆ ಕಾಡಲ್ಲಿ ಹೋಗುವಾಗ ಪೊದೆಯೊಂದರಲ್ಲಿ ನುಗ್ಗುವಾಗ ಕಾಲಿಗೆ ಬಳ್ಳಿಯೊಂದು ಅಡರಿಕೊಂಡಿತು. ಅಪ್ಪ ನನ್ನಕಾಲಿಂದ ಅದನ್ನು ಬಿಡಿಸಿದ ಜೊತೆಗೆ ಇದು ಹಾಡೆ ಬಳ್ಳಿ. ಹಾವಿನೊಂದಿಗೆ ಮುಂಗುಸಿ ಕಚ್ಚಾಡಿ ಬಂದಾಗ ಇದೇ ಬಳ್ಳಿಯನ್ನು ಅದು ತಿನ್ನುತ್ತದೆ. ಈ ಬಳ್ಳಿಯ ಎಲೆ ಮತ್ತು ರಸ ಹಾವು ಮತ್ತು ಚೇಳಿನ ವಿಷಕ್ಕೆ ರಾಮಬಾಣ ಎಂದು ಹೇಳಿದ. ಅದುವರೆಗೆ ನಾನು ಕೇಳಿದ್ದ ಈ ಬಳ್ಳಿಯನ್ನು ಇಂದು ನೋಡಿದ್ದೆ. ಒಮ್ಮೆ ಚೇಳು ಕಡಿದಾಗ ಮನೆಬಳಿ ಬೆಳೆದುಕೊಂಡಿದ್ದ ಈ ಬಳ್ಳಿಯನ್ನು ಕಿತ್ತು ಅದರ ಎಲೆಯ ಸಮೇತ ಸ್ವಲ್ಪ ಜಜ್ಜಿ ಅದನ್ನು ಚೇಳು ಕಚ್ಚಿದ ಜಾಗಕ್ಕೆ ಪೋಟೀಸು ಕಟ್ಟಿದ್ದ. ಇದರಿಂದ ದಿನವೊಪ್ಪತ್ತಿನಲ್ಲಿ ಊತ, ನೋವು, ವಿಷ ಎಲ್ಲ ಇಳಿದಿತ್ತು.



ಇನ್ನೊಮ್ಮೆ ಬಾಯಾರಿಕೆಯಾದಾಗ ‘ತಾಳು, ನಿನಗೆ ಇಂದು ಹಾಲು ಕುಡಿಸುತ್ತೇನೆ ಎನ್ನುತ್ತಾನೆದಲ್ಲಿ ಹರಡಿಕೊಂಡಿದ್ದ ಬಳ್ಳಿಯೊಂದನ್ನು ತೋರಿಸಿ ಕಿರುಬೆರಳು ಗಾತ್ರದ ಅದರ ಎಲೆಗಳನ್ನೆಲ್ಲ ಒಂದು ಹಿಡಿಯಷ್ಟು ಸಂಗ್ರಹಿಸುವಂತೆ ಹೇಳಿದ. ಅದನ್ನು ಸ್ವಚ್ಚಗೊಳಿಸಿ ಅಗೆದು ರಸ ಕುಡಿಯುವಂತೆ ಹೇಳಿದ. ಅಮೃತದಂತೆ ಇತ್ತು. ಇದು ಹಾಲುಬಳ್ಳಿ ಸೊಗದೇ ಬೇರಿನ ಬಳ್ಳಿ(ಸರಸ್ಪರಿಲ್ಲ) ಎಂದೂ ಕರೆಯುತ್ತಾರೆ ಅಂದ. ನನಗೆ ಕುತೂಹಲವಾಯಿತು. ಬೆಳೆಗ್ಗೆ ಮತ್ತೆ ಬಂದು ಅದರ ಬೇರನ್ನು ಕಿತ್ತು ರುಚಿ ನೋಡಿದೆ. ಅಷ್ಟರಲ್ಲಿ ಮೈಸೂರಿನ ಜ್ಯೂಸ್ ಅಂಗಡಿಯಲ್ಲಿ ಸೊಗದೇ ಬೇರಿನ ಜ್ಯೂಸ್ ಕುಡಿದು ರುಚಿ ಹತ್ತಿಸಿಕೊಂಡಿದ್ದೆ. ಈಗಲೂ ಅದೇ ರುಚಿ ನಾಲಗೆಗೆ ತಗುಲಿತು. ಈ ಬಳ್ಳಿ ಮಲೆನಾಡಿನ ಕಡೆ ಈಗಲೂ ಹೇರಳವಾಗಿದೆ. ಇದರ ರುಚಿಯನ್ನು ಎಂದೂ ಮರೆಯಲಾಗದು.

ಅಪ್ಪನ ಸಂಚಿಯ ಪ್ರಸ್ತಾಪ ಹಿಂದೆಯೇ ಬಂದಿದೆ. ಇದರಲ್ಲಿ ಅಡಕೆ, ಎಲೆ, ಸುಣ್ಣ, ಒಂದಿಷ್ಟು ಬಾಂದ್ರಿ ತಂಬಾಕು(ಒಣಗಿದ ತಂಬಾಕಿನ ಎಲೆ- ಅಪ್ಪ ಯಾವಾಗಲೂ ಇದನ್ನೇ ಬಳಸುತ್ತಿದ್ದ. ಕಡ್ಡಿಪುಡಿ, ಜರ್ದಾ ಇವೆಲ್ಲಾ ಸರಿಯಲ್ಲ ಅನ್ನುತ್ತಿದ್ದ. ಆದರೆ ಈ ತಂಬಾಕು ಹೇಗೆ ಸರಿ ಎಂಬುದಕ್ಕೆ ಅವನಲ್ಲಿ ಉತ್ತರವಿರಲಿಲ್ಲ. ಇದೊಂದು ಚಟ- ಬಿಡು ಅನ್ನುತ್ತಿದ್ದ). ಅವನ ಸಂಚಿಯಲ್ಲಿ ಇರುತ್ತಿದ್ದ ಮತ್ತೆರಡು ವಸ್ತುಗಳೆಂದರೆ ಕಾಚು(ಖೈರ ಮರದ ತೊಗಟೆಯ ಚೂರು- ಬೀಡಾ ಅಂಗಡಿಗಳಲ್ಲಿ ಕತ್ತಾ ಎಂದು ಎಲೆಗೆ ಸವರುವ ಕೆಂಬಣ್ಣದ ದ್ರವ ಇದರದ್ದೇ). ಮತ್ತು ಗುಡಾಕಾಷ್ಠ (ಇದನ್ನು ಜ್ಯೇಷ್ಠ ಮಧು ಎಂದು ಗ್ರಂದಿಗೆ ಅಂಗಡಿಗಳಲ್ಲಿ ಮಾರುತ್ತಾರೆ. ಇವೆರಡನ್ನು ಆಗಾಗ ಎಲೆ-ಅಡಿಕೆಯೊಂದಿಗೆ ಹಾಕಿಕೊಳ್ಳುತ್ತಿದ್ದ. ನಿಜವಾಗಿ ಇವುಗಳನ್ನು ಆತ ಹೆಚ್ಚು ಉಪಯೋಗಿಸುತ್ತಿದ್ದದು ಚಿಕ್ಕ ಮಕ್ಕಳನ್ನು ಹತ್ತಿರಕ್ಕೆ ಸೆಳೆದುಕೊಳ್ಳಲು. ಮಕ್ಕಳ ಜೊತೆ ಹರಟುವುದೆಂದರೆ ಅವನಿಗೆ ಎಲ್ಲಿಲ್ಲದ ಖುಷಿ. ಮಕ್ಕಳು ಸುಮ್ಮನೆ ಬಳಿ ಬರುತ್ತಿರಲಿಲ್ಲ. ಅವುಗಳಿಗೆ ಇವುಗಳ ಆಸೆ ತೋರಿಸಿ ಸೆಳೆದುಕೊಳ್ಳುತ್ತಿದ್ದ ಒಮ್ಮೆ ಇವುಗಳ ರುಚಿ ನೋಡಿದ ಮಕ್ಕಳು ಮತ್ತೆ ಮತ್ತೆ ಬೇಕೆಂದು ಅವನನ್ನು ಸುತ್ತುತ್ತಿದ್ದವು. ಅವನ ಸಂಚಿಯಲ್ಲಿ ಇರುತ್ತಿದ್ದ ಮತ್ತೊಂದು ಮುಖ್ಯ ಸಾವiಗ್ರಿಯೆಂದರೆ ಒಣಗಿದ ಕಾಡುನೆಲ್ಲಿ ಹಿಂಡಿ(ಕಾಡುನೆಲ್ಲಿಯನ್ನು ತಂದು ಅದನ್ನು ಮೊಸರು, ಉಪ್ಪು ಮತ್ತು ಹಸಿ ಮೆಣಸು ಬೆರೆಸಿ ಬಿಸಲಿನಲ್ಲಿ ಚನ್ನಾಗಿ ಒಣಗಿಸಿದ ಪದಾರ್ಥ ಇದು ಕೂಡ ತುಂಬಾ ಆರೋಗ್ಯಕರ ಮತ್ತು ರುಚಿ ಕೆಲವೊಮ್ಮೆ ಬಾಯಾರಿಕೆಯಾದಾಗ ಒಂದೆರಡು ಹಿಂಡಿ ಚೂರುಗಳನ್ನು ಎಸೆದುಕೊಳ್ಳುತ್ತಿದ್ದ. ಇದು ಕೂಡ ಮಕ್ಕಳಿಗೆ ಇಷ್ಟವಾಗುತ್ತಿತ್ತು. ಮಕ್ಕಳನ್ನು ಬಿಟ್ಟರೆ ಆತ ಸಂಚಿಯೊಳಗಿನ ಈ ಸಾಮಗ್ರಿಗಳನ್ನು ಬಳಸುತ್ತಿದ್ದುದು ಹೊಸಬರನ್ನು ಪರಿಚಯ ಮಾಡಿಕೊಳ್ಳಲು. ಸರ್ಕಾರಿ ಕಚೇರಿ, ಬ್ಯಾಂಕು ಮೊದಲಾದ ಕಡೆ ಇವು ಉಪಯೋಗಕ್ಕೆ ಬರುತ್ತಿದ್ದವು. ಇಂಥ ಕಡೆಗಳಲ್ಲಿ ಮಾತ್ರವಲ್ಲ ಅವನೆಂದೂ ಮನೆಯ ಹೊರಗೆ, ಕೃಷಿ ಕೆಲಸದಲ್ಲಿ ಕೂಲಿ-ನಾಲಿಯಲ್ಲಿ ಜಾತಿ-ಗೀತಿಯನ್ನು ಎಂದೂ ಪರಿಗಣಿಸುತ್ತಿರಲಿಲ್ಲ. ಅವನ ಸ್ನೇಹಿತರ ಬಳಗವೇ ಹಾಗಿತ್ತು. ಇವರಲ್ಲಿ ಮುಖ್ಯರೆಂದರೆ ಹರಿಕಾಂತ ನಾರಾಯಣ, ಆಗೇರ ಚಂದ್ರಪ್ಪ, ಮರಾಠಿ ಲೋಕಪ್ಪ, ಎಕ್ಕಾಗಾಡಿ(ಅಂದರೆ ಒಂಟೆತ್ತಿನ ಚಕ್ಕಡಿ)ಯ ಅಬ್ಬುಖಾನ್, ಗುಜರಿ ಅಂಗಡಿಯ ಪೀರ್ ಖಾನ್, ಬಟ್ಟೆ ಅಂಗಡಿಯ ಬದ್ದಿ ಸಾವಕಾರ, ಬಾಳೆ ಹಣ್ಣಿನ ವ್ಯಾಪಾರಿ ತಿಮ್ಮಪ್ಪ ಮೊದಲಾದವರು ಸೇರಿದ್ದರು. ಇವರೆಲ್ಲರನ್ನು ಮನೆಯಲ್ಲಿ ಯಾವುದೇ ವಿಶೇಷ ಕಾರ್ಯವಾದಾಗ ಕಡ್ಡಾಯವಾಗಿ ಆಹ್ವಾನಿಸುತ್ತಿದ್ದ ಕೆಲವೊಮ್ಮೆ ಬಂಧು-ಬಳಗಕ್ಕೆ ಆಹ್ವಾನ ಹೋಗದಿದ್ದರೂ ಇವರಿಗೆ ಮಾತ್ರ ತಪ್ಪದೇ ಹೋಗುತ್ತಿತ್ತು. ಇವರಲ್ಲಿ ಯಾರಾದರೂ ಒಬ್ಬರು ಗೈರಾದರೂ ಅವನಿಗೆ ಸಹಿಸಲು ಆಗುತ್ತಿರಲಿಲ್ಲ.

Thursday, 15 June 2023

3.ಸದಾ ಕಾಡುವ ಅಪ್ಪನ ನೆನಪು – ೩


ಒಮ್ಮೆ ಮನೆ ಮುಂದೆ ರಾಮ ಸೀತೆ, ಹನುಮಂತನ ವೇಷ ಹಾಕಿದ ಹಗಲು ವೇಷದವರು ಕುಣಿಯುತತಾ ಬಂದರು. ಅವರು ಧರಿಸಿದ್ದ ಕಿರೀಟ ಕೆಂಪು, ಹಸಿರು  ಬಣ್ಣದ ಚೀಟಿಗಳಿಂದ ಆಕರ್ಷಕವಾಗಿತ್ತು. ಯಕ್ಷಗಾನದಲ್ಲಿ ಇಂಥವನ್ನು ನೋಡಿದ್ದರೂ ಅವನ್ನು ಇಷ್ಟು ಹತ್ತಿರದಿಂದ ಕಾಣಲು ಸಾಧ್ಯವಿರಲಿಲ್ಲ. ಅದನ್ನು ಮುಟ್ಟುವ ಆಸೆಯಾಗಿ ಅವರ ಬಳಿ ಹೋದೆ. ಕಿರೀಟ ಮುಟ್ಟಬಹುದಾ ಎಂದು ಅಳುಕುತ್ತಲೇ ರಾಮನನ್ನು ಕೇಳಿದೆ. ತಕೋ ಮರಿ ಅನ್ನುತ್ತ ಕಿರೀಟ ಮುಟ್ಟಲು ಅವಕಾಶ ಕೊಟ್ಟ. ಬಳಿಗೆ ಬಂದ ಅಪ್ಪ ಅದರ ಮೇಲಿದ್ದ ಬಣ್ಣದ ಚೀಟಿಗಳನ್ನು ತೋರಿಸಿ ಇದೇನು ಹೇಳ್ತೀಯಾ ಅಂದ. ನಾನು ಬಣ್ಣದ ಚೀಟಿ ಅಂದೆ. ದಡ್ಡ, ಇದು ಜೀರುಂಡೆ ರೆಕ್ಕೆ. ಆವತ್ತು ನೋಡಿದ್ದು ಮರೆತೆಯಾ ಎಂದು ಕೇಳಿದ. ತಟ್ಟನೆ ನೆನಪಾಯ್ತು. ಇದಕ್ಕೆಲ್ಲ ಇವರು ಅಂಗಡಿ ಬಣ್ಣ ಹಾಕುವುದಿಲ್ಲ, ನಮ್ಮ ಸುತ್ತ ಮುತ್ತ ಸಿಗುವ ಜೀರುಂಡೆ ರೆಕ್ಕೆ ಬಣ್ಣದ ಕಲ್ಲುಗಳ ಬಣ್ಣಗಳೇ ಇಲ್ಲಿರುವುದು ಅಂದ. ಹೌದು. ಅಲ್ಲಿ ಯಾವುದೇ ಕೃತಕತೆ ಈಗಲೂ ಇರುವುದಿಲ್ಲ.

ಅಪ್ಪನ ಮಿತ್ರರ ಬಳಗದ ಪರಿಚಯ ಆಗಿದೆ. ಅವರಲ್ಲಿ ಹೆಚ್ಚು ಒಡನಾಟ ಬೇರೆ ಬೇರೆ ಕಾರಣಕ್ಕೆ ಇದ್ದುದು ಹರಿಕಾಂತ ನಾರಾಯಣನೊಂದಿಗೆ. ಹಿತ್ತಲಿನ ಬಾವಿಗೆ ಬಿದ್ದ ಕೊಡ ಎತ್ತುವುದರಿಂದ ಹಿಡಿದು ಆಲೆಮನೆ ಉಸ್ತುವಾರಿ ಮದುವೆ ಮುಂಜಿಗಳ ಆವರಣ ಕೆಲಸ ಕಾರ್ಯಗಳಲ್ಲಿ ಆತ ತೆಗೆದುಕೊಳ್ಳುತ್ತಿದ್ದ ಜವಾಬ್ದಾರಿಗಳೆಲ್ಲ ಇದಕ್ಕೆ ಕಾರಣ. ಬಿಡು ಚಿಂತೆ ಇಲ್ಲ, ಮೀಸೆ ನಾರಾಯಣ ಇದ್ದಾನೆ ಅಂತಿದ್ದ.  ಆತ ಇದ್ದರೆ ಅಪ್ಪನಿಗೆ ನೂರಾನೆ ಬಲ. ಕೆಲವೊಮ್ಮೆ ಅವರಿಬ್ಬರೇ ತೃಪ್ತಿ ಆಗುವಷ್ಟು ಇಸ್ಪೀಟು ಆಡುತ್ತ ಕುಳಿತಿರುತ್ತಿದ್ದರು. ಅನೇಕ ಬಾರಿ ಮಾರನೇದಿನ ಬೆಳಕು ಹರಿಯುತ್ತಿತ್ತು. ಆಯಿ ಬೈದರೆ ಹಿಂಗೆ ಆಗ್ತು ಬಿಡು ಎಂದು ಸುಮ್ಮನಿರಿಸುತ್ತಿದ್ದ.ಆ ನಾರಾಯಣ ಮುಖ ತುಂಬಿಕೊಳ್ಳುವಂತೆ ದೊಡ್ಡ ಮೀಸೆ ಬಿಟ್ಟಿದ್ದ ಕಾರಣ ಅವನಿಗೆ ಆ ಹೆಸರಿತ್ತು. ಅಲ್ಲದೆ ಆ ಹೆಸರು ಊರಲ್ಲಿ ತೀರಾ ಸಾಮಾನ್ಯವಾದ್ದರಿಂದ ಇದು ಅವನಿಗೊಂದು ಅನನ್ಯತೆ ಕೊಟ್ಟಿತ್ತು.ನಾರಾಯಣ ಬಡವನಾದರೂ ನಮ್ಮನೆಗೆ ಬರುವಾಗ ಎಂದೂ ಬರಿಗೈಲಿ ಬರುತ್ತಿರಲಿಲ್ಲ. ನನ್ನನ್ನು ಕಂಡರೆ ಅವನಿಗೇನೋ ಅಕ್ಕರೆ. ನಾನು ತುಸು ಬೆಳ್ಳಗೆ ಇದ್ದುದರಿಂದ ಬೆಳ್ಳಂಭಟ್ರೆ ಅನ್ನುತ್ತಿದ್ದ. ಪೇಟೆಯಿಂದ  ಪೆಪ್ಪಮಿಂಟು ತಾರದಿದ್ದರೆ ಆತನ ಮನೆಮುಂದೆ ಸದಾ ಹಣ್ಣು ಕೊಡುತ್ತಿದ್ದ ಸೀಬೆ ಹಣ್ಣು ಕಿತ್ತು ತಂದಿರುತ್ತಿದ್ದ. ಆತನ ಮನೆ ನಮ್ಮ ಮನೆಯಿಂದ ಒಂದೆರಡು ಕಿಮೀ ದೂರದಲ್ಲಿ ಕಾಡಲ್ಲಿತ್ತು. ಅವನ ಮನೆ ನಮಗೆ ಬೇಸರ ಕಳೆಯುವ ಜಾಗವಾಗಿತ್ತು ಶಾಲೆಗೆ ರಜಾ ಇದ್ದಾಗ ಅಥವಾ ಚಕ್ಕರ್ ಹೊಡೆದು ಅವನ ಮನೆ ಬಳಿ ಹೋಗಿ ಸೀಬೆ ಮರ ನೇತಾಡುವುದು ಅಭ್ಯಾಸವಾಗಿಹೋಗಿತ್ತು. ಅವನೆಂದೂ ಇದಕ್ಕೆ ತಕರಾರು ಎತ್ತುತ್ತಿರಲಿಲ್ಲ. ಅದು ಅವನ ಸ್ವಂತ ಜಮೀನು ಆಗಿರಲಿಲ್ಲ. ಆತ ನಮ್ಮ ಬಂಧುಗಳೊಬ್ಬರ ಜಮೀನು ಗೇಣಿಗೆ ಮಾಡುತ್ತಿದ್ದ.ಆದರೆ ತುಂಬ ಅಕ್ಕರೆಯಿಂದ ನೋಡಿಕೊಂಡಿದ್ದ.ಆತ ನಮ್ಮ ಹಿತ್ತಲ ಬಾವಿಯಲ್ಲಿ ಕೊಡಬಿದ್ದರೆ ಯಾವಾಗಲೂ ಬಾವುಗೆ ಧುಮುಕಿ ಎತ್ತಿಕೊಡುತ್ತಿದ್ದ. ಅತನಿಗೆ ನೀರು, ಬಾವಿ ಹಳ್ಳ ಕೊಳ್ಳಗಳೆಲ್ಲ ಲೆಕ್ಕಕ್ಕೆ ಇರಲಿಲ್ಲ. ಅವನ ಕುಲ ಧರಮವೇ ಮೀನುಗಾರಿಕೆ. ಸಮುದ್ರ, ನದಿಗಳೇ ಮನೆಯಂತೆ ಇದ್ದವ. ನಮ್ಮಬಾವಿ ಯಾವ ಲೆಕ್ಕ? ಬಾವಿಯನ್ನೊಮ್ಮೆ ನೋಡಿದವನೇ ಧುಡುಮ್ಮನೇ ಹಾರಿಬಿಡುತ್ತಿದ್ದ. ಆತ ಹಾರುತ್ತಿದ್ದಂತೆ ನಾನು ಅಳಲು ಶುರುವಿಟ್ಟುಕೊಳ್ಳುತ್ತಿದ್ದೆ. ಕೆಲವೊಮ್ಮೆ ಆತ ಹತ್ತಾರು ನಿಮಿಷ ನೀರಲ್ಲಿ ಮುಳುಗುಹಾಕಿರುತ್ತಿದ್ದ. ಮೇಲೆ ಬರುತ್ತಿರಲಿಲ್ಲ. ಆಗಂತೂ ನನ್ನ ಕೂಗು ಮೇರೆ ಮೀರುತ್ತಿತ್ತೆಂದು ಆಯಿ ಹೇಳುತ್ತಿದ್ದರು.ಇನ್ನು ಆಲೆಮನೆ ವೇಳೆಯಲ್ಲಿ ಆತ. ಕಬ್ಬಿನ ಹಾಲು, ಬೆಲ್ಲದ ಬದಲು ಕುದಿ ಕೆಸರಿನ ಮೇಲೆ ಹೆಚ್ಚು ನಿಗಾ ಇಟ್ಟಿರುತ್ತಿದ್ದ. ಬೆಲ್ಲ ಕುದಿಯುವಾಗ ಅದರ ಕೆಸರನ್ನು ಜಾಗ್ರತೆಯಿಂದ ಎತ್ತಿಒಂದು ಬಟ್ಟಲಲ್ಲಿ ಸಂಗ್ರಹಿಸುತ್ತಿದ್ದ. ಅದನ್ನು ಅನಂತರ ದೊಡ್ಡ ಮಣ್ಣಿನ ಕುಡಿಕೆಯಲ್ಲಿ ಹಾಕಿ ಎತ್ತಿಕೊಂಡು ತೋಟದ ಹಾದಿ ಹಿಡಿಯುತ್ತಿದ್ದ. ಅಲ್ಲಿ ಒಂದೆಡೆ ನಾಲ್ಕಾರು ಅಡಿ ಆಳದ ಹೊಂಡ ತೆಗೆದು ಕೆಸರಿನ ಕೊಡವನ್ನು ಅದರಲ್ಲಿ ಹೂತಿಟ್ಟು ಏನೂ ಗೊತ್ತಿಲ್ಲದವನಂತೆ ಮನೆಗೆ ಬರುತ್ತಿದ್ದ. ಇದನ್ನು ಏನೂ ಮಾಡಬಾಎದೆಂದು ನಮಗೆಲ್ಲ ತಾಕೀತು ಮಾಡುತ್ತಿದ್ದ. ಒಂದುವಾರ ಅತ್ತ ಸುಳಿಯುತ್ತಿರಲಿಲ್ಲ. ಆದರೆ ಕೊಡ ಕ್ಷೇಮವಾಗಿದೆಯೇ ಎಂದು ನಿಗಾವಹಿಸುತ್ತಿದ್ದ. ಆಮೇಲೆ ಒಂದು ದಿನ ಕೊಡ ಎತ್ತಿ ಹೆಗಲ ಮೇಲೆ ಹೊತ್ತುಕೊಂಡು ಭಟ್ರೆ ಒಂದೆರಡು ದಿನ ನಾ ಬತ್ನಿಲ್ಲೆ ಅನ್ನುತ್ತ ಹಾಗೆಯೇ ಗದೆ ಬದು ಹಾದು ಹೋಗುತ್ತಿದ್ದ. ನಾಲ್ಕು ದಿನ ಬಿಟ್ಟು ಮತ್ತೆ ಬಂದವ ಮತ್ತೆ ಕೆಸರು ಸಂಗ್ರಹಕ್ಕೆ ತೊಡಗುತ್ತಿದ್ದ. ಆದರೆ ಬೆಲ್ಲ ಇಳಿಸುವ, ಕೊಪ್ಪರಿಗೆಗೆ ಹಾಲು ತುಂಬಿಸಿ ಅದಕಕ್ಕೆ ಉರಿ ಹಾಕುವ ಕೆಲಸಕ್ಕೆ ಚ್ಯುತಿ ತರುತ್ತಿರಲಿಲ್ಲ. ಅವನು ಕೆಸರನ್ನು ಏಕೆ ಚೆಲ್ಲುವುದಿಲ್ಲ ಎಂದು ಅಪ್ಪನನ್ನು ಕೇಳಿದರೆ ಅದೆಲ್ಲ ನಿನಗೆ ಈಗ ಬೇಡ ಸುಮ್ನಿರು ಅಂತಿದ್ದ. ಈ ಗುಟ್ಟು ಅರಥವಾಗಲು ಹತಾರು ವರ್ಷಗಳೇ ಬೇಕಾದವು. ಆತ ಅದನ್ನು ಭಟ್ಟಿ ಇಳಿಸಿ ಶುದ್ಧ ದೇಸೀ ಹೆಂಡ ಮಾಡಿಕೊಳ್ಳುತ್ತಿದ್ದ. ಅವನಿಗೆ ಇದು ವರ್ಷಗಟ್ಟಲೆ ಬಾಳಿಕೆ ಬರುತ್ತಿತ್ತು. ಅದೇನೇ ಇರಲಿ. ಆತನಷ್ಟು ಹತ್ತಿರವಾದ ಮಿತ್ರರು ಅಪ್ಪನಿಗೆ ಇರಲಿಲ್ಲ. ಅವನಿಗೂ ಅಪ್ಪಯ್ಯನೆಂದರೆ ಅದೇನೋ ಅಭಿಮಾನ. ತನ್ನೆಲ್ಲ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದ. ಅಪ್ಪನ ಮತ್ತೊಬ್ಬ ಮಿತ್ರ ಅಮ್ಮದ ಸಾಬ. ಆತ ಬೇಸರವಾದಾಗ ಎಲೆ ಅಡಕೆ ಮೆಲ್ಲುವ ನೆಪದಲ್ಲಿ ಅಪ್ಪನನ್ನು ಮಾತಾಡಿಸಲು ಬರುತ್ತಿದ್ದ. ಒಮ್ಮೆ ಅವನಿಗೆ ರಂಜಾನ್ ಉಪವಾಸವಿತ್ತೆನಿಸುತ್ತದೆ. ಅಪ್ಪ ಎಂದಿನಂತೆ ಎಂತಾಸುದ್ದಿ? ಬಾ ಅಂದವನೇ ಸಂಚಿ ಬಿಚ್ಚತೊಡಗಿದ. ಬೇಡ ಭಟ್ರೆ, ನಂಗೆ ಉಪಾಸ ಆನು ಇಂದು ಕವಳ ಎಲೆ ಅಡಿಕೆಗೆ ಇರುವ ಹೆಸರು)ಹಾಕಲ್ಲ ಅಂದ. ಎಂತಕ್ಕೆ ಕೇಳಿದ. ಆತ ರಂಜಾನ್ ಬ್ಬೆ ಹೇಳಿದ್ದು ಕೇಳಿಸಿಕೊಂಡು ನಾನೂ ಏಕಾದಶಿ ದಿನ ಏನೂ ತಿನ್ನಲ್ಲ ಅಂದ. ನಿಮ್ಮದು ವರ್ಷಕ್ಕೆ ಒಂದು ದಿನ ಉಪವಾಸವಾ ನಮ್ಮದು ಹದಿನೈದು ದಿನಕ್ಕೊಮ್ಮೆ ನೋಡು ಅಂದಾಗ ಒಂದಿನ ಅಲ್ಲ, ಒಂದು ತಿಂಗಳು ಎಂದು ಆತ ಕರೆಕ್ಷನ್ ಹಾಕಿದ್ದ. ಅಡ್ಡಿ ಇಲ್ಲೆ ಮಾರಾಯ ಅಂದ. ನಮಗೂ ನಿಮಗೂ ಬರೀ ವರ್ಷದ ಫರಕ್ಕು ಅಷ್ಟೇ ಅಂದ. ಅವನೂ ಹೌದು ಅಂದ. ನಾನಿನ್ನು ಬತ್ತೆ ಅನ್ನುತ್ತ ಆತ ಹೊರಡಲು ಅನುವಾದ. ಎಂತಾ ಅರ್ಜೆಂಟು ಕೂರುಅಂದಾಗ ಇಲ್ಲ, ನನ್ನ ನಮಾಜು ಹೊತ್ತಾತು ಅಂದ. ಅದೆಂತಾ ಕೂರಲು ಕಂಬಳಿ ಕೊಡ್ತೆ. ಅಲ್ಲೇ ಗೋಡೆಹತ್ರ ಕೋರು ಅದಕ್ಕೆ ನಿನ್ನ ಮನೆಯೇ ಆಗಬೇಕಾ? ನೋಡು ನಿನ್ನ ದೇವ್ರು ಇಲ್ಲೇ ಇದ್ದಾನೆ ಅನ್ನುತ್ತ ಗೋಡೆಯತ್ತ ಬೆರಳು ಮಾಡಿದ. ಅದು ನಿಮ್ಮ ದೇವರು, ಶಿವನ ಪೊಟೋ ಅಂದ ಅಮ್ಮದ. ಅದರ ಹಿಂದೆ ಇರೋದೇ ನಿಮ್ಮ ದೇವರಲ್ವಾ ಸರಿಯಾಗಿ ನೋಡು ಮಳ್ಳ ಅಂದ. ಗೋಡೆ ಮೇಲೆ ಶಿವನ ಕ್ಯಾಲೆಂಡರ್ ನೇತುಹಾಕಿದ್ದಕ್ಕೆ ಇಷ್ಟೆಲ್ಲ ಮಾತುಕತೆ ನಡೆದಿತ್ತು. ಹಂಗಾರೆ ನೀನು ಮತ್ತೆ ಯಾವಾಗ ಕವಳಾ ಹಾಕಂವ ಅನ್ನುತ್ತ ಅಪ್ಪ ಒಳ ಮನೆಗೆ ಹೋದರೆ ಅಮ್ಮದ ನೋಡ್ವ ಅನ್ನುತ್ತ ತನ್ನ ಮನೆದಾರಿ ಹಿಡಿದಿದ್ದ. 

Wednesday, 14 June 2023

4. ಸದಾ ಕಾಡುವ ಅಪ್ಪನ ನೆನಪು – ೪


ಊರಿಗೆ ಶಾಲೆ ಬಂದುದು

ಅದು ೧೯೬೦ರ ದಶಕ. ಊರಿಗೆ ಸರ್ಕಾರಿ ಶಾಲೆ ಬರಬೇಕೆಂದು ಊರಜನ ಸರ್ಕಾರಕ್ಕೆ ಕೋರಿದ್ದರು. ಆದರೆ ಶಾಲೆಗೆ ಸೂಕ್ತವಾದ ಸರ್ಕಾರಿ ಜಾಗ ಇರಲಿಲ್ಲ ಊರಲ್ಲಿ ಸಾಕಷ್ಟು ಜಮೀನು ಇದ್ದ ದೊಡ್ಡ ಕುಳಗಳು ಜಾಗ ಕೊಡಲು ಮುಂದಾಗಲಿಲ್ಲ. ಹೀಗಾಗಿ ಶಾಲೆ ಬರುವ ಸಾಧ್ಯತೆ ಇಲ್ಲವಾಗತೊಡಗಿತು. ಅಪ್ಪ ಅವನ ಕಾಲದಲ್ಲಿ ೩-೪ನೆಯ ಇಯತ್ತೆ ಪಾಸು ಮಾಡಿಕೊಂಡಿದ್ದ. ಶಿಕ್ಷಣದ ಬಗ್ಗೆ ಅವನಿಗೆ ಆಪಾರ ಕಾಳಜಿ ಇತ್ತು ಊರ ಮಕ್ಕಳು ಹತ್ತಾರು ಮೈಲಿ ದೂರ ನಡೆದು ಕಷ್ಟಪಟ್ಟು ಮಳೆ ಬಿಸಿಲಲ್ಲಿ ಶಾಲೆಗೆ ಹೋಗುವ ಬಗ್ಗೆ ಆಗಾಗ ಅನುಕಂಪ ತೋರುತ್ತಿದ್ದ. ಊರಿಗೆ ಶಾಲೆ ಬರುವ ಬಗ್ಗೆ ಅವನಿಗೆ ಖುಷಿ ಇತ್ತು. ಆದರೆ ಪರಿಸ್ಥಿತಿ ಹೀಗಾದ ಬಗ್ಗೆ ಸಿಟ್ಟು ಬಂದಿತ್ತು. ಈಗ ತಡಮಾಡದೆ ತನ್ನ ಮಾಲಕಿಯಲ್ಲಿದ್ದ ೧೦ ಎಕರೆ ಅರಣ್ಯ ಭೂಮಿಯಲ್ಲಿ ಸುಮಾರು ಒಂದೆರೆಡು ಎಕರೆ ಜಾಗವನ್ನು ಶಾಲೆಗೆ ಕೊಡಲು ನಿರ್ಧರಿಸಿದ. ಆನಂತರ ಅದೇ ಜಾಗದಲ್ಲಿ ಶಾಲೆ ಆಟದ ಮೈದಾನ ನಿರ್ಮಾಣವಾಗಿ ಈಗಲೂ ಚೆನ್ನಾಗಿ ನಡೆಯುತ್ತಿದೆ. ಅಪ್ಪನ ಕಾಳಜಿ ಇಷ್ಟಕ್ಕೆ ನಿಲ್ಲುತ್ತಿರಲಿಲ್ಲ ತುಂಬಾ ದೂರದ ಊರಿನಿಂದ ಬರುತ್ತಿದ್ದ ಮಕ್ಕಳನ್ನು ನಮ್ಮ ಮನೆಯಲ್ಲೇ ಉಳಿದು ಶಾಲೆಗೆ ಹೋಗುವಂತೆ ಮಾಡುತ್ತಿದ್ದ. ಶಾಲೆ ನಮ್ಮ ಮನೆಯ ಹಿಂದೆಯೇ ಇದ್ದ ಕಾರಣ ಮಕ್ಕಳ ಪಾಲಕರು ಸಂತೋಷದಿಂದ ಮಕ್ಕಳನ್ನು ಬಿಟ್ಟುಹೋಗುತ್ತಿದ್ದರು. ಹೀಗೆ ಏಳನೆಯ ತರಗತಿವರೆಗೆ ಇದ್ದ ಶಾಲೆಯಲ್ಲಿ ಓದುತ್ತಿದ್ದ ಅನೇಕ ಮಕ್ಕಳು ನಮ್ಮ ಮನೆಯಲ್ಲೇ ಊಟ ವಸತಿ ಮಾಡಿಕೊಂಡಿದ್ದವು.  ನಾವು ಅಪ್ಪನಿಗೆ ಏಳು ಮಕ್ಕಳು ಆಗಲೇ ಮನೆ ತುಂಬಿಕೊಂಡಿದ್ದೆವು. ನಿಮ್ಮ ಜೊತೆ ಇವೂ ಓದಿಕೊಂಡಿರುತ್ತವೆ ನೀವು ಚೆನ್ನಾಗಿ ಓದಿ ಜೀವನ ಮಾಡಿಕೊಳ್ಳಿ ಎಂದು ಫರ್ಮಾನು ಹೊರಡಿಸಿದ. ಪ್ರತಿ ವರ್ಷ ಇದೇ ಕತೆ ಮುಂದುವರೆಯುತ್ತಿತ್ತು. ನಾನು ೭ರ ವರೆಗೆ ಅಲ್ಲಿ ಓದಿ ಮುಂದೆ ಓದಲು ಊಟ-ವಸತಿ ವ್ಯವಸ್ಥೆಯ ಕಾರಣಕ್ಕೆ ಮೈಸೂರು ಸೇರಿದೆ. ಅಲ್ಲಿ ಹೇಗೋ ಅನೇಕರ ನೆರವಿನಿಂದ ಓದಿ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕಗಳನ್ನು, ಮೊದಲ ರ‍್ಯಾಂಕನ್ನು ಪಡೆದೆ. ಆಗ ಅಪ್ಪನ ಸಂಭ್ರಮ ಮೇರೆ ಮೀರಿತ್ತು. ಆ ಪದಕಗಳನ್ನು ಹಿಡಿದು ಇದು ನಿಜಕ್ಕೂ ಚಿನ್ನದ್ದಾ ಅನ್ನುತ್ತಾ ಹಿಂದೆ-ಮುಂದೆ ತಿರುಗಿಸಿ ಮತ್ತೆ ಮತ್ತೆ ನೋಡಿದ್ದ, ಅಲ್ಲ ಅದರಲ್ಲಿ ಕೇವಲ ಒಂದು ಗ್ರಾಂ ಚಿನ್ನವಿರುತ್ತದೆ ಉಳಿದಂತೆ ಲೇಪ ಅಂದೆ. ಏನೇ ಆಗಲಿ ನೀನು ಓದಿ ಇಷ್ಟು ಸಾಧಿಸಿದೆಯಲ್ಲ ಖುಷಿಯಾಯಿತು. ನಿನಗೇನು ಬೇಕು ಕೇಳು ಅಡಕೆ ಮಾರಿದ ಹಣವಿದೆ ಅಂದ. ರೇಡಿಯೋ ಕೇಳುವ ಹುಚ್ಚು ಹತ್ತಿದ್ದ ನಾನು ಒಂದು ಒಳ್ಳೆಯ ಟು ಇನ್ ಒನ್ ಟೇಪ್ ರೆಕಾರ್ಡರ್‌ಗೆ ಬೇಡಿಕೆ ಇಟ್ಟೆ. ನಡಿ ಎನ್ನುತ್ತಾ ಪೇಟೆಗೆ ಹೊರಟೇಬಿಟ್ಟ. ಒಂದು ದೊಡ್ಡ ಅಂಗಡಿಯ ಮುಂದೆ ನಿಲ್ಲಿಸಿ ಇದೇ ರೇಡಿಯೋ ಅಂಗಡಿ ನಡಿ ಅಂದ. ಒಳಹೋಗಿ ಯಜಮಾನನ ಬಳಿ ಇವನು ನನ್ನ ಮಗ ಶಾಲೆಯಲ್ಲಿ ಬಂಗಾರದ ಪದಕ ತೆಗೆದುಕೊಂಡಿದ್ದಾನೆ. ಒಂದು ಉಂಛಾ ರೇಡಿಯೋ ಕೊಡಿ ಅಂದ. ಚೌಕಾಸಿ ಮಾಡಿದ ಮೇಲೆ ಯಜಮಾನ ತನ್ನ ಅಂಗಡಿಯಲ್ಲಿದ್ದ ಆ ಕಾಲದ ಅತೀ ದುಬಾರಿ ಅನಿಸುವ ಏಳುವರೆ ಸಾವಿರದ ರೇಡಿಯೋ, ಟೇಪ್‌ರೇಕಾರ್ಡರ್ ಕೊಟ್ಟ. ಇಷ್ಟೇ ಸಾಕ ಎಂದು ಅಪ್ಪ ಕೇಳಿದ. ತಲೆಯಾಡಿಸಿದೆ. ಆದರೆ ಒಂದು ಮಾತು ನೀನು ಪದಕಗಳನ್ನ ನನಗೆ ಕೊಟ್ಟು ಹೋಗಬೇಕು ಅಂದ ಆಯಿತೆಂದೆ. ಅದನ್ನು ಆತ ಬಂಧು-ಬಾಂಧವರಿಗೆಲ್ಲ ಹೆಮ್ಮೆಯಿಂದ ತೋರಿಸುತ್ತಿದ್ದ. ಆದರೆ ಅವರೆಲ್ಲ ಇದು ನಿಜವಾದ ಚಿನ್ನವಲ್ಲವೆಂದು ಮೂಗು ಮುರಿಯುತ್ತಿದ್ದರು. ಮಗನ ಸಾಧನೆ ಇವರಿಗೆ ಕಾಣುತ್ತಿಲ್ಲವೆಂದು ಬೇಸರಿಸಿಕೊಳ್ಳುತ್ತಿದ್ದ. ನನಗೂ ರೋಸಿ ಹೋಗಿತ್ತು. ಪದಕಗಳನ್ನು ವಾಪಸ್ಸು ಕೊಡುವಂತೆ ಕೇಳಿದೆ.

ಮನೆಯ ಗದ್ದೆ-ತೋಟದ ಕೆಲಸಕ್ಕೆ ಗಂಡು-ಹೆಣ್ಣಾಳುಗಳು ಬರುತ್ತಿದ್ದರು. ಇವರಲ್ಲಿ ಕೆಲವು ಜೋಡಿಗಳು ಇರುತ್ತಿದ್ದರು. ಒಂದು ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅನ್ಯೋನ್ಯವಾಗಿದ್ದರು. ಆತ ಸರಿಯಾಗಿ ಊಟ-ತಿಂಡಿ ಮಾಡದೆ ಕುಡಿತ ಬೇರೆ ಹಚ್ಚಿಕೊಂಡಿದ್ದ. ಆಕೆ ದಷ್ಟ-ಪುಷ್ಟವಾಗಿ ಚನ್ನಾಗಿದ್ದಳು. ಆತ ಒಂದೆರಡು ದಿನ ಯಾರದೋ ಜೊತೆ ಹೊರಗೆ ಹೋಗಿದ್ದ ಎಂಬುದನ್ನು ತಿಳಿದ ಆಕೆ ತಕರಾರು ಎತ್ತಿದ್ದಳು. ಈತ ಕೂಡ ಏನೋ ಕಿರುಚುತ್ತಿದ್ದ. ಗದ್ದಲ ಜೋರಾದಾಗ ಅಪ್ಪ ಅದೇನೆಂದು ನೋಡಲು ಹೋದ. ಆಕೆ ನೋಡಿ ಒಡೆಯ ಇವ ಆಚೆ ಕೇರಿ ಸುಕ್ರಿ ಸಂಗ್ತಿ ಓಡಾಡ್ತ. ಕೇಳಿದರೆ ಜೋರು ಮಾಡ್ತಾ ಅಂದಳು. ಆತ ಪ್ರತಿಯಾಗಿ ಸುಳ್ಳು ಹೇಳುತ್ತಾಳೆ ನಾನು ಇವಳನ್ನು ಮದುವೆಯಾಗುವ ಮೊದಲಿನಿಂದ ಇದ್ದ ಸಂಬಂಧ ಅದು. ಈಗ ಹೇಗೆ ಬಿಡೋದು, ಆದರೆ ಇವಳು ಆಚೆ ಮನೆಯವನ ಸಂಗ್ತಿ ಹೋಗಿ ಸೀರೆ ತಗೊಂಡು ಬಂದಿದ್ದಾಳೆ ಎಂದ. ಆಕೆ ಸಿಟ್ಟಿನಿಂದ ನಮ್ಮ ಮದಿಯಾಗಿ ಹತ್ತು ವರ್ಷವಾಯಿತು. ಒಂದಾದರೂ ಇಷ್ಟು ಚೊಲೊ ಸೀರೆ ಕೊಡಿಸಿದ್ದಾನಾ ಪಾಪ ಆಚೆ ಮನೆಯವ ವರ್ಷದಿಂದ ಕರೀತ್ತಿದ್ದ ಒಂದೆರಡು ದಿವಸ ಹೋಗಿ ಬಂದೆ ಒಳ್ಳೆ ಸೀರೆ ಕೊಟ್ಟ ಅಷ್ಟೇ. ನಾನೇನು ಇವನನ್ನ ಬಿಟ್ಟು ಹೋದ್ನ ಅವನಿಗೆ ಏನು ಕಡಿಮೆ ಮಾಡಿದ್ದೇನೆ ಹೇಳಿ ಅಂದಳು. ಆತ ನಾನು ಸುಕ್ರಿ ಜೊತೆ ಹೋದರೂ ಮತ್ತೆ ಈ ಹಾಳಾದವಳನ್ನು ಹುಡುಕಿ ಬಂದಿಲ್ವ ಅಂದ. ಇದ್ಯಾಕೋ ಮುಗಿಯುವ ಕತೆಯಲ್ಲ ಎಂದು ಅಪ್ಪನಿಗೆ ಅನಿಸಿ ಒಬ್ಬರಿಗೊಬ್ಬರು ಸರಿ ಇದ್ದೀರಿ ಮತ್ಯಾಕೆ ಜಗಳ ಅಂದ. ಅಷ್ಟೇಯ ಅನ್ನುತ್ತಾ ಅವರಿಬ್ಬರು ಅತ್ತ ತಿರುಗಿದರು. ಅವರಿಬ್ಬರ ಅನ್ಯೋನ್ಯತೆ ಕಂಡಾಗ ಗಂಡ-ಹೆಂಡಿರ ನಡುವಿನ ಜಗಳ ಗಂಧ ತೀಡಿದಾಂಗ ಎನ್ನುವ ಜನಪದ ಮಾತು ನೆನಪಾಗುತ್ತದೆ.

Monday, 12 June 2023

5. ಸದಾ ಕಾಡುವ ಅಪ್ಪನ ನೆನಪು – ೫


ಅಪ್ಪನಿಗೆ ಸಾಹಿತ್ಯ ಸಂಸ್ಕೃತಿಗಳಲ್ಲಿ ಆಪಾರ ಆಸಕ್ತಿ ಇತ್ತು. ಅದರಲ್ಲೂ ಕುಮಾರವ್ಯಾಸ ಭಾರತ, ತಾಳಮದ್ದಳೆ ಮತ್ತು ಯಕ್ಷಗಾನಗಳೆಂದರೆ ತುಂಬಾ ಇಷ್ಟಪಡುತ್ತಿದ್ದ. ಕುಮಾರವ್ಯಾಸನ ಮತ್ತು ಯಕ್ಷಗಾನದ ಕೆಲವು ಪ್ರಸಂಗಗಳ ಕೆಲವು ಪದ್ಯಗಳು ಅವನಿಗೆ ಕಂಠಗತವಾಗಿದ್ದವು. ಗದ್ದೆ ತೋಟಗಳಲ್ಲಿ ಕೆಲಸಮಾಡುವಾಗ ಜೇನು ಕಿಳುವಾಗ ಗುನುಗುತ್ತಿದ್ದ.

ಅಪ್ಪನ ಮತ್ತೊಂದು ಕೌಶಲ್ಯವೆಂದರೆ ಪರಂಪರಾಗತ ಔಷಧ ಕೊಡುವುದು. ಅವನೊಬ್ಬ ಉತ್ತಮ ಹಳ್ಳೀ ವೈದ್ಯ ಅನಿಸಿಕೊಂಡಿದ್ದ. ಕೆಲವು ಪ್ರಾಣಿ-ಪಕ್ಷಿಗಳ, ಮನುಷ್ಯರ ಕಾಹಿಲೆಗಳಿಗೆ ಆತ ಚಿಕಿತ್ಸೆ ಕೊಡುವುದರಲ್ಲಿ ಊರಿನ ಸುತ್ತು ಮುತ್ತ ಸಾಕಷ್ಟು ಹೆಸರು ಮಾಡಿದ್ದ. ಮನುಷ್ಯರಿಗೆ ಬರುವ ಕಾಮಾಲೆ, ಸೋರಿಯಾಸಿಸ್ ಕಾಹಿಲೆಗಳಿಗೆ ಚಿಕಿತ್ಸೆಕೊಡುವುದರಲ್ಲಿ ಆತ ಎತ್ತಿದ್ದ ಕೈ ಎನಿಸಿಕೊಂಡಿದ್ದ. ಇವುಗಳಿಗೆ ಆಧುನಿಕ ವೈದ್ಯರು ಕೈಚೆಲ್ಲಿದಾಗ ಅವರು ಅಪ್ಪನ ಬಳಿ ರೋಗಿಗಳನ್ನು ಕಳುಹಿಸುತಿದ್ದರು. ಅಂತೆಯೇ ತಾನು ಕೊಡುವ ಯಾವುದೇ ಚಿಕಿತ್ಸೆಗೆ ಆತ ಹಣ ಪಡೆಯುತ್ತಿರಲಿಲ್ಲ. ಗುಣಮುಖರಾದವರು ತುಂಬಾ ಒತ್ತಾಯ ಮಾಡಿದರೆ ದೇವರ ಪೂಜೆಗಾಗಿ ಒಂದಿಷ್ಟು ಹಣ್ಣು ಎರಡು ತೆಂಗಿನ ಕಾಯಿ ಪಡೆಯುತ್ತಿದ್ದ. ಆದರೆ ಅವನ ಚಿಕಿತ್ಸೆಯಲ್ಲಿ ಪಥ್ಯ ಮಾತ್ರ ಕಡ್ಡಾಯವಾಗಿರುತ್ತಿತ್ತು. ರೋಗಿಗಳು ಅಪ್ಪ ಹೇಳುವ ಕ್ರಮ ಪಾಲಿಸುವುದಾಗಿ ಹೇಳಿ ಕ್ರಮ ತಪ್ಪುತ್ತಿದ್ದರು. ಇದರಿಮದ ಅವರ ಕಾಹಿಲೆ ಉಲ್ಬಣಿಸಿ ಮತ್ತೆ ತಕರಾರು ತೆಗೆದು ಬರುತ್ತಿದ್ದರು. ಅವರನ್ನು ಕಂಡಕೊಡಲೇ ಹಲಸಿನ ಹಣ್ಣು, ಬದನೆ, ಮಸಾಲೆ ಪದಾರ್ಥಗಳನ್ನು ಎಷ್ಟು ತಿಂದಿದ್ದೀರಿ ನಿಜ ಹೇಳಿ ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದ. ಹೀಗೆ ಮತ್ತೆ ಮಾಡಬಾರದೆಂದು ಹೇಳಿದರು ಜನ ಕೇಳುವುದಿಲ್ಲ ಅನಿಸಿ ತೀವ್ರವಾದ ಕಾಹಿಲೆ ಇದ್ದವರಿಗೆ ಮನೆಯಲ್ಲೆ ಕಟ್ಟುನಿಟ್ಟಾಗಿ ಚಿಕಿತ್ಸೆ, ಆರೈಕೆ ಮಾಡುತ್ತಿದ್ದ. ಈ ಚಿಕಿತ್ಸೆ ವಾರಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಮ್ಮೆ ವಾಸಿಯಾದರೆ ಮತ್ತೆ ಜೀವನದಲ್ಲಿ ಮರುಕಳಿಹಿಸುತ್ತಿರಲಿಲ್ಲ. ಅಂಥದ್ದನ್ನು ಕಂಡಾಗ ಖುಷಿಪಡುತ್ತಿದ್ದ. ಅಪ್ಪ ಎಂದಲ್ಲ, ಪರಂಪರಾಗತ ಚಿಕಿತ್ಸೆ ಕೊಡುವ ಹಳ್ಳಿ ವೈದ್ಯರೆಲ್ಲ ಇದೇ ರೀತಿ ಇರುತ್ತಾರೆ. ತಮ್ಮ ಜ್ಞಾನವನ್ನು ಅವರು ಸ್ವಾರ್ಥಕ್ಕೆ ಅಥವಾ ಹಣಮಾಡಲು ಬಳಸಿಕೊಳ್ಳುವುದಿಲ್ಲ. ಅಪ್ಪನ ಈ ಸೇವೆಯಲ್ಲಿ ಆಯಿಯೂ ಕೈಜೋಡಿಸುತ್ತಿದ್ದಳು. ಔಷಧಕ್ಕೆ ಬೇಕಾದ ಗಿಡಮೂಲಿಕೆಗಳನ್ನು ಅಪ್ಪ  ಹೊಂದಿಸಿಕೊಟ್ಟರೆ ಆಯಿ ಅವುಗಳನ್ನು ಮದ್ದಿಗೆ ಸಜ್ಜುಗೊಳಿಸುತ್ತಿದ್ದಳು. ಪ್ರಮಾಣ, ಬಳಕೆಯ ಕ್ರಮ ಎಲ್ಲ ಆಯಿಗೂ ತಿಳಿದಿತ್ತು. ಕೆಲವನ್ನು ನಮಗೂ ಕಲಿಸಿದ್ದ. ಆದರೆ ಯಾವ ಕಾರಣಕ್ಕೂ ಮದ್ದಿಗೆ ಹಣಕಾಸು ಪಡೆಯಬಾರದು ಎಂದು ತಾಕೀತು ಮಾಡುತ್ತಿದ್ದ. ಕೆಲವೊಂದು ಅಪರೂಪದ ಔಷಧಗಳನ್ನು ಅದರ ಕ್ರಮವನ್ನು ಅವನ ಜೊತೆಗೆ ಸದಾ ಇರುತ್ತಿದ್ದ ನಮ್ಮ ಅಣ್ಣನಿಗೆ ಕಲಿಸಿದ್ದ. ಆಧುನಿಕ ಶಿಕ್ಷಣ ಪಡೆದ ನಮ್ಮ ಮೇಲೆ ನಂಬಿಕೆ ಇರಲಿಲ್ಲ. ಔಷಧೀಯ ಗಿಡಮೂಲಿಕೆಗಳನ್ನು ಮನೆಯ ಸುತ್ತ ಬೆಳೆಸಿಕೊಂಡಿದ್ದ. ಇವುಗಳನ್ನು ನಾವು ಕಾಪಾಡಿಕೊಳ್ಳಬೇಕು ಎಂದು ಹೇಳುತ್ತಿದ್ದ. ಇವನಿಗೆ ಮನುಷ್ಯರಿಗಿಂತ ಮೂಕ ಪ್ರಾಣಿಗಳ ಚಿಕಿತ್ಸೆಯಲ್ಲಿ ಹೆಚ್ಚು ಒಲವಿತ್ತು. ಎಲ್ಲೋ ಯಾವುದೋ ಪ್ರಾಣಿಗೆ ಆರೋಗ್ಯ ಕೆಟ್ಟಿದೆ ಎಂದು ಗೊತ್ತಾದರೆ ಕೂಡಲೇ ಹೆಗಲಿಗೆ ಒಂದು ಚೀಲ ಸೇರಿಸಿ ಹೊರಟುಬಿಡುತ್ತಿದ್ದ. ಪಾಪ ಎಷ್ಟು ಕಷ್ಟಪಡುತ್ತಿದೆಯೋ ಏನೋ ಎಂದು ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತಿದ್ದ. ಹಸು, ಎಮ್ಮೆಗಳು ಕರು ಹಾಕುವಾಗ ಅನುಭವಿಸುವ ಅನೇಕ ಸಮಸ್ಯೆಗಳಿಗೆ ಊರ ಜನ ಪಶುವೈದ್ಯರನ್ನು ಕಾಣುವ ಬದಲು ಅಪ್ಪನ ಬಳಿ ಬರುತ್ತಿದ್ದುದೇ ಹೆಚ್ಚು. ಅವು ಕೆಲವೊಮ್ಮೆ ಕರುವಿಗೆ ಜನ್ಮ ನೀಡುವಾಗ ಅವುಗಳ ಮಾಸು(ಸತ್ತೆ) ಪೂರ್ತಿಯಾಗಿ ಹೊರಬರದೆ ಹಿಂಸೆಪಡುತ್ತಿದ್ದವು. ಅಪ್ಪ ಕೂಡಲೇ ಅವುಗಳಿಗೆ ಒಂದಿಷ್ಟು ಕಬ್ಬಿನ ಗರಿಯನ್ನು ತಿನ್ನಿಸುತ್ತಿದ್ದ. ಕೂಡಲೇ ಮಾಸು ಹೊರಬರುತ್ತಿತ್ತು. ಕೆಲವೊಮ್ಮೆ ಗರ್ಭಿಣಿಯರಿಗೆ ಹೆರಿಗೆ ನೋವು ತಾಳದಂತೆ ಆದಾಗ ತೊಂಡೆಬಳ್ಳಿಯ ಚೂರನ್ನು ಜಜ್ಜಿ ರಸಮಾಡಿಕೊಡುತ್ತಿದ್ದ ಇದರಿಂದ ಅವರ ನೋವು ಶಮನವಾಗುತ್ತಿತ್ತು. ಹೆರಿಗೆ ನೋವು ಕಾಣಿಸಿಕೊಳ್ಳಲು ಅಥವಾ ತೀವ್ರವಾಗಲು ಅದೇ ತೊಂಡೆಬಳ್ಳಿಯ ಚೂರನ್ನು ಅದರ ಗಂಟಿನ ಸಮೇತ ಜಜ್ಜಿ ರಸಮಾಡಿಕೊಡುತ್ತಿದ್ದ. ಇದರಿಂದ ಹೆರಿಗೆ ಬೇನೆ ತೀವ್ರವಾಗುತ್ತಿತ್ತಲ್ಲದೇ ಹೆರಿಗೆಯೂ ಸರಾಗವಾಗುತ್ತಿತ್ತು. ದನಗಳಿಗೆ ಸಾಮಾನ್ಯವಾಗಿ ಬರುತ್ತಿದ್ದ ಕಾಲುಬಾಯಿ ಜ್ವರಕ್ಕೆ ಅತ್ಯಂತ ಸರಳ, ಪರಿಣಾಮಕಾರೀ ಚಿಕಿತ್ಸೆ ಅವನ ಬಳಿ ಇತ್ತು. ಇದರಿಂದ ಉಪಯೋಗ ಪಡೆದ ಜನದನಗಳ ಸಂಖ್ಯೆ ಅಸಂಖ್ಯ. ಎಲ್ಲದರೂ ಹೋಗುವಾಗ ಹಾದಿಬದಿ ಯಾವುದಾದರೂ ಪ್ರಾಣಿ ಸಂಕಟಪಡುತ್ತಿದ್ದರೆ ಅದಕ್ಕೆ ಕೈಲಾದ ಸಹಾಯ ಮಾಡಿಯೇ ಮುಂದೆ ಹೋಗುತ್ತಿದ್ದುದು ಅವನ ಕರ್ತವ್ಯವೇ ಆಗಿತ್ತು. ಒಮ್ಮೆ ಮನೆಯ ಹತ್ತಿರ ಹೆರಿಗೆ ಬೇನೆಯಿಂದ ಒದ್ದಾಡುತ್ತಾ ಕಿರುಚುತ್ತಿದ್ದ ನಾಯಿಯೊಂದನ್ನು ತಂದು ಆರೈಕೆ ಮಾಡಿ ಅದು  ನಾಲ್ಕಾರು ಮರಿಗಳನ್ನು ಹೆತ್ತಾಗ ಸಂಭ್ರಮಿಸಿದ್ದ. 

ಗದ್ದೆ ಉಳುಮೆಗೆ ಎತ್ತುಗಳನ್ನು ಖರೀದಿಸಿದ್ದ. ಅದರಲ್ಲಿ ಒಂದು ಎತ್ತು ದಷ್ಟಪುಷ್ಟವಾಗಿತ್ತು. ಇದ್ದಕ್ಕಿದ್ದಂತೆ ಅದರ ಆರೋಗ್ಯ ಕೆಟ್ಟು ಅಂಗಳದ ಬದಿಯಲಿದ್ದ ತುಳಸಿ ಗಿಡದ ಬಳಿ ಬಂದು ಉಸಿರು ಚಲ್ಲಿತ್ತು. ಇದರಿಂದ ಬೆಸರಗೊಂಡ ಆತ ಮೂರ್ನಾಲ್ಕು ದಿನ ಅನ್ನಾಹಾರ ಬಿಟ್ಟಿದ್ದ. ಎಂಥಾ ‘ಎತ್ತಪ್ಪ’ ಇಷ್ಟು ಬೇಗ ತುಳಸಿ ಬಳಿ ಬಂದು ಶಿವನ ಪಾದ ಸೇರಿಬಿಟ್ಟಿತು. ಬಹುಶಃ ಅದು ಅವನ ವಾಹನವೇ ಆಗಿತ್ತು ಅನಿಸುತ್ತದೆ. ಎಂದು ಹೇಳಿಕೊಳ್ಳುತ್ತಿದ್ದ. ತನ್ನ ಕಡೆಗಾಲದವರೆಗೂ ಜನ-ದನಗಳಿಗೆ ಆರೈಕೆ ಮಾಡುವುದನ್ನು ಆತ ನಿಲ್ಲಿಸಲಿಲ್ಲ. ಆತ ತನಗೆ ತಾನೇ ಚಿಕಿತ್ಸೆ ಮಾಡಿಕೊಳ್ಳುವಾಗ ರಣವೈದ್ಯ ಅನುಸರಿಸುತ್ತಿದ್ದ. ಮೈಕೈಯಲ್ಲಿ ಎಲ್ಲೇ ನೋವು, ಉಳುಕು ಕಾಣಿಸಿದರೂ ಚೂಪಾದ ಕುಡುಗೋಲಿನ ತುದಿಯನ್ನು ಚನ್ನಾಗಿ ಕಾಯಿಸಿ ನೋವಿರುವ ಜಾಗಕ್ಕೆ ಸ್ವಲ್ಪ ಬೆಣ್ಣೆ ಸವರಿಕೊಂಡು ಕುಡುಗೋಲಿನಿಂದ ಚುಚ್ಚಿಕೊಳ್ಳುತ್ತಿದ್ದ. ಕಣ್ಣಿಗೆ ನೇರವಾಗಿ ಕಾಣಿಸದ ಬೆನ್ನು, ಸೊಂಟದ ಭಾಗಗಳಿಗೆ ಕನ್ನಡಿಯನ್ನು ಹಿಡಿದು ಅದನ್ನು ನೋಡುತ್ತಾ ಚುಚ್ಚಿಕೊಳ್ಳುತ್ತಿದ್ದ. ಅದನ್ನು ನೋಡಿಯೇ ನಮ್ಮ ಕೈಕಾಲುಗಳು ಮರಗಟ್ಟುತ್ತಿದ್ದವು.

6. ಸದಾ ಕಾಡುವ ಅಪ್ಪನ ನೆನಪು - ೬


ಅಪ್ಪ ಉಂಡು ತೇಗಿದ್ದೆಲ್ಲ ಬಡತನವನ್ನು. ಆದರೆ ಆತ ಬೇರೆಯವರಿಗೆ ಸಹಾಯ ಮಾಡುವಲ್ಲಿ ಮಾತ್ರ ಹಿಂದೇಟು ಹಾಕುತ್ತಿರಲಿಲ್ಲ. ಅಪ್ಪ ಈ ಕಾರಣಕ್ಕಾಗಿ ವ್ಯರ್ಥವಾಗಿ ಹಣ ಖರ್ಚುಮಾಡುತ್ತಿರಲಿಲ್ಲ. ಅನಗತ್ಯ ಸಂಗತಿಗಳಿಗೆ ಒಂದು ರೂಪಾಯಿ ಖರ್ಚು ಮಾಡುವಾಗಲೂ ಹತ್ತುಬಾರಿ ಯೋಚಿಸುತ್ತಿದ್ದ. ನಮಗೂ ಹೀಗೆ ಮಾಡುವಂತೆ ಕಲಿಸುತ್ತಿದ್ದ. ಕಾಡುಮೇಡುಗಳಲ್ಲಿ ನಿತ್ಯ ನಾವು ಓಡಾಡಬೇಕಾಗಿತ್ತು. ಬರಿಗಾಲಲ್ಲಿ ಓಡಾಡುವ ಅಭ್ಯಾಸವಿದ್ದರೂ ಕೆಲವೊಮ್ಮೆ ಚಪ್ಪಲಿ ಅನಿವಾರ್ಯವಾಗುತ್ತಿತ್ತು. ಚಪ್ಪಲಿಯನ್ನು ಅಪ್ಪ ಕಾಲ್ಮೆಟ್ಟು ಎಂದು ಕರೆಯುತ್ತಿದ್ದ. ಅವನ ಪಟ್ಟಿಯಲ್ಲಿ ಶೂ ಕೂಡ ಇದೇ ವರ್ಗಕ್ಕೆ ಸೇರುತ್ತಿತ್ತು. ಸಂತೆ, ಜಾತ್ರೆಗಳಲ್ಲಿ ಇವೆಲ್ಲಾ ಚೌಕಾಸಿ ಮಾಡಿದರೆ ಸ್ವಲ್ಪ ಕಡಿಮೆ ಬೆಲೆಗೆ ದೊರೆಯುತ್ತವೆ ಎಂದು ತೋರಿಸಿಕೊಟ್ಟಿದ್ದ. ಪ್ರೌಢಶಾಲೆಯ ಮೆಟ್ಟಿಲು ಹತ್ತುವವರೆಗೂ ನಾವು ಚಪ್ಪಲಿ ಕಂಡಿರಲಿಲ್ಲ. ಕಾಲೇಜು ಮೆಟ್ಟಿಲು ತುಳಿದಾಗ ಬೇರೆ ಬೇರೆ ಕಾರಣಕ್ಕೆ ಶೂ ಅಗತ್ಯವಾಯಿತು. ವಿದ್ಯಾರ್ಥಿ ವೇತನ ಕೂಡಿಟ್ಟು ತಕ್ಕಮಟ್ಟಿಗಿನ ಶೂ ಕೊಂಡು ಅಪ್ಪನ ಮುಂದೆ ಅದನ್ನು ತುಳಿದು ನಿಂತಾಗ ಅದಕ್ಕೆ ಎಷ್ಟು ಹಣಕೊಟ್ಟೆ ಎಂದು ಕೇಳಿದ್ದ. ೩೫೦ ರೂ ಎಂದಾಗ ‘ಸುಡಾಅದರ ನನ್ನ ಕಾಲ್ಮೆಟ್ಟು ನೋಡು ಎಂದು ತೋರಿಸುತ್ತಾ ಎಷ್ಟು ಹೇಳು ಇದಕ್ಕೆ ಎನ್ನುತ್ತಾ ಬರೀ ೨೮ ರೂಪಾಯಿ ಅಂದಿದ್ದ. ಇನ್ನೊಂದು ಬಾರಿ ಅಡಕೆ ಮಾರಿ ಒಂದಿಷ್ಟು ಹಣ ತಂದಿದ್ದ. ಅದನ್ನು ತನ್ನ ಬಳಿ ಇಟ್ಟುಕೊಂಡು ಏನೋ ಕೆಲಸಮಾಡುತ್ತಾ ಕುಳಿತಿದ್ದ ಆಗತಾನೆ ನಾನು ಸ್ವಲ್ಪ ದುಡಿಯತೊಡಗಿದ್ದೆ ಸಂಬಳ ಬಂದಿತ್ತು. ಪರ್ಸಿನಲ್ಲಿ ಇಟ್ಟುಕೊಂಡು ಅವನ ಮುಂದೆ ಕುಳಿತು ನೂರು ರೂ. ತೋರಿಸಿದೆ. ಮೆಲ್ಲಗೆ ಆತ ಒಂದು ಟವೆಲ್ ಎತ್ತಿ ನೂರು ರೂಗಳ ಕಂತೆ ತೋರಿಸಿದ. ನಾನು ೫೦೦ ರೂಗಳ ಒಂದಿಷ್ಟು ನೋಟು ಹಿಡಿದು ತೋರಿಸಿದೆ. ಇವೆಲ್ಲ ಮೌನವಾಗಿ ನಡೆಯಿತು. ಮತ್ತೆ ಆತ ತಾನು ಕುಳಿತ ಗೋಣಿಚೀಲವನ್ನು ಅತ್ತ ಸರಿಸಿ ೧೦ ರೂಗಳ ಒಂದಿಷ್ಟು ಹಣ ತೋರಿಸಿದ. ನಾನು ಸುಮ್ಮನಾದೆ. ಅವನಿಗೊಂದು ಸ್ವಭಾವವಿತ್ತು ಅಡಕೆ, ಅರಣ್ಯ ಉತ್ಪನ್ನ ಮುಂತಾದವನ್ನು ಮಾರಿ ಹಣ ಬಂದಾಗ ಒಂದಿಷ್ಟು ಹಣ್ಣು ಖರ್ಜೂರ ಇತ್ಯಾದಿಗಳನ್ನು ಖರೀದಿಸಿ ಸಂಭ್ರಮದಿಂದ ಬರುತ್ತಿದ್ದ. ಅಷ್ಟೇ ಖುಷಿಯಿಂದ ನಮಗೆ ಉಳಿದ ಶಾಲಾ ಮಕ್ಕಳಿಗೆ ಕೊಟ್ಟು ಖುಷಿಪಡುತ್ತಿದ್ದ.


ಅಪ್ಪನಿಗೆ ಸುತ್ತಮುತ್ತಲಿನ ಪ್ರಾಣಿಪಕ್ಷಿಗಳ ಬಗ್ಗೆ ತಿಳಿವಳಿಕೆಯ ಜೊತೆಗೆ ಸಾಕಷ್ಟು ಪ್ರೀತಿಯೂ ಇತ್ತು. ಒಮ್ಮೆ ಮನೆಯ ಬಳಿ ಒಂದಿಷ್ಟು ಶಾಲಾ ಮಕ್ಕಳು ಹಸಿರು ಹಾವನ್ನು ಹೊಡೆದು ಸಾಯಿಸುತ್ತಿದ್ದರು. ಅವರ ಗದ್ದಲ ಕೇಳಿ ಅವರ ಬಳಿ ಹೋಗಿ ಅದನ್ನು ಏಕೆ ಕೊಲ್ಲುತ್ತೀರಿ ಅದು ಪಾಪದ ಪ್ರಾಣಿ. ಕಚ್ಚುವುದೂ ಇಲ್ಲ ನೋಡಿ ಅನ್ನುತ್ತಾ ಅದರ ಬಾಯಿ ತೆರೆದು ಇದಕ್ಕೆ ಹಲ್ಲು ಎಷ್ಟಿದೆ ಹೇಳಿ ಎಂದ. ಮಕ್ಕಳು ಒಂದೂ ಇಲ್ಲ ಅಂದವು ಮತ್ತೇಕೆ ಪಾಪ ಅದನ್ನು ಹೊಡೆಯುತ್ತೀರಿ ಅದನ್ನು ಕೊಂದರೆ ನೀವು ತಿನ್ನುತ್ತೀರಾ ಕೊಂದ ಪಾಪವನ್ನು ತಿಂದು ಪರಿಹರಿಸಿಕೊಳ್ಳಬೇಕಂತೆ ಅಂದ. ಮಕ್ಕಳು ಇಲ್ಲ ಎಂಬಂತೆ ತಲೆಯಾಡಿಸಿದವು. ಹಾಗಾದರೆ ಇನ್ನುಮೇಲೆ ಹೀಗೆಲ್ಲಾ ಮಾಡಬಾರದು ಎಂದು ಹೇಳಿದ. ಮಕ್ಕಳು ಆಯ್ತು ಅಂದವು.

Sunday, 11 June 2023

7. ಸದಾ ಕಾಡುವ ಅಪ್ಪನ ನೆನಪು - ೭


ಅಪ್ಪ ಸದಾ ಹಾಸ್ಯ ಮಾಡುತ್ತಿದ್ದ. ಆದರೆ ಅದು ನೇರವಾಗಿ ಇರುತ್ತಿರಲಿಲ್ಲ. ಏನಾದರೂ ಪನ್ ಇರುತ್ತಿತ್ತು. ನಾನೊಮ್ಮೆ ಅಡಕೆ ಮರ ಹತ್ತುವಾಗ ಸ್ವಲ್ಪ ಜಾರಿದ್ದೆ. ತಕ್ಷಣ ಆತ ಹೆದರ ಬೇಡ ನಾನು ಇದ್ದೇನೆ. ಅಕಸ್ಮಾತ್ ನಾನು ಏನೂ ಮಾಡಲಾಗದಿದ್ದರೆ, ಬಿದ್ದರೂ ನೆಲ ಬಿಡಬೇಡ ಅಂದಿದ್ದ. ಇನ್ನೊಮ್ಮೆ ಹಸಿರು ಹಾವನ್ನು ತೋರಿಸಿ ಅದು ಸದಾ ತಲೆ ಆಡಿಸುವುದನ್ನು ನೋಡು ಅನ್ನುತ್ತಾ ಅದು ನೂರರವರೆಗೆ ಎಣಿಸುತ್ತಿದೆ. ಆದರೆ ಲೆಕ್ಕ ತಪ್ಪಿ ಮತ್ತೆ ಎಣಿಸುತ್ತದೆ. ಅದು ಮುಗಿಯುವುದೇ ಇಲ್ಲ. ಹಾಗೇನಾದರೂ ಎಣಿಕೆ ಮುಗಿದರೆ ಅದು ಕಚ್ಚುತ್ತದೆ. ಹಾಗೇನಾದರೂ ಕಚ್ಚಿದರೆ ಅದಕ್ಕೆ ಔಷಧವೇ ಇಲ್ಲ, ಆಯ್ತಾ ಅಂದ. ನಾನು ಪೆದ್ದನ ರೀತಿ ತಲೆ ಆಡಿಸಿದೆ.'ಹೋಗೋ ಮಳ್ಳ, ಕಚ್ಚಲು ಅದಕ್ಕೆ ಹಲ್ಲು ಇಲ್ಲ'  ಅಂದ. 

ಮನೆಯಲ್ಲಿ ಒಂದು ಒಳ್ಳೆಯ ಎಮ್ಮೆ ಇತ್ತು. ಅದನ್ನು ತಂದಾಗಿನಿಂದಲೂ ಅದಕ್ಕೆ ಆಯಿಯ ಒಡನಾಟ. ಆಯಿಗೆ ಮಾತ್ರ ಹಾಲು ಹಿಂಡಲು ಬಿಡ್ತಿತ್ತು. ಒಮ್ಮೆ ಆಯಿ ತನ್ನ ತವರಿಗೆ ಹೋದಾಗ ಹಾಲು ಹಿಂಡುವ ಸರದಿ ಅಪ್ಪಯ್ಯನದಾಯಿತು. ಆದರೆ ಎಮ್ಮೆಯ ಹಠ. ಅಪ್ಪ ತಾಳು ಹೇಳಿ ಕೇಳಿ ನೀನು ಎಮ್ಮೆ ನನಗೇ ಪಾಠ ಹೇಳ್ತೀಯಾ ಅಂದವನೇ ಮನೆಯೊಳಗೆ ಹೋಗಿ ಆಯಿಯ ಸೀರೆ ಸುತ್ತಿಕೊಂಡುಬಂದ. ಒಮ್ಮೆ ಮೂಸಿದ ಎಮ್ಮೆ ಹಾಲು ಹಿಂಡಲು ಅವಕಾಶ ಕೊಟ್ಟಿತು. ಅನಂತರ ತುಂಬಿದ ಹಾಲಿನ ಚೊಂಬನ್ನು ಅದೇ ಎಮ್ಮೆಗೆ ತೋರಿಸುತ್ತಾ ಸುಮ್ಮನೇ ನಿನ್ನನ್ನು ಎಮ್ಮೆ ಅನ್ನಲ್ಲ, ನೋಡು ನೀ ನು ಹೇಗೆ ಮೋಸ ಹೋದೆ ಎಂದು ಎಮ್ಮೆ ಜೊತೆ ಮಾತಾಡಿದ್ದ. ಅಪ್ಪಯ್ಯ ಹೀಗೆಯೇ ಜನ ಮಾತ್ರವಲ್ಲ ಪಶು ಪಕ್ಷಿಗಳ ಜೊತೆ ಮಾತುಕತೆ ಮಾಡುತ್ತಿದ್ದ. ಅವೂ ಅವನೊಂದಿಗೆ ಮಾತಾಡಿದಂತೆ ಅನಿಸುತ್ತಿತ್ತು. ಅವನ ಮಾತು ಕೇಳುತ್ತಿದ್ದವು. ಒಮ್ಮೆ ಮನೆಯ ಅಂಗಳಕ್ಕೆ ನಾಗರಹಾವು ಬಂದು ಕೂತಿತ್ತು. ಇದು ಅಪರೂಪವಾಗಿರಲಿಲ್ಲ. ಅವು ಯಾರಿಗೂ ಕಡಿದ ದಾಖಲೆ ಇರಲಿಲ್ಲ. ಅದನ್ನು ಕಂಡ ಅಪ್ಪ 'ಏನಪ್ಪಾ ಇಲ್ಯಾಕೆ ಬಂದಿದ್ದೀಯಾ ನಡಿ ನಿನ್ನ ಮನೆಗೆ. ಆಮೇಲೆ ನಿನಗೆ ಪೂಜೆ ಕೊಡ್ತೇನೆ' ಅಂದ ಅದು ಹಾಗೆಯೇ ಅಂಗಳ ಇಳಿದು ಹೋಯ್ತು. ಇಂಥ ಸಂದರ್ಭಗಳಿಗೆ ಲೆಕ್ಕವೇ ಇಲ್ಲ. ಟಪ್ಪ ಮನೆ ಔಷಧದ ಜೊತೆ ಸಣ್ಣಪುಟ್ಟ ಮಂತ್ರ ಚಿಕಿತ್ಸೆಯನ್ನೂ ಮಾಡುತ್ತಿದ್ದ. ಇದರಲ್ಲಿ ಮುಖ್ಯವಾದುದು ಪುಟ್ಟ ಮಕ್ಕಳಿಗೆ ಕಾಡುತ್ತಿದ್ದ ಬಾಲಗ್ರಹ ಪೀಡೆ. ಮಕ್ಕಳು ವೃಥಾ ರಚ್ಚೆ ಹಿಡಿಯುವುದು, ಸರಿಯಾಗಿ ಊಟ ನಿದ್ರೆ ಮಾಡದಿರುವುದು ಇತ್ಯಾದಿಗಳಿಗೆ ಆತ ವಿಭೂತಿ ಮಂತ್ರಿಸಿ ಕೊಡುತ್ತಿದ್ದ. ಇದು ತುಂಬ ಪರಿಣಾಮಕಾರಿಯಾದ್ದರಿಂದ ಸುತ್ತಮುತ್ತಲ ಹತ್ತೂರಿನ ಎಲ್ಲ ಬಗೆಯ ಜನರೂ ತಮ್ಮ ಮಕ್ಕಳ ಸಮಸ್ಯೆ ಹೊತ್ತು ಅಪ್ಪಯ್ಯನ ಬಳಿ ಬರುತ್ತಿದ್ದರು. ಒಂದೇ ಕಂಡೀಶನ್ ಏನೆಂದರೆ ಮಂತ್ರಿಸಿದ್ದ ವಿಭೂತಿಯನ್ನು ಮುಸುರೆ ಮೈಲಿಗೆ ಆಗದಂತೆ, ಎಲ್ಲಿಯೂ ನೆಲಕ್ಕೆ ಸೋಕಿಸದಂತೆ ಮಗುವಿನ ಹಣೆಗೆ ದೇವರನ್ನು ನೆನೆದು ಹಚ್ಚಬೇಕು ಎನ್ನುವುದು. ಒಮ್ಮೆ ಕೂಲಿ ಕೆಲಸಕ್ಕೆ ಬರುತ್ತಿದ್ದ ¥ಫಾತಿಮಾ ಭಟ್ರೆ ನಮ್ಮ ಕೂಸಿಂಗೆ ಆರಾಂ ಇಲ್ಲೆ ಮಂತ್ರ ಹಾಕಿ ಅನ್ನುತ್ತ ಬಂದಳು ಕೂಸು ಎಲ್ಲಿ ಅಂದಾಗ ಮನೇಲಿ ಮಲಗಿದೆ ಅಂದಳು. ಹಾಗಾದರೆ, ಮಂತ್ರಿಸಿ ಕೊಡುತ್ತೇನೆ ಎಂದು ಕಂಡೀಶನ್ ಪಾಲಿಸುವಂತೆ ಹೇಳಿದ. ಆಕೆ ಹೂಂ ಅಂದಳು. ಯಾವುದೋ ಜ್ಞಾನದಲ್ಲಿ ಆತ ಮಂತ್ರಿಸಿಕೊಟ್ಟ ವಿಭೂತಿಯನ್ನು ತನ್ನ ಕೂಲಿ ಚೀಲಕ್ಕೆ ತುರುಕಿ ಮೂಲೆಗೆ ತಳ್ಳಿದಳು. ಇದನ್ನು ಕಂಡ ಅಪ್ಪ ನೋಡು ನೀನು ಹೀಗೆ ಮಾಡ್ತೀಯಾ ಅಂತ ಗೊತ್ತಿತ್ತು, ಹೀಗೆ ಮಾಡಿದರೆ ಮಗುವಿಗೆ ಹೇಗೆ ಗುಣವಾಗಬೇಕೆಂದು ಮೃದುವಾಗಿ ಬೈದ.ಆಯ್ತ ಒಡೆಯಾ ಮತ್ತೆ ಹೀಗೆ ಮಾಡಲ್ಲ ಈಗ ಏನಾದ್ರೂ ಮಾಡಿ ಅನ್ನುತ್ತ ಅಲ್ಲೇ ಕೂತಳು. ಅಪ್ಪ ಮತ್ತೆ ಮಂತ್ರಿಸಿ ಕೊಟ್ಟ. ಆಕೆ ಸಮಾಧಾನ ಪಟ್ಟು ಹೋದಳು.  


Saturday, 10 June 2023

8. ಸದಾ ಕಾಡುವಅಪ್ಪಯ್ಯನ ನೆನಪು - ೮

 


ಬಡತನ ಏನೇ ಇರಲಿ, ಅಪ್ಪಯ್ಯ ಎಂದೂ ಸ್ವಾಭಿಮಾನ ಬಿಟ್ಟವನಲ್ಲ.ಅದರಿಂದ ಮನೆಯವರಿಗೆ ಕೆಲವೊಮ್ಮೆ ಫಜೀತಿ ಆಗಿದ್ದೂ ಇದೆ. ಒಂದೆರಡು ಸನ್ನಿವೇಶ ಸಾಕು ಇದನ್ನು ತೋರಿಸಲು- ಅಪ್ಪಯ್ಯ ಜನಿಸಿದ್ದು ೧೯೩೧ರಲ್ಲಿ. ಆತನ ದೇಹ ಕಣ್ಮರೆಯಾದುದು೨೦೧೦ರಲ್ಲಿ. ಈ ೮೦ ವರ್ಷಗಳ ತುಂಬು ಜೀವನದಲ್ಲಿ ಆತ ಎಂದೂ ಯಾರ ಮುಂದೆಯೂ ಕೈಚಾಚಿದವನಲ್ಲ. ಸಾಲದ್ದಕ್ಕೆ ನಿತ್ಯ ತನ್ನ ಊಟ ತಾನು ಕಂಡುಕೊಳ್ಳಬೇಕೆಂಬ ತತ್ವ ಇಟ್ಟುಕೊಂಡಿದ್ದ. ಇದು ಸಾಕಷ್ಟು ಬಾರಿ ಆವಾಂತರ ತರುತ್ತಿತ್ತು.  ಅವನಿಗೆ ಅಂತ್ಯದ ವೇಳೆಗೆ ಹರ್ನಿಯಾ ಕಾಣಿಸಿ ಅದರ ಶಸ್ತ್ರ ಚಿಕಿತ್ಸೆ ಆಗಿತ್ತು. ವೈದ್ಯರು ಕೆಲಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದರು. ಹಾಗೆಂದರೇನೆಂದು ಗೊತ್ತಿಲ್ಲದ ಅಪ್ಪ ವೈದ್ಯರೆದುರು ಆಯ್ತು ಅಂದವನೇ ಮನೆಗೆ ಬಂದು ಯಥಾಪ್ರಕಾರ ನಿತ್ಯದ ಕಾಯಕಕ್ಕೆ ಇಳಿದಿದ್ದ.

         ಅಪ್ಪಯ್ಯನ ಭಾವಚಿತ್ರ


ದಿನಾ ಊಟಕ್ಕೆ ಮುಂಚೆ ಆದಿನದ ತನ್ನ ದುಡಿಮೆ ಏನೆಂದು ಪರಿಶೀಲನೆ ಮಾಡಿಕೊಳ್ಳುತ್ತಿದ್ದ. ಗದೆ ತೋಟ ಸುತ್ತಿ ಉತ್ಪನ್ನಗಳನ್ನು ತಂದಾಗಲೇ ಅವನಿಗೆ ಊಟ ಸೇರುತ್ತಿದ್ದುದು. ಇದಕ್ಕಾಗಿ ಆತ ಒಂದು ಕೈಚೀಲ ಇಟ್ಟುಕೊಂಡಿದ್ದ. ಅವನಜೊತೆಗೆ ರಕ್ಷಣೆಗಾಗಿ ಸದಾ ಒಂದು ಕತ್ತಿಇರುತ್ತಿತ್ತು. ಒಮ್ಮೆ ಮನೆಯ ಅಂಗಳದಲ್ಲಿದ್ದ ತೆಂಗಿನ ಮರದ ಕಾಯಿಗಳು ಬೆಳೆದು ಒಣಗಿ ಬೀಳುತ್ತಿತ್ತು. ಅಣ್ಣನಿಗೆ ಕಾರಣಾಂತರದಿಂದ ಕಾಯಿಕೀಳುವುದು ಸಾಧ್ಯವಾಗಿರಲಿಲ್ಲ. ಅದನ್ನು ಒಂದೆರಡು ದಿನ  ನೋಡಿದ ಅಪ್ಪ ಮರ ಹತ್ತುವ ತನ್ನ ಕೌಶಲ್ಯ ನೆನಪಾಗಿ ಮನೆಯಲ್ಲಿ  ಅಣ್ಣನಿಲ್ಲದ್ದು ಖಾತ್ರಿ ಮಾಡಿಕೊಂಡು ಮರವೇರಿದ್ದ. ಶಸ್ತ್ರ  ಚಿಕಿತ್ಸೆಯಾಗಿ ಮೂರು ದಿನವೂ ಆಗಿರಲಿಲ್ಲ. ಮರವನ್ನು ಅರ್ಧ  ಏರಿದವನು ನೋವು ತಾಳಲಾರದೇ ಅಲ್ಲೇ ಕೂತಿದ್ದ. ಪುಣ್ಯಕ್ಕೆ ಅವನ  ಜೊತೆ ಕಡಕಲಮಣೆ ಅಡಕೆ, ತೆಂಗಿನ ಮರ ಏರುವವರು ಮರದಲ್ಲಿ  ಕುಳಿತುಕೊಳ್ಳಲು ಬಳಸುವ ಉಪಕರಣ. (ಅರ್ದ ಅಡಿಯಷ್ಟು ಅಗಲದ ಮರದ ಹಲಗೆಗೆ ತೆಂಗಿನ ಹಗ್ಗ ಬಿಗಿದು ಮಣೆ ಜಾರದಂತೆ ಕಟ್ಟು ಹಾಕಿರುತ್ತಾರೆ. ಹಗ್ಗದೊಳಗೆ ನಿರ್ದಿಷ್ಟ ರೀತಿಯಲ್ಲಿ ಮರ ಬಳಸಿ ಮಣೆಂ ಸೇರಿಸಿ ಸೆಳೆದುಕೊಂಡರೆ, ಅದು ಮರಕ್ಕೆ ಬಿಗಿಯಾಗಿ ಅಂಟಿಕೊಳ್ಳುತ್ತದೆ. ಅದನ್ನು ಕಾಲುಗಳನ್ನು ಸೇರಿಸಿ ಕುಳಿತುಕೊಳ್ಳಬಹುದು. ಅರ್ಧಮರವೇರಿದ್ದ ಅಪ್ಪ ಹೇಗೋ ಸಾವರಿಸಿಕೊಂಡು ಮಣೆಹಾಕೊಕೊಂಡು ಕೂತಿದ್ದ. ಇಳಿಯಲು ಅವನಿಗೆ ಸಾಧ್ಯವಾಗಿರಲಿಲ್ಲ. ಅದನ್ನು ಕಂಡ ಆಯಿ ನಿಮಗೇಕೆ ಈ ಸಾಹಸ ಮಾಡಬೇಕಿತ್ತು? ಇನ್ನು ಮಗ ಬರುವವರೆಗೆ ಅಲ್ಲೇ ಕೂತಿರಿ ಅಂದಳು. ಅಪ್ಪನಿಗೆ ಊಟದ ಸಮಯವಾಗಿತ್ತು. ಹಸಿವಿನಿಂದ ಕಂಗೆಟ್ಟಿದ್ದ. ಸ್ವಲ್ಪ ಹೊತ್ತಾದ ಮೇಲೆ ಬಂದ ಅಣ್ಣ ಅಪ್ಪನಿಗೊಂದು ಕ್ಲಾಸ್ ತೆಗೆದುಕೊಂಡ.ಅಪ್ಪ ಏನೂ ಆಗಿಲ್ಲ ಎಂಬಂತೆ ನಿನಗೆ ಸಹಾಯ ಮಾಡಲು ಬಯಸಿದೆ ಎಂದು ತಣ್ಣಗೆ ನಕ್ಕ. ಅಣ್ಣನ ಪಿತ್ತ ನೆತ್ತಿಗೇರಿತ್ತು ನೀನು ಇನ್ನು ಮೇಲೆ ಇಂಥ ಸಹಾಯ ಮಾಡೋದು ಬೇಡ ಮಾರಾಯ ಆರಾಮವಾಗಿ ಮನೇಲಿ ಇರು ಎಂದು ಕೂಗುತ್ತ ಒಂದು ಏಣಿ ತಂದ. ಆದರೆ ಅದು ಅಪ್ಪ ಇರುವ ಎತ್ತರಕ್ಕೆ ಬರಲಿಲ್ಲ. ಇನ್ನೇನು ದಾರಿ ತೋಚದ ಅಣ್ಣ ತಾನೇ ಮರವೇರಿ ಅಪ್ಪನ ಬಳಿ ಹೋಗಿ ನಿಧಾನಕ್ಕೆ ಅವನನ್ನು ತನ್ನ ಹೆಗಲ ಮೇಲೆ ಕೂರಿಸಿಕೊಂಡು ನೆಲಕ್ಕೆ ತಂದ. ಇದು ಇಲ್ಲಿಗೆ ಮುಗಿಯಿತು. ನಾಳ ಅಪ್ಪ ಮತ್ತೊಂದು ಪ್ರಕರಣ ಎತ್ತಿದ್ದ. ಸಮೀಪದ ಕಾಡಲ್ಲಿ ಬೆಳೆದಿದ್ದ ಮುರುಗಲ ಹಣ್ಣು ಕೀಳಲು ಗೋಣಿ ಸಮೇತ ಒಂದು ಬೆಳಿಗ್ಗೆ ಹೊರಟ. ಸಂಜೆ ಆದರೂ ಸುಳಿವಿಲ್ಲ. ಚಿಂತೆ ಮಾಡಿದ ಅಣ್ಣ ಹುಡುಕಲು ಹೊರಟ. ಅಪ್ಪ ಅಲ್ಲೆಲ್ಲೋ ಕಾಡಿನ ಮಧ್ಯೆ ಮುರುಗಲ ಚೀಲ ಚೆಲ್ಲಿಕೊಂಡು ಆರಾಮವಾಗಿ ಎಲೆ ಅಡಕೆ ಮೆಲ್ಲುತ್ತ ಕುಳಿತಿದ್ದನಂತೆ. ಸಿಟ್ಟಾದ ಅಣ್ಣ ನಿನಗೆ ಎಷ್ಟು ಸಾರಿ ಹೇಳುವುದು ಸುಮ್ಮನೆ ಮನೆಯಲ್ಲಿ ಇರುವುದು ಬಿಟ್ಟು ಎಂದು ರೇಗುತ್ತಿದ್ದರೆ ಅಪ್ಪ ಅಲ್ಲಾ ಮಾರಾಯ ನೀವೆಲ್ಲ ಕಷ್ಟ ಪಡುತ್ತಿದ್ದರೆ ನಾನು ಸುಮ್ಮನೇ ಹೇಗಪ್ಪಾ ಉಂಡುತಿಂದುಕೊಂಡು ಇರಲಿ ಹೇಳು ಅನ್ನುವುದೇ?

ಅಪ್ಪಿಗೆ ಭ್ರಷ್ಟ ಅಧಿಕಾರಿಗಳನ್ನು ಕಂಡರಾಗುತ್ತಿರಲಿಲ್ಲ. ಕೃಷಿ ಇಲಾಖೆಗೆ ಬರುತ್ತಿದ್ದ ಬಹುತೇಕರು ಅಂಥವರೇ ಆಗಿರುತ್ತಿದ್ದರು. ಒಮ್ಮೆ ಭ್ರಷ್ಟಾತಿಭ್ರಷ್ಟನೊಬ್ಬ ಅಲ್ಲಿ ವಕ್ಕರಿಸಿದ್ದ. ಬೆಳೆಸಾಲ ನೀಡಲು ಆತ ರೈತರ ಜೀವ ಹಿಂಡುತ್ತಿದ್ದ. ಅಪ್ಪ ಅವನಿಗೆ ಬುದ್ಧಿ ಕಲಿಸ್ತೇನೆ ಅಂದವನೇ ಅಧಿಕಾರಿಯ ಬಳಿ ಹೋಗಿ ಬೆಳೆಸಾಲ ಕೇಳಿದ ಆತ ಏನೇನೋ ವರಾತ ತೆಗೆದಾಗ ಅವನ ಇಂಗಿತ ಅರಿವಾದ ಅಪ್ಪ, ರಾಯರೇ, ನಿಮ್ಮ ಬಗ್ಗೆ ಊರ ಜನ ಏನು ಮಾತಾಡಿಕೊಳ್ಳುತ್ತಿದ್ದಾರೆ ಗೊತ್ತಾ ಅಂದ. ಕುತೂಹಲಗೊಂಡ ಅಧಿಕಾರಿ ಏನಂತಾರೆ ಅಂದ. ಅಪ್ಪ ಈಗ ಬಂದ ನಮ್ಮ ಸಾಹೇಬ್ರು ನಹಳ ಒಳ್ಳೆಯವರು. ಅವರು ರೈತರ ಎಂಜಲು ಹೇಲು ತಿನ್ನುವುದಿರಲಿ, ಅತ್ತ ಕಣ್ಣು ಕೂಡ ಹಾಕುವುದಿಲ್ಲ ಅಂತಿದಾರೆ ಅಂದ. ಈಗ ಬಾಯಿಮುಚ್ಚಿ ಕೆಲಸ ಮಾಡಿವ ಸರದಿ ಅಧಿಕಾರಿಯದಾಗಿತ್ತು.

ಅಪ್ಪ ಸ್ವಾಭಿಮಾನಿ ಅಂದೆ. ಅದೇ ಅವನಿಗೆ ಕೊನೆಗಾಲದಲ್ಲಿ ಮುಳುವಾಯ್ತು. ಹರ್ನಿಯಾದಿಂದ ಬಳಲಿದ್ದ ಅಪ್ಪನ ಸಾಹಸಗಳಿಂದ ಒಮ್ಮೆ ಯಾರ ನೆರವೂ ಇಲ್ಲದೇ ಬಚ್ಚಲಿಗೆ ಹೋಗುವ ಭರದಲ್ಲಿ ಕಾಲುಜಾರಿಬಿದ್ದು ಸೊಂಟದ ಕೀಲು ಮುರಿದುಕೊಂಡು ಹಾಸಿಗೆ ಹಿಡಿಯಬೇಕಾಯಿತು, ಒಂದುದಿನ ಹಾಗೆಯಾ ತಣ್ಣಗೆ ಕಣ್ಣುಮುಚ್ಚಿದ. 

ಜೇನು ಕೀಳುವುದು ಅಪ್ಪನ ಉಪವೃತ್ತಿಯಾಗಿತ್ತು ಎಂಬುದು ಹಿಂದೆಯೇ ಬಂದಿದೆ, ಆತ ಕೊನೆಯ ಕೆಲವರ್ಷ ಜೇನು ಕೀಳುವುದನ್ನು ಸಂಪೂರ್ಣ ಬಿಟ್ಟಿದ್ದ. ಅದಕ್ಕೊಂದು ಕಥೆ ಹೇಳುತ್ತಿದ್ದ. ಮರ ಹತ್ತುವುದರಲ್ಲಿ ಆತ ನಿಸ್ಸೀಮ. ಯಾವುದೇ ಮರವನ್ನು ಸವಳಿ(ಕೆಂಜಿರುವೆ) ಹತ್ತುವಂತೆ ಸರಸರ ಏರುತ್ತಿದ್ದ. ಜೇನು ಕೀಳಲು ಇದು ನೆರವಾಗಿತ್ತು. ಒಮ್ಮೆ ಸುಮಾರು ನೂರೈವತ್ತು ಅಡಿ ಎತ್ತರದ ಮರ ಏರಿ ಜೇನು ಕೀಳುವ ಸಾಹಸ ಮಾಡುವಾಗ ಮರದ ಟೊಂಗೆ ಮುರಿದು ಕೆಳಗೆ ಬಿದ್ದಿದ್ದ. ಹಾಗೆ ಬೀಳುವಾಗ ಇನ್ನು ತನ್ನ ಕಥೆ ಮುಗಿಯಿತು ಎಂದು ಲೆಕ್ಕ ಹಾಕಿದನಂತೆ. ಅಷ್ಟರಲ್ಲಿ ತನ್ನನ್ನು ಯಾರೋ ಎತ್ತಿ ಹಿಡಿದು ಮೆಲ್ಲಗೆ ನೆಲಕ್ಕೆ ತಂದುಬಿಟ್ಟ ಅನುಭವವಾಯ್ತಂತೆ. ಅವರಿಬ್ಬರಲ್ಲಿ ಮಾತುಕತೆ ನಡೆಯಿತಂತೆ, ಆತ ತಾನು ವನದೇವಿಯ ಸೇವಕ. ನೀನು ಮಾಡುತ್ತಿರುವ ಕೆಲಸ ಸರಿಯಲ್ಲ. ನಿನ್ನ ಕೆಲಸದಿಂದ ಅದೆಷ್ಟು ಜೇನುಹುಳಗಳು ಸಾಯುತ್ತಿವೆ, ಅವುಗಳ ಸಂಸಾರ ಕೆಡುತ್ತಿದೆ, ಇನ್ನು ಮೇಲೆ ನೀನು ಜೇನು ಕೀಳ ತಕ್ಕದ್ದಲ್ಲ, ಒಳಿತಾಗಲಿ ಎಂದು ಆತ ಹೇಳಿ ಮಾಯವಾದನಂತೆ, ಒಟ್ಟಿನಲ್ಲಿ ಜೀವ ಉಳಿಯಿತಲ್ಲ ಅಂದುಕೊಂಡ ಅಪ್ಪ ಮತ್ತೆಂದೂ ಜೇನು ಹುಟ್ಟಿಗೆ ಕೈಹಾಕಲಿಲ್ಲ. ಅದರೆ ಜೇನು ಸವಿಯುವ ಆಸೆಯಾದಾಗ ಮರದ ಪೊಟರೆಯಲ್ಲಿ ಗೂಡು ಕಟ್ಟುತ್ತಿದ್ದ ತುಡವಿ ತೆಗೆಯುತ್ತಿದ್ದ. ಆದರೆ ಯಾವ ಹುಳವೂ ಸಾಯದಂತೆ ಕೇವಲ ದಟ್ಟ ಹೊಗೆ ಹಾಕಿ ಹುಳ ಓಡಿಸಿ ಮೆಲ್ಲಗೆ ಹುಟ್ಟು ಕೀಳುತ್ತಿದ್ದ.


ಒಂದುತೃಪ್ತಿ ನನಗಿದೆ, ರ‍್ಯಾಂಕ್ ಪಡೆದು ಇಷ್ಟು ವರ್ಷವಾದರೂ ನಿನಗೊಂದು ಒಳ್ಳೆಯ ನೌಕರಿ ಸಿಕ್ಕಿಲ್ಲ ನೋಡು ಎಂದು ಬೇಸರಿಸಿಕೊಳ್ಳುತ್ತಿದ್ದ. ಸಷ್ಟರಲ್ಲಿ ನಾನು ಅಲ್ಲಿ ಇಲ್ಲಿ ಅರೆಕಾಲಿಕ ಕೆಲಸ ಮಾಡಿಕೊಂಡಿದ್ದೆ. ಕೆಲಕಾಲಾಂತರ ವಿವಿಯಲ್ಲಿ ಉತ್ತಮ ಕೆಲಸ ಸಿಕ್ಕಿತು. ಅಪ್ಪ ಸಂಭ್ರಮಿಸಿ ವಾರದೊಪ್ಪತ್ತಿನಲ್ಲಿ ಪಂಚಭೂತಗಳಲ್ಲಿ ಲೀನವಾದ. ನನ್ನ ಮಾವನವರ ಬಗ್ಗೆ ಅಪ್ಪನಿಗೆ ವಿಶೇಷ ಗೌರವವಿತ್ತು ಅವರು ಭೀಮರಾವ್ ದೇಸಾಯಿ, ದೊಡ್ಡ ಹುದ್ದೆಯಲ್ಲಿದ್ದರೂ ತುಂಬಾ ಸರಳವಾಗಿದ್ದರು, ಅಪ್ಪ ಸಾಕಷ್ಟು ಜನ ದೊಡ್ಡ ಹುದ್ದೆಯ ಜನರನ್ನೂ ಅವರ ಹತ್ತಾರು ಚಟಗಳನ್ನೂ ಕಂಡಿದ್ದ. ನನ್ನ ಮಾವನವರು ಒಂದಿಷ್ಟು ಚಹಾ ಬಿಟ್ಟರೆ ಇನ್ನೇನೂ ಮುಟ್ಟುತ್ತಿರಲಿಲ್ಲ. ಆಶ್ಚರ್ಯಪಟ್ಟ ಅಪ್ಪ ಅವರನ್ನು ತಪ್ಪು ತಿಳಿಯಬೇಡಿ ನೀವು ದೊಡ್ಡ ಕೆಲಸದಲ್ಲೀರಿ. ನಿಮಗೆ ಒಂದು ಸಿಗರೇಟಿನ ಚಟವೂ ಇಲ್ಲವಲ್ಲಾ ಎಂದು ಮುಗ್ಧವಾಗಿ ಕೇಳಿದ್ದ. ಅವರು ತಣ್ಣಗೆ ನಕ್ಕುಬಿಟ್ಟಿದ್ದರು. ಪ್ರಕೃತಿ ಪ್ರೀತಿಸುತ್ತಿದ್ದ ಮಾವನವರಿಗೆ ನೀವು ಹೇಗೂ ನಿವೃತ್ತರು. ನಮ್ಮ ಜೊತೆಗೇ ಇದ್ದು ಬಿಡಿ ನಮ್ಮ ಜಮೀನಿನಲ್ಲಿ ನೀವು ಎಲ್ಲಿ ಎಷ್ಟು ಜಾಗ ಕೇಳ್ತೀರೋ ಅಷ್ಟು ಕೊಡ್ತೀನಿ ಆರಾಂ ಆಗಿ ಇರಿ ಅಂದಿದ್ದ. ಅವರು ಮತ್ತೆ ನಕ್ಕಿದ್ದರು.

ಅಪ್ಪನ ಬಗ್ಗೆ ಬರೆಯುತ್ತ ಹೋದರೆ ಅದಕ್ಕೆ ಕೊನೆ ಇರುವುದಿಲ್ಲ. ಸದ್ಯಕ್ಕೆ ಅವನ ದಿವ್ಯ ಸ್ಮರಣೆಗೆ ಇದನ್ನು ಸಲ್ಲಿಸಿ ಇಲ್ಲಿಗೆ ವಿರಮಿಸುವೆ, ಒಟ್ಟಿನಲ್ಲಿ ಅಪ್ಪ ನಮ್ಮ ಸುತ್ತಲಿನ ಗಿಡ ಮರ ಬಳ್ಳಿ ಆಕಾಶಗಳಲ್ಲಿ ಸೇರಿ ಸದಾ ಜೊತೆಗೇ ಇರುವಂತೆ ಭಾಸವಾಗುತ್ತದೆ. ಆತನ ದೇಹವಿಲ್ಲ, ನೆನಪಿಗೆ ಸಾವಿಲ್ಲ. ಅವನ ಕೃಪೆ ಸದಾ ಇರಲಿ.